Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶೃಂಗೇರಿ: ಕಾಂಗ್ರೆಸ್-ಬಿಜೆಪಿ ಗೌಡ್ರ ಗದ್ದಲದಲ್ಲಿ ಜೆಡಿಎಸ್‌ನ ಶೆಟ್ರೇ ನಿರ್ಣಾಯಕ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶೃಂಗೇರಿ: ಕಾಂಗ್ರೆಸ್-ಬಿಜೆಪಿ ಗೌಡ್ರ ಗದ್ದಲದಲ್ಲಿ ಜೆಡಿಎಸ್‌ನ ಶೆಟ್ರೇ ನಿರ್ಣಾಯಕ?!

- Advertisement -
- Advertisement -

ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾಡು-ಕಣಿವೆ-ಗಿರಿ-ಜಲಪಾತಗಳ ರುದ್ರ ರಮಣೀಯ ನಿಸರ್ಗ ಸೀಮೆ; ’ಬ್ರಾಹ್ಮಣಿಕೆ’ ಸಂಪ್ರದಾಯದ ಧಾರ್ಮಿಕ ’ಮಹತ್ವ’ದ ಶ್ರೀಕ್ಷೇತ್ರ. ಎಂಟನೇ ಶತಮಾನದ ಅದ್ವೈತ ಸಿದ್ಧಾಂತಿ ಶಂಕರಾಚಾರ್ಯ ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಇಲ್ಲಿಯದು ಮೊದಲನೆಯದು ಎನ್ನಲಾಗಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರೆನ್ನಲಾದ ವಿದ್ಯಾರಣ್ಯರು ಈ ಮಠದ 12ನೇ ಪೀಠಾಧಿಪತಿಯಾಗಿದ್ದರು. ರಸಿಕರ ಸೆಳೆಯುವ ಪ್ರವಾಸಿ ಮತ್ತು ಆಸ್ತಿಕರ ಆಕರ್ಷಣೆಯ ಯಾತ್ರಾ ಸ್ಥಳವಾದ ಶೃಂಗೇರಿ ಹೆಸರಿನ ವ್ಯುತ್ಪತ್ತಿ ತರ್ಕಗಳು ಆಸಕ್ತಿದಾಯಕವಾಗಿದೆ.

ರಾಮಾಯಣ ಕಾಲದ ವಿಭಾಂಡಕ ಮಹಾಮುನಿ ಮತ್ತವನ ಮಗ ಋಷ್ಯ ಶೃಂಗ ಇಲ್ಲಿಯ ಬೆಟ್ಟದಲ್ಲಿ ವಾಸವಿದ್ದರಂತೆ. ಕೋಡು (ಶೃಂಗ) ಹೊಂದಿದ್ದ ಋಷ್ಯಂಗ (ಶೃಂಗಿ) ಋಷಿಯ ಇರುವಿಕೆಯಿಂದ ಬೆಟ್ಟಕ್ಕೆ ಋಷಿ-ಶೃಂಗ-ಗಿರಿ ಎಂದು ಹೆಸರು ಬಂತಂತೆ. ಕಾಲಕ್ರಮೇಣ ಊರು “ಶೃಂಗೇರಿ” ಎಂದು ಹೆಸರಾಯಿತು ಎನ್ನಲಾಗುತ್ತಿದೆ. ಮತ್ತೊಂದು ವಾದದಂತೆ ಇಲ್ಲಿರುವ ಮುಗಿಲೆತ್ತರದ ಸಹ್ಯಾದ್ರಿ ಗುಡ್ಡಗಳು ಹಸುವಿನ ಕೋಡುಗಳಂತೆ (ಶೃಂಗ) ಭಾಸವಾಗುವುದು ಶೃಂಗೇರಿ ಹೆಸರಿನ ಮೂಲವಂತೆ. ತೋಟಗಾರಿಕೆ ಪ್ರಧಾನವಾದ ಶೃಂಗೇರಿಯಲ್ಲಿ ಕಾಫಿ, ಅಡಿಕೆ, ಕರಿಮೆಣಸು, ಏಲಕ್ಕಿ, ವೀಳ್ಯದೆಲೆ ಬೆಳೆಯಲಾಗುತ್ತಿದೆ. ಆರ್ಥಿಕತೆ ಕಾಫಿ ಮತ್ತು ಅಡಿಕೆ ಬೆಳೆಯ ಮೇಲೆ ನಿಂತಿದೆ. ತೋಟ ಮಾಡುವವರ, ತೋಟದ ಕೂಲಿಗಳ ಬದುಕು ಹಾಗು ಶೃಂಗೇರಿಯ ವ್ಯಾಪಾರ-ವಹಿವಾಟಿಗೆಲ್ಲ ಕಾಫಿ-ಅಡಿಕೆಯ ಕಾಸೇ ಆಧಾರ. ಶೃಂಗೇರಿಯ ಎಲ್ಲ ಮಗ್ಗುಲಲ್ಲೂ ದಾಸ ಒಕ್ಕಲಿಗರದೆ ಏಕಸ್ವಾಮ್ಯವಾದರೂ ಮಠದ ಪ್ರಭಾವಳಿಯ ಬ್ರಾಹ್ಮಣರು ಕ್ಷೇತ್ರದ ರಾಜಕೀಯ-ಸಾಮಾಜಿಕ ’ನೀತಿ’ಯ ನಿಶ್ಯಬ್ದ ನಿರೂಪಕರು ಎಂಬ ಮಾತು ಕೇಳಿಬರುತ್ತದೆ.

