Homeಮುಖಪುಟಕಾರ್ಪೊರೆಟ್ ಕೃಷಿಯ ವಿಶ್ವರೂಪ

ಕಾರ್ಪೊರೆಟ್ ಕೃಷಿಯ ವಿಶ್ವರೂಪ

- Advertisement -
- Advertisement -

ಉಕ್ರೇನ್ ದೇಶದ ಕಾಲು ಭಾಗ ಕೃಷಿ ಭೂಮಿಯ ಒಡೆಯ ಒಂದೇ ಕಂಪನಿ! ಗೋಧಿ, ಬಾರ್ಲಿ ಬೆಳೆದು ವಿಶ್ವಕ್ಕೆಲ್ಲಾ ರಫ್ತು ಮಾಡುತ್ತದೆ ಈ ಕಂಪನಿ. ಡೇವೂ ಕಂಪನಿ ಮಡಗಾಸ್ಕರ್‌ನ 34 ಲಕ್ಷ ಎಕರೆಯ ಒಡೆಯ. ಅಮೆರಿಕದ ಒಂದು ಕಂಪನಿಯ ಒಡೆತನದಲ್ಲಿ 800 ಫಾರ್ಮ್‌ಗಳಿವೆ, ಹಲವಾರು ದೇಶಗಳಲ್ಲಿ. ಮತ್ತೊಂದು ಕಂಪನಿ ಹತ್ತು ಲಕ್ಷ ಹಂದಿಗಳನ್ನು ಸಾಕುತ್ತದೆ, ಅಮೆರಿಕ, ಮೆಕ್ಸಿಕೊ, ಪೂರ್ವ ಯುರೋಪಿನ ನಾಲ್ಕಾರು ದೇಶಗಳಲ್ಲಿ.

2016ರ ಒಂದೇ ವರ್ಷದಲ್ಲಿ ಕೇವಲ 491 ಭೂಮಿ ಮಾರಾಟ ವ್ಯವಹಾರಗಳಲ್ಲಿ, 78 ದೇಶಗಳ ಏಳೂವರೆ ಕೋಟಿ ಎಕರೆ ಕೃಷಿ ಭೂಮಿಯನ್ನು ಅಮೆರಿಕ, ಯುರೋಪಿನ ಬೃಹತ್ ಕಾರ್ಪೊರೆಟ್‌ಗಳು, ಶೇರು ಮಾರುಕಟ್ಟೆಯ ಫಂಡ್‌ಗಳು, ಬ್ಯಾಂಕ್‌ಗಳು, ಕತಾರ್, ಯುಎಇ, ಜಪಾನ್ ದೇಶಗಳ ಹಣ ಹೂಡಿಕೆ ಕಂಪನಿಗಳು ಕೊಂಡಿವೆ. ಇದು ಒಂದು ಕಡೆಯಾದರೆ…

ಮತ್ತೊಂದು ಕಡೆ, ಅಮೆರಿಕದಲ್ಲಿ ಹಾಲು ಉತ್ಪಾದನೆ ಮಾಡುವ ಮಹಿಳೆಯೊಬ್ಬರು ಹೇಳುತ್ತಾಳೆ: ಹಾಲಿನ ಬೆಲೆ ಕುಸಿದು ಒಂದು ವಾರದಲ್ಲಿ 9 ಜನ ಹಾಲು ಉತ್ಪಾದಕ ರೈತರು ಆತ್ಮಹತ್ಯೆ ಮಾಡಿಕೊಂಡರೆಂದು. ಫ್ರಾನ್ಸ್ ಯುರೋಪಿನಲ್ಲಿ ಅತ್ಯಂತ ಹೆಚ್ಚು ಕೃಷಿ ಭೂಮಿ ಇರುವ ದೇಶ. ಅಲ್ಲಿನ ರೈತನೊಬ್ಬ ಹೇಳುತ್ತಾನೆ: ಫ್ರಾನ್ಸ್‌ನಲ್ಲಿ ಮೂರು ದಿನಗಳಿಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರಿಗೆ ಮದುವೆಯಾಗಲು ಹೆಣ್ಣುಗಳು ದೊರೆಯುತ್ತಿಲ್ಲ. ರೈತರ ಪಾಡು ನಾಯಿಪಾಡಾಗಿದೆ. ಈಗ ಕೃಷಿಯಲ್ಲಿ ತೊಡಗಿರುವ ರೈತರೆಲ್ಲ ಮಧ್ಯ ವಯಸ್ಕರು ಮತ್ತು ವೃದ್ಧರು. ಯುವಕರೆಲ್ಲ ನಗರಗಳಲ್ಲಿ ಕೆಲಸಗಳನ್ನರಸಿ ಹೋಗುತ್ತಿದ್ದಾರೆ.

