ಮಲೆ ಮತ್ತು ಬೆಳವಲದ ಸಮ್ಮಿಶ್ರ ಭೌಗೋಳಿಕ ಗುಣಸ್ವಭಾವದ ಅರೆಮಲೆನಾಡು ತಾಲೂಕುಗಳಾದ ಶಿಗ್ಗಾವಿ ಮತ್ತು ಸವಣೂರು ಪ್ರಾಕೃತಿಕ-ಐತಿಹಾಸಿಕ-ರಾಜಕೀಯ ಮತ್ತು ಧರ್ಮ ಸಹಿಷ್ಣುತೆಗಳ ಹೆಗ್ಗಳಿಕೆಯ ಸೀಮೆ! ದಾರ್ಶನಿಕ ಕವಿಗಳಾದ ಶಿಶುನಾಳ ಷರೀಫ ಮತ್ತು ಕನಕದಾಸರು ಜನ್ಮವೆತ್ತಿದ ಈ ಭೂಮಿ ಸೂಫಿ ಸಂತರ ಭಾವೈಕ್ಯತೆಯ ನೆಲೆವೀಡು; ರಾಜಕೀಯ ಮುತ್ಸದ್ಧಿ-ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟ ದಾಖಲೆಯ ವಿಧಾನಸಭಾ ಕ್ಷೇತ್ರ. ಇತಿಹಾಸದ ನವಾಬರು ಮತ್ತು ಸ್ವಾತಂತ್ರ್ಯಾ ನಂತರದ ನಿಜಲಿಂಗಪ್ಪ-ಬೊಮ್ಮಾಯಿಗಳಂತಹವರ ಆಳ್ವಿಕೆಯಲ್ಲಿದ್ದರೂ ಶಿಗ್ಗಾವಿ-ಸವಣೂರು ಪ್ರಗತಿ-ಅಭಿವೃದ್ಧಿ ಕಂಡದ್ದು ಮಾತ್ರ ಅಷ್ಟಕ್ಕಷ್ಟೇ!
ಪಂಚಮಸಾಲಿ ಲಿಂಗಾಯತರ ಏಕಸ್ವಾಮ್ಯದ ಎರಡೂ ತಾಲೂಕುಗಳಲ್ಲಿ ಲಾಗಾಯ್ತಿನಿಂದ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಸಾಮಾಜಿಕ-ರಾಜಕೀಯ-ಆರ್ಥಿಕ ವ್ಯವಸ್ಥೆ ಮಡುಗಟ್ಟಿದೆ. ಕಂಡೂಕಾಣದಂತಿರುವ ಅಸಮಾನತೆ-ಬಡತನದಿಂದ ಅಸಾಯಕರಾಗಿರುವ ಮಂದಿ ಹೊಟ್ಟೆಪಾಡಿಗೆ ಗುಳೆ-ವಲಸೆ ಹೊರಡುವುದು ಮುಖ್ಯಮಂತ್ರಿಯ ಸಾಮ್ರಾಜ್ಯದ ’ಸುಭಿಕ್ಷತೆ’ಗೆ ಸಂಕೇತದಂತಿದೆ ಎಂಬ ಮಾತು ಮಾಮೂಲಾಗಿದೆ! ಜನರ ನಿರೀಕ್ಷೆಯಷ್ಟು ಬದಲಾಗದ ಶಿಗ್ಗಾವಿ-ಸವಣೂರಿಗೆ ಬಸು ಬೊಮ್ಮಾಯಿ ’ವಲಸೆ’ ಬಂದಬಳಿಕ ರಾಜಕಾರಣ ರೋಚಕವಾಗಿದೆ; ಪಂಚಮಸಾಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ಸಂಪೂರ್ಣ ಧೈರ್ಯ ಹೊಂದಿರದ ಅಲ್ಪಸಂಖ್ಯಾತ ಸಾದರ ಲಿಂಗಾಯತ ಪಂಗಡದ ಬಸು ಸುರಕ್ಷಿತ ಕ್ಷೇತ್ರ ಹುಡುಕುತ್ತಾ ಗುಳೆ ಹೊರಡುತ್ತಾರೆಂಬ ಚರ್ಚೆಗಳಿವೆಯಾದರೂ ಇತ್ತೀಚೆಗೆ ಅವರೇ ವರಸೆ ಬದಲಿಸಿದ್ದಾರೆ;ಅಧಿಕಾರ-ಸಂಪನ್ಮೂಲಗಳನ್ನು ಯಥೇಚ್ಛವಾಗಿ ಹೊಂದಿರುವ ಸಿಎಂ ತಮ್ಮ ವಿರೋಧಿಗಳನ್ನು ಖರೀದಿಸುತ್ತ-ಕಬಳಿಸುತ್ತ ಬುಡ ಭದ್ರಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಇತಿಹಾಸ-ಸಂಸ್ಕೃತಿ
ಸವಣೂರು ಹೆಸರಿನ ವ್ಯುತ್ಪತ್ತಿಗೆ ಇತಿಹಾಸದ ವಿವರಣೆಯಿದ್ದರೆ, ಶಿಗ್ಗಾವಿಯ ಸ್ಥಳ ನಾಮ ಪುರಾಣ ಪೌರಾಣಿಕ ಕತೆಯ ಹಿನ್ನಲೆ ಹೊಂದಿದೆ. ಸವಣೂರು ಪ್ರವರ್ಧಮಾನಕ್ಕೆ ಬಂದಿದ್ದು ನವಾಬರ ದರ್ಬಾರಿನಲ್ಲಿ. ಸವಣೂರು ನವಾಬ್ ವಂಶದ ಸ್ಥಾಪಕ ಅಬ್ದುಲ್ ರವೂಫ್ ಖಾನ್ ದಲೇಲ್‌ಪುರ್. ಈತ ಮೂಲತಃ ಅಪಘಾನಿಸ್ತಾನದ ’ಮೈನೆ’ ಬುಡಕಟ್ಟು ಜನಾಂಗದವರು. ಅಲ್ಲಿಯ ದಂಗೆಗೆ ಕಂಗೆಟ್ಟು ಭಾರತಕ್ಕೆ ಓಡಿಬಂದವರು. ವಿಜಾಪುರದ ಆದಿಲ್ ಶಾಹಿಗಳ ಆಶ್ರಯದಲ್ಲಿದ್ದ ದಲೇಲ್‌ಪುರ್‌ನ ಶೌರ್ಯ, ಜಾಣ್ಮೆ ಹಾಗೂ ಅಫ್ಘಾನಿ ಠೀವಿ ಬಗ್ಗೆ ತಿಳಿದುಕೊಂಡಿದ್ದ ಮೊಘಲ್ ದೊರೆ ಔರಂಗಜೇಬ್ ಅವರನ್ನ ಸುಬಾ ಸುಭೇದಾರ್ ಆಗಿ ನೇಮಿಸಿದ್ದರು. ಆನಂತರ ತನ್ನ ಮಗಳೊಂದಿಗೆ ಈತನ ಮದುವೆ ಮಾಡಿದ ಔರಂಗಜೇಬ್ ಸವಣೂರು ಸೀಮೆಯನ್ನು 1672ರಲ್ಲಿ ಜಹಗೀರಾಗಿ ಕೊಟ್ಟರು.
ಮಧ್ಯಕಾಲೀನ ಇತರ ಅರಸರಂತೆ ಈ ನವಾಬ್‌ಗೂ ಬೇಟೆಯ ಗೀಳಿತ್ತು. ಒಮ್ಮೆ ನಾಯಿಯೊಂದಿಗೆ ಬೇಟೆಗೆ ಹೊರಟಿದ್ದ ನವಾಬ್ ಜಮರನಹಳ್ಳಿ ಕಾಡು ಪ್ರವೇಶಿದ್ದರು. ಮೊಲವನ್ನು ಕಂಡ ನವಾಬ್ ನಾಯಿಯನ್ನು ಛೂ ಬಿಟ್ಟರು; ದಿದ್ಭ್ರಾಂತವಾದ ಮೊಲ ದಯನೀಯವಾಗಿ ಹಿಂದಿರುಗಿನೋಡಿತು. ಈ ಅಸಾಮಾನ್ಯ ಸನ್ನಿವೇಶ ನವಾಬರನ್ನು ಕಾಡಿತು. ಈ ಪ್ರದೇಶವನ್ನೆ ರಾಜಧಾನಿ ಮಾಡಿಕೊಳ್ಳುಲು ನಿರ್ಧರಿಸಿದ ನವಾಬ್ ಅದಕ್ಕೆ “ಶಹನೂರ್” ಎಂದು ಹೆಸರಿಟ್ಟರು. ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ಶಹರೂನ್ ಎಂದರೆ ’ಬೆಳಕಿನ ರಾಜ’ಎಂದರ್ಥ. ಕಾಲಕ್ರಮೇಣ ಶಹರೂನ್ ಅಪಭ್ರಂಶವಾಗಿ ’ಸವಣೂರು’ ಎಂದಾಯಿತೆಂದು ಇತಿಹಾಸ ಹೇಳುತ್ತದೆ. ಮತ್ತೊಂದು ವಾದದ ಪ್ರಕಾರ, ಶ್ರಾವಣ ಮಾಸದಲ್ಲಿ ನವಾಬ ರಾಜಧಾನಿಯನ್ನು ಬದಲಿಸಿದ್ದರಿಂದ ಸವಣೂರು ಎಂಬ ಹೆಸರು ರೂಢಿಗೆ ಬಂತೆನ್ನಲಾಗುತ್ತಿದೆ.
