Homeಮುಖಪುಟಕೃಷಿ ಫಸಲುಗಳ ಬೆಲೆ - ಐದು ಶತಮಾನಗಳ ಸಂಘರ್ಷ

ಕೃಷಿ ಫಸಲುಗಳ ಬೆಲೆ – ಐದು ಶತಮಾನಗಳ ಸಂಘರ್ಷ

- Advertisement -
- Advertisement -

ಭಾರತದಲ್ಲಿ ಇಂದು ಕಾರ್ಪೊರೆಟ್‌ಗಳು ಕೃಷಿ ಭೂಮಿಯನ್ನೂ, ಕೃಷಿ ಉತ್ಪಾದನೆಗಳನ್ನು ವಶ ಮಾಡಿಕೊಳ್ಳುವುದರ ವಿರುದ್ಧ ಒಂದು ವರ್ಷಕ್ಕೂ ಕಾಲ ಬೃಹತ್ ಸಂಘರ್ಷ ನಡೆದು ಮೋದಿಯ ಸುಗ್ರೀವಾಜ್ಞೆಗಳನ್ನು ಕಸದಬುಟ್ಟಿಗೆ ಹಾಕುವ ಮೂಲಕ ಜಗತ್ತೇ ತಿರುಗಿ ನೋಡುವಂತಹ ಯಶಸ್ಸು ಪಡೆದಿದೆ ರೈತ ಹೋರಾಟ. ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಮತ್ತಿತರ ಆರು ವಿಷಯಗಳ ನಿಟ್ಟಿನಲ್ಲಿ ಮತ್ತೂ ಮುಂದುವರೆದಿದೆ ರೈತ ಸಂಘರ್ಷ. 7.12.21ರಂದು ಈ ಒತ್ತಾಯಗಳಿಗೆ ಮೋದಿ ಸರ್ಕಾರ ಒಪ್ಪುವ ಬಗ್ಗೆ ಅಮಿತ್‌ಶಾರಿಂದ ಪತ್ರ ಪಡೆವ ಮೂಲಕ ಮತ್ತೊಂದು ಹಂತದ ವಿಜಯ ಸಾಧಿಸಿದೆ. ಬೆಂಬಲ ಬೆಲೆ ಬಗ್ಗೆ ಚರ್ಚಿಸಲು ಒಂದು ಸಮಿತಿ ರಚಿಸುವ ಲಿಖಿತ ಆಶ್ವಾಸನೆಯನ್ನು ಸರ್ಕಾರ ಕೊಟ್ಟಿದೆ.

ಈ ಹೋರಾಟಗಳಿಗೆ ಕಾರಣವಾದ ಮೂರು ಕೃಷಿ ಕಾನೂನುಗಳ ಸುಗ್ರೀವಾಜ್ಞೆ ಮತ್ತು ಒಂದು ವಿದ್ಯುತ್ ಮಸೂದೆ ಮಂಡನೆಯಾದ ದಿನದಿಂದ ದೇಶಾದ್ಯಂತ ಕೃಷಿಯ ಕಾರ್ಪೊರೆಟೀಕರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದಾನಿ, ಅಂಬಾನಿ ಎಂಬ ಕಾರ್ಪೊರೇಟ್ ಧಣಿಗಳ ಇಚ್ಛೆಗೆ ವಿಧೇಯರಾಗಿ ಮೋದಿ ಸರ್ಕಾರ ಈ ಕಾನೂನುಗಳನ್ನು ತಂದಿದೆ. ರೈತರಿಗೆ ಯಾವ ಬೆಂಬಲ ಬೆಲೆ ನೀಡದೆ, ಕೃಷಿ ವಸ್ತುಗಳ ಕೊಳ್ಳುವಿಕೆ ಮೇಲೆ ಯಾವ ನಿಯಂತ್ರಣವೂ ಇಲ್ಲದೆ ಮನಸೇಚ್ಛೆಯಾಗಿ ವರ್ತಿಸುವ ಅವಕಾಶ ನೀಡುತ್ತಿದೆ ಎಂಬುದರ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಿತು. ನಿರ್ದಿಷ್ಟವಾಗಿ ಈ ಕಂಪನಿಗಳ ವಿರುದ್ಧ ತೀವ್ರ ಪ್ರತಿಭಟನೆಗಳೂ ನಡೆದವು.

