Homeರಾಷ್ಟ್ರಶಿಕ್ಷಣ, ಇತಿಹಾಸ ಮತ್ತು ಮತೀಯವಾದ

ಶಿಕ್ಷಣ, ಇತಿಹಾಸ ಮತ್ತು ಮತೀಯವಾದ

- Advertisement -
- Advertisement -

ಇತಿಹಾಸಕಾರರು ಇತಿಹಾಸದ ತಾಯಿಯಂತಿರುವ ಸತ್ಯಕ್ಕೆ ನಿಷ್ಠಾವಂತರಾಗಿರಬೇಕು

ಬಿ. ಆರ್. ಅಂಬೇಡ್ಕರ್

ಇತಿಹಾಸಕಾರರು ಮತ್ತು ಸತ್ಯಸಂಗತಿಗಳ ನಡುವಿನ ನಿರಂತರ ಸಂವಹನ ಕಾರಣಕ್ಕೆ, ಭೂತ ಮತ್ತು ವರ್ತಮಾನದ ನಡುವೆ ಎಂದಿಗೂ ಮುಗಿಯದ ಸಂಬಾಷಣೆಯ ಕಾರಣಕ್ಕೆ, ಇತಿಹಾಸವು ಒಂದು ಜೀವಂತ ವಿಷಯ

ಇ.ಎಚ್. ಕಾರ್ರ್

ಪೀಠಿಕೆ

ಇತಿಹಾಸಕಾರರೊಬ್ಬರು ’ಭೂತಕಾಲದ ಕುರಿತು ನಾವು ಏನನ್ನು ಗ್ರಹಿಸುತ್ತೇವೆಯೋ ಅದರ ಒಂದು ಭಾಗ ಮಾತ್ರ ನೆನಪಿರುತ್ತದೆ, ನಾವು ಏನು ನೆನಪಿಟ್ಟುಕೊಂಡಿರುತ್ತೇವೆಯೋ ಅದರ ಒಂದು ಭಾಗ ಮಾತ್ರ ದಾಖಲಾಗುತ್ತದೆ, ನಾವು ಏನ್ನನ್ನು ದಾಖಲಿಸುತ್ತೇವೆಯೋ ಅದರ ಒಂದು ಭಾಗ ಉಳಿದುಕೊಂಡಿರುತ್ತದೆ, ಏನು ಉಳಿದುಕೊಂಡಿರುತ್ತದೆಯೋ ಅದರ ಒಂದು ಭಾಗ ಮಾತ್ರ ಇತಿಹಾಸಕಾರರ ಗಮನಕ್ಕೆ ಬರುತ್ತದೆ, ಗಮನಕ್ಕೆ ಬಂದ ವಿಶ್ವಾಸಾರ್ಹ ಭಾಗವನ್ನು ಮಾತ್ರ ಗ್ರಹಿಸಲಾಗುತ್ತದೆ, ತಾನು ಗ್ರಹಿಕೆಯ ಒಂದು ಭಾಗವನ್ನು ಮಾತ್ರ ಇತಿಹಾಸಕಾರರು ಮಂಡಿಸುತ್ತಾರೆ’ ಎಂದು ಬರೆಯುತ್ತಾರೆ.

ಇಲ್ಲಿ ಪರಿವರ್ತನೆಗಾಗಿ ಶಿಕ್ಷಣ ಎನ್ನುವ ಆದರ್ಶ ಹುಸಿಯಾಗಿದೆ, ಬದಲಿಗೆ ಶಿಕ್ಷಣದ ಪರಿವರ್ತನೆ ಇಂದಿನ ಬೇಡಿಕೆಯಾಗಿದೆ. ವ್ಯಾಪಾರೀಕರಣದ ಒಂದು ಸರಕಾಗಿ ಪರಿವರ್ತನೆಗೊಂಡಿರುವ ಶಿಕ್ಷಣವು ಅದರ ಮೂಲ ಉದ್ದೇಶ ಜ್ಞಾನ ಮತ್ತು ಕಲಿಕೆಯಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿದೆ. ಇಂದು ಜ್ಞಾನವೆಂದರೆ ಮಾಹಿತಿ ಎನ್ನುವ ಕಾಲ. ಶಿಕ್ಷಣವೂ ಸಹ ಮಾಹಿತಿ ಕೇಂದ್ರವಾಗಿದೆ. ಇದರ ಅಪಾಯವೆಂದರೆ ವಿಜ್ಞಾನ, ಸಮಾಜ, ಇತಿಹಾಸ ಮುಂತಾದ ಜ್ಞಾನ ಶಾಖೆಗಳು ಮಾಹಿತಿ ಕೇಂದ್ರವಾಗಿವೆ. ಈ ಜ್ಞಾನ ಶಾಖೆಗಳ ಶಿಕ್ಷಣವನ್ನು ಮಾಹಿತಿ ರೂಪದಲ್ಲಿ ಕೊಡುವುದರ ಮೂಲಕ ಮಕ್ಕಳ ಕಲಿಕೆಯ ಸಂತಸ ಮತ್ತು ಸಂಭ್ರಮವನ್ನು ಹಾಳುಮಾಡಿದೆ. ಹಳಿತಪ್ಪಿದ ಈ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದರ ಕಡೆಗೆ ಗಮನ ಹರಿಸಬೇಕಾದ ಸರಕಾರವು ಪಠ್ಯಪುಸ್ತಕಗಳ ಮತೀಯವಾದೀಕರಣಕ್ಕೆ ಪ್ರಾಮುಖ್ಯತೆ ಕೊಡುತ್ತಿರುವುದು ಆತಂಕ ಮೂಡಿಸುತ್ತಿದೆ. ಶಿಕ್ಷಣ, ಪಠ್ಯಕ್ರಮ ಮತ್ತು ಇತಿಹಾಸ ಕುರಿತು ಸರಳೀಕರಿಸಲು ಸಾಧ್ಯವಾಗದಷ್ಟು ಸಂಕೀರ್ಣಗೊಳಿಸಲಾಗಿದೆ

ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಂಘ ಪರಿವಾರದ ಬಿಜೆಪಿ ಪಕ್ಷವು ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿದೆ. ಆರ್ಯನ್ ಸಿದ್ಧಾಂತ-ಸಂಸ್ಕೃತ-ವರ್ಣಾಶ್ರಮ-ಬ್ರಾಹ್ಮಣಶಾಹಿಯ ಬೆರಕೆಯಾದ ಹಿಂದೂ ರಾಷ್ಟ್ರೀಯತೆ ಆರೆಸ್ಸಸ್‌ನ ಗುರಿ. ಒಂಭತ್ತು ದಶಕಗಳಿಂದ ಈ ಹಿಂದೂ ರಾಷ್ಟ್ರೀಯತೆಯ ದೃಷ್ಟಿಕೋನದ ಇತಿಹಾಸವನ್ನು ಪುನರ್‌ರಚಿಸುವ ನೆಪದಲ್ಲಿ ಪಠ್ಯಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಆರೆಸ್ಸೆಸ್‌ನ ನಿರಂತರ ಪ್ರಯತ್ನವು ಈಗ ಜಾರಿಗೊಳ್ಳುತ್ತಿದೆ. ಭಾರತದ ಇತಿಹಾಸಕ್ಕಿಂತಲೂ ಇತಿಹಾಸವನ್ನು ಭಾರತೀಕರಣಗೊಳಿಸುವಲ್ಲಿ (ಹಿಂದೂಕರಣ) ಆಸಕ್ತಿಯಿರುವ ಸಂಘ ಪರಿವಾರಕ್ಕೆ ಮತೀಯವಾದವೇ ಮುಖ್ಯ ವಾಹಕವಾಗಿದೆ. ಯಾವುದೇ ಸಾಧನೆಯಿಲ್ಲದ, ಸಂವಿಧಾನ ವಿರೋಧಿ ಕ್ರಿಯೆಗಳಿಗೆ ಖ್ಯಾತಿಯಾದ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವಿಲ್ಲದ ಆರೆಸ್ಸೆಸ್‌ಗೆ ಸುಳ್ಳನ್ನು ಬಿತ್ತುತ್ತಲೇ ಗೋಬೆಲ್ಸ್ ತಂತ್ರ ಬಳಸಿಕೊಂಡು ತಾನು ಮತ್ತು ತನ್ನ ಸಿದ್ಧಾಂತವು ಚಲಾವಣೆಯಲ್ಲಿರಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿ ಸದಾಕಾಲವೂ ಸುಳ್ಳನ್ನು ಉತ್ಪಾದಿಸುವುದು ಮತ್ತು ಪುರಾಣದ ಹಾಗೂ ಚರಿತ್ರೆಯ ಜನಪ್ರಿಯ ವ್ಯಕ್ತಿಗಳನ್ನು ತನ್ನ ಸಿದ್ಧಾಂತಗಳೊಂದಿಗೆ ಜೀರ್ಣಿಸಿಕೊಳ್ಳಲು ಯತ್ನಿಸುವುದು ಅದರ ನಿತ್ಯದ ಕಾಯಕವಾಗಿದೆ. ಸಂಘ ಪರಿವಾರದ ಪಾಲಿಗೆ ಇತಿಹಾಸವೆಂದರೆ ಆಗಿಹೋಗಿರಬಹುದಾದ ನೈಜ ಘಟನೆಗಳಲ್ಲ. ಬದಲಿಗೆ ’ಹಿಂದೂ ರಾಷ್ಟ್ರಕ್ಕಾಗಿ’ ಹೇಗೆ ಬೇಕಾದರೂ ತಿರುಚಬಲ್ಲ ದಸ್ತಾವೇಜು. ಇವರು ವೈಜ್ಞಾನಿಕ, ಸೆಕ್ಯುಲರ್ ದೃಷ್ಟಿಕೋನದ ಮೂಲಕ, ಆಧುನಿಕ ಪ್ರಜ್ಞೆಯಲ್ಲಿ ಇತಿಹಾಸ ಗ್ರಹಿಸುವ ಕ್ರಮವನ್ನು ತಿರಸ್ಕರಿಸಿ, ಜ್ಞಾನ ವಿರೋಧಿ ತತ್ವವನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಇತಿಹಾಸವನ್ನು ಅದ್ಯಯನ ಮಾಡುವ ವಿವಿಧ ಮಾದರಿಗಳ ಹಿಮ್ಮುಖ ಚಲನೆಗೆ ಕಾರಣವಾಗಿದ್ದಾರೆ.

