ಉತ್ತರಾಖಂಡದ ಉತ್ತರಕಾಶಿಯ ಭಾಗೀರಥಿ ನದಿಯ ದಡದಲ್ಲಿರುವ ಕೇದಾರ ಘಾಟ್‌ನಲ್ಲಿ ಬೀದಿ ನಾಯಿಗಳು ಮಾನವರ ಮೃತದೇಹಗಳನ್ನು ತಿನ್ನುತ್ತಿರುವ ಭೀಕರ ದೃಶ್ಯಗಳು ಹೊರಬಿದ್ದಿವೆ. ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಭಾಗೀರಥಿಯ ನೀರಿನ ಮಟ್ಟ ಏರಿಕೆಯಾಗಿ, ಶವಗಳು ಹೊರ ಬಂದಿವೆ. ಅವುಗಳಲ್ಲಿ ಕೆಲವು ಅರ್ಧ ಸುಟ್ಟುಹೋಗಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
“ನಾನು ನಿನ್ನೆ ಇಲ್ಲಿ ಕೆಲವು ಚಿತ್ರಕಲೆ ರಚಿಸುತ್ತಿದ್ದೆ. ಆಗ ಅರ್ಧ ಸುಟ್ಟ ದೇಹಗಳನ್ನು ಬೀದಿ ನಾಯಿಗಳು ತಿನ್ನುವುದನ್ನು ನಾನು ನೋಡಿದೆ. ಜಿಲ್ಲಾಡಳಿತ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಇದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇದು ಮಾನವೀಯತೆಯ ಸಾವು” ಎಂದು ಸ್ಥಳೀಯರು ಹೇಳಿದ್ದಾರೆ.
ಇಲ್ಲಿ ಶವಸಂಸ್ಕಾರ ಮಾಡಿರುವ ದೇಹಗಳು ಕೊರೊನಾ ಸೋಂಕಿತರ ಮೃತದೇಹಗಳಿರುವ ಸಾಧ್ಯತೆ ಇದೆ. ಈಗ ಶವಗಳು ಹೊರ ಬಂದಿರುವ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಕತ್ತರಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್ ಬಂದೋಪಾದ್ಯಾಯ್
ಘಟನೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ವಿನಂತಿಸಿದ್ದೇವೆ. ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರೂ, ಅಂತಿಮ ವಿಧಿಗಳನ್ನು ನಡೆಸಿದ ನಂತರ ಶವಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳು ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಪುರಸಭೆಯ ಅಧ್ಯಕ್ಷ ರಮೇಶ್ ಸೆಮ್ವಾಲ್ ಅವರು ಸ್ಥಳೀಯರಿಂದ ದೂರುಗಳನ್ನು ಸ್ವೀಕರಿಸಿದ ನಂತರ, ಕೇದಾರ್ ಘಾಟ್‌ನಲ್ಲಿ ನದಿಯ ದಂಡೆಯಲ್ಲಿ ಕೊಚ್ಚಿ ಅರ್ಧ ಸುಟ್ಟ ಶವಗಳನ್ನು ದಹನ ಮಾಡಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿದ್ದಾರೆ.
“ಕಳೆದ ಕೆಲವು ದಿನಗಳಲ್ಲಿ, ನಮ್ಮ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮೃತದೇಹಗಳನ್ನು ಸರಿಯಾಗಿ ಸುಡುವುದಿಲ್ಲ ಎಂದು ನನಗೆ ತಿಳಿದುಬಂದಿದೆ. ಆದ್ದರಿಂದ ಅರ್ಧ ಸುಟ್ಟ ಶವಗಳ ಅಂತ್ಯಕ್ರಿಯೆಗಾಗಿ ಕೇದಾರ ಘಾಟ್‌ನಲ್ಲಿ ವ್ಯವಸ್ಥೆ ಮಾಡಲು ನಾನು ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ” ಎಂದು ರಮೇಶ್ ಸೆಮ್ವಾಲ್ ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ತೇಲುತ್ತಿರುವ ಘಟನೆಗಳು ವರದಿಯಾಗಿದ್ದವು. ಈಗ ಉತ್ತರಾಖಂಡದಲ್ಲಿಯೂ ಇಂತಹ ಘಟನೆಗಳು ವರದಿಯಾಗಿವೆ. ಜೊತೆಗೆ ನಾಯಿಗಳು ಮೃತದೇಹಗಳನ್ನು ಕಿತ್ತು ತಿನ್ನುತ್ತಿರುವ ಘಟನೆಗಳು ವರದಿಯಾಗಿವೆ.
ಇದನ್ನೂ ಓದಿ: 5 ಜಿ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ನಟಿ ಜೂಹಿ ಚಾವ್ಲಾ ಅರ್ಜಿ


