Homeಮುಖಪುಟಮಲಬಾರಿನ ಟಿಪ್ಪು: ಹುತಾತ್ಮ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ...!

ಮಲಬಾರಿನ ಟಿಪ್ಪು: ಹುತಾತ್ಮ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ…!

‘ನೀವು ನನ್ನ ಕಣ್ಣುಗಳನ್ನು ಕಟ್ಟಿ ನನಗೆ ಗುಂಡಿಕ್ಕಬಾರದು.. ನಾನು ನನ್ನ ಈ ನೆಲದ ಮಣ್ಣನ್ನು ನೋಡುತ್ತಾ ಈ ಮಣ್ಣಿಗೆ ಬೀಳಬೇಕು.. ಆದುದರಿಂದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ...’ ತನ್ನ ಅಂತಿಮ ದಿನದಲ್ಲಿ ಬ್ರಿಟೀಷರ ಮುಂದೆ ಅಬ್ಬರಿಸಿದವರಿವರು

- Advertisement -
- Advertisement -

ಇಡೀ ಉಪಖಂಡದ ಚರಿತ್ರೆಯಲ್ಲಿ ಬ್ರಿಟಿಷರಿಗೆ ಅತೀ ದೊಡ್ಡ ತಲೆನೋವಾಗಿದ್ದವರು ನಮ್ಮ ಕನ್ನಡ ನಾಡಿನ ಕಣ್ಮನಿ ಟಿಪ್ಪು ಸುಲ್ತಾನ್. ಟಿಪ್ಪು ಸುಲ್ತಾನರಂತೆಯೇ ಬ್ರಿಟಿಷ್ ವಸಾಹತುಶಾಹಿಯೊಂದಿಗೆ ಕೊನೆಯುಸಿರಿನವರೆಗೂ ರಾಜಿ ಮಾಡಿಕೊಳ್ಳದೇ, ಅವರ ಆಮಿಷಗಳನ್ನೆಲ್ಲಾ ಎಡಗಾಲಲ್ಲಿ ಒದ್ದು ವೀರಮರಣವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ..!

ಅವರ ಕುರಿತಂತೆ ಮಲಯಾಳಂನಲ್ಲಿ ಹಿಟ್ ಸಿನಿಮಾ ಕೂಡಾ ಬಂದಿದೆ. ಬ್ರಿಟಿಷ್ ಪ್ರಭುತ್ವಕ್ಕೆ ದೊಗ್ಗು ಸಲಾಮು ಹೊಡೆದು ಅವರ ಬೂಟು ನೆಕ್ಕಿದ ಮಂದಿಗಳು ವಾರಿಯನ್ ಕುನ್ನತ್‌ರ ಹೋರಾಟದ ವೀರ ಕಥಾನಕಕ್ಕೆ ಮಸಿ ಬಳಿದು ಚರಿತ್ರೆಯ ಪುಟಗಳಿಂದ ಅಳಿಸುವ ಹೀನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಹೇಳಿಕೊಳ್ಳಲು ಓರ್ವ ಸ್ವಾತಂತ್ರ್ಯ ಸೇನಾನಿಯ ಹೆಸರಿಲ್ಲ. ಇದ್ದವನೊಬ್ಬ ಬ್ರಿಟಿಷರೊಂದಿಗೆ ಮಾಫಿ ಕೇಳಿ ಚರಿತ್ರೆಯಲ್ಲೂ ಜನ ಮಾನಸದಲ್ಲೂ ‘ಹೇಡಿ’ ಶಬ್ದಕ್ಕೆ ಪರ್ಯಾಯ ಹೆಸರಾಗಿ ಹೋದ.

ಇದನ್ನೂ ಓದಿ: ಕೇರಳದ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರ ‘ವಾರಿಯಂಕುನ್ನತ್ ಕುಂಞ್ಞಹ್ಮದ್ ಹಾಜಿ’ ಕುರಿತು ಸಿನೆಮಾ ಮಾಡಲಿರುವ ಪೃಥ್ವಿರಾಜ್

ಒಟ್ಟಿನಲ್ಲಿ ಚರಿತ್ರೆ ನಿರ್ಮಿಸಲಾಗದವರು ಚರಿತ್ರೆಯನ್ನು ತಿರುಚ ಹೊರಟಿದ್ದಾರೆ. ಕನ್ನಡ ನಾಡಿನ ಜನಪದರ ಲಾವಣಿಗಳಲ್ಲಿ, ಹಾಡುಗಳಲ್ಲಿ ಹೇಗೆ ಇಂದಿಗೂ ಟಿಪ್ಪು ಜೀವಂತವಾಗಿದ್ದಾರೋ.. ಹಾಗೆಯೇ ಕೇರಳದ ಜನಪದರ ಲಾವಣಿಗಳಲ್ಲಿ, ಹಾಡುಗಳಲ್ಲಿ, ಮಾಪ್ಲಾ ಪಾಟ್ಟುಗಳಲ್ಲಿ, ಕೋಲ್ಕಳಿಗಳಲಿ, ಕೈ ಕೊಟ್ಟು ಪಾಟ್ಟುಗಳಲ್ಲಿ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ ಅಮರವಾಗಿದ್ದಾರೆ.

ಯಾರು ಈ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ..?

ಮಲಪ್ಪುರಂ ಜಿಲ್ಲೆಯ ನೆಲ್ಲಿಕುತ್ತ್ ಎಂಬ ಹಳ್ಳಿಯ ಚಕ್ಕಿಪರಂಬ್ ಮನೆತನದ ಬ್ರಿಟಿಷ್ ಸಾಮ್ರಾಜ್ಯಶಾಹಿ ಹೋರಾಟದ ನೇತಾರನಾಗಿದ್ದ ಮೊಯ್ದಿನ್ ಕುಟ್ಟಿ ಹಾಜಿ ಮತ್ತು ಪರವಟ್ಟಿ ಎಂಬಲ್ಲಿನ ಶ್ರೀಮಂತ ಜಮೀನ್ದಾರ ಕುಟುಂಬದ ಕುಂಞಾಯಿಶುಮ್ಮರ ಮಗನಾಗಿ 1870ರಲ್ಲಿ ಕುಂಞಹ್ಮದ್ ಜನಿಸಿದರು. ಕುಂಞಹ್ಮದರ ತಂದೆ ಮತ್ತು ತಾಯಿಯ ಕುಟುಂಬವು ಪರಂಪರಾಗತವಾಗಿ ಬ್ರಿಟಿಷ್ ವಿರೋಧಿ ಧೋರಣೆಯನ್ನು ಹೊಂದಿತ್ತು. ಮಾತ್ರವಲ್ಲ, ಅವರ ಕುಟುಂಬದ ಅನೇಕರು ಬ್ರಿಟಿಷರಿಂದ ಕೊಲ್ಲಲ್ಪಟ್ಟಿದ್ದರು, ಗಡೀಪಾರು ಶಿಕ್ಷೆಗೆ ಒಳಗಾಗಿದ್ದರು.

ಬಾಲಕೃಷ್ಣ ಮಾಸ್ಟರ್ ಎಂಬ ಶಿಕ್ಷಕರಿಂದ ಮನೆಯಲ್ಲೇ ಪ್ರಾಥಮಿಕ ಶಿಕ್ಷಣ, ಇಂಗ್ಲಿಷ್, ಮಲಯಾಳಂ ಭಾಷೆಯನ್ನು ಕುಂಞಹ್ಮದ್ ಕಲಿತರು. ಹಾಜಿಯವರ ಕುಟುಂಬವು ಕಲ್ಲಿಕೋಟೆಯ ಸಾಮೂದಿರಿ ರಾಜನಿಗೆ ಅತ್ಯಾಪ್ತವಾಗಿದ್ದ ವ್ಯಾಪಾರೀ ಕುಟುಂಬವಾಗಿತ್ತು. ಕಲ್ಲಿಕೋಟೆಯ ಸಾಮೂದಿರಿ ರಾಜನನ್ನು ಪದಚ್ಯುತಗೊಳಿಸಿ ಬ್ರಿಟಿಷರು ರಾಜ್ಯವನ್ನು ವಶಪಡಿಸಿಕೊಂಡಂದಿನಿಂದ ಚಕ್ಕಿಪರಂಬ್ ಕುಟುಂಬವು ಬ್ರಿಟಿಷರೊಂದಿಗೆ ತೀವ್ರ ಸ್ವರೂಪದ ಅಸಹಕಾರ ತೋರಿಸತೊಡಗಿತು.

