Homeಮುಖಪುಟಉತ್ತರ ಪ್ರದೇಶದ ಚುನಾವಣೆ; ಮುಗ್ಗರಿಸುತ್ತಿರುವ ಮೋದಿ-ಯೋಗಿ ಜೋಡಿ

ಉತ್ತರ ಪ್ರದೇಶದ ಚುನಾವಣೆ; ಮುಗ್ಗರಿಸುತ್ತಿರುವ ಮೋದಿ-ಯೋಗಿ ಜೋಡಿ

- Advertisement -
- Advertisement -

ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ದಿನಾಂಕಗಳು ಘೋಷಣೆಯಾಗಿವೆ. ಫೆಬ್ರವರಿ 10ರಿಂದ ಮೊದಲ್ಗೊಂಡು ಮಾರ್ಚ್ 8ರ ನಡುವೆ ಒಟ್ಟು 7 ಹಂತಗಳ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬಿದ್ದು ಯೋಗಿ ಸರ್ಕಾರದ ಹಣೆಬರಹ ನಿರ್ಧಾರವಾಗಲಿದೆ. ಅಷ್ಟು ಮಾತ್ರವಲ್ಲ, ಈ ಫಲಿತಾಂಶ 2024ರ ರಾಜಕೀಯ ದಿಕ್ಸೂಚಿಯೂ ಆಗಿರುತ್ತದೆ. ಯಾಕೆಂದರೆ ಉತ್ತರಪ್ರದೇಶದಿಂದ ಪಾರ್ಲಿಮೆಂಟಿಗೆ ಆಯ್ಕೆಯಾಗುವ ಎಂಪಿಗಳ ಸಂಖ್ಯೆ ಬರೋಬ್ಬರಿ 80! 2014ರಲ್ಲಿ 71 ಮತ್ತು 2019ರಲ್ಲಿ 62 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು. ಹೀಗೆ ಗಣನೀಯ ಪ್ರಮಾಣದ ಸೀಟುಗಳನ್ನು ಕೊಡುತ್ತಿರುವ ರಾಜ್ಯದ ಸೋಲು ಗೆಲುವು ಬರಲಿರುವ ಲೋಕಸಭಾ ಚುನಾವಣೆಯ ಮೇಲೆ ನೇರಾನೇರ ಪರಿಣಾಮ ಬೀರಲಿದೆ. ಆದ್ದರಿಂದಲೇ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯನ್ನು 2024ರ ಪಾರ್ಲಿಮೆಂಟ್ ಚುನಾವಣೆಯ ಸೆಮಿಫೈನಲ್ ಎಂದು ವಿಶ್ಲೇಷಿಸಲಾಗುತ್ತದೆ. ಈ ಚುನಾವಣೆ ಇಡೀ ದೇಶದ ಗಮನ ಸೆಳೆದಿರೋದು ಇದೇ ಕಾರಣಕ್ಕೆ.

ಮೇಲುನೋಟಕ್ಕೆ ಹೇಳುವುದಾದರೆ, ಒಟ್ಟು 403 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ 312 ಸ್ಥಾನಗಳನ್ನು ಗಳಿಸಿ ದೈತ್ಯ ಬಹುಮತ ಪಡೆದಿದ್ದ ಬಿಜೆಪಿ ಸೋಲುವುದು ಅಸಾಧ್ಯದ ಮಾತು ಎಂಬ ಮಾತು ಕೇಳಿಬರುತ್ತಿದೆ. ಈ ಮಾತು ತರ್ಕಬದ್ಧವಾಗಿಯೂ ಕಾಣುತ್ತದೆ. ಹೌದು, 312ರಲ್ಲಿ 100 ಕಳೆದುಕೊಂಡರೂ 212 ಸ್ಥಾನಗಳು. ಸರ್ಕಾರ ರಚಿಸಲು ಬೇಕಿರುವುದು 202 ಸ್ಥಾನಗಳಷ್ಟೆ. ಈ ರೀತಿಯ ವಾದ ಬಿಜೆಪಿ ಬೆಂಬಲಿಗ ವಲಯದಲ್ಲೂ ಹಾಗೆಯೇ ಪ್ರಗತಿಪರ ರಾಜಕೀಯ ವಿಶ್ಲೇಷಕರ ವಲಯದಲ್ಲೂ ಏಕಕಾಲದಲ್ಲಿ ಕೇಳಿಬರುತ್ತಿದೆ. ಇದು ನಿಜವೆ? 2022ರಲ್ಲಿ ಉತ್ತರಪ್ರದೇಶಕ್ಕೆ ಹಾಗೂ ನಂತರ 2014ಕ್ಕೆ ಇಡೀ ದೇಶಕ್ಕೆ ಮತ್ತೆ ದುಷ್ಟ ಬಿಜೆಪಿ ಸರ್ಕಾರವೇ ಕಟ್ಟಿಟ್ಟ ಬುತ್ತಿಯೇ?

