ನಾಳೆ (ಸೆ.14) ಒಕ್ಕೂಟ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡಲಿದ್ದು, ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿರೋಧ ಕೂಡ ವ್ಯಕ್ತವಾಗುತ್ತಿದೆ. ಇದೇ ವೇಳೆ ತಮಿಳು ಭಾಷೆಯನ್ನು “ದೇವರ ಭಾಷೆ” ಎಂದು ಮದ್ರಾಸ್ ಹೈಕೋರ್ಟ್ ಕೊಂಡಾಡಿದೆ.
ದೇಶದಾದ್ಯಂತ ದೇವಾಲಯದ ಪವಿತ್ರೀಕರಣ/ಪ್ರತಿಷ್ಠಾಪನೆಯನ್ನು ಅರುಣಗಿರಿನಾಥರು, ಅಜ್ವರರು ಮತ್ತು ನಾಯನ್ಮಾರ್‌ಗಳಂತಹ ಸಂತರು ರಚಿಸಿದ ತಮಿಳು ಸ್ತೋತ್ರಗಳನ್ನು ಪಠಿಸುವ ಮೂಲಕ ನಡೆಸಬೇಕು ಎಂದು ಹೇಳಿದೆ.
ಇತ್ತೀಚಿಗೆ ಅರ್ಜಿ ವಿಚಾರಣೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಎನ್.ಕಿರುಬಾಕರನ್ ಮತ್ತು ನ್ಯಾಯಮೂರ್ತಿ ಬಿ.ಪುಗಲೆಂಧಿ ಅವರ ಪೀಠವು ಆದೇಶದಲ್ಲಿ ಈ ಹೇಳಿಕೆ ನೀಡಿದ್ದು, ನಮ್ಮ ದೇಶದಲ್ಲಿ ಸಂಸ್ಕೃತವನ್ನು ಮಾತ್ರ ದೇವರ ಭಾಷೆ ಎಂದು ನಂಬುವಂತೆ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಖಾಸಗೀಕರಣವನ್ನು ವಿರೋಧಿಸಿ ಮೋದಿಗೆ ಪತ್ರ ಬರೆಯಲಿರುವ ತಮಿಳುನಾಡು ಸಿಎಂ
ತಮಿಳು ಶೈವ ಮಂತ್ರಂ (ಸ್ತುತಿಗೀತೆಗಳು) ಮತ್ತು ಸಂತ ಅಮರಾವತಿ ಆತರಂಗರೈ ಕರೂರರ ಹಾಡುಗಳೊಂದಿಗೆ ಕರೂರು ಜಿಲ್ಲೆಯ ಅರುಲ್ಮಿಗು ಪಶುಪತೇಶ್ವರ ಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪಿಸಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಆಯುಕ್ತರು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
“ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಭಾಷೆಯಲ್ಲಿ ಆರಾಧನೆ ನಡೆಯುತ್ತದೆ. ನಮ್ಮ ದೇಶದಲ್ಲಿ, ಸಂಸ್ಕೃತವನ್ನು ಮಾತ್ರ ದೇವರ ಭಾಷೆ ಎಂದು ನಂಬುವಂತೆ ಮಾಡಲಾಗಿದೆ. ಬೇರೆ ಯಾವುದೇ ಭಾಷೆ ಅದಕ್ಕೆ ಸಮನಲ್ಲ ಎಂದು ಬಿಂಬಿಸಲಾಗಿದೆ. ನಿಸ್ಸಂದೇಹವಾಗಿ, ಸಂಸ್ಕೃತ ಅಗಾಧವಾದ ಪ್ರಾಚೀನ ಸಾಹಿತ್ಯವನ್ನು ಹೊಂದಿರುವ ಪ್ರಾಚೀನ ಭಾಷೆ. ಆದರೆ, ಸಂಸ್ಕೃತದಲ್ಲಿ ವೇದಗಳನ್ನು ಪಠಿಸಿದರೆ ಮಾತ್ರ ದೇವರುಗಳು ಭಕ್ತರ ಪ್ರಾರ್ಥನೆಯನ್ನು ಕೇಳುತ್ತಾರೆ ಎಂಬ ನಂಬಿಕೆಯನ್ನು ಹರಡಲಾಗಿದೆ” ಎಂದು ಪೀಠ ಹೇಳಿದೆ.
ಜನರು ಮಾತನಾಡುವ ಪ್ರತಿಯೊಂದು ಭಾಷೆಯೂ ದೇವರ ಭಾಷೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. “ಮನುಷ್ಯನು ಭಾಷೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಾಷೆಗಳು ಶತಮಾನಗಳಿಂದ ಅಸ್ತಿತ್ವದಲ್ಲಿವೆ. ಒಂದು ತಲೆಮಾರಿನಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗಿವೆ. ಅಸ್ತಿತ್ವದಲ್ಲಿರುವ ಭಾಷೆಗಳಲ್ಲಿ ಮಾತ್ರ ಸುಧಾರಣೆಯಾಗಬಹುದು. ಆದರೆ ಯಾವುದೇ ಭಾಷೆಯ ಸೃಷ್ಟಿ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇನ್ನು, ತಮಿಳುನಾಡಿನ ಜೊತೆ ಒಕ್ಕೂಟ ಸರ್ಕಾರ ಸಂವಹನ ನಡೆಸುವಾಗ ಇಂಗ್ಲಿಷ್ ಭಾಷೆ ಬಳಸಬೇಕು. ಹಿಂದಿ ಬಳಸಕೂಡದು ಎಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಇತ್ತಿಚೆಗೆ ತೀರ್ಪು ನೀಡಿದೆ.
ರಾಜ್ಯಗಳೊಂದಿಗೆ ಸಂವಹನ ನಡೆಸುವಾಗ ಅಧಿಕೃತ ಭಾಷೆಗಳ ಕಾಯ್ದೆ, 1963ರ ನಿಯಮಗಳನ್ನು ಪಾಲಿಸಬೇಕು ಎಂದು ಒಕ್ಕೂಟ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಮಧುರೈ ನ್ಯಾಯಪೀಠ ಸೂಚನೆ ನೀಡಿತ್ತು.
ಇದನ್ನೂ ಓದಿ: ಸಿಎಎ ಹಿಂಪಡೆಯುವಂತೆ ನಿರ್ಣಯ ಅಂಗೀಕರಿಸಿದ ತಮಿಳುನಾಡು ಅಸೆಂಬ್ಲಿ: ಬಿಜೆಪಿ ಮಿತ್ರ ಪಕ್ಷದ ಬೆಂಬಲ