ಬ್ರಿಟಿಷರು ಈ ಶ್ರೀಮಂತ ಕುಟುಂಬಕ್ಕೆ ಹತ್ತು ಹಲವು ಆಮಿಷಗಳನ್ನೊಡ್ಡಿ ಅವರನ್ನು ತಮ್ಮ ಪರವಾಗಿಸಲು ವಿಧ ವಿಧ ಪ್ರಯತ್ನಗಳನ್ನು ಮಾಡಿದರು. ಆದರೆ ಈ ಕುಟುಂಬ ಯಾವುದೇ ಪ್ರಲೋಭನೆಗೆ ಮಣಿಯದೇ ಆ ಪ್ರದೇಶದಲ್ಲಿ ಬ್ರಿಟಿಷ್ ವಿರೋಧಿ ದಂಗೆಗಳಲ್ಲಿ ತೊಡಗಿಸಿಕೊಂಡಿತು. ಇದರಿಂದ ಕ್ರುದ್ಧರಾದ ಬ್ರಿಟಿಷರು ಈ ಕುಟುಂಬದ ಆಸ್ತಿಗಳನ್ನು ಹಂತ ಹಂತವಾಗಿ ವಶಪಡಿಸಿಕೊಂಡರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನ: ಒಗ್ಗೂಡಿಸಿದ ಗಾಂಧೀಜಿ – ಒಡೆದಾಳುವ ಮೋದೀಜಿ

ಎಲ್ಲವನ್ನೂ ಕಳಕೊಂಡ ಚಕ್ಕಿಪರಂಬ್ ಕುಟುಂಬವು ವಿಧಿಯಿಲ್ಲದೇ ವಾರಿಯನ್ ಕುನ್ನ್ ಎಂಬಲ್ಲಿಗೆ ಸ್ಥಳಾಂತರಗೊಂಡಿತು. ಮುಂದೆ ಚಕ್ಕಿಪರಂಬ್ ಮೊಯ್ದಿನ್ ಕುಟ್ಟಿ ಹಾಜಿಯವರ ಪುತ್ರ ಕುಂಞಹ್ಮದ್ ಹಾಜಿ ವಾರಿಯನ್ ಕುನ್ನ್ ಎಂಬ ಪ್ರದೇಶದ ಹೆಸರಿನಿಂದಲೇ ಪ್ರಸಿದ್ಧರಾದರು. ಈ ಕುಟುಂಬ ಕಳೆದುಕೊಂಡದ್ದೇನು ಕಡಿಮೆಯೇ..? ಏರನಾಡ್ ಪ್ರಾಂತ್ಯದ ಅತ್ಯಂತ ಶ್ರೀಮಂತ ಕುಟುಂಬವಾಗಿದ್ದ ಈ ಕುಟುಂಬಕ್ಕೆ ಇನ್ನೂರು ಎಕರೆ ಸಮೃದ್ಧ ಕೃಷಿ ಭೂಮಿ, ನೂರಕ್ಕೂ ಮಿಕ್ಕಿದ ಎತ್ತಿನ ಗಾಡಿಗಳು, ಮರದ ವ್ಯಾಪಾರ ಹೀಗೆ ಎಲ್ಲವೂ ಇತ್ತು. ಒಂದು ವೇಳೆ ಬ್ರಿಟಿಷರನ್ನು ವಿರೋಧಿಸದೆ ತಟಸ್ಥ ಧೋರಣೆ ತೋರಿದ್ದರೂ ಅವರ ಎಲ್ಲಾ ಸಂಪತ್ತುಗಳೂ ಉಳಿಯುತ್ತಿತ್ತು. ಮೊಯ್ದಿನ್ ಕುಟ್ಟಿ ಹಾಜಿಗಾಗಲೀ ಅವರ ವ್ಯವಹಾರಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದ ಪುತ್ರ ಕುಂಞಹ್ಮದ್ ಹಾಜಿಗಾಗಲೀ ನಾಡಿನ ಸ್ವಾತಂತ್ರ್ಯದ ಮುಂದೆ ಅವೆಲ್ಲವೂ ನಗಣ್ಯವಾಗಿತ್ತು.

ಎಲ್ಲವನ್ನೂ ಕಳಕೊಂಡು ವಾರಿಯನ್ ಕುನ್ನ್ ಎಂಬ ಹಳ್ಳಿಗೆ ಸ್ಥಳಾಂತರಗೊಂಡರೂ ಕುಂಞಹ್ಮದ್ ಹಾಜಿ ಸುಮ್ಮನೆ ಕೂರಲಿಲ್ಲ. ಮತ್ತೆ ತಮ್ಮ ಎಲ್ಲಾ ಸಂಪರ್ಕಗಳನ್ನು ಬಳಸಿ ವ್ಯಾಪಾರದಲ್ಲಿ ತೊಡಗಿಸಿಕೊಂಡು ಕಳೆದು ಹೋದ ಶ್ರೀಮಂತಿಕೆಯನ್ನು ಮರಳಿ ಗಳಿಸಿದರು.

ಜನರು ಒಟ್ಟು ಸೇರಿ ತಮ್ಮ ವಿರುದ್ಧ ಕಾರ್ಯತಂತ್ರ ರೂಪಿಸುವ ಕಾರಣಕ್ಕಾಗಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ಅಂದಿನ ಬ್ರಿಟಿಷ್ ಪ್ರಭುತ್ವ ನಿಷೇಧಿಸಿತ್ತು. ಆದರೆ, ಹಾಜಿಯವರು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನರನ್ನು ಒಟ್ಟುಗೂಡಿಸಿ ಶುಹದಾ ಮೌಲಿದ್ (ಪೂರ್ವಿಕ ಇಸ್ಲಾಮೀ ಹುತಾತ್ಮರುಗಳ ಸ್ಮರಣ ಸಭೆಗಳು) , ದಪ್ಫ್ ಕಾರ್ಯಕ್ರಮಗಳು, ರಾತೀಬ್ (ಸೂಫಿ ಕೀರ್ತನೆ ಸಭೆಗಳು) ಕೋಲ್ಕಳಿ, ಕೈ ಕೊಟ್ಟು ಪಾಟ್ ( ವಿಧ ವಿಧ ಚಪ್ಪಾಳೆಗಳ ಜುಗಲ್ಬಂಧಿಯಲ್ಲಿ ಹಾಡುವ ಹಾಡುಗಳು) ಚೇರೂರು ಸಮರ ಗೀತೆ (ಹೋರಾಟದ ಹಾಡುಗಳು) ಇಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಭುತ್ವದ ನಿಷೇಧ ಉಲ್ಲಂಘಿಸಿ ಹಾಜಿ ಸಂಘಟಿಸುತ್ತಿದ್ದರು.

ಇದರಿಂದಾಗಿ ಸ್ಥಳೀಯ ಬ್ರಿಟಿಷ್ ಪೋಲೀಸ್ ಮುಖ್ಯಸ್ಥನಾಗಿದ್ದ ಚೇಕುಟ್ಟಿ ಎಂಬಾತನ ಕೆಂಗಣ್ಣಿಗೆ ಗುರಿಯಾದರು. ಇವರನ್ನು ಹೀಗೆ ಊರಲ್ಲಿ ಇರಗೊಟ್ಟರೆ ಶೀಘ್ರದಲ್ಲೇ ಈತ ನಮ್ಮ ಪಾಲಿಗೆ ಕಂಟಕವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ ಎಂದರಿತ ಬ್ರಿಟಿಷರು, ಇವರನ್ನು ಬೊಂಬಾಯಿಗೆ ಗಡಿಪಾರು ಮಾಡಿದರು.

