Homeರಾಷ್ಟ್ರೀಯಜಿಗ್ನೇಶ್‌ ಮೇವಾನಿ ಮೇಲೆ ‘ಸುಳ್ಳು ಎಫ್‌ಐಆರ್‌’ ದಾಖಲಿಸಲಾಗಿದೆ: ಅಸ್ಸಾಂನ ಜಿಲ್ಲಾ ನ್ಯಾಯಾಲಯ ಹೇಳಿಕೆ

ಜಿಗ್ನೇಶ್‌ ಮೇವಾನಿ ಮೇಲೆ ‘ಸುಳ್ಳು ಎಫ್‌ಐಆರ್‌’ ದಾಖಲಿಸಲಾಗಿದೆ: ಅಸ್ಸಾಂನ ಜಿಲ್ಲಾ ನ್ಯಾಯಾಲಯ ಹೇಳಿಕೆ

ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವುದರ ವಿರುದ್ಧ ಅಸ್ಸಾಂ ಪೊಲೀಸರಿಗೆ ಕೋರ್ಟ್‌ ಎಚ್ಚರಿಕೆ ನೀಡಿದೆ.

- Advertisement -
- Advertisement -

ಕಸ್ಟಡಿಯಲ್ಲಿದ್ದಾಗ ಮಹಿಳಾ ಪೊಲೀಸ್‌‌ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಗುಜರಾತ್‌‌ ಶಾಸಕ ಜಿಗ್ನೇಶ್‌ ಮೇವಾನಿಗೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಈ ವೇಳೆ ‘ಸುಳ್ಳು ಎಫ್‌ಐಆರ್’ ಮತ್ತು ‘ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ರಾಜ್ಯ ಪೊಲೀಸರನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. “ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವುದರ” ವಿರುದ್ಧ ಅಸ್ಸಾಂ ಪೊಲೀಸರಿಗೆ ಅದು ಎಚ್ಚರಿಕೆ ನೀಡಿದೆ.

“ರಾಜ್ಯದಲ್ಲಿ ನಡೆಯುತ್ತಿರುವ ಮಿತಿಮೀರಿದ ಪೋಲೀಸ್‌ ದೌರ್ಜನ್ಯ”ವನ್ನು ಉಲ್ಲೇಖಿಸಿದ ಬಾರ್ಪೇಟಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಅವರು, “ಸ್ವತಃ ಸುಧಾರಿಸಿಕೊಳ್ಳಲು” ಪೊಲೀಸ್ ಪಡೆಗೆ ನಿರ್ದೇಶನ ನೀಡುವಂತೆ ಗೌಹಾಟಿ ಹೈಕೋರ್ಟ್‌ಗೆ ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕಷ್ಟಪಟ್ಟು ಗಳಿಸಿದ ನಮ್ಮ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುತ್ತಿರುವುದನ್ನು ಸರಳವಾಗಿ ಯೋಚಿಸಲು ಸಾಧ್ಯವಿಲ್ಲ. ಅಸ್ಸಾಂ ಪೊಲೀಸರು ಕೂಡಾ ಅದೇ ವಿಚಾರದ ಬಗ್ಗೆ ಯೋಚಿಸುತ್ತಿದ್ದರೆ, ಅದುವೇ ವಿಕೃತ ಚಿಂತನೆ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು

ಏಪ್ರಿಲ್ 21 ರಂದು ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‌ಗೆ ಸರ್ಕಾರಿ ವಾಹನದಲ್ಲಿ ಅವರನ್ನು ಕರೆದೊಯ್ಯುತ್ತಿದ್ದಾಗ ಜಿಗ್ನೇಶ್‌ ಮೇವಾನಿ ತನ್ನ ಮೇಲೆ, ‘ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ’, ‘ದೈಹಿಕವಾಗಿ ತಳ್ಳಿದ್ದಾರೆ’ ಎಂದು ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಎಫ್‌ಐಆರ್ ಪ್ರಕಾರ, ವಾಹನದಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಅದಾಗ್ಯೂ, ಮಹಿಳಾ ಅಧಿಕಾರಿಯ ಹೇಳಿಕೆಯನ್ನು ಎಫ್‌ಐಆರ್‌ನಲ್ಲಿ ಸೇರಿಸುವುದಿಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ. “ಇದು ಆರೋಪಿಯನ್ನು ದೀರ್ಘಕಾಲದವರೆಗೆ ಬಂಧನದಲ್ಲಿಡಲು, ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತಯಾರಿಸಲ್ಪಟ್ಟಿದೆ” ಎಂದು ಅದು ಹೇಳಿದೆ.