ಇನ್ನು ಭಾರತದಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎನ್ನುವುದು ಹಳೆಯ ಮಾತು. ರೈತರನ್ನು ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಅಡಿಕೆ ಬೆಳೆಗಾರ ರೈತರು ಜಾತಿ ಗೀತಿ ಏನೂ ನೋಡದೆ ಉತ್ತರ ಪ್ರದೇಶದ ಹಳ್ಳಿಗಳಿಂದ ಹೆಣ್ಣುಗಳನ್ನು ತರುತ್ತಿದ್ದಾರೆ ಎಂದು ಕೇಳಿಬರುತ್ತಿರುವ ಮಾತುಗಳಂತೆಯೇ ಇವೆಯಲ್ಲ ಬೇರೆ ದೇಶದಲ್ಲಿ ನಡೆಯುತ್ತಿರುವ ಸಂಗತಿಗಳು ಕೂಡ!

ಈ ಸಂಗತಿಗಳನ್ನು ಗಮನಿಸಿದರೆ ರೈತರ ಈ ಸಮಸ್ಯೆ ವಿಶ್ವಾತ್ಮಕವಾದದ್ದು ಎನಿಸುತ್ತದೆ. ಆದರೆ ವ್ಯತ್ಯಾಸ ಇದೆ. ಮತ್ತದು ಗಣನೀಯವಾಗಿದೆ. ಅಮೆರಿಕದಲ್ಲಿ ಈ ಮಾತನ್ನಾಡುತ್ತಿರುವ ರೈತರು 250-500 ಎಕರೆಗಳ ಒಡೆಯರು. ಫ್ರಾನ್ಸ್‌ನಲ್ಲಿ 100-200 ಎಕರೆಗಳ ಒಡೆಯರು. ಭಾರತದಲ್ಲಿ 2ರಿಂದ 10 ಎಕರೆಗಳ ಒಡೆಯರು. ಅಮೆರಿಕದಲ್ಲಿ ಹಳ್ಳಿಗಳೇ ಇಲ್ಲ. ಫ್ರಾನ್ಸ್‌ನಲ್ಲಿ ಕೆಲ ಹಳ್ಳಿಗಳಿವೆ. ಭಾರತದಲ್ಲಿ ಇನ್ನೂ ಐದು ಲಕ್ಷ ಹಳ್ಳಿಗಳಿವೆ. ಅವನ್ನು ಉಳಿಸಿಕೊಳ್ಳಲು ಬೃಹತ್ ಸಮರ ಸಾಗಿದೆ.

ಅಮೆರಿಕದಲ್ಲಿ ಇಡೀ ತಾಲೂಕು, ಜಿಲ್ಲೆಗಳಷ್ಟು ಪ್ರದೇಶದ ಕೃಷಿ ಭೂಮಿ ಎರಡು- ಮೂರು ಕಂಪನಿಗಳ ಹಿಡಿತದಲ್ಲಿರುತ್ತದೆ. ಹಲವು ಹತ್ತು ಕಿಮೀ ಸಾಗಿದರೂ ಒಂದೇ ಕಂಪನಿಯ ಭೂಮಿ. ಅವುಗಳ ನಡುವೆ ಇರುಕಿನಲ್ಲಿ ಮುನ್ನೂರು, ಐನೂರು ಎಕರೆಯ ಒಂದು ಫ್ಯಾಮಿಲಿ ಫಾರ್ಮ್, ಕುಟುಂಬ ಕೃಷಿ. ಇವರೇ ಅಲ್ಲಿಯ ರೈತರು. ಇವರ ಸಂಖ್ಯೆ ಅಮೆರಿಕದ ಜನಸಂಖ್ಯೆಯ ಕೇವಲ 1%. ಭಾರತದಲ್ಲಿ ಇತ್ತೀಚಿನ ಜನಗಣತಿಗಳು ಸೂಚಿಸುವಂತೆ ರೈತಾಪಿ ಜನರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಇನ್ನೂ ಕೃಷಿ ಅವಲಂಬಿತರ ಸಂಖ್ಯೆ ಶೇ.60ಕ್ಕಿಂತ ಹೆಚ್ಚು.