ಇದನ್ನೂ ಓದಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಧಾರ್ಮಿಕ ನಾಯಕರ ಪಾತ್ರ -ಇಸ್ಮತ್ ಪಜೀರ್

1908 ರಲ್ಲಿಯೇ ಮಂಜೇರಿ ರಾಮ ಅಯ್ಯರ್‌ರ ಮೂಲಕ ಕಾಂಗ್ರೆಸಿಗೆ ಸೇರಿದ್ದ ಹಾಜಿ ಬೊಂಬಾಯಿಗೆ ಗಡೀಪಾರಾದ ಕಾಲದಲ್ಲಿ ಅಲ್ಲಿ ಗಾಂಧೀಜಿ ನೇತೃತ್ವ ವಹಿಸುತ್ತಿದ್ದ ಕಾಂಗ್ರೆಸ್ ಅಧಿವೇಶನಗಳಲ್ಲಿ ಭಾಗವಹಿಸಿ ಹೋರಾಟದ ಕಾರ್ಯತಂತ್ರಗಳನ್ನು ಹತ್ತಿರದಿಂದ ಕಂಡು ಅರಿತರು. ಹಾಜಿ ಹೀಗೆ ಮೂರು ಬಾರಿ ಗಡೀಪಾರು ಶಿಕ್ಷೆಗೊಳಗಾದರು. ಆ ಬಳಿಕ ಅವರನ್ನು ಇಸ್ಲಾಮಿನ ಪವಿತ್ರ ನಗರಿ ಮಕ್ಕಾಕ್ಕೆ ಗಡೀಪಾರು ಮಾಡಿದರು. ಧರ್ಮನಿಷ್ಠ ಮನುಷ್ಯನಾಗಿದ್ದ ಹಾಜಿ ಧಾರ್ಮಿಕ ಸೆಳೆತಕ್ಕೊಳಗಾಗಿ ಮಕ್ಕಾದಿಂದ ಮರಳಲಾರರು ಎಂಬುವುದು ಬ್ರಿಟಿಷರ ದೂರಾಲೋಚನೆಯಾಗಿತ್ತು. ಆದರೆ ಎಲ್ಲೇ ಹೋದರೂ ಹಾಜಿಯವರ ಮನಸ್ಸು ತಾಯ್ನಾಡಿನ ವಿಮೋಚನೆಯ ಕನಸಲ್ಲಿ ಲೀನಗೊಂಡಿತ್ತು.

ಅಲ್ಲಿಂದಲೂ ಮರಳಿ ಮತ್ತೆ ತನ್ನ ಬ್ರಿಟಿಷ್ ವಿರೋಧೀ ಕಾರ್ಯಾಚರಣೆಗಳನ್ನು ಮುಂದುವರಿಸಿದಾಗ ಮತ್ತೆ ಅಂಡಮಾನ್ ದ್ವೀಪಕ್ಕೆ ಗಡೀಪಾರುಗೊಳಿಸಿದರು. ಅಲ್ಲಿಂದ ಮರಳಿ ತಾಯ್ನಾಡು ಸೇರುವುದು ಸುಲಭವಲ್ಲ ಎಂಬುವುದು ಬ್ರಿಟಿಷರ ದೂರಾಲೋಚನೆಯಾಗಿತ್ತು.

ಈ ಹಿಂದೆ 1894ರ ಮಣ್ಣಾರ್‌ಕಾಡ್ ದಂಗೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಹಾಜಿಯ ಕುಟುಂಬದ ಹಲವರು ಬ್ರಿಟಿಷರಿಂದ ಕೊಲ್ಲಲ್ಪಟ್ಟಿದ್ದರು, ಹಲವರು ಅಂಡಮಾನ್‌ಗೆ ಗಡೀಪಾರು ಮಾಡಲ್ಪಟ್ಟಿದ್ದರು. ಹಾಗೆ ಅಂಡಮಾನ್‌ಗೆ ಗಡೀಪಾರು ಮಾಡಲ್ಪಟ್ಟವರಲ್ಲಿ ಹಾಜಿಯ ತಂದೆ ಮೊಯ್ದಿನ್ ಕುಟ್ಟಿ ಹಾಜಿಯವರೂ ಇದ್ದರು. ತಂದೆಯವರಿಂದ ಅಂಡಮಾನಿನ ದಾರಿ, ಅಲ್ಲಿಂದ ತಪ್ಪಿಸಬಹುದಾದ ವಿಧಾನಗಳನ್ನು ಹಾಜಿ ಹಿಂದೆಯೇ ಕೇಳಿ ಅರಿತಿದ್ದರು.

1921 ರಲ್ಲಿ ಬೆಂಗಳೂರಿನಿಂದ ಮಲಬಾರ್‌ಗೆ ನಿಯೋಜಿಸಲಾಗಿದ್ದ ಬ್ರಿಟೀಷರ ಎರಡನೆ ತಂಡ

ದಿನದ ಇಪ್ಪತ್ತನಾಲ್ಕು ಗಂಟೆಯೂ ಸ್ವಾತಂತ್ರ್ಯವನ್ನೇ ಜಪಿಸುತ್ತಿದ್ದ ಹಾಜಿಯ ಮನಸ್ಸು ಕೇಳಬೇಕಲ್ವಾ….? ಮತ್ತೆ ಹೇಗೂ ಅಲ್ಲಿಂದ ತಪ್ಪಿಸಿ 1915ರಲ್ಲಿ ಹಾಜಿ ತಾಯ್ನಾಡಿಗೆ ಮರಳಿದರು. ತಾಯ್ನಾಡಿಗೆ ಮರಳಿದ ಹಾಜಿ ತನ್ನ ಹಿಂದಿನ ವ್ಯಾಪಾರಗಳಲ್ಲಿ ತೊಡಗಿಸಿಕೊಂಡರು. ಈಗ ಹಾಜಿ ತನ್ನ ವಹಿವಾಟುಗಳಲ್ಲಿ ತಲ್ಲೀನರಾಗಿದ್ದಾರೆಂದು ಬಗೆದು ಬ್ರಿಟಿಷ್ ಪ್ರಭುತ್ವ ಸುಮ್ಮನಾಗಿತ್ತು. ಚತುರ ವ್ಯಾಪಾರಿಯೂ ಆಗಿದ್ದ ಹಾಜಿ ಕೆಲ ವರ್ಷಗಳಲ್ಲೇ ಮತ್ತೆ ಕಳೆದ ಶ್ರೀಮಂತಿಕೆಯನ್ನು ಮರಳಿ ಗಳಿಸಿದರು. ಆರ್ಥಿಕವಾಗಿ ಬಲಿಷ್ಠನಾಗುತ್ತಿದ್ದಂತೆಯೇ ಹಿಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನ ಸಂಘಟನೆ ಮಾಡಿ ಮತ್ತೆ ದಂಗೆಗೆ ಯೋಜನೆ ಹಾಕಿದರು.

ಇದನ್ನೂ ಓದಿ: ಬ್ರಿಟೀಷರ ಎದೆ ನಡುಗಿಸಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ

ಕೊಡುಗೈ ದಾನಿಯೂ ಆಗಿದ್ದ ಹಾಜಿ ತನ್ನ ವ್ಯಾಪಾರದಲ್ಲಿ ಬರುತ್ತಿದ್ದ ಲಾಭದ ದೊಡ್ಡ ಪಾಲನ್ನು ಬಡವರಿಗೆ ಹಂಚುವ ಮೂಲಕ ಜನಪ್ರೀತಿಗಳಿಸಿದ್ದರು. ಗಡೀಪಾರಾಗಿ ಬೊಂಬಾಯಿ, ಮಕ್ಕಾ, ಅಂಡಮಾನ್‌ನಲ್ಲಿದ್ದ ಕಾಲದಲ್ಲಿ ಇಂಗ್ಲಿಷ್, ಹಿಂದಿ, ಉರ್ದು, ಪಾರ್ಸಿ ಭಾಷೆಯಲ್ಲೂ ಪಾಂಡಿತ್ಯ ಗಳಿಸಿದ್ದರು. ಲೋಕ ಪರಿಚಯ,ದಾನ ಧರ್ಮ, ಭಾಷಾಜ್ಞಾನ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಹಾಜಿ ಜನರೆಡೆಯಲ್ಲಿ ಮತ್ತೆ ಪ್ರಭಾವಿಯಾಗಿ ಬೆಳೆದರು. ತನ್ನ ಪ್ರಭಾವವನ್ನು ಹಾಜಿ ಬ್ರಿಟಿಷ್ ವಿರೋಧೀ ಹೋರಾಟಗಳಿಗೆ ಬಳಸಿದರು.

