ಕಳೆದ ಐದು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗೆ ತುಮಕೂರಿನ 2ನೇ ಅಧಿಕ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ ತೀರ್ಪು ನೀಡಿದ್ದು, 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತವನ್ನು ಮೇಲ್ಮನವಿ ಅವಧಿ ಮುಗಿದ ಬಳಿಕ ಸಂತ್ರಸ್ತೆಗೆ ನೀಡುವಂತೆ ನಿರ್ದೇಶಿಸಿದ್ದಾರೆ. ಪರಿಹಾರ ನಿಗದಿಪಡಿಸಲು ಪ್ರಕರಣದ ಕಡತವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಸರ್ಕಾರಿ ವಕೀಲೆ ವಿ.ಎ.ಕವಿತಾ ವಾದ ಮಂಡಿಸಿದ್ದರು.
2017ರ ಜನವರಿ 15 ರಂದು ತುಮಕೂರು ಗ್ರಾಮಾಂತರ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಸ್. ಉಮೇಶ್ ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ನಡೆದುಕೊಂಡು ಹೋಗುತ್ತಿದ್ದ ಮಾನಸಿಕ ಅವಸ್ಥೆ ಮೇಲೆ ಅತ್ಯಾಚಾರವೆಸಗಿದ್ದರು.
ಇದನ್ನೂ ಓದಿ: ಒಡಿಶಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಜೀವಾವಧಿ ಶಿಕ್ಷೆ, ಆತನ ಪತ್ನಿಗೆ 20 ವರ್ಷ ಜೈಲು
ಸಂಕ್ರಾಂತಿ ಹಬ್ಬದಂದು ರಾತ್ರಿ 7 ಗಂಟೆ ಸುಮಾರಿಗೆ ಕೋಟೆ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದ 30 ವರ್ಷದ ಸಂತ್ರಸ್ತೆ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ವಾಪಸ್ ಹೊರಟ್ಟಿದ್ದರು. ಅಂತರಸನಹಳ್ಳಿ ಸೇತುವೆ ಬಳಿ ಗಸ್ತಿನಲ್ಲಿದ್ದ ಎಎಸ್‌ಐ ಉಮೇಶ್ ಆಕೆಯನ್ನು ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ವಾಹನಕ್ಕೆ ಹತ್ತಿಸಿಕೊಂಡು ಚಲಿಸುತ್ತಿದ್ದ ವಾಹನದಲ್ಲಿ ಅತ್ಯಾಚಾರವೆಸಗಿದ್ದರು. ನಂತರ ಬೆಳಗಿನ ಜಾವ ಮಹಿಳೆಯನ್ನು ಮನೆ ಬಳಿ ಬಿಟ್ಟು ಹೋಗಿದ್ದರು. ಘಟನೆ ಬಗ್ಗೆ ತಿಳಿದ ಕುಟುಂಬದವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದಲ್ಲಿ ಅಂದಿನ ತುಮಕೂರು ಎಸ್‌ಪಿ ಇಶಾ ಪಂತ್ ಆರೋಪಿ ಎಎಸ್‌ಐ ಉಮೇಶ್‌ನನ್ನು ಅಮಾನತು ಮಾಡಿದ್ದರು. ಮಹಿಳಾ ಠಾಣೆ ಸಿಪಿಐ ಪಾರ್ವತಮ್ಮ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿ ಅಂದಿನಿಂದ ಜೈಲಿನಲ್ಲಿದ್ದಾರೆ. ಘಟನೆಯಲ್ಲಿ ವಾಹನ ಚಾಲಕ ಈಶ್ವರ್‌ರನ್ನು ದೋಷಮುಕ್ತಗೊಳಿಸಲಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಹೀನಕೃತ್ಯ: ಅತ್ಯಾಚಾರ ಸಂತ್ರಸ್ತೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ನೆರೆಹೊರೆಯವರು


