ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಹಾರದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ, ದೇಶದಲ್ಲಿ ನಿರುದ್ಯೋಗ ಹೆಚ್ಚಳ, ವಲಸೆ ಕಾರ್ಮಿಕರ ಸಮಸ್ಯೆ, ಕೊರೋನಾ ವೈರಸ್ ದಾಳಿ, ಭಾರತ-ಚೀನಾ ಸಂಘರ್ಷಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ನವಾಡಾದಲ್ಲಿ ನಡೆದ ಕಾಂಗ್ರೆಸ್-ಆರ್ಜೆಡಿ ಜಂಟಿ ಚುನಾವಣಾ ರ‍್ಯಾಲಿಯಾದ ‘ಬದಲಾವ್ ಸಂಕಲ್ಪ್’ ನಲ್ಲಿ ಆರ್‌ಜಿಡಿ ನಾಯಕ ತೇಜಸ್ವಿ ಯಾದವ್ ಜೊತೆಗೂಡಿ ಪ್ರಧಾನಿ ನರೇಂದ್ರ ಮೋದಿಯ ವೈಫಲ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸಿದ್ದಾರೆ.
ಲಾಕ್‌ಡೌನ್, ಚೀನಾ ಗಡಿ ಸಂಘರ್ಷ, ವಲಸೆ ಕಾರ್ಮಿಕರ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಏನೂ ಮಾಡಿಲ್ಲ. ಬಿಹಾರಕ್ಕೂ ಅವರಿಂದ ಯಾವ ಕೊಡುಗೆಯೂ ಇಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
“ಮೋದಿಯವರೇ, ಬಿಹಾರದ ಜನರಿಗೆ ಸುಳ್ಳು ಹೇಳಬೇಡಿ. ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ? ಕಳೆದ ಚುನಾವಣೆಯಲ್ಲಿ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದೀರಿ, ಆದರೆ ಯಾರಿಗೂ ಉದ್ಯೋಗ ಸಿಗಲಿಲ್ಲ. ಸಾರ್ವಜನಿಕವಾಗಿ ತಾನು ಸೈನ್ಯ, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ತಲೆ ಬಾಗುತ್ತೇನೆ ಎಂದು ಹೇಳುತ್ತೀರ, ಆದರೆ ಅಂಬಾನಿ ಮತ್ತು ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತೀರಿ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್ ಆದ ಬಿಜೆಪಿ ಪ್ರಣಾಳಿಕೆ!
ಕೊರೊನಾ ಸೋಂಕು ಮತ್ತು ಲಾಕ್‌ಡೌನ್, ವಲಸೆ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ರಾಹುಲ್, “ಎಲ್ಲಾ ವಲಸೆ ಕಾರ್ಮಿಕರನ್ನು ಮತ್ತೆ ಬಿಹಾರಕ್ಕೆ ವಾಪಸ್ ಕಳುಹಿಸಲಾಯಿತು. ಆ ಸಮಯದಲ್ಲಿ ವಲಸೆ ಕಾರ್ಮಿಕರು ಮೈಲುಗಟ್ಟಲೇ ನಡೆದುಕೊಂಡು ಹೋಗುತ್ತಿದ್ದಾಗ ಪ್ರಧಾನಿ ಮೋದಿ ಏನು ಮಾಡುತ್ತಿದ್ದರು? ಅವರು ನಿಮಗೆ ಸಾರಿಗೆ ಸಂಪರ್ಕಕ್ಕಾಗಿ ರೈಲುಗಳನ್ನು ಒದಗಿಸಿದ್ದಾರೆಯೇ? ” ಎಂದು ಪ್ರಶ್ನಿಸಿದ್ದಾರೆ.
ನೋಟು ಅಮಾನ್ಯೀಕರಣದ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಅಂಬಾನಿ, ಅದಾನಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಿದ್ದೀರಾ? ಇವರೆಲ್ಲರೂ ಎಸಿ ಕೋಣೆಗಳಲ್ಲಿರುತ್ತಾರೆ. ಮೋದಿ ಶ್ರೀಮಂತರ ಪರವಾಗಿದ್ದಾರೆ. ರೈತರು ಮತ್ತು ಸಣ್ಣ ಉದ್ಯಮಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆಗಳ ಕುರಿತು ರಾಹುಲ್ ಗಾಂಧಿ ಕಿಡಿಕಾರಿದ್ದು, ಚೀನಾ ನಮ್ಮ ಗಡಿಯೊಳಗೆ ನುಗ್ಗಿದರೂ ಯಾರೊಬ್ಬರೂ ಒಳಗೆ ಬಂದಿಲ್ಲ ಎಂದು ಹೇಳಿ ಪ್ರಧಾನಿ ನಮ್ಮ ಯೋಧರನ್ನು ಅವಮಾನಿಸಿದ್ದಾರೆ ಎಂದಿದ್ದಾರೆ.
ರ‍್ಯಾಲಿ ವೇಳೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿರುವ ತೇಜಸ್ವಿ ಯಾದವ್, “ಎನ್ಡಿಎ ಮೈತ್ರಿ ಕೂಟದ ವಿರುದ್ಧ ಮತ ಚಲಾಯಿಸಿ, ನಿತೀಶ್ ಕುಮಾರ್ ಅವರನ್ನು ಮನೆಯಲ್ಲಿಯೇ ಇರಿಸಿ. ಅವರು ಕೊರೊನಾ ಸಂದರ್ಭದಲ್ಲಿ 144 ದಿನಗಳ ಕಾಲ ಮನೆಯಲ್ಲಿಯೇ ಕಳೆದಿದ್ದರು. ಆದರೆ, ಚುನಾವಣಾ ವೇಳೆಯಲ್ಲಿ ಮಾತ್ರ ಅವರು ತಮ್ಮ ಮನೆಯಿಂದ ಹೊರ ಬಂದಿದ್ದಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ.
ಬಿಹಾರದ ವಿಧಾನಸಭೆಗೆ ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಆರ್ಜೆಡಿ ನೇತೃತ್ವದ ಮೈತ್ರಿಕೂಟ ಈ ಭಾರಿ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.


