Homeಕರ್ನಾಟಕಪೌರಕಾರ್ಮಿಕರ ವಲಸೆಯ ಸುತ್ತ...

ಪೌರಕಾರ್ಮಿಕರ ವಲಸೆಯ ಸುತ್ತ…

- Advertisement -
- Advertisement -

“ಒಂದು ತಿಂಗಳು ನ್ಯಾಯಾಲಯಗಳನ್ನು ಮುಚ್ಚಿಬಿಡಿ, ನೀವು ಹೇಗೋ ಬದುಕಿಬಿಡಬಹುದು. ಆದರೆ ಒಂದು ವಾರ ಪೌರಕಾರ್ಮಿಕರು ತಮ್ಮ ಕೆಲಸವನ್ನು ನಿಲ್ಲಿಸಿದರೆ, ಇಡೀ ಸಮಾಜ ರೋಗರುಜಿನಗಳಿಂದ ನರಳಬೇಕಾಗುತ್ತದೆ” ಹೀಗೆ ಹೇಳುತ್ತಾರೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್.

ನಾಗರಿಕ ಸಮಾಜದ ಗಲೀಜನ್ನು ಬಾಚುತ್ತಿರುವ ಈ ಜಲಗಾರರ ಪಾತ್ರ ಎಷ್ಟೆಂಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಯಾವುದೇ ಹೊಗಳಿಕೆ ಮಾತುಗಳು ಹಸಿದ ಹೊಟ್ಟೆಯನ್ನು ತುಂಬಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ.

ಪೌರಕಾರ್ಮಿಕರಿಂದ ಶಕ್ತಿ ಮೀರಿ ದುಡಿಸಿ, ಆರ್ಥಿಕವಾಗಿ ಶೋಷಿಸುತ್ತಿರುವ ಪ್ರಭುತ್ವದ ವಿರುದ್ಧ ಮೊನ್ನೆಯಷ್ಟೇ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಚಾಲನೆ ಪಡೆದಿತ್ತು. ಕೆಲಸದ ಕಾಯಮಾತಿಗೆ ಕುಳಿತಿದ್ದ ಈ ಕಾರ್ಮಿಕರನ್ನು ಯಾರಾದರೂ ಮಾತನಾಡಿಸಿದರೆ ಮಡುಗಟ್ಟಿದ ಕೋಪ ಕೆಂಡದಂತೆ ಹೊರಬೀಳುತ್ತಿತ್ತು.

ತಾಯಿಯೊಬ್ಬರು ಸಿಟ್ಟಿಗೆದ್ದು ಮಾತನಾಡತೊಡಗಿದರು- “20 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಆಂಧ್ರದ ಅನಂತಪುರಂನಿಂದ ವಲಸೆ ಬಂದವರು ನಾವು. ಅಲ್ಲಿ ಜಮೀನಿನಲ್ಲಿ ಕೆಲ್ಸ ಮಾಡ್ತಾ ಇದ್ದೆವು. ಆದರೆ ಯಾವುದೇ ಬೆಲೆ ಇರಲಿಲ್ಲ. ಸಾಲ ತೀರಿಸಲು ಆಗದೆ ಊರು ಬಿಟ್ಟೆವು. ಇಲ್ಲಿ ಬಂದು ಸೇರಿದೆವು. ಇವರು ಕೊಡೊ ಕೂಲಿಯಲ್ಲಿ ಏನ್ ತಿನ್ನೋದು? ಬಾಡಿಗೆ ಕಟ್ಟೋದಾ? ಮಕ್ಕಳನ್ನು ಓದಿಸೋದಾ? ನನ್ನ ಮಗ ಸಿಎ ಓದ್ತಾ ಇದ್ದಾನೆ. ಇವರು ಕೊಡೋ ದುಡ್ಡು ಸಾಲದ ಬಡ್ಡಿ ಕಟ್ಟೋಕೂ ಆಗಲ್ಲ. ಹತ್ತು ಲಕ್ಷ ಸಾಲ ಮಾಡಿದ್ದೇವೆ….” ಎಂದು ಆಕ್ರೋಶ ಹೊರಹಾಕಿದರು.

ಬಿಬಿಎಂಪಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ನ್ಯಾಯಯುತ ಹಕ್ಕೊತ್ತಾಯದ ಹೋರಾಟ ಒಂದು ಕಡೆಯಾದರೆ, ಅವರು ಮಹಾನಗರಕ್ಕೆ ವಲಸೆ ಬಂದು ಸ್ಲಮ್‌ಗಳಲ್ಲಿ ಉಳಿದು, ಮುಳುಗುವ ಜೋಪಡಿ ಕಟ್ಟಿಕೊಂಡಿದ್ದು ಮತ್ತೊಂದು ದಾರುಣ ಕಥನ. ಇಲ್ಲಿ ಕೆಲಸ ಮಾಡುವ ಬಹುತೇಕ ಸ್ವಚ್ಛತಾಕರ್ಮಿಗಳು ಆಂಧ್ರ ಹಾಗೂ ಹೈದ್ರಾಬಾದ್ ಕರ್ನಾಟಕ ಮೂಲದವರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರಲು ಮೂಲಕಾರಣ – ಹಸಿವು ಹಾಗೂ ಅವಮಾನ. ’ನ್ಯಾಯಪಥ’ದ ಜೊತೆ ಮಾತನಾಡಿದ ಎಲ್ಲ ಹೋರಾಟಗಾರರು ಮತ್ತು ಪೌರಕಾರ್ಮಿಕರ ಮಾತುಗಳಲ್ಲಿ ವಿಷಾದದ ಛಾಯೆ ಇಣುಕುತ್ತಿತ್ತು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್, “ಆಂಧ್ರ ಮೂಲದ ದಲಿತರು ಕರ್ನಾಟಕವಷ್ಟೇ ಅಲ್ಲದೇ, ಪಶ್ಚಿಮ ಬಂಗಾಳ, ಕೇರಳ, ಬಾಂಗ್ಲಾದೇಶ, ಬರ್ಮಾ ಸೇರಿದಂತೆ ವಿವಿಧ ದೇಶ, ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಭೀಕರ ಬರದಿಂದ ನೊಂದು ಬೆಂದ ಈ ಜನ ಜೀವ ಉಳಿಸಿಕೊಳ್ಳಲೆಂದೇ ಊರುಬಿಟ್ಟರು. ನೂರು ವರ್ಷಗಳ ಹಿಂದೆ ಈ ವಲಸೆ ಆರಂಭವಾಯಿತು. ಅಸ್ಪೃಶ್ಯ ಸಮುದಾಯಕ್ಕೆ ಊಟವೂ ಸಿಗುತ್ತಿರಲಿಲ್ಲ. ಯಾವುದಾದರೂ ನಗರಕ್ಕೆ ಹೋದರೆ ನಮ್ಮ ಮಕ್ಕಳಿಗೆ ತಿನ್ನಲಿಕ್ಕಾದರೂ ಏನಾದರೂ ಸಿಗುತ್ತದೆ ಎಂದು ನಡೆದುಕೊಂಡೇ ಹೊರಟರು. ನಮ್ಮ ಪೂರ್ವಿಕರು ಹೀಗೆಯೇ ಇಲ್ಲಿಗೆ ಬಂದು ನೆಲೆಸಿದರು” ಎಂದರು.

