ಶಾಲಾ ಪಠ್ಯಪುಸ್ತಕದ ಮರುಪರಿಷ್ಕರಣೆ ವಿಷಯದಲ್ಲಿ ನಡೆದಿರುವ ಇತ್ತೀಚಿನ ವಿದ್ಯಮಾನಗಳು ಆಘಾತಕರವೂ ಕಂಗಾಲುಂಟು ಮಾಡುವಂತಹವೂ ಆಗಿವೆ. ಆದರೆ ಸಂಘಪರಿವಾರವು ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ತನ್ನ ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ, ತನ್ನ ನಿಯಂತ್ರಣದಲ್ಲಿರುವ ಪ್ರಭುತ್ವಗಳ ಮೂಲಕವೂ ಇಡುತ್ತಿರುವ ದೃಢವಾದ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನು ಅರಿತರೆ, ಇದ್ಯಾವುದೂ ಅನಿರೀಕ್ಷಿತವಲ್ಲ ಎಂದು ಮನವರಿಕೆಯಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಯನ್ನು ಸಂಘದ ಹಿನ್ನೆಲೆಯುಳ್ಳ ಮಂತ್ರಿಗೆ ಕೊಟ್ಟಾಗಲೇ (ಹಿಂದಿನ ಬಿಜೆಪಿ ಸರ್ಕಾರಗಳಲ್ಲಿ ಈ ಖಾತೆಯನ್ನು ಕಾಗೇರಿ ಹಾಗೂ ಸುರೇಶಕುಮಾರ್ ಅವರಿಗೆ ಕೊಡಲಾಗಿತ್ತು), ಪಠ್ಯನಿರ್ಮಾಣ ಮತ್ತು ಪಠ್ಯ ಪರಿಷ್ಕರಣೆಯನ್ನು ಸರ್ಕಾರವು ಆದ್ಯತೆಯ ವಿಷಯವಾಗಿ ಕೈಗೆತ್ತಿಕೊಂಡಾಗಲೇ, ಇದರ ಅಂದಾಜು ಸಿಕ್ಕಿತ್ತು. ಸಂಘಪರಿವಾರವು ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಯನ್ನು ಯಾವಾಗಲೂ ನಿರ್ಣಾಯಕ ಸಂಗತಿಯಾಗಿ ಪರಿಗಣಿಸುತ್ತದೆ. ಯಾಕೆಂದರೆ, ಶೈಕ್ಷಣಿಕ ವ್ಯವಸ್ಥೆಯ ಮೂಲಕ ಎಳೆಯ ಮನಸ್ಸುಗಳಲ್ಲಿ ಸೈದ್ಧಾಂತಿಕ ಬೀಜಗಳನ್ನು ಬಿತ್ತಲು ಅದು ಸೂಕ್ತ ಹೊಲವೆಂದು ನಂಬಿರುವುದು. ಆದ್ದರಿಂದ ಈ ಸಂಬಂಧವಾಗಿ ಶಿಕ್ಷಣ ಮಂತ್ರಿಗಳನ್ನು ಅಥವಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು, ಹುತ್ತವ ಬಡಿದಂತೆ. ಬೇರನ್ನು ಮರೆತು ಕೊಂಬೆಗಳನ್ನು ದೂಷಿಸುವಂತೆ. ಬಿಜೆಪಿ ಸರ್ಕಾರಗಳಿರುವಲ್ಲಿ ರೂಪಿತವಾಗುವ ಶಾಲಾಪಠ್ಯಗಳ ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ:
1. ಮುಸ್ಲಿಂ, ಕ್ರೈಸ್ತ, ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ಸಿಗೆ ಸಂಬಂಧಪಟ್ಟ ನೆಹರೂ ಮುಂತಾದವರ ಬಗ್ಗೆ ದ್ವೇಷಭಾವನೆ ಬರುವಂತೆ ಮಾಡುವುದು. ಅವರಿಗೆ ಸಂಬಂಧಿಸಿದ ವಿಷಯಗಳನ್ನು ತರಲೇಬೇಕಾದಲ್ಲಿ ನಕಾರಾತ್ಮಕವಾಗಿ ತರುವುದು. ಉದಾ: ಮುಸ್ಲಿಂ ಪಾತ್ರಗಳು ಸಾಮಾನ್ಯವಾಗಿ ಹೆಚ್ಚುಮಕ್ಕಳನ್ನು ಹೊಂದಿರುವ ಕುಟುಂಬಸ್ಥರಾಗಿರುವುದು; ಮಕ್ಕಳು ಮತ್ತು ಹಕ್ಕಿಗಳು ಆರ್ತನಾದ ಮಾಡಿದರೂ ಹಸಿರುಮರವನ್ನು ಕಡಿಯುವುದು, ದುಷ್ಟನಾದ ಮುಸ್ಲಿಂ ದೊರೆಯ ಚರಿತ್ರೆ ಕೊಡುವುದು ಇತ್ಯಾದಿ.