ಅಮೆರಿಕದ ಕೃಷಿ ಪ್ರದೇಶಗಳಲ್ಲಿ ಜನರೇ ಇಲ್ಲದ ಪರಿಸ್ಥಿತಿಯಲ್ಲಿ, ಈ ಅಪರೂಪದ ರೈತ ಕುಟುಂಬಗಳ ಪಾಡು ಹೇಳತೀರದು. ಅಂಗಡಿಯಲ್ಲೇನಾದರೂ ಕೊಳ್ಳಬೇಕೆಂದರೆ ಹತ್ತಾರು ಕಿಮೀ ಹೋಗಬೇಕು. ತುರ್ತಾಗಿ ವೈದ್ಯರನ್ನು ಕಾಣಬೇಕೆಂದರೆ ನಲವತ್ತು ಐವತ್ತು ಕಿಮೀ ಹುಡುಕುತ್ತಾ ಹೋಗಬೇಕು. ಏಕೆಂದರೆ ವಾರದ ಹಿಂದೆ ಅಲ್ಲಿದ್ದವರು ಗಿರಾಕಿಗಳಿಲ್ಲದೆ ಕ್ಲಿನಿಕ್ ಮುಚ್ಚಿ ನಗರಗಳಿಗೆ ಹೋಗಿಬಿಟ್ಟಿರುತ್ತಾರೆ. ಈ ರೈತ ಕುಟುಂಬಗಳಲ್ಲಿ ಮಾತುಕತೆ ಎಂದರೆ ಈ ವಾರದಲ್ಲಿ ನಮ್ಮ ಹೆದ್ದಾರಿಯಲ್ಲಿನ ಐದು ಕುಟುಂಬಗಳು ಭೂಮಿ ಮಾರಿ ಹೋದರಂತೆ, ಈ ಡಾಕ್ಟರ್ ಕ್ಲಿನಿಕ್ ಮುಚ್ಚಿದರಂತೆ, ಈ ಅಂಗಡಿ ಇಲ್ಲವಂತೆ ಇತ್ಯಾದಿ.

