ಕೇಂದ್ರ ಸರ್ಕಾರದ ವಿರುದ್ದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಹರಿಯಾಣದ ಜಿಂದ್‌ಗೆ ಸ್ಥಳಾಂತರಿಸಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿರುವ ರೈತ ಹೋರಾಟಕ್ಕೆ ಧಕ್ಕೆ ತರಲು ಸರ್ಕಾರ ಯತ್ನಿಸಿದರೆ ಭಾರೀ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಆರು ತಿಂಗಳಿಂದ ರೈತರು ದೆಹಲಿಯ ಗಡಿ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಹೇಳಿದ್ದಾರೆ.
ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್, “ರೈತರ ಹೋರಾಟವು ದೆಹಲಿ ಗಡಿಗಳಿಂದ ಹರಿಯಾಣದ ಜಿಂದ್‌ಗೆ ಬದಲಾಗಬೇಕೆಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಬಯಸಿದೆ. ಆದರೆ ಅವರ ಕುತಂತ್ರವು ಯಶಸ್ವಿಯಾಗಲು ನಾವು ಅವಕಾಶ ಕೊಡುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಸಾರಿಗೆಗೆ ಬಾಬಾಸಾಹೇಬ್ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲು ಸಂಸದೆ ಸುಮಲತಾ ಮನವಿ
“ಹೋರಾಟದ ಕೇಂದ್ರ ಬಿಂದುವನ್ನು ದೆಹಲಿ ಗಡಿಯಿಂದ ಹರಿಯಾಣಕ್ಕೆ ಸ್ಥಳಾಂತರಿಸಬೇಕೆಂದು ಅವರು ಬಯಸುತ್ತಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ” ಎಂದಿದ್ದಾರೆ.
“ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದ ಟೋಲ್ ಪ್ಲಾಜಾಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೊದಲಿನಂತೆ ಮುಂದುವರೆಯುತ್ತದೆ. ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಆಂದೋಲನ ಮುಂದುವರೆಯಲಿದೆ” ಎಂದು ಟಿಕಾಯತ್ ತಿಳಿಸಿದ್ದಾರೆ.
ರೈತ ಆಂದೋಲನ ನಡೆಯುತ್ತಿರುವ ಇಂದಿನ ಸಮಯದಲ್ಲಿ ರೈತರ ವಿರುದ್ಧ ಹಲವಾರು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದಿರುವ ಟಿಕಾಯತ್, “ಈ ರೀತಿಯಲ್ಲಿ ಯಾವುದೇ ಆಂದೋಲನ ನಡೆಯುತ್ತಿರುವ ಸಮಯದಲ್ಲಿ ಒಬ್ಬರು ಜೈಲಿಗೆ ಹೋಗಲು ಹೆದರದೇ ಸಿದ್ಧರಾಗಿರಬೇಕು” ಎಂದು ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ ರೈತರ ಆಂದೋಲನಕ್ಕೆ ಭದ್ರ ಬುನಾದಿಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ, ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಮುಂದುವರೆಸಲಿದೆ ಎಂದರು.
ಇದನ್ನೂ ಓದಿ: 2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?
ಕೇಂದ್ರ ಸರ್ಕಾರ ಮಾತುಕತೆ ಪುನರಾರಂಭಿಸಲು ನಿರ್ಧರಿಸಿದಾಗಲೆಲ್ಲಾ ಮಾತುಕತೆ ನಡೆಸಲು ರೈತ ಸಂಘಟನೆಗಳು ಸಿದ್ದವಾಗಿದ್ದವು ಎಂದಿರುವ ಟಿಕಾಯತ್, “ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಯಬೇಕಿದೆ” ಎಂಬುದನ್ನು ಪುನರುಚ್ಚರಿಸಿದರು.
ಸರ್ಕಾರ ಮಾತನಾಡಲು ಬಯಸಿದಾಗ, ಸಂಯುಕ್ತ ಕಿಸಾನ್ ಮೋರ್ಚಾದ ಸಂಘಟಕರು ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳು ರದ್ದಾಗಬೇಕು, ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ ನವೆಂಬರ್‌ನಿಂದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ, ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬು ರೈತರ ಹಕ್ಕೊತ್ತಾಯವನ್ನು ಪರಿಗಣಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?