ಗ್ರಾಮ್ಶಿಯು ’ಇತಿಹಾಸವು ಆಳುವ ವರ್ಗಗಳು ಪ್ರಯೋಗಿಸುವ ಹತಾರ’ ಎನ್ನುತ್ತಾನೆ. ಈಗ ಅಧಿಕಾರದಲ್ಲಿರುವ ಆರೆಸ್ಸೆಸ್ ಹಿಡಿತ ಆಡಳಿತ ವ್ಯವಸ್ಥೆ ಇತಿಹಾಸವನ್ನು ತಿರುಚಿ ಅದನ್ನು ಆಯುಧವಾಗಿ ಪ್ರಯೋಗಿಸುತ್ತಿದೆ. ಇತಿಹಾಸವನ್ನು ಸದಾ ಗೊಂದಲದ ಗೂಡಾಗಿಸುವುದು ಅದರ ಮೊದಲ ಆದ್ಯತೆ. ಗೊಂದಲ ಹೆಚ್ಚಿದಷ್ಟು ಅದನ್ನು ವಿವಾದಗೊಳಿಸುವುದು ಸುಲಭವಾಗುತ್ತದೆ. ಆರೆಸ್ಸೆಸ್ ಕಳೆದ 80 ವರ್ಷಗಳಿಂದ ಶಿಕ್ಷಣ, ಸಂಸ್ಕೃತಿ ಮತ್ತು ರಾಜಕೀಯವನ್ನು ಬಳಸಿಕೊಂಡು ಇತಿಹಾಸದ ಸಂಗತಿಗಳನ್ನು ಪರ-ವಿರೋಧದ ಚರ್ಚೆಯಾಗಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಭೂತಕಾಲವನ್ನು ವರ್ತಮಾನದಲ್ಲಿ ಉತ್ಪಾದಿಸುತ್ತಿದೆ. ಈ ಮೂಲಕ ತನ್ನ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಮತಾಂಧತೆ, ಜಾತೀಯತೆಯ ವಿಷಬೀಜವನ್ನು ಬಿತ್ತಲು ಫಲವತ್ತಾದ ನೆಲದಂತಿರುವ ಶಿಕ್ಷಣ, ಪಠ್ಯಪುಸ್ತಕ, ಇತಿಹಾಸ ಮತ್ತು ಮಕ್ಕಳ ಮಿದುಳು ಈ ನಾಲ್ಕನ್ನು ಅತಿಕ್ರಮಣ ಮಾಡುತ್ತಾರೆ. ಆ ಮೂಲಕ ಆರ್ಯನ್ ಸಿದ್ಧಾಂತದ ಮಿಥ್‌ಗಳನ್ನು ಬಳಸಿಕೊಂಡು ಹಿಂದುತ್ವದ ಪಠ್ಯಗಳನ್ನು ತಳಹಂತದಿಂದಲೇ ಬೋಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇವರ ವಾಟ್ಸಾಪ್ ವಿಶ್ವವಿದ್ಯಾಲಯಗಳಲ್ಲಿ ಉತ್ಪಾದನೆಗೊಂಡ ಸುಳ್ಳುಗಳನ್ನು, ಅನ್ಯ ಧರ್ಮದ ದ್ವೇಷ, ವರ್ಣಾಶ್ರಮದ ಶ್ರೇಷ್ಠತೆ, ಜಾತಿ ಆಧಾರಿತ ತಾರತಮ್ಯಗಳನ್ನು ಜ್ಞಾನ ಎಂದು ನಂಬಿಸಿ ಮಾಹಿತಿ ರೂಪದಲ್ಲಿ ಮಕ್ಕಳ, ವಿದ್ಯಾರ್ಥಿಗಳ ಮಿದುಳಿಗೆ ತುಂಬಲಾಗುತ್ತದೆ. ಇಲ್ಲಿ ಧರ್ಮದ ಅಮಲೇರಿಸಿಕೊಂಡು ಬೀದಿಗಳಲ್ಲಿ ಗಲಭೆ ಮಾಡುವ ಮಕ್ಕಳನ್ನು ಉತ್ಪಾದಿಸಲಾಗುತ್ತದೆ. ಕಳೆದ ಐದು ದಶಕಗಳಿಂದ ಅಲ್ಪಸಂಖ್ಯಾತರ ವಿರುದ್ಧ ಹಲ್ಲೆ, ದಾಳಿ ನಡೆಸಲು ಯುವಜನತೆಯನ್ನು ಬಾಣಗಳಾಗಿ ತಯಾರು ಮಾಡುವ ಈ ಉತ್ಪಾದನಾ ಪ್ರಕ್ರಿಯೆ ಸಂಘ ಪರಿವಾರದ ಶೈಕ್ಷಣಿಕ ಕಾರ್ಖಾನೆಗಳಲ್ಲಿ ಸಕ್ರಿಯವಾಗಿ ಚಾಲ್ತಿಯಲ್ಲಿದೆ. ಅಲ್ಲಿ ಮುಗ್ಧ ಮಕ್ಕಳ ಮಿದುಳು ಮತ್ತು ಮನಸ್ಸುಗಳಿಗೆ ದ್ವೇಷದ, ಜಾತಿ ದೌರ್ಜನ್ಯದ ವಿಷವುಣಿಸುವ ಪಠ್ಯಗಳನ್ನು ಬೋಧಿಸಲಾಗುತ್ತದೆ. ಈಗ ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ಅನುಕೂಲವನ್ನು ಬಳಸಿಕೊಂಡು ಇದೇ ವಿಷ ಬಿತ್ತುವ ಪ್ರಕ್ರಿಯೆಯನ್ನು ಸರಕಾರಿ ಸಂಸ್ಥೆಗಳ ಮೂಲಕ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ ಮತ್ತು ಈ
ದಾರಿಯಲ್ಲಿ ಬಹುದೂರ ಸಾಗಿದ್ದಾರೆ. ಎನ್‌ಸಿಆರ್‌ಟಿ ಪಠ್ಯಗಳನ್ನು ಮತೀಯವಾದೀಕರಣಗೊಳಿಸುವ ಈ ಪ್ರಕ್ರಿಯೆ 1999ರ ವಾಜಪೇಯಿ ಸರಕಾರದಿಂದಲೇ ಪ್ರಾರಂಭಗೊಂಡಿತ್ತು. ಇದಕ್ಕೆ 1977ರ ಜನತಾ ಪಕ್ಷದ ಸರಕಾರದಲ್ಲಿ ಬೀಜಗಳನ್ನು ಬಿತ್ತಿದ್ದರು. ಈಗ ಮೋದಿ ಸರಕಾರದಲ್ಲಿ ಈ ಮತೀಯವಾದೀಕರಣದ ಪ್ರಕ್ರಿಯೆ ಅದರ ಪರಾಕಾಷ್ಠೆ ತಲುಪಿದೆ.

