ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಕನ್ನಡ ತಾಲ್ಲೂಕಿನಲ್ಲಿ ಅಂತರರಾಜ್ಯ ಡೀಸೆಲ್ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಗ್ಯಾಂಗ್‌ನ 14 ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 17 ರಂದು ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಲಾರಿಗಳು, ಡೀಸೆಲ್ ತುಂಬಿದ್ದ ಸುಮಾರು 40 ಕಂಟೇನರ್‌ಗಳು, ನಗದು ಸೇರಿ ಒಟ್ಟಾರೆಯಾಗಿ 98 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 16 ರಂದು ಚಿಟೆಗಾಂವ್‌ನ ಪೆಟ್ರೋಲ್ ಪಂಪ್‌ನಿಂದ 3,480 ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಚಿಕಲ್ಥಾನ ಪೊಲೀಸ್ ಠಾಣೆಯಲ್ಲಿ ದಾಳಲಾಗಿದ್ದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಕಳ್ಳರ ಗ್ಯಾಂಗ್ ಇದರಲ್ಲಿ ಭಾಗಿಯಾಗಿದೆ ಎಂದು ಸ್ಥಳೀಯ ಅಪರಾಧ ವಿಭಾಗಕ್ಕೆ ಮಾಹಿತಿ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮೋಕ್ಷದಾ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ’ಅಮಿತಾಬ್, ಅಕ್ಷಯ್‌ಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಧೈರ್ಯವಿಲ್ಲವೇ?’
ಈ ಗ್ಯಾಂಗ್ ಸದಸ್ಯರು ಗುಜರಾತ್‌ನ ಟ್ಯಾಪಿ ಜಿಲ್ಲೆಯಿಂದ ಮರಳು ತುಂಬಿಸಿಕೊಂಡು ಉಸ್ಮಾನಾಬಾದ್‌ನಲ್ಲಿ ಮಾರಾಟ ಮಾಡುತ್ತಾರೆ ಎಂದು ಪೊಲೀಸರಿಗೆ ತಿಳಿದಿತ್ತು. ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
“ಈ ಗ್ಯಾಂಗ್ ಸದಸ್ಯರು ರಾತ್ರಿಯಲ್ಲಿ ವಿವಿಧ ಪೆಟ್ರೋಲ್ ಪಂಪ್‌ಗಳ ಬಳಿ ಟ್ರಕ್ ನಿಲ್ಲಿಸುತ್ತಿದ್ದರು. ಬಂಕ್‌ನಲ್ಲಿನ ಹ್ಯಾಂಡ್ ಪಂಪ್‌ಗಳನ್ನು ಬಳಸಿಕೊಂಡು ಟ್ಯಾಂಕ್‌ಗಳಿಂದ ಡೀಸೆಲ್ ಕದಿಯುತ್ತಿದ್ದರು. ಕದ್ದ ಡೀಸೆಲ್ ಅನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ಬಳಸಿದ ನಂತರ, ಉಳಿದ ಇಂಧನವನ್ನು ಇತರ ಟ್ರಕ್ ಚಾಲಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಜರಾತ್‌ನಿಂದ ಬರುತ್ತಿದ್ದ ಟ್ರಕ್‌ಗಳನ್ನು ಪರಿಶೀಲಿಸುವಾಗ ಪೊಲೀಸರು ಮರಳು ಸಾಗಿಸುತ್ತಿದ್ದ ಮೂರು ವಾಹನಗಳನ್ನು ಹಿಡಿದಿದ್ದರು. ಈ ಟ್ರಕ್‌ಗಳಲ್ಲಿ ತಲಾ 35 ರಿಂದ 40 ಲೀಟರ್ ಡೀಸೆಲ್ ತುಂಬಿದ ಸುಮಾರು 40 ಕಂಟೇನರ್‌ಗಳು ಪತ್ತೆಯಾಗಿವೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
“ಈ ಹದಿನಾಲ್ಕು ಜನರಿಂದ ನಾಲ್ಕು ಟ್ರಕ್, 1,540 ಲೀಟರ್ ಡೀಸೆಲ್, ಮೂರು ಹ್ಯಾಂಡ್ ಪಂಪ್ ಜೊತೆಗೆ 220 ಅಡಿ ಪೈಪ್, 42,700 ರೂ. ನಗದು ಮತ್ತು ಎಂಟು ಮೊಬೈಲ್ ಪೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೊತ್ತ 98. 49 ಲಕ್ಷ ರೂಪಾಯಿಗಳು” ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಇದೇ ರೀತಿಯ ದೂರುಗಳು ದಾಖಲಾಗಿವೆ. ಡೀಸೆಲ್ ಕಳ್ಳತನದ 36 ಅಪರಾಧಗಳಲ್ಲಿ ತಾವು ಭಾಗಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಗ್ಯಾಂಗ್ ಕಳೆದ ಐದು ವರ್ಷಗಳಿಂದ ಡೀಸೆಲ್ ಕದಿಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್ ಆದ ಕಥೆ


