ಲೆನಿನ್ ಅವರನ್ನು ಯಾರೋ ಬೇ-ಧಂಧಾ ಪತ್ರಕರ್ತ ರೊಬ್ಬರು ಕೇಳಿದರಂತ. ವಿದ್ಯಾರ್ಥಿಗಳ ಕೆಲಸ ಏನು? ಅವರು ವಿದ್ಯಾರ್ಥಿಗಳಿಗೆ ಐದು ಕೆಲಸಗಳು ಅಂತ ಅಂದರಂತ. ಅದು ಅಧ್ಯಯನ, ಅಧ್ಯಯನ, ಅಧ್ಯಯನ, ಅಧ್ಯಯನ ಹಾಗೂ ಅಧ್ಯಯನ ಅಂತ ಹೇಳಿದರಂತ. ಹಂಗಂತ ಯಾರೋ ಲೆನಿನ್ ವಿರೋಧಿಗಳು ವಾಮಪಂಥದ ಹುಡುಗರು ಪ್ರತಿಭಟನೆ ಮಾಡುವಾಗ ಅದನ್ನು ವಿರೋಧಿಸಲಿಕ್ಕೆ ಹೇಳಿದ್ದಾಗ ಪತ್ರಿಕೆಗಳಲ್ಲಿ ಬಂದಿತ್ತು. ನೋಡಿ ನಿಮ್ಮ ದೇವರೇ ವಿರೋಧ ಮಾಡಿದ್ದಾರೆ. ನೀವು ಯಾಕೆ ಅದನ್ನು ಪಾಲಿಸುತ್ತೀರಿ ಅನ್ನುವ ಅಮೃತವಾಣಿ ಅದು. ಲೆನಿನ್ ಅವರು ಈ ರೀತಿ ಹೇಳಿದ್ದಕ್ಕೆ ಈವರೆಗೆ ಪುರಾವೆ ಇಲ್ಲ. ಮುಂದೆ ಸಿಗಬಹುದು. ಬೇರೆ ಮಹಾನುಭಾವರು ಹೇಳಿರಬಹುದು. ಕೆಲವರಿಗೆ ಇದು ಸರಿ ಅಂತ ಅನ್ನಿಸಲೂ ಬಹುದು.
ನಿಮ್ಮ ಮಾತಿಗೆ ಬೀಗ, ನಮ್ಮ ಪ್ರತ್ಯುತ್ತರ ಲಾಠಿ, ಬೂಟು, ಗೋಲಿಬಾರಿನಿಂದ, ಅಂತ ಆಳುವವರು ಹೇಳಲಿಕ್ಕೆ ಹತ್ಯಾರ. ಎಲ್ಲ ಕಡೆ ಪ್ರತಿಭಟನೆ ಬಂದ್ ಮಾಡಲಿಕ್ಕೆ ಪೊಲೀಸ್ ಹಿಂಸೆಯೊಂದರ ಉಪಯೋಗ ಆಗಲಿಕ್ಕೆ ಹತ್ತೇದ.
ವಾಕ್ ಸ್ವಾತಂತ್ರ್ಯ ಹತ್ತಿಕ್ಕಲಿಕ್ಕೆ ಎಷ್ಟು ಬೇಕೋ ಅಷ್ಟು ಬಲ ಪ್ರಯೋಗ ಆಗಲಿಕ್ಕೆ ಹತ್ತೇದ. ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು. ಹಾಗೆ ಮಾಡಿದರೆ ಶಿಕ್ಷೆ ಆಗುತ್ತದೆ. ಅವರು ಹಾಗೆ ಮಾಡುತ್ತಾರೋ ಇಲ್ಲವೋ ಅನ್ನುವುದನ್ನು ನೋಡಲು ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಅಂತ ಕೇಂದ್ರ ಸರಕಾರ ಹೇಳೇದ. ದೂರದರ್ಶನ, ಪ್ರಿಂಟ್ ಹಾಗೂ ಇತರ ಮಾಧ್ಯಮಗಳಲ್ಲಿ ಸುಳ್ಳು ಹಬ್ಬಿಸಬಾರದು ಅಂತ ಹೇಳಿ ಕೇಂದ್ರ ವಾರ್ತಾ ಇಲಾಖೆ ಹೊಸ ನಿಯಮಾವಳಿ ಮಾಡೇದ.
ಆಳುವವರು ವಿದ್ಯಾರ್ಥಿಗಳನ್ನು ಹಿಂಸೆ ಪ್ರಚೋದಿಸುತ್ತಿರುವವರು ಕಾಂಗ್ರೆಸ್ಸನವರು ಅಂತ ಹೇಳಿ ಮನಿಯೊಳಗ ಮಲಕೊಂಡವರಿಗೆ ಸುಳ್ಳ -ಸುಳ್ಳ ಪ್ರಚಾರ ಕೊಟ್ಟರು.