ಆರೆಸ್ಸೆಸ್‌ಗೆ ಇತಿಹಾಸವನ್ನು ಪುನರ್‌ರಚಿಸುವ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಉದಾಹರಣೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನಾಯಕರು ಭಾಗವಹಿಸಲಿಲ್ಲ ಬದಲಿಗೆ ಬ್ರಿಟಿಷರೊಂದಿಗೆ ಸಲಿಗೆಯಿಂದಿದ್ದರು ಎನ್ನುವ ಇತಿಹಾಸವನ್ನು ಪುನರ್‌ರಚಿಸಬೇಕೆಂದರೆ ನಕಲಿ ಹೋರಾಟಗಾರರನ್ನು ಸೃಷ್ಟಿಸಬೇಕಾಗುತ್ತದೆ. ಆರೆಸ್ಸೆಸ್‌ನ ವಿದ್ಯಾಭಾರತಿಯ ಪಠ್ಯಗಳಲ್ಲಿ ಅನೇಕ ಆರೆಸ್ಸೆಸ್ ನಾಯಕರು ವಸಾಹತುಶಾಹಿ ವಿರುದ್ಧ ಹೋರಾಡಿದ್ದಾರೆ ಎಂದು ಬರೆಯಲಾಗಿದೆ. ಹೆಡಗೇವಾರ್ ಅವರು ಗಾಂಧಿ, ನೆಹರೂ ಮಟ್ಟದ ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಮಿಥ್‌ಗಳನ್ನು ಸೃಷ್ಟಿಸಿದ್ದಾರೆ ಮತ್ತು ಈ ಪಠ್ಯವನ್ನು ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಾರೆ. ಆದರೆ ಸರಕಾರದ ಸಂಸ್ಥೆಯಾದ ’ಐಸಿಎಚ್‌ಆರ್ ‘Towards Freedom’ ಎನ್ನುವ ಸರಣಿ ಮಾಲಿಕೆಯನ್ನು ಪ್ರಕಟಿಸುತ್ತಿದೆ. ಅಲ್ಲಿ ಪ್ರಕಟಗೊಂಡ ಅನೇಕ ಸಂಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಿಲ್ಲ ಎನ್ನುವ ಸಂಗತಿಗಳನ್ನು ನಿಖರವಾದ ಮಾಹಿತಿಗಳೊಂದಿಗೆ ಪ್ರಸ್ತಾಪಿಸಲಾಗಿದೆ. ಅಲ್ಲದೆ ಬ್ರಿಟಿಷರೊಂದಿಗೆ ಸಂಧಾನದಲ್ಲಿ ತೊಡಗಿದ್ದರು, ಕ್ಷಮಾಪಣೆ ಕೇಳಿದ್ದರು ಎನ್ನುವ ಸತ್ಯ ಸಂಗತಿಗಳನ್ನು ದಾಖಲೆಗಳ ಸಮೇತ ಪ್ರಕಟಿಸಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೂಡಲೆ ಜಾರಿಗೊಳ್ಳುವಂತೆ ‘Towards Freedom’ ಮುಂದಿನ ಸಂಪುಟಗಳ ಪ್ರಕಟಣೆಯನ್ನು ತಡೆಹಿಡಿಯಲಾಗಿದೆ.

ಆರೆಸ್ಸೆಸ್- ಮೋದಿ ಜೋಡಿ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ’ಇತಿಹಾಸವನ್ನು ಉತ್ಖನನ ಮಾಡುವುದು, ಅದನ್ನು ಒಂದು ಪ್ರಾತಿನಿಧಿಕವಾಗಿ ನೋಡದೆ ಹುಗಿದುಹೋದ ನಿಜ ಸಂಗತಿಗಳ ಪುನರ್‌ವ್ಯಾಖ್ಯಾನ ಎಂದು ಮನದಟ್ಟು ಮಾಡಿಸುವುದು’ ಇತಿಹಾಸಕಾರರಿಗೆ ಅಪಾಯವನ್ನು ಆಹ್ವಾನಿಸಿಕೊಂಡಂತಾಗಿದೆ ಮತ್ತು ದೇಶದ್ರೋಹಿಯಾಗುವ ಸಾಧ್ಯತೆಗಳಿವೆ.

