ಈ ವರ್ಷದ ದೆಹಲಿ ಪ್ರವಾಹದಲ್ಲಿ ಯಾವುದೇ ವಿಶಿಷ್ಟತೆ ಇಲ್ಲ. ಒಂದು ವೇಳೆ ವಿಶೇಷ ಹುಡುಕಲೇಬೇಕೆಂದರೆ ಇವಿಷ್ಟಿವೆ: ಈ ಬಾರಿ ಟಿವಿ ಕ್ಯಾಮೆರಾಗಳು ಎಲ್ಲಿ ತಲುಪಬಹುದೋ, ಎಲ್ಲಿ ಅಧಿಕಾರ ಕೇಂದ್ರವಿದೆಯೋ, ಎಲ್ಲಿಯ ನೋವು ದೇಶಕ್ಕೆ ಕಾಣಿಸುತ್ತೋ ಅಲ್ಲಿಗೆ ಪ್ರವಾಹ ಬಂದಿದೆಯಷ್ಟೇ.
ಅಂದಹಾಗೆ ದೇಶದಲ್ಲಿ ಪ್ರತಿ ವರ್ಷ ಹಲವೆಡೆ ಪ್ರವಾಹ ಬರುತ್ತದೆ. ಪ್ರತಿ ವರ್ಷ ಸರಾಸರಿ 1,600 ಜನರು ಇದರಿಂದ ಸಾವಿಗೀಡಾಗುತ್ತಾರೆ. ಅಸ್ಸಾಂನಲ್ಲಿ ದೊಡ್ಡ ಪ್ರದೇಶಗಳು ಜಲಾವೃತವಾಗುತ್ತವೆ, ಮನುಷ್ಯರ ಜೀವಹಾನಿ ಹಾಗೂ ಪಶುಗಳ ನಷ್ಟ ಆಗುತ್ತದೆ. ಪ್ರತಿ ವರ್ಷ ಬಿಹಾರದಲ್ಲಿ ಲಕ್ಷಗಟ್ಟಳೆ ಹೆಕ್ಟೇರ್ ಜಮೀನಿನ ಮೇಲೆ ಪ್ರವಾಹದ ನೀರು ತುಂಬುತ್ತದೆ ಹಾಗೂ ಕೆಲವು ಬಾರಿಯಂತೂ ತಿಂಗಳುಗಟ್ಟಳೇ ನೀರು ಅಲ್ಲಿಯೇ ನಿಂತಿರುತ್ತದೆ. ಆ ಪ್ರವಾಹದ ಬಗ್ಗೆ ಯಾರೂ ಕ್ಯಾರೆ ಅನ್ನುವುದಿಲ್ಲ. ಈ ವರ್ಷ ನಾವು ಪ್ರವಾಹ ನೋಡಲು ನಮ್ಮ ಕಣ್ಣುಗಳನ್ನು ತೆರೆದಿರುವಾಗ, ಪ್ರವಾಹದ ಭೀಕರತೆಗೆ ತಮ್ಮ ಹೃದಯ ತೆರೆದಿರುವಾಗ, ನಾವು ನಮ್ಮ ಮನದ ಬಾಗಿಲನ್ನೂ ತೆರೆಯಬಹುದೇ? ಈ ಪ್ರವಾಹದಿಂದ ಯಾವುದಾದರೂ ಪಾಠ ಕಲಿಯಬಹುದೇ?
