ಮೈಸೂರಿನ ರಾಜೀವನಗರ 2ನೇ ಹಂತದಲ್ಲಿ ಕನ್ನಡಪ್ರೇಮಿ ಸೈಯದ್ ಇಸಾಕ್ ಅವರು ನಿರ್ಮಿಸಿದ್ದ ಗ್ರಂಥಾಲಯ ಸುಟ್ಟು ಹೋಗಿದ್ದು ಭಾರೀ ಸುದ್ದಿಯಾಗಿತ್ತು. ಕುಡುಕನೊಬ್ಬನ ಅತಾಚುರ್ಯದಿಂದ ಬೀಡಿ ಬೆಂಕಿ ತಾಕಿ ಕಳೆದ ಏಪ್ರಿಲ್‌ನಲ್ಲಿ ಗ್ರಂಥಾಲಯ ಭಸ್ಮವಾದ ಬಳಿಕ, ಸೈಯದ್ ಅವರಿಗೆ ನೆರವಿನ ಮಹಾಪೂರದ ಭರವಸೆಯೇ ಹರಿದುಬಂದಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಸೈಯದ್ ಅವರ ಕನ್ನಡ ಪ್ರೇಮವನ್ನು ಕೊಂಡಾಡಲಾಯಿತು. ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿದವು. ಸ್ಥಳಕ್ಕೆ ಶಾಸಕರು, ಸಂಸದರು, ಅಧಿಕಾರಿಗಳು ಭೇಟಿ ನೀಡಿದರು. ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿ ಗ್ರಂಥಾಲಯ ನಿರ್ಮಿಸುವುದಾಗಿ ಹೇಳಿದ್ದವು. ಮಿಸ್ಬಾ ಪತೇನ್ ಎಂಬವರು ಫಂಡ್ ರೈಸಿಂಗ್ ಮಾಡಿದ್ದರು. ಆದರೆ ಸರ್ಕಾರ ಗ್ರಂಥಾಲಯ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಸುಮಾರು 29 ಲಕ್ಷ ರೂ.ಗಳನ್ನು ದಾನಿಗಳಿಗೆ ಮಿಸ್ಬಾ ಹಿಂತಿರಿಸಿದ್ದರು.
ಗ್ರಂಥಾಲಯ ಸುಟ್ಟು ಹೋದ ಬಳಿಕ ಕೆಲವು ಜನಪ್ರತಿನಿಧಿಗಳು ಬೋರ ಎಂಬ ಸಂಸ್ಥೆಗೆ ಸೇರಿದ ನಿವೇಶನದಲ್ಲಿ ಸೈಯದ್ ಅವರು 2011ರಿಂದ ಗ್ರಂಥಾಲಯ ನಡೆಸುತ್ತಿದ್ದರು. ಹೀಗಾಗಿ ಬೋರ ಸಂಸ್ಥೆಯಿಂದ ಜಾಗವನ್ನು ಬಿಡಿಸಿಕೊಂಡು, ಗ್ರಂಥಾಲಯಕ್ಕೆ ಜಾಗವನ್ನು ಬಿಡಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ನಿವೇಶನವೇನೋ ಮಂಜೂರಾಗಿತ್ತು. ಆದರೆ ಗ್ರಂಥಾಲಯ ನಿರ್ಮಾಣ ವಿಳಂಬವಾಗಿತ್ತು. ಕೊನೆಗೂ ಸರ್ಕಾರ ಗ್ರಂಥಾಲಯ ನಿರ್ಮಾಣ ಮಾಡಿಕೊಡುವಲ್ಲಿ ತಡ ಮಾಡಿತು. ಹೀಗಾಗಿ ವಿವಿಧ ದಾನಿಗಳಿಂದ ಬಂದಿದ್ದ ಹಣವನ್ನೆಲ್ಲ ಖರ್ಚು ಮಾಡಿ ಸೈಯದ್ ಇಸಾಕ್ ಅವರೇ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.