ಕೆ.ಆರ್.ಪುರಂ ಭಾಗದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಬಿಎಂಪಿ ಪೌರಕಾರ್ಮಿಕರಾದ ಕೆ.ಆರ್.ರತ್ನ ಇದೇ ಮಾತುಗಳನ್ನು ಪುನರುಚ್ಚರಿಸುತ್ತಾರೆ. “ಆಂಧ್ರದ ಅನಂತಪುರ, ಕರ್ನೂರು, ಕಡಪ, ಮಂತ್ರಾಲಯ, ಅದೋನಿ ಅಲ್ಲದೆ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಕಲ್ಬುರ್ಗಿ- ಹೀಗೆ ಬೇರೆ ಬೇರೆ ಭಾಗದಿಂದ ವಲಸೆ ಬಂದಿರುವ ಕಾರ್ಮಿಕರನ್ನು ಬಿಬಿಎಂಪಿಯಲ್ಲಿ ಕಾಣಬಹುದು. ಊರಲ್ಲಿ ಮಳೆ ಇದ್ದರೇನೇ ಬೆಳೆ. ಸಾಲ ಮಾಡಿ ಬಿತ್ತಿದ ಬೆಳೆ ಫಸಲು ನೀಡಲಿಲ್ಲ. ಆಗ ಕೂಲಿಯೂ ಇಲ್ಲ. ಸಾಲಗಳನ್ನು ತೀರಿಸಲು ಸಾಧ್ಯವಾಗದೆ ಬೆಂಗಳೂರಿನತ್ತ ಪಾಲಾಯನಗೈದರು. ಹೊರಗಡೆ ಬಂದ ದಲಿತರಿಗೆ ಬೇರೆ ಕೆಲಸಗಳು ಯಾವ್ಯಾವು ಇದ್ದಾವೆಂದು ತಿಳಿಯಲಿಲ್ಲ. ವಲಸೆ ಬಂದವರನ್ನೆಲ್ಲ ಗುತ್ತಿಗೆದಾರರು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ಕೊಟ್ಟಿದ್ದೇ ಕೂಲಿ. ಊರು ಬಿಟ್ಟು ಬಂದಿದ್ದ ಜನ ತಕ್ಷಣದಲ್ಲೇ ಯಾವುದಾದರೂ ಕೆಲಸ ಹುಡುಕುತ್ತಿದ್ದಾಗ ಕೈಗೆಟುಕಿದ್ದು ಇದೇ ಗಲೀಜು ಬಾಚುವ ಕೆಲಸ. ಬೇರೆ ಕೆಲಸಗಳಿಗೆ ನಮ್ಮನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ವಿದ್ಯಾಭ್ಯಾಸ ಇರಲಿಲ್ಲ. ಈ ಕೆಲಸ ಮಾಡಿದರೆ ವಾರದ ಕೂಲಿ ಕೊಡುತ್ತಿದ್ದರು. ಇದೆಲ್ಲ ಕಾರಣದಿಂದ ವಲಸೆ ಕಾರ್ಮಿಕರು ಇದೇ ಕೆಲಸದಲ್ಲಿ ಮುಂದುವರಿಯಲು ಕಾರಣವಾಯಿತು” ಎನ್ನುತ್ತಾರೆ ರತ್ನ.

