ತಮ್ಮ ಮನೆ ಹೊರಗೆ ಅಂಟಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಸ್ಟರ್ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ 21 ವರ್ಷದ ದಲಿತ ಯುವಕನ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ಭೀಮ್ ಸೈನ್ಯದ ಸದಸ್ಯರಾಗಿದ್ದ ವಿನೋದ್ ಬಾಮ್ನಿಯಾ ಅವರ ಮೇಲೆ ಜೂನ್ 5 ರಂದು ರಾಜಸ್ಥಾನದ ಹನುಮನ್‌ಗಢ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿರುವ ಅವರ ಮನೆಯ ಗೋಡೆಯ ಮೇಲೆ ಅಂಬೇಡ್ಕರ್ ಅವರ ಪೋಸ್ಟರ್ ಅಂಟಿಸಿದ್ದರು. ಇವುಗಳನ್ನು ತೆರವುಗೊಳಿಸುವಂತೆ ಒಬಿಸಿ ಸಮುದಾಯಕ್ಕೆ ಸೇರಿದ ಯುವಕರ ಗುಂಪು ಆಗ್ರಹಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿನೋದ್ ಮೇಲೆ ಹಲ್ಲೆ ಮಾಡಲಾಗಿದೆ. ಎರಡು ದಿನಗಳ ನಂತರ ಶ್ರೀಗಂಗನಗರದ ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಸ್ಟರ್ ಘಟನೆಯ ಬಗ್ಗೆ ಮೃತ ವಿನೋದ್ ಬಾಮ್ನಿಯಾ ಅವರ ಕುಟುಂಬದವರು ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ವೇಳೆ ಆರೋಪಿಗಳು ಜಾತಿವಾದಿ ಗಲಾಟೆ ಮಾಡಿದ್ದಾರೆ. ಇವತ್ತು ನಿಮಗೆ ನಿಮ್ಮ ಅಂಬೇಡ್ಕರ್ ವಾದವನ್ನು ನೆನಪಿಸುತ್ತೇವೆ ಎಂದು ಹೇಳುತ್ತಾ ಹಲ್ಲೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ತನಿಖೆಯ ವಿಳಂಬದ ಬಗ್ಗೆ ಭೀಮ್ ಸೈನ್ಯ ಪ್ರತಿಭಟನೆ ನಡೆಸಿದೆ. ತನಿಖೆಯ ವಿಳಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ
ಮೃತ ವಿನೋದ್ ಬಾಮ್ನಿಯಾ ಈ ವರ್ಷದ ಆರಂಭದಲ್ಲಿ ಎರಡು ಬಾರಿ ವಿವಿಧ ವಿಷಯಗಳ ಬಗ್ಗೆ ದೂರುಗಳನ್ನು ದಾಖಲಿಸಿದ್ದರು. ಶಾಲೆಯಲ್ಲಿ ಹನುಮಾನ್ ಚಾಲೀಸಾ ಪ್ರತಿಗಳನ್ನು ವಿತರಿಸುವುದನ್ನು ಆಕ್ಷೇಪಿಸಿ, ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರು. ತಮ್ಮ ಕುಟುಂಬಕ್ಕೆ ರಸ್ತೆ ನಿರ್ಬಂಧವನ್ನು ಆಕ್ಷೇಪಿಸಿದ್ದಕ್ಕಾಗಿ ಗ್ರಾಮದ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು.

“ಇತ್ತೀಚೆಗೆ, ನಮ್ಮ ಹಳ್ಳಿಯಲ್ಲಿ ವಾಸಿಸುವ ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಸೇರಿದಂತೆ ಕೆಲವು ಯುವಕರು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯ ನಂತರ ನಮ್ಮ ಮನೆಯ ಹೊರಗೆ ಹಾಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬ್ಯಾನರ್‌ಗಳನ್ನು ಹರಿದು ಹಾಕಿದ್ದರು. ನಾವು ಅವರನ್ನು ಗುರುತಿಸಿ ಅವರ ಕುಟುಂಬಗಳಿಗೆ ವಿಷಯ ತಿಳಿಸಿದ್ದೇವು. ಈ ವಿಷಯವನ್ನು ಪಂಚಾಯಿತಿಯ ಮಧ್ಯಸ್ಥಿಕೆಯೊಂದಿಗೆ ಬಗೆಹರಿಸಲಾಗಿತ್ತು. ಯುವಕರ ಪರವಾಗಿ ಅವರ ಕುಟುಂಬ ಸದಸ್ಯರು ಕ್ಷಮೆಯಾಚಿಸಿದ್ದರು” ಎಂದು ಮೃತ ವಿನೋದ್ ಸೋದರಸಂಬಂಧಿ ಮುಖೇಶ್ ಹೇಳಿದ್ದಾರೆ.
“ಆದರೆ ನಿಜವಾದ ಅಪರಾಧಿಗಳು ಈ ಘಟನೆಗೆ ಸೇಡು ತೀರಿಸಿಕೊಳ್ಳಲು ಬಯಸಿದ್ದರು. ಜೂನ್ 5 ರಂದು ವಿನೋದ್ ಮತ್ತು ನಾನು ಹಳ್ಳಿಯ ನಮ್ಮ ಹೊಲಗಳಿಗೆ ಹೋಗುವಾಗ ರಾಕೇಶ್, ಅನಿಲ್ ಮತ್ತು ಇನ್ನೂ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಅವರು ವಿನೋದ್ ಅವರನ್ನು ಹಾಕಿ ಸ್ಟಿಕ್‌ಗಳಿಂದ ಸುಮಾರು 20-30 ಬಾರಿ ಮನ ಬಂದಂತೆ ಥಳಿಸಿದರು. ವಿನೋದ್‌ನನ್ನು ಹನುಮನ್‌ಗಢ ಮತ್ತು ಶ್ರೀಗಂಗನಗರ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು. ಆದರು ಚಿಕಿತ್ಸೆ ಫಲಿಸದೇ ವಿನೋದ್ ಸಾವನ್ನಪ್ಪಿದ್ದಾರೆ” ಎಂದು ಮುಖೇಶ್ ತಿಳಿಸಿದರು.
ಐಪಿಸಿ ಸೆಕ್ಷನ್‌ಗಳು 307 (ಕೊಲೆ ಯತ್ನ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ), 341, 143 ಮತ್ತು ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆಯ ಆರಂಭಿಕ ಎಫ್‌ಐಆರ್ ಅನ್ನು ಪೊಲೀಸರು ದಾಖಲಿಸಿದ್ದರು. ವಿನೋದ್ ಮರಣದ ನಂತರ, ಕೊಲೆ ಯತ್ನದ ಆರೋಪವನ್ನು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಎಂದು ಬದಲಾಯಿಸಲಾಗಿದೆ.
ಇದನ್ನೂ ಓದಿ: ಮೇಲ್ಜಾತಿ ಹುಡುಗಿಗೆ ಮೊಬೈಲ್ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೋಳಿಸಿ, ಎಂಜಲು ತಿನ್ನಿಸಿದ ಅಮಾವೀಯ ಘಟನೆ



ದಲಿತ ಯುವಕನನ್ನು ಕೊಂದವರಿಗೆ ಕಟಿಣ ಶಿಕ್ಷೆ ಆಗಬೇಕು. ದುರಂತವೆಂದರೆ ಇಲ್ಲಿ ಕೊಲೆ ಮಾಡಿರುವವರು ಮೇಲ್ಜಾತಿಯವರಲ್ಲ, ಹಿಂದುಳಿದ ಜಾತಿಯವರು!