ಶಿಗ್ಗಾಂವ್ ಹೆಸರಿಗೆ ಮೂಲ ಶಿವ ಎಂಬ ಪ್ರತೀತಿಯಿದೆ. ಮಡದಿ ಪಾರ್ವತಿಯೊಂದಿಗೆ ಶಿವ ಶಿಗ್ಗಾವಿಯ ಗುಡ್ಡದ ಮೇಲೆ ತಪಸ್ಸಿಗೆ ಕುಳಿತಿದ್ದರಿಂದ ಇದು ಶಿವನ ಗಾಂವ್ (ಊರು) ಆಯಿತೆನ್ನಲಾಗುತ್ತಿದೆ. ಮರಾಠಿ ಪ್ರಭಾವದಲ್ಲಿ ’ಶಿಗ್ಗಾಂವ್’ ಎಂದು ಬಳಕೆಗೆ ಬಂತು. ಹಲವು ಊರುಗಳ ಹೆಸರಿನಲ್ಲಿದ್ದ ಮರಾಠಿ ಮೂಲದ “ಗಾಂವ್” ತೆಗೆಯುವ ನಿರ್ಧಾರದಲ್ಲಿ ಬೆಳಗಾಂವ್ ಬೆಳಗಾವಿಯಾದಂತೆ ಈಗ ಶಿಗ್ಗಾಂವ್ ಶಿಗ್ಗಾವಿಯಾಗಿದೆ.
ಸವಣೂರನ್ನು ಪ್ರಮುಖ ಸಂಸ್ಥಾನ ಮಾಡಿಕೊಂಡು ಶತಮಾನಗಳ ಕಾಲ ಪಾರುಪತ್ಯ ನಡೆಸಿದ ನವಾಬರ ಯುಗದ ಕುರುಹುಗಳು ಈಗಲೂ ಅಲ್ಲಿ ಕಾಣಸಿಗುತ್ತವೆ. ಪ್ರಥಮ ನವಾಬ ಅಬ್ದುಲ್ ರವೂಫ್ ಖಾನ್ ಎಂಟು ಪೇಟೆಗಳನ್ನು ನಿರ್ಮಿಸಿದರೆ ಆನಂತರದ ಪೀಳಿಗೆ ಅರಮನೆ (ರಶೀದ್ ಮಂಜಿಲ್), ಕೋಟೆ, ಹಳೆಯ ಮಹಲ್ ಮುಂತಾದ ಬೃಹತ್ ಕಟ್ಟಡಗಳನ್ನು ಕಟ್ಟಿಸಿದರು. ನವಾಬರ ಆಡಳಿತದ ಬಂಗಲೆಗಳೀಗ ಸರಕಾರಿ ಕಚೇರಿಗಳಾಗಿವೆ. ಹಿಂದು-ಅರೇಬಿಕ್ ಶೈಲಿಯ ಸಮ್ಮಿಶ್ರಣದಂತಿರುವ ನವಾಬರ ಕಾಲದ ಕಟ್ಟಡಗಳು ಅಂದಿನ ಅತ್ಯದ್ಭುತ ಕಲಾ ಕೌಶಲ್ಯಕ್ಕೆ ಸಾಕ್ಷಿಯಂತಿವೆ. ಸರ್ವ ಧರ್ಮ ಸಹಿಷ್ಣುತೆ, ಆಧುನಿಕ ವಿಚಾರಧಾರೆ ಹಾಗೂ ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವದಿಂದ ನವಾಬರು ಸರ್ವ ಮಾನ್ಯರಾಗಿದ್ದರೆನ್ನಲಾಗುತ್ತದೆ.
ನವಾಬರ ರಾಜ್ಯ ಚಿಕ್ಕದಾದರೂ ಮಾದರಿಯದಾಗಿತ್ತು. ಪ್ರಿಂಟಿಂಗ್ ಪ್ರೆಸ್, ಶಾಲೆಗಳು, ಆಸ್ಪತ್ರೆಗಳು, ಉತ್ತಮ ರಸ್ತೆಗಳು, ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶದ ಬಾವಿಗಳು ನವಾಬರ ಕಾಲದಲ್ಲಿ ಅಭಿವೃದ್ಧಿಯಾಗಿದ್ದವು. ಹಿಂದು ಮಠ-ದೇವಸ್ಥಾನಗಳಿಗೆ ಧಾರಾಳವಾಗಿ ದಾನ ಕೊಡುತ್ತಿದ್ದ ನವಾಬರ ಸಂಬಂಧ ದ್ವೈತ ಪರಂಪರೆಯ ವೈಷ್ಣವ ಮಠದ ಪೀಠಾಧಿಪತಿ ಸತ್ಯಭೋಧ ತೀರ್ಥರೊಂದಿಗೆ ಅನ್ಯೋನ್ಯವಾಗಿತ್ತಂತೆ. ನವಾಬರು ಸವಣೂರಲ್ಲಿ ವೀಳ್ಯದೆಲೆ ಕೃಷಿಗೆ ಪ್ರೋತ್ಸಾಹಿಸಿದರು. ಮರಾಠರು, ಹೈದರಾಬಾದ್ ನಿಜಾಮರು, ಹೈದರ್ ಅಲಿ-ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಸಾಮ್ರಾಜ್ಯ ಪ್ರಬಲವಾದಂತೆ ನವಾಬರು ಸವಣೂರು ಸಂಸ್ಥಾನದ ಮೇಲಿನ ಹಿಡಿತ ಕಳೆದುಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸವಣೂರನ್ನು ಭಾರತ ಒಕ್ಕೂಟಕ್ಕೆ ಸೇರಿಸಿ (1948) ಧಾರವಾಡದ ತಮ್ಮ ಬಂಗಲೆ ಸೇರಿಕೊಂಡ ನವಾಬರು ಆನಂತರ ಸವಣೂರಿನತ್ತ ತಲೆ ಹಾಕಲಿಲ್ಲ.
ಪೇಡಗಳು ಧಾರವಾಡಕ್ಕೆ ಹೇಗೆ ಸಮಾನಾರ್ಥಕ ಆಗಿವೆಯೋ ಹಾಗೆಯೇ ವೀಳ್ಯದೆಲೆ ಮತ್ತು ಖಾರಾಕ್ಕೆ ಸವಣೂರು ಅನ್ವರ್ಥವಾಗಿದೆ. ಪ್ರಾಚೀನ ಇತಿಹಾಸದ ಹಲವು ಶಾಸನಗಳಿರುವ ಸವಣೂರಲ್ಲಿ ಪಾಳುಬಿದ್ದ ಐದು ಬಾಗಿಲಿನ ಕೋಟೆಯಿದೆ. ನವಾಬರ ಸುಂದರ ಆಯತಾಕಾರದ ಬಂಗಲೆಯಲ್ಲಿ ಮೊದಲು ನ್ಯಾಯಾಲಯ ಕಾರ್ಯನಿರ್ವಹಿಸುತ್ತಿತ್ತು. ದರ್ಬಾರ್ ಹಾಲ್ ಇಂಡೋ ಸಾರಸೆನಿಕ್ ಶೈಲಿಯ ಚಿತ್ರಗಳಿಂದ ವಿಶೇಷವಾಗಿದೆ. ಸಮೀಪದ ಕಲ್ಮಠದ ವಿರಕ್ತ ಪರಂಪರೆಯ ಮಠದ ಆವಾರದಲ್ಲಿ 2-5 ಸಾವಿರ ವರ್ಷಗಳಷ್ಟು ಹಿಂದಿನದೆಂದು ಅಂದಾಜಿಸಲಾಗಿರುವ ಅತ್ಯದ್ಭುತ ತ್ರಿವಳಿ ಬವೋಬಾಬ್ (ದೊಡ್ಡ ಹುಣಸೆ) ಮರಗಳಿವೆ!
ಆಫ್ರಿಕಾ ಖಂಡ ಮೂಲದ ಈ ಬಾಟಲಿಯಾಕಾರದ ಮರಗಳು ಸವಣೂರು ಬಿಟ್ಟರೆ ಭಾರತದ ಮತ್ತೆಲ್ಲಿಯೂ ಇಲ್ಲ ಎನ್ನುವಷ್ಟು ವಿರಳ (ಲಾಲ್‌ಭಾಗ್‌ನಂತಹ ಬೊಟಾನಿಕಲ್ ತೋಟಗಳಲ್ಲಿ ಹೊರತುಪಡಿಸಿ). ಸಾಮಾನ್ಯವಾಗಿ ಈ ಬಾವೋಬಾಬ್ ಮರಗಳ ವ್ಯಾಸ ಸುಮಾರು 11 ಮೀಟರ್. ಆದರೆ ಸವಣೂರಿನ ಮರಗಳು 18, 16 ಮತ್ತು 14 ಮೀಟರ್ ದಪ್ಪ ಬೆಳೆದಿದೆ. ಈ ಮರಗಳ ಪೂಜೆಗೆ ಭಕ್ತಾದಿಗಳು, ನೋಡುವ ಆಕರ್ಷಣೆಗೆ ಪ್ರವಾಸಿಗರು ಎಲ್ಲೆಲ್ಲಿಂದಲೂ ಬರುತ್ತಾರೆ; ಮಾಧ್ವ ಬ್ರಾಹ್ಮಣರ ಉತ್ತರಾಧಿ ಮಠ, ಹಿಂದೂಗಳು ನಂಬುವ ಹಜರತ್ ಕಮಲ್ ಪಾಷಾ ದರ್ಗಾ, ಮಹಮ್ಮದ್ ರಫಿ ಪಾಷಾ ದರ್ಗಾ, ಹಮ್ದು ವಾರಿಸ್ ಮಿಯಾನ್ ದರ್ಗಾ ಸವಣೂರಲ್ಲಿವೆ. ಕವಿ-ಸಾಹಿತಿ ವಿ.ಕೃ.ಗೋಕಾಕ್ ಸವಣೂರಿನ ಪ್ರತಿಭೆ!

