Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಡಿಗೆರೆ: ಒಕ್ಕಲಿಗರ ಮರ್ಜಿಯ ಮೀಸಲು ಕ್ಷೇತ್ರದಲ್ಲಿ ಮೂರೂ ಮುಖ್ಯ ಪಕ್ಷಗಳಲ್ಲಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಡಿಗೆರೆ: ಒಕ್ಕಲಿಗರ ಮರ್ಜಿಯ ಮೀಸಲು ಕ್ಷೇತ್ರದಲ್ಲಿ ಮೂರೂ ಮುಖ್ಯ ಪಕ್ಷಗಳಲ್ಲಿ ಬಂಡಾಯದ ಬಾವುಟ!

- Advertisement -
- Advertisement -

ಸಹ್ಯಾದ್ರಿ ತಪ್ಪಲಿನ ಮೂಡಿಗೆರೆ-ಕಳಸ ಪ್ರಾಕೃತಿಕ ಸೌಂದರ್ಯ-ಸಮೃದ್ಧಿಯ ಖನಿ; ಕಾಸಿನ ಬೆಳೆಗಳಾದ ಕಾಫಿ, ಅಡಿಕೆ, ಕರಿಮೆಣಸಿನ ತೋಟ ಪಟ್ಟಿಯ ಆಗರ. ಪಶ್ಚಿಮಘಟ್ಟದ ಹಸಿರು ಅಚ್ಛಾದಿತ ಕಾಡು-ಕಣಿವೆ, ಗಿರಿ-ಶಿಖರ, ಝರಿ-ಜಲಪಾತಗಳ ರುದ್ರ ರಮಣೀಯ ಮೂಡಿಗೆರೆ-ಕಳಸದಲ್ಲಿ ಮೂರು ನದಿಗಳಾದ ತುಂಗ, ಭದ್ರ ಹಾಗು ಹೇಮಾವತಿ ಹುಟ್ಟಿ ಹರಿಯುತ್ತವೆ. ’ಮೂಡಿಗರೆ’ಯ ಮೂಲ ’ಮೂರ್‍ಕೆರೆ’ ಎಂದು ಸ್ಥಳನಾಮ ಪುರಾಣ ಹೇಳುತ್ತದೆ. ಅನಾದಿಕಾಲದಲ್ಲಿ ಮೂಡಿಗೆರೆಯಲ್ಲಿ ಮೂರು ಬೃಹದಾಕಾರದ ಕೆರೆಗಳಿದ್ದವಂತೆ. ಹಾಗಾಗಿ ಆಡು ಭಾಷೆಯಲ್ಲಿ ಮೂರ್‍ಕೆರೆ ಎಂದು ಹೆಸರಾಯಿತು. ಇದು ಕ್ರಮೇಣ ಮೂಡಿಗೆರೆ ಎಂದು ಬದಲಾಗಿ ಸ್ಥಿರವಾಗಿದೆ ಎನ್ನಲಾಗುತ್ತಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ಮೂಡಿಗೆರೆಯಲ್ಲಿ ಟ್ರಕ್ಕಿಂಗ್ ತಾಣಗಳಾದ ಎತ್ತಿನ ಗೂನು ಹೋಲುವ ಎತ್ತಿ ಭುಜ ಅಥವಾ ಶಿಶಿಲ ಗುಡ್ಡ ಮತ್ತು ಬಲ್ಲಾರಾಯನ ದುರ್ಗ ಅಥವಾ ದುರ್ಗದ ಬೆಟ್ಟಗಳಿವೆ. ಮೂಡಿಗೆರೆ ಪಟ್ಟಣ ರಾಜ್ಯದ ನಾಲ್ಕನೆ ಅತಿ ಎತ್ತರದ ತಾಲ್ಲೂಕಾಡಳಿತ ಕೇಂದ್ರ.

ಮೂಡಿಗೆರೆ ಮತ್ತು ಕಳಸ ಎರಡೂ ತಾಲೂಕುಗಳ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸೇರಿದಂತೆ ಎಲ್ಲ ವಲಯಗಳಲ್ಲೂ ಪ್ರಬಲ ಮುಳ್ಳು ಒಕ್ಕಲಿಗರ ಏಕಸ್ವಾಮ್ಯಕ್ಕೆ ಒಳಪಟ್ಟಿದೆ. ಜಮೀನ್ದಾರಿಕೆ-ಗೌಡಿಕೆ ದರ್ಪ-ದೌಲತ್ತು ಕಂಡೂಕಾಣದಂತೆ ಅನೂಚಾನಾಗಿ ಮುಂದುವರಿದಿದೆ. ಮೂರಡಿ-ಆರಡಿ ಜಾಗಕ್ಕಾಗಿ ಸರ್ಕಾರಿ ’ಅಧಿಪತಿ’ಗಳ ಎದುರು ಅಂಗಲಾಚುವ ಅಸಾಹಯಕ ಮುಂದಿ ಮಧ್ಯೆ ನೂರಾರು ಎಕರೆ ಆರ್ಥಿಕ ಬೆಳೆಯ ತೋಟದ ’ಭೂಪತಿ’ಗಳಿದ್ದಾರೆ. ಮೂಡಿಗೆರೆ-ಕಳಸ ಎಂದರೆ ಒಂಥರಾ ವಲಸಿಗ ಕಾಫಿ ತೋಟದ ಕೂಲಿಗಳ ಡೇರೆ. ಮೂರ್ನಾಲ್ಕು ತಲೆಮಾರಿನ ಹಿಂದೆಯೆ ವಲಸೆ ಬಂದಿರುವ ತಮಿಳು, ಮಲೆಯಾಳಿ, ದಕ್ಷಿಣ ಕನ್ನಡದ ತುಳು ಭಾಷಿಕ ದಲಿತರು, ಬಿಲ್ಲವರು, ಬಂಟರು, ಕೊಂಕಣಿ ಮಾತಾಡುವ ಕ್ರಿಶ್ಚಿಯನ್ನರು ಇಲ್ಲಿಯ ಮತದಾರರಾಗಿದ್ದಾರೆ; ಮತದಾನದ ಹಕ್ಕು ಪಡೆಯದ ಆಸ್ಸಾಮಿ ವಲಸಿಗ ಕೂಲಿ ಕಾರ್ಮಿಕರು ಹೆಚ್ಚುತ್ತಿದ್ದಾರೆ.

ಸಣ್ಣ ಪ್ರಮಾಣದ ವ್ಯಾಪಾರ-ವಹಿವಾಟಿನ ಮೂಡಿಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕತೆಯ ಮೂಲ ತೋಟಗಾರಿಕೆ. ಕಾಫಿ, ಅಡಿಕೆ, ಬಾಳೆ, ಏಲಕ್ಕಿ, ಭತ್ತ ಬೆಳೆಯಲಾಗುತ್ತಿದೆ. ಆದರೆ ಕಾಫಿ, ಅಡಿಕೆ ಮತ್ತು ಕರಿಮೆಣಸಿನ ವ್ಯವಸಾಯ-ವಹಿವಾಟೇ ಮೂಡಿಗೆರೆ-ಕಳಸದ ಜನರ ಬದುಕಿಗಾಧಾರ. ಜೀವ ವಿರೋಧಿ ಅರಣ್ಯ ಕಾನೂನಿನಿಂದಾಗಿ ಬುಡಕಟ್ಟು ಮಂದಿಗೆ ಅರಣ್ಯ ಉತ್ಪನ್ನ ಸಿಗದಾಗಿದೆ; ಬುಡಕಟ್ಟು ಜನರು, ದಲಿತರು ಉಳ್ಳವರ ಕಾಫಿ-ಅಡಿಕೆ ಎಸ್ಟೇಟಲ್ಲಿ ಗೇಯುತ್ತಿದ್ದಾರೆ. ಉದ್ಯೋಗಗಳನ್ನು ಹೆಚ್ಚಿಸುವ ಔದ್ಯೋಗಿಕರಣ ಈ ಭಾಗದಲ್ಲಾಗಿಲ್ಲ. ಯುವ ಜನಾಂಗ ವಲಸೆ ಹೋಗುತ್ತಿದೆ. ಜಿಲ್ಲೆಯಲ್ಲಿ ’ಜ್ವಲಂತ’ವಾಗಿರುವ ಸಂಘ ಪರಿವಾರ ಪ್ರಣೀತ ದತ್ತಪೀಠ ಅಭಿಯಾನದ ’ಧರ್ಮಯುದ್ಧ’ಕ್ಕೆ ನಿರುದ್ಯೋಗಿ ಯುವಸಮೂಹವನ್ನು ಕಾಲಾಳುಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆತಂಕದ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರ ಸೂತ್ರ

