Homeಮುಖಪುಟ'ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ' ಎಂದು ಬಾಲಿವುಡ್‌ಗೆ ಮನವರಿಕೆ...

‘ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ’ ಎಂದು ಬಾಲಿವುಡ್‌ಗೆ ಮನವರಿಕೆ ಮಾಡುವಲ್ಲಿ‌ ನಾವು ಸೋತೆವೆ?

- Advertisement -
- Advertisement -

‘ಪುಷ್ಪ’, ‘ಆರ್‌‌ಆರ್‌‌ಆರ್’, ‘ಕೆಜಿಎಫ್- 2’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಒತ್ತಡಕ್ಕೊಳಗಾಗಿದ್ದಾರೆಂಬ ಚರ್ಚೆ ನಡೆಯುತ್ತಿದೆ‌. ‘ಹಿಂದಿ ರಾಷ್ಟ್ರೀಯ ಭಾಷೆ’ ಎಂಬ ಹೇಳಿಕೆಗಳನ್ನು ನೋಡಿದರೆ ಬಾಲಿವುಡ್ ತಾರೆಗಳು ಭಯಗೊಂಡಿರುವುದು ನಿಜವೂ ಅನಿಸುತ್ತಿದೆ. ಇದೆಲ್ಲದರ ಹೊರತಾಗಿ ಯಶಸ್ವಿ ಸಿನಿಮಾವೆಂದರೆ ಏನೆಂದು ನಾವು ಕೇಳಿಕೊಳ್ಳುವ ಅಗತ್ಯವೂ ಇದೆ. ‘ಪ್ಯಾನ್‌ ಇಂಡಿಯಾ’ ಹಾಗೂ ‘ಹಣ ಗಳಿಕೆ’ಯ ಮಾನದಂಡಗಳಾಚೆಯ ಯಶಸ್ಸುಗಳನ್ನೂ ಮನಗಾಣಬೇಕಿದೆ.

ಬಾಲಿವುಡ್‌ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡೆದಿವೆ ಎಂಬ ಚರ್ಚೆಗೆ ಬಳಕೆಯಾಗುತ್ತಿರುವ ಈ ಮೂರೂ ಸಿನಿಮಾಗಳು ಏನನ್ನು ಹೇಳಲು ಹೊರಟಿವೆ? ಇವುಗಳ ಯಶಸ್ಸು ಪ್ರತಿನಿಧಿಸುತ್ತಿರುವುದೇನೂ ಎಂಬುದೂ ಮುಖ್ಯವಲ್ಲವೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪುಷ್ಪ’ ಮಾಫಿಯಾಗಳು ಮೇಲುಗೈ ಸಾಧಿಸುವ ಕಥೆಯುಳ್ಳ ಸಿನಿಮಾ, ಹಿಂದುತ್ವವನ್ನು ಜನರ ತಲೆಯೊಳಗೆ ತರುಕಲು ಯತ್ನಿಸಿರುವ ಸಿನಿಮಾ ‘ಆರ್‌ಆರ್‌ಆರ್‌’, ಬಿಲ್ಡಪ್ ಹಾಗೂ ಹೆಣ್ಣನ್ನು ಸರಕು ಎಂಬಂತೆ ಚಿತ್ರಿಸಿದ ಸಿನಿಮಾ ಕೆಜಿಎಫ್‌. ಇಂಥವುಗಳಿಗೆ ಭಾರೀ ಹಣ ತೆತ್ತು ಸಿನಿಮಾ ನೋಡಿದ ಪ್ರೇಕ್ಷಕ ಬಯಸಿದ್ದಾದರೂ ಏನು? ಇವುಗಳನ್ನೆಲ್ಲ ‘ಮನರಂಜನೆ’ ಎನ್ನಲು ಸಾಧ್ಯವೇ? ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿದರೆ ಮುಂಬರುವ ಪ್ರಯೋಗಗಳು ಹೇಗಿರುತ್ತವೆ? ಈ ಮೂರು ಸಿನಿಮಾಗಳಾಚೆಗೆ ದಕ್ಷಿಣ ಭಾರತದ ಚಿತ್ರರಂಗ ಹಿಡಿದಿರುವ ಹೊಸತನದ ಹಾದಿ ಮಸುಕಾಗಿ ಮತ್ತದೇ ಸವಕಲು ಮಾದರಿಗೆ ನಾವು ಹೊರಳುತ್ತೇವೆಯೇ?