ಅಖಾಡದ ಆಕಾರ

ತಳಸಮುದಾಯನ್ನು ಶೋಷಿಸುವ ಮಡಿವಂತಿಕೆ, ಗೌಡಿಕೆ ಮತ್ತು ಸಿರಿವಂತಿಕೆಯ ಶೃಂಗೇರಿ ಜಾತಿ ಮತ್ತು ಕೇಸರಿ ಧರ್ಮ ಪ್ರತಿಷ್ಠೆಯ ಜುಗಲ್‌ಬಂದಿ ಅಖಾಡ. ಶೃಂಗೇರಿ ತಾಲೂಕಿನ ಜತೆ ನರಸಿಂಹರಾಜಪುರ ಮತ್ತು ಕೊಪ್ಪ ತಾಲೂಕುಗಳನ್ನು ಸೇರಿಸಿ ರಚಿಸಲಾಗಿರುವ ಈ ಕ್ಷೇತ್ರ ಬಾಬಾಬುಡನ್ ಗಿರಿ ವಿವಾದದ ಬಳಿಕದ ಧರ್ಮಕಾರಣದ ನೇರ-ಅಡ್ಡ ಪರಿಣಾಮಗಳನ್ನೆಲ್ಲ ಅನುಭವಿಸುತ್ತಿದೆ. ಕಳೆದ ಎರಡೂವರೆ ದಶಕದಿಂದ ಬಿಜೆಪಿ ಹಿಂದುತ್ವವನ್ನು ಮುಂದಿಟ್ಟುಕೊಂಡು ಐದು ಚುನಾವಣೆಗಳನ್ನು ಮಾಡಿದೆ. ಕ್ಷೇತ್ರದ ಜಾತಿಕಾರಣ ಮತ್ತು ಧರ್ಮಕಾರಣದ ಮಂಕು ಬೂದಿ ಅದೆಷ್ಟು ಪ್ರಭಾವಶಾಲಿಯಾಗಿದೆಯೆಂದರೆ ಕನಿಷ್ಠ ಮೂಲಸೌಕರ್ಯಗಳನ್ನೂ ಅಭಿವೃದ್ಧಿಪಡಿಸಲಾಗದ ಹೊಣೆಗೇಡಿಗಳು ಮತ್ತೆಮತ್ತೆ ಶಾಸಕ-ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಘಿ ಸೂತ್ರದಾರರು ಅಧಿಕಾರ-ಅಂತಸ್ತಿನ ಲಾಲಸೆ ಮೂಡಿಸಿ ಡಿ.ಎನ್.ಜೀವರಾಜ್‌ರಂಥ ಶೂದ್ರರನ್ನು ಮುಂದಿಟ್ಟುಕೊಂಡು ಹಿಂದುತ್ವದ ಅಜೆಂಡಾ ಸಾಧಿಸಿದ್ದಾರೆ; ಇಂದಿರಾ ಗಾಂಧಿಗೆ ಸಂಸತ್ ಕ್ಷೇತ್ರ ಬಿಟ್ಟುಕೊಟ್ಟ ಖ್ಯಾತಿಯ ಡಿ.ಬಿ.ಚಂದ್ರೇಗೌಡರನ್ನೇ ದಿಕ್ಕುತಪ್ಪಿಸಿ ಮತೀಯ ಧ್ರುವೀಕರಣ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕಡಿದಾಳು ಮಂಜಪ್ಪ

ಶೃಂಗೇರಿ ದಾಸ ಒಕ್ಕಲಿಗೆ ’ಮೀಸಲು’ ಕ್ಷೇತ್ರ ಎನ್ನಬಹುದು. ಒಕ್ಕಲಿಗೇತರರು ಯಾರೂ ಇಲ್ಲಿಂದ ಗೆದ್ದಿಲ್ಲ. ಗೇಣಿದಾರ ರೈತರ ಹಿತರಕ್ಷಣೆಯ ರಾಜಕಾರಣ ಮಾಡಿದ್ದ ಗಾಂಧಿವಾದಿ-ಸಮಾಜವಾದಿ-ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಮತ್ತು ’ಮಲೆನಾಡ ಗಾಂಧಿ’ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಜಿ.ಗೋವಿಂದೇಗೌಡರಂಥರವರ ಕರ್ಮಭೂಮಿಯಾಗಿದ್ದ ಶೃಂಗೇರಿ ಇವತ್ತು ಜಮೀನ್‌ದಾರಿ-ಮತೀಯವಾದಿ ಪಾಳೆಗಾರಿಕೆ ರಾಜಕಾರಣದ ಆಡುಂಬೊಲದಂತಾಗಿದೆ ಎಂದು ಪ್ರಜ್ಞಾವಂತರು ಹೇಳುತ್ತಾರೆ. ಬ್ರಾಹ್ಮಣರು ಗಣನೀಯವಾಗಿರುವ ಶೃಂಗೇರಿಯಲ್ಲಿ ಬ್ರಾಹ್ಮಣರ ದಕ್ಷಿಣಾಮ್ನಾಯ ಪೀಠದ ಮಠವಿರುವುದರಿಂದಲೋ ಏನೋ 1960ರ ದಶಕದಿಂದಲೂ ಭಾರತೀಯ ಜನ ಸಂಘ ಬೇರುಗಳನ್ನು ಇಳಿಸಿತ್ತು; 1980ರ ದಶಕದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಜಿದ್ದಾಜಿದ್ದಿ ಕಣವಾಗಿತ್ತು. ದತ್ತ ಪೀಠ ವಿವಾದದ ಬೈಪ್ರಾಡಕ್ಟ್-ಬಹುಸಂಖ್ಯಾತ ದಾಸ ಒಕ್ಕಲಿಗ ಸಮುದಾಯದ ಜೀವರಾಜ್ ಅವರನ್ನೊಳಗೊಂಡ ಹಿಂದುತ್ವ ರಾಜಕಾರಣ ಮುನ್ನಲೆಗೆ ಬರುತ್ತಿದ್ದಂತೆಯೆ ಶೃಂಗೇರಿ ಕೇಸರಿ ಕಾಳಗದ ಸಮರ ಭೂಮಿಯಾಗಿಬಿಟ್ಟಿತು!

