ಧರ್ಮಸ್ಥಳದ ‘ಖಾವಂದರು’ ಎಂದು ಭಕ್ತಾದಿಗಳಿಂದ ಕರೆಸಿಕೊಳ್ಳುವ ವೀರೇಂದ್ರ ಹೆಗ್ಗಡೆಯವರು, ಒಂದು ವಿಶೇಷ ಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಪತ್ರಕರ್ತ, ಪರಿಸರ ಕಾಳಜಿಯುಳ್ಳ ತಜ್ಞ ನಾಗೇಶ್ ಹೆಗಡೆಯವರು ಬರೆದಿದ್ದನ್ನು, ಬಳಸಿಕೊಳ್ಳಲು ನಮಗೆ ಅನುಮತಿ ನೀಡಿದ್ದಾರೆ.
ಭಕ್ತಾದಿಗಳ ಗಮನಕ್ಕೆ….
ತುಸು ಜಾಸ್ತಿ ಜನ ಈ ಪೋಸ್ಟ್ ನೋಡಲಿ ಎಂಬ ಉದ್ದೇಶದಿಂದ ಈ ಶಿರೋನಾಮೆ.
ಆಗಿದ್ದೇನೆಂದರೆ, ಧರ್ಮಸ್ಥಳದ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ತೀವ್ರ ಅಭಾವವಾಗಿದೆ. ಅದಕ್ಕೇ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ಪ್ರಕಟನೆ ಹೊರಡಿಸಿದ್ದಾರೆ. “ಆದುದರಿಂದ ಭಕ್ತಾದಿಗಳು ಮತ್ತು ಪ್ರವಾಸಿಗಳು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಕೋರುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಇದೇ ಪ್ರಕಟನೆ ಹೀಗೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು: “ಆದುದರಿಂದ ನೀರಿನ ಮಿತಬಳಕೆ ಮತ್ತು ಮರುಬಳಕೆಯ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಮುಡಿ ಕೊಡುವ ಭಕ್ತರೂ ಕೇವಲ ಒಂದು ಬಕೆಟ್ ನೀರಿನಲ್ಲಿ ಸ್ನಾನ ಮಾಡಬಹುದು. ಬಳಸಿದ ನೀರನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವ ವಿಧಾನಗಳನ್ನೂ ಇಲ್ಲಿ ತೋರಿಸುವ ಯೋಜನೆ ಇದೆ. ಅದು ಜಾರಿಗೆ ಬರಲು ತುಸು ತಡವಾಗಬಹುದು. ಸದ್ಯಕ್ಕೆ ನೀರನ್ನು ಮಿತವಾಗಿ ಬಳಸಲು ಬಲ್ಲವರಿಗಷ್ಟೇ ಇಲ್ಲಿ ಸ್ವಾಗತವಿದೆ’’.
ಅಭಾವದ ದಿನಗಳಲ್ಲಿ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಿ ಹೇಳುವ ಅತ್ಯಮೂಲ್ಯ ಅವಕಾಶ ಇದಾಗಿತ್ತು. ಸರಕಾರವೇ ವಿವಿಧ ಜಿಲ್ಲೆಗಳಲ್ಲಿ ಆ ಕೆಲಸವನ್ನು ಕೈಗೊಳ್ಳಬೇಕಿತ್ತು. ಸಿಂಗಪುರದಲ್ಲಿ, ಚರಂಡಿ ನೀರನ್ನೂ ಹೇಗೆ ಶುದ್ಧೀಕರಿಸಿ ಕುಡಿಯಲು ಬಳಸುತ್ತಾರೆ, ನಮೀಬಿಯಾದ ಪ್ರವಾಸಿ ನಗರ ವಿಂಡ್ಹೋಕ್ ಮತ್ತು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಗಳಲ್ಲಿ ಜನರು ನೀರಿನ ತೀವ್ರ ಅಭಾವವನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ ಚಾನೆಲ್ ಗಳಲ್ಲಿ ಪ್ರೈಮ್ ಟೈಮ್ ನಲ್ಲಿ ಸರಕಾರಿ ಖರ್ಚಿನಲ್ಲಿ ತಜ್ಞರ ಚರ್ಚೆ ಏರ್ಪಡಿಸಬಹುದಿತ್ತು. ಅಧಿಕಾರಿಗಳೇನೊ ಉಷ್ಟ್ರಪಕ್ಷಿಗಳಾಗಿದ್ದಾರೆ. ಸರಕಾರದ ಮುಖ್ಯಸ್ಥರಂತೂ ನೀರನ್ನು ಮರೆತು ಚಿನ್ನದ ರಥ, ರೆಸಾರ್ಟ್, ದೇಗುಲ, ಮಂದಿರಗಳ ಸುತ್ತು ಹೊಡೆಯುತ್ತಿದ್ದಾರೆ. ಧರ್ಮಸ್ಥಳವೂ ಈ ದಿನಗಳಲ್ಲಿ ಭಕ್ತರನ್ನು ಕೈಬಿಟ್ಟರೆ ಹೇಗೆ?
