Homeಮುಖಪುಟಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

- Advertisement -
- Advertisement -

“ಆ ಮರದ ಕೆಳಗೆ ಒಬ್ಬ ಗಾರ್ಡ್ ನಿಂತಿದ್ದಾನಲ್ಲ, ಯಾಕೆ ಅಂತಾ ಗೊತ್ತಾ? ಕಂದಸ್ವಾಮಿ ಅಂತ ಒಬ್ಬ ಕಮಾಂಡೆಂಟ್‌ ಇದ್ದರು. ತುಂಬಾ ಭಕ್ತಿ ಇದ್ದ ಮನುಷ್ಯ. ರೋಡಲ್ಲಿ ಕಲ್ಲು ನೋಡಿದ್ರು ಕೈಯೆತ್ತಿ ಮುಗಿಯುತ್ತಿದ್ದರು. ಅವರು ಮತ್ತು ನಾನು ಮಾತನಾಡಿಕೊಂಡು ಬರುವಾಗ, ಆ ಜಾಗದಲ್ಲಿ ಒಂದು ಬೇವಿನ ಮರ ಇದ್ದರೆ ಹೇಗಿರುತ್ತದೆ ಎಂದು ಕೇಳಿದರು. ನಾನು ಚೆನ್ನಾಗಿರುತ್ತೆ ಸರ್‌ ಅಂದೆ. ಅಲ್ಲಿ ಗಿಡ ನೆಡಲು ಹೇಳಿದರು. ನಾನು ನೆಟ್ಟೆ. ನೆಟ್ಟಿ ಎರಡೇ ದಿನಕ್ಕೆ ಮೇಕೆ ತಿಂದುಕೊಂಡು ಹೋಯ್ತು. ಅವರು ಕೋಪ ಮಾಡಿಕೊಂಡು ಅದನ್ನು ಕಾಯುವುದಕ್ಕೆ ಒಬ್ಬ ಗಾರ್ಡ್‌ನ ನೇಮಿಸಿದರು. 12 ವರ್ಷಕ್ಕೆ ಮುಂಚೆ ಆ ಸಸಿಯನ್ನು ಕಾಯುವುದಕ್ಕಾಗಿ ಹಾಕಿದ ಪೋಸ್ಟಿಂಗ್ ಅದು. ಸಸಿ ಬೆಳೆದು ಮರವಾಯ್ತು. ಆದರೆ ಗಾರ್ಡ್ ಮಾತ್ರ ಇನ್ನು ಇದ್ದಾರೆ. ಮೊದಲು ನೇಮಿಸಿದ ಗಾರ್ಡ್ ಸತ್ತು ಹೋದಾಗ ಹೊಸ ಗಾರ್ಡ್ ನೇಮಿಸಿದ್ದಾರೆ. ಆಮೇಲೆ ಬಂದ ಅಧಿಕಾರಿಗಳು ಕೂಡ ಆ ಗಾರ್ಡ್‌ ನನ್ನು ಅಲ್ಲಿಂದ ತೆಗೆಯಲೇ ಇಲ್ಲ. ಅಲ್ಲಿ ನಿಂತಿರುವ ಗಾರ್ಡ್‌ಗೂ ಯಾಕೆ ನಿಂತಿದ್ದೀನಿ ಅಂತಾನೂ ಗೊತ್ತಿಲ್ಲ. ಗಾರ್ಡ್‌ನ ನೇಮಿಸುವವರಿಗೂ ಅಲ್ಲಿಗೆ ಯಾಕೆ ಪೋಸ್ಟಿಂಗ್‌ ಮಾಡುತ್ತಿದ್ದೇವೆ ಅಂತಾನೂ ಗೊತ್ತಿಲ್ಲ. ಇಲ್ಲಿ ಯಾವ ಪ್ರಶ್ನೆಯನ್ನು ಕೇಳುವುದಕ್ಕೆ ಆಗಲ್ಲ. ಕೇಳುದ್ರೆ ಉತ್ತರಾನೂ ಸಿಗಲ್ಲ…”