ಸ್ವಜಾತಿ ಬಂಧು-ಪಕ್ಕದ ಚಿಕ್ಕಮಗಳೂರು ಎಮ್ಮೆಲ್ಲೆ ಸಿ.ಟಿ.ರವಿ ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಜೀವರಾಜ್ ಹಿನ್ನಡೆ ಅನುಭವಿಸುವಂತಾಯಿತಾದರೂ ಸ್ಥಳೀಯ ಬಿಜೆಪಿಯಲ್ಲವರಿಗೆ ಪ್ರತಿಸ್ಫರ್ಧಿಗಳಿಲ್ಲ. ಸಂಘ ಪರಿವಾರ ಪ್ರಣೀತ ವಿಭಜಕ ರಾಜಕಾರಣದ ಆರ್ಭಟ ದತ್ತ ಪೀಠ ಗಲಾಟೆಯ ಬಳಿಕ ಹೆಚ್ಚಾಗಿದೆಯಾದರೂ ಶೇಕಡಾ ಐವತ್ತರಷ್ಟು ಸಿಂಧುತ್ವವೂ ಹಿಂದುತ್ವ ಸಿಕ್ಕಿಲ್ಲ ಎಂಬುದು ಕಳೆದ ನಾಲ್ಕು ಇಲೆಕ್ಷನ್‌ನ ಅಂಕಿಅಂಶ ಸಾಬೀತು ಮಾಡುವಂತಿದೆ. ಇದರರ್ಥ ಶೃಂಗೇರಿ ಜನತೆ ಸಹಿಷ್ಣುತೆ-ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದ್ದಾರೆ ಎಂಬುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಸರಿ ಕಾವು ಪರಾಕಾಷ್ಠೆ ತಲುಪಿದಾಗಲೂ ಕಾಂಗ್ರೆಸ್ ಬೇರುಗಳಿಲ್ಲಿ ಒಣಗಿಲ್ಲ; ಪ್ರತಿ ಬಾರಿಯೂ ಕಾಂಗ್ರೆಸ್ ಬಿಜೆಪಿಗೆ ಕತ್ತುಕತ್ತಿನ ಹೋರಾಟ ಕೊಡುತ್ತ ಬಂದಿದೆಯಷ್ಟೇ ಅಲ್ಲ ಕಳೆದ ಬಾರಿ ಮೇಲ್ಗೈ ಸಾಧಿಸಿದೆ. ಕ್ಷೇತ್ರದಲ್ಲಿ ನಡೆಸಿರುವ 14 ಚುನಾವಣೆಯಲ್ಲಿ ಕಾಂಗ್ರೆಸ್ 8 ಬಾರಿ, ಜನತಾ ಪರಿವಾರ 3 ಸಲ ಮತ್ತು ಬಿಜೆಪಿ 3 ಬಾರಿ ಗೆಲುವು ಕಂಡಿವೆ. ಅಭಿವೃದ್ಧಿ-ಪ್ರಗತಿಗಿಂತ ಧರ್ಮ-ಜಾತಿ ಲೆಕ್ಕಾಚಾರಗಳ ’ಆಟ’ವೇ ಪ್ರಧಾನವಾಗಿರುವ ಶೃಂಗೇರಿ ಕ್ಷೇತ್ರದಲ್ಲಿರುವ ಒಟ್ಟೂ 1,62,160 ಮತದಾರರಲ್ಲಿ ಎಸ್‌ಸಿ-ಎಸ್‌ಟಿ-38,000, ಒಕ್ಕಲಿಗರು-37,000, ಮುಸ್ಲಿಮ್-29,000, ಒಬಿಸಿ-28,000 ಮತ್ತು ಬ್ರಾಹ್ಮಣರು-26,000 ಇರಬಹುದೆಂಬ ಲೆಕ್ಕಾಚಾರವಿದೆ.

ಚುನಾವಣಾ ಚದುರಂಗದಾಟ

19 ಅಗಸ್ಟ್ 1956ರಿಂದ 31 ಅಕ್ಟೋಬರ್ 1956ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪಕ್ಕದ ತೀರ್ಥಹಳ್ಳಿಯ (ಶಿವಮೊಗ್ಗ ಜಿಲ್ಲೆ) ಕಡಿದಾಳು ಮಂಜಪ್ಪ ಶೃಂಗೇರಿಯಿಂದ 1957ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎರಡನೇ ಚುನಾವಣೆಯಲ್ಲಿ (1962) ಮಂಜಪ್ಪನವರಿಗೆ ಪಕ್ಷೇತರ ಅಭ್ಯರ್ಥಿ ಎನ್.ಪಿ.ಗೋವಿಂದೇಗೌಡ ಸ್ಫರ್ಧೆಯೊಡ್ಡಿದ್ದರಾದರೂ 15,237 ಮತಗಳಿಂದ ಪರಾಭವ ಅನುಭವಿಸಿದರು. 1967ರಲ್ಲಿ ಕಾಂಗ್ರೆಸ್‌ನ ಕೆ.ಎನ್.ವೀರಪ್ಪ ಗೌಡ ಭಾರತೀಯ ಜನ ಸಂಘದ (ಬಿಜೆಎಸ್) ಎಚ್.ವಿ. ಶ್ರೀಕಾಂತ ಭಟ್ಟರನ್ನು 1,447 ಮತದಂತರದಿಂದ ಮಣಿಸಿ ಶಾಸಕನಾದರು. 1972ರಲ್ಲಿಯೂ ಈ ಇಬ್ಬರ ನಡುವೆಯೆ ಹಣಾಹಣಿ ಏರ್‍ಪಟ್ಟಿತ್ತು. ವೀರಪ್ಪ ಗೌಡರೆ ಎರಡನೆ ಬಾರಿ 15,581 ಮತದಂತರದಿಂದ ಚುನಾಯಿತರಾದರು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನ ಬೇಗಾನೆ ರಾಮಯ್ಯ ಬಿಜೆಎಸ್‌ನ ಶ್ರೀಕಾಂತ ಭಟ್ಟರನ್ನು 14,258 ಮತದಿಂದ ಹಿಮ್ಮೆಟ್ಟಿಸಿದರು.

ನಿರಾಯಾಸವಾಗಿ ಗೆಲ್ಲುತ್ತ ಬಂದಿದ್ದ ಕಾಂಗ್ರೆಸ್‌ಗೆ 1983ರ ಬಳಿಕ ಕಠಿಣ ಪೈಪೋಟಿ ಎದುರಾಯಿತು. ಗುಂಡೂರಾವ್ ಸರಕಾರದಲ್ಲಿ ಮಂತ್ರಿಯಾಗಿದ್ದ ಬೇಗಾನೆ ರಾಮಯ್ಯ ಜನಾಕ್ರೋಶಕ್ಕೆ ತುತ್ತಾಗಿದ್ದರು. 1983ರ ಚುನಾವಣೆ ಹೊತ್ತಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ವಿರೋಧಿ ಗಾಳಿಯೂ ಬೀಸಿತ್ತು. ಜನತಾ ಪಕ್ಷದ ಹುರಿಯಾಳಾಗಿದ್ದ ಜನಾನುರಾಗಿ ಎಚ್.ಜಿ.ಗೋವಿಂದೇಗೌಡ ಕಾಂಗ್ರೆಸ್ ಮಂತ್ರಿ ಬೇಗಾನೆ ರಾಮಯ್ಯರನ್ನು 5,921 ಮತದಿಂದ ಸೋಲಿಸಿದರು. 1985ರಲ್ಲಿ ಗೋವಿಂದೇಗೌಡರು ಕೇವಲ 83 ಮತದಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯು.ಕೆ.ಶಾಮಣ್ಣರ ಮಣಿಸಿ ಎರಡನೆ ಬಾರಿ ಅಸೆಂಬ್ಲಿಗೆ ಪ್ರವೇಶ ಪಡೆದರು. ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿಯಾಗಿದ್ದ ಗೋವಿಂದೇಗೌಡರು ಲಕ್ಷಾಂತರ ಶಿಕ್ಷಕರ ನೇಮಕಾತಿಗೆ ದಿಟ್ಟ ನಿರ್ಧಾರ ಕೈಗೊಂಡಿದ್ದರಾ; ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದು ರಾಜ್ಯದಲ್ಲಿ ಹೆಸರುವಾಸಿಯಾಗಿದ್ದರು!