2. ಜಾತಿಪದ್ಧತಿ ಮತ್ತು ಬ್ರಾಹ್ಮಣವಾದ ಪ್ರಶ್ನಿಸುವ ಶೂದ್ರ ಚಿಂತಕರು, ಸಮಾಜ ಸುಧಾರಕರು ಹಾಗೂ ಲೇಖಕರನ್ನು ಉಪಾಯವಾಗಿ ಬದಿಗೆ ಸರಿಸುವುದು. ಅವರನ್ನು ಒಳಗೊಳ್ಳುವ ಅನಿವಾರ್ಯತೆ ಬಂದಾಗ, ಅವರ ಅಸಾಮಾಜಿಕ ಎನ್ನಬಹುದಾದ ರಚನೆಗಳಿಗೆ ಅವಕಾಶ ಕಲ್ಪಿಸುವುದು.
3. ಬ್ರಾಹ್ಮಣವಾದಿ ಸಾಮಾಜಿಕ ಯಜಮಾನಿಕೆಯ ಸಮಾಜ ರಚನೆ ಮತ್ತು ಜೀವನಮೌಲ್ಯಗಳನ್ನು ಪ್ರಶ್ನಿಸದೆ ಒಪ್ಪುವ, ಶೂದ್ರ ದಲಿತ ಕ್ರೈಸ್ತ ಮುಸ್ಲಿಂ ಚಿಂತಕ ಮತ್ತು ಲೇಖಕರಿಗೆ ಆದ್ಯತೆ ನೀಡುವುದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಈ ಕೆಟಗರಿಯಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆಯುವರು.
4. ಬ್ರಾಹ್ಮಣವಾದಿ ಮೌಲ್ಯಗಳನ್ನು ಒಪ್ಪದ ಬಂಡುಕೋರ ಲೇಖಕರು ಮತ್ತು ಚಿಂತಕರು, ಅವರು ಮೇಲ್ಜಾತಿಗೆ ಸೇರಿದ್ದರೂ, ಒಳಶತ್ರುಗಳೆಂದು ಭಾವಿಸುವುದು. ಈ ಹಿನ್ನೆಲೆಯಲ್ಲಿ ಕೋಮುವಾದದ ವಿರುದ್ಧ ದನಿಯೆತ್ತಿದ ಅನಂತಮೂರ್ತಿ, ಗಿರೀಶ ಕಾರ್ನಾಡ್, ಎಚ್.ಎಸ್.ದೊರೆಸ್ವಾಮಿ ಮುಂತಾದವರು, ಬಾಳಿನ ಕೊನೆಯ ದಿನಗಳಲ್ಲಿ ಎದುರಿಸಿದ ದ್ವೇಷವನ್ನು ಸ್ಮರಿಸಬಹುದು.
5. ಸಂಪನ್ಮೂಲಗಳ ಹಂಚಿಕೆ ಮತ್ತು ವರ್ಗದ ಪ್ರಶ್ನೆಗಳನ್ನು ಎತ್ತುವ ಎಡಪಂಥೀಯ ಲೇಖಕರನ್ನು ಮತ್ತು ಚಿಂತಕರನ್ನು, ಅವರು ಯಾವುದೇ ಜಾತಿ-ಧರ್ಮಗಳ ಹಿನ್ನೆಲೆಯಿಂದ ಬಂದಿದ್ದರೂ, ದೇಶವನ್ನು ಕಟ್ಟುವಿಕೆಯಲ್ಲಿ ಸಮಾಜವಾದಿ ಮುನ್ನೋಟವನ್ನು ಹೊಂದಿದ್ದರೂ-ಕಡೆಗಣಿಸುವುದು.