ಸಮಸಮಾಜ ನಿರ್ಮಾಣದ ಕನಸಿನ ಸೋಷಲಿಸ್ಟ್-ಕಮ್ಯುನಿಸ್ಟ್‌ರ ಕರ್ಮಭೂಮಿಯಾಗಿದ್ದ ಮೂಡಿಗೆರೆ ದಲಿತ ಮೀಸಲು ಕ್ಷೇತ್ರ ಈಗ ಬಲಿತವರ ಜಾತಿ ಪ್ರತಿಷ್ಠೆಯ ಆಡುಂಬೊಲದಂತಾಗಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ರಚನೆಯಾಗಿದ್ದು 1962ರ ಎರಡನೇ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ. ಮೊದಲ ಚುನಾವಣೆಯಲ್ಲಿ (1957) ಮೂಡಿಗೆರೆ-ಕಳಸ ದ್ವಿ-ಸದಸ್ಯ ಕ್ಷೇತ್ರವಾಗಿದ್ದ ಚಿಕ್ಕಮಗಳೂರು ವ್ಯಾಪ್ತಿಯಲ್ಲಿತ್ತು. ಆಗ ತಿಮ್ಮ ಬೋವಿ ಈ ಭಾಗದ ಎಮ್ಮೆಲ್ಲೆಯಾಗಿದ್ದರು. ದಲಿತ ದನಿಯಾಗಿದ್ದ ಮೇಧಾವಿ ದಲಿತ ನಾಯಕ, ಅತ್ಯುತ್ತಮ ಸಂಸದೀಯ ಪಟು ಎನಿಸಿದ್ದ, ಅಸೆಂಬ್ಲಿ ಸ್ಪೀಕರ್, ಮಂತ್ರಿ, ಸಂಸದರಾಗಿದ್ದ ಚಿತ್ರದುರ್ಗ ಮೂಲದ ಕೆ.ಎಚ್. ರಂಗನಾಥ್ ಎರಡು ಬಾರಿ ಪಿಎಸ್‌ಪಿಯಿಂದ (ಸಮಾಜವಾದಿ ಪಕ್ಷ) ಮೂಡಿಗೆರೆಯ ಶಾಸಕನಾಗಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶೃಂಗೇರಿ: ಕಾಂಗ್ರೆಸ್-ಬಿಜೆಪಿ ಗೌಡ್ರ ಗದ್ದಲದಲ್ಲಿ ಜೆಡಿಎಸ್‌ನ ಶೆಟ್ರೇ ನಿರ್ಣಾಯಕ?!

ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿಯ ನಿಕಟ ಒಡನಾಟವಿದ್ದ ಡಿ.ಬಿ.ಚಂದ್ರೇಗೌಡ, ಡಿ.ಕೆ.ತಾರಾದೇವಿ, ಜನತಾ ಪರಿವಾರದ ಬಿ.ಎಲ್.ಶಂಕರ್‌ರಂಥ ಮೂಡಿಗೆರೆ ಮೂಲದ ಮುಂದಾಳುಗಳು ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೆ ಗೌಡಿಕೆ ’ಪ್ರಜ್ಞೆ’ ಜಾಗ್ರತವಾಗಿ ಮೂಡಿಗೆರೆ ಹೆಸರಿಗಷ್ಟೇ ಮೀಸಲು ಕ್ಷೇತ್ರವಾಯಿತು; ಛಲವಾದಿ ಸಮುದಾಯದ ಕಾಂಗ್ರೆಸ್‌ನ ಮೋಟಮ್ಮ, ಜನತಾ ಪರಿವಾರದ ಬಿ.ಬಿ.ನಿಂಗಯ್ಯ ಮತ್ತು ಬಿಜೆಪಿಯ ಎಂ.ಪಿ.ಕುಮಾರಸ್ವಾಮಿಯಂಥ ಡಬ್ಬಲ್ ಡಿಗ್ರಿ ವಿದ್ಯಾವಂತರು ಶಾಸಕರಾದರೂ ಒಕ್ಕಲಿಗ ಮುಂದಾಳುಗಳಿಗೆ ವಿಧೇಯರಾಗಿರುವಂಥ ರಾಜಕೀಯ-ಸಾಮಾಜಿಕ ಒತ್ತಡ ಕ್ಷೇತ್ರದಲ್ಲಿ ಮಡುಗಟ್ಟಿದೆ; ಜಿಲ್ಲೆಯಲ್ಲಿ 2000ದ ದಶಕದಾರಂಭದಿಂದ ದತ್ತಪೀಠ ಅಭಿಯಾನದ ಧರ್ಮಕಾರಣ ಬಿರುಸುಗೊಂಡಿತು; ಬಿಜೆಪಿಯ ಈ ತಂತ್ರಗಾರಿಕೆಯಲ್ಲೂ ಒಕ್ಕಲಿಗ ಪ್ರತಿಷ್ಠೆ ಪ್ರಧಾನವಾಗಿತ್ತು ಎಂದು ಮೂಡಿಗೆರೆಯ ರಾಜಕೀಯದ ಸೂಕ್ಷ್ಮಗಳನ್ನು ಬಲ್ಲ ಹಿರಿಯ ಪತ್ರಕರ್ತರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿದ್ದರೂ ಒಕ್ಕಲಿಗರೆ ನಿರ್ಣಾಯಕ. ದಲಿತರಲ್ಲಿ ಎಡ-ಬಲ ಮೇಲಾಟವಿದೆ. ದಲಿತ ಮತಗಳು ಹರಿದು ಹಂಚಿಹೋದರೆ ಒಕ್ಕಲಿಗರು ತಮಗೆ ಹೆಚ್ಚು ಹಿತವಾದ ಅಭ್ಯರ್ಥಿಗೆ ಏಕಗಂಟಲ್ಲಿ ಓಟು ಚಲಾಯಿಸಿ ಶಾಸಕ ತಮ್ಮ ಮರ್ಜಿಯಲ್ಲಿರುವಂತೆ ನೋಡಿಕೊಳ್ಳುತ್ತಾರೆಂಬುದು ’ಕ್ಷೇತ್ರಕಾರಣ’ದ ಬಹಿರಂಗ ರಹಸ್ಯ. ಬಿಜೆಪಿ ಪ್ರಬಲವಾಗಿದ್ದರೂ ಮೂಡಿಗೆರೆಯಲ್ಲಿ ಕೋಮು ಕಹಿ ಇಲ್ಲ. ಮೂರು ಬಾರಿ ಬಿಜೆಪಿಯಿಂದ ಎಮ್ಮೆಲ್ಲೆಯಾಗಿದ್ದರೂ ದಲಿತರಾಗಿರುವುದರಿಂದಲೋ ಏನೋ ಕುಮಾರಸ್ವಾಮಿಯನ್ನು ದತ್ತ ಅಭಿಯಾನದಲ್ಲಿ ಸೇರಿಸಿಕೊಳ್ಳುತ್ತಿಲ್ಲ; ಇಂಥದ್ದಕ್ಕೆಲ್ಲ ಕುಮಾರಸ್ವಾಮಿ ಹೋಗುವವರೂ ಅಲ್ಲ. ಜಿಲ್ಲೆಯ ಬಲಿಷ್ಠ ಬಿಜೆಪಿ ನಾಯಕಾಗ್ರೇಸ ಸಿ.ಟಿ.ರವಿಯ ’ಗುಣ-ಸ್ವಭಾವ’ವ್ಯಾಯುವೂ ಕುಮಾರಸ್ವಾಮಿಯಲ್ಲಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ.

