Homeಕರ್ನಾಟಕಕೋಮುವಾದಿಗಳು ಎಬ್ಬಿಸಿದ ವಿವಾದದ ಸುಳಿಯಲ್ಲಿ ಈದ್ಗಾ ಮೈದಾನದ ಬಯಲು

ಕೋಮುವಾದಿಗಳು ಎಬ್ಬಿಸಿದ ವಿವಾದದ ಸುಳಿಯಲ್ಲಿ ಈದ್ಗಾ ಮೈದಾನದ ಬಯಲು

- Advertisement -
- Advertisement -

(ಸೂಚನೆ: ಈ ವರದಿಯು ‘ನ್ಯಾಯಪಥ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ವರದಿ ಮುದ್ರಣವಾದ ಒಂದು ದಿನದ ನಂತರದಲ್ಲಿ ಬಿಬಿಎಂಪಿ ಪ್ರತಿಕ್ರಿಯೆ ನೀಡಿದ್ದು, ‘ಚಾಮರಾಜಪೇಟೆ ಈದ್ಗಾ ಮೈದಾನ ತನಗೆ ಸೇರಿಲ್ಲ’ ಎಂದು ಸ್ಪಷ್ಟನೆ ನೀಡಿದೆ.)

ಮಸೀದಿ ಮತ್ತು ಅನ್ಯ ಧರ್ಮೀಯರ ಪ್ರಾರ್ಥನಾ ಸ್ಥಳಗಳ ಕೆಳಗೆ ದೇವಾಲಯಗಳನ್ನು ದೇವರ ವಿಗ್ರಹಗಳನ್ನು ಹುಡುಕಿ ಒಂದು ಮಟ್ಟಕ್ಕೆ ಸಹಬಾಳ್ವೆಯಿಂದ ಬದುಕುತ್ತಿರುವ ಸಮಾಜಕ್ಕೆ ಕೋಮು ದ್ವೇಷ ಹಚ್ಚುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲದೇ ಇರುವ ವಿವಾದವನ್ನು ಸೃಷ್ಟಿಸಿ, ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ’ಫ್ರಿಂಜ್ ಎಲಿಮೆಂಟ್’ಗಳು ರಾರಾಜಿಸುತ್ತಿವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಪುರಾತನ ಈದ್ಗಾ ಮೈದಾನಕ್ಕೂ ಈ ’ಫ್ರಿಂಜ್‌ಗಳು’ ಕೈಹಾಕಿರುವಂತಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಯಿಂದ ಸ್ಪಷ್ಟೀಕರಣ ಕೇಳಿದವು. ವಿಚಾರವಾದಿಗಳ ಹತ್ಯೆಗಳಲ್ಲಿ ಹೆಸರಿಸಲಾಗಿ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸಂಘಟನೆಗಳು ವಿವಾದ ಸೃಷ್ಟಿಗೆ ಮುಂದಾಗಿ, “ಈ ಆಟದ ಮೈದಾನ ಬಿಬಿಎಂಪಿಗೆ ಸೇರಿರುವುದರಿಂದ ತಮಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು” ಎಂದವು.

ಯಾರೋ ಬಂದು ಏನನ್ನೋ ಪ್ರತಿಪಾದಿಸುತ್ತಾರೆ. ಆದರೆ ಆಡಳಿತ ವರ್ಗವೂ ಇದೇ ಪ್ರತಿಪಾದನೆಯನ್ನು ಮಾಡಿದಾಗ ವಿಷಯ ಬೇರೊಂದು ಮಗ್ಗುಲಿಗೆ ಹೊರಳಿತು. “ಚಾಮರಾಜಪೇಟೆಯ ಈದ್ಗಾ ಮೈದಾನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸೇರಿದೆ. ಪಾಲಿಕೆಯ ದಾಖಲೆಗಳ ಪ್ರಕಾರ ಪೂರ್ವಾನುಮತಿ ಪಡೆದು ಎಲ್ಲ ಸಮುದಾಯದವರು ಈ ಮೈದಾನವನ್ನು ಬಳಸಬಹುದು” ಎಂದು ಬಿಬಿಎಂಪಿ ಹೇಳಿಬಿಟ್ಟಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, “ಇದು ಬಿಬಿಎಂಪಿ ಆಸ್ತಿಯಾಗಿದ್ದು, ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆಟದ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಈ ಸ್ಥಳವನ್ನು ನೀಡಬಹುದು ಎಂದು ನ್ಯಾಯಾಲಯದ ಆದೇಶವಿದೆ” ಎಂದು ತಿಳಿಸಿದ್ದಾರೆ.