ಐತಿಹಾಸಿಕ ಮಹತ್ವದ ಶಿಗ್ಗಾವಿ ಚಾಲುಕ್ಯರ, ಕದಂಬರ, ಕಳಚೂರಿ ಬಿಜ್ಜಳನ ಆಳ್ವಿಕೆಗೆ ಒಳಪಟ್ಟಿತ್ತು. 12 ಕಿ.ಮೀ. ದೂರದ ಹುಲಗೂರಿನಲ್ಲಿ ಈ ರಾಜಮನೆತನಗಳ ಕಾಲದ ಹಲವು ಶಾಸನಗಳು ದೊರೆತಿವೆ. ಎಂಟು ಚದರಡಿ ಮೇಲ್ಛಾವಣಿಯಲ್ಲಿ ಕೆತ್ತಲಾಗಿರುವ ಶಿಗ್ಗಾವಿಯ ಎರಡು ಅಷ್ಟದಿಕ್ಪಾಲಕ ಶಿಲ್ಪ ಕಲಾಕೃತಿಗಳು ಅಮೂಲ್ಯವೆಂದೇ ಪರಿಗಣಿತವಾಗಿವೆ; ಮುಸಲ್ಮಾನರ ಯಾತ್ರಾಸ್ಥಳವಾದ ಸಂತ ಹಜರತ್ ಷಾ ಸಮಾಧಿ ಇಲ್ಲಿದೆ. ಸಿದ್ಧಲಿಂಗ ದೇವಾಲಯವಿರುವ ಹುಲುಗೂರಿನಲ್ಲಿ ಸುಮಾರು 970ರ 15 ಶಾಸನಗಳು ಸಿಕ್ಕಿವೆ. 14 ಕಿ.ಮೀ. ದೂರದಲ್ಲಿರುವ-ಈಗ ಪಟ್ಟಣ ಪಂಚಾಯತ್ ಪ್ರದೇಶವಾಗಿರುವ-ಬಂಕಾಪುರ ಹೊಯ್ಸಳ ರಾಜ ವಿಷ್ಣುವರ್ಧನನ 2ನೇ ರಾಜಧಾನಿಯಾಗಿತ್ತು; ಹೆಸರಾಂತ ಮಾಂಡಲೀಕರು ಆಳಿದ ಬಂಕಾಪುರ ಚಳ್ಳಕೇತರ ಪ್ರಬಲ ನೆಲೆಯಾಗಿತ್ತು. ಪ್ರಾಚೀನ ಪ್ರಸಿದ್ಧಿಯ ನಗರೇಶ್ವರ ದೇವಾಲಯವಿರುವ ಬಂಕಾಪುರ ಸುತ್ತಲಿನ ಹಳ್ಳಿಗಳ ವ್ಯಾಪಾರಿ ಕೇಂದ್ರವಾಗಿತ್ತು. ರಾಷ್ಟ್ರಕೂಟರ ಕಾಲದಿಂದ ಸವಣೂರು ನವಾಬರ ದರ್ಬಾರಿನ ತನಕದ ಸುಮಾರು 16 ಶಾಸನಗಳು ಬಂಕಾಪುರದಲ್ಲಿವೆ.
ಶಿಗ್ಗಾವಿಯ ಶಿಶುವಿನಾಳದಲ್ಲಿ ಕನ್ನಡದ ಮೊದಲ ಮಹಮ್ಮದೀಯ ಕವಿ-ಸರ್ವ ಜನಾಂಗಕ್ಕೆ ಶಾಂತಿ ಬಯಸಿದ ಸಂತ ಶಿಶುನಾಳ ಷರೀಫರ ಸನ್ನಿಧಿಯಿದೆ; ಬಾಡದಲ್ಲಿ ಮತ್ತೊಬ್ಬ ಮಹಾ ಮಾನವತಾವಾದಿ ಕನಕದಾಸರ ಹುಟ್ಟು-ಬಾಲ್ಯದ ಮನೆ-ಕನಕ ಅರಮನೆಯಿದೆ. ಈ ಪುಟ್ಟ ಅರಮನೆ ವಿಜಯನಗರ ಸಾಮ್ರಾಜ್ಯದ ಕಲಾಶೈಲಿಯಲ್ಲಿದೆ. ಗೋಡೆಯ ಮೇಲೆ ಕನಕದಾಸರ ಜೀವನವೃತ್ತಾಂತದ ವರ್ಣಚಿತ್ರಗಳನ್ನು ಹಾಕಲಾಗಿದ್ದು ಪ್ರೇಕ್ಷಣೀಯವಾಗಿದೆ. ಆದಿ ಕವಿ ಪಂಪನ ಗುರು ದೇವೇಂದ್ರಮುನಿ ಮತ್ತು ಕವಿ ರನ್ನನ ಗುರು ಅಜಿತ ಸೇನಾಚಾರ್ಯ ಬಂಕಾಪುರದವರು. ಕರ್ನಾಟಕದ ಏಕೈಕ ನವಿಲು ಅಭಯಾರಣ್ಯ ಬಂಕಾಪುರದ 139 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಬನ್ನಿಕೊಪ್ಪದಲ್ಲಿ ಪಂಚಪಾಂಡವರ ದೇವಸ್ಥಾನ, ತಡಸದಲ್ಲಿ ಗಾಯತ್ರಿ ತಪೋವನವಿದೆ. ಬಂಕಾಪುರ ಅಪರೂಪದ ಖಿಲಾರಿ ತಳಿ ಹಸು-ಹೋರಿಗೆ ಹೆಸರುವಾಸಿಯಾದರೆ, ಶಿಗ್ಗಾವಿಯಲ್ಲಿ ಪ್ರವಾಸಿಗಳನ್ನು ಸೆಳೆಯುವ ಕೃಷಿ ಮತ್ತು ಮನರಂಜನೆಯ ಸಮ್ಮಿಲನ ಅಗಡಿ ತೋಟವಿದೆ.
ಪಶ್ಚಿಮಘಟ್ಟದ ಸೆರಗಲ್ಲಿರುವ ಶಿಗ್ಗಾವಿ ಹಾಗು ಸವಣೂರು ತಾಲೂಕುಗಳು ಪ್ರಾಕೃತಿಕವಾಗಿ ಅರೆಮಲೆನಾಡಾದರೂ ಸಂಸ್ಕೃತಿ ಮಾತ್ರ ಬೆಳವಲದ್ದು. ದೇಶಿ ಸೊಗಡಿನ ಸಂಪ್ರದಾಯದ ಎರಡೂ ತಾಲೂಕುಗಳಲ್ಲಿ ಸಂವಹನ ನಡೆಯುವುದು ಬಯಲು ಸೀಮೆಯ ಮಣ್ಣಿನ ಸೊಗಡಿನ ವಿಶಿಷ್ಟ ಲಯದ ಕನ್ನಡದಲ್ಲಿ; ಉರ್ದು, ಮರಾಠಿ, ಲಂಬಾಣಿ ಭಾಷೆಗಳೂ ಇವೆ. ಜಾತ್ರೆ, ಉರೂಸ್‌ನಂಥ ಜನಪದ ಆಚರಣೆಗಳನ್ನು ಸಕಲ ಧರ್ಮದವರೂ ಸೇರಿ ಸಂಭ್ರಮಿಸುತ್ತಾರೆ. ಇತಿಹಾಸದ ಸಂದರ್ಭದಿಂದಲೂ ಸವಣೂರು-ಶಿಗ್ಗಾವಿ ಧರ್ಮನಿರಪೇಕ್ಷತೆಗೆ ಮಾದರಿಯಾಗಿದೆ. 1990ರ ದಶಕದಲ್ಲಿ ಮುಸಲ್ಮಾನರು ಜಾಸ್ತಿಯಿರುವ ಸವಣೂರಲ್ಲಿ ಆಗಾಗ ಸಣ್ಣಪುಟ್ಟ ಮತಾಂಧ ಸಂಘರ್ಷಗಳಾಗುತ್ತಿದ್ದವು; 2000ದ ದಶಕದಲ್ಲಿ ಕುಡಿಯುವ ನೀರಿಗಾಗಿ ಹಿಂದು-ಮುಸ್ಲಿಮರು ಒಂದಾಗಿ ಹೋರಾಡಿದ್ದರು; ಆಗಿನಿಂದ ಮತ್ತೆ ಸಾಮರಸ್ಯ ಕುದುರಿದೆ; ಕೇಸರಿ ಪಕ್ಷದ ಧರ್ಮಕಾರಣದ ಹಿಕಮತ್ತುಗಳು ಇಲ್ಲಿ ಕೆಲಸಕ್ಕೆ ಬರದಂತಾಗಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಡುತ್ತಾರೆ.
ದೇಶದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಮತ್ತು ಹಳ್ಳಿ ಸಂಸ್ಕೃತಿಯ ಸಮಗ್ರ ಜೀವನ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ನಿರೂಪಿಸುವ ಉತ್ಸವ್ ರಾಕ್ ಗಾರ್ಡ್‌ನ್ ಶಿಗ್ಗಾವಿಯ ಗೋಟಗೋಡಿಯಲ್ಲಿದೆ. ಈ ಸಾವಿರಾರು ದೇಶಿ ಪ್ರತಿಮೆಗಳು, ಸರೋವರ, ಉದ್ಯಾನಗಳ ಪ್ರಾಕೃತಿ ಸೊಬಗಿನ ರಾಕ್ ಗಾರ್ಡನ್ ಶಿಲ್ಪಿ ಸುಪ್ರಸಿದ್ಧ ಕಲಾವಿದ ಡಾ.ಟಿ.ಬಿ.ಸೋಲಬಕ್ಕನವರ್. ಶಿಗ್ಗಾವಿ-ಸವಣೂರು ಸುಪ್ರಸಿದ್ಧ ದೊಡ್ಡಾಟ ಕಲೆಯ ಕೇಂದ್ರ; ಇಲ್ಲಿ ರಾಷ್ಟ್ರ-ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ವಿಜೇತ ಹಲವು ಕಲಾವಿದರಿದ್ದಾರೆ. ಇಲ್ಲಿ ತಯಾರಾಗುವ ವಿವಿಧ ಕಲಾಪ್ರಕಾರಗಳಿಗೆ ಸಂಬಂಧಿಸಿದ ವೇಷ-ಭೂಷಣಗಳು ದೇಶವಿದೇಶದಲ್ಲಿ ಪ್ರಸಿದ್ಧವಾಗಿವೆ. ಡೊಳ್ಳು ಕುಣಿತ, ದೊಡ್ಡ ಕುಣಿತ, ವೀರಗಾಸೆ, ಝಾಂಝ್, ಹೋರಿ ಬೆದರಿಸುವ ಸ್ಪರ್ಧೆ, ಜಾನುವಾರು ಸಂತೆ, ಹೊರರಾಜ್ಯದವರೂ ಸೇರುವ ಜಾತ್ರೆ-ಉರುಸ್‌ಗಳಂಥ ಜನಪದ ಕಲೆ-ಕ್ರೀಡೆಯ ಶಿಗ್ಗಾವಿ-ಸವಣೂರಿನ ದರ್ಗಾಗಳಿಗೆ ಹಿಂದೂಗಳೂ ನಡೆದುಕೊಳ್ಳುತ್ತಾರೆ; ಮುಸ್ಲಿಮರು ಜಾತ್ರೆಗಳಲ್ಲಿ ಹರಕೆ ಒಪ್ಪಿಸುತ್ತಾರೆ. ಶಿಗ್ಗಾವಿಯ ಹುಲಗೂರಿನ ಖಾದರ್‌ಲಿ ದರ್ಗಾ ಮತ್ತು ಸವಣೂರಿನ ದರ್ಗಾಗಳನ್ನು ನಂಬುವ ದೊಡ್ಡ ಹಿಂದೂ ಶ್ರದ್ಧಾಳು ವರ್ಗವೇ ಇದೆ.