ಪೌರಕಾರ್ಮಿಕರ ಕುರಿತು ವಿಶೇಷ ಅಧ್ಯಯನ ಮಾಡಿರುವ ಹೋರಾಟಗಾರ್ತಿ ದು. ಸರಸ್ವತಿಯವರು ಪೌರಕಾರ್ಮಿಕರ ಜೀವನ ಕುರಿತು ಇನ್ನಷ್ಟು ಬೆಳಕು ಚೆಲ್ಲುತ್ತಾರೆ. “ಬೆಂಗಳೂರಿನಲ್ಲಿ ಆಂಧ್ರದ ಅನಂತಪುರ, ನಲ್ಲೂರಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಸ್ಪೃಶ್ಯ ಜಾತಿಗೆ ಸೇರಿದ ಮಾದಿಗ ಮತ್ತು ಹೊಲೆಯರು ಈ ಕೆಲಸದಲ್ಲಿದ್ದಾರೆ. ಅವರಲ್ಲಿಯೂ ಮಾದಿಗರು ಹೆಚ್ಚು. ಬರ, ಜಮೀನು ಇಲ್ಲದಿರುವುದು, ಭೀಕರ ಜಾತೀಯತೆ ಇತ್ಯಾದಿ ಕಾರಣಕ್ಕೆ ಹೊಟ್ಟೆಪಾಡನ್ನು ಅರಸಿ ಬಂದರು. ಅವರಿಗೆ ತಿಳಿದಿದ್ದ ಚರ್ಮಗಾರಿಕೆ, ಕೃಷಿ ಇತ್ಯಾದಿ ಕೌಶಲಗಳಿಗೆ ಅವಕಾಶ ಸಿಗದೆ ಸ್ವಚ್ಛತಾ ಕೆಲಸಕ್ಕೆ ಇಳಿದರು. ಹೊಟ್ಟೆಹೊರೆದುಕೊಳ್ಳಲು ನಾಲ್ಕು ಕಾಸು ಸಂಪಾದಿಸಲು ಸಾಧ್ಯವಾಗಿದ್ದೇ ಬದಲಾವಣೆ. ಆಧುನಿಕತೆ ನಗರೀಕರಣವೂ ಹೇಗೆ ಜಾತಿಪದ್ಧತಿಯನ್ನು ಉಳಿಸಿಕೊಳ್ಳುತ್ತದೆ ಎಂಬುದಕ್ಕೆ ಅವರ ಬದುಕು ಸಾಕ್ಷಿ ಎಂದು ಅಭಿಪ್ರಾಯ ಪಡುತ್ತಾರೆ ದು.ಸರಸ್ವತಿ.

ದು. ಸರಸ್ವತಿ

“ಹಳ್ಳಿಗಳಲ್ಲಿ ಮಲವನ್ನು ಹೊರುತ್ತಿದ್ದರು, ಆಧುನಿಕ ನಗರದಲ್ಲಿನ ಮ್ಯಾನ್‌ಹೋಲ್‌ಗಳ ಮಲದ ನೀರಿನಲ್ಲಿ ಈಜುವಂತಾಗಿದೆ. ಸಂಘಟಿತರಾಗುತ್ತಿರುವುದು ಆಶಾದಾಯಕ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಹಲವೆಡೆ ಸಂಘಟನೆಗಳು ಆರಂಭವಾಗಿವೆ. ದಲಿತರ ನಾಯಕತ್ವ ಇರುವ ಸಂಘಟನೆಗಳೊಂದಿಗೆ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಸಂಘಟಿತರಾಗಿರುವ ಕಡೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಘನತೆಯಿಂದ ನಡೆಸಿಕೊಳ್ಳಲು ಒತ್ತಾಯಿಸಲು ಸಾಧ್ಯವಾಗಿದೆ” ಎಂದು ಸರಸ್ವತಿ ತಿಳಿಸಿದರು.

ಪೌರಕಾರ್ಮಿಕರ ಶಿಕ್ಷಣದ ಕುರಿತು ಮಾತನಾಡಿದ ಅವರು, “ಶಿಕ್ಷಣ ಕುರಿತಂತೆ ನಿಖರ ಅಂಕಿಅಂಶಗಳು ನನ್ನ ಬಳಿ ಇಲ್ಲ. ಆದರೆ ಕಾಲೇಜಿನವರೆಗೆ ಓದುವವರು ಬಹಳ ಕಡಿಮೆ. ಹತ್ತನೆ ತರಗತಿವರೆಗೆ ಓದುವುದು ಸಹ ಬಹಳ ಕಡಿಮೆ” ಎಂದು ವಿಷಾದಿಸಿದರು.