ಇಂದು ರೈತರ ಬಹಳ ಮುಖ್ಯ ಒತ್ತಾಯವಾಗಿರುವ ಲಾಭದಾಯಕ ಬೆಂಬಲ ಬೆಲೆ ಇಂದು ನಿನ್ನೆಯದಲ್ಲ. ವಾಸ್ಕೋಡಾಗಾಮನೆಂಬ ಮೊತ್ತಮೊದಲ ಐರೋಪ್ಯ (ಪೋರ್ಚುಗೀಸ್) ನಾವಿಕ ಕೇರಳದ ತೀರದ ಕಲ್ಲಿಕೋಟೆಗೆ ಬಂದು 1492ರಲ್ಲಿ ಇಳಿದಾಗಿನಿಂದ ಕೃಷಿ ವಸ್ತುಗಳ ಬೆಲೆಯ ಪ್ರಶ್ನೆ ಎದ್ದಿದೆ. ಅಂದರೆ ಈ ಪ್ರಶ್ನೆಗೆ ಕನಿಷ್ಠ ಐನೂರು ವರ್ಷಗಳ ದೀರ್ಘ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ರೈತರ ಬಲಿಯನ್ನು ಪಡೆದಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರದ ಕರಾವಳಿಯ ರಾಜ, ರಾಣಿಯರು ಮತ್ತು ಐರೋಪ್ಯ ನಾವಿಕ ಸೈನ್ಯಗಳ ನಡುವಣ ಯುದ್ಧಗಳು, ಆಕ್ರಮಣಗಳು ಆರಂಭವಾಗಿದ್ದೇ ಕೃಷಿ ಫಸಲುಗಳ ಬೆಲೆಯ ವಿಷಯದಲ್ಲಿ. ಮಂಗಳೂರಿನ ಬಳಿಯ ಉಳ್ಳಾಲದ ಪ್ರಸಿದ್ಧ ರಾಣಿ ಅಬ್ಬಕ್ಕ, ಗೇರುಸೊಪ್ಪೆ ಸಂಸ್ಥಾನದ ರಾಣಿ, ಇಕ್ಕೇರಿ, ಕೆಳದಿಯ ನಾಯಕರು ಸೇರಿದಂತೆ ಕರಾವಳಿಯುದ್ದಕ್ಕೂ ನಡೆದ ಯುದ್ಧಗಳಲ್ಲಿ ಪ್ರಾಣ ತೆತ್ತ ರೈತರಿಂದ ಈ ಬಲಿದಾನ ಆರಂಭವಾಯಿತು. 1990ರ ನಂತರದ ಮೂರು ದಶಕಗಳಲ್ಲಿನ ಲಕ್ಷಾಂತರ ರೈತರ ಆತ್ಮಹತ್ಯೆಗಳು, ದೆಹಲಿ ಗಡಿಯ ರೈತ ಸಂಘರ್ಷದಲ್ಲಿ ಪ್ರಾಣ ತೆತ್ತ ಏಳು ನೂರಕ್ಕೂ ಹೆಚ್ಚಿನ ರೈತರ ಸಾವು ಈ ಬಲಿದಾನಕ್ಕೆ ಇತ್ತೀಚಿನ ಸೇರ್ಪಡೆ.