ಸಂಘ ಪರಿವಾರದವರು ತಮ್ಮ ಸಿದ್ಧಾಂತಗಳನ್ನು ವಿರೋಧಿಸುವವರ ಮೇಲೆ ದೈಹಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಇತಿಹಾಸ ಮತ್ತು ಸತ್ಯದ ಶೋಧನೆಯಲ್ಲಿರುವವರಿಗೆ ಇದು ಅಗ್ನಿಪರೀಕ್ಷೆಯ ಕಾಲ. ಎಂತಹ ದುರಂತವೆಂದರೆ ಚರ್ಚೆ, ಸಂವಾದಕ್ಕೆ ಗೌರವ ತಂದುಕೊಡಬಲ್ಲ ಆರ್.ಸಿ.ಮುಜುಂದಾರ್‌ರಂತಹ ಬಲಪಂಥೀಯ ಇತಿಹಾಸಕಾರರು ಸಹ ಇಂದು ಅತಿ ವಿರಳವಾಗುತ್ತಿದ್ದಾರೆ.

ತನ್ನ 1984 ಕಾದಂಬರಿಯಲ್ಲಿ ಅರ್ವೆಲ್ ’ಯಾರು ಭೂತಕಾಲವನ್ನು ನಿಯಂತ್ರಿಸುವರೋ, ಅವರು ಭವಿಷ್ಯವನ್ನೂ ನಿಯಂತ್ರಿಸುವರು. ಯಾರು ವರ್ತಮಾನವನ್ನು ನಿಯಂತ್ರಿಸುವರೋ, ಅವರು ಭೂತಕಾಲವನ್ನೂ ನಿಯಂತ್ರಿಸುತ್ತಾರೆ’ ಎಂದು ಎಚ್ಚರಿಸುತ್ತಾನೆ. ಇಂದು ಸಂಘ ಪರಿವಾರ ಬಾಬರಿ ಮಸೀದಿ ಸ್ಥಳವು ಮೂಲದಲ್ಲಿ ರಾಮ ಹುಟ್ಟಿದ ಪವಿತ್ರ ಕ್ಷೇತ್ರ ಎಂಬ ವರ್ತಮಾನದ ನಿರೂಪಣೆಯ ಮೂಲಕ ಭೂತಕಾಲವನ್ನು ನಿಯಂತ್ರಿಸುತ್ತಿದೆ. ಇದು ಇಂದು ಜನಪ್ರಿಯವೂ ಆಗಿರುವುದರಿಂದ ಈಗಿನ ಈ ಕಟ್ಟುಕತೆಯು ಇತಿಹಾಸವಾಗಿ ಪ್ರಸ್ತುತದಲ್ಲಿ ಮರುಹುಟ್ಟು ಪಡೆಯುತ್ತದೆ ಮತ್ತು ವರ್ತಮಾನವನ್ನು ನಿಯಂತ್ರಿಸಿದೆ ಹಾಗೂ ಭವಿಷ್ಯವನ್ನೂ ನಿಯಂತ್ರಿಸುತ್ತದೆ. ಪ್ರಜಾಪ್ರಭುತ್ವದ ಮುಖ್ಯ ಸ್ತಂಭವಾದ ನ್ಯಾಯಾಂಗವೂ ಸಹ ಸಂಘ ಪರಿವಾರ ನಿಯಂತ್ರಿತ ಇತಿಹಾಸದ ವ್ಯಾಖ್ಯಾನವನ್ನು ಮಾನ್ಯ ಮಾಡುತ್ತದೆ. ಜನಸಾಮಾನ್ಯರೂ ಸಹ ನಿಯಂತ್ರಣಗೊಳಲ್ಪಟ್ಟ ವರ್ತಮಾನವನ್ನು ನಂಬುತ್ತಾರೆ ಮತ್ತು ಸ್ವತಃ ತಾವೇ ಮುಂಚೂಣಿಯಲ್ಲಿದ್ದುಕೊಂಡು ಇತಿಹಾಸವನ್ನೂ ತಿದ್ದುಪಡಿ ಮಾಡುತ್ತಾರೆ. ಇದು ಸಂಘ ಪರಿವಾರದ ಯಶಸ್ಸಿಗೆ ಬಹು ಮುಖ್ಯ ಕಾರಣಗಳಲ್ಲೊಂದು. ಇಂದು ಇತಿಹಾಸವು ಗತಕಾಲದ ಸಂಗತಿಯಲ್ಲ. ಅದು ವರ್ತಮಾನ. ಇದು ಸಂಘ ಪರಿವಾರದ ಬಲು ದೊಡ್ಡ ಹತಾರವಾಗಿದೆ.