ಎಲ್ಲಾ ಪ್ರವಾಹಗಳು ತಮ್ಮೊಂದಿಗೆ ಆರೋಪಗಳ, ಕುಂಟುನೆಪಗಳ ಮತ್ತು ಸುಳ್ಳುಗಳ ಪ್ರವಾಹವನ್ನೂ ಕರೆ ತರುತ್ತವೆ. ಈ ಬಾರಿ ಪ್ರವಾಹ ದೆಹಲಿಯಲ್ಲಿ ಬಂದಿರುವುದರಿಂದ ಸ್ವಾಭಾವಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪಗಳ ಪ್ರವಾಹದ ಮಟ್ಟವೂ ಹೆಚ್ಚೇ ಇದೆ. ಹರಿಯಾಣವು ಉದ್ದೇಶಪೂರ್ವಕವಾಗಿ ಹಥನಿಕುಂಡ ಬ್ಯಾರೇಜ್‌ನಿಂದ ಅವಶ್ಯಕತೆಗಿಂತ ಹೆಚ್ಚು ನೀರು ಬಿಟ್ಟಿತೇ? ದೆಹಲಿಯ ಮುಖ್ಯಮಂತ್ರಿಯವರು ಪ್ರವಾಹ ನಿಯಂತ್ರಣದ ವಾರ್ಷಿಕ ಸಭೆ ಮಾಡಲಿಲ್ಲವೇ? ದೆಹಲಿ ಸರಕಾರವು ಕಟ್ಟಿಕೊಳ್ಳುವ ನೀರನ್ನು ಕ್ಲಿಯರ್ ಮಾಡುವ ಯಂತ್ರವನ್ನು ಸರಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿತೆ? ಅಧಿಕಾರಿಗಳು ಎನ್‌ಡಿಆರ್‌ಎಫ್ ಮತ್ತು ಸೈನ್ಯವನ್ನು ಕರೆಸುವಲ್ಲಿ ವಿಳಂಬ ಮಾಡಿದರೆ? ಪ್ರವಾಹಕ್ಕೆ ಸಂಬಂಧಿಸಿದ ಆರೋಪ ಪ್ರತ್ಯಾರೋಪಗಳ ಈ ಕಸರತ್ತಿನಿಂದ ಗಮನವು ಸಂಪೂರ್ಣವಾಗಿ ರಾಜಕೀಯ ಗಿಮಿಕ್‌ಗಳಿಗೆ ಸೀಮಿತವಾಗಿಬಿಡುತ್ತದೆ ಹಾಗೂ ಪ್ರವಾಹಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳು ಮುಳುಗಿಹೋಗುತ್ತವೆ ಎಂಬ ಆತಂಕ ಕಾಣಿಸಿಕೊಂಡಿದೆ. ಮತ್ತೊಮ್ಮೆ ನಾವು ದೊಡ್ಡದೊಡ್ಡ ಸುಳ್ಳುಗಳ ಪ್ರವಾಹದಲ್ಲಿ ಮುಳುಗಲಿದ್ದೇವೆ.
ಪ್ರವಾಹಕ್ಕೆ ಸಂಬಂಧಿಸಿದ ಮೊದಲ ದೊಡ್ಡ ಸುಳ್ಳು ಏನೆಂದರೆ, ಪ್ರವಾಹ ಕೇವಲ ಒಂದು ನೈಸರ್ಗಿಕ ದುರ್ಘಟನೆ ಎಂಬುದು. ಪ್ರವಾಹ ಬಂದಾಗಲೆಲ್ಲ ಆಗ ಸರಕಾರದಲ್ಲಿ ಇದ್ದವರೆಲ್ಲರೂ ಈ ಸುಳ್ಳಿನ ಆಶ್ರಯ ಪಡೆದುಕೊಳ್ಳುತ್ತಾರೆ. ನಿಜ ಏನೆಂದರೆ ಪ್ರವಾಹ ಎಂಬುದು ಭೂಕಂಪದಂತಹ ನೈಸರ್ಗಿಕ ವಿಕೋಪವಲ್ಲ; ಭೂಕಂಪನ ಯಾವಾಗಲಾದರೂ ಸಂಭವಿಸಬಲ್ಲದು. ಪ್ರವಾಹಕ್ಕೆ ಒಂದು ನಿಯಮವಿದೆ, ಕ್ಯಾಲೆಂಡರ್ ಇದೆ, ಮಾರ್ಗವಿದೆ. ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಪ್ರವಾಹ ಯಾವಾಗ ಮತ್ತು ಎಲ್ಲಿ ಬರುತ್ತೆ ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಹಾಗಾಗಿಯೇ ಪ್ರವಾಹ ಬರುವುದು ತನ್ನಷ್ಟಕ್ಕೇ ಒಂದು ದುರ್ಘಟನೆ ಅಲ್ಲ; ಪ್ರವಾಹಗಳು ತನ್ನಿಂದ ಆಗುವ ಜೀವ ಮತ್ತು ಇತರ ಹಾನಿಗಳನ್ನು ತಪ್ಪಿಸಬಹುದಾದಂತ ದುರ್ಘಟನೆಗಳಾಗಿವೆ.