ತಮಿಳಿನಲ್ಲಿ ಮೂಡಿಬಂದಿರುವ ಹಾಗೂ ಕನ್ನಡಕ್ಕೂ ಡಬ್‌ ಆಗಿರುವ ‘ಠಾಣಾಕ್ಕಾರನ್‌’ ಸಿನಿಮಾದ ದೃಶ್ಯವೊಂದರ ಸಂಭಾಷಣೆ ಇದು. ಬಹಳ ವರ್ಷಗಳ ಹಿಂದೆ ಅವ್ಯಾಚ್ಯವಾಗಿ ನಿಂದಿಸಿದ  ಪೊಲೀಸ್ ಮೇಲಾಧಿಕಾರಿಗೆ ಹೊಡೆದ ಕಾರಣಕ್ಕೆ ಜೀವನವಿಡೀ ಪ್ರಮೊಷನ್‌ ಪಡೆಯದ ಹಿರಿಯ ಕಾನ್‌ಸ್ಟೇಬಲ್‌ ಸೆಲ್ಲಕಣ್ಣು (ಎಂ.ಎಸ್.ಭಾಸ್ಕರ್‌), ಪೊಲೀಸ್‌ ತರಬೇತಿ ಪಡೆಯುತ್ತಿರುವವರಿಗೆ ಹೇಳುವ ಮಾತಿದು.

1857ರಲ್ಲಿ ಸಿಪಾಯಿದಂಗೆ ಸಂಭವಿಸಿದ ನಂತರ ಬ್ರಿಟಿಷ್ ಸರ್ಕಾರವು ಭಾರತೀಯರನ್ನು ನಿಯಂತ್ರಿಸಲು ನಿರ್ಧರಿಸಿತು. ಆಗ ಭಾರತೀಯ ಯುವಕರ ದೊಡ್ಡ ಪೊಲೀಸ್ ಪಡೆಯನ್ನು ಬ್ರಿಟಿಷರು ರಚಿಸಲು ಯೋಚಿಸಿದರು. 1861ರಲ್ಲಿ ಭಾರತದಲ್ಲಿನ ಗಟ್ಟಿಮುಟ್ಟಾದ ಯುವಕರನ್ನು ಬಲವಂತವಾಗಿ ಪೊಲೀಸ್ ಪಡೆಗೆ ನೇಮಿಸಲಾಯಿತು. ಅವರಿಗೆ ಯುದ್ಧಭೂಮಿ ಹಾಗೂ ಶಸ್ತ್ರಗಳ ತರಬೇತಿಯನ್ನು ಬ್ರಿಟಿಷ್ ಸರ್ಕಾರ ನೀಡಿತು. ಭಾರತೀಯ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಅವರು ದೇಶದ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಯೋಚಿಸಬಾರದೆಂದು ಹಲವಾರು ತಂತ್ರಗಳನ್ನು ರೂಪಿಸಿದರು.

ಇದನ್ನೂ ಓದಿರಿ: ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ಕುಟುಂಬವನ್ನು ಭೇಟಿಯಾಗಲು, ಓದಲು, ಬರೆಯಲು ಅವಕಾಶವಿರಲಿಲ್ಲ. ಆಜ್ಞೆಗಳು ಹಾಗೂ ಆದೇಶಗಳನ್ನು ಭಾರತೀಯ ಯುವಕರು ಪಾಲಿಸಲೆಂದು ಪರೇಡ್ ಎಂಬ ಹೆಸರಿನ ಸೈನಿಕರ ಡ್ರಿಲ್‌ ಪರಿಚಯಿಸಲಾಯಿತು. ತರಬೇತಿಯನ್ನು ಉಲ್ಲಂಘಿಸುವವರಿಗೆ ‘ಇ.ಡಿ.’ (ಪನೀಶ್‌ಮೆಂಟ್‌ ಡ್ರಿಲ್‌) ಥರದ ಶಿಕ್ಷೆಗಳನ್ನು ನೀಡಿ ಕ್ರೂರವಾಗಿ ಹಲ್ಲೆ ಮಾಡಲಾಯಿತು. ಸಹಿಸಲಾರದವರು ತರಬೇತಿ ಶಾಲೆ ಬಿಟ್ಟು ಓಡಿ ಹೋದರು; ಕೆಲವರು ಆತ್ಮಹತ್ಯೆ ಮಾಡಿಕೊಂಡರು. ಆದರೂ ಬ್ರಿಟಿಷ್‌ ಸರ್ಕಾರವು ತರಬೇತಿ ಅಧಿವೇಶಗಳನ್ನು ಮುಂದುವರಿಸಲು ನಿರ್ಧರಿಸಿತು.

ಪೊಲೀಸ್ ತರಬೇತಿ ಪಡೆಯುತ್ತಿದ್ದ ಯುವಕರನ್ನು ಉತ್ತೇಜಿಸುವ ಸಲುವಾಗಿ ತರಬೇತಿ ಶಾಲೆಗಳಲ್ಲಿ ಅಧಿಕಾರಿಗಳು ಸ್ಪರ್ಧೆಗಳನ್ನು ಜಾರಿಗೆ ತಂದರು. ಗೆದ್ದವರಿಗೆ ಬಿರುದು ಹಾಗೂ ಗೌರವಗಳನ್ನು ನೀಡಲಾಯಿತು. ಸೋತವರಿಗೆ ತರಬೇತಿ ಅವಧಿಯನ್ನು ವಿಸ್ತರಿಸಲಾಯಿತು. ಪೊಲೀಸ್‌ ಪಡೆಯಲ್ಲಿ ಸೇರಿದ ಯುವಕರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಯೋಚಿಸದಂತೆ ನೋಡಿಕೊಳ್ಳಲಾಯಿತು. ತರಬೇತಿ ಆಧಾರಿತ ಸ್ಪರ್ಧಾತ್ಮಕತೆಯ ಬಗ್ಗೆ ಯೋಚಿಸುವಂತೆ ಪ್ರೊತ್ಸಾಹಿಸಲಾಯಿತು.

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಪೊಲೀಸ್ ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು. ಆದರೆ ಇಂದಿಗೂ ಕೆಲವು ವಿಷಯಗಳು ಹಾಗೆಯೇ ಉಳಿದಿವೆ. ಅವುಗಳಲ್ಲಿ ಬ್ರಿಟಿಷ್ ಅವಧಿಯಲ್ಲಿ ರಚಿಸಲಾದ ತರಬೇತಿಗಳು ಹಾಗೂ ಸ್ಪರ್ಧೆಗಳು ಕೂಡ ಸೇರಿವೆ. ಇಂತಹ ವಿಷಯವನ್ನು ಒಳಗೊಂಡಿರುವ ಕಥೆಯೇ ‘ಠಾಣಾಕ್ಕರನ್‌’.

ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂಡಿ ಬರುತ್ತಿರುವ ಪೊಲೀಸ್ ಕೇಂದ್ರಿತ ಕಥೆಗಳು ವಿಭಿನ್ನವಾಗಿವೆ. ಅಸಹಾಯಕರನ್ನು ರಕ್ಷಿಸುವ ‘ಹಿರೋಯಿಸಂ’ ಪ್ರಧಾನ ಪೊಲೀಸ್ ಕಥೆಗಳು ಒಂದು ಕಡೆಯಾದರೆ, ಪೊಲೀಸ್ ವ್ಯವಸ್ಥೆಯೊಳಗಿನ ಶ್ರೇಣಿಕೃತ ವ್ಯವಸ್ಥೆ, ಜಾತಿ ತಾರತಮ್ಯ, ಮೇಲಾಧಿಕಾರಿಗಳ ರಕ್ಷಣೆಗಾಗಿ ಅಮಾಯಕರ ಬಲಿ, ಒತ್ತಡ ಮೊದಲಾದ ವಿಷಯಗಳನ್ನು ಕೇಂದ್ರೀಕರಿಸಿರುವ ಸಿನಿಮಾಗಳು ಮತ್ತೊಂದು ಕಡೆ ಇವೆ.

ವೆಟ್ರಿಮಾರನ್‌ ನಿರ್ದೇಶನದ ‘ವಿಸಾರಣೈ’, ಟಿ.ಜೆ.ಜ್ಞಾನವೇಲ್‌ರವರ ‘ಜೈ ಭೀಮ್‌’, ಫ್ರಾಂಕ್ಲಿನ್‌ ಜಾಕಬ್‌ ನಿರ್ದೇಶಿಸಿದ ‘ರೈಟರ್‌’ ಎರಡನೇ ವರ್ಗಕ್ಕೆ ಸೇರಿವೆ. ಈ ಪರಂಪರೆಯನ್ನು ‘ಠಾಣಾಕ್ಕರನ್‌’ ಮುಂದುವರಿಸಿದೆ. ಖ್ಯಾತ ನಟ ‘ತಮಿಳ್’ ನಿರ್ದೇಶಿಸಿರುವ ‘ಠಾಣಾಕ್ಕಾರನ್‌’ ಡಿಸ್ನಿ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ.