ಇಲ್ಲ, ವಾಸ್ತವ ಪರಿಸ್ಥಿತಿ ಮೇಲುನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಉತ್ತರಪ್ರದೇಶದ ಇಂದಿನ ರಾಜಕೀಯ ಸನ್ನಿವೇಶ ಹಲವು ಸಂಕೀರ್ಣತೆಗಳ ಗೊಂಚಲು. ಜನರಲ್ಲಿ ಮಡುಗಟ್ಟಿರುವ ಆಕ್ರೋಶ, ತಳಮಟ್ಟದ ವಸ್ತುಸ್ಥಿತಿಗಳದ್ದು ಬೇರೆಯದೇ ಕತೆ. ದಿನೇದಿನೇ ಬಿರುಸು ಪಡೆದುಕೊಳ್ಳುತ್ತಿರುವ ರಾಜಕೀಯ, ಸಾಮಾಜಿಕ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ. ತಳಮಟ್ಟದಲ್ಲಿ ಸಂಭವಿಸುತ್ತಿರುವ ಈ ವಿದ್ಯಮಾನಗಳನ್ನು ಒಂದೊಂದಾಗಿ ನೋಡೋಣ.

ಮೋದಿಯನ್ನು ಮಕಾಡೆ ಕೆಡವಿದ ರೈತ ಚಳವಳಿ

ಮೋದಿ ಸರ್ಕಾರ ತಂದಿದ್ದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ 13 ತಿಂಗಳು ನಡೆದ ಚಾರಿತ್ರಿಕ ರೈತ ಚಳವಳಿ ತಿಳಿದ ಸಂಗತಿ. ರೈತಾಪಿಯಲ್ಲಿ ಮೋದಿ ಮತ್ತು ಬಿಜೆಪಿಯ ಕಡು ವಿರೋಧ ಹುಟ್ಟುಹಾಕಿದ್ದು ಈ ಚಳವಳಿಯ ಬಹುಮುಖ್ಯ ಪರಿಣಾಮಗಳಲ್ಲೊಂದು. ದಕ್ಷಿಣದ ರಾಜ್ಯಗಳಲ್ಲಿ ಇದರ ಪರಿಣಾಮ ನಗಣ್ಯ ಎನ್ನುವಷ್ಟು ಕಡಿಮೆ ನಿಜ. ಆದರೆ ಉತ್ತರದ ರಾಜ್ಯಗಳಲ್ಲಿ ಈ ಚಳವಳಿ ಗಂಭೀರ ರಾಜಕೀಯ ಪರಿಣಾಮ ಬೀರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಮೋದಿ ಹಾಗೂ ಬಿಜೆಪಿಯ ಬಗೆಗಿನ ಆಕ್ರೋಶ ಸರ್ವವ್ಯಾಪಿಯಾಗಿ ಆವರಿಸಿರುವುದು ತಿಳಿದ ಸಂಗತಿ. ಪಶ್ಚಿಮ ಉತ್ತರಪ್ರದೇಶದ ಪರಿಸ್ಥಿತಿ ಬಹುತೇಕ ಇದೇ ರೀತಿಯಲ್ಲಿದೆ ಎಂಬುದನ್ನು ಗಮನಿಸಬೇಕು. ಪಶ್ಚಿಮ ಉ.