ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಉಗ್ರರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ಶ್ರೀನಗರ, ಅನಂತ್‌ನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಆರು ಜನರನ್ನು ಬಂಧಿಸಿದ್ದಾರೆ.
ಶನಿವಾರವಷ್ಟೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ 11 ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿತ್ತು. ವಜಾಗೊಳಿಸಿದ ನೌಕರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಅವರ ಇಬ್ಬರು ಪುತ್ರರಾದ ಸೈಯದ್ ಅಹ್ಮದ್ ಶಕೀಲ್ ಮತ್ತು ಶಾಹಿದ್ ಯೂಸುಫ್ ಸೇರಿದ್ದಾರೆ.
ಎನ್‌ಐಎ ದಕ್ಷಿಣ ಕಾಶ್ಮೀರದ ಪುಶ್ರೂ, ಸನ್‌ಸೂಮಾ ಮತ್ತು ಅಚಬಲ್ ಗ್ರಾಮಗಳಲ್ಲಿ ದಾಳಿ ನಡೆಸಿ ಐದು ಜನರನ್ನು ಬಂಧಿಸಿದೆ. ಶ್ರೀನಗರದಲ್ಲಿ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ಕಚೇರಿಯ ಮೇಲೆ ದಾಳಿ ನಡೆಸಿ ಸಂಸ್ಥೆಯ ಮುಖ್ಯಸ್ಥ ನೂರ್ ದಿನ್ ಭಟ್ ಅವರನ್ನು ಬಂಧಿಸಲಾಗಿದೆ. ಜೊತೆಗೆ ಲ್ಯಾಪ್‌ಟಾಪ್, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಸ್ಥೆಗೆ ಸೇರಿದ ದಲಾಲ್ ಮೊಹಲ್ಲಾ, ನವಾಬ್ ಬಜಾರ್ ಮತ್ತು ಓಲ್ಡ್ ಸಿಟಿಯಲ್ಲಿ ಇರುವ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪ್ರತ್ಯೇಕತೆಯ ಕಿಡಿ ಹಚ್ಚಿದ ಬಿಜೆಪಿ: ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು
ಈ ಹಿಂದೆ, ಶೆರಿ ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಯೋಗಾಲಯ ತಂತ್ರಜ್ಞ ಸೈಯದ್ ಶಕೀಲ್ ಅವರನ್ನು ಭಯೋತ್ಪಾದನೆಗೆ ಹಣಕಾಸು ನೆರವು ಆರೋಪದಲ್ಲಿ ಶ್ರೀನಗರದ ರಾಂಬಾಗ್ ಪ್ರದೇಶದ ನಿವಾಸದಿಂದ 2018 ರಲ್ಲಿ ಬಂಧಿಸಲಾಗಿತ್ತು. ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಶಾಹಿದ್ ಯೂಸುಫ್ ಅವರನ್ನು 2017 ರಲ್ಲಿ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಿಂದ ವಜಾಗೊಳಿಸಿರುವ ಇಬ್ಬರು ಕಾನ್‌ಸ್ಟೆಬಲ್‌ಗಳು ಪೊಲೀಸ್ ಇಲಾಖೆಯೊಳಗಿನಿಂದ ಉಗ್ರಗಾಳಿಗೆ ಬೆಂಬಲಿಸುತ್ತಿದ್ದರು ಮತ್ತು ಬೆಂಬಲದ ಜೊತೆಗೆ ಉಗ್ರರಿಗೆ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅನಂತನಾಗ್, ಬಾರಾಮುಲ್ಲಾ ಜಿಲ್ಲೆಗಳಲ್ಲಿಯೂ ವಿವಿಧೆಡೆ ದಾಳಿ ನಡೆದಿದ್ದು, ವ್ಯಾಪಾರಿಗಳಾದ ಉಮರ್ ಭಟ್, ತನ್ವೀರ್ ಭಟ್, ಜಾವೇದ್ ಭಟ್, ಔಷಧ ವ್ಯಾಪಾರಿ ಜೀಶನ್ ಮಲಿಕ್, ವೈದ್ಯಕೀಯ ಪ್ರಯೋಗಾಲಯದ ತಂತ್ರಜ್ಞ ಒವೈಸಿ ಭಟ್ ಎಂಬುವವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 2,500 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ದೆಹಲಿ ಪೊಲೀಸರು