ಎಚ್.ಜಿ.ಗೋವಿಂದೇಗೌಡ

1989ರಲ್ಲಿ ಜನತಾ ದಳದ ಹುರಿಯಾಳಾಗಿದ್ದ ಗೋವಿಂದೇಗೌಡರಿಗೆ ಗೆಲ್ಲಲಾಗಲಿಲ್ಲ. ಹೆಗಡೆ ಹಾಗು ದೇವೇಗೌಡರ ಬಣದ ದಾಯಾದಿ ಕಲಹದಲ್ಲಿ ಜನತಾ ಪರಿವಾರ ದುರ್ಬಲವಾಗಿತ್ತು. ಕಾಂಗ್ರೆಸ್‌ನ ಯು.ಕೆ.ಶಾಮಣ್ಣ 13,790 ಮತದಿಂದ ಗೆಲುವು ಕಂಡರು. 1994ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿದ್ದ ಮಾಜಿ ಮಂತ್ರಿ ಗೋವಿಂದೇಗೌಡರು ಮೂರನೇ ಬಾರಿ ಎಮ್ಮೆಲ್ಲೆಯಾದರು. ಈ ಚುನಾವಣಾ ಪಂದ್ಯಾವಳಿಯಲ್ಲಿ ಬಿಜೆಪಿ ರನ್ನರ್‌ಅಪ್ ಹಂತ ತಲುಪಿ ಅಚ್ಚರಿ ಮೂಡಿಸಿತ್ತು. ಜನತಾ ದಳದ ಗೋವಿಂದೇಗೌಡ ಮತ್ತು ಬಿಜೆಪಿಯ ಡಿ.ಎನ್.ಜೀವರಾಜ್ ನಡುವಿನ ನೇರ ಹೋರಾಟದಲ್ಲಿ ಕಾಂಗ್ರೆಸ್‌ನ ಶಾಸಕ ಶಾಮಣ್ಣ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು. ಗೋವಿಂದೇಗೌಡರು ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಸರಕಾರದಲ್ಲಿ ಮಂತ್ರಿಯಾಗಿದ್ದರು.

1999ರ ಚುನಾವಣೆ ವೇಳೆ ಜಿಲ್ಲೆಯ ವರ್ಚಸ್ವಿ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಜನತಾ ಪರಿವಾರ ಬಿಟ್ಟು ಕಾಂಗ್ರೆಸ್ ತೆಕ್ಕೆಗೆ ಜಾರಿದರು. ಗೋವಿಂದೇಗೌಡರು ರಾಜಕೀಯ ನಿವೃತ್ತಿ ಪಡೆದರು. ಹೀಗಾಗಿ ಕಾಂಗ್ರೆಸ್‌ನ ಚಂದ್ರೇಗೌಡ ಮತ್ತು ಬಿಜೆಪಿಯ ಜೀವರಾಜ್ ನಡುವೆ ನೇರಾನೇರ ಜಿದ್ದಾಜಿದ್ದಿ ಆಯಿತು. 4,571 ಮತದಂತರದಿಂದ ಬಿಜೆಪಿ ಹುರಿಯಾಳು ಜೀವರಾಜ್‌ರನ್ನು ಹಿಮ್ಮೆಟ್ಟಿಸಿದ ಚಂದ್ರೇಗೌಡರು ಎಸ್.ಎಂ.ಕೃಷ್ಣ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರದಂಥ ಆಯಕಟ್ಟಿನ ಇಲಾಖೆಯ ಮಂತ್ರಿಯಾದರು. ಹಿಂದೆರಡು ಬಾರಿ ಸೋತಿದ್ದ ಬಿಜೆಪಿಯ ಜೀವರಾಜ್ 2004ರಲ್ಲಿ ದತ್ತ ಪೀಠ ವಿವಾದ ಮತ್ತು ಇನ್ನಿತರ ಹಿಂದುತ್ವ ಸಂಗತಿಗಳನ್ನು ಚುನಾವಣಾ ’ಪ್ರನಾಳಿಕೆ’ಯನ್ನಾಗಿಸಿಕೊಂಡು ’ಧರ್ಮಯುದ್ಧ’ ಸಾರಿದರು. ಜನಸಾಮಾನ್ಯರ ಕೈಗೆಟುಕದ ಚಂದ್ರೇಗೌಡರ ಬಗೆಗಿನ ಬೇಸರವೂ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಜೀವರಾಜ್ ಭರ್ಜರಿ 18,221 ಮತದಂತರದಿಂದ ಹಳೆ ಹುಲಿ ಚಂದ್ರೇಗೌಡರನ್ನು ಹಿಮ್ಮೆಟ್ಟಸಿ ವಿಧಾನಸಭೆ ತಲುಪಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

2008ರಲ್ಲಿ ಬಿಜೆಪಿಯ ಹಿಂದುತ್ವದ ಮುಂದಾಳು ಜೀವರಾಜ್ ಕಾಂಗ್ರೆಸ್‌ನ ಪ್ರಬಲ ನಾಯಕ ಚಂದ್ರೇಗೌಡರನ್ನು ಮತ್ತೆ ಸೋಲಿಸಿದರು. ಆದರೆ ಈ ಬಾರಿ ಜೀವರಾಜ್ ಮತಗಳಿಕೆ ಇಳಿಕೆಯಾಗಿತ್ತು. ಗೆಲುವಿನ ಅಂತರ ಕೇವಲ 2,250ರಷ್ಟಾಗಿತ್ತು. ಅಷ್ಟೇ ಅಲ್ಲ, ಜೀವರಾಜ್ ಪಡೆದ ಮತಗಳಿಗಿಂತ ಎದುರಾಳಿ ಕಾಂಗ್ರೆಸ್ ಹಾಗು ಜೆಡಿಎಸ್‌ಗೆ ಒಟ್ಟಾರೆಯಾಗಿ 12,845 ಮತ ಜಾಸ್ತಿ ಬಂದಿತ್ತು. ಈ ಅಂಕಿ-ಅಂಶಗಳು ಶೃಂಗೇರಿಯಲ್ಲಿ ಜೀವರಾಜ್ ಅಥವಾ ಬಿಜೆಪಿಯ ಮತೀಯ ಭಾವೋದ್ವೇಗ ಕೆರಳಿಸುವ ತಂತ್ರಗಾರಿಕೆ ಒಪ್ಪದವರೆ ದೊಡ್ಡ ಪ್ರಮಾಣದಲ್ಲಿದ್ದಾರೆ ಎಂಬುದನ್ನು ಎಂಥವರಿಗೂ ಖಾತ್ರಿಪಡಿಸುವಂತಿದೆಯೆಂದು ಅಭಿಪ್ರಾಯಪಡಲಾಗುತ್ತಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟ ಚಂದ್ರೇಗೌಡ ಕಾಂಗ್ರೆಸ್‌ಗೆ ವಿದಾಯ ಹೇಳಿ ಬಿಜೆಪಿ ಸೇರಿ 2009ರಲ್ಲಿ ಬೆಂಗಳೂರು ಉತ್ತರದ ಸಂಸದರಾದರು.