ಕೆ.ಎಚ್. ರಂಗನಾಥ್

2007ರಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ಮೂಡಿಗೆರೆಯ ಭೌಗೋಳಿಕ ಪರಿಧಿ ಪುನರ್ ನಿಗದಿಯಾಗಿದೆಯೇ ವಿನಃ ಜಾತಿ ಸೂತ್ರ-ಧರ್ಮ ಸಮೀಕರಣ ಮಾತ್ರ ಬದಲಾಗಿಲ್ಲ. ಮೂಡಿಗೆರೆ ಮತ್ತು ಈಚೆಗೆ ತಾಲ್ಲೂಕಾಗಿರುವ ಕಳಸದ ಒಂದು ಹೋಬಳಿ ಜತೆ ಚಿಕ್ಕಮಗಳೂರಿನ ನಾಲ್ಕು ಹೋಬಳಿ ಸೇರಿಸಿ ರಚಿಸಲಾಗಿರುವ ಕ್ಷೇತ್ರದಲ್ಲಿ ಒಟ್ಟು 1,70,435 ಮತದಾರರಿದ್ದಾರೆ. ಇದರಲ್ಲಿ ಎಸ್‌ಸಿ-50,000, ಎಸ್‌ಟಿ-12,000, ಒಕ್ಕಲಿಗ-60,000, ಮುಸ್ಲಿಮ್-20,000, ಈಡಿಗ (ದೀವರು+ಬಿಲ್ಲವರು)-10,000, ಕುರುಬ-5,000, ಬ್ರಾಹ್ಮಣ-3,000 ಮತ್ತು ವಲಸಿಗ ತಮಿಳು, ಮಲೆಯಾಳಿ, ಕ್ರಿಶ್ಚಿಯನ್, ಬಂಟ ಮುಂತಾದ ಒಬಿಸಿ ಮತದಾರರಿರುವ ಅಂದಾಜಿದೆ. ಈವರೆಗಿನ ಒಟ್ಟು 13 ಹೋರಾಟದಲ್ಲಿ ಎರಡು ಬಾರಿ ಪಿಎಸ್‌ಪಿ, ಮೂರು ಸಲ ಬಿಜೆಪಿ ಮತ್ತು ತಲಾ ನಾಲ್ಕು ಬಾರಿ ಕಾಂಗ್ರೆಸ್ ಹಾಗು ಜನತಾ ಪರಿವಾರ ಗೆಲುವು ಸಾಧಿಸಿರುವ ಅಖಾಡದಲ್ಲಿ ಮತ್ತದೆ ಲಾಗಾಯ್ತಿನ ಮೇಲ್ವರ್ಗದ ’ಮೀಸಲು’ ಚುನಾವಣೆ ಮುನ್ಸೂಚನೆ ಗೋಚರಿಸುತ್ತಿದೆ.

ಗೆದ್ದವರು-ಬಿದ್ದವರು

ಚಿತ್ರದುರ್ಗದ ಹರಿಹರ ಮೂಲದ ಸುಶಿಕ್ಷಿತ ದಲಿತ ಹೋರಾಟಗಾರ ತರುಣ ಕೆ.ಎಚ್.ರಂಗನಾಥ್ ಮೂಡಿಗೆರೆಯ ಮೊದಲ ಎಮ್ಮೆಲ್ಲೆ. 1957ರಲ್ಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ತಿಮ್ಮ ಬೋವಿಯವರನ್ನು ಪ್ರಜಾ ಸೋಷಲಿಸ್ಟ್ ಪಾರ್ಟಿಯ ರಂಗನಾಥ್ ಕೇವಲ 58 ಮತದಂತರದಿಂದ ಮಣಿಸಿ ಅಸೆಂಬ್ಲಿ ಪ್ರವೇಶ ಪಡೆದರು. 1967ರಲ್ಲಿ ಪಿಎಸ್‌ಪಿಯ ರಂಗನಾಥ್ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಯವರನ್ನು 806 ಮತಗಳಿಂದ ಹಿಮ್ಮೆಟ್ಟಿಸಿ ಎರಡನೆ ಬಾರಿ ಶಾಸಕರಾದರು. 1969ರಲ್ಲಿ ರಂಗನಾಥ್ ಕಾಂಗ್ರೆಸ್ ಸೇರಿ ತವರೂರಿನಲ್ಲಿ ರಾಜಕಾರಣ ಆರಂಭಿಸಿದರು. 1972ರಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿ ಸಂಸ್ಥಾ ಕಾಂಗ್ರೆಸ್ ಎದುರಾಳಿ ಶಾಮ ನಾಯ್ಕ್‌ರನ್ನು 20,749 ಮತಗಳ ದೊಡ್ಡ ಅಂತರದಲ್ಲಿ ಸೋಲಿಸಿದರು.

ಮೋಟಮ್ಮ-ನಿಂಗಯ್ಯ ಪೈಪೋಟಿ!

1978ರ ಚುನಾವಣೆ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸಂಸದ ಚಂದ್ರೇಗೌಡರು ಸಬ್ ರಿಜಿಸ್ಟ್ರಾರ್ ಆಗಿದ್ದ ಛಲವಾದಿ ಸಮುದಾಯದ ಎಂ.ಎ ಪದವೀಧರ ತರುಣಿ ಮೋಟಮ್ಮರನ್ನು ಸರಕಾರಿ ಕರ್ಮಚಾರಿಕೆಯಿಂದ ತಪ್ಪಿಸಿ ರಾಜಕಾರಣದ ದೀಕ್ಷೆ ಕೊಟ್ಟರು. ಕಾಂಗೈ ಕ್ಯಾಂಡಿಡೇಟಾಗಿದ್ದ ಮೋಟಮ್ಮ ಜನತಾ ಪಕ್ಷದ ಸುಗುಣಯ್ಯರನ್ನು 18,232 ಮತದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೆ ಶಾಸನಸಭೆ ಸದಸ್ಯೆಯಾದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಿಲ್ಲೆಯ ಪ್ರಭಾವಿ ಮುಖಂಡ ಚಂದ್ರೇಗೌಡರು ಅರಸು ಕಾಂಗ್ರೆಸ್, ಜನತಾ ಪರಿವಾರ ಸೇರಿಕೊಂಡರೂ ಶಿಷ್ಯೆ ಮೋಟಮ್ಮ ಮಾತ್ರ ಕಾಂಗ್ರೆಸ್ ಬಿಡಲಿಲ್ಲ. 1979ರ ಚಿಕ್ಕಮಗಳೂರು ಉಪ-ಚುನಾವಣೆಗೆ ಸ್ಪರ್ಧಿಸಿದ್ದ ಇಂದಿರಾ ಗಾಂಧಿಯೊಂದಿಗೆ ನಿಕಟ ಒಡನಾಟ ಸಾಧಿಸಿದ್ದ ಮೋಟಮ್ಮ ’ಗುರು’ವಿಗೇ ತಿರುಮಂತ್ರ ಹಾಕಿದರೆಂಬ ಮಾತು ಈಗಲೂ ಮೂಡಿಗೆರೆ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ. 1983ರ ಚುನಾವಣೆಯಲ್ಲಿ ಚಂದ್ರೇಗೌಡರ ಬೆಂಬಲ ಪಡೆದಿದ್ದ ಜನತಾ ಪಕ್ಷದ ಪಿ.ತಿಪ್ಪಯ್ಯರನ್ನು ಹಿಮ್ಮೆಟ್ಟಿಸಲು ಮೋಟಮ್ಮ ವಿಫಲರಾದರು; 719 ಮತಗಳ ಅಂತರದಲ್ಲಿ ಸೋತು ಮಾಜಿ ಶಾಸಕಿಯಾದರು.