ನ್ಯಾಯಾಂಗದ ಕಣ್ಣೋಟ ಮತ್ತು ಅಧಿಕಾರಶಾಹಿಯ ಮೌನ

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋದ ಬಹುತೇಕ ಸಮುದಾಯಗಳು ಕನಿಷ್ಠ ದರ್ಜೆಯ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಸಮಾಜಶಾಸ್ತ್ರೀಯ ಅಧ್ಯಯನಗಳಿಂದ ಸಾಬೀತಾಗಿದೆ. ಅದರಲ್ಲೂ ದಮನಿತ ಸಮುದಾಯಗಳು ಈ ಕೆಲಸಗಳಿಗೆ ದೂಡಲ್ಪಡುತ್ತವೆ. ಕಡಿಮೆ ಸಂಬಳಕ್ಕೆ ದುಡಿಯುವುದು, ಯಾವುದೇ ಭದ್ರತೆ ಇಲ್ಲದೆ ಜೀವನ ಸವೆಸುವುದು ನಡೆಯುತ್ತಲೇ ಇದೆ. ಆದರೆ ಈ ಸಮುದಾಯದಲ್ಲಿ ಬದಲಾವಣೆ ಅಥವಾ
ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗ ಕೆಲಸ ಮಾಡಿರುವುದನ್ನು ಅಲ್ಲಗಳೆಯಲಾಗದು.

ಪೌರಕಾರ್ಮಿಕರ ಸಂಬಂಧ ನ್ಯಾಯಾಂಗ ನೀಡಿರುವ ಮಹತ್ವದ ಅವಲೋಕನಗಳನ್ನು ಉಲ್ಲೇಖಿಸಿ ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ ಜಸ್ಟೀಸ್ ನಾಗಮೋಹನ ದಾಸ್ ಅವರು, “ಶಿಕ್ಷಣವೇ ದಲಿತರಿಗೆ ಬಿಡುಗಡೆಯ ಹಾದಿ” ಎಂದು ಪ್ರತಿಪಾದಿಸಿದರು.

“2010ರಲ್ಲಿ, 2014ರಲ್ಲಿ ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಿದೆ. ಯಾವುದೇ ಪೌರಕಾರ್ಮಿಕನಿಗೆ ಮೊದಲೇ ಸೂಚನೆಗಳನ್ನು ಕೊಡದೆ, ಸೂಕ್ತ ಸಲಕರಣೆಗಳನ್ನು ನೀಡದೆ ಕೆಲಸಕ್ಕೆ ದೂಡುವುದು ಕಾನೂನಿನ ಪ್ರಕಾರ ಅಪರಾಧ. ಯಾವುದೇ ಪೌರಕಾರ್ಮಿಕರು ಕೆಲಸದ ವೇಳೆ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಈ ರೀತಿಯ ಪರಿಹಾರವನ್ನು 1993ರಿಂದ ಯಾರುಯಾರು ಸತ್ತಿದ್ದಾರೋ ಅವರ ಕುಟುಂಬಗಳಿಗೆಲ್ಲ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ” ಎನ್ನುತ್ತಾರೆ ನಾಗಮೋಹನದಾಸ್.

“ವರ್ಷಕ್ಕೆ ಸರಾಸರಿ 300 ಜನ ಪೌರಕಾರ್ಮಿಕರು ಸರಿಯಾದ ಸಲಕರಣೆಗಳಿಲ್ಲದೆ, ಸೂಚನೆಗಳಿಲ್ಲದೆ ಮರಣಕ್ಕೆ ಈಡಾಗುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರಕುತ್ತಿಲ್ಲ. ಸಾವಿಗೀಡಾದ ಪೌರಕಾರ್ಮಿಕರ ಕುರಿತು ಬಹುಪಾಲು ವೇಳೆ ಪ್ರಕರಣಗಳು ದಾಖಲಾಗುತ್ತಿಲ್ಲ. ಒಂದು ವೇಳೆ ದಾಖಲಾದರೂ ಸರಿಯಾಗಿ ವಿಚಾರಣೆಗಳು ನಡೆಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಸುಪ್ರೀಂ ಕೋರ್ಟ್ ನೀಡಿದ ಎರಡು ಮಹತ್ವದ ತೀರ್ಪುಗಳನ್ನು ಪಾಲಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಅಂಶವನ್ನು ಸಂವಿಧಾನದ 39ನೇ ಅನುಚ್ಛೇದದಲ್ಲಿ ಹೇಳಲಾಗಿದೆ. ಸರ್ಕಾರಗಳು ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವತ್ತ ಹೆಜ್ಜೆ ಇಡಬೇಕಿದೆ” ಎಂದು ಅವರು ಆಶಿಸಿದರು.

