2026ರ ಏಪ್ರಿಲ್ನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ವಿ.ಎಸ್. ಬಾಬು ಗುರುವಾರ ನಿಧನರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆ ಅವರ ಸಾವನ್ನು ದೃಢಪಡಿಸಿದೆ.
75 ವರ್ಷದ ಬಾಬು ಅವರು ಕೊಳತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸೆಪ್ಟೆಂಬರ್ 9ರಂದು ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ರಾಜೇಶ್ ಅಗರ್ವಾಲ್ ಅಧಿಕೃತ ಹೇಳಿಕೆಯಲ್ಲಿ, “ನಮ್ಮ ಬಹುಶಿಸ್ತೀಯ ವೈದ್ಯಕೀಯ ತಂಡವು ಸಮಗ್ರ ಚಿಕಿತ್ಸಾ ನಿರ್ವಹಣೆ ಹಾಗೂ ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದರೂ ಅವರ ಆರೋಗ್ಯ ಸ್ಥಿತಿ ನಿರಂತರವಾಗಿ ಹದಗೆಡುತ್ತಿತ್ತು. ಬಳಿಕ ಅವರಿಗೆ ಹೃದಯ ಸ್ತಂಭನ ಉಂಟಾಗಿ ಗುರುವಾರ ಮಧ್ಯಾಹ್ನ 2.24ಕ್ಕೆ ನಿಧನರಾದರು” ಎಂದು ತಿಳಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಹಾಗೂ ಟಿವಿಕೆ ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ನಾಯಕರು ಬಾಬು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಾಬು ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ ರಾಜ್ಯಪಾಲ ಅರ್ಲೇಕರ್, ಮೃತರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಸಂತಾಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ವಿಜಯ್ ಕೂಡ ತಮ್ಮ ಪಕ್ಷದ ಕೊಳತ್ತೂರು ಕ್ಷೇತ್ರದ ಶಾಸಕ ಅನಾರೋಗ್ಯದಿಂದ ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖ ಮತ್ತು ಆಘಾತವಾಗಿದೆ ಎಂದು ಹೇಳಿದ್ದಾರೆ.
“ಸಾರ್ವಜನಿಕ ಜೀವನಕ್ಕೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ, ಜನರ ನಡುವೆ ಒಬ್ಬರಾಗಿ ಬದುಕಿ, ಎಲ್ಲರ ಪ್ರೀತಿ, ಬೆಂಬಲ ಮತ್ತು ವಿಶ್ವಾಸ ಗಳಿಸಿದ್ದ ವಿ.ಎಸ್. ಬಾಬು ಅವರ ಹಠಾತ್ ನಿಧನ ತುಂಬಲಾರದ ನಷ್ಟ. ದುಃಖದಲ್ಲಿರುವ ಅವರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು, ಟಿವಿಕೆ ಕಾರ್ಯಕರ್ತರು ಹಾಗೂ ಕೊಳತ್ತೂರು ಕ್ಷೇತ್ರದ ಜನರಿಗೆ ನನ್ನ ಆಳವಾದ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ” ಎಂದು ವಿಜಯ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಬು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ ಅವರ ನಿಧನದ ಸುದ್ದಿ ತಮಗೆ ದುಃಖ ತಂದಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
ಹಿಂದೆ ಡಿಎಂಕೆಯಲ್ಲಿದ್ದ ಬಾಬು ಅವರು 2026ರ ಏಪ್ರಿಲ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಸ್ಟಾಲಿನ್ ಅವರನ್ನು ಸೋಲಿಸಿದ್ದರು. ಬಾಬು 82,997 ಮತಗಳನ್ನು ಪಡೆದು 8,795 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸ್ಟಾಲಿನ್ 74,202 ಮತಗಳನ್ನು ಪಡೆದಿದ್ದರು.
ಇದಕ್ಕೂ ಮೊದಲು 2006ರಿಂದ 2011ರವರೆಗೆ ಪುರಸೈವಾಕ್ಕಂ ವಿಧಾನಸಭಾ ಕ್ಷೇತ್ರದಿಂದ ಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು. 2016ರಲ್ಲಿ ಎಐಎಡಿಎಂಕೆ ಸೇರಿದ್ದ ಅವರು, ಬಳಿಕ 2026ರ ಫೆಬ್ರವರಿಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ರಾಜಕೀಯ ವಲಯದಲ್ಲಿ ಅವರು ‘ಪುರಸೈ ಬಾಬು’ ಎಂದೇ ಜನಪ್ರಿಯರಾಗಿದ್ದರು.
ಸಾರ್ವಜನಿಕ ಕಾಮಗಾರಿ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಹಾಗೂ ಟಿವಿಕೆ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ ಅವರು ಬಾಬು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸದಾ ನಗುಮುಖ ಹೊಂದಿದ್ದ ಮತ್ತು ಪಕ್ಷದ ನಾಯಕತ್ವದ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ಬಾಬು ಅವರನ್ನು ಪಕ್ಷದ ಆತ್ಮೀಯ ಸದಸ್ಯರಾಗಿ ಸ್ಮರಿಸಲಾಗುವುದು ಎಂದು ಹೇಳಿದ್ದಾರೆ.
“ಉತ್ತರ ಚೆನ್ನೈ ಭಾಗದ ಪ್ರಮುಖ ನಾಯಕರಾಗಿದ್ದ ಅವರು ಸ್ಥಳೀಯ ಸಮುದಾಯ ಮತ್ತು ಭಾಷೆಯೊಂದಿಗೆ ಆಳವಾದ ನಂಟು ಹೊಂದಿದ್ದರು. ಪಕ್ಷವು ಸಂಕಷ್ಟದ ಸಂದರ್ಭಗಳನ್ನು ಎದುರಿಸುವಾಗ ನೆರವಾಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ನಾಯಕತ್ವದೊಂದಿಗೆ ನಡೆದ ಮೊದಲ ಸಭೆಯಲ್ಲೇ ಕೊಳತ್ತೂರು, ಪೆರಂಬೂರು ಮತ್ತು ವಿಲ್ಲಿವಾಕ್ಕಂ ಸೇರಿದಂತೆ ಉತ್ತರ ಚೆನ್ನೈನ ಹಲವು ಪ್ರದೇಶಗಳ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ಅವರು ಗಮನ ಸೆಳೆದಿದ್ದರು” ಎಂದು ಅರ್ಜುನ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಬು ಅವರ ನಿಧನವು ಪಕ್ಷಕ್ಕೆ ಮಾತ್ರವಲ್ಲದೆ ಇಡೀ ಚೆನ್ನೈ ನಗರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದರು. ಬಾಬು ಅವರ ಆಶಯದಂತೆ ಉತ್ತರ ಚೆನ್ನೈ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಕಾರ್ಯಗಳನ್ನು ಮುಂದುವರಿಸಿ, ಅವರ ಸೇವೆ ಮತ್ತು ಬದ್ಧತೆಯನ್ನು ಗೌರವಿಸುವುದಾಗಿ ಸಚಿವರು ತಿಳಿಸಿದ್ದಾರೆ.


