ಬುಡಕಟ್ಟು ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಕುರಿತು ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರನ್ನು ಜೈಲಿನಲ್ಲಿ “ಕೊಲ್ಲಲಾಗಿದೆ” ಎಂದು ಆರೋಪಿಸಿದ್ದಾರೆ.
84 ವರ್ಷದ ವ್ಯಕ್ತಿಯೊಬ್ಬರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಬಲ್ಲರು ಎಂದರೆ,ದೇಶದ ಅಡಿಪಾಯ ಎಷ್ಟು ದುರ್ಬಲವಾಗಿದೆಯೆ..? ಎಂದು ಸಂಸದ ಪ್ರಶ್ನಿಸಿದ್ದಾರೆ. ಜೊತೆಗೆ ನರೇಂದ್ರ ಮೋದಿ ಸರ್ಕಾರವನ್ನು ಹಿಟ್ಲರ್ ಮತ್ತು ಮುಸೊಲಿನಿ ಸರ್ಕಾರಗಳೊಂದಿಗೆ ಹೋಲಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಎಲ್ಗರ್ ಪರಿಷತ್ ಪ್ರಕರಣಕ್ಕೆ (ಭೀಮಾ ಕೋರೆಗಾಂವ್) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಫಾದರ್ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿತ್ತು. ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನ್ಯಾಯಾಂಗ ಬಂಧನದಲ್ಲಿಯೇ ಅವರು ನಿಧನರಾದರು. ಅವರ ನಿಧನಕ್ಕೆ ರಾಷ್ಟ್ರೀಯ-ಅಂತರರಾಷ್ಟರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ.
“ಇಂದಿರಾ ಗಾಂಧಿ ಜಾರ್ಜ್ ಫರ್ನಾಂಡಿಸ್‌ಗೆ ಹೆದರುತ್ತಿದ್ದರು. ಜಾರ್ಜ್ ಅವರಿಗೆ ಫಾದರ್ ಸ್ಟಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಫಾದರ್ ಸ್ಟಾನ್ ಸ್ವಾಮಿ ಮತ್ತು ವರವರ ರಾವ್ ಅವರಿಗೆ ಹೆದರಿದೆ. ಜೈಲಿನಲ್ಲಿಯೇ ಸ್ಟಾನ್ ಸ್ವಾಮಿ ಕೊಲ್ಲಲ್ಪಟ್ಟರು” ಎಂದು ಸಂಜಯ್ ರಾವತ್ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಹೇಳಿದ್ದಾರೆ.
ಎಲ್ಗರ್ ಪರಿಷತ್‌ನಲ್ಲಿ ನಡೆದ ಭಾಷಣಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಬೆಂಬಲಿಸಲಾಗುವುದಿಲ್ಲ. ಆದರೆ, ಆದಾದ ಬಳಿಕ ನಡೆದದ್ದನ್ನು ಸ್ವಾತಂತ್ರ್ಯವನ್ನು ಭೇದಿಸುವ ಪಿತೂರಿ ಎಂದು ಕರೆಯಬೇಕು ಎಂದು ಹೇಳಿದ್ದಾರೆ.
“ಕಾಡುಗಳಲ್ಲಿ ಬುಡಕಟ್ಟು ಜನರಿಗೆ ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವುದು ದೇಶದ್ರೋಹವಾಗಬಹುದೇ..?” ಎಂದು ಪ್ರಶ್ನಿಸಿದ್ದಾರೆ.
“ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿಂತ ಮಾವೋವಾದಿಗಳು ಮತ್ತು ನಕ್ಸಲರು ಹೆಚ್ಚು ಅಪಾಯಕಾರಿಯಾಗಿದ್ದರೂ ಜೈಲಿನಲ್ಲಿ 84 ವರ್ಷದ ಅಸಹಾಯಕ ಫಾದರ್ ಸ್ಟಾನ್ ಸ್ವಾಮಿಯವರ ಸಾವನ್ನು ಸಮರ್ಥಿಸಲಾಗುವುದಿಲ್ಲ. ಸರ್ಕಾರವನ್ನು ವಿರೋಧಿಸುವುದು ಮತ್ತು ದೇಶ ವಿರೋಧದ ನಡುವೆ ವ್ಯತ್ಯಾಸವಿದೆ. ಸರ್ಕಾರವನ್ನು ವಿರೋಧಿಸುವುದು ದೇಶದ ವಿರುದ್ಧದ ಪಿತೂರಿ ಎಂದು ಯಾರಾದರೂ ಭಾವಿಸಿದರೆ, ಅವರ ಮನಸ್ಸಿನಲ್ಲಿ ಸರ್ವಾಧಿಕಾರದ ಬೀಜಗಳನ್ನು ಬಿತ್ತಲಾಗುತ್ತಿದೆ ಎಂದು ಪರಿಗಣಿಸಬೇಕು” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಕ್ಯಾಥೋಲಿಕ್ ಪಾದ್ರಿಯಾಗಿದ್ದ ಸ್ಟ್ಯಾನ್ ಸ್ವಾಮಿ ಕೇರಳ ಮೂಲದವರಾಗಿದ್ದು 50 ವರ್ಷದಿಂದ ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ NIA ಕಳೆದ ವರ್ಷ ಬಂಧಿಸಿತ್ತು. ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಸ್ಟ್ಯಾನ್ ಸ್ವಾಮಿಯ ಮೇಲೆ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ಶ್ರದ್ಧಾಂಜಲಿ; ವಿಚಾರಣಾಧೀನ ಕೈದಿಯಾಗಿ ಭಾರತರತ್ನವೊಂದರ ಸಾವು