6. ದುಡಿಮೆ ಉತ್ಪಾದನೆ ಹಂಚಿಕೆಯಂತಹ ಪ್ರಶ್ನೆಗಳಿಗಿಂತ, ಯುದ್ಧ, ಸೈನಿಕ ಸಂಸ್ಕೃತಿ, ಶೂದ್ರರ ಬಲಿದಾನ, ಸ್ನಾಯುಬಲ ಮತ್ತು ಪುರುಷವಾದದ ಅಂಶಗಳನ್ನುಳ್ಳ ಸಂಗತಿಗಳಿಗೆ ಆದ್ಯತೆ ಕೊಡುವುದು. ಇವನ್ನು ದೇಶಭಕ್ತಿ, ನೆರೆರಾಷ್ಟ್ರಗಳ ಶತ್ರುತ್ವವೇ ಮುಂತಾದ ಆಯಾಮಗಳಲ್ಲಿ ರಾಷ್ಟ್ರೀಯವಾದಿ ಆದರ್ಶವಾಗಿ ಮಂಡಿಸುವುದು.
7. ಮಹಿಳಾ ಸಮಾನತೆಯನ್ನು ಆದ್ಯತೆಯ ಸಂಗತಿಯೆಂದು ಪರಿಭಾವಿಸದಿರುವುದು; ಧಾರ್ಮಿಕವಾಗಿ ಹೆಣ್ಣನ್ನು ಮಾತೃರೂಪದಲ್ಲಿ ಆರಾಧಿಸುತ್ತಲೇ, ಸಾಮಾಜಿಕವಾಗಿ ಗೃಹಕೃತ್ಯಗಳಿಗೆ ಸೀಮಿತಗೊಳಿಸುವ ಆಶಯವನ್ನು ಹೊಂದಿರುವುದು. ಪಠ್ಯಪರಿಷ್ಕರಣೆಯ ಅಧ್ಯಕ್ಷರು ‘ಸಾಮಾಜಿಕ ಸಮಾನತೆ ಮತ್ತು ಸ್ತ್ರೀಸ್ವಾತಂತ್ರ್ಯದ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ತುರುಕಬೇಕಾಗಿಲ್ಲ’ ಎಂದು ಹೇಳಿರುವುದನ್ನು; ಹೆಣ್ಣನ್ನು ಸಂಪತ್ತಿಗೆ ಸಮೀಕರಿಸುತ್ತ, ಅದರ ವ್ಯಾಮೋಹ ತರುವ ಕೇಡನ್ನು ಬಣ್ಣಿಸುವ ಪಾಠವನ್ನು ಸೇರಿಸಿರುವುದನ್ನು ಗಮನಿಸಬಹುದು.
8. ಧರ್ಮರಕ್ಷಣೆ, ದೇಶರಕ್ಷಣೆ, ಭಕ್ತಿ, ದಾನ, ತ್ಯಾಗ ಇತ್ಯಾದಿ ಮೌಲ್ಯಗಳ ನೆಪದಲ್ಲಿ ಬ್ರಾಹ್ಮಣವಾದಿ ಮೌಲ್ಯಗಳನ್ನು ಹೇರುವುದು. ಸ್ವಾರ್ಥತ್ಯಾಗದ ಹೆಸರಲ್ಲಿ ಯಜ್ಞದ ಆಚರಣೆಗಳನ್ನು ಸಮರ್ಥಿಸುವ ಪಾಠದ ಸೇರ್ಪಡೆ ಇದಕ್ಕೆ ಸಾಕ್ಷಿ.