1985ರಲ್ಲಿ ಶಾಸಕ ತಿಪ್ಪಯ್ಯ ಕ್ಷೇತ್ರದ ಹೊರಗಿನವರೆಂಬ ಕಾರಣಕ್ಕೆ ಸ್ಥಳೀಯ ಜನತಾ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಒಕ್ಕಲಿಗ ನಾಯಕರು ಮತ್ತೆ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು. ಶೃಂಗೇರಿ ಖಜಾನೆ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಎಂ.ಎ ಪದವೀಧರ ಬಿ.ಬಿ.ನಿಂಗಯ್ಯರನ್ನು ಒಕ್ಕಲಿಗ ಮುಖಂಡರು ಜನತಾ ಪಕ್ಷದ ಹುರಿಯಾಳಾಗಿ ತಯಾರು ಮಾಡಿದರು. ಕಾಂಗ್ರೆಸ್‌ನ ಮೋಟಮ್ಮ ಮತ್ತು ನಿಂಗಯ್ಯ ಮುಖಾಮುಖಿಯಾದರು. ಕೇವಲ 33 ಮತದಿಂದ ಶಾಸಕರಾದ ನಿಂಗಯ್ಯ, ಅವರ ಮಾವ-ಅಂದಿನ ಜನತಾ ಪಕ್ಷದ ಪ್ರಭಾವಿ ಮಂತ್ರಿ ಬಿ.ರಾಚಯ್ಯರ ವರ್ಚಸ್ಸಿನಿಂದ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಮಂತ್ರಿಗಿರಿ ಭಾಗ್ಯವನ್ನೂ ಕಂಡರು. ಆದರೆ 1989ರಲ್ಲಿ ದೇವೇಗೌಡರ ಜನತಾ ಪಕ್ಷದ ಹುರಿಯಾಳಾಗಿದ್ದ ನಿಂಗಯ್ಯ 25,791 ಮತಗಳ ಆಗಾಧ ಅಂತರದಲ್ಲಿ ಕಾಂಗ್ರೆಸ್‌ನ ಮೋಟಮ್ಮರ ಎದುರು ಹೀನಾಯ ಸೋಲನುಭವಿಸಿದರು.

1994ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿದ್ದ ನಿಂಗಯ್ಯ ಕಾಂಗ್ರೆಸ್‌ನ ಮೋಟಮ್ಮರನ್ನು 3,169 ಮತಗಳ ಸಣ್ಣ ಅಂತರದಲ್ಲಿ ಮಣಿಸಿದರಷ್ಟೇ ಅಲ್ಲ, ಜೆ.ಎಚ್.ಪಟೇಲ್ ಸರಕಾರದಲ್ಲಿ ಮಂತ್ರಿಯಾದರು.

1999ರ ಇಲೆಕ್ಷನ್ ಹೊತ್ತಲ್ಲಿ ಆಡಳಿತ ವಿರೋಧಿ ಚಂಡಮಾರುತಕ್ಕೆ ಸಿಲುಕಿ ತತ್ತರಿಸಿ ನಿಂಗಯ್ಯ ಜೆಡಿಯು ಹುರಿಯಾಳಾಗಿ ಪಡೆದದ್ದು 2,307 ಮತಗಳಷ್ಟೆ. ಆ ಇಲೆಕ್ಷನ್‌ನಲ್ಲಿ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿಯನ್ನು 16,316 ಮತದಿಂದ ಮಣಿಸಿದ ಕಾಂಗ್ರೆಸ್‌ನ ಮೋಟಮ್ಮ ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವೆಯಾದರು.

ಬಿಜೆಪಿಗೆ ದತ್ತ ಕೃಪೆ

2004ರ ಚುನಾವಣೆ ಎದುರಾದಾಗ ಮೋಟಮ್ಮ ಮತ್ತು ನಿಂಗಯ್ಯರ ಬಗ್ಗೆ ಬೇಸತ್ತಿದ್ದ ಮೂಡಿಗೆರೆ ಬದಲಾವಣೆಗೆ ಹಾತೊರೆಯುತ್ತಿತ್ತು. ಅದೇ ವೇಳೆಗೆ ಜಿಲ್ಲೆಯಲ್ಲಿ ಬಿರುಸಾಗಿದ್ದ ದತ್ತಪೀಠ ವಿವಾದವನ್ನು ಬಿಜೆಪಿ ಮತಧ್ರುವೀಕರಣಕ್ಕೆ ವ್ಯವಸ್ಥಿತವಾಗಿ ಬಳಸಿಕೊಂಡಿತೆಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಬಿಜೆಪಿಯ ಕುಮಾರಸ್ವಾಮಿ-ಕಾಂಗ್ರೆಸ್‌ನ ಮೋಟಮ್ಮ ನಡುವೆ ಕತ್ತುಕತ್ತಿನ ಹೋರಾಟವಾಯಿತು. ಫೋಟೋ ಫಿನಿಶ್ ಫಲಿತಾಂಶದಲ್ಲಿ ಬಿಜೆಪಿಯ ಕುಮಾರಸ್ವಾಮಿ 1,338 ಮತಗಳ ಅಂತರದಿಂದ ಗೆದ್ದು ಶಾಸಕನಾದರು! ಸೋತ ಮೋಟಮ್ಮರನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯೆಯನ್ನಾಗಿಸಿತು; ದತ್ತ ಕೃಪೆಯಿಂದ ಗೆದ್ದ ಕುಮಾರಸ್ವಾಮಿ ಪ್ರಬಲ ಗೌಡರ ಹಿಡಿತಕ್ಕೊಳಗಾದರೂ ಹಿಂದುತ್ವದ ಸೋಂಕು ಅಂಟಿಸಿಕೊಳ್ಳದೆ ಎಲ್ಲ ಜಾತಿ-ಪಂಥದವರೊಂದಿಗೆ ಬೆರೆಯುತ್ತ ’ನಿರುಪದ್ರವಿ’ ಎನಿಸಿಕೊಂಡರು. ಈ ಇಮೇಜ್ 2008ರ ಇಲೆಕ್ಷನ್‌ನಲ್ಲಿ ಬಿಜೆಪಿಯ ಕುಮಾರಸ್ವಾಮಿಗೆ ಹೋರಾಟವನ್ನು ಸುಲಭವಾಗಿಸಿತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಬಿ.ಎನ್.ಚಂದ್ರಪ್ಪರನ್ನು 8,495 ಮತದಿಂದ ಸೋಲಿಸಿದ ಪರಿಶಿಷ್ಟ ವರ್ಗದ ಬಹುಸಂಖ್ಯಾತ ಬಲಗೈ ಸಮುದಾಯದ ಕುಮಾರಸ್ವಾಮಿ ಎರಡನೆ ಬಾರಿ ಶಾಸಕರಾದರು. ಶಾಸಕತ್ವಕ್ಕೆ ಕುಮಾರಸ್ವಾಮಿಗಿಂತಲೂ ಸಮರ್ಥರಾಗಿದ್ದ ಚಂದ್ರಪ್ಪರಿಗೆ, ಅವರು ಹೊರಗಿನವರು ಮತ್ತು ಎಡಗೈ ಪಂಗಡದವರೆಂಬುದು ಮುಳುವಾಯಿತೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಬಿ.ಎನ್.ಚಂದ್ರಪ್ಪ