“ನ್ಯಾಯಾಲಯದ ಆದೇಶದ ಪ್ರಕಾರ ಪಶ್ಚಿಮ ವಲಯ ಜಂಟಿ ಆಯುಕ್ತರ ಅನುಮತಿಯೊಂದಿಗೆ ಮುಸ್ಲಿಮರು ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಪ್ರಾರ್ಥನೆಗಾಗಿ ಇಲ್ಲಿ ಸೇರುತ್ತಾರೆ” ಎಂದು ತಿಳಿಸಿದ್ದಾರೆ.

“ಪ್ರತಿ ವರ್ಷ ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ, ಈ ಸ್ಥಳವು ಧಾರ್ಮಿಕ ಚಟುವಟಿಕೆಯ ಕೇಂದ್ರವಾಗುತ್ತದೆ. ಬಕ್ರೀದ್ ಸಮಯದಲ್ಲಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಮತ್ತು ಇತರ ಜಿಲ್ಲೆಗಳ ರೈತರು ಕುರಿ ಮತ್ತು ಮೇಕೆಗಳನ್ನು ಇಲ್ಲಿಗೆ ತಂದು ಮಾರುತ್ತಾರೆ. ಈ ಎರಡು ಸಂದರ್ಭಗಳನ್ನು ಹೊರತುಪಡಿಸಿ, ಇತರ ಚಟುವಟಿಕೆಗಳಿಗೆ ಅವಕಾಶ ನೀಡುವ ಬಗ್ಗೆ ಜಂಟಿ ಆಯುಕ್ತರು ನಿರ್ಧಾರ ತೆಗೆದುಕೊಳ್ಳಬಹುದು” ಎಂದು ಪಾಲಿಕೆ ಹೇಳಿತು.

ಈ ಜಾಗವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ಸಿದ್ಧರಿರುವ ಯಾರಾದರೂ ಬಿಬಿಎಂಪಿಗೆ ಪ್ರಸ್ತಾವನೆಯನ್ನು ಕಳುಹಿಸಬಹುದು. ಅರ್ಜಿಯನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ಈ ಮೂಲಕ ಈ ಜಾಗ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ್ದೋ ಅಥವಾ ಬಿಬಿಎಂಪಿಗೆ ಸೇರಿದ್ದೋ ಎಂಬ ಪ್ರಶ್ನೆ ಎದ್ದಿದೆ. ವಿವಾದವನ್ನು ಸುಖಾಸುಮ್ಮನೆ ಹುಟ್ಟು ಹಾಕಲಾಗುತ್ತಿದೆಯೇ ಎಂಬ ಗುಮಾನಿಯೂ ಹುಟ್ಟಿಕೊಂಡಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನ ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲಿಯೋ ಎಫ್ ಸಾಲ್ಡಾನಾ. “ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಒಂದು ಕ್ಷುಲ್ಲಕ ವಿಷಯವನ್ನು ಅನಾವಶ್ಯಕವಾಗಿ ಕದಡಿ ರಾಡಿ ಎಬ್ಬಿಸಿರುವ ತಮ್ಮ ಅಧೀನ ಅಧಿಕಾರಿಯ ವಿರುದ್ಧ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಇದು ರಾಜ್ಯಾದ್ಯಂತ ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿರುವವರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿರಬೇಕು” ಎಂದು ಆಗ್ರಹಿಸುತ್ತಾರೆ.

ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಅವರು, ಈದ್ಗಾ ಮೈದಾನ ಕೇವಲ ಕ್ರಿಕೆಟ್ ಆಟಕ್ಕಷ್ಟೇ ಅಲ್ಲದೆ ಸರ್ವಜನಾಂಗಗಳ ಸಾಮರಸ್ಯ ಕೇಂದ್ರವಾಗಿತ್ತು ಎನ್ನುತ್ತಾರೆ. “ಚಾಮರಾಜಪೇಟೆಯ ಉದ್ದಗಲಕ್ಕೂ ಗೆಳೆಯರ ಭೇಟಿಗೆ ಹೋಗುತ್ತಿದ್ದಾಗ, ಅವರು ಯಾವ ಧರ್ಮ ಅಥವಾ ಜಾತಿಗೆ ಸೇರಿದವರು, ಅವರು ಎಲ್ಲಿಂದ ಬಂದವರು ಎಂಬ ಚಿಂತೆಯನ್ನು ನಾವು ಎಳ್ಳಷ್ಟೂ ಮಾಡುತ್ತಿರಲಿಲ್ಲ. ಒಬ್ಬರು ಇನ್ನೊಬ್ಬರ ಸಹವಾಸವನ್ನು ಸಾಧ್ಯವಿರುವ ಎಲ್ಲಾ ರೀತಿಗಳಲ್ಲಿ ನಾವು ಆನಂದಿಸುತ್ತಿದ್ದೆವು” ಎನ್ನುತ್ತಾರೆ ಸಾಲ್ಡಾನಾ.

ಡಾ.ಹರೀಶ್ ಕುಮಾರ್

ಈಗಲೂ ಯಾವುದೇ ಬೇಲಿಯನ್ನು ಹೊಂದಿರದ ಈ ಮೈದಾನದಲ್ಲಿ ಸಂತೆ ನಡೆಯುತ್ತದೆ. ಎಲ್ಲ ಜಾತಿ, ಜನಾಂಗಗಳು ಸೇರುತ್ತವೆ. ಎಪ್ಪತ್ತರ ದಶಕದಿಂದೀಚೆಗೆ ದೇಶದಲ್ಲಿ ಘಟಿಸಿರುವ ಕೋಮು ಸಂದಿಗ್ಧತೆಯ ಏರಿಳಿತಗಳಿಗೂ ಈ ಮೈದಾನ ಸಾಕ್ಷಿಯಾಗಿದೆ ಎಂಬುದು ಸಾಲ್ಡಾನಾ ಅವರ ಅನುಭವ.

ಈದ್ಗಾ ಮೈದಾನದೊಂದಿಗಿನ ತಮ್ಮ ಬಾಲ್ಯದ ನೆನಪುಗಳನ್ನು ’ನ್ಯಾಯಪಥ’ದ ಜೊತೆ ಹಂಚಿಕೊಂಡ ಬೆಂಗಳೂರಿನ ನಿವಾಸಿ ದಿನೇಶ್ ಫ್ರಾನ್ಸಿಸ್, “ಶಿವರಾತ್ರಿ ಹಬ್ಬ ಬಂದಾಗಲೂ ಆಚರಣೆಗಳು ನಡೆಯುತ್ತಿದ್ದವು. ಮುಸ್ಲಿಮರು ತಮ್ಮ ಹಬ್ಬಗಳ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಈ ಮೈದಾನವನ್ನು ಸರ್ಕಾರ ತನ್ನ ಹಿಡಿತಕ್ಕೆ ಪಡೆದು ಬೇರೆ ಅಭಿವೃದ್ಧಿ ಕಾಮಗಾರಿ ನಡೆಸಲು ಮುಂದಾಗಿತ್ತು. ಆಗ ನಾವೆಲ್ಲ ವಿರೋಧಿಸಿ ತಡೆದೆವು. ಮಕ್ಕಳು ಆಟವಾಡಲು ಸೂಕ್ತವಾದ ಮೈದಾನವಿದೆಂದು ಹೋರಾಟ ನಡೆಸಿದೆವು. ಇಲ್ಲಿ ಯಾವುದೇ ರಾಜಕೀಯ ರ್‍ಯಾಲಿಗಳು ನಡೆಯುತ್ತಿರಲಿಲ್ಲ. ಧರ್ಮಗಳ ಸಂಗತಿ ನಮಗೆ ಮುಖ್ಯವೇ ಆಗಿರಲಿಲ್ಲ ಎಂದರು.