ದಕ್ಷಿಣ ಭಾರತದತ್ತ ಬಾಲಿವುಡ್ ತಿರುಗಿ ನೋಡಲೇಬೇಕಾದ ಸಾಕಷ್ಟು ಉತ್ಕೃಷ್ಟ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬರುತ್ತಿವೆ. ಕೋವಿಡ್ ನಡುವೆ ಬಂದ ‘ಆಕ್ಟ್ 1978’, ‘ಅರಿಷಡ್ವರ್ಗ’ ಕನ್ನಡದ ಮಟ್ಟಿಗೆ ಗುರುತಿಸಬಹುದಾದ ಪ್ರಯೋಗಗಳು. ಆದರೆ ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಪಟ್ಟಿಯೇ ಇವೆ. ‘ಸರಪಟ್ಟ ಪರಂಬರೈ’ ಥರದ ಸಿನಿಮಾ ಓಟಿಟಿಗೆ ಬಂತು. ಅದು ಏನಾದರೂ ಚಿತ್ರಮಂದಿರದಲ್ಲಿ ತೆರೆ ಕಂಡಿದಿದ್ದರೆ ಪ್ರೇಕ್ಷಕನಿಗೆ ಸಿಗುತ್ತಿದ್ದ ಫೀಲ್‌ ಉತ್ಕೃಷ್ಟವಾಗಿರುತ್ತಿತ್ತು. ‘ಸೂರರೈ ಪೊಟ್ರು’ ‘ಜೈ ಭೀಮ್’ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ‘ಪ್ಯಾನ್‌ ಇಂಡಿಯಾ’ ಮಾನದಂಡಕ್ಕೆ ಒಳಪಡುತ್ತಿದ್ದವೇನೋ!

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಾರತೀಯರು ಅತಿ ಹೆಚ್ಚು ನೋಡಿದ್ದು ಮಲಯಾಳಂ ಸಿನಿಮಾಗಳನ್ನು. ದೈತ್ಯ ಕಲಾವಿದ ಫಹಾದ್ ಫಾಸಿಲ್ ಅವರ ‘ಸಿ ಯೂ ಸೂನ್’, ‘ಇರುಳ್’, ‘ಜೋಜಿ’, ‘ಮಾಲಿಕ್’ ಒಟಿಟಿಗೆ ಬಂದವು. ಒಂದು ರೀತಿಯಲ್ಲಿ ಹೇಳುವುದಾದರೆ ಫಾಸಿಲ್, ಓಟಿಟಿಯ ಏಕಚಕ್ರಾಧಿಪತಿಯಂತೆ ಮೆರೆದರು. ಒಟಿಟಿಯಲ್ಲಿ ಬಂದ ‘ನಾಯಟ್ಟು’, ‘ಮಾಲಿಕ್’‌, ‘ಗ್ರೇಟ್ ಇಂಡಿಯನ್‌ ಕಿಚನ್’, ‘ಹೋಮ್’, ‘ಕುರುತಿ’, ‘ದೃಶ್ಯಂ2’ ಮೊದಲಾದ ಸಿನಿಮಾಗಳು ಹೊಸ ಚರ್ಚೆಯನ್ನೇ ಹುಟ್ಟು ಹಾಕಿದವು. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಮನೆಯೊಳಗೆ ಕುಳಿತ ಜನರನ್ನು ರಂಜಿಸಿದ್ದು, ಚಿಂತನೆಗೆ ಹಚ್ಚಿದ್ದು ಓಟಿಟಿಯಲ್ಲಿ ಬಂದ ಈ ಸಿನಿಮಾಗಳೆಂದರೆ ತಪ್ಪಾಗದು.