ಸುಮ್ಮನೇ ಮನೆಯಲ್ಲಿ ಇರಿ. ಹೊರಗೆ ಹೋದರ ಹೊಡತಾ ತಿಂತೀರಿ ಅಂತ ಹೇಳಿದರು. ವಿದ್ಯಾರ್ಥಿಗಳು ಅಭ್ಯಾಸ ಬಿಟ್ಟು ಬೇರೆ ಮಾಡಬಾರದು ಅಂತ ಸಲಹೆ ಕೊಟ್ಟರು.
ಹಂಗಾರ ಈ ಥರಾ ಪ್ರವಚನ ಮಾಡೋರು ತಾವು ಈ ನಿಯಮಗಳನ್ನ ಪಾಲಿಸಿದರ? ಇಲ್ಲಾ. ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಿಂದ ಹಿಡದು ಪಕ್ಷದ ಸಾಮಾನ್ಯ ಕಾರ್ಯಕರ್ತರ ವರೆಗೆ ಎಲ್ಲರೂ ವಿದ್ಯಾರ್ಥಿ ರಾಜಕೀಯ ಮಾಡಿಕೊಂಡು ಬಂದವರು. ವಿದ್ಯಾರ್ಥಿಗಳು ಓದೋದು ಬಿಟ್ಟು ಬೇರೆ ಏನೂ ಮಾಡಬಾರದು ಅನ್ನೋ ಪಕ್ಷದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನೋ ಸಂಘಟನೆ ಯಾಕ ಕಟ್ಟಿದರು?
ಆಳುವ ಪಕ್ಷದ ಯಾವಾವ ನಾಯಕರು ವಿದ್ಯಾರ್ಥಿ ರಾಜಕಾರಣದಿಂದ ಬಂದವರು ಅಂತ ನೋಡಿದರ ಸಿಗೋದು ಈ ಪಟ್ಟಿ.
ಅಮಿತ ಶಾ ಅವರು 1983 ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ನಾಯಕರಾಗಿದ್ದರು. ನಂತರ 86 ದಾಗ ಪಕ್ಷ ಸೇರಿದರು. ನಂತರ ಗುಜರಾತಿನ ಸಚಿವರಾಗಿ, ಕೇಂದ್ರದ ಸಚಿವರಾದರು.
ದಿವಂಗತ ಸುಷ್ಮಾಸ್ವರಾಜ್ ಅವರು ವಿದ್ಯಾರ್ಥಿ ನಾಯಕಿಯಾಗಿದ್ದರು. ಆ ನಂತರ ಅತಿ ಸಣ್ಣ ವಯಸ್ಸಿನಲ್ಲಿಯೇ ಸಚಿವರಾದರು.
ದಿವಂಗತ ಅನಂತ ಕುಮಾರ್ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 85 ರಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ನಂತರ 87 ರೊಳಗ ಪಕ್ಷ ಸೇರಿದರು.
ಈಗಿನ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು 1964 ರೊಳಗ ಸಂಘ ಪರಿವಾರದ ಸಂಪರ್ಕಕ್ಕ ಬಂದವರು 71 ರೊಳಗ ಗೋರಖಪುರದಾಗ ಎಬಿವಿಪಿ ನಾಯಕರಾಗಿದ್ದರು.
ದಿವಂಗತ ಅರುಣ ಜೇಟಲಿ ಯವರು ದೆಹಲಿಯೊಳಗ 70 ರ ದಶಕದಾಗ ವಿದ್ಯಾರ್ಥಿ ನಾಯಕ ರಾಗಿದ್ದರು. ದೆಹಲಿ ಹಾಗೂ ಇತರ ಪ್ರದೇಶದೊಳಗ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ರೈಲು, ಬಸ್ಸು ಎಲ್ಲಾ ಸುಡಲಾಯಿತು. 77 ರೊಳಗ ದೆಹಲಿ ಎಬಿವಿಪಿ ಅಧ್ಯಕ್ಷರಾಗಿ ರಾಷ್ಟ್ರ ಘಟಕದ ಕಾರ್ಯದರ್ಶಿಯಾಗಿದ್ದರು.
ನಿತಿನ ಗಡಕರಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು. 76 ರಲ್ಲಿ ಸೇರಿದ ಸಂಘಟನೆಯ ಕೇಂದ್ರ ಘಟಕದ ನಾಯಕರಾಗಿದ್ದರು. 24 ರ ಸಣ್ಣ ವಯಸ್ಸಿದಾಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು.