ಇತ್ತ ಶೃಂಗೇರಿಯಲ್ಲಿ ಹಣವಂತ ಕಾಫಿ ಪ್ಲಾಂಟರ್ ಟಿ.ಡಿ.ರಾಜೇಗೌಡ ಕಾಂಗ್ರೆಸ್‌ನಲ್ಲಿ ಮುಂಚೂಣಿಗೆ ಬಂದರು. 2013ರ ಚುನಾವಣೆಯಲ್ಲಿ ರಾಜೇಗೌಡ ಬಿಜೆಪಿಯ ಜೀವರಾಜ್‌ಗೆ ನೇರ-ನಿಕಟ ಪೈಪೋಟಿ ಕೊಟ್ಟು ಬೆವರಿಳಿಸಿದರು.

ಜೀವರಾಜ್ 3,452 ಮತಗಳ ಸಣ್ಣ ಅಂತರದಲ್ಲಿ ಗೆಲುವು ಸಾಧಿಸಿದರಾದರೂ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಗಿಟ್ಟಿಸಿದ ಒಟ್ಟೂ ಓಟು ಹೆಚ್ಚಿತ್ತು. 2018ರಲ್ಲಿ ಕಾಂಗ್ರೆಸ್‌ನ ರಾಜೇಗೌಡ ಹಿಂದುತ್ವದ ಮುಂದಾಳು ಜೀವರಾಜ್‌ರನ್ನು 1,989 ಮತದಿಂದ ಹಿಮ್ಮೆಟ್ಟಿಸಿದರು. ಸೋತರೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ಪಡೆಯಲು ಯಶಸ್ವಿಯಾದ ಜೀವರಾಜ್ ಕ್ಷೇತ್ರದಲ್ಲಿ ಶಾಸಕ ರಾಜೇಗೌಡರ ಹೆಜ್ಜೆಹೆಜ್ಜೆಗೆ ಅಡ್ಡಗಾಲು ಹಾಕುತಿದ್ದಾರೆಂಬ ಮಾತು ಸಾಮಾನ್ಯವಾಗಿದೆ.

ಕ್ಷೇತ್ರದ ಬೇಕು-ಬೇಡ

ಶೃಂಗೇರಿಗೆ ಬರುವ ಪ್ರವಾಸಿಗರಿಗೆ ಪ್ರಮೋದ-ವಿನೋದ; ಯಾತ್ರಿಕರಿಗೆ ಧನ್ಯತೆ-ಪುಣ್ಯ; ಆದರೆ ಇಲ್ಲಿರುವವರಿಗೆ ಮಾತ್ರ ಪಾಪಕೂಪ ಎಂಬ ಮಾತೊಂದಿದೆ. ಪ್ರವಾಸಿಗರು ಮತ್ತು ಯಾತ್ರಿಗಳಿಂದ ರಸ್ತೆ, ನೀರು, ಪರಿಸರ ಕಲುಷಿತವಾಗುತ್ತಿದೆ ಎಂಬ ಕೂಗೆದ್ದಿದೆ. ಪ್ರವಾಸೋದ್ಯಮ ದೃಷ್ಟಿಕೋನದ ಒಂದಿಷ್ಟು ತಳುಕಿನ ಕಾಮಗಾರಿ ಆಗಿದೆಯೇ ಹೊರತು ಸ್ಥಳೀಯರಿಗೆ ಅವಶ್ಯವಾದ ಸುಧಾರಣೆ ಆಗಿಲ್ಲ; ಹಳ್ಳಿಗಳಿಗೆ, ಗಿರಿಜನರ ಹಾಡಿಗಳಿಗೆ ಹೋದರೆ ’ನರಕ’ ದರ್ಶನವಾಗುತ್ತದೆ. ರಸ್ತೆ, ಸಾರಿಗೆ, ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ, ವಸತಿ, ಶಾಲೆಯಂಥ ಮೂಲಸೌಕರ್ಯಕ್ಕಾಗಿ ಜನರು ಪರದಾಡುತ್ತಿದ್ದಾರೆ. ಇಚ್ಛಾಶಕ್ತಿಯಿಲ್ಲದ ಸಂಸದೆ, ಶಾಸಕರ ನಿರಾಸಕ್ತಿ, ಹೊಣೆಗೇಡಿತನದಿಂದ ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿಯಾಗುತ್ತಿಲ್ಲ ಎಂಬ ಆಕ್ಷೇಪ-ಅಸಮಾಧಾನದ ಅಳಲು ಶೃಂಗೇರಿ-ನರಸಿಂಹರಾಜಪುರ ಮತ್ತು ಕೊಪ್ಪ ತಾಲೂಕಿನಲ್ಲಿ ಮಡುಗಟ್ಟಿದೆ.

ಡಿ.ಬಿ.ಚಂದ್ರೇಗೌಡ

ಕ್ಷೇತ್ರದಲ್ಲೆಲ್ಲೂ ಒಂದು ಸುಸಜ್ಜಿತ ಆಸ್ಪತ್ರೆಯಿಲ್ಲ. ಅಪಘಾತ, ಅನಾರೋಗ್ಯದಂಥ ಅವಘಡ ಸಂಭವಿಸಿದರೆ ಮೂರ್‍ನಾಲ್ಕು ತಾಸು ದೂರದ ಮಂಗಳೂರು, ಮಣಿಪಾಲ, ಶಿವಮೊಗ್ಗಕ್ಕೆ ಹೋಗಬೇಕು. ರೋಗಿಯ ನಸೀಬು ಗಟ್ಟಿಯಿದ್ದರಷ್ಟೇ ಬಚಾವ್! ಕ್ಷೇತ್ರದ ಮೂರೂ ತಾಲೂಕಿನ ಜ್ವಲಂತ ಸಮಸ್ಯೆಯೆಂದರೆ, ನೆಲ ಮತ್ತು ನೆಲೆ ತಪ್ಪುವ ಆತಂಕದ ಬದುಕು. ಕಾಡಿನಿಂದಾವೃತವಾದ ಈ ಕ್ಷೇತ್ರದ ಅಸಹಾಯಕ ಮಂದಿಯನ್ನು ಜೀವವಿರೋಧಿ ಅರಣ್ಯ ಕಾನೂನುಗಳು ಬೆನ್ನುಬಿದ್ದು ಸತಾಯಿಸುತ್ತಿವೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಶೃಂಗೇರಿ-ಎನ್‌ಆರ್ ಪುರ ಮತ್ತು ಕೊಪ್ಪದ ಮಂದಿ ಬದುಕುವುದು ಸಾಧ್ಯವೇ ಇಲ್ಲ; ನೆಮ್ಮದಿಯಿಂದ ಓಡಾಡುವಂತಿಲ್ಲ; ಮೂಲಸೌಕರ್ಯ ಕಟ್ಟಿಕೊಳ್ಳುವಂತಿಲ್ಲ. ಗೊಬ್ಬರ-ಕ್ರಿಮಿನಾಶಕ ಬಳಸಿ ಉಳುಮೆ ಮಾಡುವಂತಿಲ್ಲ. ಮನೆ-ಶಾಲೆ ಕಟ್ಟಡದಂಥ ಕನಿಷ್ಟ ಅನಿವಾರ್ಯತೆಗಳನ್ನೂ ಸ್ಥಾಪಿಸಿಕೊಳ್ಳುವಂತಿಲ್ಲ;

ಮತ್ತೊಂದೆಡೆ ತಲತಲಾಂತರದಿಂದ ಕಾಡಿನಂಚಿನಲ್ಲಿ ಸೂರುಕಟ್ಟಿಕೊಂಡು ಕೃಷಿ ಮಾಡಿಕೊಂಡು ಜೀವಿಸುತ್ತಿರುವವರನ್ನು ಒಕ್ಕೆಲೆಬ್ಬಿಸಿ ಬೀದಿಪಾಲು ಮಾಡುವ ಅನಾಹುತಕಾರಿ ಕುದುರೆಮುಖ ನ್ಯಾಷನಲ್ ಪಾರ್ಕ್, ಹುಲಿ ಯೋಜನೆ, ಬಫರ್ ಝೋನ್ ಮುಂತಾದ ಅರಣ್ಯ ಯೋಜನೆಗಳು ದಾಂಗುಡಿಯಿಡುತ್ತಿವೆ. ಕುದುರೆಮುಖ ಯೋಜನೆ ವ್ಯಾಪ್ತಿಯಿಂದ ಸ್ವ-ಇಚ್ಛೆಯಿಂದ ಹೊರಹೋಗುವವರಿಗೆ ದೊಡ್ಡಮೊತ್ತದ ಪರಿಹಾರ ಕೊಡುವ ಆಮಿಷ ಒಡ್ಡಿ ಅತಂತ್ರವಾಗಿಸುವ ಸರ್ಕಾರಿ ಮೋಸ ನಡೆದಿದೆ; ಜನರು ಚಡಪಡಿಸುತ್ತಿದ್ದರೂ ಆಳುವ ಮಂದಿ ಮಾತ್ರ ಉದಾಸೀನದಿಂದಿದ್ದಾರೆ ಎಂದು ನೆಲೆತಪ್ಪುವ ಆತಂಕದಲ್ಲಿರುವ ಜನರು ಹೇಳುತ್ತಾರೆ.

ನೆಲದ ಸಮಸ್ಯೆ ಮತ್ತೂ ಭೀಭತ್ಸವಾಗಿದೆ. ತಲತಲಾಂತರದಿಂದ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವವರಿಗೆ ಬಗರ್ ಹುಕುಮ್ ಹಕ್ಕುಪತ್ರ ಸಿಗುತ್ತಿಲ್ಲ; ನಗರ ಮತ್ತು ಹಳ್ಳಿಗಾಡಿನಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರ ಅಕ್ರಮ-ಸಕ್ರಮ ಆಗುತ್ತಿಲ್ಲ. ನಿವೇಶನ ಮಂಜೂರಿ ಆಗುತ್ತಿಲ್ಲ. ಬಡವರು ಬದುಕಿಗಾಗಿ ಮಾಡಿದ ಒತ್ತುವರಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಆಳುವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ; ಅನಾದಿಕಾಲದಿಂದ ಅರಣ್ಯ ಜಾಗದಲ್ಲಿ ಉತ್ತು-ಬಿತ್ತಿ-ಬೆಳೆತೆಗೆದು ಬದುಕುತ್ತಿರುವ ರೈತರು ತುತ್ತಿಗಾಧಾರವಾಗಿರುವ ಭೂಮಿಯ ಒಡೆತನ ಕೊಡಿಯೆಂದು ನಿರಂತರವಾಗಿ ಹೋರಾಡುತ್ತಿದ್ದಾರೆ. ಆದರೆ ಸಾಗುವಳಿಗೆ ಅವಕಾಶವಷ್ಟೆ ಕೊಡುವ, ಸಾಲ ಮುಂತಾದ ಯಾವ ಸರ್ಕಾರಿ ಸವಲತ್ತುಗಳೂ ಸಿಗದ “ಅರಣ್ಯ ಹಕ್ಕುಪತ್ರ” ಕೊಟ್ಟು ರೈತರನ್ನು ಯಾಮಾರಿಸಲಾಗುತ್ತಿದೆ; ಈ ತಂತ್ರಗಾರಿಕೆಯಲ್ಲಿ ರೈತರನ್ನು ಯಾವ ಗಳಿಗೆಯಲ್ಲಿ ಬೇಕಿದ್ದರೂ ಒಕ್ಕಲೆಬ್ಬಿಸಿ ಓಡಿಸುವ ಅಧಿಕಾರ ಅರಣ್ಯ ಇಲಾಖೆಗೆ ಇರುತ್ತದೆ. ಹೋಮ್ ಸ್ಟೇ, ರೆಸಾರ್ಟ್ ಹಾವಳಿ ಮಿತಿಮೀರಿದೆ. ಹೊಟ್ಟೆಪಾಡಿಗೆ ಅರಣ್ಯ ಸಾಗುವಳಿ ಮಾಡುವ ಬಡವರ ನಿರ್ದಯವಾಗಿ ಒಕ್ಕಲೆಬ್ಬಿಸುವ ಸರಕಾರಿ ಅಧಿಕಾರಿಗಳು, ಪ್ರಭಾವಿಗಳು ಕಾಡು ಕಡಿದು ಹೋಮ್ ಸ್ಟೇ, ರೆಸಾರ್ಟ್ ನಿರ್ಮಿಸಿದರೆ, ಹೆಕ್ಟೇರ್‌ಗಟ್ಟಲೆ ಅರಣ್ಯ ಅತಿಕ್ರಮಿಸಿ ತೋಟ ಪಟ್ಟಿ ಮಾಡಿಕೊಂಡರೆ ಕಂಡೂಕಾಣದಂತಿರುತ್ತಾರೆ ಎಂದು ರೈತರು ಅಲವತ್ತುಕೊಳ್ಳುತ್ತಾರೆ.