“ಗ್ರಂಥಾಲಯ ನಿರ್ಮಾಣ ವಿಳಂಬವಾಗುತ್ತಿದೆ. ಜಾಗವೇನೋ ಮಂಜೂರಾಗಿದೆ. ಆದರೆ, ಸರ್ಕಾರ ಗ್ರಂಥಾಲಯ ನಿರ್ಮಿಸದಿದ್ದರೆ ದಾನಿಗಳು ನೀಡಿರುವ ಒಂದಿಷ್ಟು ಹಣವಿದ್ದು, ಅದರಲ್ಲೇ ಮೊದಲಿನಂತೆ ಗುಡಿಸಲು ನಿರ್ಮಿಸಿ, ದಾನಿಗಳಿಂದ ಬಂದಿರುವ ಸಾವಿರಾರು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಇರಿಸುತ್ತೇನೆ. ಮೈಸೂರಿನ ರಾಜೀವನಗರ ಭಾಗದಲ್ಲಿ ಕನ್ನಡ ಓದುವವರು ಕಡಿಮೆ ಇದ್ದಾರೆ. ಉರ್ದು ಬಳಕೆ ಹೆಚ್ಚಿದೆ. ಇಂತಹ ಜಾಗದಲ್ಲಿ ಕನ್ನಡ ಗ್ರಂಥಾಲಯ ಅಗತ್ಯವಿದೆ” ಎಂದು ಸೈಯದ್ ಹೇಳುತ್ತಲೇ ಬಂದಿದ್ದರು. ಕೊನೆಗೂ ತಮ್ಮ ಕನಸನ್ನು ಸೈಯದ್ ಇಸಾಕ್ ನನಸು ಮಾಡಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಜನರು ಕೊಟ್ಟಿದ್ದ ಹಣದಲ್ಲೇ ಗ್ರಂಥಾಲಯ ಮಾಡಿದ್ದೇನೆ. ಶಾಸಕ ಜಮೀರ್ ಅಹಮದ್ 2 ಲಕ್ಷ ರೂ., ಸಂಸದ ಪ್ರತಾಪ್ ಸಿಂಹ 50 ಸಾವಿರ ರೂ., ಸಚಿವ ಎಸ್.ಟಿ.ಸೋಮಶೇಖರ್ 25,000 ರೂ. ನೀಡಿದ್ದರು. ಅನೇಕರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದರು. ಎಲ್ಲ ಸೇರಿ 3,45,000 ರೂ. ಇತ್ತು. ಗ್ರಂಥಾಲಯ ನಿರ್ಮಾಣಕ್ಕೆ ಒಟ್ಟು ನಾಲ್ಕು ಲಕ್ಷ ರೂ. ಖರ್ಚಾಗಿದೆ. ಸಿಸಿಟಿವಿ ಹಾಕಿಸಬೇಕೆಂದು ಯೋಚಿಸಿದ್ದೆ. ಆದರೆ ಅಷ್ಟು ಹಣ ಸಿಗಲಿಲ್ಲ. ಇರುವಷ್ಟರಲ್ಲಿ ಸಂತೋಷದಲ್ಲಿದ್ದೇನೆ. ಜನವರಿ 26ಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಕರೆಸಿ, ರಾಷ್ಟ್ರಗೀತೆ, ನಾಡಗೀತೆ ಹಾಡಿಸಿ ಟೇಪ್ ಕತ್ತರಿಸಿ, ದೀಪ ಹಚ್ಚಿಸಿ ಶಾಲಾ ಮಕ್ಕಳಿಂದಲೇ ಗ್ರಂಥಾಲಯ ಉದ್ಘಾಟಿಸಲಿದ್ದೇನೆ” ಎಂದು ತಿಳಿಸಿದರು.
“ಕೂತುಕೊಳ್ಳಲು ಪ್ಲಾಸ್ಟಿಕ್ ಚೇರ್ ಹಾಕಿಸಬೇಕೆಂದಿದ್ದೇನೆ. ಈಗ ಆರು ಚೇರುಗಳಿವೆ. ಅದರಲ್ಲಿ ಎರಡು ಮುರಿದು ಹೋಗಿವೆ. ಇನ್ನೂ ನಾಲ್ಕು ಚೇರ್‌ಗಳನ್ನು ಖರೀದಿಸುತ್ತೇನೆ. ಕೂತು ಓದಲು ಅವಕಾಶ ಮಾಡಿಕೊಡುತ್ತೇನೆ. ಸಾಲಲಿಲ್ಲ ಎಂದರೆ ಸಿಮೆಂಟ್ ಇಟ್ಟಿಗೆ ತಂದು ಸುಣ್ಣು ಹೊಡೆದು ಒಳಗೆ ಜೋಡಿಸುತ್ತೇನೆ” ಎಂದರು.