ಕೃಷಿ ಆಧಾರಿತ ಆರ್ಥಿಕತೆ
ಶಿಗ್ಗಾವಿ ಮತ್ತು ಸವಣೂರಲ್ಲಿ ಕೃಷಿ ಕಸುಬೇ ಜೀವನಾಧಾರ; ಮಣ್ಣಿನ ಮಕ್ಕಳು ಬೆವರು ಸುರಿಸಿ ಉತ್ತುಬಿತ್ತಿ ಬೆಳೆ ತೆಗೆದರಷ್ಟೇ ಎರಡೂ ತಾಲೂಕುಗಳಿಗೆ ಆರ್ಥಿಕ ಚೈತನ್ಯ! ದುಡಿವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆ-ಉದ್ಯಮವಿಲ್ಲದ ಶಿಗ್ಗಾವಿ-ಸವಣೂರಲ್ಲಿ ಪ್ರಕೃತಿ ವಿಕೋಪದಿಂದ ಕೃಷಿ ಕುಂಠಿತವಾಯ್ತೆಂದರೆ ಬದುಕಿಗೆ ಗರಬಡಿಯುತ್ತದೆ! ಒಂದು ಪಕ್ಷ ಪ್ರಕೃತಿ ಸಹಕರಿಸಿದರೂ, ದಲ್ಲಾಳಿಗಳು ರೈತರ ಅಸಹಾಯಕತೆಯನ್ನು ಬಳಸಿಕೊಂಡು ವ್ಯವಸಾಯ ಉತ್ಪನ್ನ ಅಗ್ಗಕ್ಕೆ ಕಬಳಿಸಿ ಶೋಷಿಸುತ್ತಾರೆ. ಒಟ್ಟಿನಲ್ಲಿ ಎರಡೂ ತಾಲೂಕಿನದು ಅನಿಶ್ಚಿತ-ಅಸ್ಥಿರ ಆರ್ಥಿಕತೆ. ವರದಾ ನದಿ ಮತ್ತು ಬೆಣ್ಣೆಹಳ್ಳ ಈ ಭಾಗದ ಜೀವಸೆಲೆಗಳು. ಈ ನದಿ-ಹಳ್ಳ ನೀರಿಲ್ಲದೆ ಬಸವಳಿದಾಗ ಒಣ ಬೇಸಯವೇ ಗತಿ! ಸೋಯಾಬೀನ್, ಶೇಂಗಾ, ಗೋವಿನ ಜೋಳ, ಹತ್ತಿ, ವೀಳ್ಯದೆಲೆ ಇಲ್ಲಿಯ ರೈತರ ಪ್ರಮುಖ ಆರ್ಥಿಕ ಬೆಳೆಗಳು. ಕಾಳು-ಕಡಿ ಕೃಷಿಯೂ ಇದೆ.
ಮಲೆನಾಡಿನ ಅಂಚಿನಲ್ಲಿ ಕಬ್ಬು, ಭತ್ತ ಕೃಷಿಯಿಂದಲೂ ಒಂದಿಷ್ಟು ಕುಟುಂಬಗಳು ಬದುಕುಕಟ್ಟಿಕೊಂಡಿವೆ. ಲಂಬಾಣಿ ತಾಂಡಾಗಳಲ್ಲಿ ಹೂವಿನ ವ್ಯವಸಾಯ ಉಪ-ಕಸುಬಾಗಿದೆ. ವೀಳ್ಯದೆಲೆ ತೋಟಗಾರಿಕೆ-ಮಾರಾಟ ಸವಣೂರಿನ ವಾಣಿಜ್ಯ ವಹಿವಾಟಿನ ಲವಲವಿಕೆಯ ಮೂಲ. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಗಡುಸಾದ ಅಂಬಾಡೆ ಎಲೆ ಮತ್ತು ಮೃದುವಾದ ಕರಿ ಎಲೆ ಎಂಬೆರಡು ನಮೂನೆಯ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಒಂದು ತಿಂಗಳ ತನಕ ಕೆಡದೆ ತಾಜಾ ಇರುವ ಈ ವೀಳ್ಯದೆಲೆಗೆ ರಾಜ್ಯಾದ್ಯಂತ ಅಷ್ಟೇ ಅಲ್ಲ, ಹೊರರಾಜ್ಯ ಹಾಗು ಕರಾಚಿ, ಅಫ್ಘಾನಿಸ್ತಾನ ಮುಂತಾದ ವಿದೇಶಗಳಲ್ಲಿಯೂ ಬೇಡಿಕೆಯಿದೆ. ಸವಣೂರಿಂದ ರಫ್ತಾಗುತ್ತಿರುವ ಲಕ್ಷಾಂತರ ರೂ. ವೀಳ್ಯದೆಲೆ ವಹಿವಾಟು ಹಲವು ಹಿಂದು-ಮುಸ್ಲಿಂ ಕುಟುಂಬಗಳ ತುತ್ತಿಗಾಧಾರವಾಗಿದೆ. ಸವಣೂರು ಖಾರಾ ತಯಾರಿಕೆ-ಮಾರಾಟಕ್ಕೆ ಹೆಸರುವಾಸಿಯಾಗಿದೆ.

ಶಿಗ್ಗಾವಿ ಮತ್ತು ಸವಣೂರ ಎರಡೂ ಪಟ್ಟಣಗಳು ವಾಣಿಜ್ಯಿಕ ಬೆಳವಣಿಗೆ ಕಂಡಿಲ್ಲ; ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವುದರಿಂದ ಶಿಗ್ಗಾವಿ ಮಾರುಕಟ್ಟೆ ಸವಣೂರಿಗಿಂತ ಕೊಂಚ ಸುಧಾರಿಸಿದೆ. ಕ್ಷೇತ್ರದಲ್ಲಿ ಮೂರ್‍ನಾಲ್ಕು ಏತ ನೀರಾವರಿ ಯೊಜನೆಗಳಿವೆ; ಶೇ.35ರಷ್ಟು ನೀರಾವರಿಯಾಗಿದೆ. ಕೆರೆ ಮರುಪೂರಣ ಮಾಡಲಾಗಿದೆ. ಆದರೆ ಹಳ್ಳ-ನದಿ ಪಾತ್ರದಲ್ಲಿ ನೀರಿರುವವರೆಗಷ್ಟೆ ಇದರ ಪ್ರಯೋಜನ. ಕೆರೆ ತುಂಬಿಸುವ ಯೋಜನೆ ಸಮರ್ಪಕವಾಗಿಲ್ಲ. ವರದೆಗೊಂದು ಅಣೆಕಟ್ಟು ಕಟ್ಟಿ ಹನಿ ನೀರಾವರಿ ಶಾಶ್ವತಗೊಳಿಸುವಂತೆ ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಐದು ವರ್ಷ ಜಲಸಂಪನ್ಮೂಲ ಮಂತ್ರಿಯಾಗಿದ್ದ ಬಸು ಬೊಮ್ಮಾಯಿ ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಯೋಚಿಸಲಿಲ್ಲ ಎಂಬ ಬೇಸರ ಕ್ಷೇತ್ರದಲ್ಲಿದೆ. ರೈತರ ಬಹು ದಿನದ ಬೇಡಿಕೆಯಾದ ಒಂದು ಕೋಟಿ ರೂ. ಅಂದಾಜು ವೆಚ್ಚದ ಕಳಸೂರು ಏತ ನೀರಾವರಿ ಕಾಮಗಾರಿಗೆ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ಕೊಟ್ಟಿದ್ದಾರೆಂಬ ಮಾತು ಕೇಳಿಬರುತ್ತದೆ.