ಪ್ರ.ದ 36 ಜಿಲ್ಲೆಗಳಲ್ಲಿ 136 ವಿಧಾನಸಭಾ ಕ್ಷೇತ್ರಗಳಿವೆ. ಈ ಪ್ರದೇಶದ ಮುಸ್ಲಿಮರ ಜನಸಂಖ್ಯೆ ಸುಮಾರು 30%. ಕೃಷಿಯೇ ಬಹುತೇಕರ ಕಸುಬು. ಹಿಂದುಳಿದ ವರ್ಗದ ಜಾಟ್ ಜಾತಿಯ ಜನಸಂಖ್ಯೆ 17%. ರೈತ ಚಳವಳಿಯ ಪ್ರಮುಖ ನಾಯಕರಾಗಿರುವ ರಾಕೇಶ್ ಟಿಕಾಯತ್ ಇದೇ ಪಶ್ಚಿಮ ಉ.ಪ್ರ.ದವರು, ಜಾಟ್ ಜನಾಂಗದಿಂದ ಬಂದವರು. ರಾಕೇಶ್ ಅವರ ತಂದೆ ಮಹೇಂದ್ರಸಿಂಗ್ ಟಿಕಾಯತ್ ಅವರು ಭಾರತೀಯ ಕಿಸಾನ್ ಯೂನಿಯನ್‌ನ ನಾಯಕರಾಗಿದ್ದ ಕಾಲದಲ್ಲಿ ಈ ಪ್ರದೇಶದ ಮುಸ್ಲಿಮರು ಮತ್ತು ಜಾಟರು ಒಟ್ಟಾಗಿ ನಿರಂತರ ಹೋರಾಟ ನಡೆಸಿದ ಇತಿಹಾಸವಿದೆ.

2014ರ ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಮುಝಾಫರ್‌ನಗರದಲ್ಲಿ ಕೋಮು ದಂಗೆ ನಡೆಸಿದ ಪರಿಣಾಮವಾಗಿ ಈ ಪ್ರದೇಶದಲ್ಲಿ ಮತಗಳ ಧ್ರುವೀಕರಣ ಕಂಡುಕೇಳರಿಯದ ಮಟ್ಟ ಮುಟ್ಟಿತ್ತು. ವ್ಯವಸ್ಥಿತ ಷಡ್ಯಂತ್ರಗಳ ಮೂಲಕ ರೂಪಿಸಿದ ಈ ಕೋಮುದಂಗೆ ಜಾಟ್ ಮತ್ತು ಮುಸ್ಲಿಮರನ್ನು ಪರಸ್ಪರ ವೈರಿಗಳನ್ನಾಗಿಸಿತ್ತು. ಈ ಧ್ರುವೀಕರಣದ ಪರಿಣಾಮ 2014 ಮತ್ತು 2017ರಲ್ಲಿ ಅತ್ಯಧಿಕ ಸೀಟುಗಳನ್ನು ಬಾಚಿಕೊಳ್ಳಲು ಕಾರಣವಾಗಿತ್ತು.