“ಇಬ್ಬರು ಪುರುಷ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರಲು ಯಾವುದೇ ವಿವೇಕಯುತ ವ್ಯಕ್ತಿ ಎಂದಿಗೂ ಪ್ರಯತ್ನಿಸುವುದಿಲ್ಲ. ಆರೋಪಿಯು ಹುಚ್ಚುತನದ ವ್ಯಕ್ತಿ ಎಂಬ ಯಾವ ದಾಖಲೆ ಕೂಡಾ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಗುಜರಾತ್: ಶಾಸಕ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರು

“ಕಾನೂನು ಮತ್ತು ಸುವ್ಯವಸ್ಥೆಯ ಕರ್ತವ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ಧರಿಸುವಂತೆ, ಆರೋಪಿಯನ್ನು ಬಂಧಿಸುವಾಗ ಅಥವಾ ಆರೋಪಿಯನ್ನು ಕೆಲವು ಸ್ಥಳಕ್ಕೆ ಕರೆದುಕೊಂಡು ಹೋಗಲು ಅಥವಾ ಇತರ ಕಾರಣಗಳಿಗಾಗಿ ಸರಕು ವಸೂಲಿ ಮಾಡುವಾಗ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಮತ್ತು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು” ಎಂಬ ನಿರ್ದೇಶನವನ್ನು ಹೈಕೋರ್ಟ್‌ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

“ಈಗಿನಂತೆ ಸುಳ್ಳು ಎಫ್‌ಐಆರ್ ದಾಖಲು ಮಾಡುವುದನ್ನು ತಡೆಗಟ್ಟಲು, ಆರೋಪಿಗಳ ಬಂಧನ ಮತ್ತು ಆರೋಪಿಗಳು ಮಧ್ಯರಾತ್ರಿಯಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಾಗೂ ಈಗೀಗ ರಾಜ್ಯದಲ್ಲಿ ದಿನ ನಿತ್ಯದ ವಿದ್ಯಾಮಾನವಾಗಿರುವ ಆರೋಪಿಯು ಪೊಲೀಸ್ ಸಿಬ್ಬಂದಿಯಿಂದ ತಪ್ಪಿಸಲು ಪ್ರಯತ್ನಿಸುತ್ತಿರುವಾಗ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿ ಕೊಲ್ಲುವುದು ಅಥವಾ ಗಾಯಗೊಳಿಸುವುದು ಮುಂತಾದ ಘಟನೆಗಳಲ್ಲಿ ಪೊಲೀಸರ ಹೇಳಿಕೆಗಳಿಗೆ ವಿಶ್ವಾಸಾರ್ಹತೆಯನ್ನು ನೀಡಲು” ಈ ಕ್ರಮಗಳನ್ನು ಪರಿಗಣಿಸಬೇಕು ಎಂದು ಕೋರ್ಟ್‌ ಹೇಳಿದೆ.

“ಈ ಎಲ್ಲಾ ಅಂಶವನ್ನು ಪರಿಶೀಲಿಸಲು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪೋಲೀಸರ ಮಿತಿಮೀರಿದ ದೌರ್ಜನ್ಯಗಳನ್ನು ತಡೆಯಲು ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ (ಪಿಐಎಲ್) ತೆಗೆದುಕೊಳ್ಳಬಹುದೇ” ಎಂದು ಆದೇಶದ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಲು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಕಳುಹಿಸುವಂತೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: 5 ದಿನ ಪೊಲೀಸ್ ಕಸ್ಟಡಿಗೆ ಜಿಗ್ನೇಶ್: 2ನೇ ಪ್ರಕರಣದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿ ದೂರಿದ್ದೇನು?