ಯುರೋಪಿನ ದೇಶಗಳು ಅಪಾರ ಖರ್ಚು ಮಾಡಿ ಮತ್ತು ಸಾಹಸದಿಂದ ಭಾರತದ ಮಾರ್ಗವನ್ನರಸಿ ಪಯಣಿಸಿದ್ದೇ ಇಲ್ಲಿನ ಕೃಷಿ ಫಸಲುಗಳ ವ್ಯಾಪಾರಕ್ಕಾಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ಮೊದಲು ಭಾರತದ ಕರಾವಳಿಗೆ ಬಂದಿಳಿದ ಪೋರ್ಚುಗೀಸರು ಕೈಹಾಕಿದ್ದೇ ಇಲ್ಲಿಯ ಅಕ್ಕಿ, ಮೆಣಸು, ಶುಂಠಿ ಮತ್ತು ಇತರ ಸಾಂಬಾರ ಪದಾರ್ಥಗಳಿಗಾಗಿ. ಕರ್ನಾಟಕದ ಸಮುದ್ರ ತೀರ ಪ್ರದೇಶಗಳು ಮತ್ತು ಘಟ್ಟಗಳು ಈ ವ್ಯಾಪಾರವೆಂಬ ಹೆಸರಿನ ದೌರ್ಜನ್ಯಗಳಿಗೆ ಮೊದಲ ವೇದಿಕೆಯಾಯಿತು.

ಅಕ್ಕಿ, ಮೆಣಸಿನ ಬೆಲೆ ಬಗ್ಗೆ ಪೋರ್ಚುಗೀಸ ಅರಸನ ಆಜ್ಞೆ

ಪೋರ್ಚುಗೀಸರು ಕೊಳ್ಳುತ್ತಿದ್ದ ಅಕ್ಕಿಯ ಬೆಲೆ ಒಂದು ಕೋರ್ಜಿಗೆ (ಇಂದಿನ 1640.52 ಕೇಜಿಗೆ ಸಮ) 12 ರಿಂದ 14 ಚಿನ್ನದ ಪಗೋಡಾ ಇತ್ತು. ಮೆಣಸಿನ ಒಂದೊಂದು ಖಂಡಿಗೆ (220.32 ಕೆಜಿ) 22ರಿಂದ 30 ಪಗೋಡಾವರೆಗೆ ಬೆಲೆ ಏರಿಳಿಕೆಯಾಗುತ್ತಿತ್ತು. ತಮ್ಮ ಬಂದೂಕು, ಫಿರಂಗಿ ಮೊದಲಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದೌರ್ಜನ್ಯದಿಂದ ತಮಗೆ ಬೇಕಾದ ಬೆಲೆಯನ್ನು ಹೇರುತ್ತಿದ್ದರು. ಸಂಸ್ಥಾನಗಳ ನಡುವೆ ಜಗಳ ತಂದಿಕ್ಕಿ ಅದನ್ನು ಅಗ್ಗದ ಬೆಲೆಗೆ ಕೊಳ್ಳಲು ಬಳಸುತ್ತಿದ್ದರು. ಪೋರ್ಚುಗಲ್ಲಿನ ರಾಜ ಮೆಣಸಿನ ಒಂದು ಖಂಡಿಗೆ 28.50ರಿಂದ 29 ಪಗೋಡಾ ಮಾತ್ರ ಕೊಡಬೇಕೆಂದು ರಾಜಾಜ್ಞೆ ಹೊರಡಿಸಿದನಂತೆ. ಹೇಗಿದೆ ಈ ವ್ಯಾಪಾರ! ಭಾರತದ ಬೆಳೆಗಳಿಗೆ ಬೆಲೆ ನಿರ್ಧಾರ ಮಾಡುವವನು ಪರದೇಶದ ಅರಸ. ಇಂದೂ ಕೂಡಾ ಭಾರತದ ರೈತರ ಫಸಲಿನ ಬೆಲೆಯನ್ನು ನಿರ್ಧರಿಸುವುದು ಆಯಾ ಬೆಳೆಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಬೃಹತ್ ಬಹುರಾಷ್ಟ್ರೀಯ ಕಾರ್ಪೊರೆಟ್‌ಗಳು. ಇದು ವಿಶ್ವ ವ್ಯಾಪಾರ ಸಂಸ್ಥೆಯ ರೂಲೀಸು.

ಯುರೋಪಿನ ಈ ದೇಶಗಳ ವ್ಯಾಪಾರಿಗಳು ಎಷ್ಟೋ ಬಾರಿ ಬೆಲೆ ಕೊಟ್ಟು ಕೊಳ್ಳುವುದನ್ನು ಬಿಟ್ಟು ಯುದ್ಧ ಮಾಡಿ ದೌರ್ಜನ್ಯದಿಂದ ದರೋಡೆ ಮಾಡುವುದು, ಯುದ್ಧದ ಬೆದರಿಕೆ ಒಡ್ಡಿ ಅಕ್ಕಿ, ಮೆಣಸುಗಳನ್ನು ಕಪ್ಪಕಾಣಿಕೆಯಾಗಿ ವಸೂಲಿ ಮಾಡುವುದೂ ನಡೆದಿದೆ. ವಾಸ್ಕೋಡಾಗಾಮ ಇಲ್ಲಿಗೆ ಕಾಲಿಟ್ಟ ಏಳೆಂಟು ವರ್ಷಗಳಲ್ಲಿ, 1502ರಲ್ಲಿ ಭಟ್ಕಳವನ್ನು ಸುಟ್ಟು ವರ್ಷಕ್ಕೆ ಎರಡು ಸಾವಿರದ ಕೋರ್ಜಿ ಅಕ್ಕಿಯನ್ನು ಕಪ್ಪಕಾಣಿಕೆಯಾಗಿ ವಸೂಲಿ ಮಾಡಿದ.


ಇಂಗ್ಲಿಷರ ಬೂಟಿನಡಿಯಲ್ಲಿ ರೈತರ ಗೋಳು

ಕೇವಲ ಗೋವಾ, ಭಟ್ಕಳ, ಹೊನ್ನಾವರ, ಬಸರೂರು, ಮಂಗಳೂರು ಕೊಚ್ಚಿ ಮುಂತಾದ ಬಂದರುಗಳ ಮೇಲೆ ಮಾತ್ರ ಹಿಡಿತ ಸ್ಥಾಪಿಸಿದ್ದ ಪೋರ್ಚುಗೀಸರು ಭಾರತದ ರೈತರ ಮೇಲೆ ನಡೆಸಿದ ದಬ್ಬಾಳಿಕೆಯೇ ಹೀಗಿದ್ದರೆ, ಇನ್ನು ಇಡೀ ಭಾರತವನ್ನು ತಮ್ಮ ವಶ ಮಾಡಿಕೊಂಡ ಬ್ರಿಟಿಷರ ಉರವಣಿಗೆ ಎಷ್ಟಿರಬಹುದು ಯೋಚಿಸಿ.