ಮೋದಿ ಸರ್ಕಾರ ತಂದ ಕರಾಳ ಕಾಯ್ದೆಗಳಿಂದಾಗಿ ರೈತಾಪಿ ಜಾಟ್ ಸಮುದಾಯ ಮೋದಿ ಮತ್ತು ಬಿಜೆಪಿಯ ನಿಜಬಣ್ಣ ಅರಿಯಲು ಅನುವು ಮಾಡಿಕೊಟ್ಟಿತು. ಉತ್ತರಪ್ರದೇಶ ಹಾಗೂ ದೆಹಲಿ ಪೊಲೀಸರು ಚಳವಳಿಗಾರರ ಮೇಲೆ ನಡೆಸಿದ ದೌರ್ಜನ್ಯಗಳು, ಹಾಕಿದ ಸಾವಿರಾರು ಕೇಸುಗಳಿಂದಾಗಿ ರೈತರ ಆಕ್ರೋಶ ಮಡುಗಟ್ಟಿದ್ದು ಮಾತ್ರವಲ್ಲ, ಜಾಟ್ ಮತ್ತು ಮುಸ್ಲಿಮರನ್ನು ಒಂದೇ ವೇದಿಕೆಗೆ ಕರೆತಂದಿದೆ. 2020-21ರ ಚಾರಿತ್ರಿಕ ರೈತ ಚಳವಳಿಯ ಪರಿಣಾಮವಾಗಿ ಈ ಪ್ರದೇಶದಲ್ಲಿ ಹೊಸ ರೀತಿಯ ಧ್ರುವೀಕರಣ ರೂಪುಗೊಂಡಿದೆ.

ಕಳೆದ ಕೆಲವು ಚುನಾವಣೆಗಳಲ್ಲಿ ಬಿಎಸ್‌ಪಿಯ ಮತಬ್ಯಾಂಕ್ ಆಗಿದ್ದ ಮುಸ್ಲಿಮರು ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಾಟ್ ಸಮುದಾಯವನ್ನು ಪ್ರತಿನಿಧಿಸುವ ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ನಾಯಕ ಜಯಂತ್ ಚೌಧರಿ ಈಗಾಗಲೇ ಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿ ನೆಲಕಚ್ಚುವುದು ನಿಶ್ಚಿತ. ಹಲವು ಸರ್ವೆಗಳು ಈ ಅಂಶವನ್ನು ಈಗಾಗಲೇ ಖಚಿತಪಡಿಸಿವೆ.

ಕೆಲವು ತಿಂಗಳ ಹಿಂದೆ ಲಕೀಂಪುರ್ ಖೇರಿಯಲ್ಲಿ ನಡೆದ ಘನಘೋರ ಘಟನೆ ಇನ್ನೂ ಹಸಿಯಾಗಿದೆ. ಒಕ್ಕೂಟ ಸರ್ಕಾರದಲ್ಲಿ ಗೃಹರಾಜ್ಯ ಮಂತ್ರಿಯಾಗಿರುವ ಅಜಯ್ ಮಿಶ್ರ ಠೇಣಿಯ ಮಗನ ಗ್ಯಾಂಗ್ ಶಾಂತಿಯುತ ಪ್ರತಿಭಟನೆ ನಡೆಸಿ ಹಿಂದಿರುಗುತ್ತಿದ್ದ ರೈತರ ಮೇಲೆ ಜೀಪು ಹತ್ತಿಸಿ ನಾಲ್ಕು ಜನ ರೈತರನ್ನು ಕೊಂದು ಹಲವರನ್ನು ಗಾಯಗೊಳಿಸಿತ್ತು. ಈ ಹತ್ಯಾಕಾಂಡದ ವಿರುದ್ಧ ಉತ್ತರಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದುರ್ಘಟನೆಗೆ ಸಾಕ್ಷಿಯಾಗಿ ಹತ್ತಾರು ವಿಡಿಯೋಗಳು ಲಭ್ಯವಿದ್ದರೂ ಯೋಗಿ ಸರ್ಕಾರವಾಗಲಿ, ಮೋದಿ ಸರ್ಕಾರವಾಗಲಿ ಆರೋಪಿತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೊನೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದಾಗಿ ಮಂತ್ರಿಯ ಮಗ ಜೈಲು ಸೇರಿದ್ದಾನೆ. ಸುಪ್ರಿಂಕೋರ್ಟ್ ರಚಿಸಿದ್ದ ಎಸ್‌ಐಟಿ ವರದಿಯ ಪ್ರಕಾರವೇ ಇದು ಉದ್ದೇಪೂರ್ವಕವಾಗಿ ಷಡ್ಯಂತ್ರ ರಚಿಸಿ ನಡೆಸಿದ ಕೊಲೆ ಎಂಬುದಾಗಿ ಹೇಳಲಾಗಿದೆ.