1920ರ ಜುಲೈ ಹದಿನೆಂಟರಂದು ಕಲ್ಲಿಕೋಟೆಯ ಜ್ಯೂಬಿಲಿ ಹಾಲ್‌ನಲ್ಲಿ ನಡೆದ ಮಲಬಾರ್ ಖಿಲಾಫತ್ ಸಮಿತಿ ಸಭೆಯೊಂದು ನಡೆದಿತ್ತು. 1920ರ ಅಗಸ್ಟ್ ತಿಂಗಳಲ್ಲಿ ಕಲ್ಲಿಕೋಟೆ ಕಡಲ ತೀರದಲ್ಲಿ ನಡೆದ ಖಿಲಾಫತ್ ಸಮ್ಮೇಳನಕ್ಕೆ ಗಾಂಧೀಜಿ ಮತ್ತು ಮೌಲಾನಾ ಶೌಕತ್ ಅಲಿ ಆಗಮಿಸಿದ್ದರು. ಆ ಸಭೆಗೆ ಮಲಬಾರ್‌ನ ಪ್ರಭಾವಿ ನಾಯಕರುಗಳಾದ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ, ಅಲೀ ಮುಸ್ಲಿಯಾರ್, ಚಂಬರಶ್ಶೇರಿ ತಂಙಳ್, ಕೊನ್ನಾರ ಮುಹಮ್ಮದ್ ಕೋಯ ತಂಙಳ್, ಕುಂಬರ ಕೋತೂರ್ ಸಿ.ವಿ.ಕೋಯ ತಂಙಳ್ ಮುಂತಾದವರು ವಿಶೇಷ ಆಹ್ವಾನಿತರಾಗಿದ್ದರು. ಆ ಸಭೆಯಲ್ಲಿ ಐವತ್ತು ಸಾವಿರ ಮಂದಿ ಪಾಲ್ಗೊಂಡು ಒಂದು ಹೊಸ ಇತಿಹಾಸವನ್ನೇ ಬರೆದರು. ಮಲಬಾರಿನ ಖಿಲಾಫತ್ ಕಮಿಟಿಯ ಜವಾಬ್ದಾರಿಯನ್ನು ಗಾಂಧೀಜಿ ಮತ್ತು ಶೌಕತ್ ಅಲಿ ಈ ಮೇಲೆ ಹೆಸರಿಸಲ್ಪಟ್ಟ ನಾಯಕರ ಹೆಗಲ ಮೇಲೆ ಹಾಕಿದರು.

ಅಂದು ಹಾಜಿ ಜನರ ಮಧ್ಯೆ ಅದೆಂತಹ ಪ್ರಭಾವಿಯಾಗಿದ್ದರೆನ್ನುವುದನ್ನು ಅಂದಿನ ಮಲಬಾರ್ ಡೆಪ್ಯೂಟಿ ಕಲೆಕ್ಟರ್ ಸಿ.ಗೋಪಾಲನ್ ನಾಯರ್ ಹೇಳುವ ಮಾತುಗಳೇ ಸಾಕ್ಷಿ. ಅವರ ಪ್ರಕಾರ, “ಹಾಜಿ ಏಕಕಾಲದಲ್ಲಿ ಹಿಂದೂಗಳ ಪಾಲಿಗೆ ಅಕ್ಷರಶಃ ರಾಜನಾಗಿಯೂ, ಮುಸ್ಲಿಮರ ಪಾಲಿಗೆ ಅಮೀರನಾಗಿಯೂ ಮತ್ತು ಖಿಲಾಫತ್ ಸೇನೆಯ ಕರ್ನಲ್ ಆಗಿಯೂ ಅರಿಯಲ್ಪಟ್ಟಿದ್ದರು. ಹೋರಾಟದ ಆರಂಭಿಕ ಕಾಲದಲ್ಲಿ ಬ್ರಿಟಿಷರ ವಿರುದ್ಧ ಶಸಸ್ತ್ರ ಹೋರಾಟಕ್ಕಿಂತ ಗಾಂಧೀಜಿಯ ಅಹಿಂಸಾ ಮಾರ್ಗವೇ ಸೂಕ್ತ ಎಂದು ನಂಬಿದ್ದರು”

ಖಿಲಾಫತ್‌ ಚಳವಳಿಯ ನೇತೃತ್ವ ವಹಿಸಿದ ಬಳಿಕ ಹಾಜಿ ಕೇರಳದ ವಿವಿಧ ಇಸ್ಲಾಮೀ ವಿದ್ವಾಂಸರುಗಳಿಗೆ ಪತ್ರ ಬರೆದು ಹೋರಾಟಕ್ಕೆ ನೇತೃತ್ವ ನೀಡಬೇಕೆಂದು ಕೋರಿದ್ದರು.‌ ಯಾಕೆಂದರೆ ಧಾರ್ಮಿಕ ವಿದ್ವಾಂಸರುಗಳ ಮಾತಿಗೆ ಸಮುದಾಯದಲ್ಲಿ ದೊಡ್ಡ ಮಟ್ಟದಲ್ಲಿ ಮನ್ನಣೆ ಸಿಗುತ್ತಿತ್ತು. ಅವರು ಬರೆದ ಪತ್ರಗಳ ಬಗ್ಗೆ ಅರಿತಾಗ ಬ್ರಿಟಿಷರ ನಿದ್ದೆಗೆಟ್ಟಿತು. ಹಾಜಿಯವರ ಮನವೊಲಿಕೆಗೆ ಯತ್ನಿಸಿದರು. “ನೀವು ಹೋರಾಟವನ್ನು ಕೈ ಬಿಟ್ಟರೆ ನಿಮ್ಮ ಕುಟುಂಬ ಕಳಕೊಂಡದ್ದಕ್ಕಿಂತ ಹೆಚ್ಚಿನ ಆಸ್ತಿಯನ್ನು ನಿಮಗೆ ಕೊಡುತ್ತೇವೆ..” ಎಂದು ಆಮಿಷವೊಡ್ಡಿದರು. ಆಗ ಹಾಜಿ ಬ್ರಿಟಿಷ್ ಪ್ರಭುತ್ವದ ಮುಂದೆ ಗಂಟಾಘೋಷವಾಗಿ ಹೇಳಿದ್ದು “ನನಗೆ ಸ್ವಾತಂತ್ರ್ಯದ ಹೊರತಾದ ಯಾವ ಕನಸೂ ಇಲ್ಲ..”.

ಇದನ್ನೂ ಓದಿ: ಭಾರತದಲ್ಲಿ ಸಂವಿಧಾನ ಮತ್ತು ಪ್ರಜಾತಂತ್ರಗಳು ಉಳಿದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ

ಹಾಜಿಯವರ ಸೇನೆಯಲ್ಲಿ ಕೇವಲ ಮುಸ್ಲಿಮರು ಮಾತ್ರ ಇದ್ದದ್ದಲ್ಲ. ಅಂದಿನ ಕೇರಳದ ಹಿಂದೂ ಸ್ವಾತಂತ್ರ್ಯ ಸೇನಾನಿಗಳಾದ ಮಾಧವನ್ ನಾಯರ್, ಬ್ರಹ್ಮದತ್ತ ನಂಬೂದಿರಿಪ್ಪಾಡ್ ಮುಂತಾದವರೆಲ್ಲಾ ಹಾಜಿಯವರ ಅತ್ಯಾಪ್ತ ಸ್ನೇಹಿತರಾಗಿದ್ದರು. ಹಾಜಿಯವರು ಹೋರಾಟದ ರೂಪುರೇಷೆಗಳ ಕುರಿತು ಅವರೊಂದಿಗೆ ಆಗಾಗ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದರು.

1920 ರ ಅಗಸ್ಟ್ ಹತ್ತೊಂಬತ್ತರಂದು ಮಂಬುರಂ ಮಸೀದಿಗೆ ಬ್ರಿಟಿಷ್ ಸೈನಿಕರು ಬೂಟುಗಾಲಲ್ಲಿ ನುಗ್ಗಿ ದಾಂಧಲೆಗೈದರು. ಮಸೀದಿಯಲ್ಲಿ ಆಯುಧಗಳನ್ನು ಶೇಖರಿಸಿಡಲಾಗಿದೆ ಎಂಬ ಸುಳ್ಳು ಸುದ್ಧಿಯನ್ನು ಯಾರೋ ಬ್ರಿಟಿಷರಿಗೆ ತಲುಪಿಸಿದ್ದರು. ಬ್ರಿಟಿಷರು ಮಂಬುರಂ ಮಸೀದಿ ಧ್ವಂಸಗೈದರೆಂದೂ, ಮಂಬುರಂನ ಪ್ರಸಿದ್ಧ ಸೂಫಿ ಸಂತರ ಸಮಾಧಿಯಿರುವ ದರ್ಗಾವನ್ನು ಮಲಿನಗೈದರೆಂಬ ವದಂತಿ ಹಬ್ಬಿ ಸಾವಿರಾರು ಜನ ಜಾತಿ- ಮತಗಳಿಗತೀತವಾಗಿ ರೋಷಾಕುಲರಾಗಿ ಮಸೀದಿಯತ್ತ ಓಡೋಡಿ ಬಂದರು. ಇದು ಮಲಬಾರ್ ದಂಗೆಗೆ ಮುನ್ನುಡಿ ಬರೆಯಿತು.

