Homeಮುಖಪುಟಸ್ವಾತಂತ್ರ್ಯೋತ್ಸವ: ದೇಶಭಕ್ತಿ ಸಾರುವ ಕನ್ನಡದ ಸಿನಿಮಾಗಳು

ಸ್ವಾತಂತ್ರ್ಯೋತ್ಸವ: ದೇಶಭಕ್ತಿ ಸಾರುವ ಕನ್ನಡದ ಸಿನಿಮಾಗಳು

ಬ್ರಿಟೀಷರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನ ಕುರಿತ ಚಿತ್ರ ಸೆಟ್ಟೇರುವ ಸೂಚನೆಯಿದೆ.

- Advertisement -
- Advertisement -

ಜನರಲ್ಲಿ ದೇಶಭಕ್ತಿ ಕುರಿತಂತೆ ಜಾಗೃತಿ ಮೂಡಿಸುವಲ್ಲಿ  ಸಿನಿಮಾಗಳ ಪಾಲೂ ದೊಡ್ಡದಿದೆ. ದೇಶಭಕ್ತಿ ಸಾರುವ ಹತ್ತಾರು ಸಿನಿಮಾಗಳು ಕನ್ನಡದಲ್ಲಿ ಆಗಿಂದಾಗ್ಗೆ ತಯಾರಾಗಿವೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರಗಳ ಜೊತೆಗೆ ಕಮರ್ಷಿಯಲ್ ಹಾದಿಯಲ್ಲಿನ ಪ್ರಯೋಗಗಳೂ ಕಾಣಿಸುತ್ತವೆ.

***

ದೇಶಭಕ್ತಿ ಸಾರುವ ಹತ್ತಾರು ಶ್ರೇಷ್ಠ ಚಿತ್ರಗಳು ಕನ್ನಡದಲ್ಲಿ ತಯಾರಾಗಿವೆ. ಪ್ರಾದೇಶಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ದೇಶಭಕ್ತಿ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಬಿ.ಆರ್.ಪಂಥುಲು ನಿರ್ದೇಶನದ ‘ಕಿತ್ತೂರು ರಾಣಿ ಚೆನ್ನಮ್ಮ’ (1962) ಈ ಹಾದಿಯಲ್ಲಿ ಪ್ರಮುಖ ಚಿತ್ರ. ಬ್ರಿಟಿಷರ ವಿರುದ್ಧ ಹೋರಾಡುವ ರಾಣಿ ಚೆನ್ನಮ್ಮನಾಗಿ ನಟಿ ಬಿ.ಸರೋಜಾದೇವಿ ನಟಿಸಿದ್ದರು. ಹತ್ತಾರು ಪುರಸ್ಕಾರಗಳಿಗೆ ಭಾಜನವಾದ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು.

ಕಿತ್ತೂರು ರಾಣಿ ಚೆನ್ನಮ್ಮ

ಮಾಡಿ ಮಡಿದವರು

ಡಾ.ರಾಜ್‌ಕುಮಾರ್, ಕಲ್ಪನಾ, ಅಶ್ವತ್ಥ್ ಅಭಿನಯದ ‘ಸರ್ವಮಂಗಳ’ (1968) ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಸ್ತಾಪವಿತ್ತು. ಇದು ಕಾದಂಬರಿಕಾರ ಚದುರಂಗರ ಪ್ರಮುಖ ಕೃತಿ. ಚಿತ್ರದ ನಿರ್ದೇಶಕರು ಕೂಡ ಅವರೇ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ತಯಾರಾದ ಚಿತ್ರ ‘ಮಾಡಿ ಮಡಿದವರು’ (1974). ಲೇಖಕ ಬಸವರಾಜ ಕಟ್ಟೀಮನಿ ಅವರ ಕಾದಂಬರಿ ಆಧರಿಸಿದ ಪ್ರಯೋಗ. ಕೆ.ಎಂ.ಶಂಕರಪ್ಪ ನಿರ್ದೇಶನ, ಯು.ಎಂ.ಎನ್.ಷರೀಫ್ ಛಾಯಾಗ್ರಹಣ, ಕೃಷ್ಣಮೂರ್ತಿ ಶಬ್ಧಗ್ರಹಣ ಮತ್ತು ಉಮೇಶ್ ಕುಲಕರ್ಣಿ ಸಂಕಲನ ಚಿತ್ರಕ್ಕಿತ್ತು. ವಿಶೇಷವೆಂದರೆ ಇವರೆಲ್ಲರೂ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಪದವಿ ಪಡೆದವರು ಮತ್ತು ಇದು ಅವರು ಕೆಲಸ ಮಾಡಿದ ಮೊದಲ ಚಲನಚಿತ್ರವಾಗಿತ್ತು. ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ರಾಮಗೋಪಾಲ್, ಗಿರಿಜಾ, ಸುಧೀರ್ ಅವರಿಗೆ ಇದು ಚೊಚ್ಚಲ ಸಿನಿಮಾ. ರಂಗಕರ್ಮಿ ಏಣಗಿ ಬಾಳಪ್ಪ, ಢಿಕ್ಕಿ ಮಾಧವರಾವ್, ಸಾಹಿತಿ ಚಂದ್ರಶೇಖರ ಕಂಬಾರರು ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಾಗರದ ರಾಮದಾಸ್ ಚಿತ್ರದ ನಿರ್ಮಾಪಕರು. ಪ್ರಗತಿ ಅಶ್ವತ್ಥ ನಾರಾಯಣ ಅವರು ಚಿತ್ರದ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು.