ರೈತ ಚಳವಳಿಯ ಪ್ರಭಾವ ಪಶ್ಚಿಮ ಉತ್ತರಪ್ರದೇಶಕ್ಕೆ ಸೀಮಿತ ಎಂಬಂತಿದ್ದರೂ ಈ ಹತ್ಯಾಕಾಂಡದ ನಂತರ ಇಡೀ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ರೈತರ ಆಕ್ರೋಶ ಮತಗಳ ಮೇಲೆ ಅಷ್ಟಿಷ್ಟಾದರೂ ಪರಿಣಾಮ ಬೀರಲಿಕ್ಕೆ ಸಾಕು.

ರೈತರನ್ನು ಹೈರಾಣು ಮಾಡಿರುವ ಮತ್ತೊಂದು ಸಮಸ್ಯೆ ಬಿಡಾಡಿ ದನಗಳದ್ದು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಬಳಿಕ ದನಗಳ ಮಾರಾಟ/ಸಾಗಾಟದ ಮೇಲೆ ’ಗೋರಕ್ಷಕ’ ಗೂಂಡಾಗಳ ದಾಳಿ ಹಾಗೂ ಪೊಲೀಸ್ ಕೇಸುಗಳು ಮಿತಿಮೀರಿದ್ದವು. ಹೀಗಾಗಿ ದನಗಳನ್ನು ಕೊಳ್ಳುವವರೇ ಗತಿಯಿಲ್ಲ. ರೈತರು ತಮ್ಮ ಅನುಪಯುಕ್ತ ದನಗಳನ್ನು ಸಾಕಲಾರದೆ ಹಗ್ಗ ಕಳಚಿ ಹೊರಗೆ ಅಟ್ಟಿಬಿಡುತ್ತಾರೆ. ಇಂಥಾ ದನಗಳು ರಸ್ತೆಗಳಲ್ಲಿ, ಹೊಲಗದ್ದೆಗಳಲ್ಲಿ ಗುಂಪುಗುಂಪಾಗಿ ಬೀಡು ಬಿಟ್ಟಿರುವ ದೃಶ್ಯ ಸರ್ವೇಸಾಮಾನ್ಯ. ಈ ಮೂಕ ಜೀವಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ರೈತರ ಹೊಲಗದ್ದೆಗಳಿಗೆ ನುಗ್ಗುತ್ತಿವೆ. ಈ ಬಿಡಾಡಿ ದನಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹಗಲು ರಾತ್ರಿಯೆನ್ನದೆ ಕಾವಲು ಕಾಯಬೇಕಾಗಿದೆ. ಒಂದೆರಡು ವರ್ಷಗಳ ಹಿಂದೆ ಆಕ್ರೋಶಗೊಂಡ ರೈತರು ಇಂಥಾ ಬಿಡಾಡಿ ದನಗಳನ್ನು ಪೊಲೀಸ್ ಠಾಣೆಗಳ ಆವರಣಕ್ಕೆ ತಂದುಬಿಟ್ಟು ಪ್ರತಿಭಟನೆ ನಡೆಸಿದ್ದರು. ಸರ್ಕಾರದಿಂದ ಗೋಶಾಲೆ ನಿರ್ಮಾಣದ ಆಶ್ವಾಸನೆ ಸಿಕ್ಕಿತಾದರೂ ಬಿಡುಗಡೆಯಾದ ಹಣ ಮತ್ತೆ ಭ್ರಷ್ಟರ ಹೊಟ್ಟೆ ಸೇರಿ ಸಮಸ್ಯೆಯಂತೂ ಹಾಗೆ ಉಳಿದಿದೆ. ಧರ್ಮದ ಹೆಸರಿನ ಈ ದುಷ್ಟ ನೀತಿಯಿಂದ ರೈತರ ಗಾಯಗಳ ಮೇಲೆ ಉಪ್ಪು ಸುರಿದಂತಾಗಿದೆ.