ಕಳೆದ ತಿಂಗಳು ಅಸ್ಸಾಂ ಅಸೆಂಬ್ಲಿಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, 2021ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರ ವಹಿಸಿಕೊಂಡಾಗಿನಿಂದ 29 ಜನರು ಪೊಲೀಸ್ ಫೈರಿಂಗ್‌ನಲ್ಲಿ ಸಾವನ್ನಪ್ಪಿದ್ದಾರೆ ಮತ್ತು 96 ಜನರು ಗಾಯಗೊಂಡಿದ್ದಾರೆ.

“1,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಕೆಲವು ಔಪಚಾರಿಕ ಕ್ರಮಗಳು ಉಳಿದಿದ್ದು, ಅದಕ್ಕಾಗಿ ಅವರನ್ನು ಕೊಕ್ರಜಾರ್‌ಗೆ ಕರೆದೊಯ್ಯಬೇಕಾಗಿದೆ. ಆದ್ದರಿಂದ ಅವರನ್ನು ನಾಳೆ ಬಿಡುಗಡೆ ಮಾಡಲಾಗುತ್ತದೆ” ಎಂದು ಮೇವಾನಿ ಅವರ ವಕೀಲ ಅಂಗ್‌ಶುಮನ್ ಬೋರಾ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ನ್ಯಾಯಾಲಯವು “ಗಟ್ಟಿಯಾದ” ತೀರ್ಪು ನೀಡಿದೆ ಎಂದು ಅವರು ಹೇಳಿದ್ದಾರೆ. “ಇದೊಂದು ಸುಳ್ಳು ಪ್ರಕರಣ. ಅವರ ಬಂಧನ ಕಾನೂನುಬಾಹಿರ ಮತ್ತು ಕಾನೂನಿನ ಕಾರ್ಯವಿಧಾನವನ್ನು ಅನುಸರಿಸುವುದಿಲ್ಲ ಎಂದು ನಾನು ನ್ಯಾಯಾಲಯದ ಮುಂದೆ ವಾದಿಸಿದ್ದೆ. ಇದನ್ನು ನ್ಯಾಯಾಲಯ ಒಪ್ಪಿಕೊಂಡಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

ಕಳೆದ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದ ಸ್ವತಂತ್ರ ಶಾಸಕ ಮೇವಾನಿ ಅವರನ್ನು, ಗುಜರಾತ್‌ನ ಬನಸ್ಕಾಂತ ಜಿಲ್ಲೆಯಿಂದ ಅಸ್ಸಾಂ ಪೊಲೀಸರು ಏಪ್ರಿಲ್ 20 ರಂದು ತಡರಾತ್ರಿ ಬಂಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ಕೊಕ್ರಜಾರ್ ಜಿಲ್ಲೆಯ ಬಿಜೆಪಿ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆದಿತ್ತು.

ಅಸ್ಸಾಂ ಪೊಲೀಸರು ಬಂಧನದ ಮರುದಿನ ಬೆಳಗ್ಗೆ ಅವರನ್ನು ಗುವಾಹಟಿಗೆ ಕರೆದೊಯ್ದಿದ್ದರು. ಏಪ್ರಿಲ್ 25 ರಂದು, ಕೊಕ್ರಜಾರ್ ನ್ಯಾಯಾಲಯದಿಂದ ಮೇವಾನಿ ಅವರಿಗೆ ಜಾಮೀನು ನೀಡಲಾಗಿತ್ತು. ಆದರೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇಲೆ ಬಾರ್ಪೇಟಾ ಜಿಲ್ಲೆಯಲ್ಲಿ ದಾಖಲಾದ ಹೊಸ ಪ್ರಕರಣದ ಅಡಿಯಲ್ಲಿ ಅವರನ್ನು ಮತ್ತೆ ಅರೆಸ್ಟ್ ಮಾಡಲಾಗಿತ್ತು. ಜಿಗ್ನೇಶ್ ಮೇವಾನಿ ತನ್ನ ಮೇಲೆ ‘ಹಲ್ಲೆ’ ಮಾಡಿದ್ದು, ‘ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದ್ದರು.