2013ರಲ್ಲಿ ತ್ರಿಕೋನ ಕಾಳಗವಾಯಿತು. ಒಕ್ಕಲಿಗ ಮುಖಂಡ ಎನಿಸಿಕೊಂಡಿದ್ದ ಸ್ವಪಕ್ಷದ ಸಿ.ಟಿ.ರವಿ ಮತ್ತು ಸ್ಥಳೀಯ ಎಮ್ಮೆಲ್ಸಿ ಪ್ರಾಣೇಶರ ಕೆಂಗಣ್ಣಿಗೆ ತುತ್ತಾಗಿದ್ದ ಬಿಜೆಪಿಯ ಕುಮಾರಸ್ವಾಮಿಯವರಿಗೆ ಒಕ್ಕಲಿಗರ ಮತ ಖೋತಾ ಆಗಿ ಮೂರನೆ ಸ್ಥಾನಕ್ಕೆ ಕುಸಿದರು. ಒಕ್ಕಲಿಗರ ಓಟು ಜಾಸ್ತಿ ಗಿಟ್ಟಿಸಿದ ಜೆಡಿಎಸ್‌ನ ನಿಂಗಯ್ಯ ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿ ಚಂದ್ರಪ್ಪರನ್ನು 635 ಮತಗಳಿಂದ ಮಣಿಸಿ ಅಚ್ಚರಿ ಮೂಡಿಸಿದರು. ಎರಡು ಅವಧಿ ಎಮ್ಮೆಲ್ಸಿ, ಒಮ್ಮೆ ಪರಿಷತ್‌ನ ವಿರೋಧ ಪಕ್ಷದ ನಾಯಕಿಯಾಗಿದ್ದ ಮೋಟಮ್ಮ 2018 ಚುನಾವಣೆ ಹೊತ್ತಲ್ಲಿ ಮಾಜಿಯಾಗಿದ್ದರು. ಚಂದ್ರಪ್ಪ ಚಿತ್ರದುರ್ಗದ ಕಾಂಗ್ರೆಸ್ ಸಂಸದರಾಗಿದ್ದರು. ಹಾಗಾಗಿ ಮೋಟಮ್ಮರಿಗೆ ಕಾಂಗ್ರೆಸ್ ಟಿಕೆಟ್ ಸುಲಭವಾಗಿ ದಕ್ಕಿತು. ಆದರೆ ಆ ವೇಳೆಗೆ ಕ್ಷೇತ್ರದಲ್ಲಿ ತನ್ನ ಸರಳತೆಯಿಂದ ಸ್ವಜಾತಿ ಜನರ ನಂಬಿಕಸ್ಥ ನಾಯಕನಾಗಿದ್ದ ಬಿಜೆಪಿಯ ಕುಮಾರಸ್ವಾಮಿಯನ್ನು ಎದುರಿಸುವುದು ಸಾಧ್ಯವಾಗದೆ 12,512 ಮತದಿಂದ ಸೋತರು.

ಕ್ಷೇತ್ರದ ಸುಖ-ಸಂಕಟ

ಮೂರೂ ಮುಕ್ಕಾಲು ದಶಕದಿಂದ ಮತ್ತೆಮತ್ತೆ ಕಾಂಗ್ರೆಸ್‌ನ ಮೋಟಮ್ಮ, ಜನತಾ ಪರಿವಾರದ ನಿಂಗಯ್ಯ ಮತ್ತು ಕೇಸರಿ ಬಳಗದ ಕುಮಾರಸ್ವಾಮಿಯ ಪಾರುಪತ್ಯಕ್ಕೆ ಒಳಪಡುತ್ತಲೇ ಇರುವ ಮೂಡಿಗೆರೆ-ಕಳಸ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ-ಪ್ರಗತಿಗೆ ಗ್ರಹಣ ಹಿಡಿದಿದೆ; ಸಾಮಾನ್ಯ ಬಜೆಟ್‌ನ ಒಂದಿಷ್ಟು ಕಾಂಕ್ರೀಟ್ ಕಾಮಗಾರಿ ಆಗಿರುವುದು ಬಿಟ್ಟರೆ ರೈತರ-ಜನಸಾಮಾನ್ಯರ ಜೀವನಮಟ್ಟ ಸುಧಾರಿಸುವ, ದುಡಿಮೆಯಿಲ್ಲದೆ ದಿಕ್ಕೆಟ್ಟಿರುವ ನಿರುದ್ಯೋಗಿಗಳ ದೆಸೆ ಬದಲಿಸುವ ಯಾವ ಯೋಜನೆಯೂ ಈ ಮೂವರಿಂದ ತರಲಾಗಿಲ್ಲ; ಶಾಸಕ-ಸಂಸದರಲ್ಲಿ ಸಮಗ್ರ ಸುಧಾರಣೆಯ ದೂರದರ್ಶಿತ್ವ-ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದೆ ಕ್ಷೇತ್ರದ ದುರ್ದೆಸೆಗೆ ಮೂಲಕಾರಣ; ಮೂಡಿಗೆರೆಯಿಂದ ಮೂರ್‍ನಾಲ್ಕು ಕಿ.ಮೀ. ಆಚೆ ಹೆಜ್ಜೆಹಾಕಿದರೆ ಸರಿಯಾದ ರಸ್ತೆ, ಸಾರಿಗೆ, ಕುಡಿಯುವ ನೀರು, ಚರಂಡಿ, ಶೈಕ್ಷಣಿಕ ಸೌಲಭ್ಯ, ವಿದ್ಯುತ್, ವಸತಿ- ಹೀಗೆ ಒಂದಲ್ಲಒಂದು ಮೂಲಸೌಕರ್ಯಕ್ಕಾಗಿ ಜನರು ಪರದಾಡುತ್ತಿರುವುದು ಕಣ್ಣಿಗೆ ರಾಚುತ್ತದೆ; ಕಳೆದ ಇಪ್ಪತ್ತು ವರ್ಷದಿಂದ ಕಡೂರು-ಮಂಗಳೂರು ರಸ್ತೆ ಅಗಲೀಕರಣಕ್ಕೆ ಮೂಡಿಗೆರೆ ಮಂದಿ ಆಗ್ರಹಿಸುತ್ತಲೇ ಇದ್ದಾರೆ. ಸಂತೆಯ ದಿಗಳಲ್ಲಂತೂ ಇಲ್ಲಾಗುವ ಜನ-ವಾಹನ ದಟ್ಟಣೆಯ ಕಿರಿಕಿರಿ ಹೇಳತೀರದು ಎಂಬ ಆಕ್ಷೇಪ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಮೂಡಿಗೆರೆ-ಕಳಸದ ಜ್ವಲಂತ ಸಮಸ್ಯೆಯೆಂದರೆ ವಸತಿ, ಅರಣ್ಯ ಭೂಮಿ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಸರಕಾರಿ ಕಾನೂನುಗಳ ಆತಂಕ. ಸರಕಾರದ ವಸತಿ, ನಿವೇಶನ ಅಸಹಾಯಕರಿಗೆ ದಕ್ಕುತ್ತಿಲ್ಲ. ಕಾಫಿ-ಅಡಿಕೆ ತೋಟದ ಕಾರ್ಮಿಕರು ಸೂರಿಗಾಗಿ ಹಲವು ವರ್ಷಗಳಿಂದ ಶಾಸಕ-ಸಂಸದ-ಮಂತ್ರಿಗಳಿಗೆಲ್ಲ ಮೊರೆಯಿಡುತ್ತಲೇ ಇದ್ದಾರೆ. ಕಾಫಿ ಎಸ್ಟೇಟ್ ಧಣಿಗಳು ಕಟ್ಟಿಸಿರುವ ಹಂದಿ ಗೂಡಿನಂಥ ಒಂಟಿ ಕೋಣೆಯ “ಮನೆ”ಗಳ ಲೇನ್‌ಗಳಲ್ಲಿ ಸಾವಿರಾರು ದಲಿತ-ಹಿಂದುಳಿದ ಸಮುದಾಯದ ಕೂಲಿ ಕುಟುಂಬಗಳು ವಾಸವಾಗಿವೆ. ಈ ಕೃಷಿ ಕಾರ್ಮಿಕರು ವರ್ಷಕ್ಕೊಬ್ಬ ಭೂಮಾಲಿಕನ ತೋಟದ ಕೂಲಿ ಅರಸಿ ಹೋಗುವ ಅಲೆಮಾರಿಗಳಂತಾಗಿದ್ದಾರೆ. ಆಳುವವರು ಮನಸ್ಸು ಮಾಡಿದರೆ ಇವರಿಗೆಲ್ಲ ಮನೆ-ಸೈಟ್ ಹಂಚಿಕೆ ಮಾಡುವುದು ದೊಡ್ಡ ಕೆಲಸವೇನಲ್ಲ; ಅಪಾರ ಸರಕಾರಿ ಭೂಮಿ ಮೂಡಿಗೆರ-ಕಳಸದಲ್ಲಿದೆ. ಆದರೆ ಬಹು ಎಕರೆ ಕಾಫಿ-ಅಡಿಕೆ ತೋಟಗಳ ಬಲಾಢ್ಯ ಭೂಮಾಲಿಕರು ಕೂಲಿ ಕಾರ್ಮಿಕರಿಗೆ ಸ್ವತಂತ್ರ ಮನೆ-ಸೈಟ್ ಸಿಗದಂತೆ ರಹಸ್ಯ ಕುತಂತ್ರ ಮಾಡುತ್ತಿದ್ದಾರೆ; ತಮ್ಮ ಅಂಕೆಯಿಂದ ಕೂಲಿಗಳು ತಪ್ಪಿಹೋದರೆ ಕಾಫಿ ಪ್ಲಾಂಟೇಷನ್, ಅಡಿಕೆ-ಕರಿ ಮೆಣಸಿನ ತೋಟ ಪಾಳುಬೀಳುತ್ತದೆಂಬ ಭೀತಿ ಈ ಬಂಡವಾಳಶಾಹಿ ಭೂಮಾಲಿಕರದೆನ್ನಲಾಗಿದೆ.