ಇದಕ್ಕೆ ವ್ಯತಿರಿಕ್ತವಾಗಿ ಹೇಳುವ ಎರಡನೆಯ ಸುಳ್ಳು ಏನೆಂದರೆ, ಪ್ರವಾಹವನ್ನು ಸಂಪೂರ್ಣವಾಗಿ ಮಾನವ, ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಧಾನಗಳಿಂದ ನಿಯಂತ್ರಿಸಬಹುದು ಮತ್ತು ಪ್ರಕೃತಿಯ ಹರಿವನ್ನು ಸಂಪೂರ್ಣವಾಗಿ ಬದಲಿಸಬಹುದು ಎಂಬುದು. ಆಧುನಿಕತೆಯ ಇಂತಹ ಅಹಂಕಾರದಿಂದಾಗಿ ದೇಶದಲ್ಲಿ ಕೆಲವು ಕಡೆ ಪ್ರವಾಹ ನಿಯಂತ್ರಣ ಕಾರ್ಯಕ್ರಮ ನಡೆಸಲಾಯಿತು, ಒಡ್ಡುಗಳನ್ನು ನಿರ್ಮಿಸಲಾಯಿತು, ದುಡ್ಡನ್ನು ನೀರಿನಂತೆ ಖರ್ಚು ಮಾಡಲಾಯಿತು. ಸಾಮಾನ್ಯವಾಗಿ ಇಂತಹ ಸರಕಾರಿ ಪ್ರಯತ್ನಗಳಿಂದ ಏನನ್ನೂ ಸಾಧಿಸಲು ಆಗಲಿಲ್ಲ; ಬಿಹಾರದ ಕೋಸಿ ನದಿಗೆ ಒಡ್ಡನ್ನು ನಿರ್ಮಿಸುವ ವಿಫಲ ಪ್ರಯತ್ನವು ಈ ಸುಳ್ಳಿನ ಒಂದು ದೊಡ್ಡ ಜೀವಂತ ಉದಾಹರಣೆಯಾಗಿದೆ. ಮಳೆ, ಅತಿವೃಷ್ಟಿ, ನದಿಯಲ್ಲಿ ಪ್ರವಾಹ, ನದಿಯು ತನ್ನ ತಟದಿಂದ ಹೊರಗೆ ಹರಿಯುವುದು, ಇವೆಲ್ಲವೂ ಸಾಮಾನ್ಯ ನೈಸರ್ಗಿಕ ಘಟನೆಗಳಾಗಿವೆ. ನಾವು ನೀರಿನ ಹರಿವಿನೊಂದಿಗೆ ಜೀವಿಸುವುದನ್ನು ಕಲಿತುಕೊಳ್ಳಬೇಕಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮಿತಿ ಮೀರಿದ ಪ್ರವಾಹ ಪರಿಸ್ಥಿತಿ, ಅಪಾಯದ ಮಟ್ಟ ತಲುಪಿದ ಯಮುನಾ ನದಿ – ಕಾರಣಗಳೇನು?