ವಿಶ್ವದಾದ್ಯಂತ ಕಾರ್ಪೊರೆಟ್ ಕೃಷಿಯ ಆಕ್ರಮಣಕ್ಕೆ ಮೊದಲಿಗನಾದದ್ದು ಅಮೆರಿಕವೇ. ಇಂದು ಬೃಹತ್ ಕೃಷಿ ಕಾರ್ಪೊರೆಟ್‌ಗಳು ಬೆಳೆದು ವಿಶ್ವಾದ್ಯಂತ ರೈತರನ್ನು ಕೃಷಿ ಭೂಮಿಯಿಂದ ಹೊರದೂಡುವ ಮತ್ತು ಕೃಷಿ ಭೂಮಿಯ ಆಕ್ರಮಣಕ್ಕೆ ಕುಪ್ರಸಿದ್ಧವಾಗಿರುವುದು ಅಮೆರಿಕದ ಕಂಪನಿಗಳೇ. ನಂತರ ಅವರ ಭೂದಾಹ ಯುರೋಪಿಗೆ, ಅಮೆರಿಕದ ಹಿತ್ತಲೆನಿಸಿಕೊಂಡ, ಬನಾನಾ ರಿಪಬ್ಲಿಕ್‌ಗಳೆಂದು (ಬಾಳೆಹಣ್ಣು ಗಣರಾಜ್ಯ) ಹೆಸರು ಪಡೆದ ಲ್ಯಾಟಿನ್ ಅಮೆರಿಕದ ದೇಶಗಳಿಗೆ ವ್ಯಾಪಿಸಿತು. ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ಅಮೆರಿಕದ ಕೈಗೊಂಬೆ ಸರ್ಕಾರಗಳ ಮೆರೆದಾಟ ಇತ್ತು. 25-30 ವರ್ಷಗಳ ಕಾಲ ಆ ದೇಶಗಳ ಜನ ಅಮೆರಿಕ ಬೆಂಬಲಿತ ಸರ್ವಾಧಿಕಾರಿಗಳ ಕೈಯಲ್ಲಿ ನರಳಿದ್ದಕ್ಕೆ ಕೃಷಿ ಕಾರ್ಪೊರೆಟ್‌ಗಳೂ ಕಾರಣ. ಅಲ್ಲಿ ಬಾಳೆಹಣ್ಣು, ಸ್ಟ್ರಾಬೆರಿ ಮೊದಲಾದ ಹಣ್ಣು ಹಂಪಲುಗಳು, ತರಕಾರಿಗಳು, ಕಬ್ಬು, ಕಾಫಿ ಬೆಳೆಗಳು, ದನ, ಹಂದಿ ಮಾಂಸದ ಉತ್ಪಾದನೆ, ಅವುಗಳ ಮೇವುಗಳಾಗಿ ಮುಸುಕಿನ ಜೋಳ, ಸೋಯಾ ಬೀನ್ ಉತ್ಪಾದನೆಗೆ ಮಿಲಿಯಾಂತರ ಎಕರೆ ಭೂಮಿಯನ್ನು ವಶಪಡಿಸಿಕೊಂಡವು. ಅಷ್ಟೇ ಅಲ್ಲ, ಆಯಾ ದೇಶಗಳಲ್ಲಿ ಈ ಕೃಷಿ ಕಾರ್ಪೊರೆಟ್‌ಗಳಿಗೆ ಸಹಕಾರಿಯಾದ ದೇಶಿ ಕೃಷಿ ಕಾರ್ಪೊರೆಟ್‌ಗಳು, ಲ್ಯಾಟಿಫಂಡಿಯಾಗಳೆಂಬ ಹತ್ತಾರು ಸಾವಿರ ಎಕರೆ ಕೃಷಿ ಭೂಮಿಯ ಬೃಹತ್ ಭೂಮಾಲಿಕರು ಬೆಳೆದರು. ಈಗ ಆಫ್ರಿಕಾದ ಫಲವತ್ತಾದ ಭೂಮಿ, ಏಷ್ಯಾದ ಕೆಲವು ದೇಶಗಳು, ಪೂರ್ವ ಯುರೋಪಿನ ಕೃಷಿ, ಇನ್ನೂ ಗಣನೀಯವಾಗಿ ರೈತರ ವಶದಲ್ಲಿರುವ ದೇಶಗಳಾದ ಉಕ್ರೇನ್, ರುಮಾನಿಯಾ, ಬಲ್ಗೇರಿಯ ಮೊದಲಾದ ದೇಶಗಳ ಭೂಮಿಯ ಮೇಲೆ ಕಣ್ಣು ಬಿದ್ದಿದೆ. ಭಾರತದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮೊದಲು ಇಲ್ಲಿಯ ಕಾರ್ಪೊರೆಟ್‌ಗಳನ್ನು ಉತ್ತೇಜಿಸುತ್ತಿದ್ದಾರೆ. ಅವರ ಕಂಪನಿಗಳಲ್ಲಿ ಹತ್ತಾರು ಸಾವಿರ ಕೋಟಿ ರೂ ಹಣ ಹೂಡುತ್ತಿದ್ದಾರೆ.

ಎರಡನೇ ಮಹಾಯುದ್ಧ ಮತ್ತು ಕೃಷಿ ಕಾರ್ಪೊರೆಟೀಕರಣ

ಇಪ್ಪತ್ತನೆಯ ಶತಮಾನದ ಆರಂಭದಿಂದ ಯುರೋಪು, ಅಮೆರಿಕಗಳಲ್ಲಿ ಬೃಹತ್ ಕೈಗಾರಿಕಾ ಕಾರ್ಪೊರೆಟ್‌ಗಳು ಬೆಳೆದವು. ಈ ಕಾರ್ಪೊರೆಟ್‌ಗಳ ಲಾಭದಾಹ ಮೊದಲನೆಯ ಮಹಾ ವಿಶ್ವಯುದ್ಧಕ್ಕೆ ಕಾರಣವಾಯಿತು. ಈ ಮಧ್ಯದ ಅವಧಿಯಲ್ಲಿ, ವಿಶ್ವ ಆರ್ಥಿಕತೆಯ ಒಂದು ಮಹಾ ಕುಸಿತಕ್ಕೆ ಮತ್ತು ಫ್ಯಾಸಿಸ್ಟ್ ದಬ್ಬಾಳಿಕೆಗಳಿಗೆ ಕೂಡಾ ಈ ಲಾಭದಾಹ ಕಾರಣ. ಜರ್ಮನಿ, ಇಟಲಿಗಳಲ್ಲಿ ಈ ಫ್ಯಾಸಿಸ್ಟ್ ಕ್ರೌರ್ಯ ತಾರಕಕ್ಕೇರಿತು. ಇದೇ ಎರಡನೇ ಮಹಾ ವಿಶ್ವಯುದ್ಧಕ್ಕೆ ಕಾರಣವಾದದ್ದು, ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಕೃಷಿಗೂ, ಯುದ್ಧಕ್ಕೂ, ಫ್ಯಾಸಿಸಂಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದರೆ ಸ್ವಲ್ಪ ತಾಳ್ಮೆ ವಹಿಸಿ.