“ಗ್ರಂಥಾಲಯ ನಿರ್ಮಿಸಿಕೊಡದಿದ್ದರೂ ಕರ್ನಾಟಕ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಅದಕ್ಕಾಗಿ ಹೃದಯಪೂರ್ವಕ ವಂದನೆಗಳು. ಈಗ ಬಂದೋಬಸ್ತ್ ಆಗಿ ಗ್ರಂಥಾಲಯ ನಿರ್ಮಾಣವಾಗಿದೆ. ಮೂರು ಅಡಿ ಗೋಡೆ ಕಟ್ಟಿ ಬಂದೋಬಸ್ತ್ ಮಾಡಲಾಗಿದೆ. ಶೀಟ್ ಹಾಕಿಸಲಾಗಿದೆ” ಎಂದು ಹೇಳಿದರು.

ಗ್ರಂಥಾಲಯ ಇಲಾಖೆಗೆ ಹಣ ನೀಡಿದ್ದೇವೆ: ಪಾಲಿಕೆ ಆಯುಕ್ತ
ಸೈಯದ್ ಅವರಿಗೆ ಗ್ರಂಥಾಲಯ ನಿರ್ಮಿಸುವ ಭರವಸೆ ನೀಡಿ ವಿಳಂಬ ಮಾಡುತ್ತಿರುವುದು ಏತಕ್ಕೆ ಎಂದು ಹಿಂದೊಮ್ಮೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತ್ತು. “ಪ್ರತ್ಯೇಕವಾಗಿ ನಾವು ಲೈಬ್ರರಿ ಸೆಸ್ ಸಂಗ್ರಹಿಸುತ್ತೇವೆ. ಅದನ್ನು ಗ್ರಂಥಾಲಯ ಇಲಾಖೆಗೆ ನೀಡಿದ್ದೇವೆ. ಅವರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಭೂಮಿಯನ್ನು ಮಂಜೂರು ಮಾಡಲಾಗಿದೆ. ಕಟ್ಟಡ ನಿರ್ಮಾಣವು ಗ್ರಂಥಾಲಯ ಇಲಾಖೆಯಿಂದ ಆಗಬೇಕು. ಕೊಡಬೇಕಾದ ಹಣವನ್ನು ಗ್ರಂಥಾಲಯ ಇಲಾಖೆಗೆ ನಾವು ನೀಡಿದ್ದೇವೆ” ಎಂದಿದ್ದರು.

20 ಕೋಟಿ ರೂ. ಸೆಸ್ ಬಾಕಿ ಇದೆ: ಗ್ರಂಥಾಲಯ ಇಲಾಖೆ
ಗ್ರಂಥಾಲಯ ನಿರ್ಮಾಣಕ್ಕೆ ಪಾಲಿಕೆಯಿಂದ ನೀಡಬೇಕಾದ ಹಣವನ್ನೆಲ್ಲ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರೆ ಮೈಸೂರು ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಅವರು ಬೇರೆ ತೊಂದರೆಗಳನ್ನು ಹೇಳಿಕೊಂಡಿದ್ದರು.
“ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರು ಗ್ರಂಥಾಲಯ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ನಮ್ಮ ಇಲಾಖೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗುವಷ್ಟು ಹಣವಿಲ್ಲ. ನಿತ್ಯದ ಖರ್ಚು ವೆಚ್ಚಕ್ಕೆ ಹಣ ಸಾಕಾಗುತ್ತಿಲ್ಲ. ಪಾಲಿಕೆಯಿಂದ 20 ಕೋಟಿ ರೂ. ಸೆಸ್ ಬಾಕಿ ಇದೆ. ಈಗ ಪ್ರಸ್ತುತವಾಗಿ ಬರಬೇಕಾಗಿರುವ ಸೆಸ್ ಬರುತ್ತಿದೆ. ಆದರೆ ನಿತ್ಯದ ಖರ್ಚು ವೆಚ್ಚಕ್ಕೇ ಆ ಹಣ ಹೋಗುತ್ತಿದೆ. ಮೈಸೂರು ನಗರದ ಪೀಪಲ್ಸ್ ಪಾರ್ಕ್‌ನಲ್ಲಿ ಐದೂವರೆ ಕೋಟಿ ರೂ.ಗಳಲ್ಲಿ ನಿರ್ಮಾಣವಾಗಿರುವ ಗ್ರಂಥಾಲಯ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಮೂರರಿಂದ ನಾಲ್ಕು ಕೋಟಿ ರೂ. ಬೇಕಾಗಿದೆ. ನಮ್ಮ ಬಳಿ ಅಷ್ಟು ಹಣವಿಲ್ಲ” ಎಂದು ಗ್ರಂಥಾಲಯ ಉಪನಿರ್ದೇಶಕ ಬಿ.ಮಂಜುನಾಥ್ ಹೇಳಿದ್ದರು.

