ನಾನೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಅದಕ್ಕೆ ಜನರು ವಂತಿಗೆಯು ನೀಡುತ್ತಿದ್ದಾರೆ. ರಾಮ ಜನರ ಧಾರ್ಮಿಕ ನಂಬಿಕೆ. ಆದರೆ ಬಿಜೆಪಿಯವರು ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಶನಿವಾರ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಅಯೋಧ್ಯೆಯ ವಿವಾದಿತ ರಾಮ ಮಂದಿರ ದೇಣಿಗೆ ವಿಚಾರವಾಗಿ ನಡೆಯುತ್ತಿರುವ ಚರ್ಚೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ಜನರು ರಾಮಮಂದಿರಕ್ಕೆ ನೀಡುತ್ತಿದ್ದಾರೆಯೆ ವಿನಃ ಬಿಜೆಪಿಗಾಗಿ ಅಲ್ಲ. ದುಡ್ಡು ಕೊಟ್ಟಿದ್ದರೂ, ಇಲ್ಲದಿದ್ದರೂ ಈ ದೇಶದ ಪ್ರಜೆಯಾಗಿ ನನಗೆ ಲೆಕ್ಕ ಕೇಳುವ ಅಧಿಕಾರ ಇದೆ” ಎಂದು ತಿಳಿಸಿದರು.

ಇದನ್ನೂ ಓದಿ: ತೇಜಸ್‌ನಲ್ಲಿ ತೇಜಸ್ವಿ ಸೂರ್ಯ ವಿಹಾರ: ಪಕ್ಷದ ಹಲವು ಹಿರಿಯರ ಆಕ್ಷೇಪ

“ಲೆಕ್ಕ ಕೊಡ ಬೇಕಾಗಿರುವುದು ಅವರ ಕೆಲಸ, ಕೇಳುವುದು ನಮ್ಮ ಹಕ್ಕು. ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಹಣ ದುರುಪಯೋಗವಾಗುತ್ತಿದೆ ಎಂದರ್ಥ. ಅವರು ಹಿಂದೆಯೂ ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಎಂದು ಅವರೇ ಹೇಳಬೇಕು” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

“ನಾನೂ ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮ ಮಂದಿರ ಕಟ್ಟುತ್ತಾರೆ ಅದರಲ್ಲೇನಿದೆ. ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು ಬಿಜೆಪಿ ರಾಜಕಾರಣಕ್ಕೆ ಬಳಸುತ್ತಾರೆ” ಎಂದು ಹೇಳಿದರು.

ಅಚ್ಚೇ ದಿನ್ ಇದೇನಾ?

“ಕೊರೊನಾ ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ. ಈ ಬಾರಿಯಾದರೂ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ನಿರ್ವಹಣೆ ಭ್ರಷ್ಟಾಚಾರ ನಡೆಸಲು ಸಿಗುವ ಸುವರ್ಣಾವಕಾಶ ಎಂಬ ಬಿಜೆಪಿ ನಾಯಕರ ಮನಸ್ಥಿತಿ ಮೊದಲು ಬದಲಾಗಬೇಕು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

“ಪೆಟ್ರೋಲ್- ಡೀಸೆಲ್‌ ಬೆಲೆ ಏರಿಕೆ ವಾಹನ ಸವಾರರ ಮೇಲಷ್ಟೇ ಅಲ್ಲ ದೇಶದ ಪ್ರತಿ ನಾಗರೀಕನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದಿನ ಬಳಕೆಯ ವಸ್ತುಗಳು, ಪ್ರಯಾಣ ದರ, ಉತ್ಪಾದನಾ ವೆಚ್ಚ ಹೀಗೆ ಎಲ್ಲಾ ವಿಧದಲ್ಲೂ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ಅಚ್ಚೇ ದಿನ್ ಅಂದ್ರೆ ಇದೇನಾ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಮುಖಭಂಗ – ಆಂಧ್ರದ 3,221 ಪಂಚಾಯತ್‌ಗಳಲ್ಲಿ‌ BJP ಗೆ‌‌‌ ಕೇವಲ 13 ಸ್ಥಾನ!

LEAVE A REPLY

Please enter your comment!
Please enter your name here