ಈ ಎರಡೂ ಯುದ್ಧಗಳಲ್ಲಿ ನೇರವಾಗಿ ಹಣಾಹಣಿ ಮಾಡಿದ ದೇಶಗಳು ಸುಸ್ತಾಗಿ ಮಲಗಿದರೆ ಅಂಚಿನಲ್ಲಿದ್ದು ಯುದ್ಧ ವಿನಾಶವನ್ನು ತಪ್ಪಿಸಿಕೊಂಡ ಅಮೆರಿಕದ ಬೃಹತ್ ಕಾರ್ಪೊರೆಟ್‌ಗಳು ಯುದ್ಧದ ಎರಡೂ ಕಡೆಗೆ ತಮ್ಮ ಉತ್ಪಾದನೆಯನ್ನು ಸರಬರಾಜು ಮಾಡಿ ಎಂದೂ ಕಾಣದಷ್ಟು ಲಾಭ ಹೊಡೆದುಕೊಂಡವು. ಮತ್ತಷ್ಟು ಬೃಹತ್ತಾಗಿ ಬೆಳೆದವು.

ಎರಡನೇ ವಿಶ್ವಯುದ್ಧದ ಮುಗಿತಾಯ, ಈ ಕಾರ್ಪೊರೆಟ್‌ಗಳಿಗೆ ಮುಂದೇನು ಎಂಬ ಚಿಂತೆಯನ್ನು ತಂದಿತು. ಒಂದು ಕಡೆ ಹೇರಳ ದುರ್ಲಾಭದಿಂದ ಪೇರಿಸಿಕೊಂಡ ಬಂಡವಾಳಕ್ಕೆ ಕೆಲಸವಿಲ್ಲ. ಮತ್ತೊಂದು ಕಡೆ ಅತ್ಯಾಧುನಿಕ ಮಿಲಿಟರಿ ಟ್ಯಾಂಕ್, ಆರ್ಟಿಲರಿಗಳು, ರಸಾಯನಿಕಗಳನ್ನು ತಯಾರಿಸುತ್ತಿದ್ದ ದೊಡ್ಡ ಕಾರ್ಖಾನೆಗಳಿಗೂ ಕೆಲಸವಿಲ್ಲ.

ಆಗ ಈ ಕಾರ್ಖಾನೆಗಳಲ್ಲಿ ಗಣನೀಯ ಭಾಗವನ್ನು, ಬೃಹತ್ ಕೃಷಿ ಯಂತ್ರೋಪಕರಣಗಳು- ಹಲವು ನೂರು ಎಚ್.ಪಿಯ ಟ್ರ್ಯಾಕ್ಟರ್‌ಗಳು, ಬೃಹತ್ ಹಾರ್ವೆಸ್ಟರ್‌ಗಳೆಂಬ ಒಕ್ಕಣೆ ಯಂತ್ರಗಳ ತಯಾರಿಕೆಗೆ ತೊಡಗಿಸಿದರು. ರಸಾಯನಿಕ ತಯಾರಿಕಾ ಕಾರ್ಖಾನೆಗಳ ಒಂದು ಭಾಗವನ್ನು ರಸಗೊಬ್ಬರ, ಕೀಟ-ರೋಗ ನಾಶಕ ಔಷಧಿಗಳನ್ನು ತಯಾರಿಸುವುದರಲ್ಲಿ ತೊಡಗಿಸಲಾಯಿತು. ಹೀಗೆ ಮಿಲಿಟರಿ ಕೈಗಾರಿಕಾ ಕಾಂಪ್ಲೆಕ್ಸ್‌ನ ಒಂದು ಭಾಗ ಕೃಷಿ ಕಾರ್ಪೊರೆಟ್‌ಗಳಾಗಿ ಪರಿವರ್ತನೆಯಾಯಿತು.