ಮತ್ತೊಂದೆಡೆ ಅಭಯಾರಣ್ಯ-ರಕ್ಷಿತಾರಣ್ಯ ಯೋಜನೆಗಾಗಿ ತಲತಲಾಂತರದಿಂದ ಕಾಡಿನಂಚಲ್ಲಿ ಬದುಕುತ್ತಿರುವ ಬುಡಕಟ್ಟು ಜನರನ್ನು ಎತ್ತಂಗಡಿ ಮಾಡುವ ಪ್ರಯತ್ನ ನಡೆದಿದೆ. ಸಾಮ, ಭೇದ, ದಂಡ ಬಳಸಿ ಈಗಾಗಲೆ ಸ್ಥಳಾಂತರಿಸಿರುವ ಜನರಿಗೆ ಮೂಲಸೌಕರ್ಯ ಒದಗಿಸಲಾಗಿಲ್ಲ; ನರಕದಂತಾಗಿರುವ ಪುನರ್ವಸತಿ ಕೇಂದ್ರದ ನಿರಾಶ್ರಿತರು ಚುನಾವಣೆ ಬಹಿಷ್ಕಾರದ ಕೂಗೆಬ್ಬಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಉಳುಮೆಮಾಡಿ ಬದುಕುತ್ತಿರುವ ರೈತರಿಗೆ ಬಗರ್ ಹುಕುಮ್ ಸಾಗುವಳಿ ಹಕ್ಕುಪತ್ರ ಕೊಡದೆ ಸತಾಯಿಸಲಾಗುತ್ತಿದೆ. ಬಲಾಢ್ಯರು ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡುತ್ತಿದ್ದರೂ ಕಣ್ಮುಚ್ಚಿಕೊಂಡಿರುವ ಅರಣ್ಯಾಧಿಕಾರಿಗಳು, ದುರ್ಬಲರು ಬದುಕಲು ಒಂದೋ ಎರಡೋ ಗುಂಟೆಯಲ್ಲಿ ಮನೆ ಕಟ್ಟಿಕೊಂಡರೆ ಹಲ್ಲೆಮಾಡಿ, ಸುಳ್ಳು ಕೇಸುಹಾಕಿ ಜೈಲಿಗಟ್ಟಿ ಕಾಡುತ್ತಾರೆ ಎಂದು ಕಾಡಿನ ಮಕ್ಕಳ ರಕ್ಷಣಾ ಹೋರಾಟಗಾರರೊಬ್ಬರು ಹೇಳುತ್ತಾರೆ.

ನಯನಾ ಮೋಟಮ್ಮ

ಮೂಡಿಗೆರೆಯಲ್ಲಿ ಇತ್ತೀಚಿನ ವರ್ಷದಲ್ಲಿ ಆನೆ ಹಿಂಡಿನ ಹಾವಳಿ ವಿಪರೀತವಾಗಿದೆ. ಅಧಿಕಾರಸ್ಥರು ಆನೆ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲವೆಂಬ ಆಕ್ರೋಶದಲ್ಲಿ ಜನರು ಶಾಸಕ ಕುಮಾರಸ್ವಾಮಿಯವರ ಮೇಲೆ ದಾಳಿಮಾಡಿದ್ದು ರಾಜ್ಯದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಮೂಡಿಗೆರೆಯಲ್ಲಿ ದೊಡ್ಡದಾದ ಆಸ್ಪತ್ರೆ ಕಟ್ಟಡವೇನೋ ಇದೆ; ಆದರೆ ಪರಿಣಾಮಕಾರಿ ವೈದ್ಯಕೀಯ ಸೇವೆ-ಸೌಲಭ್ಯ ಸಿಗುತ್ತಿಲ್ಲ; ಜನರು ಮಣಿಪಾಲ, ಮಂಗಳೂರು, ಶಿವಮೊಗ್ಗ, ಹಾಸನದ ಆಸ್ಪತ್ರೆಗೆ ಹೋಗಬೇಕಾಗಿದೆ. ಕಳಸ ಸ್ವತಂತ್ರ ತಾಲ್ಲೂಕಾಗಿ ಹಲವು ವರ್ಷವಾದರೂ ತಾಲ್ಲೂಕಾ ಕೇಂದ್ರಲ್ಲಿ ಅವಶ್ಯವಾದ ಸೌಕರ್ಯ ಇಲ್ಲದಾಗಿದೆ. ಕಳೆದ ಮಾನ್ಸೂನ್‌ನ ಅತಿವೃಷ್ಟಿ, ಭೂಕುಸಿತಕ್ಕೆ ಹೈರಾಣಾದವರು ಸಂಕಷ್ಟದಲ್ಲಿದ್ದಾರೆ. ಎಲೆ ಚುಕ್ಕೆ ರೋಗ ಅಡಿಕೆ ತೋಟಗಳನ್ನು ಬಾಧಿಸುತ್ತಿದೆ. ಮಲೆನಾಡಿನ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಬಸ್ ಓಡಾಟ ನಿಂತು ನೂರಾರು ಬಸ್‌ಗಳಿಗೆ ತುಕ್ಕು ಹಿಡಿಯುತ್ತಿದೆ; ಇವ್ಯಾವುದಕ್ಕೂ ಶಾಸಕ ಕುಮಾರಸ್ವಾಮಿ ಮತ್ತು ಕೇಂದ್ರ ಮಂತ್ರಿಣಿಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಜನಮನದಲ್ಲಿ ಮಡುಗಟ್ಟಿದೆ.

ರಣಕಣದ ಕಲಿಗಳ್ಯಾರು?

ಮೂಡಿಗೆರೆ ಅಖಾಡ ದಿನಕ್ಕೊಂದು ಆಯಾಮ ಪಡೆಯುತ್ತ ಹದಗೊಳ್ಳುತ್ತಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಟಿಕೆಟ್ ಪಡೆಯುವ, ತಪ್ಪಿಸುವ ರಣರೋಚಕ ಜಿದ್ದಾಜಿದ್ದಿಯಾಗುತ್ತಿದೆ. ಬಿಜೆಪಿ ಶಾಸಕ ಕುಮಾರಸ್ವಾಮಿ ಪರ-ವಿರುದ್ಧದ ಬಣ ಬಡಿದಾಟ ಬೀದಿಯಲ್ಲೇ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯ ಸರ್ವೋಚ್ಚ ನಾಯಕ ಸಿ.ಟಿ.ರವಿ ಮತ್ತವರ ಶಿಷ್ಯ ವಿಧಾನಪರಿಷತ್ ಸದಸ್ಯ ಪ್ರಾಣೇಶ್, ಶಾಸಕ ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆಂಬುದು ಟಾಕ್ ಆಪ್ ದಿ ಡಿಸ್ಟ್ರಿಕ್ಟ್ ಆಗಿದೆ. ಈಚೆಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆಂದು ಮೂಡಿಗೆರೆಗೆ ಯಡಿಯೂರಪ್ಪ ಬಂದಾಗ ರವಿ-ಪ್ರಾಣೇಶ್ ಹಿಂಬಾಲಕರೆನ್ನಲಾದವರ ತಂಡ ಮುತ್ತಿಗೆ ಹಾಕಿ ಕುಮಾರಸ್ವಾಮಿಗೆ ಟಿಕೆಟ್ ಕೊಡಕೂಡದೆಂದು ಬೊಬ್ಬೆಹಾಕಿದ್ದು ಸ್ಥಳಿಯ ಬಿಜೆಪಿ ಬುಡವನ್ನೆ ಅಲ್ಲಾಡಿಸಿಬಿಟ್ಟತ್ತು.