ಪ್ರವಾಹಕ್ಕ ಸಂಬಂಧಿಸಿದ ಈ ಎರಡೂ ಸುಳ್ಳುಗಳು ಒಂದು ದೊಡ್ಡ ಸತ್ಯವನ್ನು ಮರೆಮಾಚುತ್ತವೆ, ಅದು ಪ್ರವಾಹದ ಮೂಲ ಕಾರಣ ಪ್ರಕೃತಿ ಅಲ್ಲ, ಬದಲಾಗಿ ಅದು ಮನುಷ್ಯರು ಎಂಬುದನ್ನು. ಪ್ರವಾಹದ ವಿನಾಶದ ಬುಡದಲ್ಲಿ ನಾವು ವಿಕಾಸ ಎಂದು ಕರೆಯುವ ದುರಾಸೆಯಿದೆ. ನಗರ ಪ್ರದೇಶಗಳಲ್ಲಿ ನಾವು ನದಿಯ ನೈಸರ್ಗಿಕ ಹರಿವಿನೊಂದಿಗೆ ಎಷ್ಟು ಆಟ ಆಡಿದ್ದೇವೆಂದರೆ, ಅದರಿಂದ ಪ್ರವಾಹ ಎಂಬ ಸಾಮಾನ್ಯ ನೈಸರ್ಗಿಕ ಘಟನೆಯು ಈಗ ದುರ್ಘಟನೆಯಾಗಿ ಪರಿವರ್ತನೆಯಾಗಿದೆ.
ನೀರಿನ ಪ್ರಶ್ನೆಯ ಮೇಲೆ ಅನೇಕ ವರ್ಷಗಳಿಂದ ವಿಶ್ವಾಸಾರ್ಹ ಅಧ್ಯಯನ ನಡೆಸುತ್ತಿರುವ ಹಿಮಾಂಶು ಠಕ್ಕರ್ ಮತ್ತು ಅವರ ಸಂಸ್ಥೆಯ SANDRP (South Asian Network on Dam River and People) ದೆಹಲಿಯಲ್ಲಿ ಕಳೆದ ವಾರ ಬಂದ ಪ್ರವಾಹದ ಆರಂಭಿಕ ವಿಶ್ಲೇಷಣೆ ಮಾಡಿದ್ದಾರೆ; ಈ ವಿಶ್ಲೇಷಣೆ ಈ ಸತ್ಯವನ್ನು ಎತ್ತಿಹಿಡಿಯುತ್ತದೆ: ಈ ಬಾರಿ ಯಮುನಾ ನದಿಯಲ್ಲಿ ಬಂದ ಪ್ರವಾಹದ ಪ್ರಮುಖ ಕಾರಣ ಅಚಾನಕ್ಕಾಗಿ ಆದ ಮಳೆ ಅಲ್ಲ ಎಂದು. ಎಲ್ಲಕ್ಕಿಂತ ಹೆಚ್ಚು ಮಳೆ ಉತ್ತರ ಪ್ರದೇಶ ರಾಜ್ಯದ ಪ್ರದೇಶಗಳಲ್ಲಿ ಆಗಿದ್ದು, ಆ ಪ್ರದೇಶಗಳಿಂದ ನೀರು ಯಮುನಾ ನದಿಗೆ ಸೇರಿಕೊಳ್ಳುವುದಿಲ್ಲ. ಹಾಗೂ ಹಥನಿಕುಂಡ ಬ್ಯಾರೇಜ್‌ನಿಂದ ಬಿಟ್ಟ ನೀರೂ ಇದಕ್ಕೆ ಕಾರಣವಲ್ಲ. ಈ ಬಾರಿ ಜುಲೈ 11ರಂದು ಬ್ಯಾರೇಜ್‌ನಿಂದ 3.6 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು, ಆದರೆ 2010, 2013, 2018 ಹಾಗೂ 2019ರಲ್ಲಿ ಒಂದೇ ದಿನದಲ್ಲಿ ಇದಕ್ಕಿಂತಲೂ ಅತಿ ಹೆಚ್ಚು ನೀರು ಬಿಡಲಾಗಿತ್ತು. ಅಂದಹಾಗೆ ದೆಹಲಿ ತಲುಪುವುದಕ್ಕಿಂತ ಮುನ್ನ ಇರುವ ಐದು ಮಾನಿಟರಿಂಗ್ ಕೇಂದ್ರಗಳಲ್ಲಿ ಎಲ್ಲಿಯೂ ಯಮುನೆ ಅಪಾಯದ ಮಟ್ಟಕ್ಕಿಂತ ಮೇಲೆ ತಲುಪಿದ್ದಿಲ್ಲ.
