Homeಮುಖಪುಟಸ್ವಾತಂತ್ರ್ಯ ಹರಣ ತಪ್ಪಿಸಲು ಸ್ವಾತಂತ್ರ್ಯ ಹೋರಾಟವೇ ಬೇಕು

ಸ್ವಾತಂತ್ರ್ಯ ಹರಣ ತಪ್ಪಿಸಲು ಸ್ವಾತಂತ್ರ್ಯ ಹೋರಾಟವೇ ಬೇಕು

ಪ್ರಜಾತಂತ್ರ, ಸಾಂವಿಧಾನಿಕ ಮೌಲ್ಯಗಳೇ ಮೂಲಗುಣವಾಗಿರುವ ಸ್ವಾತಂತ್ರ್ಯವು ಭಾರತದಲ್ಲಿ ಮರಳಿ ಬರುವತನಕ ನಡೆಯಬೇಕಾದ ಹೋರಾಟದಲ್ಲಿ ಪತ್ರಿಕೆಯೊಂದು ವಹಿಸಬೇಕಾದ ಪಾತ್ರವನ್ನು ನಿರ್ವಹಿಸಲು ನ್ಯಾಯಪಥ ಕಟಿಬದ್ಧವಾಗಿದೆ.

- Advertisement -
- Advertisement -

‘ನಾವು ಮಾಡಬೇಕಿರುವುದು ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎನ್ನುವುದು ಕ್ಲೀಷೆಯಾಗಿದೆ. ಇತ್ತೀಚೆಗೆ ಪದೇ ಪದೇ ಕೇಳಿದ್ದೇವೆ. ಕಳೆದ 30 ವರ್ಷಗಳಿಂದ ಸಾರ್ವಜನಿಕ ವಲಯದ ವಿದ್ಯಮಾನಗಳನ್ನು ಗಮನಿಸುತ್ತಾ ಬಂದಿರುವ ನಾನು ಯಾವಾಗ ಇದನ್ನು ಹೆಚ್ಚು ಕೇಳುತ್ತಾ ಬಂದೆ ಎಂದು ಕೇಳಿಕೊಂಡೆ. ‘90ರ ದಶಕದ ಬರಹಗಳಲ್ಲಿ ‘ಇನ್ನೊಂದು ಸ್ವಾತಂತ್ರ್ಯ ಹೋರಾಟ’ದ ರೆಫರೆನ್ಸ್ ಕಂಡಿದ್ದು ತುರ್ತು ಪರಿಸ್ಥಿತಿಯ ಸಂದರ್ಭದ್ದು. ಆಗ ಇಂದಿರಾಗಾಧಿಯವರ ಆಳ್ವಿಕೆಯ ವಿರುದ್ಧ ನಡೆದದ್ದು ಸ್ವಾತಂತ್ರ್ಯ ಹೋರಾಟವೇ ಎಂದು ಅದರಲ್ಲಿ ಭಾಗವಹಿಸಿದ್ದ ಹಲವರು ಭಾವಿಸಿದ್ದರು. ಅದೇ ರೀತಿ ರೈತ ದಲಿತ ಚಳವಳಿಗಳೂ ಸಹಾ ಆಗಾಗ್ಗೆ ಸ್ವಾತಂತ್ರ್ಯ ಹೋರಾಟ ಎಂಬ ಮಾತುಗಳನ್ನು ಬಳಸಿದ್ದರೂ ಸಹ ಒಂದು ರೀತಿಯಲ್ಲಿ ಅದು ಪ್ರಜಾತಂತ್ರದ (ಅರ್ಥಾತ್ ಸ್ವಾತಂತ) ವಿಸ್ತರಣೆಯ ಹೋರಾಟವಾಗಿತ್ತು.