ತನ್ನ ಬಂಧನವು ಪ್ರಧಾನ ಮಂತ್ರಿ ಕಚೇರಿಯಲ್ಲಿ ಯೋಜಿಸಲಾದ ‘ಪಿತೂರಿ’ ಎಂದು ಮೇವಾನಿ ಆರೋಪಿಸಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ. “ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ. ಈ ನಂಬಿಕೆ ನನಗೆ ಹಿಂದೆಯೂ ಇದೆ, ಭವಿಷ್ಯದಲ್ಲೂ ಇರಲಿದೆ. ಇವತ್ತಲ್ಲದಿದ್ದರೆ ನಾಳೆ ನನಗೆ ಖಂಡಿತಾ ಜಾಮೀನು ಸಿಗುತ್ತಿತ್ತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೇಶ ಮತ್ತು ಸಂವಿಧಾನ ಪ್ರೀತಿಸುವ ಪ್ರತಿಯೊಬ್ಬರು ಜಿಗ್ನೇಶ್ ಮೇವಾನಿ ಜೊತೆಗಿದ್ದಾರೆ: ಸಿದ್ದರಾಮಯ್ಯ

“ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೀರವ್ ಮೋದಿ, ಮೆಹುಲ್ ಚೋಕ್ಸಿ ಅಥವಾ ವಿಜಯ್ ಮಲ್ಯ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಆದರೆ ಒಂದು ಟ್ವೀಟ್‌ಗಾಗಿ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿ ಗುಜರಾತ್‌ನಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ಅಸ್ಸಾಂನ ಜೈಲಿಗೆ ಕರೆತಂದಿದ್ದಾರೆ. ಈ ಮೂಲಕ ಅವರು ನೀಡಲು ಪ್ರಯತ್ನಿಸುತ್ತಿರುವ ಸಂದೇಶ ಏನು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮತ್ತು ಗೋಡ್ಸೆ ಬಗ್ಗೆ ಟ್ವೀಟ್‌ ಮಾಡಿದ್ದಕ್ಕಾಗಿ ಗುಜರಾತ್‌ ಶಾಸಕ, ಹೋರಾಟಗಾರ ಜಿಗ್ನೇಶ್‌ ಮೇವಾನಿಯ ಬಂಧನ

“ಚಂದ್ರಶೇಖರ್ ಆಜಾದ್, ಅಖಿಲ್ ಗೊಗೋಯ್, ಹಾರ್ದಿಕ್ ಪಟೇಲ್, ಕನ್ಹಯ್ಯಾ ಕುಮಾರ್ ಮತ್ತು ಇತರ ಯುವ ನಾಯಕರಂತೆಯೆ ನಾನು ಕೂಡಾ ಬಿಜೆಪಿಯ ಗುರಿಯಾಗಿದ್ದೇನೆ. ಆದರೆ ನಾವು ಯಾರೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ಕಿರಿಯ ಅಧಿಕಾರಿಯೊಂದಿಗೆ ಜಗಳವಾಡುವುದರಿಂದ ನಾನು ಏನು ಸಾಧಿಸುತ್ತೇನೆ? ಪೊಲೀಸರು ನನ್ನನ್ನು ಕಸ್ಟಡಿಗೆ ತೆಗೆದುಕೊಂಡರು ಮತ್ತು ನನ್ನನ್ನು ವಿಚಾರಣೆ ಮಾಡುವುದು ಅವರ ಕೆಲಸ ಮತ್ತು ನಾನು ಅವರಿಗೆ ಸಹಕರಿಸಿದೆ” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸತ್ಯ ಸಂಗತಿ ನ್ಯಾಯಾಲಯಕ್ಕೆ ಮನವರಿಕೆ ಆಗಿರುವುದು ಸ್ವಾಗತಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...