ಶೃಂಗೇರಿ ಕ್ಷೇತ್ರದಲ್ಲಿ ಒಂದೇ ಒಂದು ಉದ್ಯೋಗ ಸೃಷ್ಟಿಯಾಗುತ್ತಿಲ್ಲ; ದುಡಿವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆ ಸ್ಥಾಪನೆ, ತೋಟಗಾರಿಕೆ ಉನ್ನತೀಕರಣದ ಪ್ರಯತ್ನ ಆಳುವವರಿಂದ ಆಗುತ್ತಿಲ್ಲ; ಅಡಿಕೆ ತೋಟಗಳನ್ನು ಚುಕ್ಕೆ ರೋಗ, ತುಂಡೆ ರೋಗ ಆಪೋಶನ ಪಡೆಯುತ್ತಿದೆ. ಈ ಬಾರಿ ವಿಪರೀತ ಮಳೆಯಿಂದ ಕಾಫಿ, ಅಡಿಕೆ ಮತ್ತು ಕಾಳು ಮೆಣಸು ಇಳುವರಿ ಶೇ.50-60ರಷ್ಟು ಕಡಿಮೆಯಾಗಿದೆ. ರೈತಾಪಿ ವರ್ಗ ಸಂಕಟ ಅನುಭವಿಸುತ್ತಿದ್ದರೂ ಕಾಂಗ್ರೆಸ್ ಶಾಸಕ ರಾಜೇಗೌಡರಾಗಲಿ, ಬಿಜೆಪಿಯ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಜೀವರಾಜ್ ಆಗಲಿ ಸ್ಪಂದಿಸುತ್ತಿಲ್ಲ; ಶಾಸಕ ರಾಜೇಗೌಡ ಮತ್ತು ಸಿಎಂ ಸಂಸದೀಯ ಕಾರ್ಯದರ್ಶಿ ಜೀವರಾಜ್‌ರ ಒಣ ಪ್ರತಿಷ್ಠೆಯ ಮೇಲಾಟದಲ್ಲಿ ಶೃಂಗೇರಿ ಕ್ಷೇತ್ರ ಬಡವಾಗಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.

ಸದ್ಯದ ಸಮೀಕ್ಷೆ ಏನೆನ್ನುತ್ತದೆ?

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತುಹಾಕಿದರೆ ಈ ಬಾರಿಯ ಚುನಾವಣೆ ರಣ ರೋಚಕವಾಗುವ ಸಕಲ ಸೂಚನೆಗಳು ಗೋಚರಿಸುತ್ತದೆ. ಕಾಂಗ್ರೆಸ್‌ನ ಶಾಸಕ ರಾಜೇಗೌಡ, ಬಿಜೆಪಿಯ ಮಾಜಿ ಎಮ್ಮೆಲ್ಲೆ ಜೀವರಾಜ್ ಮತ್ತು ಜೆಡಿಎಸ್‌ನ ಮೈಸೂರು ಉದ್ಯಮಿ ಸುಧಾಕರ ಶೆಟ್ಟಿ ನಡುವಿನ ತ್ರಿಕೋನ ಕಾಳಗಕ್ಕೆ ಅಖಾಡ ಅಣಿಯಾಗುತ್ತಿದೆ. ಕಳೆದ ಮೂರು ಚುನಾವಣೆಗಳ ಅಂಕಿ-ಅಂಶ ಗಮನಿಸಿದರೆ ಎರಡು ಸಾವಿರದಿಂದ ಮೂರೂವರೆ ಸಾವಿರ ಮತದಂತರದ ಫೋಟೋ ಫಿನಶ್ ಫಲಿತಾಂಶ ಪ್ರಕಟವಾಗಿರುವುದು ಸ್ಪಷ್ಟವಾಗುತ್ತದೆ. ಅಂಥದೆ ಕತ್ತುಕತ್ತಿನ ನಿಕಟ “ಹಣಾ”ಹಣಿ ಈ ಬಾರಿಯೂ ನಡೆಯಲಿದ್ದು ಯಾರೇ ಗೆದ್ದರೂ ಅತ್ಯಲ್ಪ ಮತದಂತರ ಎಂದು ಚುನಾವಣಾ ಪಂಡಿತರಷ್ಟೆ ಅಲ್ಲ, ಜನಸಾಮಾನ್ಯರೂ ಅಂದಾಜಿಸುತ್ತಿದ್ದಾರೆ.