1991ರ ನಂತರದಲ್ಲಿ ಹೊಸ ಆರ್ಥಿಕ ನೀತಿಯ ಭಾಗವಾಗಿ ಬಹು ರಾಷ್ಟ್ರೀಯ ಕಂಪನಿಗಳ ಬಂಡವಾಳವು ಭಾರತದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ‘ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ’ದ ಮಾತುಗಳು ಕೇಳಿಬರತೊಡಗಿದವು. ‘21ನೇ ಶತಮಾನದ ಹೊತ್ತಿಗೆ ಆ ಕಂಪೆನಿಗಳು ಭಾರತವನ್ನು ಸಂಪೂರ್ಣ ಆಕ್ರಮಿಸಿಬಿಡುತ್ತವೆ; ಅಂದು ಒಂದು ಈಸ್ಟ್ ಇಂಡಿಯಾ ಕಂಪೆನಿ ಭಾರತ ಉಪಖಂಡವನ್ನು ಆಕ್ರಮಿಸಿದ್ದರೆ, ಇಂದು ನೂರಾರು ಬಹು ರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶವನ್ನು ಕಬಳಿಸಲಿವೆ. ನಾವು ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ತಯಾರಾಗಬೇಕಿದೆ’ ಎಂಬುದು ಅಲ್ಲಲ್ಲಿ ಚರ್ಚೆಯಾಗುತ್ತಿತ್ತು.

ನೋಡನೋಡುತ್ತಿದ್ದಂತೆ ವಿದೇಶೀ ಕಂಪೆನಿಗಳು ಮಾತ್ರವಲ್ಲದೇ ದೇಶೀ ಕಾರ್ಪೋರೇಟ್‌ಗಳೂ ಸಹ ಬೃಹದಾಕಾರವಾಗಿ ಬೆಳೆದವು. ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಸಾಧಿಸಿದವು. ಜಗತ್ತಿನ ಭಾರೀ ಶ್ರೀಮಂತರಲ್ಲಿ ಭಾರತದ ಕುಬೇರರೂ ಸ್ಥಾನ ಪಡೆದುಕೊಂಡರು. ಅಂದರೆ ಸ್ವಾತಂತ್ರ್ಯ ಎಂದರೆ ಏನೆಲ್ಲವೆಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರು ಭಾವಿಸಿದ್ದರೋ ಆ ಸ್ವಾತಂತ್ರ್ಯ ಇಲ್ಲವಾಗತೊಡಗಿತ್ತು. ಸಂವಿಧಾನದ ಕಲಂ 39 (ಎ)(ಬಿ)(ಸಿ) ಮತ್ತಿತರ ಭಾಗಗಳು ಬಲವಾಗಿ ಪ್ರತಿಪಾದಿಸಿದ್ದ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳುಗಳನ್ನು ಗಾಳಿಗೆ ತೂರಲಾಗುತ್ತಿತ್ತು. ನಿರ್ದಿಷ್ಟವಾಗಿ ದೇಶದ ಶೋಷಿತ ಸಮುದಾಯಗಳ ಹಕ್ಕುಗಳಿಗೆ ಚ್ಯುತಿ ಬರತೊಡಗಿತು. ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಅರ್ಪಿಸಲು ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಹೆಚ್ಚಾಯಿತು; ರೈತರ ಭೂಮಿ ಕಬಳಿಕೆ ಅಧಿಕವಾಯಿತು; ಕಾರ್ಮಿಕ ಕಾನೂನುಗಳಿಗೆ ಅರ್ಥವಿಲ್ಲದಾಯಿತು; ದಲಿತರ ಮೇಲಿನ ದೌರ್ಜನ್ಯದ ಕೇಸುಗಳು ಹೆಚ್ಚೆಚ್ಚು ಬೆಳಕಿಗೆ ಬಂದವು…