12 ವರ್ಷಗಳ ಕಾಲ ಪೊಲೀಸ್‌ ಆಗಿದ್ದ‘ತಮಿಳ್‌‘’ ನಂತರ ಚಿತ್ರರಂಗದತ್ತ ಆಸಕ್ತಿ ತೆಳೆದರು. ವೆಟ್ರಿಮಾರನ್‌ ನಿರ್ದೇಶನದ ‘ವಿಸಾರಣೈ’ಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ‘ಜೈ ಭೀಮ್‌’ ಸಿನಿಮಾದಲ್ಲಿ ಕ್ರೂರ ಪೊಲೀಸ್ ಅಧಿಕಾರಿಯಾಗಿಯೂ ಅಭಿನಯಿಸಿದರು. ವೆಟ್ರಿಮಾರನ್ ನಿರ್ದೇಶನದ ಮುಂಬರುವ ಚಿತ್ರ ‘ವಿಡುತಲೈ’ನಲ್ಲಿ ಮತ್ತೆ ಖಾಕಿ ಧರಿಸಿದ್ದಾರೆ. ಹೀಗೆ ಪೊಲೀಸ್ ವ್ಯವಸ್ಥೆ ಮತ್ತು ತಮಿಳ್‌- ನಡುವೆ ಅವಿನಾಸಂಬಂಧ ಇರುವುದು ‘ಠಾಣಾಕ್ಕಾರನ್‌’ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ತಾವು ಪೊಲೀಸ್ ಕಾನ್‌ಸ್ಟೇಬಲ್‌‌ ಆಗಿ ಪಡೆದ ಅನುಭವಗಳನ್ನು ಸಿನಿಮಾವಾಗಿಸಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿರಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

‘ಠಾಣಾ’ ಎಂಬುದು ಮರಾಠಿ ಪದವಾಗಿದ್ದು, ಚೆಕ್‌ಪೋಸ್ಟ್ ಅಥವಾ ಪೊಲೀಸ್ ಠಾಣೆ ಎಂಬ ಅರ್ಥವನ್ನು ಹೊಂದಿದೆ. 1857ರ ಸಿಪಾಯಿ ದಂಗೆಯ ನಂತರ ಬ್ರಿಟಿಷರು, ಭಾರತೀಯರನ್ನು ಪೊಲೀಸ್ ಸೇವೆಗೆ ನೇಮಿಸಿಕೊಳ್ಳಲು ಪ್ರಾರಂಭಿಸಿದಾಗ, ಪೊಲೀಸರನ್ನು ‘ಥಾನಸ್’ ಎಂದು ಕರೆಯಲಾಯಿತು. ಇಂದಿಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ‘ಠಾಣಾ ಲೇನ್’ಗಳನ್ನು ಕಾಣಬಹುದು.

“ಭಾರತೀಯ ಪೊಲೀಸ್ ಪಡೆ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದನ್ನು ವಿವರಿಸುವ ಮೂಲಕ ನಾನು ಕಥೆಯನ್ನು ಪ್ರಾರಂಭಿಸುತ್ತೇನೆ. ಹಾಗಾಗಿ ಚಿತ್ರಕ್ಕೆ ‘ಠಾಣಾಕ್ಕಾರನ್’ ಎಂದು ಟೈಟಲ್ ಇಟ್ಟರೆ ಉತ್ತಮವೆನಿಸಿತು. ನಾನು ಸ್ಕ್ರಿಪ್ಟ್ ಬರೆಯಲು ಮುಂದಾದಾಗ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪೊಲೀಸರನ್ನು ‘ಠಾಣಾಕ್ಕರನ್’ ಎಂದಿರುವುದನ್ನು ಗಮನಿಸಿದೆ” ಎಂದು ತಮಿಳ್‌ ಹೇಳುತ್ತಾರೆ.