ಸುಮಾರು 25 ವರ್ಷಗಳ ಹಿಂದೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡಯವರಿಗೆ ನಾನೊಂದು ಪತ್ರ ಬರೆದಿದ್ದೆ. “ಭಕ್ತರು ತಿಂದು ಬಿಸಾಕಿದ ಊಟದ ಎಲೆಗಳ ತ್ಯಾಜ್ಯ ಹತ್ತು ಕಿಲೊಮೀಟರ್ ವರೆಗೂ ವಿಸ್ತರಿಸಿದೆ. ಅದೇ ತ್ಯಾಜ್ಯವನ್ನು ಬಯೊಡೈಜೆಸ್ಟರ್ ಮೂಲಕ ಸಂಸ್ಕರಿಸಿದರೆ ಅಡುಗೆ ಅನಿಲವೂ ಸಿಗುತ್ತದೆ, ಉತ್ತಮ ಕಾಂಪೋಸ್ಟ್ ಕೂಡ ಸಿಗುತ್ತದೆ” ಎಂದು ಅಂತರ್ದೇಶೀ ಪತ್ರದಲ್ಲಿ ಬರೆದಿದ್ದೆ. ಅದಕ್ಕೆ ಅವರು ತಕ್ಷಣ ಸ್ಪಂದಿಸಿ, “ಈ ವ್ಯವಸ್ಥೆ ಅಳವಡಿಸಲು ಸಿದ್ಧರಿದ್ದೇವೆ, ಮಾರ್ಗದರ್ಶನ ಎಲ್ಲಿ ಸಿಗುತ್ತದೆ?” ಎಂದು ನನಗೆ ಬರೆದಿದ್ದರು. ಈಗ ಅಲ್ಲಿ ತ್ಯಾಜ್ಯ ಸಂಸ್ಕರಣೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
ಇದೇ ಉತ್ಸಾಹದಲ್ಲಿ ನೀರಿನ ನಿರ್ವಹಣೆಯ ತಂತ್ರಜ್ಞಾನವನ್ನೂ ಜಾರಿಗೆ ತರಬೇಕಾದ ತುರ್ತು ಅಲ್ಲಿ ಬಂದಿದೆ. ನೀರಿನ ಮಿತಬಳಕೆ, ಮರುಬಳಕೆ ಹಾಗೂ ನದಿಮರುಪೂರಣ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನಮ್ಮ ಜನರಿಗೆ ತೀರ ಅಗತ್ಯವಾಗಿದೆ. (ದಶಕಗಳಿಂದ ಬತ್ತಿ ಹೋಗಿದ್ದ ನದಿಯನ್ನು ಮತ್ತೆ ಸಜೀವಗೊಳಿಸಿದ ಉದಾಹರಣೆ ರಾಜಸ್ತಾನದಲ್ಲಿದೆ). ಎಲ್ಲಕ್ಕಿಂತ ಮುಖ್ಯವಾಗಿ ನೇತ್ರಾವತಿಯ ನದಿಯನ್ನು ತಿರುಗಿಸುವ (ಎತ್ತಿನ ಹೊಳೆ) ಯೋಜನೆಯ ಭವಿಷ್ಯದ ಫಲಾನುಭವಿಗಳೆನಿಸಿದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಭಕ್ತರಿಗೆ ಧರ್ಮಸ್ಥಳದಲ್ಲಿ ಈ ದಿನಗಳಲ್ಲೇ ನೀರಿನ ಮಿತಬಳಕೆಯ ಪ್ರಾತ್ಯಕ್ಷಿಕೆ ಕೊಡುವುದು ಒಳ್ಳೆಯದು!
ಹರಕೆ, ಪೂಜೆಗೆಂದು ಬರುವ ಎಮ್ಮೆಲ್ಲೆ, ಎಂಪಿ, ಮಂತ್ರಿಗಣಕ್ಕೆ ಕಡ್ಡಾಯವಾಗಿ ಇಂಥ ಪ್ರಾತ್ಯಕ್ಷಿಕೆಗಳನ್ನು ಮೊದಲು ತೋರಿಸಿ ಆಮೇಲೆ ದೇವರ ದರ್ಶನ ಮಾಡಿಸಬೇಕು. ನೇತ್ರಾವತಿ ನದಿಮೂಲವನ್ನು ದುಃಸ್ಥಿತಿಗೆ ತಂದ ಮರಳು ಗಣಿಗಾರಿಕೆ, ಹೆದ್ದಾರಿ ವಿಸ್ತರಣೆ, ಅರಣ್ಯನಾಶಗಳ ದೊಡ್ಡ ದೊಡ್ಡ ಚಿತ್ರಗಳು ಮಂತ್ರಿಗಳ ಸ್ನಾನದ ಮನೆಯಲ್ಲಿ ಇರಬೇಕು. ಅರ್ಧ ಬಕೆಟ್ ನೀರಲ್ಲಿ ಗಣ್ಯರು ಸ್ನಾನ ಮಾಡುವುದು ಭಕ್ತಾದಿಗಳ ಗಮನಕ್ಕೂ ಬರುವಂತಿರಬೇಕು.


