ಭಾರತದಲ್ಲಿ ಮಾಧ್ಯಮ ಕ್ಷೇತ್ರ ತನ್ನ ಕೆಲಸ ನಿಲ್ಲಿಸಿ ಪ್ರಜಾತಂತ್ರ ವಿರೋಧಿ ಪಯಣ ಆರಂಭಿಸಿ ಬಹಳ ಕಾಲವೇ ಆಯಿತು. ಆದರೆ ತೀರಾ ಇತ್ತೀಚೆಗೆ ತನ್ನ ಜೀವವಿರೋಧಿತನವನ್ನು ಸಾಬೀತುಪಡಿಸಿಕೊಂಡಿತು. ಜಗತ್ತಿನೆಲ್ಲೆಡೆ ಮನುಷ್ಯರನ್ನು ಅತ್ಯಂತ ಕ್ಷುದ್ರವಾಗಿಸಿಬಿಟ್ಟ ಕಣ್ಣಿಗೆ ಕಾಣದ ಕೊರೊನಾ ಆವರಿಸುತ್ತಾ ಬಂದಂತೆ, ಕೆಲವರಾದರೂ ಭಿನ್ನವಾಗಿ ಆಲೋಚಿಸಲು ಶುರು ಮಾಡಿದ್ದರು. ಬದುಕು ಇಷ್ಟೇನಾ, ಹಾಗಿದ್ದ ಮೇಲೆ ಈ ಜಗಳ, ಈ ದ್ವೇಷ, ಈ ತಾರತಮ್ಯ ಏಕೆ ಎಂಬುದು ಅದರ ತಿರುಳಾಗಿತ್ತು. ಆದರೆ ಎಲ್ಲರೂ ಗಾಬರಿಗೊಳ್ಳುವ ಹಾಗೆ ನಮ್ಮ ಬಹುತೇಕ ಮಾಧ್ಯಮಗಳು ಇನ್ನಷ್ಟು ಉಲ್ಟಾ ದಿಕ್ಕಿನಲ್ಲಿ ಹೊರಟಿದ್ದವು.
ಕೊರೊನಾ ಸೋಂಕನ್ನು ಧರ್ಮವೊಂದಕ್ಕೆ ತಳುಕುಹಾಕಲು ಹೊರಟಾಗಲೇ ಮೊದಲ ಗಂಟೆ ಮೊಳಗಿತ್ತು. ದೇಶಕ್ಕೆ ದೇಶವೇ ದಿಗ್ಭ್ರಾಂತವಾಗಿ ಹೊಸಪರಿಸ್ಥಿತಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದರೆ, ಬಡವರು ಬೀದಿಯ ಮೇಲೆ ಬಂದರೆ ಅವರನ್ನು ಬಡಿಯಲು ಪೊಲೀಸರ ಮೇಲೆ ಒತ್ತಡ ಹಾಕುವುದರಲ್ಲಿ ಮಾಧ್ಯಮಗಳು ನಿರತವಾಗಿದ್ದವು. ಮತ್ತೀಗ ದೇಶ ಕಳೆದೊಂದು ಶತಮಾನದಲ್ಲೇ ಅತೀ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರವು ಒಂದು ಮೋಸದ ಪ್ಯಾಕೇಜನ್ನು ಬಿಡುಗಡೆ ಮಾಡಿದೆ; ಅದನ್ನು ಕನಿಷ್ಠ ವಿಮರ್ಶಾತ್ಮಕವಾಗಿ ನೋಡುವ ಕೆಲಸವನ್ನೂ ಬಹುತೇಕ ಮಾಧ್ಯಮಗಳು ಮಾಡಲಿಲ್ಲ. ಈ ಮೂರು ಸಂಗತಿಗಳು ಕಡೆಯ ಮೂರು ಬೆಲ್‍ಗಳು ಬಡಿದ ಹಾಗೆ ಎಂದು ದೇಶದ ಪ್ರಜ್ಞಾವಂತ ಸಮಾಜ ಭಾವಿಸಬೇಕಿತ್ತು; ಭಾವಿಸಿಯೂ ಇದೆ.
ಹೀಗಾಗಿಯೇ ಪರ್ಯಾಯ ಮಾಧ್ಯಮದ ಚರ್ಚೆಯೂ ಈ ಅವಧಿಯಲ್ಲಿ ಆರಂಭವಾಯಿತು. ಅದೇ ಕೆಲಸದಲ್ಲಿ ನಿರತರಾಗಿದ್ದ ಗೌರಿ ಮೀಡಿಯಾ ತಂಡವೂ ಅದಕ್ಕೆ ಪ್ರತಿಕ್ರಿಯಿಸುವುದರ ಭಾಗವಾಗಿ ಹೊಸ ಮಾಧ್ಯಮದ ಕುರಿತಾದ ತನ್ನ ಪರಿಕಲ್ಪನೆಯ ಪ್ರಸ್ತಾಪವೊಂದನ್ನು ಮುಂದಿಟ್ಟಿತು. ನ್ಯಾಯಪಥ ಮತ್ತು ನಾನುಗೌರಿ.ಕಾಂನಲ್ಲಿ ಪ್ರಕಟವಾದ ಆ ಪರಿಕಲ್ಪನೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ನಮ್ಮ ಬಳಗದಲ್ಲಿನ ಉಮೇದು ನಮಗೂ ಉತ್ಸಾಹ ತಂದಿತು.