ಬೇಸಿಗೆಯಲ್ಲಿ ಬತ್ತುವ ಬೇಡ್ತಿ ನದಿಯನ್ನು ವರದೆಗೆ ಜೋಡಿಸುವ ಕಲ್ಪನೆಯನ್ನು ಅಮಾಯಕ ರೈತಾಪಿ ವರ್ಗದಲ್ಲಿ ಬಿತ್ತಿ ನಾಯಕರೆನಿಸಿಕೊಂಡವರು ನೀರಿನ ರಾಜಕೀಯ ಮಾಡುತ್ತಿದ್ದಾರೆ ಎನ್ನಲಾಗಿದೆ.ಅವಲಕ್ಕಿ-ಮಂಡಕ್ಕಿ ಭಟ್ಟಿಗಳು, ಮಕ್ಕೆ ಜೋಳ ಸಂಸ್ಕರಣಾ ಘಟಕ, ಗಾರ್ಮೆಂಟ್ಸ್ ಘಟಕ, ಐದಾರು ನೂರು ಉದ್ಯೋಗಾವಕಾಶದ ಸಣ್ಣ ಪ್ರಮಾಣದ ಚಾಕಲೇಟು ಫ್ಯಾಕ್ಟರಿಗಳೇ ಶಿಗ್ಗಾವಿ-ಸವಣೂರಿನ ’ಬೃಹತ್’ ಕೈಗಾರಿಕೆಗಳು. ಕೇರಳ, ಉಡುಪಿ, ದಕ್ಷಿಣ ಕನ್ನಡ, ಗೋವಾಕ್ಕೆ ಕೂಲಿ-ನಾಲಿಗೆ ಬಡವರು ಗುಳೆಹೋಗುತ್ತಿದ್ದರೆ, ಕಲಿತ ಯುವ ಜನಾಂಗ ಹುಬ್ಬಳ್ಳಿ, ಬೆಂಗಳೂರು, ಪುಣೆ, ಮುಂಬೈನತ್ತ ಸಾಗುತ್ತಿದೆ; ವಲಸೆ-ಗುಳೆ ತಡೆಗೆ ಉದ್ಯೋಗ ಸೃಷ್ಟಿಸುವಂಥ ಯೋಜನೆ ಮತ್ತು ದೊಡ್ಡ ಕೈಗಾರಿಕೆ ತರಲು ಸಿಎಂ ಬಸು ಪ್ರಯತ್ನಿಸಲಿ ಎಂದು ಜನರು ಹೇಳುತ್ತಿದ್ದಾರೆ. ಓಟ್ ಬ್ಯಾಂಕ್ ದೂ(ದು)ರಾಲೋಚನೆಯಿಂದ ಕ್ಷೇತ್ರದಲ್ಲಿ 2-3 ಗಾರ್ಮೆಂಟ್ಸ್ ಮತ್ತು ಸಚಿವ ಹೆಬ್ಬಾರ್ ಮಗನ ಮಾಲಿಕತ್ವದ ಒಂದು ಸಕ್ಕರೆ ಕಾರ್ಖಾನೆ ಉದ್ಘಾಟನೆ, ಜವಳಿ ಪಾರ್ಕ್‌ಗೆ ಭೂಮಿಪೂಜೆಯನ್ನು ಸಿಎಂ ಸಾಹೇಬರು ನೆರವೇರಿಸಿದ್ದಾರೆಂಬ ಚರ್ಚೆಗಳು ಕ್ಷೇತ್ರದಲ್ಲಿ ನಡೆದಿವೆ.
ಅಖಾಡದ ಆಕಾರ
ಶಿಗ್ಗಾವಿ-ಸವಣೂರು “ಸಿಎಂಗಳ ಕ್ಷೇತ್ರ” ಎಂತಲೆ ಚಿರಪರಿಚಿತ; ವಲಸಿಗರನ್ನು ಮುಖ್ಯಮಂತ್ರಿ ಪೀಠದಲ್ಲಿ ಕೂರಿಸಿದ ಪ್ರತಿಷ್ಠೆಯ ಕ್ಷೇತ್ರವಿದು. ದುರಂತವೆಂದರೆ ಕ್ಷೇತ್ರದ ದೆಸೆ ಮಾತ್ರ ಬದಲಾಗಿಲ್ಲ. ಚಿತ್ರದುರ್ಗದ ಎಸ್.ನಿಜಲಿಂಗಪ್ಪ ಮತ್ತು ಕುಂದಗೋಳದ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಶಿಗ್ಗಾವಿ-ಸವಣೂರಿಗೆ ಬಂದು ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ. ಶಿಗ್ಗಾವಿ ತಾಲೂಕಿನೊಂದಿಗೆ ಸವಣೂರಿನ ಹತ್ತು ಹಳ್ಳಿಗಳ ಒಂದು ಹೋಬಳಿ ಸೇರಿಸಿ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರ ರಚಿಸಲಾಗಿದೆ. ಶಿಗ್ಗಾವಿಯಲ್ಲಿ ಪ್ರಬಲ ಪಂಚಮಸಾಲಿ ಲಿಂಗಾಯತರ ಏಕಸ್ವಾಮ್ಯವಾದರೆ, ಸವಣೂರು ಹೋಬಳಿಯಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಮತ್ತು ಮುಸ್ಲಿಮರನ್ನು ಬಿಟ್ಟರೆ ಇಲ್ಲಿಂದ ಬೇರ್‍ಯಾವ ಸಮುದಾಯದವರೂ ಶಾಸಕರಾಗಿಲ್ಲ. ಜನತಾ ಪರಿವಾರದ ವರ್ಚಸ್ವಿ ನಾಯಕರಾಗಿದ್ದ ’ರಾಯಿಸ್ಟ್’ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಕೇಸರಿ ಬಿಜೆಪಿ ಸೇರಿ 2008ರಲ್ಲಿ ಶಿಗ್ಗಾವಿ ಶಾಸಕರಾದ ತರುವಾಯ ಕ್ಷೇತ್ರದ ರಾಜಕೀಯ ಸೂತ್ರ-ಸಮೀಕರಣ ಬದಲಾಗಿದೆ.
ಲಿಂಗಾಯತ ’ಪ್ರಜ್ಞೆ’ಯನ್ನು ಉದ್ದೀಪನಗೊಳಿಸಲಾಗಿದೆ. ಕಳೆದ ಮೂರು ಚುನಾವಣೆಗಳಲ್ಲಿ ಕೇಸರಿ ಪಡೆಯ ಬೊಮ್ಮಾಯಿಯವರಿಗೆ ನಿಕಟ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಕ್ಯಾಂಡಿಡೇಟ್ ಮುಸ್ಲಿಮ್ ಸಮುದಾಯದವರಾಗಿದ್ದು ವಿಭಜಕ ರಾಜಕಾರಣದ ಹಿಕಮತ್ತಿಗೆ ಅದನ್ನು ಅನುಕೂಲಕರವಾಗಿ ಬಳಸಿಕೊಳ್ಳಲಾಗಿದೆ ಎಂಬ ವ್ಯಾಖ್ಯಾನಗಳು ಕ್ಷೇತ್ರದಲ್ಲಿ ಕೇಳಿಬರುತ್ತವೆ. ಸತತ ಮೂರು ಬಾರಿ ಶಾಸಕರಾಗಿರುವ ಬಸು ಬೊಮ್ಮಾಯಿ ಕಳೆದ ಒಂದೂವರೆ ವರ್ಷದಿಂದ ಮುಖ್ಯಮಂತ್ರಿ ಗದ್ದುಗೆಯಲ್ಲಿ ಇರುವುದರಿಂದ ಶಿಗ್ಗಾವಿ-ಸವಣೂರು ಕ್ಷೇತ್ರದ ಪ್ರತಿಷ್ಠೆಗೆ ಹೈವೋಲ್ಟೇಜ್ ಖದರು ಬಂದುಬಿಟ್ಟಿದೆ! ಒಟ್ಟೂ 2,21,994 ಮತದಾರರಿರುವ ಕ್ಷೇತ್ರದಲ್ಲಿ ಒಂದು ಅಂದಾಜಿನಂತೆ 65 ಸಾವಿರ ಲಿಂಗಾಯತ, 52 ಸಾವಿರ ಮುಸ್ಲಿಮ್, 32 ಸಾವಿರ ಕುರುಬ, 25 ಸಾವಿರ ಎಸ್‌ಟಿ-ಎಸ್‌ಟಿ, 22 ಸಾವಿರ ಲಂಬಾಣಿ ಮತ್ತು 20 ಸಾವಿರದಷ್ಟು ಸಣ್ಣಪುಟ್ಟ ಸಂಖ್ಯೆಯ ಜಾತಿಯ ಓಟುದಾರರಿದ್ದಾರೆ.
ಚುನಾವಣಾ ಚಿತ್ರಗಳು
1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ಸಿ.ಪಾಟೀಲ್ (16,412) ಪಕ್ಷೇತರ ಎದುರಾಳಿ ಜಿ.ಸಿ.ಪಾಟೀಲರನ್ನು (9,884) ಸೋಲಿಸಿ ಶಾಸನಸಭೆಗೆ ಪ್ರವೇಶಪಡೆದರು. 1962ರಲ್ಲಿ ಕಾಂಗ್ರೆಸ್ ಪಾರ್ಟಿಯ ಎಫ್.ಎಸ್.ತಾವರೆ (20,838) ಪಿಎಸ್‌ಪಿಯ ಎಫ್.ಟಿ.ಪಾಟೀಲ್‌ರನ್ನು (6,606) ಸುಲಭವಾಗಿ ಸೋಲಿಸಿ ಶಾಸಕನಾದರು. 1967ರಲ್ಲಿ ಚಿತ್ರದುರ್ಗ ಜಿಲ್ಲೆಯವರಾದ ಅಂದಿನ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. 1962ರಲ್ಲಿ ತವರು ಕ್ಷೇತ್ರ ಹೊಸದುರ್ಗದಲ್ಲಿ ನಿಜಲಿಂಗಪ್ಪ ಸೋತಿದ್ದರು. ಅಂದಿನ ಸಿರಿಗೆರೆ ಮಠದ ಸ್ವಾಮಿ ಮತ್ತು ನಿಜಲಿಂಗಪ್ಪರ ನಡುವಿನ ವೈಷಮ್ಯ ರಾಜಕೀಯ ಜಿದ್ದಾಜಿದ್ದಿಯಾಗಿ ಮಾರ್‍ಪಟ್ಟಿತ್ತು. ಹಠಕ್ಕೆ ಬಿದ್ದ ಸ್ವಾಮಿ ನಿಜಲಿಂಗಪ್ಪ ಸೋಲುವಂತೆ ನೋಡಿಕೊಂಡರೆಂದು ಹಳೆ ತಲೆಮಾರಿ ರಾಜಕಾರಣ ಬಲ್ಲವರು ಹೇಳುತ್ತಾರೆ. ನಿಜಲಿಂಗಪ್ಪ ಬಾಗಲಕೋಟೆಯ ಶಾಸಕನಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಶಾಸಕನಾಗುವ ಪರಿಸ್ಥಿತಿ ಬಂದಿತ್ತು. ನಿಜಲಿಂಗಪ್ಪ 1967ರಲ್ಲಿ ಶಿಗ್ಗಾವಿಗೆ ವಲಸೆ ಬಂದರು. ತಮ್ಮೆಲ್ಲ ರಾಜ್ಯ-ರಾಷ್ಟ್ರಮಟ್ಟದ ಪ್ರಭಾವ ಬಳಸಿ ಅವಿರೋಧವಾಗಿ ಶಾಸಕನಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಂಡರು.