ಅಲಿ ಮುಸ್ಲಿಯಾರ್‌ (ಕುಂಞಹ್ಮದ್ ಹಾಜಿಯವರ ಕಾಂತಿಯ ಸಂಗಾತಿ)

ಇತ್ತ, ಕುಂಞಹ್ಮದ್ ತನ್ನ ಸಂಗಡಿಗರೊಂದಿಗೆ ಸಮೀಪದ ಚೇರೂರಿನಲ್ಲಿರುವ ಸೂಫಿ ಸಂತರೊಬ್ಬರ ಸಮಾಧಿಯ ಸಂದರ್ಶನಕ್ಕೆ ಹೊರಟಿದ್ದರು. ಚೇರೂರು ಸೂಫೀಗಳ ಸಮಾದಿ ಸಂದರ್ಶನದ ಹೆಸರಲ್ಲಿ ಜನರನ್ನು ಸಂಘಟಿಸಿ ಹಾಜಿ ತಮ್ಮ ವಿರುದ್ಧ ಸಮರಕ್ಕೆ ತಯಾರಾಗುತ್ತಿದ್ದಾರೆಂಬ ಸುದ್ಧಿಯನ್ನು, ಅಂದಿನ ಮಲಬಾರ್ ಕಲೆಕ್ಟರ್ ಥಾಮಸ್ ಪ್ರಭುತ್ವಕ್ಕೆ ತಲುಪಿಸಿದ. ಕೆಲವೇ ಹೊತ್ತಿನಲ್ಲಿ ಹಾಜಿ ತನ್ನ ನೂರಾರು ಸಂಗಡಿಗರೊಂದಿಗೆ ಮಂಬುರಂ ತಲುಪಿದರು. ಹಾಜಿಯವರ ಆಗಮನವಾಗುತ್ತಲೇ ಸೇರಿದ್ದ ಸಾವಿರಾರು ಮಾಪ್ಲಾಗಳಿಗೆ ವಿಶೇಷ ದೈರ್ಯ ಬಂತು. ನಿಶಸ್ತ್ರರಾಗಿದ್ದ ಅವರು ಬ್ರಿಟಿಷರ ವಿರುದ್ಧ ಘೋಷಣೆಗಳನ್ನೂ ಕೂಗುತ್ತಾ ಮುನ್ನುಗ್ಗಿದರು. ಶಸ್ತ್ರ ಸಜ್ಜಿತರಾಗಿದ್ದ ಬ್ರಿಟಿಷ್ ಸೇನೆ ಹಾಜಿಯವರ ಸೈನ್ಯದ ಮೇಲೆ ಗುಂಡು ಹಾರಿಸಿದರೂ ಅದಕ್ಕೆ ಜಗ್ಗದೆ ಜನ ಕಲ್ಲೆಸೆದು ಮತ್ತು ದೊಣ್ಣೆಗಳನ್ನು ಹಿಡಿದು ಬ್ರಿಟಿಷ್ ಸೈನ್ಯವನ್ನು ಹೊಡೆದೋಡಿಸಿದರು.

ಮಂಬುರಂನಲ್ಲಿ ಬ್ರಿಟಿಷ್ ಸೈನ್ಯವನ್ನು ನಿರಾಯುಧರಾಗಿದ್ದ ಮಾಪ್ಲಾಗಳು ಹೊಡೆದೋಡಿಸಿದ್ದು ಹಾಜಿಯವರ ಜನ ಸೈನ್ಯದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು. ಆ ಬಳಿಕದ ಮಹತ್ವದ ಬೆಳವಣಿಗೆಯೇನೆಂದರೆ ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರು ಗುಂಪು ಗುಂಪಾಗಿ ಸೈನ್ಯ ತೊರೆದು ಹಾಜಿಯವರ ಸ್ವರಾಜ್ಯ ಸೈನ್ಯಕ್ಕೆ ಸೇರಿದರು. ಇದು ಬ್ರಿಟಿಷರನ್ನು ಧೃತಿಗೆಡಿಸಿತು.

ಆ ಬಳಿಕ ಕುಂಞಹ್ಮದ್ ಹಾಜಿ ಸ್ವತಂತ್ರ ರಾಜ್ಯವನ್ನು ಘೋಷಿಸಿದರು. ಮೊದಲ ಹತ್ತು ದಿನಗಳ ಅವಧಿಗೆ ಅಲೀ ಮುಸ್ಲಿಯಾರರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದರು. ಆ ಮಧ್ಯೆ ಕ್ರಾಂತಿಕಾರಿಗಳು ತೆಕ್ಕಿಕ್ಕುಲಂ ಎಂಬಲ್ಲಿ ಸಭೆ ಸೇರಿ ಸ್ವರಾಜ್ಯ ಸರಕಾರದ ನೀತಿ ನಿಯಮಾವಳಿಗಳನ್ನು ರೂಪಿಸಿದರು. ಪುನಃ ಪಾಂಡಿಕ್ಕಾಡ್ ಎಂಬಲ್ಲಿ ಮತ್ತೊಂದು ಸಭೆ ಸೇರಿದ “ಕ್ರಾಂತಿ ಕೌನ್ಸಿಲ್” ಅವರ ಅಧೀನದಲ್ಲಿರುವ ಪ್ರದೇಶಗಳನ್ನು ವಿಕೇಂದ್ರೀಕರಿಸಿ ನಾಲ್ಕು ವಿಭಾಗಗಳನ್ನಾಗಿ ಪ್ರತ್ಯೇಕಿಸಿ ಆಡಳಿತಾಧಿಕಾರಿಗಳನ್ನು ನೇಮಿಸಿದರು.

ಇದನ್ನೂ ಓದಿ: ಅನನ್ಯ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರ ಸಂಘರ್ಷಗಾಥೆ: ‘ಮಹಾನ್ ತಾತ’ ಸಾಕ್ಷ್ಯಚಿತ್ರ ಬಿಡುಗಡೆ

ನಿಲಂಬೂರು, ಪಾಂಡಿಕ್ಕಾಡ್, ಪಂದಲ್ಲೂರು, ತೂಬೂರು ಮುಂತಾದ ಪ್ರದೇಶಗಳಿಗೆ ಹಾಜಿ ಆಡಳಿತಾಧಿಕಾರಿಯಾದರೆ, ಮಣ್ಣಾರ್‌ಕಾಡ್‌ಗೆ ಚಂಬರಶ್ಶೇರಿ ತಂಙಳ್, ತಿರೂರಂಙಾಡಿಗೆ ಅಲಿ ಮುಸ್ಲಿಯಾರ್ ಮತ್ತು ವಳ್ಳುವ ನಾಡಿಗೆ ಸಿ.ವಿ. ಕೋಯ ತಂಙಳ್ ಖಿಲಾಫತ್ ಆಡಳಿತಾಧಿಕಾರಿಗಳಾದರು. ಇವರೆಲ್ಲರ ಅಧೀನದಲ್ಲಿ ಸುಮಾರು ಇನ್ನೂರು ಹಳ್ಳಿಗಳಿದ್ದವು.‌

ಅವುಗಳಿಗೆ ಅವರು ಮಲಯಾಳ ರಾಜ್ಯಂ ಎಂದು ನಾಮಕರಣ ಮಾಡಿದರು. ವಿವಿಧ ಇಲಾಖೆಗಳನ್ನು ಸ್ಥಾಪಿಸಿದರು. ಆಡಳಿತದ ಅನುಕೂಲಕ್ಕಾಗಿ ಕಮಾಂಡರ್, ಕಲೆಕ್ಟರ್, ಗವರ್ನರ್, ವೈಸ್‌ರಾಯ್ ಮುಂತಾದ ಹುದ್ದೆಗಳನ್ನು ಬ್ರಿಟಿಷ್ ಮಾದರಿಯಲ್ಲೇ ಸ್ಥಾಪಿಸಿದರು. ಸೈನಿಕ ತರಭೇತಿ ಕೇಂದ್ರ, ತೆರಿಗೆ ಸಂಗ್ರಹಣಾ ಕೇಂದ್ರ, ಆಹಾರ ಸಂರಕ್ಷಣಾ ಕೇಂದ್ರ, ಪೋಲೀಸ್, ನ್ಯಾಯಾಲಯ ಇತ್ಯಾದಿಗಳನ್ನೆಲ್ಲಾ ಹಾಜಿ ಸ್ಥಾಪಿಸಿದರು. ಸೈನಿಕರ ರಿಜಿಸ್ಟರ್‌ ಗಳನ್ನು ಸ್ಥಾಪಿಸಿದರು. ಪ್ರತೀ ಪೈಸೆ ಪೈಸೆಗೆ ಲೆಕ್ಕವಿಡುತ್ತಿದ್ದರು. ಸಂಗ್ರಹಿಸಿದ ತೆರಿಗೆಗಳಿಗೆ ರಶೀದಿ ನೀಡುವ ಪದ್ದತಿಯನ್ನೂ ಜಾರಿಗೆ ತಂದರು.