ಬ್ರಿಟಿಷರು ತಮ್ಮ ಕೈಗಾರಿಕೆಗಳಿಗೆ ತುರ್ತು ಅಗತ್ಯಗಳಾದ ಹತ್ತಿ, ನೀಲಿ, ಸೆಣಬು, ರೇಷ್ಮೆ, ಹೊಗೆಸೊಪ್ಪುಗಳನ್ನು ಬೆಳೆಯಲು ರೈತರ ಮೇಲೆ, ದೇಸೀ ಸಂಸ್ಥಾನಗಳ ಮೇಲೆ ದಬ್ಬಾಳಿಕೆ ನಡೆಸಿದರು. ಭೂ ಕಂದಾಯವನ್ನು ಹಣದ ಮೂಲಕ ಪಾವತಿ ಮಾಡಬೇಕೆನ್ನುವ ನಿರ್ಬಂಧ ಮತ್ತು ಅದನ್ನು ಪದೇಪದೇ ಹೆಚ್ಚಿಸುವುದು ನಡೆದಿತ್ತು. ಇದು ಈ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಡಕ್ಕೆ ರೈತರನ್ನು ಸಿಲುಕಿಸಿತು. ಜೊತೆಗೆ ಗೋಧಿ, ಅಕ್ಕಿ, ಸಕ್ಕರೆ, ಎಣ್ಣೆ ಕಾಳುಗಳು ಇತ್ಯಾದಿ ಆಹಾರ ವಸ್ತುಗಳೂ ಕೂಡಾ ವಾಣಿಜ್ಯ ಬೆಳೆಗಳಾದವು. ಎಷ್ಟೋ ಪ್ರದೇಶಗಳಲ್ಲಿ ಚೀನಾಕ್ಕೆ ರಫ್ತು ಮಾಡಲು ಅಫೀಮು ಬೆಳೆಯಲು ಒತ್ತಡ ಹೇರಲಾಯಿತು. ಈ ವಸ್ತುಗಳ ಬೆಲೆಗಳು ನಿರಂತರವಾಗಿ ಇಳಿತಕ್ಕೊಳಗಾದವು. ಗೋಧಿಯ ಬೆಲೆ 1810ರ ದಶಕದಲ್ಲಿದ್ದರ ಅರ್ಧಕ್ಕೆ 1850ರ ದಶಕದಲ್ಲಿ ಇಳಿಯಿತು.

ಹತ್ತಿ, ನೀಲಿ ಮೊದಲಾದವುಗಳು ಬೇರೆ ಬ್ರಿಟಿಷ್ ಅಧೀನದ ವಸಾಹತುಗಳಲ್ಲಿನ ಬೆಲೆಗಳನ್ನು ಆಧರಿಸಿ ತೀವ್ರ ಏರಿಳಿತಕ್ಕೊಳಗಾದವು. ಅಮೆರಿಕದಲ್ಲಿ ಕಪ್ಪು ಗುಲಾಮರ ಶ್ರಮವನ್ನು ಹಿಂಡಿ ಸಾವಿರಾರು ಎಕರೆಗಳ ಫಾರಂಗಳಲ್ಲಿ ಬೆಳೆಸುತ್ತಿದ್ದ ಅಗ್ಗದ ಹತ್ತಿ, ಬ್ರೆಜಿಲ್‌ನ ಹೊಗೆಸೊಪ್ಪು, ಕೆರಿಬಿಯನ್ ದ್ವೀಪ ಮೊದಲಾದ ದೇಶಗಳ ಸಕ್ಕರೆಯೊಂದಿಗೆ ಭಾರತದ ನಾಲ್ಕೈದು ಎಕರೆಗಳ ಗೇಣಿದಾರ ರೈತ ಸ್ಫರ್ಧೆ ಮಾಡಬೇಕಾಗಿತ್ತು. ಆಹಾರದ ಬೆಳೆಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಒತ್ತಡದಿಂದಾಗಿ ಆಹಾರದ ಕೊರತೆ, ಕ್ಷಾಮ ಉಂಟಾಯಿತು. ಡಾಮರಗಳಲ್ಲಿ ತಿನ್ನಲೇನೂ ಇಲ್ಲದೆ ಲಕ್ಷಾಂತರ ಜನರ ಸಾವುಗಳಾಗಿ “ಹೊಸ ಶಕೆ” ಆರಂಭಾಯಿತು.