ಎನ್‌ಸಿಇಆರ್‌ಟಿ ಪಠ್ಯಕ್ರಮ ಮತ್ತು ಅದರಲ್ಲಿನ ಇತಿಹಾಸವು ಬಿಜೆಪಿ ಪಕ್ಷದ ಈ ಪಠ್ಯಪುಸ್ತಕಗಳ ಮತೀಯವಾದೀಕರಣದ ಮೊದಲ ಬಲಿಪಶು. ಎಡಪಂಥೀಯ ಇತಿಹಾಸಕಾರರು ಎರಡನೇ ಬಲಿಪಶುಗಳು. 2019ರಲ್ಲಿ ಮಾರ್ಕ್ಸಿಸ್ಟ್ ಇತಿಹಾಸಕಾರರಾದ ರೊಮಿಲಾ ಥಾಪರ್, ಸತೀಶಚಂದ್ರ, ಬಿಪಿನ್ ಚಂದ್ರ ಅವರನ್ನು ಎನ್‌ಸಿಇಆರ್‌ಟಿ ಬೋರ್ಡನಿಂದ ತೆಗೆದು ಹಾಕಿದ್ದಾರೆ. ಸಂಘ ಪರಿವಾರದ ಅಜೆಂಡಾಗಳಿಗೆ ಅಡ್ಡಿಯಾಗಲಿರುವ ಈ ಮಹತ್ವದ ಇತಿಹಾಸಕಾರರನ್ನು ತಮ್ಮ ಮಾರ್ಗದಿಂದಲೇ ನಿವಾರಿಸಿಕೊಂಡಿದ್ದಾರೆ. ’ವೈಜ್ಞಾನಿಕ ಇತಿಹಾಸ ವರ್ಸಸ್ ಮತೀಯವಾದಿ’ ಇತಿಹಾಸದ ಈ ಸಂಘರ್ಷದಲ್ಲಿ ಸತ್ಯದ ಪರವಾಗಿರುವ ಈ ಮಾರ್ಕ್ಸ್‌ವಾದಿ ಇತಿಹಾಸಕಾರರು ತಮ್ಮ ಸತ್ಯನಿಷ್ಠೆಗಾಗಿ ಬೆಲೆ ತೆರಬೇಕಾಗಿದೆ. ಇದು ಅಧಿಕಾರ ರಾಜಕಾರಣದ ವಿಸ್ತರಣೆಯಾಗಿದೆ. ರೊಮಿಲಾ ಥಾಪರ್ ಧಾರ್ಮಿಕತೆಯ ಹಿಂದೂಯಿಸಂ ಮತ್ತು ರಾಜಕೀಯಗೊಂಡ ಹಿಂದುತ್ವ ಬಹುಸಂಖ್ಯಾತವಾದದ ನಡುವೆ ಇರುವ ಸ್ಪಷ್ಟ ಅಂತರವನ್ನು ಗುರುತಿಸುತ್ತಾರೆ, ಬ್ರಿಟಿಷ್ ಇತಿಹಾಸಕಾರ ಮಿಲ್ಸ್ ಜನಪ್ರಿಯಗೊಳಿಸಿದ ಹಿಂದೂ, ಮುಸ್ಲಿಂ, ಬ್ರಿಟಿಷ್ ಕಾಲ ಎಂದು ಇತಿಹಾಸದ ವರ್ಗೀಕರಣವನ್ನು ಕಟುವಾಗಿ ಟೀಕಿಸುತ್ತಾರೆ, ಆರ್ಯರು ಮತ್ತು ಇಂಡಸ್ ನಾಗರಿಕತೆಯು ಅಥವಾ ಸರಸ್ವತಿ ನಾಗರಿಕತೆಯು ಹಿಂದೂ ಧರ್ಮದ ಮೂಲ ಎನ್ನುವ ಸಂಘ ಸಿದ್ಧಾಂತವನ್ನು ತಿರಸ್ಕರಿಸುತ್ತಾರೆ. ರೊಮಿಲಾ ಥಾಪರ್ ಅವರ ’ವರ್ತಮಾನವನ್ನು ನ್ಯಾಯಬದ್ಧಗೊಳಿಸಲು ಭೂತಕಾಲವನ್ನು ಬಳಸಿಕೊಳ್ಳುವುದಾದರೆ ಆ ಗತಕಾಲದ ಸತ್ಯಶೀಲತೆಯನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ’ ಎನ್ನುವ ಚಿಂತನೆಯು ಸಂಘ ಪರಿವಾರದ ಮತೀಯವಾದೀಕರಣದ ಎಲ್ಲಾ ಹುನ್ನಾರಗಳ ವಂಚನೆಯನ್ನು, ಸುಳ್ಳುಗಳನ್ನು ಬಯಲುಗೊಳಿಸುತ್ತದೆ. ಈ ಕಾರಣಗಳಿಗಾಗಿ ಸಂಘ ಪರಿವಾರಕ್ಕೆ ರೊಮಿಲಾ ಥಾಪರ್ ಮೇಲೆ ಅಸಹನೆಯಿದೆ.