ತಮಿಳಿನಲ್ಲಿ 2021, 2022ನೇ ಇಸವಿಯಲ್ಲಿ ಬಿಡುಗಡೆಯಾದ ‘ಮಂಡೇಲಾ’, ‘ಕರ್ಣನ್’, ‘ಸಾರ್ಪಟ್ಟ ಪರಂಬರೈ’, ‘ಜೈ ಭೀಮ್’, ‘ರೈಟರ್’, ‘ಠಾಣಾಕ್ಕಾರನ್’ ಸಿನಿಮಾಗಳು ಕಥೆ ಹಾಗೂ ಉತ್ಕೃಷ್ಟತೆಯ ದೃಷ್ಟಿಯಿಂದ ಅದ್ಭುತವಾದ ಪ್ರಯೋಗಗಳು. ‘ರೈಟರ್‌’ ಹಾಗೂ ‘ಕರ್ಣನ್’ ಕೆಲಕಾಲ ಥೇಟರ್‌ನಲ್ಲಿಯೂ ಪ್ರದರ್ಶನ ಕಂಡವು.

ಇತ್ತೀಚಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಈಗ ಒಟಿಟಿಗೂ ಬಂದಿರುವ ‘ಪಡ’ ಎಂಬ ಮಲಯಾಳಂ ಸಿನಿಮಾ ನೈಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಆದಿವಾಸಿಗಳ ಬೆಟ್ಟದಂತ ನೋವಿಗೆ ಕನ್ನಡಿ ಹಿಡಿದಿದೆ. ಅಹಿಂಸಾತ್ಮಕವಾದರೂ ಮಿಲಿಟೆಂಟ್ ಪ್ರತಿರೋಧಕ್ಕೆ ಇಳಿದ ಹೋರಾಟಗಾರರು ಎದುರಿಸಿದ ಪ್ರಭುತ್ವದ ಕಿರುಕುಳವನ್ನು ತೆರೆದಿಟ್ಟಿದೆ.

ಇದನ್ನೂ ಓದಿರಿ: NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

ಪೃಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಥರದ ಅದ್ಭುತ ನಟರು ಅಭಿನಯಿಸಿರುವ ‘ಜನಗಣಮನ’ (ಮಲಯಾಳಂ) ಸಿನಿಮಾ ಮೊನ್ನೆಯಷ್ಟೇ ಅಂದರೆ ಏಪ್ರಿಲ್‌ 28ರಂದು ಚಿತ್ರಮಂದಿರಗಳಿಗೆ ಬಂದಿದೆ. ಪ್ರಕರಣವೊಂದರ ಸುತ್ತ ಮಾಧ್ಯಮ ಹಾಗೂ ರಾಜಕಾರಣಿಗಳು ಸೃಷ್ಟಿಸುವ ಸಮೂಹ ಸನ್ನಿ, ವಾಸ್ತವಗಳಿಗೆ ಮಾಬ್‌ ಕುರುಡಾಗುವ ಪರಿಯನ್ನು ಈ ಸಿನಿಮಾ ಮನವರಿಕೆ ಮಾಡಿಕೊಟ್ಟಿದೆ. #FuckFascism ಎನ್ನುವಷ್ಟು ಧೈರ್ಯ ಮಲಯಾಳಿಗರಿಗಿದೆ. ಕ್ಯಾಂಪಸ್‌ಗಳ ಮೇಲೆ ಕೇಸರಿಧಾರಿಗಳು ದಾಳಿ ಮಾಡುತ್ತಿರುವುದರಿಂದ ಶೈಕ್ಷಣಿಕ ಹಾಗೂ ಡೆಮಾಕ್ರಟಿಕ್ ವ್ಯವಸ್ಥೆ ದಮನವಾಗುತ್ತಿರುವ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ.