ಇನ್ನು ಈ ಬೃಹತ್ ಯಂತ್ರಗಳ ಹೊರೆಯನ್ನು, ಆಗ ಅಮೆರಿಕದಲ್ಲಿದ್ದ ರೈತರ ಕುಟುಂಬ ಕೃಷಿ (ಅಂದು ವಿಶ್ವದ ಯಾವುದೇ ದೇಶದ ರೈತರಿಗಿಂತ ದೊಡ್ಡ ಹಿಡುವಳಿಗಳು) ಕೂಡಾ ಭರಿಸಲು ಸಾಧ್ಯವಿರಲಿಲ್ಲ.

ಆಗ ಈ ಯಂತ್ರಗಳ ಗಾತ್ರಕ್ಕೆ ತಕ್ಕಂತೆ ವಿಸ್ತಾರವಾದ ಕೃಷಿ ಕ್ಷೇತ್ರಗಳನ್ನು ಕೊಳ್ಳಲು ಬೃಹತ್ ಬಂಡವಾಳವೂ ಇತ್ತಲ್ಲ. ಅಮೆರಿಕದ ಸರ್ಕಾರ ತನ್ನ ಕಾರ್ಪೊರೆಟ್ ಪರ ಕೃಷಿ ನೀತಿಗಳಿಂದ ಕೃಷಿ ಕಾರ್ಪೊರೆಟೀಕರಣಕ್ಕೆ ಸೂಲಗಿತ್ತಿಯಾಯಿತು. ಅಂದಿನ ಅಮೆರಿಕದ ಕುಟುಂಬ ಕೃಷಿಗೆ ನೀಡುತ್ತಿದ್ದ ಸೌಲಭ್ಯ, ಬೆಂಬಲಗಳನ್ನು ಒಂದೊಂದಾಗಿ ತೆಗೆದುಹಾಕುತ್ತಾ ಬಂತು.

ಮೊದಲು ಬಲಿಯಾಗಿದ್ದು ಬೆಂಬಲ ಬೆಲೆ, ಕೃಷಿ ಸಹಾಯಧನಗಳು. ಜೊತೆಗೆ ಆಮದು ಸುಂಕಗಳನ್ನು ತಗ್ಗಿಸಿ ವಿಶ್ವದ ಬೇರೆಬೇರೆ ದೇಶಗಳಿಂದ ಕೃಷಿ ಫಸಲುಗಳ ಆಮದು ಪ್ರಾರಂಭವಾಯಿತು.

ಈ ಎಲ್ಲಾ ನೀತಿಗಳ ವಿನಾಶಕ ಪ್ಯಾಕೇಜ್ ನೋಡಿದ ಕೂಡಲೇ ನಿಮಗೆ ಭಾರತದಲ್ಲಿ ಮೂರು ದಶಕಗಳಿಂದ ಜಾರಿಗೆ ತರಲಾಗಿರುವ ಕೃಷಿ ನೀತಿಗಳ ಪ್ಯಾಕೇಜ್ ನೆನಪಿಗೆ ಬಾರದಿರದು.

ಅಗ್ಗದ ಕೃಷಿ ಆಮದುಗಳಿಂದ, ಬೆಂಬಲ ಬೆಲೆಯ ರಕ್ಷಣೆ ಇಲ್ಲವಾದ ಅಮೆರಿಕದ ರೈತ ಕುಟುಂಬಗಳನ್ನು ದಿವಾಳಿ ಎಬ್ಬಿಸಿ ತಮ್ಮ ಹಿಡುವಳಿಗಳನ್ನು ಮಾರಿ ಅಥವಾ ಒತ್ತೆಯಿಟ್ಟು ನಗರ ಸೇರುವಂತೆ ಮಾಡಲಾಯಿತು. ಈ ಭೂಮಿಗಳನ್ನು ಕೊಂಡ ಕಾರ್ಪೊರೆಟ್‌ಗಳು ನೇರ ಕೃಷಿಗಿಳಿದವು.

