ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ಫೆಬ್ರವರಿ 14 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಗೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು 51 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ.
ಬಿಎಸ್‌ಪಿಯ ಎರಡನೇ ಪಟ್ಟಿಯಲ್ಲಿ ಮುಸ್ಲಿಂ ಸಮುದಾಯದಿಂದ 23, ಪರಿಶಿಷ್ಟ ಜಾತಿಯಿಂದ 10, ಒಬಿಸಿಯಿಂದ 12, ಇಬ್ಬರು ಬ್ರಾಹ್ಮಣರು ಮತ್ತು ಇತರ ನಾಲ್ವರು ಅಭ್ಯರ್ಥಿಗಳು ಸೇರಿದ್ದಾರೆ.
ಫೆಬ್ರವರಿ 14 ರಂದು ಎರಡನೇ ಹಂತದಲ್ಲಿ ಒಟ್ಟು 55 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉಳಿದ ನಾಲ್ಕು ಹೆಸರುಗಳನ್ನು ಪಕ್ಷವು ಶೀಘ್ರದಲ್ಲೇ ಘೋಷಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ
ಜನವರಿ 15 ರಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಎರಡನೇ ಪಟ್ಟಿಯಲ್ಲಿ ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅಮ್ರೋಹಾ, ಬದೌನ್, ಬರೇಲಿ ಮತ್ತು ಷಹಜಹಾನ್‌ಪುರ ಜಿಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಒಳಗೊಂಡಿದೆ.
2007 ರಲ್ಲಿ ಮಾಡಿದ ಪ್ಲ್ಯಾನ್ ಮತ್ತೆ ಮಾಡಲು ಮಾಯಾವತಿ ಪಕ್ಷ ಹೊರಟಿದ್ದು, ಇದುವರೆಗೆ ಮೊದಲ ಎರಡು ಹಂತಗಳಿಗೆ 113 ಅಭ್ಯರ್ಥಿಗಳಲ್ಲಿ 109 ಅಭ್ಯರ್ಥಿಗಳನ್ನು ಘೋಷಿಸಿದೆ. ಎರಡು ಪಟ್ಟಿಗಳ ಅಭ್ಯರ್ಥಿಗಳನ್ನು ಗಮನಿಸಿದರೆ, 2017 ರಲ್ಲಿ ಮಾಡಿದ ಟಿಕೆಟ್ ಹಂಚಿಕೆಯ ಅದೇ ಪ್ರವೃತ್ತಿಯನ್ನು ಅನುಸರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ, ಪಕ್ಷವು ಒಟ್ಟು 403 ಅಭ್ಯರ್ಥಿಗಳಲ್ಲಿ ಶೇಕಡಾ 40 ರಷ್ಟು (98) ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು.
ಇದುವರೆಗೆ ಬಹುಜನ ಸಮಾಜ ಪಾರ್ಟಿ ಘೋಷಿಸಲಾದ 109 ಅಭ್ಯರ್ಥಿಗಳಲ್ಲಿ, 41 ಮುಸ್ಲಿಮರು (37.6%), 28 ಒಬಿಸಿಗಳು (25.6%), 18 ಪರಿಶಿಷ್ಟ ಜಾತಿ (16.51), 12 ಬ್ರಾಹ್ಮಣರು (11%) ಮತ್ತು ಇತರ ಒಂಬತ್ತು ಜನರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: ವಿಶ್ಲೇಷಣೆ: ಆದಿತ್ಯನಾಥ್ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?