ಅಕ್ಟೋಬರ್ 18, 1921 ರಂದು ‘ದಿ ಹಿಂದು’ ಪತ್ರಿಕೆಯಲ್ಲಿ ಪ್ರಕಟವಾದ ವಾರಿಯನ್ ಕುನ್ನತ್‌ ಕುಂಞಹ್ಮದ್ ಹಾಜಿ ಬರೆದ ಪತ್ರ. ಈ ಸಮಯದಲ್ಲಿ ಅವರು ಪಂದಲ್ಲೂರು ಕಮಾಂಡರ್‌ ಆಗಿದ್ದರು

ಹಾಜಿಯವರ ಸೈನ್ಯದಲ್ಲಿ ಮಾಪಿಳ್ಳರಂತೆಯೇ, ಹಿಂದೂಗಳು ಇದ್ದರು. ಬ್ರಿಟಿಷ್ ದಾಖಲೆಗಳ ಪ್ರಕಾರ ಹಾಜಿಯವರ ಸೈನ್ಯದಲ್ಲಿ ಐನೂರಕ್ಕೂ ಮಿಕ್ಕಿದ ಹಿಂದೂ ಸೈನಿಕರಿದ್ದರು. ಸೈನಿಕರಿಗೆ ನೇರ ಯುದ್ಧ, ಗೆರಿಲ್ಲಾ ಯುದ್ಧ ಇತ್ಯಾದಿಗಳಿಗೆ ಸೂಕ್ತ ತರಭೇತಿ ಕೊಡಿಸಿದರು.

ಹಾಜಿಯವರಿಗೆ ಟಿಪ್ಪು ಸುಲ್ತಾನ್ ಮಾದರಿಯಾಗಿದ್ದರು. ವಾರಿಯನ್ ಕುನ್ನತ್ ಅವರೂ ಕೂಡಾ ಟಿಪ್ಪುವಿನಂತೆಯೇ ಸ್ವತಃ ರಣರಂಗದಲ್ಲಿ ಕಾದಾಡುತ್ತಿದ್ದರು. ಏಕಕಾಲಕ್ಕೆ ಯೋಧ ಮತ್ತು ಖಿಲಾಫತ್ ರಾಜ್ಯದ ಮುಖ್ಯಸ್ಥನೂ ಆಗಿದ್ದರು. ಅವರು ಟಿಪ್ಪುವಿನಂತೆ ಜಮೀನುದಾರರ ಕೈಯಿಂದ ಭೂಮಿಗಳನ್ನು ಕಿತ್ತು ಹಿಂದೂ- ಮುಸ್ಲಿಂ ಎಂಬ ಬೇಧವಿಲ್ಲದೇ ದುಡಿಯುವ ಕೈಗಳಿಗೆ ಭೂಮಿಯ ಒಡೆತನ ನೀಡಿದರು.

ಭಾರತದ ಇತಿಹಾಸದಲ್ಲಿ‌ ಮೊಟ್ಟ ಮೊದಲು ಉಳುವ ಕೈಗಳಿಗೆ ಭೂಮಿಯ ಒಡೆತನ ನೀಡಿದವರು ಟಿಪ್ಪು ಸುಲ್ತಾನರಾದರೆ, ಅದನ್ನು ಎರಡನೇ ಬಾರಿಗೆ ಜಾರಿಗೆ ತಂದವರು ಮಲಬಾರಿನ ಟಿಪ್ಪು ವಾರಿಯನ್ ಕುನ್ನತ್ ಕುಂಞಹ್ಮದ್‌ ಹಾಜಿ. ಅವರು ಎಲ್ಲರಿಗೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಿದರು. ವಯನಾಡ್ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ಸರಕುಗಳಿಗೆ ತೆರಿಗೆ ವಿಧಿಸಿದರು. ಈ ಮಧ್ಯೆ ಹಾಜಿಯವರನ್ನು ಮಣಿಸಲು ಬ್ರಿಟಿಷರು ವಿವಿಧ ತಂತ್ರಗಳನ್ನು ಹೂಡಿದರು, ಆಮಿಷಗಳನ್ನೊಡ್ಡಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹರಣ ತಪ್ಪಿಸಲು ಸ್ವಾತಂತ್ರ್ಯ ಹೋರಾಟವೇ ಬೇಕು

1921 ರ ಮಾರ್ಚ್ 21 ರಂದು ಬ್ರಿಟಿಷರ ವಿರುದ್ಧ ಯುದ್ಧಕ್ಕಾಗಿ ಕೇರಳದ ಸಾಂಸ್ಕೃತಿಕ ನಗರಿ ತ್ರಿಶೂರ್‌ಗೆ ಹಾಜಿಯವರ ನೇತೃತ್ವದ ಎರಡು ಸಾವಿರ ಮಂದಿಯ ಸೈನ್ಯವು ರೈಲುಗಳ ಮೂಲಕ ತಲುಪಿತು. ಅವರನ್ನು ತ್ರಿಶೂರಿನಲ್ಲಿ ಮಹಾರಾಯ ಕೃಷ್ಣ ಮೆನನ್, ಡಾ.ಎ.ಆರ್. ಮೆನನ್‌ರ ನೇತೃತ್ವದಲ್ಲಿ ಸಾವಿರಕ್ಕೂ ಮಿಕ್ಕಿದ ತ್ರಿಶೂರಿನ ಹಿಂದೂಗಳು ಸ್ವಾಗತಿಸಿದರು. ಅಲ್ಲಿಂದ ಹಾಜಿಯವರ ನೇತ್ರತ್ವದಲ್ಲಿ ಒಂದು ಜೈತಯಾತ್ರೆ ಹೊರಡಲಾಯಿತು.

ಇದಕ್ಕೆ, ತ್ರಿಶೂರ್ ಅಡಿಶನಲ್ ಮ್ಯಾಜಿಸ್ಟ್ರೇಟ್ ವೈದ್ಯನಾಥ ಅಯ್ಯರ್, ಗೋವಿಂದನ್ ನಾಯರ್, ಬಡಕ್ಕೆ ವೀಟಿಲ್ ಮುಹಮ್ಮದ್, ಕಾರಾಟ್ ಮೊಯ್ದಿನ್ ಕುಟ್ಟಿ, ಡಾ.ಎ.ಆರ್ .ಮೆನನ್‌, ಮಹಾರಾಯ ಕೃಷ್ಣ ಮೆನನ್, ಪಯ್ಯನಾಡಿನ ಜಮೀನ್ದಾರನಾಗಿದ್ದ ಚೇಂದು ಪಣಿಕ್ಕರ್, ವಲರಾಡ್ ನಂಬೀಶನ್ ಮುಂತಾದವರು
ಕೈ ಜೋಡಿಸಿದರು. 1921 ಡಿಸೆಂಬರ್‌ನಲ್ಲಿ ಹಾಜಿಯ ಸೈನಿಕರು ಪಂದಲ್ಲೂರು ಮುಡಿಕ್ಕೋಡ್ ಪೋಲೀಸ್ ಸ್ಟೇಷನ್‌ಗೆ ದಾಳಿ ಮಾಡಿದರು.

ಅಲ್ಲಿಂದ ಮತ್ತೆ ನಿಲಂಬೂರು ಸ್ಟೇಷನ್‌ನತ್ತ ಹೊರಟ ಹಾಜಿಯ ಸೈನ್ಯ ಸರ್ಕಲ್ ಇನ್ಸ್‌ಪೆಕ್ಟರ್ ಚೋಲಗ ಉನ್ನಿ ಎಂಬಾತನನ್ನು ಹಿಡಿದರು. ಆತನ ಕೈಗೆ ಕ್ರಾಂತಿ ಧ್ವಜ ನೀಡಿ ಮೆರವಣಿಗೆಯ ಮುಂದೆ ನಿಲ್ಲಿಸಿ ಆತನಿಂದಲೇ ಆತನಿಗೆ ವೇತನ ನೀಡುವ ಬ್ರಿಟಿಷ್ ಪ್ರಭುತ್ವದ ವಿರುದ್ಧ ಘೋಷಣೆ ಕೂಗಿಸಿದರು. ಖಿಲಾಫತ್ ಕಾಂಗ್ರೆಸ್ ಝಿಂದಾಬಾದ್, ಮಹಾತ್ಮಾ ಗಾಂಧಿಗೆ ಜಯವಾಗಲಿ ಎಂಬ ಘೋಷಣೆಯನ್ನು ಉನ್ನಿ ಕೂಗಿದ್ದ.