ವರ್ಷಾನುಗಟ್ಟಲೆ ಪಾವತಿಯಾಗದ ಕಬ್ಬಿನ ಬಾಕಿ, ದುಪ್ಪಟ್ಟಾಗಿರುವ ರಸಗೊಬ್ಬರದ ದರಗಳು, ವಿಪರೀತಗೊಂಡ ವಿದ್ಯುತ್ ದರ, ಪೆಟ್ರೋಲ್ ಡೀಸೆಲ್ ದರಗಳಿಂದ ರೈತರ ಬವಣೆ ಹೆಚ್ಚಾಗಿದೆ. ನೇರ ನಗದು ಪಾವತಿ ಹೆಸರಿನಲ್ಲಿ ರೈತರ ಖಾತೆಗೆ ಜಮೆಯಾಗುತ್ತಿರುವ ವಾರ್ಷಿಕ 6000/- ಪರಿಹಾರ ಕೇವಲ ಕಣ್ಣೊರೆಸುವ ತಂತ್ರ ಎಂಬ ಅಭಿಪ್ರಾಯ ರೈತಾಪಿಯ ನಡುವೆ ವ್ಯಾಪಕವಾಗಿದೆ.

ಹೀಗೆ ದಿನೇದಿನೇ ತಾರಕಕ್ಕೇರುತ್ತಿದ್ದ ರೈತರ ಆಕ್ರೋಶ 2022ರ ಚುನಾವಣೆಯಲ್ಲಿ ತಮ್ಮನ್ನು ಧೂಳಿಪಟ ಮಾಡಲಿದೆ ಎಂಬ ಸ್ಪಷ್ಟ ಸುಳಿವು ಸಿಕ್ಕ ನಂತರವೇ ಮೋದಿ ರೈತರ ಕ್ಷಮೆ ಕೋರಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದದ್ದು. ಈ ಡ್ಯಾಮೇಜ್ ಕಂಟ್ರೋಲಿಂಗ್ ತಂತ್ರ ಬಿಜೆಪಿಗೆ ಹೆಚ್ಚಿನ ಲಾಭವನ್ನೇನು ಕೊಡಲಾರದು ಎಂಬುದು ಬಹುತೇಕ ವಿಶ್ಲೇಷಕರ ಅಭಿಪ್ರಾಯ.

ಸೋಷಿಯಲ್ ಇಂಜಿನಿಯರಿಂಗ್

’ಹಿಂದುತ್ವ’, ’ಹಿಂದೂ ರಾಷ್ಟ್ರ’ದ ಅಬ್ಬರದ ಪ್ರಚಾರ ಏನೇ ಇದ್ದರೂ ಉತ್ತರಪ್ರದೇಶದ ರಾಜಕಾರಣದಲ್ಲಿ ಜಾತಿ ರಾಜಕಾರಣದ್ದು ನಿರ್ಣಾಯಕ ಪಾತ್ರ. 2014 ಮತ್ತು 2017ರಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದು ಬಿಜೆಪಿಯ ಸೋಷಿಯಲ್ ಇಂಜಿನಿಯರಿಂಗ್ ರಣತಂತ್ರ. ದಲಿತ ಜಾತಿಗಳು ಬಿಎಸ್‌ಪಿಯ ಪರ್ಮನೆಂಟ್ ವೋಟ್‌ಬ್ಯಾಂಕ್ ಆಗಿದ್ದಿದ್ದುದು ಇತಿಹಾಸ. ಆದರೆ ಬಿಜೆಪಿ ಹೆಣೆದ ತಂತ್ರದ ಭಾಗವಾಗಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿಯ ಜೊತೆಗುಳಿದಿದ್ದ ಜಾಟವ್ ಜಾತಿಯನ್ನು ಹೊರತುಪಡಿಸಿ ಇತರೆ ದಲಿತ ಜಾತಿಗಳನ್ನು ತನ್ನ ತೆಕ್ಕೆಗೆ ಅದು ತೆಗೆದುಕೊಂಡಿತ್ತು. ಜಾಟವ್ ಜಾತಿಯ ಪ್ರಾಬಲ್ಯದ ಕಾರಣಕ್ಕಾಗಿ ಇತರೆ ಎಸ್‌ಸಿ ಜಾತಿಗಳೊಳಗಿದ್ದ ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡು ಇತರೆ ಜಾತಿಗಳ ನಾಯಕರನ್ನು ಮುನ್ನೆಲೆಗೆ ತರಲಾಗಿತ್ತು.