ಆರ್ಥಿಕ ಪಾರಮ್ಯಕ್ಕಾಗಿ ನಡೆದ ಈ ಬೆಳವಣಿಗೆಗಳು ಸಾಮಾಜಿಕ ದೌರ್ಜನ್ಯಗಳಿಗೆ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾದವು. ಇದೇ ಹೊತ್ತಿನಲ್ಲಿ ಭಾರತದಲ್ಲಿ ಕೋಮುವಾದಿ ರಾಜಕಾರಣವೂ ಬೆಳೆಯತೊಡಗಿತು. ಜಾಗತೀಕರಣದ ಜೈತ್ಯಯಾತ್ರೆಗೆ ಕೋಮುವಾದವು ರಥಚಕ್ರವಾಗಿ ಬಳಕೆಯಾಗುತ್ತಿದೆ ಮತ್ತು ದೇಶವಾಸಿಗಳ ಅಸಲೀ ಸಮಸ್ಯೆಗಳು ಪಕ್ಕಕ್ಕೆ ಸರಿಯುತ್ತಿವೆ ಎಂಬ ವಿಶ್ಲೇಷಣೆಯು ಬಲವಾಗಿ ಕೇಳಿಬಂದಿತು. ಆದರೆ ದೇಶದ ಜನರ ಕುರಿತು, ಪ್ರಜಾತಂತ್ರದ ಕುರಿತು, ಸಂವಿಧಾನದ ಆಶಯಗಳ ಕುರಿತು ಕಾಳಜಿಯಿದ್ದ ಹಲವರು ಸುಮ್ಮನಿರಲು ನಿರಾಕರಿಸಿದರು. ದೌರ್ಜನ್ಯಕ್ಕೊಳಗಾಗುತ್ತಿದ್ದ ಜನರ ಪರವಾಗಿ, ಅಸಮಾನತೆಯ ವಿರುದ್ಧವಾಗಿ ದನಿಯೆತ್ತಿದರು, ಬರೆದರು. ಹೋರಾಟಗಳಲ್ಲೂ ನೇರವಾಗಿ ಪಾಲ್ಗೊಂಡರು. ಇವರಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ವಾಂಸರು, ಚಿಂತಕರುಗಳೂ ಇದ್ದರು. ಹೀಗೆ ನಡೆಯುತ್ತಿರುವಾಗಲೇ ದಿಕ್ಕೇಡಿ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ವಾಜಪೇಯಿ ಅವರ ನಾಯಕತ್ವದಡಿ ಅಧಿಕಾರಕ್ಕೆ ಬಂದಿತು. ಸದರಿ ಆರ್ಥಿಕ ನೀತಿಗಳನ್ನು ಮತ್ತಷ್ಟು ತೀವ್ರವಾಗಿ ಜಾರಿಗೆ ತಂದು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಘೋಷಿಸಿದ ಆ ಸರ್ಕಾರವನ್ನು ಅಂದಿನ ಸಮೀಕ್ಷೆಗಳಿಗೆ ವಿರುದ್ಧವಾಗಿ ಜನರು ಸೋಲಿಸಿದರು. ಆ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಜಾಗತೀಕರಣವನ್ನು ವಿಸ್ತರಿಸಲು ಸ್ಥಾಪಿಸಲಾಗಿದ್ದ ಸಂಸ್ಥೆ ಡಬ್ಲ್ಯು ಟಿಓಗೂ ಹಿನ್ನಡೆ ಉಂಟಾಗಿತ್ತು. ಭಾರತದಲ್ಲಿ ಆದಿವಾಸಿಗಳು ಮತ್ತು ರೈತರ ಹೋರಾಟವೂ ಜೋರಾಗಿತ್ತು. ಒರಿಸ್ಸಾ, ಛತ್ತೀಸ್‌ಗಢಗಳಲ್ಲಿ ಆದಿವಾಸಿಗಳು, ಪಶ್ಚಿಮ ಬಂಗಾಳದ ಸಿಂಗೂರಿನ ರೈತರು – ಹೀಗೆ ತೀವ್ರ ರೀತಿಯ ಹೋರಾಟಗಳು ನಡೆದು ವಿವಿಧ ಗಣಿಗಾರಿಕೆ ಹಾಗೂ ಒಕ್ಕಲೆಬ್ಬಿಸುವಿಕೆ ಯೋಜನೆಗಳು ನಿಲ್ಲಬೇಕಾಗಿ ಬಂದವು.

2004ರ ಚುನಾವಣೆಯಲ್ಲಿ ಭಾರತ ಪ್ರಕಾಶಿಸುತ್ತಿಲ್ಲ ಎಂಬ ಜನರ ಷರಾ, ನಂತರ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿತ್ತು. ಜೊತೆಗೆ ಈ ಹೋರಾಟಗಳು ಸೇರಿದ್ದರಿಂದ ಅಲ್ಲಿಂದ ಮುಂದಿನ10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರವು ಕೆಲವಾರು ಸುಧಾರಣೆಗಳನ್ನು ಮತ್ತು ಜನರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕಾಯಿತು. ಒಂದೆಡೆ ಈ ಸುಧಾರಣೆಗಳನ್ನು ತರುತ್ತಿದ್ದ ಸರ್ಕಾರಗಳು ಇನ್ನೊಂದೆಡೆ ದಮನಕಾಂಡವನ್ನೂ ಮುಂದುವರೆಸಿದ್ದವು. ಮತ್ತೊಂದೆಡೆ ವಿಪರೀತ ಭ್ರಷ್ಟಾಚಾರವೂ ನಡೆದಿತ್ತು. ಅದರ ಜೊತೆಜೊತೆಗೇ ಕಾರ್ಪೋರೇಟ್ ಹಿತವನ್ನೂ ಕಾಪಾಡುವ ಹಲವಾರು ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿತ್ತು. ದೇಶದ ಕುಬೇರರು ಪ್ರಪಂಚದ ಕುಬೇರರಾಗತೊಡಗಿದ್ದು ಆಗಲೇ.