ರವಿ ಮತ್ತು ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ತುಂಬ ಹಳೆಯದು.ದಲಿತ ವರ್ಗದ ಶಾಸಕ ಕುಮಾರಸ್ವಾಮಿ ತಮ್ಮ ಆಜ್ಞಾನುವರ್ತಿ ಆಗಿರಬೇಕೆಂಬ ಮನೋಭಾವ ರವಿ ಬಳಗದ್ದು; ಒಂದು ಹಂತದವರೆಗೆ ಮೇಲ್ವರ್ಗದ ನಾಯಕರಿಗೆ ತಗ್ಗಿಬಗ್ಗಿಯೇ ನಡೆದ ಕುಮಾರಸ್ವಾಮಿ ಕಿರುಕುಳ ಹೆಚ್ಚಾದಾಗ ಸೆಟೆದು ನಿಂತರು ತನ್ನ ಕ್ಷೇತ್ರದಲ್ಲಿ ರವಿ ಹಸ್ತಕ್ಷೇಪ ಮಾಡುತ್ತಾರೆ, ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಬಹಿರಂಗವಾಗೆ ಹೇಳಿದ್ದೂ ಇದೆ. ಮೂಡಿಗೆರೆಯವರಾದ ಎಮ್ಮೆಲ್ಸಿ ಪ್ರಾಣೇಶ್-ಕುಮಾರಸ್ವಾಮಿ ಸಂಘರ್ಷವಂತೂ ತಾರಕ ತಲುಪಿದೆ ಎಂದು ಕ್ಷೇತ್ರದ ಮೇಲ್ವರ್ಗದ ಜಾತಿ ಮೇಲರಿಮೆ ರಾಜಕಾರಣದ ಸೂಕ್ಷ್ಮ ಬಲ್ಲವರು ಹೇಳುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗಿರುವ ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭವಲ್ಲವೆಂಬುದು ವಿರೋಧಿಗಳಿಗೂ ಗೊತ್ತಿತ್ತು. ಕುಮಾರಸ್ವಾಮಿ ತಾನಾಗಿಯೇ ಬಿಜೆಪಿ ಬಿಟ್ಟುಹೋಗುವಂಥ ವಾತಾವರಣ ಸೃಷ್ಟಿಗೆ ಪ್ರಯತ್ನಗಳಾದವು. ಕುಮಾರಸ್ವಾಮಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಎಂಬ ವದಂತಿ ಹಬ್ಬಿಸಲಾಯಿತು. ತನ್ಮೂಲಕ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗುವಂತೆ ನೋಡಿಕೊಳ್ಳಲಾಯಿತು. ಕಾಲೇಜೊಂದರಲ್ಲಿ ಗ್ರಂಥಪಾಲಕರಾಗಿದ್ದ-ಆರೆಸ್ಸೆಸ್ ಕಟ್ಟಾಳು ನರೇಂದ್ರ ಸರಕಾರಿ ಚಾಕರಿಗೆ ರಾಜಿನಾಮೆ ಕೊಟ್ಟು ತಾನೆ ಬಿಜೆಪಿ ಕ್ಯಾಂಡಿಡೇಟ್ ಎಂದು ಓಡಾಡತೊಡಗಿದರು. ಬೆಂಗಳೂರಿನ ಲಂಬಾಣಿ ಸಮುದಾಯದ ಹಣವಂತ ವಿಜಯ್‌ಕುಮಾರ್, ರಿಯಲ್ ಎಸ್ಟೇಟ್ ಹಿನ್ನೆಲೆಯ ಸುಷ್ಮಾ, ಸ್ಥಳೀಯ ದೀಪಕ್ ದೊಡ್ಡಯ್ಯ ಕೇಸರಿ ಟಿಕೆಟ್‌ಗೆ ಕಟಿಪಿಟಿ ಶುರು ಹಚ್ಚಿಕೊಂಡರು.

ಇದರಿಂದ ಡಿಸ್ಟರ್ಬ್ ಆದ ಕುಮಾರಸ್ವಾಮಿ, ಮೂಡಿಗೆರೆಯ ತಮ್ಮ ಬೀಗರ (ಕಾಫಿ ಡೇ ಧಣಿ-ಮಾಜಿ ಸಿಎಂ ಎಸ್‌ಎಂಕೆ ಅಳಿಯ ದಿವಂಗತ ಸಿದ್ಧಾರ್ಥ) ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಂದಾಗೆಲ್ಲ ರಹಸ್ಯವಾಗಿ ಭೇಟಿಯಾಗಿ ಕಾಂಗ್ರೆಸ್ ಟಿಕೆಟ್ ಕೇಳುವುದು ಸುದ್ದಿಯಾಗಹತ್ತಿತು. ಇತ್ತ ಸಂಘ ಪರಿವಾರ ಮತ್ತು ಸಿಟಿ ರವಿ ವಲಯದಲ್ಲಿ ನರೇಂದ್ರ ಹೆಸರಿನ ಚಲನೆಗೆ ವೇಗ ಬಂತು. ಆದರೀಗ ಕ್ಷೇತ್ರದಲ್ಲಿರುವ ಕುಮಾರಸ್ವಾಮಿ ಇಮೇಜ್ ಸ್ವಪಕ್ಷೀಯ ಶತ್ರು ಪಾಳಯ ಮತ್ತು ಹೈಕಮಾಂಡನ್ನು ಸಂದಿಗ್ಧಕ್ಕೆ ಸಿಲುಕಿಸಿಬಿಟ್ಟಿದೆ. ಕುಮಾರಸ್ವಮಿ ಬಿಟ್ಟು ಬೇರೆ ಯಾರೇ ಹುರಿಯಾಳಾದರೂ ಬಿಜೆಪಿಗೆ ಸೋಲು ಖಚಿತವೆಂಬುದು ಮನದಟ್ಟಾಗಿದೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್ ಹೇಗಿದೆಯೆಂದರೆ, ಮಾಜಿ ಮಂತ್ರಿಗಳಾದ ಕಾಂಗ್ರೆಸ್‌ನ ಮೋಟಮ್ಮ ಮತ್ತು ಜೆಡಿಎಸ್‌ನ ನಿಂಗಯ್ಯರನ್ನು ಮೀರಿ ಕುಮಾರಸ್ವಾಮಿ ದಲಿತ ಸಮುದಾಯದ ಅಚ್ಚುಮೆಚ್ಚಿನ ನಾಯಕರಾಗಿ ರೂಪುಗೊಂಡಿದ್ದಾರೆ; ಮತೀಯ ಅತಿರೇಕ ಮಾಡದ ಕುಮಾರಸ್ವಾಮಿ ತನ್ನ ಜನಸ್ನೇಹಿ ನಡವಳಿಕೆಯಿಂದ ಒಕ್ಕಲಿಗರ ಒಂದು ವರ್ಗವೂ ಸೇರಿದಂತೆ ಎಲ್ಲ ಜಾತಿ-ಧರ್ಮಕ್ಕೂ ಸಹ್ಯವೆನಿಸಿದ್ದಾರೆ. ಕೆಲಸಗಾರನಲ್ಲ; ಅಧಿಕಾರಿಗಳ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಧಾಡಸಿಯಲ್ಲ ಎಂಬ ಭಾವನೆ ಕ್ಷೇತ್ರದಲ್ಲಿದ್ದರೂ ದೊಡ್ಡ ವಿರೋಧವೇನಿಲ್ಲ. ದಲಿತನೆಂಬ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಮೇಲ್ವರ್ಗದ ರಾಜಕಾರಣಿಗಳು ಹಣಿಯಲು ಹವಣಿಸುತ್ತಾರೆ; ಅವರಿಗೆ ಕ್ರೆಡಿಟ್ ಸಿಗಬಾರದೆಂದು ಜನಪರ ಕೆಲಸಕ್ಕೆ ಅಡ್ಡಗಾಲು ಹಾಕುತ್ತಾರೆ; ಅಧಿಕಾರಿಗಳು ಶಾಸಕರಿಗೆ ಕೇರ್ ಮಾಡದಂತೆ ಪ್ರಚೋದಿಸಲಾಗುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆ ಮತ್ತು ಎಮ್ಮೆಲ್ಸಿ ಪ್ರಾಣೇಶ್ ಕೂಡ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ; ಅವರನ್ನು ಪ್ರಶ್ನಿಸದವರು ಕುಮಾರಸ್ವಾಮಿಯನ್ನು ಮಾತ್ರ ಏಕೆ ಟೀಕಿಸುತ್ತಾರೆ? ದಲಿತನೆಂಬ ಕಾರಣಕ್ಕೆ ಅಪಪ್ರಚಾರ ಮಾಡುಲಾಗುತ್ತಿದೆಯಷ್ಟೆ ಎಂಬ ಸಿಂಪಥಿ ಮಾತು ಕೇಳಿಬರುತ್ತಿದೆ.