ನಾಗಮೋಹನ ದಾಸ್

“ಎಸ್‌ಸಿ, ಎಸ್‌ಟಿ ಕೋಟಾ ಹೆಚ್ಚಳ ಮಾಡಬೇಕೆಂದು ನನ್ನ ನೇತೃತ್ವದಲ್ಲಿ ಸರ್ಕಾರ ಆಯೋಗ ರಚನೆ ಮಾಡಿತು. ಒಂದೂವರೆ ವರ್ಷಗಳ ಹಿಂದೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿಯಾಗಿದೆ. ವರದಿಯಲ್ಲಿನ ಒಂದು ಚಾಪ್ಟರ್‌ನಲ್ಲಿ- ಸಂವಿಧಾನ ಬಂದು 73 ವರ್ಷಗಳಾಯಿತು. ಎಸ್.ಸಿ., ಎಸ್.ಟಿ.ಗೆ ಮೀಸಲಾತಿ ಇದೆ. ಈ ಮೀಸಲಾತಿ ಸಂವಿಧಾನ ಬಂದಾಗಿನಿಂದ ಜಾರಿಯಲ್ಲಿ ಇದ್ದರೂ ಕೆಲವರಿಗೆ ಅದರ ಸವಲತ್ತು ತಲುಪಲೇ ಇಲ್ಲ. ಆದಿವಾಸಿಗಳು, ಅಲೆಮಾರಿಗಳು, ಸಫಾಯಿಗಳು, ದೇವದಾಸಿ ಮಕ್ಕಳು, ಕೊಳಚೆ ನಿವಾಸಿಗಳು ಮೀಸಲಾತಿ ಸೌಲಭ್ಯ ಪಡೆಯಲಿಲ್ಲ. ಯಾಕೆಂದರೆ ಇವರಲ್ಲಿ ಪ್ರಾಥಮಿಕ ಶಿಕ್ಷಣದ ಕೊರತೆ ಇದೆ- ಎಂಬ ಅಂಶವನ್ನು ಪ್ರಸ್ತಾಪಿಸಲಾಗಿದೆ” ಎಂದು ವಿವರಿಸಿದರು.