ರೊಮಿಲಾ ಥಾಪರ್

ಕಾವೇರಿ ಬಾಜ್ಮೇಯಿ ಅವರು ’ಹಿಂದಿನ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವಿದ್ದಾಗ ಆರೆಸ್ಸಸ್ ಮತ್ತು ಅದರ ಬೆಂಬಲಿಗರು ರೊಮಿಲಾ ಥಾಪರ್ ಅವರನ್ನು ಜನರ ಶತ್ರು ಎಂದು ಟೀಕಿಸಿದ್ದರು. 2003ರಲ್ಲಿ ಲೈಬ್ರೆರಿ ಆಫ್ ಕಾಂಗ್ರೆಸ್‌ನ ಕ್ಲುಗೆ ಪೀಠಕ್ಕೆ ರೊಮಿಲಾ ಅವರ ನೇಮಕಾತಿಯನ್ನು ವಿರೋಧಿಸಿ 2000 ಸಹಿಗಳುಳ್ಳ ಆನ್‌ಲೈನ್ ಅಭಿಯಾನವನ್ನು ನಡೆಸಲಾಯಿತು. ’ಆಕೆ ಮಾರ್ಕ್ಸವಾದಿ ಮತ್ತು ಹಿಂದೂ ವಿರೋಧಿ’ ಎಂದು ಅಪಪ್ರಚಾರ ಮಾಡಿದರು. ಲೈಬ್ರೆರಿಗೆ ಬರೆದ ಮನವಿಯಲ್ಲಿ ’ಆಕೆ, ಭಾರತಕ್ಕೆ ಒಂದು ಇತಿಹಾಸವಿದೆ ಎನ್ನುವುದನ್ನು ನಿರಾಕರಿಸುತ್ತಾರೆ. ಆ ಪತ್ರದಲ್ಲಿ ’ಹಿಂದೂ ನಾಗರಿಕತೆಯ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ರೊಮಿಲಾ ಥಾಪರ್ ಸಾಂಸ್ಕೃತಿಕ ಹತ್ಯಾಕಾಂಡದ ಯುದ್ಧ ಆರಂಭಿಸಿದ್ದಾರೆ. ಆವರನ್ನು ಆಯ್ಕೆ ಮಾಡುವುದರ ಮೂಲಕ ಅಮೆರಿಕವು ಥಾಪರ್ ಅವರ ಈ ಪ್ರಯತ್ನಕ್ಕೆ ಸಹಾಯ ಮಾಡಿದಂತಾಗುತ್ತದೆ’ ಎಂದು ಬರೆದಿದ್ದರು. ಆದರೆ ಈ ಮನವಿಗೆ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. ಆಗಿನ ಎನ್‌ಡಿಎ ಸರಕಾರವು ರೊಮಿಲಾ ಥಾಪರ್ ಅವರ ಗಮನಕ್ಕೆ ತಾರದೆ ಪ್ರಾಚೀನ ಭಾರತದಲ್ಲಿ ಬೀಫ್ ಆಹಾರ ಸೇವನೆ ಮತ್ತು ಜಾತಿಯ ರಚನೆ ಕುರಿತಾದ ಪಠ್ಯಗಳನ್ನು ತೆಗೆದು ಹಾಕಿದ್ದರು. ಆಗ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಥಾಪರ್ ’ಇದು ಎಡ ವರ್ಸಸ್ ಬಲದ ನಡುವಿನ ಸಂಘರ್ಷವಲ್ಲ, ಬದಲಿಗೆ ವೃತಿಪರ ಇತಿಹಾಸಕಾರರು ಮತ್ತು ಹಿಂದುತ್ವದ ಪರವಾದ ಅನುಕಂಪವುಳ್ಳ ರಾಜಕಾರಣಿಗಳ ನಡುವಿನ ಘರ್ಷಣೆ’ ಎನ್ನುವ ಹೇಳಿಕೆ ನೀಡಿದ್ದರು. ಇದಾಗಿ ಇಪ್ಪತ್ತು ವರ್ಷಗಳಾದರೂ ಸಹ ಯಾವುದೇ ಬದಲಾವಣೆಯಾಗಿಲ್ಲ.’ ಎಂದು ಅವರು ಬರೆಯುತ್ತಾರೆ.