75-77 ರ ತುರ್ತು ಪರಿಸ್ಥಿತಿ ವಿರೋಧ ಮಾಡಿದವರೊಳಗ, ಅದರ ನಂತರ ಬೇರೆ ಬೇರೆ ಪಕ್ಷಗಳನ್ನು ಸೇರಿದವರೊಳಗ ಸಂಘ ಪರಿವಾರದ ಅನೇಕ ನಾಯಕರು ಇದ್ದರು. 80 ರೊಳಗ ಬಿಜೆಪಿ ಹುಟ್ಟಿಕೊಂಡಾಗ ಅದರೊಳಗ ಸೇರಿಕೊಂಡವರೊಳಗ ಅಸಂಖ್ಯರು ತುರ್ತು ಪರಿಸ್ಥಿತಿಯೊಳಗ ವಿದ್ಯಾರ್ಥಿ ರಾಜಕಾರಣ ಮಾಡಿದವರು ಆಗಿದ್ದರು. ಅವರು ಜೈಲಿಗೆ ಹೋಗಿದ್ದವರು.
ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಅವರು ಪುಣೆ ಯೊಳಗ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಮುಂದಾಳತ್ವ ವಹಿಸಿದ್ದರು. ಕೇಂದ್ರ ಮಂತ್ರಿ ಹಾಗೂ ರಾಜ್ಯದ ಉಸ್ತುವಾರಿ ಆಗಿದ್ದ ಧಮೇರ್ಂದ್ರ ಪ್ರಧಾನ ಅವರು ಒರಿಸಾದ ಎಬಿವಿಪಿ ನಾಯಕರಾಗಿದ್ದರು. ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಂತರ ಬಿಜೆಪಿ ಯುವಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು.
ರವಿ ಶಂಕರ ಪ್ರಸಾದ ಅವರು ಬಿಹಾರದಾಗ, ಜಯಪ್ರಕಾಶ ನಾರಾಯಣ ಅವರ ಶಿಷ್ಯರಾಗಿ, ವಿದ್ಯಾರ್ಥಿ ರಾಜಕೀಯ ಮಾಡಿದರು. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಬಿಹಾರ ಹಾಗೂ ಹಿಮಾಚಲ ಪ್ರದೇಶದಾಗ ವಿದ್ಯಾರ್ಥಿ ಚಳವಳಿ ಮಾಡಿದರು. ತಾವು ಅಧಿಕಾರದಲ್ಲಿ ಇರುವವರೆಗೂ ರೈತರ ಬಗ್ಗೆ ಮಾತೇ ಆಡದ ಕೇಂದ್ರ ಕೃಷಿ ಮಂತ್ರಿ ರಾಧಾ ಮೋಹನ ಸಿಂಗ್ ಅವರು ಬಿಹಾರದ ವಿದ್ಯಾರ್ಥಿ ನಾಯಕರಾಗಿದ್ದರು. ಈಗಿನ ಕೃಷಿಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರು ಸಹ ವಿದ್ಯಾರ್ಥಿ ನಾಯಕರಾಗಿದ್ದರು.
ಇನ್ನು ಇತರ ಪಕ್ಷಗಳ ನಾಯಕರಾದ ಲಾಲೂ ಪ್ರಸಾದ ಯಾದವ, ನಿತೀಶ ಕುಮಾರ, ಮಮತಾ ಬ್ಯಾನರ್ಜಿ, ಅಜಯ ಮಾಕನ, ಸೀತಾರಾಂ ಯಚೂರಿ, ಪ್ರಫುಲ್ಲಾ ಕುಮಾರ ಮಹಾಂತ, ವಿಜಯ ಗೋಯಲ್, ಅಲ್ಕಾ ಲಾಂಬಾ, ಡಿ. ರಾಜಾ ಅಂತಹ ವಿದ್ಯಾರ್ಥಿ ನಾಯಕರ ಉದಾಹರಣೆಗಳು ಅನೇಕ.
ಇನ್ನು ಕೆಲವರು ನಮ್ಮ ಸುತ್ತ ಮುತ್ತ ಇಷ್ಟೆಲ್ಲಾ ನಡೀತಾ ಇದ್ದಾಗ ನಾವೇನು ಮಾಡಬಹುದು? ಬೀದಿ ಹೋರಾಟದ ಪ್ರತಿಕ್ರಿಯೆಗೆ ಭಿನ್ನವಾಗಿಯೂ ಅನೇಕ ಪ್ರತಿಕ್ರಿಯೆಗಳು ಸಾಧ್ಯಅವ. ಜನ ಜಾಗೃತಿ, ಜ್ಞಾನ ವಿಸ್ತಾರ, ವಿವರಣೆ ಸಂಘಟನೆ, ಸಂಪರ್ಕ ಮುಂತಾದ ಕೆಲಸಗಳನ್ನು ಗದ್ದಲವಿಲ್ಲದೇ ಮಾಡೋ ಲಕ್ಷಾಂತರ ಜನ ಈ ದೇಶದಾಗ ಇದ್ದಾರ.
