Homeಮುಖಪುಟಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

‘ಸೇವಿಯರ್‌’ನಂತೆ ಬಿಂಬಿಸಲಾಗುತ್ತಿದ್ದ ‘ಪೊಲೀಸ್ ವ್ಯವಸ್ಥೆ’ಯನ್ನು ಕಟುವಾಗಿ ವಿಮರ್ಶಿಸುವ ಸಿನಿಮಾಗಳು ಇಂದು ತಮಿಳು ಹಾಗೂ ಮಲಯಾಳಂನಲ್ಲಿ ಮೂಡಿಬರುತ್ತಿವೆ...

- Advertisement -
- Advertisement -

“ಪೊಲೀಸ್ ವ್ಯವಸ್ಥೆಯನ್ನು ವೈಭವೀಕರಣ ಮಾಡುವ ಐದು ಸಿನಿಮಾಗಳನ್ನು ಮಾಡಿ ತಪ್ಪು ಮಾಡಿದೆ”- ಹೀಗೆ 2020ನೇ ಇಸವಿ ಜೂನ್‌ 28ರಂದು ಬೇಸರ ವ್ಯಕ್ತಪಡಿಸುತ್ತಾರೆ ಖ್ಯಾತ ನಿರ್ದೇಶಕ ಹರಿ ಗೋಪಾಲಕೃಷ್ಣನ್‌.

ವಿಕ್ರಮ್‌ ಅಭಿನಯದ ‘ಸಾಮಿ’, ‘ಸಾಮಿ2′, ಸೂರಿಯಾ ಅಭಿನಯದ ‘ಸಿಂಗಮ್‌-1′, `ಸಿಂಗಮ್‌-2’, `ಸಿಂಗಮ್‌-3′ ಸಿನಿಮಾಗಳನ್ನು ನಿರ್ದೇಶಿಸಿದವರು ಹರಿ. ಪೊಲೀಸ್‌ ನಡೆಸುವ ಹಿಂಸೆ ಹಾಗೂ ಎನ್‌ಕೌಂಟರ್‌ಗಳನ್ನು ಸಕಾರಾತ್ಮಕವಾಗಿ ಚಿತ್ರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಿಂಗಮ್‌ ಸಿನಿಮಾವಂತೂ ಕನ್ನಡ, ಹಿಂದಿ, ಬೆಂಗಾಲಿ, ಪಂಜಾಬಿಗೂ ರಿಮೇಕ್‌ ಆಯಿತು. ಆದರೆ ಕೋವಿಡ್‌ ಸಂದರ್ಭದಲ್ಲಿ ಪೊಲೀಸರು ತೋರಿದ ಹಿಂಸೆಯು ಹರಿ ಗೋಪಾಲಕೃಷ್ಣನ್‌ ಅವರನ್ನು ಘಾಸಿಗೊಳಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನಂಕುಳಂನ ಪೊಲೀಸ್ ಲಾಕಪ್‌ನಲ್ಲಿ ಜಯರಾಜ್(50) ಹಾಗೂ ಅವರ ಮಗ ಬೆನಿಕ್ಸ್(31) ಸಾವಿಗೀಡಾಗುತ್ತಾರೆ. 2020ರ ಜೂನ್ 19 ಶುಕ್ರವಾರ ರಾತ್ರಿ ಜಯರಾಜ್ ಹಾಗೂ ಬೆನಿಕ್ಸ್ ಅವರು ತಮ್ಮ ಮೊಬೈಲ್ ಅಂಗಡಿಯನ್ನು ಸಮಯ ಮೀರಿ ತೆರೆದಿದ್ದಕ್ಕೆ ಸಾಥನಂಕುಳಂ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ವಾಗ್ವಾದ ಉಂಟಾಯಿತು. ಇದನ್ನೇ ಕಾರಣವಾಗಿಟ್ಟುಕೊಂಡ ಪೊಲೀಸರು ಜಯರಾಜ್ ಅವರನ್ನು ಠಾಣೆ ಕರೆದುಕೊಂಡು ಹೋಗುತ್ತಾರೆ. ತನ್ನ ತಂದೆಯನ್ನು ಬಂಧಿಸಿದ್ದನ್ನು ಕೇಳಲು ಹೋದ ಬೆನಿಕ್ಸ್ ಅವರನ್ನೂ ವಿಚಾರಣೆಗಾಗಿ ಬಂದಿಸುತ್ತಾರೆ. ಮೂರು ದಿನಗಳ ನಂತರ ಪೊಲೀಸ್ ಠಾಣೆಯಿಂದ 100 ಕಿ.ಮೀ. ದೂರದ ನಗರವಾದ ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಕುಟುಂಬಕ್ಕೆ ತಿಳಿಸುತ್ತಾರೆ. ಇಡೀ ಪ್ರಕರಣದಲ್ಲಿ ಪೊಲೀಸರ ಕೈವಾಡ ಕಂಡು ಬಂದಾಗ ನೊಂದುಕೊಂಡ ಹರಿ, “ಇಂತಹ ಘಟನೆ ತಮಿಳುನಾಡಿನಲ್ಲಿ ಬೇರೆ ಯಾರಿಗೂ ಆಗಬಾರದು. ಅದಕ್ಕಿರುವ ಏಕೈಕ ಮಾರ್ಗವೆಂದರೆ ಅದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು. ಪೊಲೀಸ್ ಇಲಾಖೆಯಲ್ಲಿ ಕೆಲವರು ಈ ರೀತಿ ವರ್ತಿಸುವುದು ಎಲ್ಲ ಪೊಲೀಸರಿಗೂ ಅವಮಾನ ತಂದಿದೆ. ಪೊಲೀಸರನ್ನು ವೈಭವೀಕರಿಸುವ ಐದು ಚಿತ್ರಗಳನ್ನು ನಿರ್ಮಿಸಿದ್ದಕ್ಕಾಗಿ ನಾನು ಇಂದು ತೀವ್ರ ದುಃಖಿತನಾಗಿದ್ದೇನೆ” ಎಂದು ಪತ್ರ ಬರೆಯುತ್ತಾರೆ.

