ಭಾರತಕ್ಕೆ ಮಹಿಳಾ ಮುಖ್ಯ ನ್ಯಾಯಮೂರ್ತಿ ನೇಮಕವಾಗುವ ಸಮಯ ಬಂದಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 23 ರಂದು ನಿವೃತ್ತರಾಗಲಿರುವ ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ, ಕಳೆದ ತಿಂಗಳು ನ್ಯಾಯಮೂರ್ತಿ ರಮಣ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ.
“ನಮ್ಮ ಮನಸ್ಸಿನಲ್ಲಿ ಮಹಿಳೆಯರ ಬಗ್ಗೆ ಆಸಕ್ತಿ ಇದೆ. ನಾವು ಅದನ್ನು ಉತ್ತಮವಾಗಿ ಕಾರ್ಯಗತಗೊಳಿಸುತ್ತಿದ್ದೇವೆ. ನಮ್ಮ ವರ್ತನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಉತ್ತಮ ಅಭ್ಯರ್ಥಿಗಳನ್ನು ಪಡೆಯುವುದು ಒಂದೇ ಮುಖ್ಯ ವಿಷಯ” ಎಂದಿದ್ದಾರೆ.
ಹೈಕೋರ್ಟ್‌ಗಳಿಗೆ ತಾತ್ಕಾಲಿಕ ನ್ಯಾಯಾಧೀಶರ ನೇಮಕ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್‌ವಿ ರಮಣ ನೇಮಕ
ಮಹಿಳಾ ವಕೀಲರ ಸಂಘವನ್ನು ಪ್ರತಿನಿಧಿಸಿದ ವಕೀಲರಾದ ಸ್ನೇಹ ಖಲಿತಾ ಮತ್ತು ಶೋಭಾ ಗುಪ್ತಾ ಅವರು ಕೇವಲ 11 ಶೇಕಡಾ ಮಹಿಳೆಯರು ಮಾತ್ರ ನ್ಯಾಯಾಂಗದಲ್ಲಿದ್ದಾರೆ ಎಂದು ವಾದಿಸಿದರು. ಹೆಚ್ಚಿನ ಮಹಿಳೆಯರನ್ನು ನ್ಯಾಯಾಧೀಶರನ್ನಾಗಿ ನೇಮಿಸಬೇಕೆಂದು ಕೋರಿದರು.
“ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಧೀಶರಾಗಿ ಬರಲು ಅನೇಕ ಮಹಿಳೆಯರನ್ನು ಆಹ್ವಾನಿಸಿದ್ದಾರೆ. ಆದರೆ ಅವರೆಲ್ಲಾ ಆಹ್ವಾನವನ್ನು ನಿರಾಕರಿಸಿದ್ದಾರೆ. ಮನೆಯ ಜವಾಬ್ದಾರಿ, 12 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಜವಾಬ್ದಾರಿ ಮುಂತಾದ ವಿಚಾರಗಳನ್ನು ಹೇಳಿ ಆಹ್ವಾನ ನಿರಾಕರಿಸಿದ್ದಾರೆ ಎಂದು ಮುಖ್ಯ ನ್ಯಾಯಾಧೀಶರು ನನಗೆ ವರದಿ ಮಾಡಿವೆ. ಇವುಗಳು ನಾವು ಚರ್ಚಿಸಲು ಸಾಧ್ಯವಿಲ್ಲ” ಎಂದು ತ್ರಿಸದಸ್ಯ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದಾರೆ.
ದೇಶದ 25 ಹೈಕೋರ್ಟ್‌ಗಳಲ್ಲಿ ತೆಲಂಗಾಣ ಹೈಕೋರ್ಟ್ ಒಂದರಲ್ಲಿ ಮಾತ್ರ ಮುಖ್ಯ ನ್ಯಾಯಮೂರ್ತಿಯಾಗಿ ಹಿಮಾ ಕೊಹ್ಲಿ ಇದ್ದಾರೆ ಎಂದು ಮಹಿಳಾ ವಕೀಲರು ಪೀಠಕ್ಕೆ ತಿಳಿಸಿದ್ದಾರೆ.
661 ಹೈಕೋರ್ಟ್ ನ್ಯಾಯಾಧೀಶರಲ್ಲಿ ಕೇವಲ 73 ಮಂದಿ ಸರಿಸುಮಾರು 11.04 ರಷ್ಟು ಮಹಿಳೆಯರು ಇದ್ದಾರೆ. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರ ಮತ್ತು ಉತ್ತರಾಖಂಡದ ಐದು ಹೈಕೋರ್ಟ್‌ಗಳಲ್ಲಿ ಒಬ್ಬರು ಮಹಿಳಾ ನ್ಯಾಯಾಧೀಶರೂ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ


