ನಿಂತಿರುವವನಿಗೆ ಗೊತ್ತಾಗದ ಹಾಗೆ ಅವನ ಚಡ್ಡಿ ಕಳಚಿದರೆ ಅವನೇ ಸಾಹುಕಾರ (ಯಜಮಾನ)’ ಎಂಬುದು ಪಲಾಸ ಸಿನೆಮಾದಲ್ಲಿ ಬರುವ ದೊಡ್ಡ ಯಜಮಾನನ ಡೈಲಾಗ್. ಮೇಲ್ಜಾತಿ ಭೂಮಾಲೀಕರ ಯಜಮಾನಿಕೆಯ ದರ್ಪ ದಬ್ಬಾಳಿಕೆಗೆ ನಲುಗಿದ ಕೆಳಜಾತಿಯ ಸಮುದಾಯ. ದೌರ್ಜನ್ಯವನ್ನು ಸಹಿಸದೆ, ಎಚ್ಚೆತ್ತ ಕೆಳಜಾತಿಯ ಯುವಕರು ಹಾಗೂ ಭೂಮಾಲೀಕನ ನಡುವೆ ನಡೆಯುವ ಸಂಘರ್ಷದ ಕತೆಯೇ “ಪಲಾಸ 1978” ಸಿನೆಮಾ.
ಟಾಲಿವುಡ್ ಎಂದಾಕ್ಷಣ ಬಾರಿ ಬಡ್ಜೆಟ್‍ನ ಹಾಗೂ ಅಬ್ಬರಿಸಿ ಬೊಬ್ಬಿರಿಯುವ ಹಿರೋಗಳ ಸಿನೆಮಾಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಆಗಾಗ ತೆಲುಗು ಸಿನೆಮಾ ರಂಗದಲ್ಲಿಯೂ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳು ಮಿಣುಕು ಹುಳುಗಳಂತೆ ಬಂದು ಹೋಗುತ್ತಲೇ ಇವೆ. ಪಲಾಸ 1978 ಸಿನೆಮಾ ಇತ್ತೀಚೆಗೆ ತೆರೆಕಂಡ ಅಂತಹದ್ದೇ ಒಂದು ಗಮನಾರ್ಹ ಸಿನೆಮಾ.
ಈ ಸಿನೆಮಾ ಗ್ರಾಮೀಣ ಭಾರತದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ಚರ್ಚೆ ಮಾಡುವ ದಿಕ್ಕಿನಲ್ಲಿ ಯಶಸ್ವಿಯಾಗಿದೆ. ಮೋಹನ್ ರಾವ್, ರಂಗರಾವ್ ಎಂಬ ಕೆಳಜಾತಿಯ ಯುವಕರು ಮತ್ತು ಆಸ್ತಿ ಅಂತಸ್ತು ಇರುವ ಮೇಲ್ಜಾತಿಯ ಇಬ್ಬರು ಸಹೋದರರ ನಡುವೆ ನಡೆಯುವ ಕಥೆಯಾಗಿದ್ದರೂ ಸಹ, ಜಾತಿ ವ್ಯವಸ್ಥೆ ಎಂಬ ಜೇಡರಬಲೆಯಲ್ಲಿ ಸಿಕ್ಕಿಕೊಳ್ಳುವ ದಲಿತರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದು ತೋರಿಸಿದೆ.
ಸಿನೆಮಾದಲ್ಲಿ ಬರುವ ಸಬಾಸ್ಟಿಯನ್ ಎಂಬ ಪೊಲೀಸ್ ಪಾತ್ರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ ಹಾಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು, ಆಗಲೇ ನಮ್ಮ ಉದ್ದಾರ ಎಂಬ ಚರ್ಚೆಯನ್ನು ಎತ್ತುತ್ತದೆ. ಆದರೆ, ಜಾತಿ ವ್ಯವಸ್ಥೆ ತಾನು ಚಾಚಿರುವ ಕಬಂಧಬಾಹುಗಳನ್ನು ಕಾರ್ಯಂಗ, ಶಾಸಕಾಂಗವಲ್ಲದೇ ನ್ಯಾಯಾಂಗದವರೆಗೂ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದು ಸಬಾಸ್ಟಿಯನ್‍ಗೆ ಅರ್ಥವಾಗುವುದು, ಆತ ನಡೆಸುತ್ತಿದ್ದ ಕೇಸ್ ಸೋಲುಂಡ ಸಂದರ್ಭದಲ್ಲಿ. ಪೊಲೀಸ್ ಆಗಿದ್ದ ಸಬಾಸ್ಟಿಯನ್ ಕೊನೆಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಅನಿವಾರ್ಯತೆಗಳನ್ನು ಎದುರಿಸಲೇಬೇಕೆಂದು ಮೋಹಾನ್‍ರಾವ್‍ಗೆ ಚಿಕ್ಕ ಸಾಹುಕಾರನನ್ನು ಕೊಲ್ಲಲು ಹೇಳುತ್ತಾನೆ.