‘ಸಾಮಿ’, ‘ಸಿಂಗಂ’ ಥರದ ಸಿನಿಮಾಗಳು ಎಲ್ಲ ಚಿತ್ರರಂಗದಲ್ಲೂ ಬಂದಿವೆ. ಆದರೆ ಕಾಲದೊಂದಿಗೆ ಚಿತ್ರರಂಗವೂ ಚಲಿಸುತ್ತಿದೆ ಎಂಬುದು ಈಗ ಆಗುತ್ತಿರುವ ಹೊಸ ಪ್ರಯೋಗಗಳಿಂದ ಸಾಬೀತಾಗುತ್ತಿದೆ. ಯಾವ ಚಿತ್ರರಂಗದಿಂದ ಪೊಲೀಸರನ್ನು ವೈಭವೀಕರಿಸುವ ‘ಸಿಂಗಂ’ ಥರದ ಸಿನಿಮಾಗಳು ಬಂದವೋ ಅದೇ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆರೆಕಂಡಿರುವ ಪೊಲೀಸ್ ಕಥೆಗಳನ್ನಾದರಿಸಿದ ಸಿನಿಮಾಗಳು ಕಟ್ಟಿಕೊಟ್ಟ ಜಗತ್ತೇ ಬೇರೆ ರೀತಿ ಇದೆ. ದಕ್ಷಿಣ ಭಾರತದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿರುವ ತಮಿಳು ಹಾಗೂ ಮಲಯಾಳಂ ಸಿನಿಮಾಗಳು ಪೊಲೀಸ್ ವ್ಯವಸ್ಥೆಯ ಹುಳುಕುಗಳನ್ನು ಬಿಚ್ಚಿಡುವಲ್ಲಿ ಮೇಲುಗೈ ಸಾಧಿಸುತ್ತಿವೆ.

ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

‘ಪೊಲೀಸ್ ಸ್ಟೇಟ್‌’ ಇರುವಲ್ಲಿ ಅಭಿವ್ಯಕ್ತಿಯ ದಮನವಾಗುತ್ತದೆ. ತನ್ನನ್ನು ರಕ್ಷಿಸಿಕೊಳ್ಳಲು ಪ್ರಭುತ್ವ ಕಟ್ಟಿಕೊಂಡ ಈ ಪೊಲೀಸ್ ವ್ಯವಸ್ಥೆಯ ನಿಜ ದರ್ಶನವನ್ನು ಮಾಡಬೇಕಾದ ತುರ್ತು ಎಂದಿಗಿಂತ ಇಂದು ಹೆಚ್ಚಿದೆ. ಈ ಕೆಲಸವನ್ನು ತಮಿಳು ಹಾಗೂ ಮಲಯಾಳಂ ಚಿತ್ರರಂಗ ಮಾಡುತ್ತಿರುವುದನ್ನು ಸಂಕ್ಷಿಪ್ತವಾಗಿ ಗುರುತಿಸುವುದು ಈ ಲೇಖನದ ಉದ್ದೇಶವಾಗಿದೆ.

ವಿಸಾರಣೈ (2015)

2015ರಲ್ಲಿ ತೆರೆಕಂಡ ವೆಟ್ರಿಮಾರನ್‌ ನಿರ್ದೇಶನದ ‘ವಿಸಾರಣೈ’ ಪೊಲೀಸ್‌ ಕ್ರೌರ್ಯವನ್ನು ಹಸಿಹಸಿಯಾಗಿ ತೋರಿಸಿತು. ಆಂಧ್ರ ಹಾಗೂ ತಮಿಳುನಾಡು ಪೊಲೀಸ್ ಇಬ್ಬರನ್ನೂ ಒಳಗೊಂಡಿರುವ ‘ವಿಸಾರಣೈ’- ಪೊಲೀಸ್ ಕ್ರೌರ್ಯಕ್ಕೆ ಗಡಿ, ಭಾಷೆಗಳ ಹಂಗಿಲ್ಲ ಎನ್ನುತ್ತದೆ. ನಾಲ್ವರು ಅಮಾಯಕರನ್ನು ನಕಲಿ ಎನ್‌ಕೌಂಟರ್‌ ಮಾಡಿ ಕೊಲ್ಲುವ ಕಥೆ ಇಲ್ಲಿದೆ.