ಇಷ್ಟೆಲ್ಲ ಅದ್ಭುತ ಸಿನಿಮಾಗಳು ದಕ್ಷಿಣ ಭಾರತದಲ್ಲಿಯೇ ಕಳೆದೆರಡು ವರ್ಷಗಳಲ್ಲಿ ಬಂದಿವೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಿವೆ. ಹೊಸ ಆಲೋಚನೆಯನ್ನು ಹುಟ್ಟಿಹಾಕಿ, ಪ್ರಭುತ್ವದ ಮತೀಯ ತಾರತಮ್ಯವನ್ನು ಪ್ರಶ್ನಿಸಿವೆ. ಹೀಗಿರುವಾಗ ಬಾಲಿವುಡ್‌ v/s ದಕ್ಷಿಣ ಭಾರತದ ಚಿತ್ರರಂಗದ ಚರ್ಚೆಗೆ ಬಳಕೆಯಾಗುತ್ತಿರುವ ಸಿನಿಮಾಗಳ್ಯಾವುವು? ನಮ್ಮಲ್ಲಿ ಅದ್ಬುತ ಪ್ರಯೋಗಗಳು ನಡೆಸುತ್ತಿದ್ದರೂ ನಾವು ಬಾಲಿವುಡ್‌ಗೆ ಚಾಲೆಂಜ್ ಮಾಡುತ್ತಿರುವುದು ಯಾವ ರೀತಿಯ ಸಿನಿಮಾಗಳ ಮೂಲಕ? ನಮ್ಮ‌ ದೃಷ್ಟಿಕೋನ ಬದಲಾಗುವ ಅವಶ್ಯಕತೆ ಇದೆ ಅಲ್ಲವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಕೆ.ಜಿ.ಎಫ್, ಪುಷ್ಪ, RRR ಸಿನಿಮಾಗಳು ಅದೋಗತಿಗೆ ಇಳಿದಿರುವ ನಮ್ಮ ಸಂವೇದನೆಗಳ ಪ್ರತೀಕ ಅಷ್ಟೆ.

  2. Act 1978, ಅರಿಷಡ್ವರ್ಗ, ಸೂರರೈ ಪೊಟ್ರು, ಜೈ ಭೀಮ್ ಚಿತ್ರ ಸರಿ ಇಲ್ಲ ಅಂತ ಹೇಳಿದವರು ಯಾರು. ಆ ಚಿತ್ರಗಳೂ ಚೆನ್ನಾಗಿವೆ. ಆದರೆ ಭಾರತೀಯ ಚಿತ್ರರಂಗ ಎಂದರೆ ಕೇವಲ ಹಿಂದಿ ಚಿತ್ರಗಳು ಉಳಿದ ಎಲ್ಲಾ ಭಾರತೀಯ ಚಿತ್ರಗಳು ಕೇವಲ ಪ್ರಾದೇಶಿಕ ಚಿತ್ರಗಳು ಎಂಬ ಭ್ರಮೆ, ಭಾರತದೊಳಗೆ ಹಾಗೂ ಭಾರತದ ಆಚೆ ಇದ್ದ ಪರಸ್ಥಿತಿಯಲ್ಲಿ ತೆರೆಕಂಡು ಇಡೀ ಭಾರತೀಯ ಹಾಗೂ ವಿದೇಶಿಯ ಚಿತ್ರರಂಗಗಳು ಕಣ್ಣು ಬಾಯಿ ಬಿಟ್ಟು ನೋಡೋ ಹಾಗೆ ಮಾಡಿದ್ದು rrr, kgf ಸರಣಿ, ಪುಷ್ಪ ಚಿತ್ರಗಳು, ಎಂದರೆ ಯಾವದೇ ಅತಿಶಯೋಕ್ತಿ ಆಗಲಿಕ್ಕಿಲ್ಲ. ಒಂದು ಚಿತ್ರ ಸಾವಿರಾರು ಕೋಟಿ ಗಳಿಸುತ್ತದೆ ಆದರೆ ಅದು ಹಾಲಿವುಡ್ ಚಿತವಾಗಿದ್ದರೆ ಅಂಥ ಚಿತ ಭಾರತೀಯರು ನಿರ್ಮಾಣ ಮಾಡುವದಿಲ್ಲ ಅಂತ ನಾವೇ ಬೊಬ್ಬೆ ಹಾಕ್ತಿವಿ. ಭಾರತೀಯ ,ಅದರಲ್ಲೂ ಸೌತ್ ಚಿತ್ರಗಳು ಆ ಕಮಾಲ್ ಮಾಡಿದರೆ ಅದನ್ನು ಕೂಡ ನಾವು ಸಹಿಸುವದಿಲ್ಲ.. ಇದೇ ನೋಡಿ ಕೆಲವು ವಿಚಾರವಂತರ ಮನೋಸ್ಥಿತಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...