ಉಪಸಂಹಾರ

ಶಿಕ್ಷಣದಲ್ಲಿ ಪಠ್ಯಗಳ ಆಯ್ಕೆ, ಪಠ್ಯಪುಸ್ತಕಗಳ ರಚನೆ, ಪಠ್ಯಕ್ರಮ, ಬೋಧನ ವಿಧಾನ, ಕಲಿಕಾ ವಿಧಾನಗಳನ್ನು ಒಳಗೊಂಡ ಇತಿಹಾಸದ ವ್ಯಾಸಂಗಕ್ರಮವು ಪ್ರಾಮಾಣಿಕವಾಗಿರಬೇಕು, ಪೂರ್ವಗ್ರಹಪೀಡಿತವಾಗಿರಬಾರದು, ವಸ್ತುನಿಷ್ಟವಾಗಿರಬೇಕು, ವ್ಯಕ್ತಿ, ಧರ್ಮ, ಜಾತಿನಿಷ್ಟವಾಗಿರಬಾರದು ಎನ್ನುವುದು ಮೇಲಿನ ವಿಚಾರಗಳ ಒಟ್ಟು ತಿರುಳು. ಸತ್ಯ ಸಂಗತಿಗಳಿಲ್ಲದ, ಸಾಕ್ಷಿಗಳಿಲ್ಲದ ಇತಿಹಾಸವು ಬಹುದಿನಗಳ ಕಾಲ ಚಾಲ್ತಿಯಲ್ಲಿರುವುದಿಲ್ಲ. ಸತ್ಯವು ನಿರ್ಣಾಯಕ ಪಾತ್ರವಾಗುವ ವಸ್ತುನಿಷ್ಠತೆ ಇತಿಹಾಸದ ಅಭಿವ್ಯಕ್ತಿ. ಪ್ರಾಮಾಣಿಕ ಇತಿಹಾಸಕಾರರಿಗೆ causation,
periodisation and transition ಮುಖ್ಯವಾಗುತ್ತದೆ. ಆಗ ಮಾತ್ರ ನಮಗೆ ನಿಜದ ಇತಿಹಾಸ ಪರಿಚಯವಾಗುತ್ತದೆ. ಆದರೆ ಸಂಘ ಪರಿವಾರದ ಪ್ರಣಾಳಿಕೆಯಲ್ಲಿ ಈ ಮಾದರಿಯ ಅಧ್ಯಯನಕ್ಕೆ ಸ್ಥಾನವಿಲ್ಲ. ಅಲ್ಲಿ ಕೇವಲ ಸಿದ್ಧಾಂತನಿಷ್ಠೆ ಮತ್ತು ವ್ಯಕ್ತಿನಿಷ್ಠೆಯ ವೈಭವೀಕರಣದಿಂದ ತುಳುಕಾಡುತ್ತಿರುತ್ತದೆ. ಈ ವ್ಯಕ್ತಿನಿಷ್ಠೆ ಮಾದರಿಯಲ್ಲಿ ಒಂದು ಧರ್ಮದ ವಿರುದ್ಧ, ತಳ ಸಮುದಾಯಗಳ ವಿರುದ್ಧದ ಪೂರ್ವಗ್ರಹವು ನಿರ್ಣಾಯಕವಾಗುತ್ತದೆ. ಈ ವ್ಯಕ್ತಿನಿಷ್ಠ ಇತಿಹಾಸವನ್ನು ಬಲವಾಗಿ ಪ್ರತಿಪಾದಿಸುವ ಸಂಘಪರಿವಾರವು ಆ ಮೂಲಕ ಪೂರ್ವಗ್ರಹಪೀಡಿತ, ದ್ವೇಷದ ದೃಷ್ಟಿಕೋನವನ್ನು ಬೆಳೆಸುತ್ತದೆ. ಸಾಮಾನ್ಯ ಇತಿಹಾಸ ಮತ್ತು ಸಂಶೋಧಿತ ಇತಿಹಾಸದ ನಡುವೆ ವ್ಯತ್ಯಾಸಗಳಿವೆ. ಏಕರೂಪಿ, ಏಕಪಕ್ಷೀಯವಾಗಿರುವುದು ಸಾಮಾನ್ಯ ಇತಿಹಾಸವಾದರೆ, ವಿಶ್ಲೇಷಣೆ, ವಿಮರ್ಶೆ, ಸಮತೂಕದ ನಿಲುವು, ವೈಜ್ಞಾನಿಕ ಮನೋಧರ್ಮವು ಸಂಶೋಧಿತ ಇತಿಹಾಸದ ತಾತ್ಪರ್ಯ. ನಮ್ಮ ಮಕ್ಕಳಿಗೆ ಇತಿಹಾಸ, ಭೂಗೋಳ ಮುಂತಾದ ವಿಷಯಗಳಲ್ಲಿ ಮುಖ್ಯವಾದ ಅಧ್ಯಾಯಗಳನ್ನು ಈ ಸಂಶೋಧಿತ ಇತಿಹಾಸದ ನೆಲೆಯಲ್ಲಿ ಕಲಿಸದೇ ಹೋದರೆ ಅವರು ಸಮಾನತೆ, ಸಮತೆ, ಬಹುತ್ವವನ್ನು ಗ್ರಹಿಸುವುದಿಲ್ಲ, ಪರಸ್ಪರ ಧರ್ಮಗಳನ್ನು ಗೌರವಿಸುವುದಿಲ್ಲ, ಮನುಷ್ಯರನ್ನು ಗೌರವಿಸುವುದಿಲ್ಲ, ಸಂವಿಧಾನವನ್ನು ಸಹ ಗೌರವಿಸುವುದಿಲ್ಲ. ಸಂಘ ಪರಿವಾರದ ಇತಿಹಾಸದ ಸಾಮಾನ್ಯೀಕರಣದ ಈ ಅಪಾಯಕಾರಿ ನಡೆಯಿಂದ ಬಹುಸಂಖ್ಯಾತ ಹಿಂದೂ ಧರ್ಮದ ಮಕ್ಕಳು ತಮ್ಮ ಧರ್ಮವೇ ಶ್ರೇಷ್ಠ ಎನ್ನುವ ಸಿಂಡ್ರೋಮ್‌ಗೆ ಬಲಿಯಾಗುತ್ತಾರೆ, ಅದೇ ಸಂದರ್ಭದಲ್ಲಿ ಇತರೇ ಧರ್ಮದವರನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ. ಇದರಿಂದ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗುತ್ತದೆ. ವಿಷಗಾಳಿ ಈಗಾಗಲೇ ಹಬ್ಬಿಕೊಂಡಿದೆ. ಮುಂದಿನ ತಲೆಮಾರುಗಳ ಮೂಲಕ ಈ ದ್ವೇಷದ ಜ್ವಾಲೆ ಶಾಶ್ವತವಾಗಿ ಇಲ್ಲಿನ ಬಹು ಸಂಸ್ಕೃತಿಯನ್ನು ಸುಟ್ಟು ಬೂದಿ ಮಾಡುತ್ತಲೇ ಇರುತ್ತದೆ.

(’ಕ್ರಿಯಾ ಮಾಧ್ಯಮ’ ಪ್ರಕಾಶನದಿಂದ ಪ್ರಕಟಣೆಗೆ ಸಿದ್ಧವಾಗುತ್ತಿರುವ ಹೊಸ ಪುಸ್ತಕ ’ಪಠ್ಯಪುಸ್ತಕದ ಮತೀಯವಾದೀಕರಣ 3.0’ದಲ್ಲಿನ ಒಂದು ಲೇಖನದಿಂದ ಆಯ್ದ ಭಾಗ)

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...