ಬದುಕಿನ ಭಾವಕೋಶಗಳಲ್ಲಿ ಇಷ್ಟೆಲ್ಲ ಬೆರೆತಿರುವ ಈದ್ಗಾ ಮೈದಾನ ವಿವಾದದ ಕೇಂದ್ರವಾಗುತ್ತಿರುವುದು ಏತಕ್ಕೆ? ’ಈ ಜಾಗ ಯಾರಿಗೆ ಸೇರಿದ್ದು?’ ಎಂಬ ಚರ್ಚೆ ಹುಟ್ಟಿಕೊಂಡಿದ್ದು ಹೇಗೆ? ಈ ಜಾಗ ಬಿಬಿಎಂಪಿಗೆ ಸೇರಬೇಕೋ, ವಕ್ಫ್ ಮಂಡಳಿಗೆ ಸೇರಬೇಕೋ? ಈ ಎರಡು ಸರ್ಕಾರಿ ಸಂಸ್ಥೆಗಳ ನಡುವೆ ಗುದ್ದಾಟ ಶುರುವಾಗಿದ್ದು ಎಲ್ಲಿಂದ?

’ಬಿಬಿಎಂಪಿ ಹೇಳಿಕೆ ಹಿಂಪಡೆಯಲಿ’ ’ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೆಂದು ಹೇಳಿಕೆ ನೀಡಿರುವ ಬಿಬಿಎಂಪಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಕೇಂದ್ರ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಆಗ್ರಹಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರ ಬರೆದಿರುವ ಸಿಎಂಎ ಪ್ರಧಾನ ಕಾರ್ಯದರ್ಶಿ ಡಾ.ಜಹೀರುದ್ದೀನ್ ಅಹ್ಮದ್, “ಈ ಭೂಮಿ ವಕ್ಫ್‌ಗೆ ಸೇರಿದೆ. ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ಅಂದಿನ ಬೆಂಗಳೂರು ಸಿಟಿ ಕಾರ್ಪೊರೇಶನ್ ಪ್ರತಿಪಾದನೆಯನ್ನು ವಜಾಗೊಳಿಸಿತ್ತು. ಈ ಕುರಿತು ವಕ್ಫ್ ಗೆಜೆಟ್ ಅಧಿಸೂಚನೆಯನ್ನು ಜೂನ್ 7, 1965ರಂದು ಹೊರಡಿಸಿದೆ” ಎಂದು ತಿಳಿಸಿದ್ದಾರೆ.

“ಪಾಲಿಕೆಯು ಈದ್ಗಾ ಮೈದಾನದ ನೈಋತ್ಯ ಮೂಲೆಯಲ್ಲಿ ಅನಧಿಕೃತವಾಗಿ ವಾರ್ಡ್ ಕಚೇರಿಯನ್ನು ನಿರ್ಮಿಸಿತ್ತು. ಆದರೆ 1971ರ ಆಗಸ್ಟ್ 28ರಂದು ಅಂದಿನ ಮೇಯರ್ ಎಂ.ಬಿ.ಲಿಂಗಯ್ಯ ಮತ್ತು ಸಿಎಂಎ ಪ್ರತಿನಿಧಿಗಳ ನಡುವೆ ಸಭೆ ನಡೆಯಿತು. 30 ವರ್ಷಗಳ ಕಾಲ ಜಾಗವನ್ನು ಗುತ್ತಿಗೆ ನೀಡಲು ಒಪ್ಪಿಗೆ ನೀಡಲಾಯಿತು” ಎಂದಿದ್ದಾರೆ ಅಹ್ಮದ್.