ನಿಜಲಿಂಗಪ್ಪರ ಬಳಿಕ ಕಾಂಗ್ರೆಸ್‌ನ ಎಂ.ಎಂ.ನದಾಫ್ ಸತತ ಮೂರು ಬಾರಿ ಶಾಸಕನಾಗಿದ್ದರು. 1972ರಲ್ಲಿ ನದಾಫ್ (19,799) ಪಕ್ಷಾತೀತವಾಗಿ ಸ್ಪರ್ಧಿಸಿದ್ದ ಬಿ.ಎಚ್.ಪಾಟೀಲ್‌ರನ್ನು (16,270) ಮಣಿಸಿದರು; 1978ರಲ್ಲಿ ನದಾಫ್ 11,173 ಮತದಂತರದಿಂದ ಜನತಾ ಪಕ್ಷದ ಹುರಿಯಾಳಾಗಿದ್ದ ಎಸ್.ಜಿ.ಪಾಟಿಲ್‌ರ (22,496) ವಿರುದ್ಧ ಗೆಲುವು ಸಾಧಿಸಿದರು. 1983ರ ಚುನಾವಣೆ ವೇಳೆ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬೀಸಿದ್ದ ಕಾಂಗ್ರೆಸ್ ವಿರೋಧಿ ಬಿರುಗಾಳಿಯಲ್ಲಿ ತತ್ತರಿಸಿದ ನದಾಫ್ (26,801) ಸಣ್ಣ ಅಂತರದಲ್ಲಿ ಬಚಾವಾಗಿದ್ದರು; ಪ್ರಬಲ ಹೋರಾಟ ಕೊಟ್ಟಿದ್ದ ಜನತಾ ಪಕ್ಷದ ಅಭ್ಯರ್ಥಿ ಎಚ್.ಆರ್.ಪಾಟೀಲ್ ಕೇವಲ 2,551 ಮತದಿಂದ ಸೋತಿದ್ದರು. 1985ರ ನಡುಗಾಲ ಚುನಾವಣೆ ಸಂರ್ಭದಲ್ಲಿ ಶಾಸಕ ನದಾಫ್ ಎಂಟಿ ಇನ್‌ಕಂಬೆನ್ಸ್‌ಯಿಂದ ಹೈರಾಣಾಗಿದ್ದರು. 35,075 ಮತ ಪಡೆದ ಪಕ್ಷೇತರ ಹುರಿಯಾಳು ಎನ್.ವಿ.ಪಾಟೀಲ್ ಕಾಂಗ್ರೆಸ್‌ನ ನದಾಫ್‌ರನ್ನು 14,339 ಮತದಿಂದ ಮಣಿಸಿ ಶಾಸಕನಾದರು.
1989ರಲ್ಲಿ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರು ಕಾಂಗ್ರೆಸ್ ಪರ ವಾಲಿದ್ದರು. ಲಿಂಗಾಯತರ ಪ್ರಭಾವಿ ಮುಖಂಡ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿದ್ದು ಮತ್ತು ಕಾಂಗ್ರೆಸ್ ಕ್ಯಾಂಡಿಡೇಟ್ ಲಿಂಗಾಯತರ ಪಂಚಮಸಾಲಿ ಪಂಗಡಕ್ಕೆ ಸೇರಿದ್ದು ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಜನತಾದಳ ಮುಸ್ಲಿಮ್ ಸಮುದಾಯದ ಎಸ್.ಎಸ್.ಖಾದ್ರಿಯವರಿಗೆ ಟಿಕೆಟ್ ಕೊಟ್ಟಿತ್ತು. 40,549 ಮತ ಪಡೆದ ಕಾಂಗ್ರೆಸ್‌ನ ಮುಂಜುನಾಥ ಕುನ್ನೂರ್ 4,514 ಮತದಿಂದ ಗೆಲುವು ಸಾಧಿಸಿದರು. 1994ರಲ್ಲಿ ಕಾಂಗ್ರೆಸ್‌ನ ಮಂಜುನಾಥ ಕುನ್ನೂರ್ ಮತ್ತೆ ಆಯ್ಕೆಯಾದರು. 23,552 ಮತ ಗಳಿಸಿದ ಕುನ್ನೂರ್‌ಗೆ ಪೈಪೋಟಿ ಕೊಟ್ಟಿದ್ದು ಪಕ್ಷೇತರ ಹುರಿಯಾಳು ಅಬ್ದುಲ್ ಘನಿ ಕೊಯಿತೆವಾಲೆ (17,778).
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬ್ಯಾಡಗಿ: ಒಣ ಮೆಣಸಿನಕಾಯಿ ಸೀಮೆಯ ಕೈ-ಕಮಲ ಪಾಳೆಯಗಳಲ್ಲಿ ಬಣ…
1999ರ ಚುನಾವಣೆಯ ಹೊತ್ತಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿತ್ತು; ಎಸ್.ಎಂ.ಕೃಷ್ಣ ಸರಕಾರವೂ ಅಧಿಕಾರಕ್ಕೆ ಬಂತು. ಆದರೆ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುನ್ನೂರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು! ಹತ್ತು ವರ್ಷ ಎಮ್ಮೆಲ್ಲೆಯಾಗಿದ್ದ ಕುನ್ನೂರ್ ಕಾರ್ಯವೈಖರಿಯಿಂದ ಶಿಗ್ಗಾವಿ-ಸವಣೂರು ಮಂದಿ ರೋಸತ್ತುಹೋಗಿದ್ದರೆನ್ನಲಾಗಿದೆ. ಜೆಡಿಎಸ್‌ನ ಸಯ್ಯದ್ ಅಜಿಂಪೀರ್ ಖಾದ್ರಿ (28,725) ಬಿಜೆಪಿಯ ಎಸ್.ಬಿ.ಪಾಟೀಲ್ (27,084) ಮತ್ತು ಕಾಂಗ್ರೆಸ್‌ನ ಕುನ್ನೂರ್ (26,497) ಮಧ್ಯೆ ತ್ರಿಕೋನ ಕಾಳಗ ನಡೆಯಿತು. ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಬಿ.ಪಾಟೀಲರಿಗಿಂತ 1,641 ಮತ ಹೆಚ್ಚುಪಡೆದ ಜೆಡಿಎಸ್‌ನ ಅಜಿಂಪೀರ್ ಖಾದ್ರಿ ಎಮ್ಮೆಲ್ಲೆಯಾದರು. 2004ರಲ್ಲಿ ಅಜಿಂಪೀರ್ ಖಾದ್ರಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕ್ಯಾಂಡಿಡೇಟಾದರು. ಪಕ್ಷೇತರ ಅಭ್ಯರ್ಥಿ ರಾಜಶೇಖರ ಸಿಂಧೂರ್ (41,811) ಖಾದ್ರಿಯವರನ್ನು (40,971), 840 ಮತಗಳಿಂದ ಸೋಲಿಸಿ ಅಚ್ಚರಿಮೂಡಿಸಿದರು.
ಬಸು ಪ್ರತ್ಯಕ್ಷ!
ಜನತಾ ಪರಿವಾರದ ನಾಯಕಾಗ್ರೇಸರಲ್ಲಿ ಎದ್ದುಕಾಣುತ್ತಿದ್ದ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಪ್ರಭಾವಳಿಯಲ್ಲಿ ಬೆಳೆದು, ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಎಮ್ಮೆಲ್ಸಿ, ಸಿಎಂರ ಸಂಸದೀಯ ಕಾರ್ಯದರ್ಶಿಯಂಥ ನಿರಾಯಾಸದ ಅಧಿಕಾರ ರಾಜಕಾರಣ ಮಾಡಿಕೊಂಡಿದ್ದ ಕುಂದಗೋಳದ ಕಮಡೊಳ್ಳಿ ಮೂಲದ ಬಸವರಾಜ ಬೊಮ್ಮಾಯಿ 2008ರ ಚುನಾವಣೆ ಹೊತ್ತಿಗೆ ಕಮಲ ಹಿಡಿದುಕೊಂಡು ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಪ್ರತ್ಯಕ್ಷರಾದರು!! ಜಾತಿ ಲಾಬಿ ಮೂಲಕ ಯಡಿಯೂರಪ್ಪರ ಸಖ್ಯ ಕುದುರಿಸಿಕೊಂಡಿದ್ದರೆನ್ನಲಾದ ಬಸುರವರಿಗೆ ಬಿಜೆಪಿ ಟಿಕೆಟ್ ದಕ್ಕುವುದಕ್ಕೇನೂ ತೊಂದರೆಯಾಗಲಿಲ್ಲ.
ಬಸು ಎಂಟ್ರಿಯಿಂದ ಸ್ಥಳೀಯ ಬಿಜೆಪಿಯಲ್ಲಿ ಭಿನ್ನಮತ ಆಸ್ಫೋಟಿಸಿ ಅಭ್ಯರ್ಥಿಯಾಗುವ ಆಸೆಯಲ್ಲಿದ್ದ ಎಮ್ಮೆಲ್ಸಿ ಸೋಮಣ್ಣ ಬೇವಿನಮರದ್ ಕಾಂಗ್ರೆಸ್ ಸೇರಿಕೊಂಡರು. ಆದರೆ ಆ ರಾಜಕೀಯ ಕಾಲಘಟ್ಟದಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಲಿಂಗಾಯತರಿಗೆ ಯಡಿಯೂರಪ್ಪ ಅಚ್ಚುಮೆಚ್ಚಿನ ನಾಯಕರಾಗಿದ್ದು ಮತ್ತು ಹಿಂದಿನ ಎರಡು ಚುನಾವಣೆಯಿಂದ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿತವಾಗಿದ್ದು ಬೊಮ್ಮಾಯಿಯವರಿಗೆ 12,862 ಮತದಂತರದ ಜಯ ತಂದುಕೊಟ್ಟಿತೆಂದು ವಿಶ್ಲೇಷಿಸಲಾಗುತ್ತಿದೆ. ಯಡಿಯೂರಪ್ಪ ಜಲಸಂಪನ್ಮೂಲದಂಥ ಮಹತ್ವಹ ಇಲಾಖೆಯ ಮಂತ್ರಿಗಿರಿಯೂ ಬಸು ಅವರಿಗೆ ಕೊಟ್ಟರು. ಆದರೆ ತಮ್ಮ ರಾಜಕೀಯ ಏಳ್ಗೆಗೆ ಕಾರಣರಾದ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಬಸು ಹಿಂಬಾಲಿಸಲಿಲ್ಲ.

2013ರಲ್ಲಿ ಬಿಜೆಪಿಯ ಬಸು ಬೊಮ್ಮಾಯಿ (73,007) ಮತ್ತು ಕಾಂಗ್ರೆಸ್‌ನ ಅಜಿಂಪೀರ್ ಖಾದ್ರಿ (63,504) ಮತ್ತೆ ಮುಖಾಮುಖಿಯಾದರು. ಕೆಜೆಪಿ ಅಭ್ಯರ್ಥಿಯಿದ್ದರೂ ಬಸು ಗೆಲುವಿಗೇನೂ ಕಷ್ಟವಾಗಲಿಲ್ಲ. 2018ರಲ್ಲಿ ಬಸುಗೆ ಯಡಿಯೂರಪ್ಪ ಬಲ ಸಿಕ್ಕಿತಾದರೂ ಸ್ಥಳೀಯ ಅಖಾಡದ ಸಮೀಕರಣ ಬದಲಾಗಲಿಲ್ಲ. 83,868 ಮತ ಪಡೆದ ಬಸು ಕಾಂಗ್ರೆಸ್ ಎದುರಾಳಿ ಅಜಿಂಪೀರ್ ಖಾದ್ರಿಯನ್ನು 9,265 ಮತದಿಂದ ಸೋಲಿಸಿ ಯಡಿಯೂರಪ್ಪರ ಆಪರೇಷನ್ ಕಮಲ ಸರಕಾರದಲ್ಲಿ ಆಯಕಟ್ಟಿನ ಗೃಹ ಮಂತ್ರಿಗಿರಿ ಭಾಗ್ಯ ಕಂಡರು! ಸಂಘಿ ಸೂತ್ರದಾರರು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದಾಗ ಬೊಮ್ಮಾಯಿಯವರಿಗೆ ಸಿಎಂ ಲಾಟರಿ ಅನಿರೀಕ್ಷಿತವಾಗಿ ಹೊಡೆದದ್ದು ಇತಿಹಾಸ!!
ಕ್ಷೇತ್ರದ ಹಾಡು-ಪಾಡು
ನಾಡು ಆಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಶಿಗ್ಗಾವಿ-ಸವಣೂರು ಪ್ರಗತಿ-ಅಭಿವೃದ್ಧಿಗೆ ಹಂಬಲಿಸುತ್ತಿರವ ಪ್ರದೇಶ! ಸವಣೂರಂತೂ ಸರಕಾರಿ ದಾಖಲೆಗಳ ಪ್ರಕಾರವೇ ಅಧಿಕೃತವಾಗಿ ಹಿಂದುಳಿದಿರುವ ತಾಲೂಕು! ಬೊಮ್ಮಾಯಿ ಸಾಹೇಬರ ಈ ಹದಿನೈದು ವರ್ಷದ ಶಾಸಕತ್ವದ ಪರ್ವದಲ್ಲಿ ಒಂದಿಷ್ಟು ಮೂಲಭೂತ ಸೌಕರ್ಯದ ಕಾಂಕ್ರೀಟ್-ಸಿವಿಲ್ ಕಾಮಗಾರಿಗಳು ಆಗಿವೆಯಷ್ಟೇ.
ಶಿಕ್ಷಣ-ವಸತಿ-ಆರೋಗ್ಯ-ಶೌಚಾಲಯ-ಕುಡಿಯುವ ನೀರು-ನೀರಾವರಿಯಂಥ ಅತ್ಯವಶ್ಯ ಮೂಲಸೌಕರ್ಯಗಳ ಸಮಸ್ಯೆ ಕ್ಷೇತ್ರದಲ್ಲಿದೆ; ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗೆ ತತ್ವಾರ ಆಗುತ್ತದೆ. ವರದೆಗೆ ಪ್ರವಾಹ ಬಂದರೆ ಹಲವು ಹಳ್ಳಿಗಳು ಮುಳುಗುತ್ತವೆ; ಮನೆ-ಮಠ ಕಳೆದುಕೊಂಡು, ಬೆಳೆ ನಾಶವಾಗಿ ಜನರು ನಿರಾಶ್ರಿತರಾಗುತ್ತಾರೆ. ನೆರೆ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಬೇಕಾಗಿದೆ. ಮನೆ, ನಿವೇಶನಕ್ಕಾಗಿ ಬಡವರು ಗೋಳಾಡುತ್ತಿದ್ದಾರೆ. ಶಿಗ್ಗಾವಿ, ಬಂಕಾಪುರ, ಸವಣೂರು ಮುಂತಾದೆಡೆಯಲ್ಲಿ ಕೊಳಚೆ ನಿರ್ಮೂಲನೆ ತ್ವರಿತವಾಗಿ ಆಗಬೇಕಾಗಿದೆ. ಶಿಗ್ಗಾವಿಯಲ್ಲಿ ಡಿಪ್ಲೋಮಾ, ಆಯುಶ್ ಕಾಲೇಜಿನಂಥ ಯೋಜನೆ ಬಂದಿದೆಯಾದರೂ ತಾಂತ್ರಿಕ ಶಿಕ್ಷಣದ ಬೇಡಿಕೆಯಿದೆ; ಸವಣೂರಲ್ಲಿ ಸಾಮಾನ್ಯ ಪದವಿ ಶಿಕ್ಷಣ ಬಿಟ್ಟರೆ ಬೇರ್‍ಯಾವುದೇ ವೃತ್ತಿಪರ ಕೋರ್ಸ್‌ಗೆ ಅನುಕೂಲವಿಲ್ಲ. ಉತ್ತಮ ಆರೋಗ್ಯ-ಶಿಕ್ಷಣ ಸೌಲಭ್ಯಕ್ಕೆ ಹುಬ್ಬಳ್ಳಿಗೆ ಹೋಗುವುದು ಅನಿವಾರ್ಯವಾಗಿದೆ. ಕಲೆ-ಕಲಾವಿದರ ನೆಲೆವೀಡಾದ ಶಿಗ್ಗಾವಿಯಲ್ಲಿ ಸಾಂಸ್ಕೃತಿಕ ಕಲಾಭವನದ ಬೇಡಿಕೆ ಹಲವು ಕಾಲದಿಂದಿದೆ.
ಸಿಎಂ ಬಸು ಪಂಚಮಸಾಲಿ ಮೀಸಲಾತಿ, ಎಸ್ಟಿ ಮೀಸಲಾತಿ ಹೆಚ್ಚಳದಂಥ ಸಾಂವಿಧಾನಿಕ ತೊಡಕಿನ ಕಸರತ್ತು ಮಾಡುತ್ತ ಶಿಗ್ಗಾವಿ-ಸವಣೂರಲ್ಲಿ ಮತ್ತೆ ಗೆಲ್ಲುವ ಲೆಕ್ಕಾಚಾರ ಹಾಕುತ್ತಿದ್ದಾರೆ; ಮೂರು ಬಾರಿ ಎಮ್ಮೆಲ್ಲೆ-ಮೂರು ಬಾರಿ ಪ್ರಭಾವಿ ಜಿಲ್ಲಾ ಉಸ್ತುವಾರಿ ಮಂತ್ರಿ, ಈಗ ಪರಮೋಚ್ಛ ಸಿಎಂ ಆಗಿರುವ ಬಸು ಕ್ಷೇತ್ರದ ಅಭಿವೃದ್ಧಿಗೆ ದೂರದರ್ಶಿತ್ವದ ನೀಲನಕ್ಷೆ ಹಾಕಿಕೊಂಡು ಕಾರ್ಯತತ್ಪರರಾಗಿದ್ದರೆ ಈಗಿನ ದಯನೇಸಿ ಸ್ಥಿತಿ ಬರುತ್ತಿರಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಬಲಗೈ ಭಂಟನಂತಿದ್ದ ಬಸು ಮನಸ್ಸು ಮಾಡಿದ್ದರೆ ಅಂದೇ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬಹುದಿತ್ತು. ಆಗೆಲ್ಲ ಬಸು ಸಾಹೇಬರು ಜನರ ಕೈಗೆಟುಕುತ್ತಿರಲಿಲ್ಲ; ಶಾಸಕರನ್ನು ಕಾಣಬೇಕೆಂದರೆ ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಬೇಕಾಗಿತ್ತು; ಈಗ ಮಾತ್ರ ಇಲೆಕ್ಷನ್ ಹತ್ತಿರ ಬರುತ್ತಿರುವುದರಿಂದ ಸಿಎಂ ಸ್ಥಾನದ ಒತ್ತಡವಿದ್ದರೂ ಮೇಲಿಂದಮೇಲೆ ಬಸು ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂಬ ಆಕ್ಷೇಪ-ಅಸಮಾಧಾನದ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತದೆ.