ಸಬಾಸ್ಟಿಯನ್ ಈ ಮೂಲಕ ಮೇಲ್ಜಾತಿಯ ದೌರ್ಜನ್ಯದ ಮನಸ್ಥಿತಿಯನ್ನು ಕೊಲ್ಲಲು ಇರುವ ದುಬಾರಿ ಸಾಧ್ಯತೆಗಳಿಗೆ ಪ್ರತೀಕವಾಗಿ ನಿಲ್ಲುತ್ತಾನೆ. ಸಬಾಸ್ಟಿಯನ್ ಮತ್ತು ಮೋಹನ್ ರಾವ್ ಚರ್ಚೆಗಳು ದಲಿತ ಯುವಜನರ ಹೊಸಪೀಳಿಗೆಯ ಪ್ರಶ್ನೆಗಳಂತೆ ಕಾಣಿಸುತ್ತವೆ. ಇನ್ನೂ ದೊಡ್ಡ ಯಜಮಾನನ ಮನೆಯಲ್ಲಿ ನಡೆಯುವ ಚರ್ಚೆಗಳು ಮೇಲ್ಜಾತಿಯ ಯಜಮಾನರ ಕುತಂತ್ರಗಳನ್ನು ಬಯಲುಗೊಳಿಸುತ್ತವೆ.
ಪಲಾಸ ಸಿನೆಮಾ ಗ್ರಾಮೀಣ ಭಾಗದಲ್ಲಿನ ಕೆಳಜಾತಿಯ ಜನರು ಜಾತಿಯ ಕೀಳರಿಮೆಯ ಕಾರಣಕ್ಕೆ ಪ್ರತಿಕ್ಷಣ ಹೇಗೆ ನಿಂದನೆ, ಅಪಮಾನಗಳ ಜೊತೆಗೆ ಗುದ್ದಾಡಬೇಕು ಎಂಬುದನ್ನು ತೋರಿಸಿದೆ.
1978ರಲ್ಲಿ ಪಲಾಸ ಎಂಬ ಹಳ್ಳಿಯಲ್ಲಿ ನಡೆದ ನೈಜ ಘಟನೆಗಳ ಆಧಾರವಾಗಿ ಬಂದ ಈ ಸಿನೆಮಾ 2020ರಲ್ಲೂ ನಡೆಯತ್ತಿರುವ ಜಾತಿದೌರ್ಜನ್ಯಗಳು, ಜಾತಿ ಕಾರಣಕ್ಕಾಗಿ ನಡೆಯುವ ಕೊಲೆಗಳು, ಅತ್ಯಾಚಾರಗಳನ್ನು ಹೇಗೆ ನೋಡಬೇಕೆಂಬುದನ್ನು ತೋರಿಸುತ್ತದೆ. ಈಗಲೂ ಹಳ್ಳಿಗಳಲ್ಲಿ ಮೇಲ್ಜಾತಿ ಕೆಳಜಾತಿಗಳ ನಡುವೆ ನಡೆಯುತ್ತಿರುವ ಗಲಾಟೆಗಳು ಸಾಮಾನ್ಯವಾಗಿವೆ ಇನ್ನೂ ಸಹ ಜಾತಿ ಮನಸ್ಥಿತಿಯೆಂಬುದು ಬದಲಾಗದೇ ಉಳಿದುಬಿಟ್ಟಿರುವುದಕ್ಕೆ ಈ ಸಿನೆಮಾ ಸಾಕ್ಷಿಯನ್ನೊದಗಿಸಿದೆ.
ಪಲಾಸ ಗ್ರಾಮೀಣ ಭಾರತದ ದೈನಂದಿನ ವಾಸ್ತವಕ್ಕೆ ಸಾಕ್ಷಿಯಾಗಿ ನಿಂತಿದೆ. ಚಿಕ್ಕ ಯಜಮಾನನ ಪಾತ್ರ ಮಾಡಿರುವ ರಘುಕುಂಚೆ ಈ ಸಿನೆಮಾಕ್ಕೆ ವಿಶೇಷವಾದ ಸಂಗೀತವನ್ನು ನೀಡಿದ್ದಾರೆ. ಹಾಡು ಕುಣಿತವನ್ನು ರಕ್ತಗತವಾಗಿಸಿಕೊಂಡಿರುವ ಕೆಳಜಾತಿಯ ಜನಕ್ಕೆ ತಮ್ಮ ಕಲೆಯೂ ಸಹ ದೊಡ್ಡವರ ಕಣ್ಣುಕುಕ್ಕುವ ರೀತಿ ಮೋಹನ್ ರಾವ್‍ಗೆ ಬಾಲ್ಯದಲ್ಲಿಯೇ ಅನುಭವವಾಗುತ್ತದೆ. ಇದು ಕಲೆಯಲ್ಲಿನ ಜಾತಿ ರಾಜಕಾರಣವನ್ನು ಎತ್ತಿತೋರಿಸುತ್ತದೆ. ಪಲಾಸ ಸಿನೆಮಾ ಖಂಡಿತ ಟಾಲಿವುಡ್‍ನಲ್ಲಿ ದಲಿತರ ಸಮಸ್ಯೆಗಳನ್ನು ಪ್ರಶ್ನಿಸುವ ಮತ್ತು ಮತ್ತು ಜಾತಿ ನಿರ್ಮೂಲನೆಯ ಬಗ್ಗೆ ಚರ್ಚಿಸುವ ಸಿನೆಮಾಗಳಿಗೆ ಮೈಲಿಗಲ್ಲಾಗಲೆಂದು ಆಶಿಸೋಣ. ಇನ್ನು ನಿರ್ದೇಶಕ ಕರಣಕುಮಾರ ಮೊದಲ ಸಿನೆಮಾದಲ್ಲೇ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ.
ಇದನ್ನೂ ಓದಿ: ಸೋನು ಸೂದ್ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್