ಮುಖ್ಯ ಪ್ರಶ್ನೆಯೆಂದರೆ, ಇಂತಹ ಪಠ್ಯಪುಸ್ತಕಗಳನ್ನು ಮಾತ್ರ ವಿರೋಧ ಮಾಡಲಾಗುತ್ತದೆಯೇ ಅಥವಾ ಈ ಪಠ್ಯಗಳನ್ನು ಒಳಗೊಂಡಂತೆ, ಅದರ ಹಿಂದಿರುವ ಸಮಾನತೆ ಮತ್ತು ಕೂಡುಬಾಳಿನ ಆಶಯವಿಲ್ಲದ, ಸಮಾಜ-ದೇಶಗಳ ಒಟ್ಟಾರೆ ಪರಿಕಲ್ಪನೆಯನ್ನು ವಿರೋಧ ಮಾಡಲಾಗುತ್ತದೆಯೇ ಎನ್ನುವುದು. ಬಿಡಿಬಿಡಿ ಸಂಗತಿಗಳಿಗೆ ಪ್ರತ್ಯೇಕವಾದ ಪ್ರತಿರೋಧ ಮತ್ತು ಹೋರಾಟ ಮಾಡುತ್ತಿರುವ ನಾವು ಜರೂರಾಗಿ ಬಿಡಿಸಿಕೊಳ್ಳಬೇಕಾದ ಸಮಸ್ಯೆಯಿದು. ಸದ್ಯಕ್ಕೆ, ಬಹುಸಂಖ್ಯಾತ ಶೂದ್ರರ ದಲಿತರ ಮೇಲೆ ಬ್ರಾಹ್ಮಣವಾದಿ ಪಠ್ಯಗಳನ್ನು ಹೇರಲಾಗುತ್ತಿದೆ ಎಂದು ಪ್ರಶ್ನೆ ಎತ್ತಲಾಗಿದೆ. ಇದು ಸರಿಯಾಗಿದೆ. ಆದರೆ ಚರ್ಚುಗಳ ಮೇಲಿನ ದಾಳಿ, ಮತಾಂತರ ಕಾಯಿದೆ, ಹಿಜಾಬ್ ಅಜಾನ್ ಹಲಾಲ್ ಪೌರತ್ವಕಾಯಿದೆ ರೈತಹೋರಾಟ ಮೊದಲಾದ ವಿಷಯಗಳು ಬಂದಾಗ, ಇದು ಮುಸ್ಲಿಮರು ಕ್ರೈಸ್ತರು ರೈತರು ಬಗೆಹರಿಸಿಕೊಳ್ಳಬೇಕಾದ ಸಮಸ್ಯೆ ಎಂದು ಹಲವರು ಪರಿಭಾವಿಸಿದ್ದುಂಟು; ಆದರೆ, ಬಡತನದ ಹಸಿವಿನ ಪ್ರಶ್ನೆಯನ್ನು ಎತ್ತದಿರುವುದು, ಮುಸ್ಲಿಂ ಕ್ರೈಸ್ತದ್ವೇಷ, ಸ್ತ್ರೀಯನ್ನು ಮನೆಗೆ ಸೀಮಿತಗೊಳಿಸುವುದು, ದಲಿತ-ಶೂದ್ರರನ್ನು ಕಾಲಾಳುಗಳನ್ನಾಗಿ ಪರಿವರ್ತಿಸುವುದು, ವಿಜ್ಞಾನದ ವಿರೋಧ, ಪ್ರಗತಿಪರ ಬ್ರಾಹ್ಮಣ ಚಿಂತಕರನ್ನು ಒಳಶತ್ರುಗಳೆಂದು ದ್ವೇಷಿಸುವುದು, ಯುದ್ಧದ ಹಿಂಸೆಯನ್ನು ವೈಭವೀಕರಿಸುವುದು-ಇವೆಲ್ಲವೂ ಪರಸ್ಪರ ಸಂಬಂಧವುಳ್ಳವು; ಪರ್ಯಾಯ ಸಮಾಜ ಮತ್ತು ದೇಶವನ್ನು ಕಟ್ಟುವ ಪರಿಕಲ್ಪನೆಗೆ ಸಂಬಂಧಿಸಿದವು ಎಂದು ಹೆಚ್ಚಿನವರು ಆಲೋಚಿಸುವುದಿಲ್ಲ.

