ಅಫ್ಘಾನಿಸ್ತಾನದ ಅಸದಾಬಾದ್ ನಗರದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯೋತ್ಸವದ ರ್‍ಯಾಲಿಯಲ್ಲಿ ತಾಲಿಬಾನಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರು ರಾಷ್ಟ್ರಧ್ವಜವನ್ನು ಹಾರಿಸಿದ್ದು ಗುಂಡಿನ ದಾಳಿಗೆ ಕಾರಣ ಎನ್ನಲಾಗಿದೆ. ಬುಧವಾರ ಇದೇ ರೀತಿಯ ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.
ಮಾಧ್ಯಮಗಳ ಪ್ರಕಾರ ಬಿಳಿ ತಾಲಿಬಾನ್ ಧ್ವಜಗಳನ್ನು ಕಿತ್ತುಹಾಕಿದ ಪ್ರತಿಭಟನಾಕಾರರು ಅಫ್ಘಾನ್ ಧ್ವಜವನ್ನು ಹಾರಿಸುತ್ತಿದ್ದರು. ಇದರಿಂದ ಕೋಪಗೊಂಡ ತಾಲಿಬಾನಿಗಳು ಪ್ರತಿಭಟನಾಕಾರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ಭಾನುವಾರ ವಶಪಡಿಸಿಕೊಂಡ ನಂತರ ಜನ ನಿಧಾನವಾಗಿ ವಿರೋಧಿಸಲು ಆರಂಭಿಸಿದ್ದಾರೆ.
ಅಸಾದಾಬಾದ್‌ನಲ್ಲಿನ ಸಾವುಗಳು ಗುಂಡಿನ ದಾಳಿಯಿಂದ ಉಂಟಾಗಿದೆಯೇ ಅಥವಾ ಗುಂಡಿನಿಂದ ತಪ್ಪಿಸಿಕೊಳ್ಳುವಾಗ ಉಂಟಾದ ಕಾಲ್ತುಳಿತದಿಂದ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಕುಹಾರ್ ಪ್ರಾಂತ್ಯದ ಮೊಹಮ್ಮದ್ ಸಲೀಂ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತಲೂ ಭಾರತದಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ- ಕಾಬೂಲ್‌ನಿಂದ ಬಂದ ಪತ್ರಕರ್ತೆ
“ನೂರಾರು ಜನರು ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಬೀದಿಗೆ ಬಂದರು. ಮೊದಲಿಗೆ ನಾನು ಹೆದರುತ್ತಿದ್ದೆ. ಆದರೆ ನನ್ನ ನೆರೆಹೊರೆಯವರೊಬ್ಬರು ರ್‍ಯಾಲಿಯಲ್ಲಿ ಸೇರಿಕೊಂಡಿದ್ದನ್ನು ನೋಡಿದಾಗ ನಾನು ಮನೆಯಲ್ಲಿರುವ ಧ್ವಜವನ್ನು ಹೊರತೆಗೆದೆ. ತಾಲಿಬಾನ್‌ಗಳ ಕಾಲ್ತುಳಿತ ಮತ್ತು ಗುಂಡಿನ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದರು ಮತ್ತು ಗಾಯಗೊಂಡಿದ್ದಾರೆ” ಎಂದು ಮೊಹಮ್ಮದ್ ಸಲೀಂ ವಿವರಿಸಿದ್ದಾರೆ.
ಬುಧವಾರ, ಕೂಡ ಜಲಾಲಾಬಾದ್‌ನಲ್ಲಿ ಕಪ್ಪು, ಕೆಂಪು ಮತ್ತು ಹಸಿರು ಬಣ್ಣದ ರಾಷ್ಟ್ರೀಯ ಧ್ವಜವನ್ನು ಹಾರಿಸಿದ್ದ ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಾಕ್ಷಿಗಳು ಮತ್ತು ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್ ವಿರುದ್ಧ ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿರುವ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ರಾಷ್ಟ್ರಧ್ವಜವನ್ನು ಹೊತ್ತುಕೊಂಡು ರಾಷ್ಟ್ರದ ಘನತೆಗಾಗಿ ನಿಂತವರಿಗೆ ಸೆಲ್ಯೂಟ್ ಮಾಡಿ” ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದರು.
ಅಫ್ಘಾನಿಸ್ತಾನವು 1919 ರ ಆಗಸ್ಟ್ 19 ರಂದು ಬ್ರಿಟಿಷ್ ನಿಯಂತ್ರಣದಿಂದ ಸ್ವಾತಂತ್ರ್ಯ ಪಡೆಯಿತು. ಹೀಗಾಗಿ ಆಗಸ್ಟ್ 19 ರಂದು ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ.
ಇದನ್ನೂ ಓದಿ: ಅಫ್ಘಾನ್: ಯಾರೊಂದಿಗೂ ದ್ವೇಷವಿಲ್ಲ, ಎಲ್ಲರಿಗೂ ಕ್ಷಮೆ ನೀಡಿದ್ದೇವೆ – ತಾಲಿಬಾನ್