ನಂತರ ಅಮೆರಿಕದ ಸರ್ಕಾರ ರೈತರ ಪಾಲಿಗೆ ಮತ್ತಷ್ಟು ಕ್ರೂರವಾಯಿತು. ಅಮೆರಿಕದ ಕೃಷಿ ಮಂತ್ರಿ ಬಹಿರಂಗವಾಗಿಯೇ ಹೀಗೆ ಹೇಳಿದ: get big or get out (ದೊಡ್ಡದಾಗಿ ಬೆಳೆಯಿರಿ ಇಲ್ಲ ಹೊರನಡೆಯಿರಿ) ಎಂದು. ಆ ವೇಳೆಗೆ ಅಮೆರಿಕದ ಕೃಷಿ ಕಾರ್ಪೊರೆಟ್‌ಗಳು ಮತ್ತಷ್ಟು ದೊಡ್ಡದಾಗಿ ಬೆಳೆದಿದ್ದವು. ಮತ್ತಷ್ಟು ಬಂಡವಾಳ ಪೇರಿಸಿಕೊಂಡಿದ್ದವು. ಇನ್ನೂ ಉಳಿದಿದ್ದ ರೈತರ ಮೇಲೆ ಮತ್ತಷ್ಟು ಆಕ್ರಮಣಶೀಲವಾಗಿ ದಾಳಿ ಮಾಡಿದವು. ಈಗ ನಮ್ಮ ದೇಶದಲ್ಲಿ ಇಂತಹುದೇ ದಾಳಿ ವೇಗವಾಗಿ ನಡೆಯಲು ಮೋದಿ ಸರ್ಕಾರ ಕೈ ಜೋಡಿಸಿದೆಯಲ್ಲಾ ಹಾಗೆ. ವ್ಯತ್ಯಾಸ ಇಷ್ಟೇ – ಅಮೆರಿಕದಲ್ಲಿ ಇದೆಲ್ಲ ನಡೆದದ್ದು 1950-70ರ ನಡುವೆ.

ಈ ನೀತಿಗಳನ್ನು, ಸ್ವಲ್ಪ ಕಾಲದ ನಂತರ ಯುರೋಪಿನ ಸರ್ಕಾರಗಳು ಅನುಸರಿಸಿದವು. ಅಲ್ಲಿಯ ಬೃಹತ್ ಕಾರ್ಪೊರೆಟ್‌ಗಳು ಕೂಡಾ ತಮ್ಮಲ್ಲಿ ಶೇಖರವಾಗಿದ್ದ ಬಂಡವಾಳಕ್ಕೆ ಹೊಸ ದುರ್ಲಾಭದ ದಾರಿಯನ್ನು ಕಂಡುಕೊಂಡವು.

ಲೇಖನದ ಆರಂಭದಲ್ಲಿ ಹೇಳಿದಂತೆ ಇಂದು ಮೂರನೇ ಜಗತ್ತಿನ ಎಲ್ಲ ಮಾಜಿ ವಸಾಹತುಗಳನ್ನು ಹಾಲಿ ವಸಾಹತುಗಳನ್ನಾಗಿ ಮತ್ತೆ ಆಕ್ರಮಿಸಿಕೊಳ್ಳಲು ಹೊಸ ಕೃಷಿ ಕಾರ್ಪೊರೆಟ್ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇಂದು ಅಮೆರಿಕ-ಯುರೋಪ್ ನಿಯಂತ್ರಣದ ವಿಶ್ವಬ್ಯಾಂಕ್, ಐಎಂಎಫ್ ಮತ್ತು ವಿಶ್ವ ವಾಣಿಜ್ಯ ಸಂಸ್ಥೆಗಳೆಂಬ ತ್ರಿಶೂಲಗಳ ಮೂಲಕ ಭಾರತವೂ ಸೇರಿದಂತೆ ಎಲ್ಲ ದೇಶಗಳ ಮೇಲೆ ಹೇರಲಾಗುತ್ತಿರುವ ಜಾಗತೀಕರಣ, ಖಾಸಗೀಕರಣ ನೀತಿ ಇದೇ ಪ್ಯಾಕೇಜ್‌ನ ವಿಷಫಲ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟಕ್ಕೆ ಐತಿಹಾಸಿಕ ಗೆಲುವು ಸವೆಸಿದ ಹಾದಿಯ ಕ್ರೊನಾಲಜಿ ಹೀಗಿತ್ತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. Wonderful analysis how the corporate America is playing it’s dirty game to further it’s busines interest.How the agriculture crisis lead to 2 world wars.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...