“ಪ್ರಾಥಮಿಕ ಶಿಕ್ಷಣ ಇಲ್ಲದೆ ಉನ್ನತ ಶಿಕ್ಷಣ ಸಾಧ್ಯವೇ ಇಲ್ಲ. ಈ ಉನ್ನತ ಶಿಕ್ಷಣ ಇಲ್ಲದಿದ್ದರೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಮೀಸಲಾತಿ ಸವಲತ್ತು ದೊರಕುವುದಿಲ್ಲ. ಸರ್ಕಾರ ಏನು ಮಾಡಬಹುದು? ವರ್ಷಕ್ಕೆ ಸುಮಾರು 30,000 ಕೋಟಿ ರೂಪಾಯಿಗಳನ್ನು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಮೀಸಲಿಡುತ್ತಾರೆ. ಅದರಲ್ಲಿ ಶೇ.10ರಷ್ಟು ಹಣವನ್ನು ಎಸ್.ಸಿ., ಎಸ್.ಟಿ. ಸಮುದಾಯದ ಮಕ್ಕಳ ವಸತಿ ಶಾಲೆಗಳ ಅಭಿವೃದ್ಧಿಗೆ ಬಳಸಬೇಕು. ಅಂದರೆ ಸುಮಾರು 3000 ಕೋಟಿ ರೂ. ಶಿಕ್ಷಣಕ್ಕಾಗಿಯೇ ಪ್ರತಿ ವರ್ಷ ಖರ್ಚಾಗುತ್ತದೆ. ಹತ್ತು ವರ್ಷಗಳಲ್ಲಿ ಎಲ್ಲ ಎಸ್.ಟಿ. ಎಸ್.ಟಿ. ಮಕ್ಕಳಿಗೆ ಉಚಿತ ವಸತಿ ಶಾಲೆಗಳನ್ನು ನಿರ್ಮಿಸಬಹುದು. ಎಲ್ಲ ದಲಿತರಿಗೆ ಶಿಕ್ಷಣ ದೊರಕಿದರೆ ಈ ಸಾಂಪ್ರದಾಯಿಕ ಕೆಲಸಗಳು ಕೊನೆಯಾಗುತ್ತವೆ. ಶಿಕ್ಷಣವೇ ಸಮುದಾಯದ ಅಭಿವೃದ್ಧಿ ದಾರಿ” ಎಂದು ಎಚ್ಚರಿಸಿದರು.

“ದಲಿತರಲ್ಲಿ ಕಟ್ಟಕಡೆಯ ಸ್ಥಾನದಲ್ಲಿ ಮಾದಿಗರು ಇದ್ದಾರೆ. ಅವರು ಸಫಾಯಿಗಳಾಗಿದ್ದಾರೆ. ಶಿಕ್ಷಣವಿಲ್ಲದೆ ಈ ಸಮುದಾಯ ಹಿಂದುಳಿದಿದೆ. ಈ ದಿಕ್ಕಿನಲ್ಲಿ ನಾವು ಯೋಚನೆ ಮಾಡಬೇಕಿದೆ. ಇದರ ಜೊತೆಗೆ ಎಸ್.ಸಿ., ಎಸ್.ಟಿ.ಗಳಲ್ಲಿನ ಬಲಿಷ್ಟರೇ ಮೀಸಲಾತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಪೌರಕಾರ್ಮಿಕ ಮಕ್ಕಳು ಓದಿಕೊಂಡರೂ ಎಸ್‌ಸಿಗಳಲ್ಲಿನ ಬಲಿಷ್ಠರೊಂದಿಗೆ ಸ್ಪರ್ಧೆ ಮಾಡಲು ಆಗುತ್ತಿಲ್ಲ. ಹೀಗಾಗಿ ಒಳಮೀಸಲಾತಿ ಬಗ್ಗೆ ಗಮನ ಹರಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ವಲಸೆ ಬರುವ ತಳಸಮುದಾಯದ ಎಷ್ಟೋ ಮಂದಿ ನಮ್ಮ ನಗರದ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ತಾವೇ ಅಪಾಯದಲ್ಲಿದ್ದಾರೆ. ಈ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರವನ್ನು ಹುಡುಕುವಲ್ಲಿ ವ್ಯವಸ್ಥೆ ಮತ್ತು ನಾಗರಿಕರು ಒಟ್ಟಾಗಿ ಶ್ರಮಿಸಬೇಕಿದೆ.


ಇದನ್ನೂ ಓದಿ: ಸರ್ಕಾರ-ನಾಗರಿಕರ ಉದಾಸೀನತೆ ಮತ್ತು ಜಾತೀಯತೆಯ ಹಿಂಸೆ; ಸುಧಾರಿಸದ ಪೌರಕಾರ್ಮಿಕರ ಜೀವನಮಟ್ಟ ಮತ್ತು ಕೆಲಸದ ಪರಿಸ್ಥಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...