ಎಂ.ಚಂದ್ರಕುಮಾರ್‌ ಅವರು ಬರೆದ ‘ಲಾಕಪ್‌’ ಕೃತಿಯನ್ನು ಆಧರಿಸಿ ಮೂಡಿ ಬಂದ ಸಿನಿಮಾ ಯಾರನ್ನೋ ರಕ್ಷಿಸಲು ಇನ್ಯಾರನ್ನೋ ವ್ಯವಸ್ಥೆ ಹೇಗೆ ಬಲಿಪಶು ಮಾಡುತ್ತದೆ ಎಂಬುದನ್ನು ಹೇಳುತ್ತದೆ. ಮೊದಲಾರ್ಧ ಸಿನಿಮಾ ಕೃತಿಯನ್ನು ಆಧರಿಸಿದ್ದರೆ, ಇನ್ನರ್ಧವನ್ನು ವೆಟ್ರಿಮಾರನ್‌ ವಿಭಿನ್ನವಾಗಿ ಚಿತ್ರಿಸಿದ್ದಾರೆ. ಈ ಸಿನಿಮಾ ಆಸ್ಕರ್‌ಗೂ ನಾಮಿನೇಟ್‌ ಆಗಿ ನಂತರ ಹೊರಬಿದ್ದಿದ್ದು ವಿಶೇಷ.

ವೆಟ್ರಿಮಾರನ್‌ ಮಾರ್ಗದಲ್ಲೇ ಸಾಗಿದ ತಮಿಳಿನ ಕೆಲವು ನಿರ್ದೇಶಕರು ಇಂತಹದ್ದೇ ಕಥಾ ಹಂದರವನ್ನು ಒಳಗೊಂಡ ಸಿನಿಮಾಗಳನ್ನು ಕಳೆದೆರಡು ವರ್ಷಗಳಿಂದ ತೆರೆಗೆ ತರುತ್ತಿದ್ದಾರೆ.

ಕರ್ಣ‌ನ್‌ (2021)

ಖ್ಯಾತ ನಿರ್ದೇಶಕ ರಾಮ್‌ ಅವರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ‘ಪೆರಿಯೇರುಮ್‌ ಪೆರುಮಾಳ್‌’ ಮೂಲಕ ನಿರ್ದೇಶಕರಾಗಿ ಹೊಮ್ಮಿದ ಮಾರಿ ಸೆಲ್ವರಾಜ್‌, ರೂಪಕಗಳಿಗೆ ಹೆಸರಾದವರು. ಚಿತ್ರಕಥೆಯ ಶಕ್ತಿಯನ್ನು ವಿಸ್ತರಿಸಿದವರು. ದಲಿತ ಶೂದ್ರ ಸಂಸ್ಕೃತಿಯನ್ನು ಢಾಳಾಗಿ ತೋರಿಸುವ ಸೆಲ್ವರಾಜ್‌ ನಿರ್ದೇಶನದ ‘ಕರ್ಣನ್‌’- ಪೊಲೀಸ್ ವ್ಯವಸ್ಥೆಯೊಳಗೆ ತುಂಬಿಕೊಂಡ ಜಾತಿಗ್ರಸ್ಥ ಮನಸ್ಥಿತಿಗಳಿಗೆ ಕನ್ನಡಿ ಹಿಡಿಯುತ್ತದೆ.

ಇದನ್ನೂ ಓದಿರಿ: ‘ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ’ ಎಂದು ಬಾಲಿವುಡ್‌ಗೆ ಮನವರಿಕೆ ಮಾಡುವಲ್ಲಿ‌ ನಾವು ಸೋತೆವೆ?

ದಶಕಗಳ ಹಿಂದೆ ತಮಿಳುನಾಡಿನ ‘ಪೊಡಿಯಾಕುಲಮ್‌’ ಗ್ರಾಮದಲ್ಲಿ ನಡೆದ ನಿಜ ಘಟನೆಯಾಧರಿಸಿದ ಈ ಸಿನಿಮಾ ದಲಿತ ಪ್ರತಿರೋಧವನ್ನು ದಾಖಲಿಸಿತು. ಸ್ವಾಭಿಮಾನ ಮೆರೆದ ದಲಿತರಿಗೆ ಚಿತ್ರ ಹಿಂಸೆ ನೀಡಿದ ಪೊಲೀಸರ ವಿರುದ್ಧ ತಿರುಗಿಬಿದ್ದ ದಲಿತರು ಸಾವು, ನೋವುಗಳನ್ನು ಅನುಭವಿಸುತ್ತಾರೆ. ಬಳಿಕ ಇಡೀ ಊರಿಗೆ ನುಗ್ಗುವ ಪೊಲೀಸರು ಸಿಕ್ಕಸಿಕ್ಕವರನ್ನೆಲ್ಲ ಥಳಿಸಿ ಹಿಂಸಿಸುತ್ತಾರೆ. ಊರಿನಲ್ಲಿ ಬಸ್‌ ನಿಲ್ಲಿಸುವುದಿಲ್ಲವೆಂಬ ಕಾರಣಕ್ಕೆ ಆರಂಭವಾಗುವ ಸಂಘರ್ಷವನ್ನು ತಣ್ಣಗಾಗಿಸಬೇಕಾದ ಪೊಲೀಸರೇ ಕ್ರೌರ್ಯವೆಸಗುವುದು ‘ರಕ್ಷಕ’ ಎಂಬ ಹಣೆಪಟ್ಟಿಯನ್ನು ಹೊತ್ತ ಪೊಲೀಸ್‌ ವ್ಯವಸ್ಥೆಯ ಅಣಕವಾಗಿದೆ.