“ಹತ್ತಿ ಬಿತ್ತಿ ಬೆಳೆಕೊಂಡೆವು ಹಾಳು
ತಿನ್ನಲು ದೊರೆಯದು ತುಸು ಕಡಿ ಕಾಳು”
“ಕುರುಡು ಕಾಂಚಾಣ ಕುಣಿಯತಲಿತ್ತು”,

“ಗದರುತ್ತಿಹುದು ಗರ್ಜಿಸುತಿಹುದು ಬೆವರ ಬಗ್ಗರ ತುತ್ತಿನ ಚೀಲದ ಒಳಗಿನಒಳಗಿನ ಒಳದನಿಯೊಂದು” ಎಂದು ಬೇಂದ್ರೆಯವರು ಬರೆದದ್ದು ಇಂತಹ ಹಿನ್ನೆಲೆಯಲ್ಲಿಯೇ.

ಶತ ಶತಮಾನಗಳ ಈ ಕತೆಯೆಲ್ಲ ಏಕೆ ಬೇಕು ಎಂದು ಕೆಲವರು ಪ್ರಶ್ನಿಸಬಹುದು.

ಅಮೆರಿಕದ ಮತ್ತಿತರ ದೇಶಗಳ ಕಾರ್ಪೊರೆಟ್‌ಗಳ ಕೃಷಿಯ ಜೊತೆ ಸ್ಫರ್ಧೆ ಮಾಡಬೇಕಾದ, ಇಂದಿನ ವಿಶ್ವ ವಾಣಿಜ್ಯ ಸಂಸ್ಥೆ WTO ಮತ್ತು ಅಮೆರಿಕ ಮೊದಲಾದ ದೇಶಗಳು ಹೇರಿದ ನಿಯಮಗಳಡಿ ಒದ್ದಾಡುತ್ತಿರುವ ರೈತರ ಪರಿಸ್ಥಿತಿಯೊಂದಿಗೆ ಈ ಶತಶತಮಾನಗಳ ಸಾಮ್ಯತೆ ಎದ್ದು ಕಾಣುತ್ತದೆ.

ರೈತರ ಇಂತಹ ದುಸ್ಥಿತಿಗಳೇ 1850ರ ದಶಕದ ನೀಲಿ ರೈತರ, ಸಂತಾಲರ ದಂಗೆಗೆ ಕಾರಣವಾದವು. ಭಾರತದ ಮೊತ್ತಮೊದಲ ಆಧುನಿಕ ನಾಟಕ ’ನೀಲ ದರ್ಪಣ್’ ಇದೇ ಸಂದರ್ಭದಲ್ಲಿಯೇ ರಚಿತವಾಗಿ ಇಂಗ್ಲಿಷಿಗೂ ಅನುವಾದವಾಗಿ ಇಂಗ್ಲೆಂಡಿನಲ್ಲಿಯೂ ಪ್ರದರ್ಶನ ಕಂಡಿತು.

ಗಾಂಧೀಜಿಯವರ ಭಾರತದ ಮೊದಲ ಹೋರಾಟವೂ ಚಂಪಾರಣ್ ನೀಲಿ ಬೆಳೆಗಾರರ ಹೋರಾಟವೇ. ನೀಲಿ ಬೆಳೆಯ ಬೆಲೆ, ಕಂಟ್ರಾಕ್ಟ್ ಫಾರ್ಮಿಂಗ್ ಪದ್ಧತಿ ಇವುಗಳ ಸಲುವಾಗಿಯೇ. ನೆಹರೂ ಕೂಡಾ ರೈತ ಹೋರಾಟಗಾರರಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂಬುದನ್ನು ನೆನೆಯೋಣ. 1920ರ, 1930ರ ಸ್ವಾತಂತ್ರ್ಯ ಚಳವಳಿಗಳಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದರು.

1920-33ರಲ್ಲಿ ವಿಶ್ವವನ್ನು ಆವರಿಸಿದ ಆರ್ಥಿಕ ಮಹಾ ಕುಸಿತ ಭಾರತದಲ್ಲಿ ರೈತರ ಮೇಲೆ ಇದ್ದಕ್ಕಿದ್ದಂತೆ ಎರಗಿ ಕೃಷಿ ಫಸಲುಗಳ ಬೆಲೆಯನ್ನು ಶೇ.55 ರಷ್ಟು ಅಂದರೆ ಅರ್ಧಕ್ಕಿಂತ ಹೆಚ್ಚು ಕುಸಿಯುವಂತೆ ಮಾಡಿತು.

