ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಘೋಷಣೆಯೇ ದೊಡ್ಡ ಒತ್ತಡ ಉಂಟುಮಾಡುತ್ತಿದೆ.
ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಶನಿವಾರ ಹೇಳಿದ್ದಾರೆ.
“ಕಾಂಗ್ರೆಸ್ ಪ್ರತಿಯೊಬ್ಬ ನಾಯಕರ ಗುಣಗಳನ್ನು ವಿಶ್ಲೇಷಿಸಿದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ನನಗೆ ಪಕ್ಷದ ಮೇಲೆ ಸಂಪೂರ್ಣ ನಂಬಿಕೆಯಿದೆ. ಸಿಎಂ ಅಭ್ಯರ್ಥಿಯನ್ನು ನಿರ್ಧರಿಸಲು ಪಕ್ಷದ ಹೈಕಮಾಂಡ್ ಇದೆ. ಪಕ್ಷದ ಹೈಕಮಾಂಡ್ ಏನು ತೀರ್ಮಾನಿಸುತ್ತದೆಯೋ ಆ ನಾವು ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಚಳವಳಿಯ ಕಣ ಪಂಜಾಬ್‌ನಲ್ಲಿ ಚುನಾವಣೆ: ಯಾರಿಗೆ ಲಾಭ?
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ಮನಸ್ತಾಪದ ಬಳಿಕ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ರಾಜೀನಾಮೆ ನೀಡಿದ್ದರು. ಬಳಿಕ ಚರಣ್‌ಜಿತ್ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
ಕಳೆದ ಮೂರು ತಿಂಗಳಲ್ಲಿ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ತಾವು ಮುಂದಿನ ಸಿಎಂ ಅಭ್ಯರ್ಥಿಯಾಗಲು ಸೂಕ್ತ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇತ್ತ ಹಲವು ಕಾಂಗ್ರೆಸ್ ನಾಯಕರು ಕೂಡ ಚನ್ನಿ ಮುಂದಿನ ಸಿಎಂ ಆಗಲು ಸೂಕ್ತ ಎನ್ನುತ್ತಿದ್ದಾರೆ. ಇದರ ನಡುವೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.
ಇನ್ನು, ಮುಂದಿನ ತಿಂಗಳು ನಡೆಯಲಿರುವ ಐದು ರಾಜ್ಯ ಚುನಾವಣೆಗಳ ಪ್ರಚಾರಕ್ಕಾಗಿ ರೋಡ್‌ಶೋಗಳು ಮತ್ತು ರ್‍ಯಾಲಿಗಳ ಮೇಲೆ ವಿಧಿಸಿದ್ದ ನಿಷೇಧವನ್ನು ಚುನಾವಣಾ ಆಯೋಗವು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಿದೆ. ಆದರೆ, ಫೆಬ್ರವರಿ 10 ಮತ್ತು 14 ರಂದು ನಡೆಯಲಿರುವ ಮೊದಲ ಎರಡು ಹಂತದ ಚುನಾವಣೆಗೆ ಸಡಿಲಿಕೆ ನೀಡಿದೆ.
ಚುನಾವಣಾ ಆಯೋಗವು ಈ ಮೊದಲು ಜನವರಿ 15 ರವರೆಗೆ ಚುನಾವಣಾ ರ್‍ಯಾಲಿಗಳು ಮತ್ತು ರೋಡ್‌ಶೋಗಳನ್ನು ನಿಷೇಧಿಸಿತ್ತು. ಅದನ್ನು ನಂತರ ಜನವರಿ 22 ರವರೆಗೆ ವಿಸ್ತರಿಸಿತು. ಈಗ ಜನವರಿ 31 ರ ವರೆಗೆ ನಿರ್ಬಂಧ ಹೇರಿದೆ.
ಮುಂದಿನ ತಿಂಗಳು ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದ ಪಂಜಾಬ್ ಸಿಎಂ


