ಚಿಕ್ಕಮಗಳೂರಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮದೆ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ. ತಮ್ಮ ಮೂಡಿಗೆರೆ ಕ್ಷೇತ್ರವನ್ನು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ಗೆ ಸೇರಿಸಿ ಎಂದು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ನಮ್ಮದೇ ಸರ್ಕಾರವಿದ್ದರೂ ಕೂಡ ನನ್ನ ಕ್ಷೇತ್ರದಲ್ಲಿನ ಕೆಲಸಗಳನ್ನು, ಸಮಸ್ಯೆಗಳನ್ನು, ಆದ್ಯತೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ, ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ, ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಎದುರು ಏಕಾಂಗಿಯಾಗಿ ಧರಣಿ ನಡೆಸಿದ್ದಾರೆ.
ನಮ್ಮ ಕ್ಷೇತ್ರವನ್ನು ಕಡೆಗಣಿಸಿ, ಬೇಡಿಕೆಗಳಿಗೆ ಸರ್ಕಾರ ಏಕೋ ಗಮನವೇ ಹರಿಸುತ್ತಿಲ್ಲ, ಹಾಗಾಗಿ ಧರಣಿ ಕುಳಿತುಕೊಂಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು
’ಕಳೆದ ಎರಡು ವರ್ಷದಿಂದ ಮೂಡಿಗೆರೆ ಕ್ಷೇತ್ರ ಪ್ರವಾಹಕ್ಕೆ ತುತ್ತಾಗಿದೆ. ಆದರೂ ಪರಿಹಾರ ಕೊಡುವಲ್ಲಿ ಅನ್ಯಾಯವಾಗಿದೆ. ಅಲ್ಲದೆ ಅತಿವೃಷ್ಟಿ ಪಟ್ಟಿಯಿಂದ ಕ್ಷೇತ್ರವನ್ನು ಕೈಬಿಟ್ಟಿರುವುದು ಸರಿಯಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಶಾಸಕ ಎಂ.ಪಿ. ಕುಮಾರಸ್ವಾಮಿ ಮನವೊಲಿಸಿ ಕರೆದುಕೊಂಡು ಹೋಗಲು ಬಂದ ಕಂದಾಯ ಸಚಿವ ಆರ್.ಅಶೋಕ್ ಮುಂದೆ ಕುಮಾರಸ್ವಾಮಿ ಕಣ್ಣೀರು ಕೂಡಾ ಹಾಕಿದ್ದಾರೆ.
ಶಾಸಕರ ಏಕಾಂಗಿ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ’ಸ್ವಪಕ್ಷದ ಶಾಸಕರೇ ಪ್ರತಿಭಟಿಸುತ್ತಿರುವುದು ಬಿಜೆಪಿ ದುರಾಡಳಿತಕ್ಕೆ ಕನ್ನಡಿ. ಕಳೆದ 2 ವರ್ಷದಿಂದ ಭೂಕುಸಿತ, ಪ್ರವಾಹದಿಂದಾಗಿ ರಾಜ್ಯದ ಜನರು ಹೈರಾಣಾಗಿದ್ದಾರೆ, 25 ಸಂಸದರಿದ್ದೂ, ಡಬಲ್ ಇಂಜಿನ್ ಸರ್ಕಾರಗಳಿದ್ದೂ ನಯಾಪೈಸೆ ಪರಿಹಾರ ಕೊಡಲಾಗದ ಮೇಲೆ ಬಿಜೆಪಿಗೆ ಏಕೆ ಅಧಿಕಾರ? ‘ಆತ್ಮ’ವಿದ್ದರೆ ಬಿಜೆಪಿ ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದಿದೆ.
ಸ್ವಪಕ್ಷದ ಶಾಸಕರೇ ಪ್ರತಿಭಟಿಸುತ್ತಿರುವುದು ಬಿಜೆಪಿ ದುರಾಡಳಿತಕ್ಕೆ ಕನ್ನಡಿ.
ಕಳೆದ 2 ವರ್ಷದಿಂದ ಭೂಕುಸಿತ, ಪ್ರವಾಹದಿಂದಾಗಿ ರಾಜ್ಯದ ಜನರು ಹೈರಾಣಾಗಿದ್ದಾರೆ, 25 ಸಂಸದರಿದ್ದೂ, ಡಬಲ್ ಇಂಜಿನ್ ಸರ್ಕಾರಗಳಿದ್ದೂ ನಯಾಪೈಸೆ ಪರಿಹಾರ ಕೊಡಲಾಗದ ಮೇಲೆ ಬಿಜೆಪಿಗೆ ಏಕೆ ಅಧಿಕಾರ?
'ಆತ್ಮ'ವಿದ್ದರೆ ಆತ್ಮವಿಮರ್ಶೆ ಮಾಡಿಕೊಳ್ಳಲಿ @BJP4Karnataka. pic.twitter.com/EKinQIuvtb
— Karnataka Congress (@INCKarnataka) August 12, 2021
ಧರಣಿ ಬೆನ್ನಲ್ಲೇ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಹಿನ್ನೆಲೆ ಶುಭಕೋರಲು ಆಗಮಿಸಿದ್ದರು ಎಂದು ಹೇಳಲಾಗುತ್ತಿದ್ದರೂ, ಸುಮಾರು ಹತ್ತು ನಿಮಿಷಗಳ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ ನಿಷೇಧ; ಆದೇಶ ಹಿಂಪಡೆಯುವಂತೆ ಪುಷ್ಪ ಬೆಳೆಗಾರರ ಪ್ರತಿಭಟನೆ