“ಸುಮಾರು 35 ಲಕ್ಷ ರೂ.ಗಳಲ್ಲಿ ಸೈಯದ್ ಅವರ ಗ್ರಂಥಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದಿಂದ ಯೋಜನೆ ಸಿದ್ಧಪಡಿಸಲಾಗಿದೆ. ಮುಡಾದವರು ನಿವೇಶನ ನೀಡಿದ್ದಾರೆ. ಸಿಎ ನಿವೇಶನ ಆಗಿರುವುದರಿಂದ ಹಣ ಕಟ್ಟಬೇಕು ಎಂದು ಲೆಟರ್ ಕೊಟ್ಟಿದ್ದಾರೆ. ಆದರೆ ನಂತರದಲ್ಲಿ ನಡೆದ ಸಭೆಯಲ್ಲಿ ಹಣ ಕಟ್ಟುವುದೇನೂ ಬೇಡವೆಂದು ಮುಡಾ ಆಯುಕ್ತರು ಭರವಸೆ ನೀಡಿದ್ದಾರೆ. ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆಯಿಂದ ಕಟ್ಟಡ ನಿರ್ಮಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಯೋಜಿತ 35 ಲಕ್ಷ ರೂ.ಗಳಲ್ಲಿ 20 ಲಕ್ಷ ರೂ.ಗಳನ್ನಾದರೂ ಪಾಲಿಕೆ ನೀಡಿದರೆ ಗ್ರಂಥಾಲಯ ಕಟ್ಟಡ ನಿರ್ಮಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದೇನೆ” ಎಂದಿದ್ದರು.
ಸರ್ಕಾರದಿಂದ ವಿಳಂಬವಂತೂ ಆಯಿತು. ಅನೇಕರು ಪುಸ್ತಕಗಳನ್ನು ಸೈಯದ್ ಅವರಿಗೆ ಕಳುಹಿಸಿದ್ದರು. ಮನೆಯಲ್ಲಿಯೇ ಬಹುಕಾಲ ಪುಸ್ತಕಗಳನ್ನು ಇರಿಸಿಕೊಂಡಿದ್ದರು. ಆದರೆ ಕಟ್ಟಡ ನಿರ್ಮಾಣವಾಗುವುದು ಮರೀಚಿಕೆಯಾದಾಗ ದಾನಿಗಳ ಹಣ ಬಳಸಿ ಗ್ರಂಥಾಲಯ ಮರು ನಿರ್ಮಿಸಿದ್ದಾರೆ. “ಪೀಠೋಪಕರಣಗಳ ಅಗತ್ಯವಿದೆ. ದಾನಿಗಳು ಹೆಚ್ಚಿನ ಪುಸ್ತಕಗಳನ್ನೂ ನೀಡಬಹುದು” ಎಂದು ಸೈಯದ್ ಹೇಳಿದ್ದಾರೆ. ಅವರಿಗೆ ಹೆಚ್ಚಿನ ಸಹಾಯ ನೀಡಲು ಬಯಸುವವರು ಮೊ.ಸಂ. 99012 66487 ಸಂಪರ್ಕಿಸಬಹುದು.
ಇದನ್ನೂ ಓದಿರಿ: ಎಷ್ಟು ದಿನ ಕಾಯಲಿ? ಗುಡಿಸಲು ನಿರ್ಮಿಸಿ ಗ್ರಂಥಾಲಯ ಆರಂಭಿಸುವೆ: ಸೈಯದ್ ಇಸಾಕ್



ಸರ್ಕಾರ ಮಾಡಲಾಗದ್ದನ್ನು ಒಬ್ಬ ವ್ಯಕ್ತಿ ಮಾಡಿದ್ದಾರೆ. ಇದು ನಿಜವಾದ ಕನ್ನಡ ಪ್ರೇಮ ಮತ್ತು ಸಮಾಜಸೇವೆ.
ಸೈಯದ್ ಇಸಾಕ್ ನಂತಹವರು ,ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುಬರಲಿ. ಕನ್ನಡದ ಜನರು ನಡೆ ,ನುಡಿಯಲ್ಲಿ ಎಲ್ಲಾದರೂ ಇರಲಿ , ಎಂತಾದರು ಇರಲಿ ,ಕನ್ನಡ ನಾಗಿರಲಿ ಎಂಬ ಆಶಾಭಾವನೆ ಎಲ್ಲರಲ್ಲಿ ಮೂಡಿ ಬರಲಿ