ಸಂಗೊಳ್ಳಿ ರಾಯಣ್ಣ

ವೃತ್ತಿರಂಗಭೂಮಿ ಕಲಾವಿದರು ಸ್ವಾತಂತ್ರ್ಯ ಹೋರಾಟಗಾರರ ಜೀವನಕಥೆಗಳನ್ನಾಧರಿಸಿದ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ರಂಗಕಲಾವಿದರೇ ನಟಿಸಿದ್ದ `ಸಂಗೊಳ್ಳಿ ರಾಯಣ್ಣ’ ಸಿನೆಮಾ 1967ರಲ್ಲಿ ತೆರೆಕಂಡಿತ್ತು. ಅನಂತ್ ಹಿರೇಗೌಡರ್ ಚಿತ್ರದ ನಿರ್ದೇಶಕ. ಮೇರು ಗಾಯಕಿ ಲತಾ ಮಂಗೇಶ್ಕರ್ ಈ ಚಿತ್ರದ ‘ಬೆಳ್ಳಾನೆ ಬೆಳಗಾಯಿತು…’ ಗೀತೆಗೆ ದನಿಯಾಗಿದ್ದರು. ಇದೇ ಸಂದರ್ಭದಲ್ಲಿ ರಂಗಕಲಾವಿದರೇ ಅಭಿನಯಿಸಿದ್ದ ಸ್ವಾತಂತ್ರ್ಯವೀರ `ಸಿಂಧೂರ ಲಕ್ಷ್ಮಣ’ ಚಿತ್ರ ತೆರೆಗೆ ಬಂದಿತ್ತು. 2012ರಲ್ಲಿ  ನಾಗಣ್ಣ ನಿರ್ದೇಶನದಲ್ಲಿ ಮತ್ತೊಮ್ಮೆ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ ತೆರೆಗೆ ಬಂದಿತ್ತು. ಅದ್ಧೂರಿ ಬಜೆಟ್, ಬಹುತಾರಾಗಣದಲ್ಲಿ ತಯಾರಾದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದರು.

ಸಂಗೊಳ್ಳಿ ರಾಯಣ್ಣ

ಮುತ್ತಿನ ಹಾರ

ಯುದ್ಧದ ಚಿತ್ರಣವಿದ್ದ ‘ಮುತ್ತಿನ ಹಾರ’ (1990) ಕನ್ನಡದ ಪ್ರಮುಖ ರಾಷ್ಟ್ರಪ್ರೇಮದ ಚಿತ್ರಗಳಲ್ಲೊಂದು. ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಅಶ್ವತ್ಥ್ ಅಮೋಘ ಅಭಿನಯ ನೀಡಿದ್ದರು. ಟಿ.ಎಸ್.ನಾಗಾಭರಣ ನಿರ್ದೇಶನದ `ಮೈಸೂರು ಮಲ್ಲಿಗೆ’ (1991) ಕನ್ನಡದ ಮತ್ತೊಂದು ಪ್ರಮುಖ ಸಿನೆಮಾ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಪ್ರೇಮಕಥೆಯ ಸುಂದರ ನಿರೂಪಣೆಯಿತ್ತು. ಪ್ರಶಸ್ತಿ, ಪುರಸ್ಕಾರಗಳೊಂದಿಗೆ ಜನಮನ್ನಣೆಯನ್ನೂ ಗಳಿಸಿದ ಚಿತ್ರಗಳಿವು.

ಮುತ್ತಿನ ಹಾರ

ವೀರಪ್ಪನಾಯ್ಕ

ವಿಷ್ಣುವರ್ಧನ್ ಅಭಿಯನದ `ವೀರಪ್ಪನಾಯ್ಕ’ (1999) ಚಿತ್ರದಲ್ಲಿ ಗಾಂಧಿವಾದ ಮತ್ತು ನಕ್ಸಲಿಸಂನ ಸಂಘರ್ಷದ ಚಿತ್ರಣವಿತ್ತು. ಎಸ್.ನಾರಾಯಣ್ ಚಿತ್ರದ ನಿರ್ದೇಶಕ. ಶಿವರಾಜ್‌ಕುಮಾರ್ ಅಭಿನಯದ ‘ಸಾರ್ವಭೌಮ’, ಯೋಗೀಶ್ವರ್‌ರವರ `ಸೈನಿಕ’ ಚಿತ್ರಗಳಲ್ಲಿ ಯೋಧರ ಕಥೆಗಳಿದ್ದವು. `ಜೈಹಿಂದ್’, `ಎಕೆ 47′ `ವಂದೇಮಾತರಂ’, `ಇಂಡಿಪೆಂಡೆನ್ಸ್ ಡೇ’ ಸೇರಿದಂತೆ ಕೆಲವು ಕಮರ್ಷಿಯಲ್ ಚಿತ್ರಗಳಲ್ಲಿ ರಾಷ್ಟ್ರಪ್ರೇಮದ ಝಲಕ್ ಇತ್ತು. ಬ್ರಿಟೀಷರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನ ಕುರಿತ ಚಿತ್ರ ಸೆಟ್ಟೇರುವ ಸೂಚನೆಯಿದೆ.

ಬರಹ: ಶಶಿಧರ ಚಿತ್ರದುರ್ಗ

ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ, ಡಿ.ಸಿ.ನಾಗೇಶ್


ಇದನ್ನೂ ಓದಿ: ಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್‌ ಚೆರ್ರಿ: ಸಾವು, ನೋವು, ವಿಷಾದಗಳ ಶೋಧದ ಜೊತೆಗೆ ಉದುರಿದ ಚೆರ್ರಿ ಹಣ್ಣುಗಳ ರುಚಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...