ನಿರ್ದೇಶಕ ತಮಿಳ್‌

ಸಿನಿಮಾದ ಕಥೆಯು 1998ರಲ್ಲಿ ಕಾಲಘಟ್ಟಕ್ಕೆ ಹೋಗುತ್ತದೆ. 40ರ ಹರೆಯದ ಸುಮಾರು ನೂರು ಮಂದಿ ಹೊಸ ಅಭ್ಯರ್ಥಿಗಳು ಯುವಕರೊಂದಿಗೆ ತರಬೇತಿ ಪಡೆಯುತ್ತಾರೆ. ಇದು ನಿಜ ಜೀವನದಲ್ಲೂ ನಡೆದ ಘಟನೆಯಾಗಿದೆ. 1982ರಲ್ಲಿ ತಮಿಳುನಾಡು ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಿದ್ದರಿಂದ ಸುಮಾರು 1,300 ಅಭ್ಯರ್ಥಿಗಳು ಪೊಲೀಸ್ ಪಡೆಗೆ ಸೇರಲು ಸಾಧ್ಯವಾಗಲಿಲ್ಲ ಎಂಬ ವಿಷಯವನ್ನು ಸಿನಿಮಾ ಪ್ರಸ್ತಾಪಿಸುತ್ತದೆ. ಆದರೆ ನಿಜಜೀವನದಲ್ಲಿ ರಾಜ್ಯ ಸರ್ಕಾರದ ವಜಾ 1991ರಲ್ಲಿ ಆಯಿತು. ಆ ಸಮಯದಲ್ಲಿ ಸುಮಾರು 1,800 ಅಭ್ಯರ್ಥಿಗಳು ಪೊಲೀಸ್ ಪಡೆಗೆ ಆಯ್ಕೆಯಾಗಿದ್ದರು.

“1991ರಲ್ಲಿ ಅಧಿಕಾರಕ್ಕೆ ಬಂದ ಎಐಎಡಿಎಂಕೆ 1993ರಲ್ಲಿ ಸುಮಾರು 2,500 ಅಭ್ಯರ್ಥಿಗಳನ್ನು ಆಯ್ಕೆ ಮಾಡಿತು. ಆ ನಡೆಯನ್ನು ವಿರೋಧಿಸಿ, ಈಗಾಗಲೇ ಉದ್ಯೋಗಕ್ಕಾಗಿ ಕಾಯುತ್ತಿದ್ದವರು ನ್ಯಾಯಾಲಯದ ಮೊರೆ ಹೋಗಿದ್ದರು. ಡಿಎಂಕೆ ಸರ್ಕಾರ ಮರಳಿ ಅಧಿಕಾರಕ್ಕೆ ಬಂದ ನಂತರ, ಅನ್ಯಾಯಕ್ಕೊಳಗಾದವರಿಗೆ ಅಂತಿಮವಾಗಿ 1998ರಲ್ಲಿ ನೇಮಕಾತಿ ನೀಡಿತು. ಸಹಜವಾಗಿ, ಆ ಅಭ್ಯರ್ಥಿಗಳಿಗೆ ಹೆಚ್ಚು ವಯಸ್ಸಾಗಿತ್ತು. ದೈಹಿಕ ಸಾಮರ್ಥ್ಯ ಕಡಿಮೆಯಾಗಿತ್ತು. ನಾನು 2002ರಲ್ಲಿ ಪೊಲೀಸ್‌ ಪಡೆಗೆ ಸೇರಿದೆ. ನನ್ನ ತರಬೇತಿಯ ಸಮಯದಲ್ಲಿ, ಅನೇಕ ಹಿರಿಯರು ತಮ್ಮ ಅನುಭವಗಳನ್ನು ಹೇಳುತ್ತಿದ್ದರು. ಆ ವಿಷಯಗಳನ್ನು ನನ್ನ ಕಥೆಯಲ್ಲಿ ಸೇರಿಸಿಕೊಂಡಿದ್ದೇನೆ” ಎಂದಿದ್ದಾರೆ ತಮಿಳ್‌.

ಪೊಲೀಸ್ ತರಬೇತಿ ಪೂರ್ಣಗೊಳಿಸಲು ನಡೆಯುವ ಅಧಿಕಾರಿಗಳ ಭ್ರಷ್ಟಾಚಾರ, ಮೇಲಧಿಕಾರಿಗಳ ತರಾಟೆ, ಈಗಾಗಲೇ 40 ವರ್ಷ ದಾಟಿದ ಮೇಲೆ ಪೊಲೀಸ್‌ ಆಗಲು ಬಂದವರ ಕಷ್ಟ, ಪೊಲೀಸ್ ತರಬೇತಿ ಶಾಲೆ (ಪಿಆರ್‌ಎಸ್‌)ಯ ಅಧಿಕಾರಿಗಳ ದರ್ಪ, ಶಿಸ್ತಿನ ಹೆಸರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಮೇಲಧಿಕಾರಿಗಳನ್ನು ಪ್ರಶ್ನಿಸಿದರೆ ಇ.ಡಿ. ಥರದ ಕಠಿಣ ಶಿಕ್ಷೆ ಇತ್ಯಾದಿ ಸಂಗತಿಗಳ ಕುರಿತು ‘ಠಾಣಾಕ್ಕಾರನ್‌’ ಬೆಳಕು ಚೆಲ್ಲುತ್ತದೆ. ಸಿನಿಮೀಯ ಶೈಲಿಗೆ ಇಡೀ ಪೊಲೀಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಒಗ್ಗಿಸಲಾಗಿದೆ.