ಈ ರೀತಿಯ ಕ್ರಿಯಾತ್ಮಕ ಪ್ರತಿಕ್ರಿಯೆ ಅಥವಾ ಸೃಜನಾತ್ಮಕ ವಿರೋಧ ಮಾಡುವ ಕೆಲವರು ಯುವಜನರನ್ನ ರಾಷ್ಟ್ರ ಮಟ್ಟದ ಸಂಸ್ಥೆಗಳಿಗೆ ಪ್ರವೇಶ ಕೊಡಿಸುವ ಪರೀಕ್ಷಾ ತರಬೇತಿ ಕೊಡಸತಾರ. ಮಹಾರಾಷ್ಟ್ರದ ವಾರ್ಧಾದ ಹತ್ತಿರ ಇರುವ ನಲಂದಾ ಸಂಸ್ಥೆಯ ಅನೂಪ ಕುಮಾರ ಮತ್ತು ಅವರ ಗುಂಪು ಇದನ್ನ ಸದ್ದಿಲ್ಲದೆ ಮಾಡ್ತದ.
ಬಡ, ಹಿಂದುಳಿದ ಅವಕಾಶ ವಂಚಿತ ಸಮುದಾಯದ ಜನರಿಗೆ ಕಾನೂನು ಶಿಕ್ಷಣ ಕೊಡಿಸುವ ಕೆಲಸವನ್ನು ಬೆಂಗಳೂರಿನ ಕಾನೂನು ನೆರವು ಸಂಸ್ಥೆ ಮಾಡ್ತದ.
ಈ ದೇಶದ ಏಕತೆ ಹಾಗೂ ಅಖಂಡತೆ ಉಳಿದು ಬೆಳೀಲಿಕ್ಕೆ ಯಾರು ಯಾರು ಏನೇನು ಮಾಡಬಹುದೋ ಅದನ್ನು ಮಾಡಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದರ ಎಲ್ಲ ಅವಕಾಶ ವಂಚಿತರಲ್ಲಿ ಜಾಗೃತಿ ಮೂಡಿಸೋದು, ನಿಮ್ಮ ಹಕ್ಕು ಗಳನ್ನು ನೀವು ಪಡೆದುಕೊಳ್ಳೋದು ಹೆಂಗ ಅಂತ ಹೇಳಿಕೋಡೋದು.
ಇಂಥ ಪ್ರಕ್ಷುಬ್ಧ ಪರಿಸ್ಥಿತಿ ಸಹ ಸಮಾಧಾನದ ಮಂದಹಾಸ ಮೂಡಿಸಬಲ್ಲದು ಅನಲಿಕ್ಕೆ ಒಂದು ಮಾತು ಹೇಳತೇನಿ. ದೆಹಲಿ ಪ್ರತಿಭಟನೆ ಯೊಳಗ ಒಬ್ಬ ಹುಡುಗ ಈ ಪೋಸ್ಟರ್ ಹಿಡಕೊಂಡಿದ್ದ: ಹಿಂದೂ ಮುಸ್ಲೀಮ ರಾಜಿ, ತೋ ಕ್ಯಾ ಕರೇಗಾ ನಾಜಿ? (ಹಿಂದೂ ಮುಸ್ಲಿಂ ಆದರೆ ರಾಜಿ, ಆಗೇನು ಮಾಡ್ತೀಯಾ ನಾಜಿ?) ಸರಳ ಸುಂದರ ಸತ್ಯ, ಅಲ್ಲವೇ?
ಪಶ್ಚಿಮದ ವಿದ್ಯಾರ್ಥಿ ಚಳವಳಿಗೆ ಪ್ರೇರಕ ಶಕ್ತಿಯಾದ ವಿ ಶಾಲ್ ಓವರ್ ಕಂ ಅನ್ನೋ ಜಾನಪದ ಹಾಡನ್ನು ಪೀಟರ್ ಸೀಗಲ್ ಅವರು ಹಾಡಿ ಜನಪ್ರಿಯಗೊಳಿಸಿದರು.
ಅದು ಹಿಂಗದ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ
ನನಗ ಅಗದೀ ಖರೆಗೂ
ಅನಸ್ತದ
ನಾವು ಗೆಲ್ಲತೇವಿ
ಕೈಯೊಳಗ ಕೈ ಇಟ್ಟು
ಶಾಂತಿಯಿಂದ ಇರತೇವಿ
ನಾವು ಹೆದರಂಗಿಲ್ಲ
ನಾವು ಗೆಲ್ಲತೇವಿ
ನಾವು ಗೆಲ್ಲತೇವಿ ಒಂದು ದಿವಸ…