“1994ರ ಮಾರ್ಚ್ 3ರಂದು ಪಾಲಿಕೆಗೆ ಪತ್ರ ಬರೆದು ವಾರ್ಡ್ ಕಚೇರಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಈದ್ಗಾ ಮೈದಾನ ಆಟದ ಮೈದಾನವಾಗಿದ್ದು, ಅದು ತಮಗೆ ಸೇರಿದೆ ಎಂದು ಬಿಬಿಎಂಪಿ ಹೇಳಿರುವುದು ಅಚ್ಚರಿಯ ಸಂಗತಿಯಾಗಿದೆ. ಬಿಬಿಎಂಪಿ ತನ್ನ ಹೇಳಿಕೆಯನ್ನು ವಾಪಸ್ ಪಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ವಕ್ಫ್ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ ಪರ್ವೀಜ಼್ ಖಾನ್ ಕೂಡ ಇದೇ ಪ್ರತಿಪಾದನೆಯನ್ನು ಮಾಡಿದ್ದಾರೆ. “ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಅದು ಸಾರ್ವಜನಿಕವಾಗಿಯೂ ಲಭ್ಯವಿದೆ. ಈಗ ಬಿಬಿಎಂಪಿಯವರು ತಮ್ಮದೆಂದು ಯಾಕೆ ಹೇಳುತ್ತಿದ್ದಾರೆಂದು ಗೊತ್ತಿಲ್ಲ. ಎಲ್ಲ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಸಿದ್ದೇವೆ. ಕಾನೂನು ಪ್ರಕ್ರಿಯೆ ನಡೆಯಬೇಕು ಎಂದು ಬಿಬಿಎಂಪಿ ತಿಳಿಸಿದೆ” ಎಂದು ಮಾಹಿತಿ ನೀಡಿದರು.

ಲಿಯೋ ಎಫ್ ಸಾಲ್ಡಾನಾ

“ನ್ಯಾಯಾಲಯದ ಆದೇಶವೇ ಅಂತಿಮ. ಹೀಗಾಗಿ ಯಾರು ಏನೇ ಹೇಳಿದರೂ ನಾವು ಅತಿಯಾದ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಎರಡು ಸರ್ಕಾರಿ ಸಂಸ್ಥೆಗಳ ನಡುವೆ ಈ ಗೊಂದಲ ಏರ್ಪಟ್ಟಿದೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಸಾಗುತ್ತೇವೆ” ಎಂದು ಅವರು ತಿಳಿಸಿದರು.

“ಇಷ್ಟು ವರ್ಷ ಕಳೆದರೂ ವಕ್ಫ್ ಮಂಡಳಿ ಈ ಮೈದಾನಕ್ಕೆ ತಂತಿ ಬೇಲಿಯನ್ನು ಹಾಕಿಲ್ಲ. ಎಲ್ಲರೂ ಜೊತೆಯಲ್ಲಿ ಇರಬೇಕೆಂಬುದು ನಮ್ಮ ಆಶಯ. ಇತ್ತೀಚೆಗೆ ಈ ವಿವಾದ ಬಂದಿದೆ. ಹೀಗಾಗಿ ವಿವಾದ ಸೃಷ್ಟಿಸಲು ಯತ್ನಿಸುವವರಿಗೆ ಪ್ರತಿಕ್ರಿಯೆ ನೀಡಲು ನಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ಪಶ್ಚಿಮ ವಿಭಾಗದ ಆಯುಕ್ತರಾದ ಶ್ರೀನಿವಾಸ್ ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿ, “ಸುಪ್ರೀಂ ಕೋರ್ಟ್ ಆದೇಶವಿರುವ ದಾಖಲೆಗಳನ್ನು ವಕ್ಫ್ ಬೋರ್ಡ್ ಕಳುಹಿಸಿಕೊಟ್ಟಿದೆ. ಇದು ಬಿಬಿಎಂಪಿಗೆ ಸೇರಿದೆ ಎಂಬ ದಾಖಲೆಗಳೂ ಇವೆ. ಅವುಗಳನ್ನು ಮುಖ್ಯ ಕಚೇರಿಯ ಕಾನೂನು ವಿಭಾಗಕ್ಕೆ ಸಲ್ಲಿಸಿದ್ದೇವೆ. ಈಗ ಇರುವ ಪ್ರಸ್ತುತ ದಾಖಲೆಗಳ ಪ್ರಕಾರ ಈ ಆಟದ ಮೈದಾನ ಬಿಬಿಎಂಪಿಗೆ ಸೇರಿದೆ. ಈ ಸಮಸ್ಯೆ ಇತ್ಯರ್ಥವಾಗಲು ಇನ್ನೂ ಹತ್ತು ದಿನ ಬೇಕಾಗಬಹುದು. ಈ ಸ್ಥಳವು ಯಾರಿಗೆ ಸೇರಿದ್ದೆಂದು ತಿಳಿಯಲು ಹಳೆಯ ದಾಖಲೆಗಳನ್ನು ಕಳುಹಿಸಿಕೊಡುವಂತೆ ಕಂದಾಯ ಇಲಾಖೆಗೂ ಪತ್ರ ಬರೆದಿದ್ದೇವೆ” ಎಂದು ಹೇಳಿದರು.