ಇಷ್ಟಾಗಿಯೂ ಪಕ್ಷೇತರನಾಗಿ ಸ್ಪರ್ಧೆಗಿಳಿದರೆ ಕುಮಾರಸ್ವಾಮಿ ಗೆಲ್ಲವುದು ಕಷ್ಟ; ಆದರೆ ಬಿಜೆಪಿ ಮುಳುಗಿಸುವುದು ಗ್ಯಾರಂಟಿ. ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ವಿನ್ನಿಂಗ್ ಕ್ಯಾಂಡಿಡೇಟ್; ಬಿಜೆಪಿಯ ಹುರಿಯಾಳಾದರೆ ಸ್ವಪಕ್ಷೀಯರೆ ಸೋಲಿಸುವ ಪ್ರಯತ್ನ ಮಾಡಲಿದ್ದಾರೆ ಎಂಬ ಸಾಧ್ಯಾಸಾಧ್ಯತೆಯ ಲೆಕ್ಕಾಚಾರ ರಾಜಕೀಯ ವಿಶ್ಲೇಷಕರದು. ಬಿಜೆಪಿಯ ಭಿನ್ನಮತ ಬಳಸಿಕೊಂಡು ಗೆಲ್ಲುವ ಅವಕಾಶ ಕಾಂಗ್ರೆಸ್‌ಗೆ ಇತ್ತು. ಆದರೆ ಕಾಂಗ್ರೆಸ್‌ನಲ್ಲೂ ಬಂಡಾಯದ ಕಹಳೆ ಮೊಳಗುತ್ತಿದೆ. ಕಳೆದೆರಡು ದಶಕದಿಂದ ಶಾಸಕಿಯಾಗಲು ಸೋತಿರುವ ಮೋಟಮ್ಮನವರ ಬಗ್ಗೆ ಕ್ಷೇತ್ರದಲ್ಲಿ ಕನಿಕರವಿತ್ತು. ಆದರೆ ಮೋಟಮ್ಮ ತನ್ನ ಮಗಳು ನಯನಾಗೆ ಕಾಂಗ್ರೆಸ್ ಅಭ್ಯರ್ಥಿ ಮಾಡಲು ಬೆಂಗಳೂರು-ದಿಲ್ಲಿ ಮಟ್ಟದ ಪ್ರಭಾವ ಬಳಸುತ್ತಿರುವುದು ಅವರ ವಿರೋಧಿ ಬಣವನ್ನು ಕೆರಳಿಸಿದೆ. ನಯನಾಗೆ ಟಿಕೆಟ್ ಕೊಡದಂತೆ ಒತ್ತಯಿಸುವ ಕಾಂಗ್ರೆಸ್ ಕಾರ್ಯಕರ್ತರ ಸರಣಿ ಸಭೆಗಳಾಗುತ್ತಿವೆ. ಬಿಎಸ್‌ಪಿ ಬಿಟ್ಟು ಕಾಂಗ್ರೆಸ್ ಸೇರಿರುವ ದಲಿತ ಮುಂದಾಳು ಆನೇಕಲ್‌ನ ಬಿ.ಗೋಪಾಲ್ ಮತ್ತಿತರ ಆರು ಆಕಾಂಕ್ಷಿಗಳು ಟಿಕೆಟ್ ಪೈಪೋಟಿ ನಡೆಸಿದ್ದಾರೆ. ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್‌ರ ಕೃಪಾಶೀರ್ವಾದದ ನಯನಾ ಹಣವನ್ನು ಯಥೇಚ್ಛವಾಗಿ ಖರ್ಚು ಮಾಡುವ ತಾಕತ್ತು ಮತ್ತು ಅಮ್ಮನ ಜನ ಸಂಪರ್ಕದ ನೆಟ್‌ವರ್ಕ್‌ನಿಂದಾಗಿ ಕಾಂಗ್ರೆಸ್‌ನಲ್ಲಿ ಇತರೆಲ್ಲರಿಗಿಂತ ಪ್ರಬಲ ಹುರಿಯಾಳೆನ್ನಲಾಗುತ್ತಿದೆ.

ಇನ್ನು ಯಡಿಯೂರಪ್ಪರನ್ನೇ ನಂಬಿಕೊಂಡಿರುವ ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೆ ಹಿಂಜರಿಯುತ್ತಿದ್ದಾರೆ. ಕುಮಾರಸ್ವಾಮಿಯನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿ ನಯನಾಗೆ ಎಮ್ಮೆಲ್ಸಿ ಮಾಡುವ ರಾಜಿ ಸೂತ್ರ ಡಿಕೆಶಿ ಹೆಣೆದಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ. ಜೆಡಿಎಸ್ ಮಾಜಿ ಸಚಿವ ಬಿ.ಬಿ.ನಿಂಗಯ್ಯರನ್ನು ತನ್ನ ರಣಕಲಿಯೆಂದು ಅಧಿಕೃತವಾಗಿ ಘೋಷಿಸುತ್ತಿದ್ದಂತೆಯೇ ಬಿನ್ನಮತ ಭುಗಿಲೆದ್ದಿದೆ. ನಿಂಗಯ್ಯ ಶಾಸಕ-ಮಂತ್ರಿಯಾಗಿದ್ದಾಗ ಕಾರ್ಯಕರ್ತರನ್ನು ಕಡೆಗಣಿಸಿದ್ದರು; ಜನ ಸಂಪರ್ಕವೂ ಕಳೆದುಕೊಂಡಿರುವ ನಿಂಗಯ್ಯ ಗೆಲ್ಲುವುದಿಲ್ಲ; ಅವರಿಗೆ ಮತ್ತೆ ಅವಕಾಶ ಬೇಡ ಎಂಬ ಕೂಗೆದ್ದಿದೆ. ಬೇಲೂರಿನ ಮಾಜಿ ಎಮ್ಮೆಲ್ಲೆ ಪುಟ್ಟರಂಗನಾಥ್ ಸೊಸೆ-ಹಾಸನ ಜಿ.ಪಂ ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ಕಾಂಗ್ರೆಸ್ ಟಿಕೆಟ್ ನಯನಾ ಮೋಟಮ್ಮಗೆ ಎಂಬುದು ಪಕ್ಕ ಆಗುತ್ತಲೇ ಜೆಡಿಎಸ್ ಸೇರಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ನಾಗರತ್ನ, ರತನ್ ಊರುಬಗೆ ಮುಂತಾದವರ ಹೆಸರು ಜೆಡಿಎಸ್‌ನಲ್ಲಿ ಮುನ್ನಲೆಗೆ ಬಂದಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ದಿಕ್ಕೆಟ್ಟಿರುವ ಶಾಸಕ ಕುಮಾರಸ್ವಾಮಿ ಸುತ್ತ ಗಿರಕಿಹೊಡೆಯುತ್ತಿರುವ ಮೂಡಿಗೆರೆ ರಣಕಣ ಕುತೂಹಲ ಕೆರಳಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...