ಜೈ ಭೀಮ್‌ (2021)

ಜಸ್ಟೀಸ್ ಚಂದ್ರು ಅವರು ತಾವು ವಕೀಲರಾಗಿದ್ದಾಗ ಹೋರಾಡಿದ ಪ್ರಕರಣವೊಂದರ ಕಥೆಯಾಧರಿಸಿ ಟಿ.ಜೆ.ಜ್ಞಾನವೇಲ್‌ ನಿರ್ದೇಶನದ ‘ಜೈ ಭೀಮ್‌’ ಸಿನಿಮಾ ಹಲವು ರೀತಿಯ ಚರ್ಚೆಗೆ ಕಾರಣವಾಯಿತು. ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ಜನರನ್ನೂ ತಲುಪಿತು. ‌ಅನೇಕ ಬುಡಕಟ್ಟು ಸಮುದಾಯಗಳನ್ನು ಕ್ರಿಮಿನಲ್ ಟ್ರೈಬ್ಸ್‌ ಎಂದು ಬಿಂಬಿಸಿದ ಬ್ರಿಟಿಷ್ ಕಾಲದ ಮನಸ್ಥಿತಿಗೆ ಕೊನೆಯೇ ಇಲ್ಲ. ಇರುಳಿಗ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಕಳ್ಳತನದ ಆರೋಪ ಮಾಡಿ, ತಾವೇ ಮಾಡಿದ ಕಳ್ಳತನವನ್ನು ನಿರಪರಾಧಿಯ ಮೇಲೆ ಹೊರಿಸಲು ಯತ್ನಿಸಿ ಕೊಲೆ ಮಾಡುವ ಪೊಲೀಸರೇ ಇಲ್ಲಿನ ವಿಲನ್‌ಗಳು. ‘ಸಿಂಗಂ’ ಸರಣಿಯಲ್ಲಿ ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದ ಸೂರಿಯಾ (ಈ ಸಿನಿಮಾದ ನಿರ್ಮಾಪಕರೂ ಹೌದು) ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಂಡರು. (ಆದರೂ ಸೇವಿಯರ್‌ನಂತೆ ಚಿತ್ರಿತವಾಗಿದ್ದು ವಿಮರ್ಶೆಗೆ ಒಳಪಟ್ಟಿತ್ತು.)

ರೈಟರ್‌ (2022)

‘ವಿಸಾರಣೈ’ ಸಿನಿಮಾದ ವಿಸ್ತರಣೆಯಂತೆ ಕಂಡು ಬಂದ ಸಿನಿಮಾ ‘ರೈಟರ್‌’. ಪ್ರಾಕ್ಲಿನ್ ಜಾಕಬ್‌ ತಮ್ಮ ಮೊದಲ ನಿರ್ದೇಶನದಲ್ಲೇ ವಿನೂತನವಾದ ಕಥೆಯನ್ನು ಕಟ್ಟಿಕೊಟ್ಟರು. ‘ವಿಸಾರಣೈ’ನಲ್ಲಿ ಪೊಲೀಸ್ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸಿದರೂ, ಅಲ್ಲಿನ ಶ್ರೇಣೀಕೃತ ತಾರತಮ್ಯವನ್ನು ಚಿತ್ರಿಸಿರಲಿಲ್ಲ. ಆದರೆ ರೈಟರ್‌ ಕ್ರೂರ ವ್ಯವಸ್ಥೆಯೊಳಗಿನ ಶ್ರೇಣೀಕೃತ ದೌರ್ಜನ್ಯಗಳನ್ನು ತೆರೆದಿಟ್ಟಿತು. ಜಾತಿ ರಾಜಕಾರಣ, ಮೇಲಧಿಕಾರಿಗಳ ಒತ್ತಡ, ನಕಲಿ ಎನ್‌ಕೌಂಟರ್‌ ಹೀಗೆ ಹಲವು ಸೂಕ್ಷ್ಮ ಸಂಗತಿಗಳನ್ನು ಚರ್ಚಿಸಿತು. ಪ.ರಂಜಿತ್‌ ಅವರ ‘ನೀಲಂ ಪ್ರೊಡಕ್ಷನ್‌’ನಿಂದ ಈ ಸಿನಿಮಾ ನಿರ್ಮಾಣವಾಗಿದ್ದು, ‘ರೈಟರ್‌’ ಪಾತ್ರದಲ್ಲಿ ಸಮುದ್ರಕಣಿ ಅಭಿನಯಿಸಿದ್ದಾರೆ.