“ಇಲ್ಲಿಯವರೆಗೂ ನಡೆಯುತ್ತಿದ್ದ ಪ್ರಾರ್ಥನೆಗೆ ನಿಮ್ಮ ಅನುಮತಿಯನ್ನು ಪಡೆಯಲಾಗುತ್ತಿತ್ತೇ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲಿಯವರೆಗೆ ಈ ರೀತಿಯ ಮನವಿಗಳು ಬಂದಿದ್ದು ಇಲ್ಲ. ವರ್ಷಕ್ಕೆ ಎರಡು ಭಾರಿ ಪ್ರಾರ್ಥನೆ ನಡೆಯುತ್ತಿತ್ತು. ಉಳಿದಂತೆ ಆಟದ ಮೈದಾನವಾಗಿ ಬಳಕೆಯಾಗುತ್ತಿತ್ತು. ವಕ್ಫ್‌ನವರು ಈ ಜಾಗ ನಮ್ಮದೆಂದು ಹೇಳಿದ ಬಳಿಕ ವಿವಾದ ಸೃಷ್ಟಿಯಾಗಿದೆ” ಎಂದು ಹೇಳಿದರು.

ಹೀಗೆ ಕೆಲವು ’ಫ್ರಿಂಜ್ ಎಲಿಮೆಂಟ್’ಗಳ ಕಾರಣದಿಂದ ಎರಡು ಸರ್ಕಾರಿ ಸಂಸ್ಥೆಗಳು ವಿವಾದ ಕೇಂದ್ರವಾಗಿಬಿಟ್ಟಿವೆ. ಬೇಕೆಂದೇ ಕೆಲವು ಕೋಮುವಾದಿ ಸಂಘಟನೆಗಳು ಎಬ್ಬಿಸಿರುವ ಈ ವಿವಾದ ಕೊನೆಗೊಂಡು ಈದ್ಗಾ ಮೈದಾನ ಎಂದಿನಂತೆ ಮುಕ್ತ ಮೈದಾನವಾಗಿ ಉಳಿಯಬೇಕಿದೆ ಎಂಬುದು ಬೆಂಗಳೂರಿನ ಪ್ರಜ್ಞಾವಂತರ ಕೂಗು.


ಇದನ್ನೂ ಓದಿ: ಈದ್ಗಾ ಮೈದಾನ ವಿವಾದ; ಬದಲಾದ ಚಾಮರಾಜಪೇಟೆಯ ಕಥನ ಭಾರತದ್ದೂ ಹೌದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಚುನಾವಣೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆಹಿಡಿದಿದೆ. ಭಾರತದ ಮುಖ್ಯ...

ಹಾಜರಾತಿ ಆಧಾರದ ಮೇಲೆ ಪರೀಕ್ಷಾ ನಿಷೇಧ ವಿರೋಧಿಸಿ ಎಎಂಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಬಂಧನ, ಹಲ್ಲೆ ಆರೋಪ 

ಕಡಿಮೆ ಹಾಜರಾತಿ ಕಾರಣ ಸೆಮಿಸ್ಟರ್ ಪರೀಕ್ಷೆಗಳಿಂದ ನಿಷೇಧಿಸಲ್ಪಟ್ಟಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ನಂತರ, ವಿಶ್ವವಿದ್ಯಾಲಯದ ಪ್ರೊಕ್ಟೋರಿಯಲ್ ತಂಡವು ಹಲವಾರು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದೆ ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU)...

ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡ ಮಾಜಿ ಸಿಎಂ ಪನ್ನೀರ್‌ಸೆಲ್ವಂ, ಪ್ರತಿಸ್ಪರ್ಧಿ ಡಿಎಂಕೆ ಪಕ್ಷಕ್ಕೆ ಸೇರ್ಪಡೆ

ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಜೆ ಜಯಲಲಿತಾ ಅವರ ದೀರ್ಘಕಾಲದ ಸಹಾಯಕರಾಗಿದ್ದ ಪನ್ನೀರ್‌ಸೆಲ್ವಂ ಅವರನ್ನು ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರೊಂದಿಗಿನ ತೀವ್ರ ಅಧಿಕಾರ ಹೋರಾಟದ ನಂತರ 2022 ರಲ್ಲಿ ಎಐಎಡಿಎಂಕೆಯಿಂದ...

‘ನಾನು ಭ್ರಷ್ಟನಲ್ಲ’: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಕ್ಲೀನ್ ಚಿಟ್; ಮಾಧ್ಯಮಗಳೆದುರು ಭಾವುಕರಾದ ಕೇಜ್ರಿವಾಲ್

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದ ಕೆಲವೇ ಕ್ಷಣಗಳಲ್ಲಿ, ಫೆಬ್ರವರಿ 27, ಶುಕ್ರವಾರದಂದು ಮಾಧ್ಯಮಗಳ...

‘ಮುಸ್ಲಿಮರ ವಿರುದ್ಧ ದ್ವೇಷ ಭಾಷಣ’: ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ನೋಟಿಸ್ ಜಾರಿ ಮಾಡಿದ ಗುವಾಹಟಿ ಹೈಕೋರ್ಟ್

ಗುವಾಹಟಿ: ಮುಸ್ಲಿಮರನ್ನು ಗುರಿಯಾಗಿಸಿಕೊಂಡು "ದ್ವೇಷ ಭಾಷಣ" ಮಾಡಿದ್ದಾರೆ ಎಂಬ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗುವಾಹಟಿ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಬಂಗಾಳಿ ಮೂಲದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು...

ಅಫ್ಘಾನಿಸ್ತಾನದೊಂದಿಗೆ ‘ಮುಕ್ತ ಯುದ್ಧ’ ಘೋಷಿಸಿದ ಪಾಕಿಸ್ತಾನ; ತಾಲಿಬಾನ್‌ ವಿರುದ್ಧ ಆಪರೇಷನ್‌ ಗಜಬ್-ಲಿಲ್‌-ಹಕ್‌ ಆರಂಭಿಸಿದ ಪಾಕ್‌ ಸೇನೆ!

ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಇಸ್ಲಾಮಾಬಾದ್ ಔಪಚಾರಿಕವಾಗಿ ಹೆಚ್ಚಿಸಿದೆ, ಹಂಚಿಕೆಯ ಗಡಿಯಲ್ಲಿ ಹೊಸ ಮತ್ತು ಮಾರಕ ಘರ್ಷಣೆಗಳ ನಂತರ ತಾಲಿಬಾನ್ ನೇತೃತ್ವದ ಸರ್ಕಾರದ ವಿರುದ್ಧ ಮುಕ್ತ ಯುದ್ಧ ಎಂದು ಘೋಷಿಸಿದೆ.  ಶುಕ್ರವಾರ ಮುಂಜಾನೆ ಕಾಬೂಲ್ ಮತ್ತು ಕಂದಹಾರ್‌ನಲ್ಲಿ...

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...

‘ಕೋಮು ಸಾಮರಸ್ಯ ಕದಡುವ ಸಾಧ್ಯತೆ’: ‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

'ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್' ಸಿನಿಮಾದ ಸೆನ್ಸಾರ್ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಗುರುವಾರ (ಫೆ.26) ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಸಿನಿಮಾ ನಾಳೆ...