ಕ್ಷೇತ್ರ ಬದಲಿಸ್ತಾರಾ ಸಿಎಂ ಬಸು?
ರಾಜ್ಯದಲ್ಲಿ ಭುಗಿಲೆದ್ದಿರುವ ಪಂಚಮಸಾಲಿ ಲಿಂಗಾಯತರ ಮೀಸಲಾತಿ ಗೊಂದಲದ ನೇರ ಪರಿಣಾಮ ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ-ಸವಣೂರು ಕ್ಷೇತ್ರದ ಮೇಲಾಗುತ್ತಿದೆ. ಬಿಜೆಪಿಗೆ ನಿರ್ಣಾಯಕರಾಗಿರುವ ಪಂಚಮಸಾಲಿಗಳು ತಿರುಗಿಬಿದ್ದರೆ ಸಾದರ ಲಿಂಗಾಯತ ಪಂಗಡದ ಬಸು ಗಂಡಾಂತರಕ್ಕೆ ಸಿಲುಕುತ್ತಾರೆ. ಚುನಾವಣೆಯೊಳಗೆ ಪಂಚಮಸಾಲಿಗಳನ್ನು ಸಮಾಧಾನಪಡಿಸಲಾಗದಿದ್ದರೆ ಸಿಎಂ, ಸಾದರು ಹೆಚ್ಚಿರುವ ದಾವಣಗೆರೆ ಉತ್ತರ ಕ್ಷೇತ್ರಕ್ಕೆ ’ಗುಳೆ’ ಹೋಗುತ್ತಾರೆಂಬ ಚರ್ಚೆಗಳು ನಡೆದಿವೆ; ಪಂಚಮಸಾಲಿಗಳಿಗಾಗಿ ಹೊಸತೊಂದು ಮೀಸಲಾತಿ ಪ್ರವರ್ಗ ಸೃಷ್ಟಿಸಿ ಒಲಿಸಿಕೊಳ್ಳುವ ಬಿಜೆಪಿಯ ಓಟ್ ಬ್ಯಾಂಕ್ ತಂತ್ರಗಾರಿಕೆ ಸಫಲವಾದರೆ ಕ್ಷೇತ್ರ ’ಭ್ರಷ್ಟ’ರಾಗುವ ಪ್ರಮೇಯ ಬರಲಾರದೆಂಬ ತರ್ಕವೂ ಸಮಾನಾಂತರವಾಗಿ ನಡೆದಿದೆ. ಕ್ಷೇತ್ರದಲ್ಲಿನ ಬಸು ನಡೆ ನೋಡಿದರೆ ಪಂಚಮಸಾಲಿಗಳನ್ನು ಬಿಜೆಪಿ ಸಂತೃಪ್ತಗೊಳಿಸುವ ಸೂಚನೆ ಗೋಚರಿಸುತ್ತದೆ.
ಮೂರು ಚುನಾವಣೆಯಲ್ಲೂ ಬಸುಗೆ ಪ್ರಬಲ ಪೈಪೋಟಿ ಕೊಟ್ಟ ಕಾಂಗ್ರೆಸ್‌ನ ಅಜಿಂಪೀರ್ ಖಾದ್ರಿ ಮೂಲತಃ ಜನತಾ ಪರಿವಾರದವರು; ಬಸು ಒಡನಾಟದಲ್ಲೇ ಖಾದ್ರಿ ರಾಜಕಾರಣದ ವಿದ್ಯೆ ಕಲಿತವರು. ಖಾದ್ರಿ ಒಮ್ಮೆ ಶಾಸಕರಾಗಿದ್ದೂ ಜನತಾ ಪರಿವಾರದಿಂದಲೆ. ಕ್ಷೇತ್ರದಲ್ಲಿ ಪ್ರಬಲ ಹಿಂದು-ಮುಸ್ಲಿಮ್ ಬೆಂಬಲದ ನೆಲೆಯಿರುವ ಖಾದ್ರಿಯನ್ನು ಬಿಜೆಪಿಗೆ ಸೆಳೆಯುವ ಅಥವಾ ನಿಷ್ಕ್ರಿಯಗೊಳಿಸುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಶುರುವಿನಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ್ದ ಸೋಮಣ್ಣ ಬೇವಿನಮರದ್ ಬಸು ಆಗಮನದಿಂದ ಕೆರಳಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸಿರುವ ಬೇವಿನಮರದ್‌ಗೂ ಬಲೆಬೀಸಲಾಗಿದೆ; ಜತೆಗೆ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಗುಜರಾಯಿಸಿರುವ 13 ಮಂದಿಯಲ್ಲಿ ಜನರನ್ನು ಕಮಲದ ಮೋಡಿಗೆ ಒಳಪಡಿಸುವ ಸಾಧ್ಯತೆಯಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.
ಸತತ ಮೂರು ಬಾರಿ ಸೋತಿರುವ ಅಜಿಂಪೀರ್ ಖಾದ್ರಿಗೆ ಈ ಬಾರಿ ಅವಕಾಶ ಕಷ್ಟ ಎಂಬ ಬಾತ್ಮಿ ಕಾಂಗ್ರೆಸ್ ವಲಯದಿಂದ ಹೊರಬರುತ್ತಿದೆ. ಕಾಂಗ್ರೆಸ್ ಕ್ಯೂನಲ್ಲಿ ಎದ್ದು ಕಾಣುವುದು ರಿಯಲ್ ಎಸ್ಟೇಟ್ ಉದ್ಯಮಿ ಯಾಸಿರ್ ಖಾನ್ ಪಠಾಣ್, ಕುಂದಗೋಳ ಶಾಸಕಿ ಕುಸುಮಾವತಿ ಮೈದುನ ಎಸ್.ಎಸ್.ಶಿವಳ್ಳಿ, ರೆಸಾರ್ಟ್ ಉದ್ಯಮಿ ಶಶಿಧರ ಯಲಿಗಾರ್ ಮತ್ತು ಪ್ರತಿಷ್ಠಿತ ಹಂದಿಗನೂರು ಮಾಮ್ಲೆ ದೇಸಾಯಿ ಮನೆತನದ ರಾಜೇಶ್ವರಿ ಪಾಟೀಲ್. ಪ್ರಗತಿಪರ ಕೃಷಿಕ ಮತ್ತು ರೈತ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ರಾಜೇಶ್ವರಿ ಪಾಟೀಲ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೃಪಾಶೀರ್ವಾದವಿದ್ದರೆ, ಯಾಸಿರ್ ಪಠಾಣ್ ಮತ್ತು ಶಿವಳ್ಳಿ ಸಿದ್ದರಾಮಯ್ಯನವರ ನೆರಳಿನಲ್ಲಿದ್ದಾರೆ. ಸಿಬಿಐ ಕೇಸ್‌ನಲ್ಲಿ ಸಿಕ್ಕಿಬಿದ್ದು ಕ್ಷೇತ್ರಕ್ಕೆ (ಧಾರವಾಡ) ಕಾಲಿಡದಂತಾಗಿರುವ ಮಾಜಿ ಶಾಸಕ ವಿನಯ್ ಕುಲ್ಕರ್ಣಿ ಕಣ್ಣು ಶಿಗ್ಗಾವಿ ಮೇಲೆ ಬಿದ್ದಿದೆ ಎನ್ನಲಾಗುತ್ತಿದೆ; ಹಾಗೇನಾದರೂ ಪಂಚಮಸಾಲಿ ಪಂಗಡದ ಕುಲ್ಕರ್ಣಿ ಮುಖಾಮುಖಿಯಾದರೆ ಬಸುಗೆ ತೊಂದರೆಯಾಗಲಿದೆ. ಚುನಾವಣೆಯೊಳಗೆ ಬಿಜೆಪಿ ಪಂಚಮಸಾಲಿಗಳಿಗೆ ಸಮಾಧಾನ ಪಡಿಸದಿದ್ದರಷ್ಟೆ ಈ ಸಂಕಟ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ಕಾಂಗ್ರೆಸ್‌ಗೆ ನಿರ್ಣಾಯಕರಾದ ಕುರುಬ ಮತ್ತು ಮುಸ್ಲಿಮರು ಪಂಚಮಸಾಲಿಗಳಿಗಿಂತ ಹೆಚ್ಚಿರುವುದರಿಂದ ಅಜಿಂಪೀರ್ ಖಾದ್ರಿಯವರ ಬದಲಿಗೆ ಪಠಾಣ್ ಅಥವಾ ಶಿವಳ್ಳಿಯವರನ್ನು ಅಭ್ಯರ್ಥಿ ಮಾಡಿದರೆ ಸಿಎಂ ಬಸುಗೆ ಟಕ್ಕರ್ ಕೊಡುವುದೇನೂ ಕಷ್ಟವಲ್ಲ; ಬಸು ಹಿಂದೆಲ್ಲಾ ದೊಡ್ಡ ಅಂತರದಿಂದೇನೂ ಗೆದ್ದಿಲ್ಲ; ಕಾಂಗ್ರೆಸ್ ದುರ್ಬಲವಾಗೇನೂ ಇಲ್ಲ ಎಂದು ಸದ್ಯದ ಸಮೀಕ್ಷೆಗಳು ಹೇಳುತ್ತವೆ. ಒಂದಂತೂ ಖರೆ; ಸಿಎಂ ಬಸು ಬೊಮ್ಮಾಯಿ ಭವಿಷ್ಯ ಪಂಚಮಸಾಲಿ ಮೀಸಲಾತಿ ಬೇಡಿಕೆ ನಿರ್ಧರಿಸಲಿದೆ!