ಆ ಬರಹದಲ್ಲಿ ಮುಖ್ಯವಾಹಿನಿ ಮಾಧ್ಯಮ ಎಂದು ಬಳಸಿದ್ದು ಕೆಲವರಲ್ಲಿ ಗೊಂದಲ ಮೂಡಿಸಿತ್ತು. ಇನ್ನೊಂದು ಚಾನೆಲ್ ಆರಂಭಿಸುವುದು ಅಥವಾ ದೊಡ್ಡ ರಾಜ್ಯ ಮಟ್ಟದ ಪತ್ರಿಕೆಯನ್ನು ತರುವುದು ಸಾಧ್ಯವೇ ಎಂಬುದು ಆ ಗೊಂದಲಕ್ಕೆ ಕಾರಣವಾಗಿತ್ತು. ಚಾನೆಲ್ ಅಥವಾ ದೊಡ್ಡ ಪತ್ರಿಕೆ ಯಾರಾದರೂ ಮಾಡಿದರೆ ಅದಕ್ಕೆ ನಮ್ಮ ತಕರಾರೇನೂ ಇಲ್ಲ; ಆದರೆ ನಮ್ಮ ಪರಿಕಲ್ಪನೆಯ ಮುಖ್ಯವಾಹಿನಿ ಮಾಧ್ಯಮ ಅದಲ್ಲ ಎಂದು ಸ್ಪಷ್ಟಪಡಿಸಬೇಕಾಗಿ ಬಂದಿತು. ಮುಖ್ಯವಾಹಿನಿ ಎಂದಾಗ ಕಣ್ಣಮುಂದೆ ಬರುವ ಕಲ್ಪನೆಯು ಹಾಗೇ ಇರುತ್ತದಾದ್ದರಿಂದ, ಅದು ನನ್ನ ಬರಹದಲ್ಲೇ ಇದ್ದ ಸಮಸ್ಯೆಯಾಗಿತ್ತು ಎಂಬುದನ್ನು ವಿನಮ್ರವಾಗಿ ಒಪ್ಪಿಕೊಳ್ಳಬಯಸುತ್ತೇನೆ.
ಹೊಸ ಮುಖ್ಯವಾಹಿನಿ ಎಂದರೆ ಜನಸಾಮಾನ್ಯರೆಲ್ಲರೂ ತಮ್ಮದೆಂದು ಭಾವಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮಾಧ್ಯಮದ ಹೊಸರೂಪವಾಗಿರುತ್ತದೆ. ನೂರಾರು ಸಣ್ಣ ಪ್ರಯತ್ನಗಳು ಸ್ವಾಯತ್ತವಾಗಿ ಉಳಿದುಕೊಂಡೂ ಸಮಷ್ಟಿಯಾಗಿ ಸಮಷ್ಟಿ ಹಿತಕ್ಕಾಗಿ ಕೆಲಸ ಮಾಡುವ ಸಂಘಟನಾ ರೂಪ ಹಾಗೂ ಉದ್ದೇಶ ಹೊಂದಿರುತ್ತವೆ.
ಈ ಕುರಿತು ನಮ್ಮ ಪತ್ರಿಕಾ ಬಳಗದಲ್ಲೂ ಚರ್ಚೆ ಶುರುವಾಗಿದ್ದು, ಇನ್ನೊಂದೆರಡು ವಾರಗಳಲ್ಲಿ ಅಂತಿಮಗೊಳ್ಳಲಿದೆ. ಅದನ್ನು ನಿಮ್ಮೆಲ್ಲರ ಮುಂದಿಡಲಾಗುತ್ತದೆ. ಎಲ್ಲರೂ ಮುಕ್ತವಾದ ಚರ್ಚೆ ನಡೆಸೋಣ. ಅಲ್ಲಿಂದಾಚೆಗೆ ನಾವೆಲ್ಲರೂ ಜೊತೆಗೂಡಿ ಈ ಕಾಲದ ಬಹುಮುಖ್ಯ ಅಗತ್ಯವಾದ ಹೊಸ ಮಾಧ್ಯಮವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ನಮಗಂತೂ ಇದೆ. ಕಡೆಯ ಮೂರು ಗಂಟೆ ಹೊಡೆದ ಮೇಲೂ ನಮ್ಮ ಕೆಲಸಕ್ಕೆ ಚಾಲನೆ ಕೊಡದಿದ್ದರೆ ಹೇಗೆ, ಅಲ್ಲವೇ?