ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನದ ಮೊದಲ ದಿನ ಸೋಮವಾರ ಗೊಂದಲಗಳ ಗೂಡಾಗಿತ್ತು. ಸ್ಪೀಕರ್ ಕಚೇರಿಯಲ್ಲಿ ಪ್ರಿಸಿಡಿಂಗ್ ಆಫೀಸರ್ ಭಾಸ್ಕರ್ ಜಾದವ್ ಅವರನ್ನು ನಿಂದಿಸಿದ ಮತ್ತು ದೈಹಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಸ್ಪೀಕರ್ ಅಮಾನತುಗೊಳಿಸಿದ್ದಾರೆ.
ಸದನದ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಇವು ಸುಳ್ಳು ಆರೋಪಗಳು. ಶಾಸಕರ ವಿರುದ್ಧ ಒಂದು ಕಥೆ ಕಟ್ಟಲಾಗುತ್ತಿದೆ. ಬಿಜೆಪಿಯಿಂದ ಯಾರೂ ನಿಂದನೆ ಮಾಡಿಲ್ಲ” ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೊತೆಗೆ “ಒಬಿಸಿ (Other Backward Castes) ಮೀಸಲಾತಿಗಾಗಿ, ನಾವು ನಮ್ಮ 12 ಕ್ಕೂ ಹೆಚ್ಚು ಶಾಸಕರನ್ನು ತ್ಯಾಗಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ. ಈ ಅಧಿವೇಶನದಲ್ಲಿ ತಮ್ಮ ಪಕ್ಷವು ಒಬಿಸಿ ಮೀಸಲಾತಿ ಕೂಡ ತಾವು ಹೈಲೈಟ್ ಮಾಡಲು ನಿರ್ಧರಿಸಿರುವ ಪ್ರಮುಖ ವಿಷಯಗಳಲ್ಲಿ ಒಂದು” ಎಂದು ಫಡ್ನವೀಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಶಿವಸೇನೆ ಸಂಬಂಧ, ಅಮಿರ್ ಖಾನ್-ಕಿರಣ್ ರಾವ್ ಸಂಬಂಧದಂತೆ- ಸಂಜಯ್ ರಾವತ್
“ಪ್ರತಿಪಕ್ಷದ ನಾಯಕರು ನನ್ನ ಕ್ಯಾಬಿನ್‌ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಮುಂದೆಯೇ ಅಸಂಸದೀಯ ಭಾಷೆ ಬಳಸಿ ನನ್ನನ್ನು ನಿಂದಿಸಿದ್ದಾರೆ. ಕೆಲವು ನಾಯಕರು ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ” ಎಂದು ಭಾಸ್ಕರ್ ಜಾಧವ್ ಮಾಧ್ಯಮಗಳಿಗೆ ತಿಳಿಸಿದರು.
12 ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯವನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಾಬ್ ಮಂಡಿಸಿದ್ದು, ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಸಂಜಯ್ ಕುಟೆ, ಆಶಿಸ್ ಶೆಲಾರ್. ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲಾವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟ್, ಯೋಗೇಶ್ ಸಾಗರ್, ಜಯ ಕುಮಾರ್ ರಾವತ್, ನಾರಾಯಣ್ ಕುಚೆ ಮತ್ತು ಕೀರ್ತಿಕುಮಾರ್ ಭಾಂಗ್ಡಿಯಾ ಅಮಾನತುಗೊಂಡ ಶಾಸಕರು.
ಶರದ್ ಪವಾರ್ ಅವರ ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಟ್ವಿಟ್ಟರ್‌ನಲ್ಲಿ ಗಲಾಟೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
This is how it all started. BJP leaders stormed into #Maharashtra #Assembly #Speakers #Chamber. During first day of Assembly session pic.twitter.com/Z2NjIjwckv
— Nawab Malik نواب ملک नवाब मलिक (@nawabmalikncp) July 5, 2021
ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸದಸ್ಯರು, ಪ್ರತಿಪಕ್ಷಗಳು ಸದನದ ಕಲಾಪವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ಈ ಠಾಕ್ರೆ ಸರ್ಕಾರ ತಾಲಿಬಾನ್‌ನಂತೆ ವರ್ತಿಸುತ್ತಿದೆ. ನಾನು ಈ ಕ್ರಮವನ್ನು ಖಂಡಿಸುತ್ತೇನೆ. ನಾನು ಮತ್ತು ಇತರ ಯಾವುದೇ ಶಾಸಕರು ಭಾಸ್ಕರ್ ಜಾಧವ್ ಅವರನ್ನು ನಿಂದಿಸಲಿಲ್ಲ. ನಾನು ಅವರ ಬಳಿ ಕ್ಷಮೆಯಾಚಿಸಿದ್ದೇನೆ ಆದರೂ ಕುಡ ಅವರು ಅಮಾನತುಗೊಳಿಸಿದ್ದಾರೆ” ಎಂದು ಬಿಜೆಪಿ ಶಾಸಕ ಆಶಿಶ್ ಶೆಲಾರ್ ಹೇಳಿದ್ದಾರೆ.
ಇದನ್ನೂ ಓದಿ: ‘ಶಿವಸೇನೆ ಎಂದಿಗೂ ಬಿಜೆಪಿಯ ಶತ್ರುವಲ್ಲ’: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್


