ಭಾರತೀಯ ದಂಪತಿ ಅಮೆರಿಕದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ನ್ಯೂಜೆರ್ಸಿಯಲ್ಲಿ ನಡೆದಿದೆ. ಮೃತರ ನಾಲ್ಕು ವರ್ಷದ ಮಗಳು ತಮ್ಮ ಮನೆಯ ಬಾಲ್ಕನಿಯಲ್ಲಿ ಏಕಾಂಗಿಯಾಗಿ ಅಳುತ್ತಿರುವುದನ್ನು ನೋಡಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಅಮೆರಿಕದ ಮಾಧ್ಯಮಗಳು ಉತ್ತರ ಆರ್ಲಿಂಗ್ಟನ್ ಅಪಾರ್ಟ್ಮೆಂಟ್‌ನಲ್ಲಿ ಇರಿತದಿಂದ ದಂಪತಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ. ಕೌಟುಂಬಿಕ ಕಲಹದಲ್ಲಿ ಗಂಡ ತನ್ನ ಹೆಂಡತಿಯ ಹೊಟ್ಟೆಗೆ ಚಾಕು ಇರಿದು, ನಂತರ ತಾನು ಇರಿದುಕೊಂಡಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿಯಲ್ಲಿ ತಿಳಿಸಿದೆ.
ನ್ಯೂಜೆರ್ಸಿಯ ನಾರ್ತ್ ಆರ್ಲಿಂಗ್ಟನ್ ಪ್ರಾಂತ್ಯದ ರಿವರ್ ವ್ಯೂ ಗಾರ್ಡನ್ಸ್ ಅಪಾರ್ಟ್ಮೆಂಟ್‌ನ 21 ಗಾರ್ಡನ್ ಟೆರೇಸ್ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಭಾರತ ಮೂಲದ ಬಾಲಾಜಿ ಭಾರತ್ ರುದ್ರಾವರ್ (32) ಮತ್ತು ಅವರ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಮೃತರು. ಈ ಅಪಾರ್ಟ್ಮೆಂಟ್‌ನಲ್ಲಿ 15,000 ಕ್ಕೂ ಹೆಚ್ಚು ಜನರು ವಾಸವಿದ್ದಾರೆ.
ಇದನ್ನೂ ಓದಿ: ಅಂಧ ಭಕ್ತರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಯಾರು ಕಾರಣ? ಮೋದಿ ವಿರುದ್ಧ ಸಿಡಿದ ಸುಬ್ರಮಣಿಯನ್ ಸ್ವಾಮಿ
“ನನ್ನ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರುವುದನ್ನು ನೆರೆಹೊರೆಯವರು ನೋಡಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯೊಳಗೆ ಪ್ರವೇಶಿಸಿದ ನಂತರ ಬುಧವಾರ ಶವಗಳು ಪತ್ತೆಯಾಗಿವೆ” ಎಂದು ಬಾಲಾಜಿ ತಂದೆ ಭಾರತ್ ರುದ್ರಾವರ್ ಪಿಟಿಐಗೆ ತಿಳಿಸಿದ್ದಾರೆ.
“ಅಲ್ಲಿನ ಸ್ಥಳೀಯ ಪೊಲೀಸರು ಗುರುವಾರ ದುರಂತದ ಬಗ್ಗೆ ನನಗೆ ಮಾಹಿತಿ ನೀಡಿದರು. ಸಾವಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿಯ ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಯುಎಸ್ ಪೊಲೀಸರು ಹೇಳಿದ್ದಾರೆ” ಎಂದು ರುದ್ರಾವರ್ ಹೇಳಿದ್ದಾರೆ.
“ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ತುಂಬಾ ಸಂತೋಷದಿಂದ ಅವರು ಜೀವನ ನಡೆಸುತ್ತಿದ್ದರು. ನೆರೆಹೊರೆಯವರು ಕೂಡ ಒಳ್ಳೆಯವರಾಗಿದ್ದರು. ಯಾರ ಮೇಲೂ ನನಗೆ ಅನುಮಾನಗಳಿಲ್ಲ. ಸದ್ಯ ನನ್ನ ಮೊಮ್ಮಗಳು ನನ್ನ ಮಗನ ಸ್ನೇಹಿತನೊಂದಿಗೆ ಇದ್ದಾರೆ. ಮೃತದೇಹಗಳು ಇಲ್ಲಿಗೆ ತಲುಪಲು 8 ರಿಂದ 10 ದಿನಗಳು ಬೇಕಾಗುತ್ತದೆ ಎಂದು ನನಗೆ ಯುಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಜೋಗೈ ಮೂಲದ ಐಟಿ ಉದ್ಯಮಿ ಬಾಲಾಜಿ ರುದ್ರಾವರ್ ಅವರು 2014 ರ ಡಿಸೆಂಬರ್‌ನಲ್ಲಿ ಆರತಿ ಅವರನ್ನು ವಿವಾಹವಾಗಿ, 2015 ರ ಆಗಸ್ಟ್‌ನಲ್ಲಿ ತಮ್ಮ ಹೆಂಡತಿಯೊಂದಿಗೆ ಯುಎಸ್‌ಗೆ ತೆರಳಿದ್ದರು. ಬಾಲಾಜಿ ಅವರು ಭಾರತದ ಪ್ರಮುಖ ಇನ್ಫೋಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆತನ ಪತ್ನಿ ಗೃಹಿಣಿಯಾಗಿದ್ದರು ಎಂದು ಮೃತ ಬಾಲಾಜಿ ಅವರ ತಂದೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೇ ತಿಂಗಳಲ್ಲೇ ಅಮರಿಂದರ್ ಪರವಾಗಿ ಕೆಲಸ ಪ್ರಾರಂಭಿಸಲಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್