ಬಿಜೆಪಿಯ ಜೀವರಾಜ್ ಮೂರು ಬಾರಿ ಶಾಸಕನಾಗಿದ್ದಾಗ ಧರ್ಮಕಾರಣ ಮಾಡಿದ್ದೇ ಸಾಧನೆ; ಶೃಂಗೇರಿ ನಗರ ಬಿಟ್ಟು ಬೇರೆಡೆ ಜೀವರಾಜ್ ಗಮನ ಹರಿಸಲಿಲ್ಲ. ಸಂಸದೀಯ ಕಾರ್ಯದರ್ಶಿ ಹುದ್ದೆಯ ಅಧಿಕಾರ ಬಲದಿಂದ ಶಾಸಕ ರಾಜೇಗೌಡರಿಗೆ ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ; ಮಾಜಿ ಶಾಸಕರಿಗೆ ಹೋಲಿಸಿದರೆ ರಾಜೇಗೌಡರು ಫಾರ್ ಬೆಟರ್; ಬಿಜೆಪಿಗರಂತೆ ಸರಕಾರಿ ಕಾಮಗಾರಿಯಲ್ಲಿ ಫಾರ್‍ಟಿ ಪರ್ಸೆಂಟ್‌ಗೆ ಕೈಯ್ಯೊಡ್ಡುವವರಲ್ಲ. ಧಾಡಸಿಯಾಗಿ ಸುಧಾರಣಾ ಕೆಲಸ-ಕಾಮಗಾರಿ ಮಾಡಲಾಗದಿದ್ದರೂ ಕ್ಷೇತ್ರವಾಸಿಗಳ ಕೈಗೆಟುಕುತ್ತಾರೆ. ಆದರೆ ಅವರ ಹಿಂಬಾಲಕರು ಸರಿಯಿಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಮತ್ತೆ ಜೀವರಾಜ್-ರಾಜೇಗೌಡ ನಡುವೆ ನೇರ ಹೋರಾಟ ಆಗಬಹುದೆಂದು ನಿರೀಕ್ಷೆ ಕ್ಷೇತ್ರದಲ್ಲಿತ್ತು. ಆದರೆ ಜೆಡಿಎಸ್ ಹೈಕಮಾಂಡ್ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಹೊತ್ತಲ್ಲಿ ಸುಧಾಕರ ಶೆಟ್ಟಿ ಜೆಡಿಎಸ್ ಕ್ಯಾಂಡಿಡೇಟೆಂದು ಘೋಷಿಸುತ್ತಿದ್ದಂತೆ ಸಮರ ಭೂಮಿಯ ಸ್ವರೂಪವೇ ಬದಲಾಗಿಬಿಟ್ಟಿದೆ.

ಹೊಟೇಲ್, ಶಿಕ್ಷಣ ಸಂಸ್ಥೆ ನಡೆಸುವ ಹಣವಂತ ಸುಧಾಕರ ಶೆಟ್ಟಿ ಶಾಸಕನಾಗುವ ’ಗಂಭೀರ’ ಪ್ರಯತ್ನ ನಡೆಸಿದ್ದಾರೆ. ಹಣ ಖರ್ಚು ಮಾಡುವುದರೊಂದಿಗೆ ಕ್ಷೇತ್ರದ ರೈತರ ಸಮಸ್ಯೆ, ಅರಣ್ಯ ಕಾನೂನಿನ ಹಿಂಸೆ ಮತ್ತು ಅಭಿವೃದ್ಧಿ ಬಗ್ಗೆ ಸುಧಾಕರ ಶೆಟ್ಟಿ ಮಾತಾಡುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿಗರು ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಮೌನವಹಿಸಿರುವ ಹೊತ್ತಿನಲ್ಲಿ ಜೆಡಿಎಸ್ ಹುರಿಯಾಳು ಜನಪರವಾಗಿ ಮಾತಾಡುತ್ತಿರುವುದು ಗಮನ ಸೆಳೆಯುತ್ತಿದೆ. ಒಕ್ಕಲಿಗೇತರನೊಬ್ಬನಿಗೆ ಈ ಬಾರಿ ಛಾನ್ಸ್ ಕೊಡುವ ಯೋಚನೆ ಒಕ್ಕಲಿಗೇತರ ಮತದಾರರು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಮೂಲದ ಬಂಟ ಸಮುದಾಯದ ಸುಧಾಕರ ಶೆಟ್ಟಿ ಪೂರ್ವಜರು ಶೃಂಗೇರಿಗೆ ವಲಸೆ ಬಂದವರು. ಹೀಗೆ ಕರಾವಳಿಯಿಂದ ಬಂದು ನೆಲೆಯಾಗಿರುವ ಸುಮಾರು 25,000 ತುಳು ಭಾಷಿಕ ಓಟುದಾರರು ಶೃಂಗೇರಿ ಕ್ಷೇತ್ರದಲ್ಲಿದ್ದಾರೆಂಬ ಲೆಕ್ಕಾಚಾರವಿದೆ. ಈ ಮತದಾರರನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ಶುರುಹಚ್ಚಿಕೊಂಡಿರುವ ಶೆಟ್ರ ಆರ್ಭಟ ಜೋರಾಗುತ್ತಿದ್ದಂತೆ ಬಿಜೆಪಿಯ ಜೀವರಾಜ್ ಸಂಕಟಪಡುವಂತಾಗಿದೆ; ಏಕೆಂದರೆ ಈ ದ.ಕ. ಮೂಲದ ಮಂದಿ ಬಿಜೆಪಿಯ ಓಟ್ ಬ್ಯಾಂಕ್.

ಸದ್ಯದ ಟ್ರೆಂಡ್‌ನಂತೆ ಜೆಡಿಎಸ್‌ನ ಸುಧಾಕರ ಶೆಟ್ಟಿ ಬಲಗೊಂಡಂತೆ ಬಿಜೆಪಿಯ ಜೀವರಾಜ್ ದುರ್ಬಲರಾಗುತ್ತಿದ್ದಾರೆ; ದಿವಂಗತ ಸಿದ್ಧಾರ್ಥರ ಕಾಫಿ ತೋಟ ಖರೀದಿಸುವಷ್ಟು ಶ್ರೀಮಂತಿಕೆ ಇದ್ದರೂ ಜನರೊಂದಿಗೆ ಸರಳವಾಗಿ ಬೆರೆಯುವ ರಾಜೇಗೌಡ ಮತ್ತು ಸುಧಾಕರ ಶೆಟ್ಟರಲ್ಲಿ ಒಬ್ಬರಿಗೆ ಎಮ್ಮೆಲ್ಲೆಯಾಗುವ ಯೋಗವಿದೆ ಎಂಬ ಚರ್ಚೆ ಕ್ಷೇತ್ರದ ರಾಜಕೀಯ ಕಟ್ಟೆಯಲ್ಲಿದೆ. ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಕಾಂಗ್ರೆಸ್‌ನ ರಾಜೇಗೌಡ ರೇಸ್‌ನಲ್ಲಿ ಮುಂದಿದ್ದಾರೆ. ಈಗಿರುವ ಕುತೂಹಲವೆದಂರೆ, ಜೆಡಿಎಸ್‌ನ ಶೆಟ್ರು ಕಿಂಗ್ ಆಗ್ತಾರಾ? ಕಿಂಗ್ ಮೇಕರ್ ಆಗ್ತಾರಾ? ಎಂಬುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...