ಠಾಣಾಕ್ಕಾರನ್ (2022)

ಪೊಲೀಸ್ ವ್ಯವಸ್ಥೆಯೊಳಗೆ ಹಲವು ವರ್ಷ ದುಡಿದು, ಅಲ್ಲಿನ ಕೆಲವು ಅನುಭವಗಳನ್ನು ಸಿನಿಮಾ ಮಾಡಿದರೆ ಹೇಗಿರುತ್ತದೆ? ನಟ, ನಿರ್ದೇಶಕ ‘ತಮಿಳ್‌’ ಈ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. 12 ವರ್ಷಗಳ ಕಾಲ ಪೊಲೀಸ್‌ ಆಗಿದ್ದ ‘ತಮಿಳ್‌’ ನಂತರ ಚಿತ್ರರಂಗದತ್ತ ಆಸಕ್ತಿ ತೆಳೆದವರು. ವೆಟ್ರಿಮಾರನ್‌ ನಿರ್ದೇಶನದ ‘ವಿಸಾರಣೈ’ಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. ‘ಜೈ ಭೀಮ್‌’ ಸಿನಿಮಾದಲ್ಲಿ ಕ್ರೂರ ಪೊಲೀಸ್ ಅಧಿಕಾರಿಯಾಗಿಯೂ ಅಭಿನಯಿಸಿದರು. ವೆಟ್ರಿಮಾರನ್ ನಿರ್ದೇಶನದ ಮುಂಬರುವ ಚಿತ್ರ ‘ವಿಡುತಲೈ’ನಲ್ಲಿ ಮತ್ತೆ ಖಾಕಿ ಧರಿಸಿದ್ದಾರೆ. ಹೀಗೆ ಪೊಲೀಸ್ ವ್ಯವಸ್ಥೆ ಮತ್ತು ತಮಿಳ್‌- ನಡುವೆ ಅವಿನಾಸಂಬಂಧವಿದೆ. ಇಂಥವರು ನಿರ್ದೇಶಿದ ಮೊದಲ ಸಿನಿಮಾ ‘ಠಾಣಾಕ್ಕಾರನ್‌’ ಪೊಲೀಸ್ ವ್ಯವಸ್ಥೆಯೊಳಗಿನ ಬ್ರಿಟಿಷ್‌ ಕಾಲದ ನಿಯಮಗಳ ಕುರಿತು ಮಾತನಾಡುತ್ತದೆ.

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಸ್ವಾತಂತ್ರ್ಯ ಹೋರಾಟದತ್ತ ಭಾರತೀಯ ಯುವಕರು ಆಲೋಚಿಸದಂತೆ ಬ್ರಿಟಿಷರು ಹಲವಾರು ಬದಲಾವಣೆಗಳನ್ನು ಪೊಲೀಸ್‌ ವ್ಯವಸ್ಥೆಯಲ್ಲಿ ತರುತ್ತಾರೆ. ಆಜ್ಞೆಗಳು ಹಾಗೂ ಆದೇಶಗಳನ್ನು ಭಾರತೀಯ ಯುವಕರು ಪಾಲಿಸಲೆಂದು ಪರೇಡ್ ಎಂಬ ಹೆಸರಿನ ಸೈನಿಕರ ಡ್ರಿಲ್‌ ಪರಿಚಯಿಸುತ್ತಾರೆ. ತರಬೇತಿಯನ್ನು ಉಲ್ಲಂಘಿಸುವವರಿಗೆ ‘ಇ.ಡಿ.’ (ಪನೀಶ್‌ಮೆಂಟ್‌ ಡ್ರಿಲ್‌) ಥರದ ಶಿಕ್ಷೆಗಳನ್ನು ನೀಡಿ ಕ್ರೂರವಾಗಿ ಹಲ್ಲೆ ಮಾಡುತ್ತಾರೆ. ಸಹಿಸಲಾರದವರು ತರಬೇತಿ ಶಾಲೆ ಬಿಟ್ಟು ಓಡಿ ಹೋಗಬೇಕಾಗುತ್ತದೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೂ ಬ್ರಿಟಿಷ್‌ ಸರ್ಕಾರವು ತರಬೇತಿ ಅಧಿವೇಶಗಳನ್ನು ಮುಂದುವರಿಸುತ್ತದೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಪೊಲೀಸ್ ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು. ಆದರೆ ಇಂದಿಗೂ ಕೆಲವು ವಿಷಯಗಳು ಹಾಗೆಯೇ ಉಳಿದಿವೆ. ಅವುಗಳಲ್ಲಿ ಬ್ರಿಟಿಷ್ ಅವಧಿಯಲ್ಲಿ ರಚಿಸಲಾದ ತರಬೇತಿಗಳು ಹಾಗೂ ಸ್ಪರ್ಧೆಗಳು ಕೂಡ ಸೇರಿವೆ. ಇಂತಹ ವಿಷಯವನ್ನು ಒಳಗೊಂಡಿರುವ ಕಥೆಯೇ ‘ಠಾಣಾಕ್ಕರನ್‌’. ತರಬೇತಿ ನಿರತ ಪೊಲೀಸರನ್ನು ಅಧಿಕಾರಿ ವರ್ಗ ‘ಇ.ಡಿ.’ ಹೆಸರಲ್ಲಿ ಶೋಷಣೆ ಮಾಡುವ ರೀತಿಯನ್ನು ಕಮರ್ಷಿಯಲ್‌ ಆಯಾಮಗಳೊಂದಿಗೆ ತೆರೆದಿಟ್ಟಿದ್ದಾರೆ ನಿರ್ದೇಶಕ ‘ತಮಿಳ್‌’.