ಇವೆಲ್ಲಾ ಇದ್ದರೂ ಒಟ್ಟಾರೆ ‘ಅಭಿವೃದ್ಧಿಯ ದರ’ ಹೆಚ್ಚೇ ಇದ್ದುದರಿಂದ ಕುಬೇರರ ಜೊತೆಗೆ ಮಧ್ಯಮವರ್ಗವೂ ಬೆಳವಣಿಗೆಯಾಯಿತು; ಬಡವರೂ ಉಸಿರಾಡುತ್ತಿದ್ದರು. ಅಲ್ಲಲ್ಲಿ ಮಾತ್ರ ಹೋರಾಟಗಳು ಭುಗಿಲೇಳುತ್ತಿದ್ದವು. ಸರಿಯಾಗಿ ಇದೇ ಸಂದರ್ಭದಲ್ಲಿ ಮಧ್ಯಮವರ್ಗದ ಆಶೋತ್ತರಗಳನ್ನು ಪ್ರತಿಬಿಂಬಿಸಿದ ಎರಡು ವಿದ್ಯಮಾನಗಳು ಘಟಿಸಿದವು. ಒಂದು, ಭ್ರಷ್ಟಾಚಾರದ ವಿರುದ್ಧ ಭಾರತದ ಆಂದೋಲನ. ಇನ್ನೊಂದು ‘ಗುಜರಾತ್ ಮಾದರಿ’ಯೆಂಬ ಹುಸಿ ಮೋಡಿಯನ್ನು ಸೃಷ್ಟಿಸಿ ಅದರ ಮಾರ್ಕೆಟಿಂಗ್ ಮಾಡಿದ್ದು. ಮೊದಲನೆಯದ್ದು ಆದರ್ಶವಾದಿ ಮಧ್ಯಮವರ್ಗವನ್ನು ಸೆಳೆದರೆ, ಎರಡನೆಯದ್ದನ್ನು ಸೆಳೆದ ಮಧ್ಯಮವರ್ಗ ಬೇರೆ ರೀತಿಯದ್ದು. ಅದು ತಾನು ಮೇಲ್ಚಲನೆಯ ಬಯಕೆಯನ್ನು ಹೊಂದಿರುವಾಗಲೇ, ತಳಸಮುದಾಯಗಳ ಕುರಿತ ಅಸಹನೆಯನ್ನು, ಮುಸ್ಲಿಮರ ಕುರಿತು ಪೂರ್ವಗ್ರಹವನ್ನು ಬೆಳೆಸಿಕೊಂಡಿದ್ದ ಮಧ್ಯಮವರ್ಗ. ಇವೆರಡೂ ಮಾದರಿಗಳು, ಆಗಿದ್ದ ಭ್ರಷ್ಟಾಚಾರವನ್ನು ನಡೆದದ್ದಕ್ಕಿಂತ ವಿಪರೀತ ಹಿಗ್ಗಿಸಿದವು. ಅಸಮಾನತೆ, ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಸಾಮಾಜಿಕ ತಾರತಮ್ಯ ಇತ್ಯಾದಿಗಳನ್ನು ಪಕ್ಕಕ್ಕೆ ತಳ್ಳಲಾಯಿತು.