ಈ ವರದಿಯು ಈ ಪ್ರವಾಹಕ್ಕೆ ಪ್ರಮುಖವಾಗಿ ಮನುಷ್ಯರ ಹಸ್ತಕ್ಷೇಪವನ್ನೇ ಹೊಣೆಯಾಗಿಸುತ್ತದೆ. ಇದರಲ್ಲಿ ಎಲ್ಲಕ್ಕಿಂತ ಪ್ರಮುಖ ಕಾರಣ, ಯಮುನಾದ ಸುತ್ತಮುತ್ತಲಿನ ಖಾಲಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು, ಅದನ್ನು ದೆಹಲಿಯಲ್ಲಿ ಯಮುನಾ ಖಾದರ್ ಕ್ಷೇತ್ರ ಎಂದು ಕರೆಯಲಾಗುತ್ತದೆ ಹಾಗೂ ತಾಂತ್ರಿಕ ಭಾಷೆಯಲ್ಲಿ ಫ್ಲಡ್‌ಪ್ಲೇನ್ಸ್ (floodpanes) ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಯಮುನೆಯ 9700 ಹೆಕ್ಟೇರ್‌ನ ಖಾದರ್ ಕ್ಷೇತ್ರದಲ್ಲಿ ಪರಿಸರದ ನಿಯಮಗಳನ್ನು ಉಲ್ಲಂಘಿಸಿ 1000 ಕ್ಕಿಂತ ಹೆಚ್ಚು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕಾಮನ್‌ವೆಲ್ತ್ ಖೇಲ್‌ಗ್ರಾಮ್ (64 ಹೆಕ್ಟೇರ್), ಅಕ್ಷರಧಾಮ ಮಂದಿರ (100 ಹೆಕ್ಟೇರ್) ಹಾಗೂ ಮೆಟ್ರೊ ಡೆಪೊ (110 ಹೆಕ್ಟೇರ್) ಸೇರಿವೆ. ಇವನ್ನು ಹೊರತುಪಡಿಸಿ, ದೆಹಲಿಯಲ್ಲಿ ಯಮುನಾ ನದಿಯ ಮೇಲೆ 26 ಸೇತುವೆ ಮತ್ತು 3 ಬ್ಯಾರೇಜ್ ನಿರ್ಮಿಸಲಾಗಿದೆ. ಇವೆಲ್ಲವುಗಳ ಕಾರಣದಿಂದ ದೆಹಲಿಗೆ ಮುಟ್ಟುತ್ತಲೇ ಯಮುನೆಯ ನೀರಿಗೆ ಹರಡುವ ಜಾಗ ಇರುವುದಿಲ್ಲ ಹಾಗೂ ಮಳೆಯ ನೀರಿನ ಸಾಮಾನ್ಯ ಹೆಚ್ಚಳವೂ ಮಾನವೀಯ ದುರ್ಘಟನೆಯಾಗಿ ಪರಿವರ್ತನೆಯಾಗುತ್ತದೆ. ದೆಹಲಿಯ ನಗರದ ಅಭಿವೃದ್ಧಿಯು ಈ ಸ್ಥಿತಿಯನ್ನು ಇನ್ನಷ್ಟೂ ಭೀಕರವಾಗಿಸುತ್ತದೆ. ನಗರೀಕರಣದ ಕಾರಣದಿಂದ ದೆಹಲಿ ಕೆರೆಗಳು ಮತ್ತು ಕೊಳ್ಳಗಳು ನಾಶಗೊಂಡಿವೆ, ಮಳೆಯ ನೀರು ಅಂತರ್ಜಲಕ್ಕೆ ಸೇರಿಕೊಳ್ಳುವುದಿಲ್ಲ, ಮಳೆ ನೀರಿನ ಹರಿವಿನ ಕಾಲುವೆಗಳು ಈಗ ಕೊಳಚೆಯಾಗಿವೆ ಹಾಗೂ ಈ ಕೊಳಚೆಯನ್ನು ಯಮುನೆಯಲ್ಲಿ ಸೇರಿಸುವುದರಿಂದ ನದಿಯ ಒಡಲು ಹೆಚ್ಚಾಗಿದೆ. ಈ ಪರಿಸ್ಥಿತಿಯ ಕಾರಣದಿಂದ ಸಾಮಾನ್ಯ ಅಥವಾ ಸ್ವಲ್ಪ ಹೆಚ್ಚು ಮಳೆ ಮತ್ತು ಸರಕಾರಿ ಆಡಳಿತದಲ್ಲಿನ ಸ್ವಲ್ಪ ನಿರ್ಲಕ್ಷವೂ ಒಂದು ದೊಡ್ಡ ದುರ್ಘಟನೆಯ ಸ್ವರೂಪ ಪಡೆದುಕೊಳ್ಳುತ್ತವೆ.
ಇದು ಹೊಸ ವಿಷಯವೇನಲ್ಲ. ಯಮುನೆಯನ್ನು ರಕ್ಷಿಸುವ ಅಭಿಯಾನದ ವತಿಯಿಂದ ದ್ವಿಜೇಂದ್ರ ಕಾಲಿಯಾ ಕಳೆದ ಮೂರು ದಶಕಗಳಿಂದ ಈ ಅಪಾಯವನ್ನು ಪದೇಪದೇ ಎತ್ತಿ ಹೇಳುತ್ತಿದ್ದಾರೆ. ಗಾಂಧೀವಾದಿ ಕಾರ್ಯಕರ್ತರಾದ ರಮೇಶ ಚಂದ್ರ ಶರ್ಮ ಅವರು ದೆಹಲಿಯ ಈ ಪ್ರವಾಹದ ಪಾಠವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ: “ತನ್ನ ಖಾದರ್‌ಅನ್ನು ಮರಳಿಕೊಡುವಂತೆ ಯಮುನೆ ರೌದ್ರರೂಪದಲ್ಲಿ ಸಂದೇಶ ನೀಡುತ್ತಿದ್ದಾಳೆ. ಯಾವ ಕ್ಷೇತ್ರದಲ್ಲಿ ದೈತ್ಯ ಕಟ್ಟಡಗಳು ಎದ್ದುನಿಂತಿವೆಯೋ, ಅವುಗಳನ್ನು ತೆಗೆದುಹಾಕಿ. ತಾಯಿಯನ್ನು ತಾಯಿಯಾಗಿಯೇ ಇರಲು ಬಿಡಿ, ಕಸದ ಬುಟ್ಟಿಯನ್ನಾಗಿಸಬೇಡಿ. ನದಿ ಕ್ಷೇತ್ರದ ಖಾದರ್‌ನ್ನು ತೆರವುಗೊಳಿಸಿ. ನದಿ ಸ್ವಾತಂತ್ರ ಕೇಳುತ್ತಿದ್ದಾಳೆ. ನದಿ ಉಳಿದರೆ ಜೀವ ಉಳಿದೀತು. ಈ ಸಂದೇಶ ಕೇಳಿಸಿಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾಗುವುದು.”
ಅಸ್ಸಾಂ ಮತ್ತು ಬಿಹಾರದಿಂದ ಕಲಿಯಬೇಕಾಗಿದ್ದ ಪಾಠವನ್ನು, ಈಗ ದೆಹಲಿಯಿಂದ ಕಲಿಯಲಿದ್ದೇವೆಯೇ?
ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