ಪಠ್ಯಪುಸ್ತಕದ ಪರಿಷ್ಕರಣೆ ಮತೀಯ ನೆಲೆಗಟ್ಟಿನಲ್ಲಿ ದೇಶಕಟ್ಟುವ ದೊಡ್ಡ ಯೋಜನೆಯ ಒಂದು ಉಪಕರಣವೆಂಬ ಸತ್ಯವು ಈಗ ಬಹಳ ಜನರಿಗೆ ಅರ್ಥವಾದಂತಿದೆ. ಇದನ್ನು ಅರಿಯುವ ಎಚ್ಚರದ ಕ್ರಮವನ್ನು ಕಲಿಸಿದ- ಬಸವಣ್ಣ, ಸಿದ್ಧಾರೂಢಸ್ವಾಮಿ, ನಾಲ್ವಡಿಕೃಷ್ಣರಾಜ ಒಡೆಯರ್, ಕುವೆಂಪು, ತೇಜಸ್ವಿ, ಲಂಕೇಶ್, ದೇವರಾಜ ಅರಸು, ಶಾಂತವೇರಿ ಮೊದಲಾದವರುಳ್ಳ- ಪರಂಪರೆ ಕರ್ನಾಟಕದಲ್ಲಿ ಇರುವುದು. ಎಂತಲೇ ಈಗ ಶಾಲಾಪಠ್ಯ ವಿಷಯದಲ್ಲಿ, ಬಿಜೆಪಿ ಆಡಳಿತವುಳ್ಳ ಇತರೆ ರಾಜ್ಯಗಳಲ್ಲಿ ಕಾಣದ ಸಾರ್ವಜನಿಕ ಪ್ರತಿರೋಧವು ಕರ್ನಾಟಕದಲ್ಲಿ ಬಿರುಗಾಳಿ ರೂಪತಾಳುತ್ತಿದೆ. ಇದು ಪಠ್ಯಗಳಂತಹ ಶೈಕ್ಷಣಿಕ ಸಂಗತಿಯ ನೆಲೆಯಿಂದ ಸಾಮಾಜಿಕ ಪ್ರಶ್ನೆಯಾಗಿ ಬದಲಾಗುತ್ತಿದೆ. ಈ ಸಾಮಾಜಿಕ ಪ್ರಶ್ನೆಯು ಚಳವಳಿಯಾಗಿ, ರಾಜಕೀಯ ಪರಿಣಾಮವುಂಟು ಮಾಡುವ ಅಂದರೆ ರಾಜ್ಯಾಧಿಕಾರ ಪಡೆಯುವ ಪ್ರಶ್ನೆಯಾಗಿ ರೂಪಾಂತರ ಪಡೆಯುತ್ತದೆಯೇ? ಇದು ನಿರ್ಣಾಯಕ ಪ್ರಶ್ನೆ.
ಮತೀಯವಾದಕ್ಕೆ ಮುಸ್ಲಿಮರ ಕ್ರೈಸ್ತರ ಕಮ್ಯುನಿಸ್ಟರ ಪ್ರತಿರೋಧವನ್ನು ಸುಲಭವಾಗಿ ಅವುಗಳ ಹಿಂದಿನ ಧರ್ಮ ಮತ್ತು ಸಿದ್ಧಾಂತಗಳ ವಿದೇಶಿಮೂಲದ ಪ್ರಶ್ನೆಯನ್ನು ಉಲ್ಲೇಖಿಸಿ, ಅವನ್ನು ಅಭಾರತೀಯ ರಾಷ್ಟ್ರೀಯವಿರೋಧಿ ಎಂದು ದಮನಿಸುವುದು ಸುಲಭ. ಈ ತರ್ಕವನ್ನು ಸಾರ್ವಜನಿಕರಿಗೆ ಒಪ್ಪಿಸಬಹುದು ಕೂಡ ಸರಳ. ಆದರೆ ಅದಕ್ಕೆ ನುಂಗಲಾರದ ತುತ್ತಾಗುವುದು ಬ್ರಾಹ್ಮಣ ವರ್ಸಸ್ ಶೂದ್ರ/ದಲಿತರ ಮುಖಾಮುಖಿಯ ಸಾಮಾಜಿಕ ವಿನ್ಯಾಸ. ಯಾಕೆಂದರೆ ಆಗ ‘ಬಹುಸಂಖ್ಯಾತರ ಭಾವನೆಗೆ ಬೆಲೆಯಿರಬೇಕು’ ಎಂದು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅದು ಮಂಡಿಸಿದ ವಾದವೇ, ಸಾಮಾಜಿಕ ನೆಲೆಯಲ್ಲಿ ಅದಕ್ಕೆ ತಿರುಗಿ ಅನ್ವಯವಾಗುತ್ತಿರುತ್ತದೆ. ಈ ಸಾಮಾಜಿಕ ಪ್ರಶ್ನೆಯು ಅದು ನಿಂತನೆಲವನ್ನು ಅಲುಗಿಸುತ್ತದೆ. ಇಂತಹ ಸಾಮಾಜಿಕ ನೆಲೆಯ ಪ್ರತಿರೋಧ ಬಂದಾಗಲೆಲ್ಲ, ಅದು ಹಿಂದು-ಮುಸ್ಲಿಂ ಭಾವನಾತ್ಮಕ ಪ್ರಶ್ನೆಯನ್ನೆತ್ತಿ, ಗಮನ ಬದಲಿಸುವ ಹಳೇ ತಂತ್ರವನ್ನು ಪ್ರಯೋಗಿಸಬಹುದು- ಜಾತಿ ಮೀಸಲಾತಿಯ ಪ್ರಶ್ನೆ ಬಂದಾಗ ರಾಮಜನ್ಮಭೂಮಿ ಪ್ರಶ್ನೆಯನ್ನೆತ್ತಿದಂತೆ. ನಾರಾಯಣಗುರುಗಳ ಟ್ಯಾಬ್ಲೊ ವಿಷಯ ಬಂದಾಗ ಹಿಜಾಬ್ ಪ್ರಶ್ನೆಯನ್ನೆತ್ತಿದಂತೆ. ಅದರ ಈ ಸೋಶಿಯಲ್ ಇಂಜಿನಿಯರಿಂಗ್ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುವಷ್ಟು ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಕೀಯ ಚಾಣಾಕ್ಷತನ ಕಾಂಗ್ರೆಸ್ ಜೆಡಿಎಸ್‌ಗಳಲ್ಲಿ ಇಲ್ಲ. ಒಂದೊಮ್ಮೆ ಇದ್ದಿದ್ದರೆ, ಕಳೆದ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶವಿರದ ಪಕ್ಷ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿತ್ತೇ? ಬಿಜೆಪಿಯೇತರ ಪಕ್ಷಗಳು ಕೂಡಿ ಮಾಡಿದ ಸರ್ಕಾರವು ಐದು ವರ್ಷ ಇದ್ದಿದ್ದರೆ, ಹಿಜಾಬ್, ಹಲಾಲ್, ಪಠ್ಯಪುಸ್ತಕದಂತಹ ವಿವಾದಗಳು ಈ ಸ್ವರೂಪದಲ್ಲಿ ಏಳುತ್ತಿದ್ದವೇ?
ಸದ್ಯದ ಶಾಲಾಪಠ್ಯದ ವಿಷಯವು ಕೇವಲ ಶೈಕ್ಷಣಿಕವಾದುದಲ್ಲ. ಕೂಡುಬಾಳಿನ ಮತ್ತು ಮೇಲ್ಜಾತಿ ಯಜಮಾನಿಕೆಯ ತರತಮದ ಭಾರತ ಕಟ್ಟುವ ಎರಡು ಕಲ್ಪನೆಗಳ ಮುಖಾಮುಖಿಯ ಸಂಗತಿಯೂ ಆಗಿದೆ. ಇದು ಬ್ರಾಹ್ಮಣವಾದಿ ಮೌಲ್ಯಗಳನ್ನು ಹೇರುವ, ಉಳಿದವರನ್ನು ದಮನಕ್ಕೆ ಗುಲಾಮಗಿರಿಗೆ ಒಳಪಡಿಸುವ ಒಂದು ಸಮಾಜ ಮತ್ತು ರಾಷ್ಟ್ರವನ್ನು ರೂಪಿಸುವ ಹಾದಿಯ ಒಂದು ಹೆಜ್ಜೆ ಅಥವಾ ಬುನಾದಿಯ ಒಂದು ಕಲ್ಲು ಎಂದು ಪರಿಭಾವಿಸದೆ ಹೋದರೆ, ಪ್ರತಿರೋಧಕ್ಕೆ ಆಳವಾದ ಅರ್ಥ ದಕ್ಕುವುದಿಲ್ಲ. ಪರಿಣಾಮಕಾರಿಯಲ್ಲದ ಮತ್ತು ತಾರ್ಕಿಕ ಅಂತ್ಯ ಮುಟ್ಟದ ಪ್ರತಿರೋಧಗಳಲ್ಲೇ ಭಾರತದ ಶಕ್ತಿ ವ್ಯಯವಾಗಿ ಹೋಗಿಬಿಡುತ್ತದೆ.

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.
ಇದನ್ನೂ ಓದಿ: ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಮನುಸ್ಮೃತಿಯ ರೋಬೊಟ್‌ಗಳಾಗಬೇಕಿದೆ: ಪ್ರಿಯಾಂಕ್ ಖರ್ಗೆ ಆಕ್ರೋಶ