ಬ್ರಿಟೀಶ್‌ ವಶದಲ್ಲಿ ಮಾಪ್ಪಿಳಾ ದಂಗೆಯ ಖೈದಿಗಳು

ಹಾಜಿಯವರ ಸೈನ್ಯದ ವೀರಾವೇಶ ಬ್ರಿಟಿಷ್ ಪ್ರಭುತ್ವದ ಎದೆಯಲ್ಲಿ ನಡುಕ ಶುರು ಹಚ್ಚಿಸಿತು. ಬ್ರಿಟಿಷರು ಕೊನೆಗೆ ಕ್ರಾಂತಿಕಾರಿಗಳನ್ನು ದಮನಿಸಲು ಮೊದಲ ಮಹಾಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಗೂರ್ಖಾ ರೆಜೆಮೆಂಟನ್ನು ಮಲಬಾರಿಗೆ ಕರೆಸಿದರು. ಗೂರ್ಖಾ ರೆಜಿಮೆಂಟಿನ ಕ್ಯಾಂಪಿಗೆ ನುಗ್ಗಿ ಅವರನ್ನು ಹೊಡೆದು ಬಡಿಯುವ ಮೂಲಕ ಕ್ರಾಂತಿಕಾರಿಗಳು ಅವರನ್ನು ಸ್ವಾಗತಿಸಿದರು. ಹಾಜಿಯವರ ಕ್ರಾಂತಿ ಸೈನ್ಯದ ದಾಳಿಗೆ ಗೂರ್ಖಾ ರೆಜಿಮೆಂಟ್ ಬೆಚ್ಚಿ ಬಿದ್ದಿತು.

ಆ ಬಳಿಕ ಗೂರ್ಖಾ ರೆಜಿಮೆಂಟ್‌‌ ಮರುದಾಳಿ ಮಾಡಿ ಮಾಪ್ಲಾ ಮಹಿಳೆಯರನ್ನು ಅತ್ಯಾಚಾರಗೈದರು, ನಿಶ್ಯಸ್ತ್ರ ನಾಗರಿಕರ ಮೇಲೆ ದಾಳಿ ಮಾಡಿ ಕೊಂದರು. ಹಾಜಿಯ ರೋಷವನ್ನು ಇನ್ನು ತಣಿಸಲು ಸಾಧ್ಯವೇ ಇರಲಿಲ್ಲ. ಕ್ರಾಂತಿ ಸೈನ್ಯವು ಗೂರ್ಖಾ ರೆಜಿಮೆಂಟಿನ ರುಂಡ ಚೆಂಡಾಡಿತು, ನಿಜವಾದ ಅರ್ಥದಲ್ಲಿ ಮಲಬಾರ್ ದಂಗೆ ಆರಂಭವಾಯಿತು. ಹೆದರಿ ಕಂಗಾಲಾದ ಬ್ರಿಟಿಷರು ಭಾರತದಲ್ಲಿದ್ದ ಮೂರನೇ ಒಂದು ಭಾಗ ಸೈನ್ಯವನ್ನು ಕುಂಞಹ್ಮದ್ ಹಾಜಿಯ ಪುಟ್ಟ ಸೈನ್ಯವನ್ನು ಮಣಿಸಲು ಕರೆಸಿದರು. ಪೋಲೀಸ್, ಎಂ.ಎಸ್.ಎಫ್, ರಜಪುತಾನ, ಸಿಂಧ್, ಕಚ್, ಗೂರ್ಖಾ ಹೀಗೆ ಎಲ್ಲಾ ಸೈನಿಕ ಪಡೆಯು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಮಲಬಾರಿಗೆ ಬಂದಿಳಿಯಿತು.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ: ದೇಶಭಕ್ತಿ ಸಾರುವ ಕನ್ನಡದ ಸಿನಿಮಾಗಳು

ಆದರೂ ಹಾಜಿ ಮಣಿಯಲಿಲ್ಲ…ಬ್ರಿಟಿಷ್ ಪರವಿದ್ದ ಹಿಂದೂ ಮುಸ್ಲಿಂ ಭೂಮಾಲೀಕರನ್ನು ಒಟ್ಟು ಸೇರಿಸಿ ಹಾಜಿಯವರ ಸೈನಿಕರಿಗೆ ಆಮಿಷವೊಡ್ಡಿ ಸೈನ್ಯವನ್ನು ಒಡೆದು ಹಾಜಿಯವರನ್ನು ಏಕಾಂಗಿಯಾಗಿಸುವ ಯತ್ನಕ್ಕೆ ಇಂಟಲಿಜೆನ್ಸ್ ಮುಖ್ಯಸ್ಥ ಮೌರಿಸ್ ಯತ್ನಿಸಿದ. ಆದರೆ ಕ್ರಾಂತಿಯ ದೀಕ್ಷೆ ತೊಟ್ಟ ಆ ವೀರ ಸೈನಿಕರು ಹೇಡಿಗಳೋ, ಸ್ವಾರ್ಥಿಗಳೋ ಆಗಿರಲಿಲ್ಲ.

ಕೊನೆಯ ಸಂಧಾನದ ಯತ್ನವೆಂಬಂತೆ, ಮಾರ್ಷಲ್ ಲಾ ಕಮಾಂಡರ್ ಕರ್ನಲ್ ಹಂಫ್ರಿ ಹಾಜಿಯವರ ಅತ್ಯಾಪ್ತ ಪೊಟ್ಟೆಯಿಲ್ ಉಣ್ಣಿಯಾನಿ ಮುಸ್ಲಿಯಾರರ ಮೂಲಕ ಹಾಜಿಯವರ ಮುಂದೆ ಒಂದು ಸುರಕ್ಷಿತ ಆಯ್ಕೆಯನ್ನು ಇಟ್ಟ. ಕ್ರಾಂತಿ ಕೈ ಬಿಡುವುದಾದರೆ ನಿಮ್ಮನ್ನು ಕೊಲ್ಲದೇ ಪವಿತ್ರ ನಗರಿ ಮಕ್ಕಾಕ್ಕೆ ಗಡೀಪಾರು ಮಾಡುತ್ತೇವೆ. ಹಾಜಿಗೆ ಅದರ ಕುರಿತಾಗಿ ಬ್ರಿಟಿಷರು ಪತ್ರವೊಂದನ್ನು ಬರೆದರು. ಅದನ್ನು ತಲುಪಿಸುವ ಜವಾಬ್ದಾರಿಯನ್ನು ಹಾಜಿಯವರ ನಂಬಿಕಸ್ಥ ಇನ್ಸ್‌ಪೆಕ್ಟರ್ ರಾಮನಾಥ ಅಯ್ಯರ್‌ಗೆ ಒಪ್ಪಿಸಿದರು. ಪತ್ರವು ಹಾಜಿ ಅವರ ಬಳಿಗೆ ತಲುಪಿದಾ ಗಹಗಹಿಸಿ ನಕ್ಕರು..!

ಆಗಷ್ಟೇ ಪತ್ರದೊಂದಿಗೆ ರಾಮನಾಥ್ ಅಯ್ಯರ್ ಬಂದಿರುವುದರಿಂದ ಕೂಡಲೇ ದಾಳಿಯಾಗುವ ಸಾಧ್ಯತೆಯಿಲ್ಲ ಎಂದೇ ಹಾಜಿ ನಂಬಿದ್ದರು. ಸಂಜೆಯ ನಮಾಝಿನ ಹೊತ್ತಾದಾಗ ಮಾಪ್ಲಾ ಸೈನಿಕರೆಲ್ಲರೂ ತಮ್ಮಲ್ಲಿದ್ದ ಆಯುಧಗಳನ್ನು ಒಂದೆಡೆ ಇಟ್ಟು ಅಂಗಸ್ನಾನಕ್ಕೆ (ವುಝೂ)ಹೋದರು. ಆ ಹೊತ್ತಿಗೆ ಪಕ್ಕದಲ್ಲೇ ಅವಿತಿದ್ದ ಬ್ರಿಟಿಷ್ ಸೈನ್ಯಕ್ಕೆ ಬ್ರಿಟಿಷರ ಸಾಕುನಾಯಿ ರಾಮನಾಥ ಅಯ್ಯರ್ ಸಂದೇಶ ರವಾನಿಸಿದ್ದ. ಸೈನಿಕರು ಸಾಮೂಹಿಕ ನಮಾಝ್ ನಿರ್ವಹಿಸುತ್ತಿದ್ದಾಗ ಅವರ ಆಯುಧಗಳನ್ನು ವಶಪಡಿಸಿಕೊಂಡರು.