ಇಂತಹ ಪರಿಸ್ಥಿತಿಗಳು ಭಾರತದ ರೈತರನ್ನು ದೊಡ್ಡ ಪ್ರಮಾಣದಲ್ಲಿ ಸಾಲಗಾರರನ್ನಾಗಿ ಮಾಡಿತು. ರೈತರ ಭೂಮಿ ನಗರ, ಪಟ್ಟಣಗಳ ಕೃಷಿಕರಲ್ಲದ ಲೇವಾದೇವಿಗಾರರ ಒಡೆತನಕ್ಕೆ ಒಳಗಾಯಿತು. ರೈತರು ತಮ್ಮದೇ ಭೂಮಿಯ ಗೇಣೀದಾರರಾದರು ಅಥವಾ ದೊಡ್ಡ ಸಂಖ್ಯೆಯಲ್ಲಿ ಕೃಷಿಯನ್ನು ಕೈಬಿಟ್ಟು ನಗರಗಳ ಅಗ್ಗದ ದುಡಿಮೆಯ ಕೂಲಿಕಾರ, ಕೈಗಾರಿಕೆಗಳ ಕಾರ್ಮಿಕರಾದರು. ಇನ್ನು ಈ ರೈತರ ಹೊಲಗಳಲ್ಲಿ ಜೀತಗಾರರಾಗಿ, ಕೂಲಿಕಾರರಾಗಿ ದುಡಿಯುತ್ತಿದ್ದ ದಲಿತರ ಪಾಡೇನು? ಅವರೂ ನಗರ, ಪಟ್ಟಣಗಳ ಅಗ್ಗದ ಕೂಲಿಕಾರರಾದರು.

ಈ ಮಹಾಕುಸಿತದ ಪರಿಣಾಮಗಳನ್ನು ಎದುರಿಸಲು ಕಾಂಗ್ರೆಸ್‌ನಿಂದ ಬಿಡಿಸಿಕೊಂಡು ಸ್ವತಂತ್ರವಾದ ರೈತ ಚಳವಳಿ ಯುಪಿ, ಬಿಹಾರ, ಬಂಗಾಲ, ಪಂಜಾಬ್ ಮಹಾರಾಷ್ಟರ ಮೊದಲಾದ ಪ್ರಾಂತ್ಯಗಳಲ್ಲಿ ಚಿಮ್ಮಿಬಂದಿತು. ಎರಡನೇ ಮಹಾಯುದ್ಧದ ನಂತರದ ಬೆಲೆ ಏರಿಕೆ, ಆಹಾರ ವಸ್ತುಗಳ ಕೃತಕ ಅಭಾವದ ನಂತರ ಭಾರತದ ಹಲವು ಪ್ರದೇಶಗಳಲ್ಲಿ ರೈತ ಹೋರಾಟ ಸಂಘರ್ಷಗಳಾಗಿ ಬೆಳೆದುನಿಂತಿತು. ತೆಲಂಗಾಣ ರೈತರ ಸಶಸ್ತ್ರ ದಂಗೆ, ಕೇರಳದ ಮಲಬಾರ್ ಪ್ರದೇಶದ ಕಯ್ಯಾರು, ಕರಿವೆಳ್ಳೂರು ಮೊದಲಾದ ಹಲವು ಹಳ್ಳಿಗಳ ರೈತ ಹೋರಾಟ, ಬಂಗಾಲದ ತೇಭಾಗ ಗೇಣಿ ಚಳುವಳಿ, ಅಸ್ಸಾಂ, ತ್ರಿಪುರಾಗಳ ಸುವರ್ಣ ಕಣಿವೆ ರೈತರ ಹೋರಾಟ, ಮಹಾರಾಷ್ಟ್ರದ ವಾರಲೀ ಆದಿವಾಸಿಗಳ ಹೋರಾಟ, ತಂಜಾವೂರು, ಪಂಜಾಬ್ ರೈತರ ಹೋರಾಟ ಹೀಗೆ ಹಲವು ಸಂಘರ್ಷಗಳು ಬೆಳೆದು ಸ್ವಾತಂತ್ರ್ಯ ಚಳುವಳಿಯ ವಿಸ್ತಾರಕ್ಕೆ ಕಾರಣವಾದವು. ಕೊನೆಗೆ ಸ್ವಾತಂತ್ರ್ಯ ಪಡೆಯುವದರಲ್ಲಿ ರೈತ ಸಂಘರ್ಷಗಳ ಪಾತ್ರ ಮಹತ್ವಪೂರ್ಣವಾಯಿತು. ತೇಭಾಗದ ನಾಮ ಶೂದ್ರ, ತೆಲಂಗಾಣದ ಅಸ್ಪೃಶ್ಯರು, ಲಂಬಾಣಿಗಳು, ವಾರಲಿ ಆದಿವಾಸಿಗಳು, ಸಂತಾಲರಂತೆ ಈ ಹೋರಾಟಗಳಲ್ಲಿ ದಲಿತರ, ಆದಿವಾಸಿಗಳ ಪಾತ್ರ ಕೂಡಾ ಮಹತ್ವದ್ದು.

ಈ ಎಲ್ಲ ಜನಸಮುದಾಯಗಳ ಹೋರಾಟದ ಫಲವಾಗಿ ದಕ್ಕಿದ ಸ್ವಾತಂತ್ರ್ಯದ ಫಲವಾಗಿ ಸ್ವತಂತ್ರ ಭಾರತದ ಸರ್ಕಾರ ತನ್ನ ಮೊದಲೆರಡು ದಶಕಗಳಲ್ಲಿ ರೈತ, ದಲಿತ, ಆದಿವಾಸಿಗಳಿಗೆ ಒಂದಷ್ಟು ಪರಿಹಾರ ಒದಗಿಸಲು ಪ್ರಯತ್ನಿಸಿತು. ವಿದೇಶಿ ಕೃಷಿ ಫಸಲುಗಳ ಆಮದಿನಿಂದಾಗುವ ಬೆಲೆ ಕುಸಿತದಿಂದ ಮತ್ತು ಅಗ್ಗದ ಬೆಲೆಗೆ ಮಾರುವ ರಫ್ತಿನಿಂದ ರೈತರನ್ನು, ಗ್ರಾಮೀಣ ಆರ್ಥಿಕತೆಯನ್ನು ರಕ್ಷಿಸಲು ಮೂರು ಸುತ್ತಿನ ಕೋಟೆಯನ್ನು ಕಟ್ಟಿತು.

ಇವುಗಳ ಬಗ್ಗೆ, ನಂತರ ಕಾಲದ ಭೂ ಸುಧಾರಣೆ, ಹಸಿರು ಕ್ರಾಂತಿ, ಬೆಂಬಲ ಬೆಲೆ, ಪಡಿತರ ವ್ಯವಸ್ಥೆ, ಎಪಿಎಂಸಿ ಕಾನೂನು, ಕೃಷಿ ಸಾಲ ನೀತಿ, ಬ್ಯಾಂಕ್ ರಾಷ್ಟ್ರೀಕರಣ, ಬೀಜ ಕಾನೂನು, ಪೇಟೆಂಟ್ ಕಾನೂನು ಮೊದಲಾದ ಕ್ರಮಗಳ ಬಗ್ಗೆ, ಅದರ ಪರಿಣಾಮಗಳ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ಕಾರ್ಪೊರೆಟ್ ಕೃಷಿಯ ವಿಶ್ವರೂಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...