ಮಲಯಾಳಂ ಸಿನಿಮಾದಲ್ಲಿನ ಪ್ರಯೋಗಗಳು

ತಮಿಳು ಚಿತ್ರಗಳಂತೆಯೇ ಮಲಯಾಳಂ ಸಿನಿಮಾಗಳು ಕೂಡ ಪೊಲೀಸ್ ವ್ಯವಸ್ಥೆ ಒಳಗಿನ ಸಮಸ್ಯೆಗಳನ್ನು ಬಿಚ್ಚಿಡುವ ಪ್ರಯತ್ನಗಳನ್ನು ಮಾಡುತ್ತಿದೆ.

ನಾಯಟ್ಟು(2021)

‘ಚಾರ್ಲಿ’, ‘ಎಬಿಸಿಡಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಮರ್ಟಿನ್ ಪ್ರಕಟ್‌ ಅವರು ‘ನಾಯಟ್ಟು’ ಮೂಲಕ ತಮ್ಮ ವೈವಿಧ್ಯಮಯ ಪ್ರತಿಭೆಯನ್ನು ಅನಾವರಣ ಮಾಡಿದರು. ‘ನಾಯಟ್ಟು’ ನೆಟ್‌ಪ್ಲಿಕ್ಸ್‌ನಲ್ಲಿ ತೆರೆಕಂಡಿತು. ದಲಿತ ರಾಜಕಾರಣದ ಸುತ್ತ ನಡೆಯುವ ಈ ಸಿನಿಮಾ ಕಥೆಯು ರಾಜಕಾರಣ ಮತ್ತು ಪೊಲೀಸ್‌ ವ್ಯವಸ್ಥೆಯ ನಡುವಿನ ತಿಕ್ಕಾಟವನ್ನು ಬಿಚ್ಚಿಡುತ್ತದೆ. ಉಪ ಚುನಾವಣೆಯೊಂದರ ಕ್ಷೇತ್ರದಲ್ಲಿ ಘಟಿಸುವ ಘಟನೆಗಳು ಜಾತಿ ರಾಜಕೀಯ, ಪೊಲೀಸ್‌ ಅಧಿಕಾರಿಗಳ ಸಂದಿಗ್ಥತೆ ಮೊದಲಾದವನ್ನು ಪರಿಚಯಿಸುತ್ತದೆ. ಆದರೆ ಈ ಸಿನಿಮಾದಲ್ಲಿ ದಲಿತ ರಾಜಕಾರಣವನ್ನು ಮೇಲ್ಪದರಲ್ಲಿ ಗ್ರಹಿಸುತ್ತದೆ ಎಂಬ ಟೀಕೆಗಳು ಬಂದವು. ಅದು ನಿಜವೂ ಕೂಡ. ಅದರಾಚೆಗೆ ನೋಡಿದರೆ ರಾಜಕಾರಣಿಗಳು ಹೇಗೆ ಪೊಲೀಸ್‌ ವ್ಯವಸ್ಥೆಯನ್ನು ತಮ್ಮ ದಾಳಕ್ಕೆ ಬಳಸಿಕೊಳ್ಳುತ್ತಾರೆಂಬುದನ್ನು ಇಲ್ಲಿ ಚಿತ್ರೀಕರಿಸಿರುವುದನ್ನು ಕಾಣಬಹುದು.

ಜನ ಗಣ ಮನ (2022)

ವಿಶ್ವವಿದ್ಯಾನಿಲಯಗಳಿಗೆ ಮತೀಯವಾದಿಗಳ ಪ್ರವೇಶ, ಕೇಸರಿ ರಾಜಕಾರಣ, ಶಿಕ್ಷಣ ಮಾಫಿಯಾ, ಶೈಕ್ಷಣಿಕ ವ್ಯವಸ್ಥೆಯೊಳಗೆ ತುಂಬಿದ ತರತಮ, ಪ್ರಜಾತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ಪಟ್ಟ, ನ್ಯಾಯಾಧೀಶರಂತೆ ವರ್ತಿಸುವ ಮಾಧ್ಯಮಗಳು, ಬಹುಮತದ ಸನ್ನಿಯೊಳಗೆ ಕಳೆದು ಹೋದ ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಾಕ ವಿಷಯಗಳನ್ನು ಎಳೆತಂದು ನಿಜ ಸಮಸ್ಯೆಗಳನ್ನು ಮರೆಮಾಚುವ ರಾಜಕಾರಣಿಗಳು, ಅಧಿಕಾರಶಾಹಿಯ ದರ್ಪ ಹಾಗೂ ಸುಳ್ಳುಗಳು, ಪ್ರಭತ್ವದ ಸುಳ್ಳುಗಳನ್ನು ಪ್ರಶ್ನಿಸಿದ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ಶಿಕ್ಷೆ- ಹೀಗೆ ಹಲವಾರು ಸಂಗತಿಗಳನ್ನು ಒಂದು ಕೋನದೊಳಗೆ ತರುವ ಪ್ರಯತ್ನ ಮಾಡಿದ ಸಿನಿಮಾ ‘ಜನ ಗಣ ಮನ’.

ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾವನ್ನು ಡಿಜೊ ಜೋಸ್‌ ಆಂಟೊನಿ ನಿರ್ದೇಶಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್‌, ಸೂರಜ್‌ ವೆಂಜರಮೂಡು ಮುಖ್ಯಭೂಮಿಯಲ್ಲಿರುವ ಈ ಸಿನಿಮಾ ಮುಖ್ಯವಾಗಿ ಮಾತನಾಡುವುದು ಸಮೂಹ ಸನ್ನಿಯ ಕುರಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕನ್ನಡಿಗರೇ ಆದರೆ ವಿಶ್ವನಾಥ್‌ ಸಜ್ಜನರ್‌ ಸೈಬರಾಬಾದ್‌ ಪೊಲೀಸ್ ಆಯುಕ್ತರಾಗಿದ್ದರು. ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಗೈದಿದ್ದಾರೆಂದು 2019ರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಘಟನೆಯ ಪುನರ್‌ ಸೃಷ್ಟಿಯ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೆಂದು ನಾಲ್ವರನ್ನೂ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಹೇಳಲಾಯಿತು. “ಸಜ್ಜನರಿಂದ ದುರ್ಜನರ ಸಂಹಾರ”- ಎಂದೆಲ್ಲ ಮಾಧ್ಯಮಗಳು ವರ್ಣಿಸಿದವು. ಜನ ಸಂಭ್ರಮಾಚರಣೆ ಮಾಡಿದರು. ಆದರೆ ನ್ಯಾಯಾಂಗದ ಮುಂದೆ ಇದೆಲ್ಲವೂ ಲೆಕ್ಕಕ್ಕೇ ಬರುವುದಿಲ್ಲ. ಸತ್ಯ ಮಾತ್ರ ಮುಖ್ಯ. ಸಮೂಹ ಸನ್ನಿಯೊಳಗೆ ಯಾವುದೋ ಒಂದು ಸತ್ಯವನ್ನು ಮುಚ್ಚಿ ಹಾಕಲು ಯತ್ನಿಸಬಹುದು. ಇದನ್ನೇ ‘ಜನಗಣಮನ’ ಹೇಳಲು ಹೊರಟಿತು. ಕಾಲ್ಪನಿಕ ಎಂದರೂ ಈ ಸಿನಿಮಾ ನಿಜ ಘಟನೆಯನ್ನು ಆಧಾರಿಸಿ ಮೂಡಿಬಂದಿದೆ. ರಾಜಕಾರಣ ಹಾಗೂ ಪೊಲೀಸ್‌ ವ್ಯವಸ್ಥೆ ಸೇರಿ ನಡೆಸುವ ಪಿತೂರಿಗಳ ಬಗ್ಗೆ ಮಾತನಾಡುತ್ತದೆ. ಈ ಸಿನಿಮಾ ಇನ್ನೇನು ಓಟಿಟಿಗೆ ಬರಲು ಸಿದ್ಧವಾಗಿರುವ ಹೊತ್ತಿನಲ್ಲಿ ಹೈದ್ರಾಬಾದ್ ಎನ್‌ಕೌಂಟರ್‌ ಪ್ರಕರಣಕ್ಕೆ ಕಾಕತಾಳೀಯವೆಂಬಂತೆ ತಿರುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು, “ಈ ಎನ್‌ಕೌಂಟರ್‌ ಉದ್ದೇಶಪೂರ್ವಕವಾಗಿ ನಡೆದಿದೆ” ಎಂದು ಪೊಲೀಸರತ್ತ ಬೊಟ್ಟು ಮಾಡಿದೆ. ಹತ್ತು ಜನರ ಮೇಲೆ ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹೀಗೆ ಪೊಲೀಸ್‌ ವ್ಯವಸ್ಥೆಯನ್ನು ಜನಪ್ರಿಯ ಮಾದರಿಗಳಾಚೆಗೆ ನೋಡುವ ಪ್ರಯತ್ನವನ್ನು ತಮಿಳು ಹಾಗೂ ಮಲಯಾಳಂ ಸಿನಿಮಾ ನಿರ್ದೇಶಕರು ಮಾಡುತ್ತಿದ್ದಾರೆ.