ಬ್ರಿಟಿಷ್ ಪೊಲೀಸರ ವಶದಲ್ಲಿ ಮುಸ್ಲಿಂ ಕ್ರಾಂತಿಕಾರಿಗಳು

ನಿರಾಯುಧರಾಗಿ ನಮಾಝ್ ನಿರ್ವಹಿಸುತ್ತಿದ್ದ ಕ್ರಾಂತಿಕಾರಿಗಳ ಮೇಲೆ ಬ್ರಿಟಿಷ್ ಸೇನೆ ದಾಳಿ ಮಾಡಿತು. ರಾಮನಾಥ್ ಅಯ್ಯರನ ದ್ರೋಹ ತಿಳಿದಾಗ ಹಾಜಿಗೆ ನಿಂತ ನೆಲವೇ ಕುಸಿದಂತಾಯಿತು. ಬ್ರಿಟಿಷ್ ಸೈನ್ಯವು ಹಾಜಿಯವರನ್ನು ಸೆರೆ ಹಿಡಿದು ಕೈ ಕಾಲುಗಳಿಗೆ ಸಂಕೋಲೆ ತೊಡಿಸಿ, ಚಂಡೆ ವಾದ್ಯ ಮತ್ಯು ನೃತ್ಯಗಳ ಮೆರವಣಿಗೆಯೊಂದಿಗೆ ಹಾಜಿಯವರನ್ನು ಕೊಂಡೊಯ್ದರು. ಕೊಂಡೊಯ್ಯುತ್ತಿದ್ದಾಗ ಹಾಜಿಗೆ ಹೊಡೆದರು, ಬಡಿದರು..ಅವರ ಗಡ್ಡ ಮೀಸೆಗಳನ್ನು ಕೈಯಿಂದ ಕಿತ್ತು ತೆಗೆಯುತ್ತಾ ಚಿತ್ರ ಹಿಂಸೆ ನೀಡುತ್ತಾ ಕರ್ನಲ್ ಹಂಫ್ರಿಯ ಬಳಿಗೆ ಕರೆತಂದರು.

ಇದನ್ನೂ ಓದಿ: ಸ್ವಾತಂತ್ರ್ಯ ಸೇನಾನಿ, ಸರಳ ಜೀವಿ, ಸಮಾನ ಶಿಕ್ಷಣದ ಹರಿಕಾರ ಕಾಮರಾಜ್‌ 

ಹಂಫ್ರಿಯ ಮುಂದೆ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ ಎಂಬ ವೀರ ಸಿಂಹ ಮತ್ತೆ ಗರ್ಜಿಸಿತು. “ಲೋ ಹಂಫ್ರಿ…ನನ್ನ ಪ್ರವಾದಿಯ ಪವಿತ್ರ ನಗರಿಯ ಆಮಿಷವೊಡ್ಡಿ ನನ್ನನ್ನು ಮಣಿಸಬಹುದೆಂದು ತಿಳಿದಿದ್ದೀಯೇನೋ… ಹೌದು ಮಕ್ಕಾವನ್ನು ನಾನು ಇಷ್ಟಪಡುತ್ತೇನೆ. ಆದರೆ ನಾನು ಜನಿಸಿದ್ದು ಈ ಮಣ್ಣಿನಲ್ಲಿ.. ನಾನು ಮಣ್ಣಾಗಬಯಸಿದ್ದೂ ಇದೇ ಮಣ್ಣಿನಲ್ಲಿ….ಕೆಲ ತಿಂಗಳ ಕಾಲವಾದರೂ ಈ ನಾಡನ್ನು ನಿಮ್ಮಿಂದ ವಿಮೋಚಿಸಿ ನಮ್ಮದೇ ಸರಕಾರ ರಚಿಸಿರುವ ಬಗ್ಗೆ ತೃಪ್ತಿಯಿದೆ..

ಕರ್ನಲ್ ಹಂಫ್ರಿಯ ಭಟರು ಹಾಜಿಯವರನ್ನು ಕೊಲ್ಲಲು ತೆರೆದ ಮೈದಾನಕ್ಕೆ ಕರೆತಂದು ನಿಮ್ಮ ಕೊನೆಯ ಅಭಿಲಾಷೆಯೇನೆಂದು ಕೇಳಿದಾಗ ಆ ವೀರ ದೇಶಭಕ್ತ ಇಟ್ಟ ಬೇಡಿಕೆ, “ನೀವು ನನ್ನ ಕಣ್ಣುಗಳನ್ನು ಕಟ್ಟಿ ನನಗೆ ಗುಂಡಿಕ್ಕಬಾರದು.. ನಾನು ನನ್ನ ಈ ನೆಲದ ಮಣ್ಣನ್ನು ನೋಡುತ್ತಾ ಈ ಮಣ್ಣಿಗೆ ಬೀಳಬೇಕು.. ಆದುದರಿಂದ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ…” ಹಾಗೆಯೇ ಅವರ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಬಿಚ್ಚಲಾಯಿತು. ಕೊನೆಯದಾಗಿ ಆ ಕ್ರಾಂತಿಯ ಜ್ವಾಲೆ ಜೋರಾಗಿ ‘ಲಾ ಇಲಾಹ ಇಲ್ಲಲ್ಲಾಹ್’ ಎನ್ನುತ್ತಾ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ತನ್ನ ದೇಶದ ಮಣ್ಣನ್ನು ದಿಟ್ಟಿಸಿ ನೋಡಿ ನಗುತ್ತಾ ಹುತಾತ್ಮರಾದರು.

ಬ್ರಿಟಿಷರು ಅವರನ್ನು ಅಷ್ಟಕ್ಕೇ ಬಿಡಲಿಲ್ಲ. ಮುಸ್ಲಿಮರ ಪದ್ದತಿಯಂತೆ ಅವರ ದೇಹವನ್ನು ದಫನ ಮಾಡಲು ಕೊಡದೇ ಸುಟ್ಟು ಹಾಕಿತು. ಅದರ ಜೊತೆಗೆ ‘ಕ್ರಾಂತಿ ಸರಕಾರ’ದ ದಾಖಲೆ ಪತ್ರಗಳನ್ನೆಲ್ಲಾ ಪೆಟ್ಟಿಗೆಯೊಂದರಲ್ಲಿ ಹಾಕಿ ಸುಟ್ಟು ಹಾಕಿತು. ಅವರನ್ನು ಸುಟ್ಟದ್ದಕ್ಕೆ ಹಂಫ್ರಿ ಕೊಟ್ಟ ಸಮರ್ಥನೆ ಹೀಗಿದೆ, “ಒಂದು ವೇಳೆ ಅವರ ದೇಹವನ್ನೇನಾದರೂ ದಫನ ಮಾಡಲು‌ ಕೊಟ್ಟರೆ ಅವರ ಸಮಾಧಿಯೂ ಮುಂದಿನ ಹೋರಾಟಗಳಿಗೆ ಸ್ಪೂರ್ತಿ ನೀಡುತ್ತದೆ. ನಾವು ಅವರನ್ನು ಶಾಶ್ವತವಾಗಿ ಇಲ್ಲವಾಗಿಸಬಯಸಿದ್ದೆವು”.

ಆದರೆ ಅವರ ವೀರಗಾಥೆಯನ್ನು ಅಂದು ಬ್ರಿಟಿಷರು ಅಳಿಸಬಯಸಿದ್ದರೆ.. ಅಂದು ಬ್ರಿಟಿಷರ ಬೂಟು ನೆಕ್ಕಿದ್ದವರು ಇಂದು ಮತ್ತೆ ಅಳಿಸ ಹೊರಟಿದ್ದಾರೆ. ಹುತಾತ್ಮರಿಗೆ ಸಾವೇ ಇಲ್ಲ ಎಂಬ ಸತ್ಯ ಹೇಡಿಗಳಿಗೆ ಹೇಗೆ ತಾನೇ ಗೊತ್ತು..?

-ಇಸ್ಮತ್‌ ಪಜೀರ್‌

– ಆಧಾರ
– ಆರಾನ್ ವಾರಿಯನ್ ಕುನ್ನತ್ ಕುಂಞಹ್ಮದ್ ಹಾಜಿ – ತಾರಾ ಟೊಜೊ ಅಲೆಕ್ಸ್ (ಉಪನ್ಯಾಸ)
– ಖಿಲಾಫತ್ ಸ್ಮರಣಂ: ಬ್ರಹ್ಮದತ್ತ್ ನಂಬೂದಿಪ್ಪಾಡ್
– Explained: Variyan kunnath Kunjahammed Haji, the khilafath leader who declared an Independent state

(Indian Express : 25th June 2020)

ಇದನ್ನೂ ಓದಿ: ಸುಳ್ಳು ಮತ್ತು ಸತ್ಯದ ಸಂಘರ್ಷ | ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು ‘ನ್ಯಾಯಪಥ’ ವಿಶೇಷ ಸಂಚಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...