ಅವೆಲ್ಲದರ ಮುಖಾಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ವಾಸ್ತವದಲ್ಲಿ ಸ್ವಾತಂತ್ರ್ಯ ಹೋರಾಟದ ಮೂಲಕ 1947ರಲ್ಲಿ ಪಡೆದುಕೊಂಡ ವಿಮೋಚನೆ ಮತ್ತು 1950ರಲ್ಲಿ ಜಾರಿಗೊಳಿಸಿಕೊಂಡ ಸಂವಿಧಾನದ ಭರವಸೆಗಳ ವಿರುದ್ಧದ ಪ್ರತಿಕ್ರಾಂತಿ 2014ರಲ್ಲಿ ಸಂಭವಿಸಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ತಡವಾಯಿತು. ಏಕೆಂದರೆ 2019ರಲ್ಲಿ ಮತ್ತಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಯು ಯಾವ ಅಭಿವೃದ್ಧಿಯ ಅಜೆಂಡಾದ ಮೇಲೂ ಜನಮನ್ನಣೆ ಪಡೆದುಕೊಂಡಿದ್ದಲ್ಲ. ತನ್ನ ಅಸಲೀ ಅಜೆಂಡಾದ ಮೇಲೆಯೇ ಅಧಿಕಾರಕ್ಕೆ ಬಂದಿತು ಮತ್ತು ಅದನ್ನೇ ಜಾರಿ ಮಾಡಲು ತೊಡಗಿದೆ. ಶೇ.39ರಷ್ಟು ಮತ ಮಾತ್ರ ಪಡೆದಿರುವ ಪಕ್ಷವು, ಒಂದು ವೇಳೆ ಶೇ.51ರಷ್ಟು ಮತ ಪಡೆದಿದ್ದರೂ ಪ್ರಜಾಪ್ರಭುತ್ವದಲ್ಲಿ ಉಳಿದ ದನಿಗಳನ್ನೂ ಗೌರವಿಸಬೇಕು ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳಿಗೆ ಮುಕ್ಕಾಗದಂತೆ ನಡೆದುಕೊಳ್ಳಬೇಕು ಎಂಬುದಕ್ಕೆ ಗೌರವ ಕೊಡುವ ಇರಾದೆ ಅದಕ್ಕಿಲ್ಲ.

ತನ್ನ ಅಜೆಂಡಾ ಜಾರಿಮಾಡಲು ತಾಂತ್ರಿಕವಾಗಿ ಪಡೆದುಕೊಂಡಿರುವ ಬಹುಮತವನ್ನಷ್ಟೇ ಅದು ಬಳಸುತ್ತಿಲ್ಲ. ಬದಲಿಗೆ ಸಮಾಜದ ಗಣನೀಯ ವಿಭಾಗಗಳಲ್ಲ್ಲಿ (ಮುಖ್ಯವಾಗಿ ಬಾಯಿಬಲ್ಲ ಜನವಿಭಾಗ ಹಾಗೂ ಬಾಯಿ ಮಾಡುತ್ತಿರುವ ಮಾಧ್ಯಮ) ತಂದಿರುವ ಮೌಲ್ಯಗಳ, ನೀತಿಸಂಹಿತೆಯ, ಅಭಿಪ್ರಾಯಗಳ ಬದಲಾವಣೆಯ ಮೂಲಕ ತೋಳೇರಿಸಿ ನಿಂತಿದೆ. ಎಲ್ಲಾ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ, ಸಾಂವಿಧಾನಿಕ ಸಂಸ್ಥೆಗಳನ್ನು ಹಿಂದೆ ಕಾಂಗ್ರೆಸ್ (ಮುಖ್ಯವಾಗಿ ಇಂದಿರಾಗಾಂಧಿ) ಆಡಳಿತದಲ್ಲಿ ದುರ್ಬಲಗೊಳಿಸಿದ್ದಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಹೀನವಾಗಿಸಿ ತನ್ನ ತಾಳಕ್ಕೆ ಕುಣಿಸುತ್ತಿದೆ. ದನಿಯೆತ್ತಬಹುದಾದವರನ್ನು ಮೊದಲೇ ಮಣಿಸಲು ಅಸ್ತ್ರಗಳನ್ನು ಕಂಡುಕೊಂಡಿರುವುದಲ್ಲದೇ, ಅದರ ಮಧ್ಯೆಯೂ ಪ್ರಜಾತಂತ್ರದ ಪರ ನಿಲ್ಲಬಹುದಾದವರನ್ನು ದಮನಿಸಲು ಪ್ರಭುತ್ವ ಯಂತ್ರಾಂಗವನ್ನೇ ಬಳಸಿಕೊಳ್ಳಲಾಗುತ್ತಿದೆ.