ಕಾರ್ಲ್‌‌ಮಾರ್ಕ್ಸ್ ಕುರಿತ ಪುಸ್ತಕವಿಡಿದ ಯುವಕ ‘ಅರಿವು’  (ವಿಕ್ರಮ್‌ ಪ್ರಭು) ತಾರತಮ್ಯವನ್ನು ಸಹಿಸದವನು. ಸ್ಕ್ವಾಡ್‌ ಎಡಿಐ ಈಶ್ವರಮೂರ್ತಿಯವರ (ಲಾಲ್‌) ದೌರ್ಜನ್ಯಗಳನ್ನು ಕಣ್ಣಾರೆ ಕಂಡು ಕುಪಿತಗೊಂಡವನು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಸಮಸ್ಯೆಗಳನ್ನು ಎದುರಿಸುವವನು. ಎಲ್ಲ ತಾರತಮ್ಯವನ್ನು ಮೆಟ್ಟಿ ನಿಲ್ಲುವ ಛಲವಂತ… ಹೀಗೆ ಅಂತಿಮ ಸ್ಪರ್ಧೆಯಲ್ಲಿ ತನ್ನ ಇಡೀ ಸ್ಕ್ವಾಡ್‌ಅನ್ನು ಹುರಿದುಂಬಿಸಿ, ಗೆರಿಲ್ಲಾ ತಂತ್ರಗಳನ್ನು ಬಳಸಿ ಈಶ್ವರಮೂರ್ತಿಯವರಿಗೆ ಸೆಡ್ಡು ಹೊಡೆಯುತ್ತಾನೆ.

ಒಂದೆರಡು ದೃಶ್ಯಗಳನ್ನು ಬಿಟ್ಟರೆ ಇಡೀ‌ ಸಿನಿಮಾ ಪೊಲೀಸ್ ತರಬೇತಿ ಶಾಲೆಯೊಳಗೆ ಚಿತ್ರೀಕರಣವಾಗಿದೆ. ರೈಟರ್‌ ಹಾಗೂ ವಿಸಾರಣೈ ಥರದಲ್ಲಿ ಕಥೆಯನ್ನು ತೀರಾ ಕಲಾತ್ಮಕವಾಗಿಸದೆ, ನವಿರಾದ ಸಂಭಾಷಣೆ ಹಾಗೂ ಕಥೆಗೆ ಓಗಕ್ಕೆ ತೊಡಕಾಗದಂತೆ ಕಿರು ಪ್ರೇಮ ಪ್ರಸಂಗವನ್ನೂ ಎಣೆಯಲಾಗಿದೆ. ಪೊಲೀಸ್ ತರಬೇತಿ ಶಾಲೆಯಲ್ಲಿನ ಮಹಿಳಾ ಪೇದೆ ಈಶ್ವರಿ (ಅಂಜನಿ ನಾಯರ್‌), ‘ಅರಿವು’ ತೋರುವ ಕ್ರಾಂತಿಕಾರಿತನ ಹಾಗೂ ಛಲವನ್ನು ಇಷ್ಟಪಡುತ್ತಾಳೆ. ಈಶ್ವರಿ ಪಾತ್ರವನ್ನು ಕಥೆಯೊಳಗೆ ತುರುಕಲಾಗಿದೆ ಎಂದೇನೂ ಅನಿಸುವುದಿಲ್ಲ.

