Homeಮುಖಪುಟ81 ಶಾಲಾ ಮಕ್ಕಳಿಗೆ ಕೇವಲ 1 ಲೀ. ಹಾಲು: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ವಿಡಿಯೋ...

81 ಶಾಲಾ ಮಕ್ಕಳಿಗೆ ಕೇವಲ 1 ಲೀ. ಹಾಲು: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ವಿಡಿಯೋ ಬಯಲಿಗೆ..

- Advertisement -
- Advertisement -

ಉತ್ತರ ಪ್ರದೇಶದ ಸೋನ್‌ಭದ್ರದ ಸ್ಥಳೀಯ ಶಾಲೆಯೊಂದರಲ್ಲಿ ಸುಮಾರು 81 ವಿದ್ಯಾರ್ಥಿಗಳಿಗೆ ಕೇವಲ 1 ಲೀಟರ್‌ ಹಾಲನ್ನು ನೀರಿಗೆ ಬೆರೆಸಿ ಮಕ್ಕಳಿಗೆ ಕೊಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ವಿಡಿಯೋ ನೋಡಿ:

ಕೆಲವು ತಿಂಗಳ ಹಿಂದೆಯಷ್ಟೆ ರೊಟ್ಟಿ ಜೊತೆ ತಿನ್ನಲು ಉಪ್ಪು ಕೊಟ್ಟಿದ್ದ ವಿಡಿಯೋ ಜನರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿತ್ತು. ದುರಂತವೆಂದರೆ ಆ ವಿಡಿಯೋ ಮಾಡಿದ ವ್ಯಕ್ತಿಯ ಮೇಲೆ ದೂರು ದಾಖಲಾಗಿ ವಿಚಾರಣೆ ಎದುರಿಸಬೇಕಾದ ದುರ್ಗತಿ ಬಂದಿದೆ.

ಈಗ ವೈರಲ್‌ ಆಗಿರುವ ವಿಡಿಯೋದಲ್ಲಿ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಡಿಯಲ್ಲಿ ಅಡುಗೆಯವರು ಒಂದು ಲೀಟರ್ ಹಾಲಿನ ಒಂದು ಪ್ಯಾಕೆಟ್ ಅನ್ನು ಒಂದು ಬಕೆಟ್ ನೀರಿನೊಂದಿಗೆ ಬೆರೆಸುವದನ್ನು ತೋರಿಸುತ್ತದೆ. ಜೊತೆಗೆ ಇದನ್ನು ಸುಮಾರು 81 ಮಕ್ಕಳಿಗೆ ನೀಡಲಾಗುತ್ತಿದೆ.

ಸೋನ್‌ಭದ್ರ ಜಿಲ್ಲೆಯು ಉತ್ತರ ಪ್ರದೇಶದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದೆ. ಜಿಲ್ಲೆಯ ಬಡ ಕುಟುಂಬಗಳ ಮಕ್ಕಳು ದಿನಕ್ಕೆ ಕನಿಷ್ಠ ಒಂದು ಹೊತ್ತಿನ ಪೌಷ್ಟಿಕ ಊಟಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ನಡೆಸುವ ಈ ಯೋಜನೆಯನ್ನು ಅವಲಂಬಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಸೋನ್‌ಭದ್ರ ಜಿಲ್ಲೆಯ ಚೋಪನ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 171 ವಿದ್ಯಾರ್ಥಿಗಳಿದ್ದಾರೆ. 81 ಮಕ್ಕಳಿಗೆ ಕೇವಲ ಒಂದು ಲೀಟರ್‌ ಹಾಲನ್ನು ಶಾಲೆಯಲ್ಲಿ ಬುಧವಾರ ಬಡಿಸಲಾಗಿದೆ.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಭಾರತ ದೇಶದಲ್ಲಿ ಬಿಸಿಯೂಟದಂತಹ ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪುವ ಬದಲು ಮಧ್ಯವರ್ತಿಗಳ ಪಾಲಾಗುತ್ತಿವೆ ಎಂಬ ಆರೋಪಕ್ಕೆ ಇವೆಲ್ಲವೂ ತಕ್ಕ ಉದಾಹರಣೆಗಳಾಗಿವೆ.

“ನಾನು ವಿಚಾರಣೆ ನಡೆಸಿದ್ದೇನೆ. ನಾವು ಹಸುಗಳು ಅಥವಾ ಎಮ್ಮೆಗಳಿಂದ ಹಾಲನ್ನು ಪಡೆಯಲಾಗದ ಕಾರಣ ನಾವು ಇಲ್ಲಿ ಪ್ಯಾಕೆಟ್ ಹಾಲನ್ನು ಬಳಸುತ್ತೇವೆ. ಆದರೆ ಶಾಲೆಯಲ್ಲಿ ಸಾಕಷ್ಟು ಹಾಲು ಇತ್ತು ಮತ್ತು ನಂತರ ನಾವು ಮಕ್ಕಳಿಗೆ ಹೆಚ್ಚಿನ ಹಾಲನ್ನು ಮರುಹಂಚಿಕೆ ಮಾಡಿದ್ದೇವೆ. ಮೊದಲ ಬಾರಿಗೆ ದೋಷ ಕಂಡುಬಂದಿದೆ, ಆದರೆ ಅದು ತಕ್ಷಣವೇ ಅದನ್ನು ಸರಿಪಡಿಸಲಾಗಿದೆ” ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಮುಖೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ ಶಾಲಾ ಮಕ್ಕಳಿಗೆ ಹಾಲು ವಿತರಿಸಿದ ಅಡುಗೆಯವರು ತಮಗೆ ಕೇವಲ ಒಂದು ಪ್ಯಾಕೆಟ್ ಹಾಲು ಮಾತ್ರ ನೀಡಲಾಗಿತ್ತು ಎಂದು ಹೇಳಿದ್ದಾರೆ. “ನಾನು ಒಂದು ಲೀಟರ್ ಹಾಲನ್ನು ಬಕೆಟ್ ನೀರಿಗೆ ಹಾಕಿ ಮಿಶ್ರ ಮಾಡಿದ್ದೇನೆ. ನಿನ್ನೆ ನಮಗೆ ಒಂದು ಪ್ಯಾಕೆಟ್ ಹಾಲು ಮಾತ್ರ ನೀಡಲಾಯಿತು, ಹಾಗಾಗಿ ಅದನ್ನೇ ನಾನು ಮಾಡಬೇಕಾಗಿತ್ತು” ಎಂದು ಅಡುಗೆ ಸಿಬ್ಬಂದಿ ಫೂಲ್ವಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಿಕ್ಷಕ ಜಿತೇಂದ್ರ ಕುಮಾರ್, “ಹೆಚ್ಚು ಹಾಲು ಲಭ್ಯವಿದೆ ಎಂದು ಅಡುಗೆಯವರಿಗೆ ಬಹುಶಃ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ. ದೇಶಾದ್ಯಂತ ವರದಿಯಾದ 52 ಪ್ರಕರಣಗಳಲ್ಲಿ ಹದಿನಾಲ್ಕು ಉತ್ತರ ಪ್ರದೇಶದವು ಎಂದು ಕಳೆದ ವಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಲೋಕಸಭೆಗೆ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅದಕ್ಕಿಂತ ಲೂ ಬೇಷರದ ಸಂಗತಿ ಈ ವಿಡಿಯೋ ದಲ್ಲಿ ಮಕ್ಕಳನ್ನು ಬಿಸಿಲಿನಲ್ಲಿ ಕೂರಿಸಿ ಪಾಠ ಮಾಡುತ್ತಿರುವುದು.

LEAVE A REPLY

Please enter your comment!
Please enter your name here

- Advertisment -

Must Read