ಅಂದರೆ ಭಾರತೀಯರು ವೀರೋಚಿತವಾದ ಸಂಗ್ರಾಮದ ಮೂಲಕಪಡೆದುಕೊಂಡಿದ್ದ ಸ್ವಾತಂತ್ರ್ಯವನ್ನು, ಆ ಹೋರಾಟದಲ್ಲಿ ಭಾಗಿಯಾಗದಿದ್ದವರು ಅಧಿಕಾರಕ್ಕೆ ಬಂದು ಕಿತ್ತುಕೊಳ್ಳತೊಡಗಿದ್ದಾರೆ. ಅದರ ಒಂದೇ ಒಂದು ನಿದರ್ಶನವೆಂದರೆ ಭಾರತದ ಗಣ್ಯ, ಮಾನ್ಯ ವಿದ್ವಾಂಸರು, ಚಿಂತಕರ ಬಂಧನ. ಭಾರತವು ಹೆಮ್ಮೆ ಪಟ್ಟುಕೊಳ್ಳಬೇಕಾದಂತಹ ಮೇಧಾವಿಗಳನ್ನು ಜೈಲಿನಲ್ಲಿಡಲಾಗಿದೆ.
ಹೀಗಾಗಿ ನ್ಯಾಯಪಥದ ತಂಡವು ಸ್ವಾತಂತ್ರ್ಯ ದಿನದಿಂದ ಗೌರಿದಿನವರೆಗೆ ತರಲಿರುವ ನಾಲ್ಕು ವಿಶೇಷಾಂಕಗಳ ಮೊದಲ ಸಂಚಿಕೆಯನ್ನು ಆ ಮೇಧಾವಿಗಳ ಕುರಿತ ಲೇಖನಗಳಿಗೆ ಮೀಸಲಿಡಲಾಗಿದೆ. ಈ ಸಂಚಿಕೆಯಿಂದ ಆರಂಭಿಸಿ ಮುಂದಿನ ಸಂಚಿಕೆಗಳಲ್ಲಿ ಭಾರತದ ಸ್ವಾತಂತ್ರ್ಯ ಹರಣ ಮತ್ತು ಅದನ್ನು ಮರಳಿ ಪಡೆಯುವ ಕುರಿತು (ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹುದೇ ವಿದ್ಯಮಾನದ ಕುರಿತು) ಭಾರತದ ಹಾಗೂ ಜಗತ್ತಿನ ಹಲವು ಚಿಂತಕರು, ಚಳವಳಿಕಾರರು ಬರೆಯಲಿದ್ದಾರೆ.

ಅಂತಿಮವಾಗಿ, ಹರಣವಾದ ಸ್ವಾತಂತ್ರ್ಯ ವನ್ನು ಮರಳಿ ಪಡೆಯಲು ಮತ್ತೊಂದು ಸ್ವಾತಂತ್ರ್ಯ ಹೋರಾಟವೇ ನಡೆಯಬೇಕಲ್ಲವೇ? ಅದಕ್ಕಾಗಿ ಈ ವಿಚಾರಗಳು ನಾಡಜನರಿಗೆ ದಾರಿದೀಪವಾಗಲಿ ಎಂಬ ಆಶಯ ನಮ್ಮದು. ಪ್ರಜಾತಂತ್ರ, ಸಾಂವಿಧಾನಿಕ ಮೌಲ್ಯಗಳೇ ಮೂಲಗುಣವಾಗಿರುವ ಸ್ವಾತಂತ್ರ್ಯವು ಭಾರತದಲ್ಲಿ ಮರಳಿ ಬರುವತನಕ ನಡೆಯಬೇಕಾದ ಹೋರಾಟದಲ್ಲಿ ಪತ್ರಿಕೆಯೊಂದು ವಹಿಸಬೇಕಾದ ಪಾತ್ರವನ್ನು ನಿರ್ವಹಿಸಲು ನ್ಯಾಯಪಥ ಕಟಿಬದ್ಧವಾಗಿದೆ. ಅದಕ್ಕೆ ನಮ್ಮ ಓದುಗರ ಬೆಂಬಲವು ಅತ್ಯಗತ್ಯವೆಂಬುದನ್ನು ಇನ್ನೊಮ್ಮೆ ಒತ್ತಿ ಹೇಳಬೇಕಿಲ್ಲ ಅಲ್ಲವೇ?


ಇದನ್ನೂ ಓದಿ: ಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...