ಕುಟ್ಟವುಮ್‌ ಶಿಕ್ಷೆಯುಮ್‌ (ಕ್ರೈಮ್ ಅಂಡ್ ಪನಿಶ್‌ಮೆಂಟ್‌)

‘ಕುಟ್ಟವುಮ್‌ ಶಿಕ್ಷೆಯುಮ್‌’ ಇತ್ತೀಚೆಗೆ ತೆರೆಕಂಡ ಮಲಯಾಳಂ ಸಿನಿಮಾ. ‘ಕಮ್ಮಟ್ಟಿಪಾಡಂ’ ಎಂಬ ಅಭಿಜಾತ ಸಿನಿಮಾದ ಸೃಷ್ಟಿಕರ್ತ, ಖ್ಯಾತ ಛಾಯಾಗ್ರಹಣಕಾರ ರಾಜೀವ್ ರವಿಯವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಳ್ಳತನದ ಪ್ರಕರಣವೊಂದರ ಸುತ್ತ ನಡೆಯುವ ತನಿಖೆಯನ್ನು ಚಿತ್ರಿಸುವ ‘ಕ್ರೈಮ್‌ ಅಂಡ್‌ ಪನಿಶ್‌ಮೆಂಟ್‌’ನಲ್ಲಿ ಯಾವುದೇ ವೈಭವೀಕರಣಗಳಿಲ್ಲ. ವಾಸ್ತವ ನೆಲೆಗಟ್ಟಿನಲ್ಲಿ ಸಾಗುತ್ತಾ ಹೋಗುತ್ತದೆ. ಚಲನಶೀಲತೆ ಇಲ್ಲದ ಪೊಲೀಸ್ ವ್ಯವಸ್ಥೆ ಇಲ್ಲಿಯೂ ಅನಾವರಣವಾಗುತ್ತದೆ. ಸಿನಿಮ್ಯಾಟಿಕ್‌ ಸೌಂದರ್ಯ ಬಯಸುವವರಿಗೆ ಈ ಸಿನಿಮಾ ಬೇಸರ ತರಿಸಬಹುದು. ಬಹಳ ನಿಧಾನವೆನಿಸಬಹುದು. ಆದರೆ ಪೊಲೀಸ್ ವ್ಯವಸ್ಥೆಯ ಮತ್ತೊಂದು ಮಗ್ಗುಲನ್ನು ಚಿತ್ರಿಸಲು ಯತ್ನಿಸಿರುವುದನ್ನು ಗುರುತಿಸದೆ ಇರಲಾಗದು.

ವಾಸ್ತವ ನೀಡುವ ಪ್ರಯತ್ನ: ವಿ.ಎಲ್‌.ಬಾಲು

ಸಿನಿಮಾ ವಿಮರ್ಶಕರಾದ ವಿ.ಎಲ್‌.ಬಾಲು ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಪೊಲೀಸ್‌ ಎನ್ನುವುದೇ ಆಳುವ ವರ್ಗವನ್ನು ಕಾಪಾಡುವ ವ್ಯವಸ್ಥೆ. ಅಮಿತಾಬ್‌ ಬಚ್ಚನ್‌, ಅಂಬರೀಶ್ ಕಾಲದಿಂದಲೂ ಪೊಲೀಸ್‌ ಎಂದರೆ ರಕ್ಷಕ ಎಂಬಂತೆ ಸಿನಿಮಾಗಳಲ್ಲಿ ಬಿಂಬಿಸಲಾಯಿತು. ಪೊಲೀಸ್ ವ್ಯವಸ್ಥೆ ಎಂದಿಗೂ ಪ್ರಭುತ್ವದ ಪರವಾಗಿಯೇ ಇದ್ದರೂ ನಮ್ಮ ಸಿಸಿಮಾಗಳು ಪೊಲೀಸರನ್ನು ಹೀರೋ ಎಂಬಂತೆ ತೋರಿಸಿದವು. ಆದರೆ ಕಳೆದ ಐದಾರು ವರ್ಷಗಳಿಂದ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಪೊಲೀಸ್ ವ್ಯವಸ್ಥೆಯ ವಾಸ್ತವ ಚಿತ್ರಣವನ್ನು ಕೊಡುವ ಪ್ರಯತ್ನಗಳಾಗುತ್ತಿವೆ” ಎಂದರು.

“ಠಾಣಾಕ್ಕಾರನ್‌ ಸಿನಿಮಾವನ್ನೇ ನೋಡಿ. ಅಲ್ಲಿ ಯಾವುದೇ ವಿಲನ್ ಪಾತ್ರವಿಲ್ಲ. ಅಲ್ಲಿ ಬರುವ ಪೊಲೀಸ್ ಅಧಿಕಾರಿಗಳೆಲ್ಲ ಕೇವಲ ವ್ಯವಸ್ಥೆಯ ಭಾಗವಾಗಿ ಕಾಣುತ್ತಾರೆ. ವ್ಯವಸ್ಥೆ ಹೀಗೆಯೇ ಇರಬೇಕು ಎಂದು ನಿರ್ದೇಶಿಸಿದೆ. ವ್ಯವಸ್ಥೆಯ ಅನಾವರಣವೇ ಇಲ್ಲಿ ವಿಲನ್‌ ಹೊರತು ಯಾವುದೇ ಅಧಿಕಾರಿಯ ಪಾತ್ರವಲ್ಲ. ಇಂತಹ ಸಿನಿಮಾಗಳನ್ನು ಹೆಚ್ಚಿನ ಜನರು ವೀಕ್ಷಿಸಿದರೆ ಮತ್ತಷ್ಟು ಪ್ರಯೋಗಗಳು ಆಗುತ್ತವೆ” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...