ಅಂತಿಮ ಸ್ಪರ್ಧೆಯಲ್ಲಿ ಗೆದ್ದರೂ ಮೆಡಲ್‌ ವಂಚಿತರಾಗುವ ‘ಅರಿವು’ ತಂಡಕ್ಕೆ ಇನ್‌ಸ್ಪೆಕ್ಟರ್ ಮಾತಿ (ಬೋಸ್‌ ವೆಂಕಟ್‌) ತಿಳಿಸುವ ಮಾತುಗಳು ಇಡೀ ಸಿನಿಮಾದ ಕೊನೆಯ ಸಂದೇಶ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯವನ್ನು ನೆನಪಿಸುವ ಮಾತಿ, “ಈ ಸಿಸ್ಟಮ್‌ ಇದೆಯಲ್ಲ, ಒಬ್ಬ ರಾಕ್ಷಸ ಬ್ರಿಟಿಷ್ ಅಧಿಕಾರಿಗೂ ಒಬ್ಬ ರಾಜಕಾರಣಿಗೂ ಹುಟ್ಟಿರುವ ಕೂಸು. ಇಲ್ಲಿ ಪ್ರಾಮಾಣಿಕವಾಗಿ ಇರಬೇಕೆಂದು ಬಂದವನು ಕಷ್ಟಪಡುತ್ತಾನೆ. ನಾವು ಅದನ್ನು ಬದಲಾಯಿಸಬೇಕು. ಅಧಿಕಾರವನ್ನು ಕೈಗೆ ತೆಗೆದುಕೊಳ್ಳಬೇಕು. ಕಾನೂನು ಬರೆದಿರುವ ಅಂಬೇಡ್ಕರ್‌ ಹೇಳಿದಿದ್ದು. ನೀನು ಸ್ಪರ್ಧೆಯಲ್ಲಿ ತೋರಿಸಿರುವ ವೀರತನವನ್ನು ಕೆಲಸದಲ್ಲಿ ತೋರು. ಒಬ್ಬ ಐಪಿಎಸ್ ಆಫೀಸರ್‌ ಆಗ್ತೀಯ. ಮೆಡಲ್‌ಗಾಗಿ ಆಸೆಪಟ್ಟರೆ ಈಶ್ವರಮೂರ್ತಿಯ ರೀತಿ ಪೊಲೀಸ್ ಆಗಿರುತ್ತೀಯ ಬಿಟ್ಟರೆ, ಜನರಿಗೆ ಬೇಕಾಗಿರುವ ಪೊಲೀಸ್ ಆಗಲ್ಲ” ಎನ್ನುತ್ತಾರೆ.

ಹೀಗೆ ಬ್ರಿಟಿಷ್ ಕಾಲದ ಪೊಲೀಸ್ ವ್ಯವಸ್ಥೆಯ ಕುರಿತು ತಮಿಳ್‌ರವರ ‘ಠಾಣಾಕ್ಕಾರನ್‌’ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಗತಕಾಲದ ಪೊಲೀಸ್ ನಿಯಮಗಳನ್ನು ಈಗಲೂ ಮುಂದುವರಿಸುತ್ತಿರುವುದನ್ನು ಚರ್ಚೆಗೆ ತರುತ್ತದೆ.

ಕಥಾನಾಯಕ ಫ್ಲಾಶ್‌ಬ್ಯಾಕ್‌ ದೃಶ್ಯ ಅಗತ್ಯವಿತ್ತು ಎನಿಸಿದರೂ, ಲವ್‌ಸಾಂಗ್‌ವೊಂದನ್ನು ತರದಿದ್ದರೂ ನಷ್ಟವೇನೂ ಆಗುತ್ತಿರಲಿಲ್ಲ. ಸಂಭಾಷಣೆಯ ಮೂಲಕ ಹಲವು ಗಂಭೀರ ವಿಚಾರಗಳನ್ನು ಹೇಳಲಾಗಿದೆ. ಮಹಮ್ಮದ್ ಗಿಬ್ರಾನ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಸಿನಿಮಾದ ಮೊದಲಾರ್ಧ ಬ್ರಿಟಿಷ್ ಕಾಲದ ವ್ಯವಸ್ಥೆಯ ಹುಳುಕುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗುತ್ತದೆ. ದ್ವಿತಿಯಾರ್ಧ ಸ್ವಲ್ಪ ನಿಧಾನವೆನಿಸಿದರೂ ಕ್ಲೈಮಾಕ್ಸ್‌ವರೆಗೂ ಕುತೂಹಲವನ್ನು ಉಳಿಸಿಕೊಳ್ಳುವುದು ‘ಠಾಣಾಕ್ಕಾರನ್‌’ ಹೆಚ್ಚುಗಾರಿಕೆ. ನಿರ್ದೇಶಕ ‘ತಮಿಳ್‌’ ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಸಿನಿಮಾವೊಂದನ್ನು ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ.


ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...