ಕಳೆದೆರಡು ವಾರಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿರುವ ಶಾಲಾ ಬಾಲಕಿಯರ ಸಾವಿನ ಸರಣಿಗೆ ಮತ್ತೊಂದು ಸಾವು ಸೇರ್ಪಡೆಯಾಗಿದೆ. 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ಶಿವಕಾಶಿಯ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎನ್‌ಡಿಟಿವಿ ವರದಿ ಮಾಡಿದೆ. ಆದರೆ “ತನಿಖೆ ಪೂರ್ಣಗೊಳ್ಳುವವರೆಗೂ ನಾವು ಏನನ್ನೂ ಹೇಳುವುದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅದು ಉಲ್ಲೇಖಿಸಿದೆ. ಬಾಲಕಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಪತ್ರ ಇನ್ನೂ ಪತ್ತೆಯಾಗಿಲ್ಲ. ಬಾಲಕಿಯು ಆಗಾಗ್ಗೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ 12 ನೇ ತರಗತಿಯ ಮೂವರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಸಾವಿಗೀಡಾಗಿರುವ ಬಾಲಕಿ 11 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ರಾಜ್ಯದ ಕಡಲೂರು ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಶಿವಕಾಶಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ತಮಿಳುನಾಡು: ಕಸ್ಟಡಿ ಸಾವು, ಮೃತದೇಹ ಸ್ವೀಕರಿಸಲು ನಿರಾಕರಿಸಿದ ಕುಟುಂಬ
ಕಡಲೂರು ವಿದ್ಯಾರ್ಥಿನಿಯು ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅವರು, ತನ್ನ ಹೆತ್ತವರು ತನ್ನ ಮೇಲೆ ಇಟ್ಟಿರುವ ಐಎಎಸ್ ಆಕಾಂಕ್ಷೆಗಳನ್ನು ಪೂರೈಸಲು ಅಸಮರ್ಥಳಾಗಿರುವುದರಿಂದ ಕೃತ್ಯ ಎಸಗುತ್ತಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕಾರ್ತಿಕ್ ಹೇಳಿದ್ದಾರೆ.
ಮರುಕಳಿಸುತ್ತಿರುವ ವಿದ್ಯಾರ್ಥಿನಿಯರ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ವಿದ್ಯಾರ್ಥಿನಿಯರು ಆತ್ಮಹತ್ಯೆಯ ಆಲೋಚನೆಗಳನ್ನು ದೂರವಿಡುವಂತೆ ಮನವಿ ಮಾಡಿದ್ದಾರೆ. “ಹೆಣ್ಣು ಮಕ್ಕಳನ್ನು ಯಾವತ್ತೂ ಆತ್ಮಹತ್ಯಾ ಯೋಚನೆಗೆ ತಳ್ಳಬಾರದು. ವಿದ್ಯಾರ್ಥಿನಿಯರಿಗೆ ಲೈಂಗಿಕ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ, ತಿರುವಳ್ಳೂರು ಜಿಲ್ಲೆಯ ಸೇಕ್ರೆಡ್ ಹಾರ್ಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿನಿ ತನ್ನ ಹಾಸ್ಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.
ಇತ್ತೀಚೆಗೆ ನಡೆದ ನಾಲ್ಕು ಸಾವುಗಳಲ್ಲಿ ಮೊದಲನೆಯದು ಜುಲೈ 13 ರಂದು ಕಲ್ಲಕುರಿಚಿ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯು ಖಾಸಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಘಟನೆಯಿಂದಾಗಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಗಾಯಗೊಂಡರು.
ಕಲ್ಲಾಕುರಿಚಿ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಶಿಕ್ಷಕರು ವಿದ್ಯಾರ್ಥಿನಿಯನ್ನು, ‘ಶೈಕ್ಷಣಿಕವಾಗಿ ಹಿಂದುಳಿದಿದ್ದಕ್ಕಾಗಿ ಅವಮಾನಿಸಿದ್ದರು’ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡು: ತಂದೆಯಿಂದಲೆ ನವವಿವಾಹಿತ ಮಗಳು, ಅಳಿಯನ ಕೊಲೆ
ಆದಾಗ್ಯೂ, ಬಾಲಕಿಯ ಪೋಷಕರು, ಅಪರಾಧದ ಸ್ಥಳದಲ್ಲಿ ದೈಹಿಕ ಹೊಡೆದಾಟ ನಡೆದಿರುವ ಲಕ್ಷಣಗಳಿವೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಮದ್ರಾಸ್ ಹೈಕೋರ್ಟ್ ಪುನರಾವರ್ತಿತ ಶವಪರೀಕ್ಷೆಗೆ ಆದೇಶ ನೀಡಿತು. ಶಿಕ್ಷಣ ಸಂಸ್ಥೆಗಳಲ್ಲಿನ ಸಾವುಗಳ ಬಗ್ಗೆ ಸಿಬಿಐ-ಸಿಐಡಿ ತನಿಖೆ ನಡೆಸುವಂತೆಯೂ ಹೈಕೋರ್ಟ್ ಆದೇಶಿಸಿದೆ.