ಹಾಗೆಯೇ ಒಬಿಸಿ ಸಮುದಾಯಗಳಲ್ಲಿ ಯಾದವ್ ಜಾತಿಯ ಪ್ರಾಬಲ್ಯದ ವಿರುದ್ಧ ಮೂಡಿದ್ದ ಅಸಮಾಧಾನವನ್ನು ಬಂಡವಾಳ ಮಾಡಿಕೊಂಡು ಯಾದವೇತರ ಒಬಿಸಿ ಜಾತಿಗಳನ್ನು ಒಟ್ಟುಗೂಡಿಸುವ ತಂತ್ರ ಹೂಡಿತ್ತು. ಹೀಗೆ ಜಾಟವೇತರ ದಲಿತ ಜಾತಿಗಳು ಮತ್ತು ಯಾದವೇತರ ಒಬಿಸಿ ಜಾತಿಗಳನ್ನು ತನ್ನ ಕಡೆಗೆ ಸೆಳೆದುಕೊಂಡಿದ್ದರ ಜೊತೆಗೆ ’ಹಿಂದುತ್ವದ ಘೋಷಣೆಗಳೂ ಕೂಡಿ ಬಿಜೆಪಿಗೆ ಪ್ರಚಂಡ ಗೆಲುವು ಸಾಧಿಸಲು ಕಾರಣವಾಗಿತ್ತು.

ಆದರೆ ಈ ಬಾರಿ ಜಾತಿ ಸಮೀಕರಣದ ವಿಷಯದಲ್ಲಿ ವಿಭಿನ್ನವಾದ ಸನ್ನಿವೇಶ ಏರ್ಪಟ್ಟಿದೆ. ಬಿಜೆಪಿ ಮೈತ್ರಿಯಲ್ಲಿ ಸೇರಿದ್ದ ಕೆಲವು ಪ್ರಮುಖ ಒಬಿಸಿ ನಾಯಕರು (ಪಕ್ಷಗಳು) ಹಾಗೂ ದಲಿತ ನಾಯಕರು ಬಿಜೆಪಿಯ ಸಖ್ಯ ತೊರೆದು ಈ ಬಾರಿ ಅಖಿಲೇಶ್ ಜೊತೆ ಕೈಜೋಡಿಸಿದ್ದಾರೆ. ಈ ಹಿಂದೆ ಬಿಜೆಪಿ ಮೈತ್ರಿಯಲ್ಲಿದ್ದ ಒ.ಪಿ.ರಾಜಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ ಈ ಬಾರಿ ಎಸ್‌ಪಿ ಮೈತ್ರಿಯಲ್ಲಿದೆ. ಬಿಎಸ್‌ಪಿ ಜೊತೆ ಮೈತ್ರಿಯಲ್ಲಿದ್ದ ಆರ್‌ಎಲ್‌ಡಿ ಕೂಡ ಎಸ್‌ಪಿ ಜೊತೆಗೆ ಸೇರಿಕೊಂಡಿದೆ. ಹಾಗೆಯೆ ಸಂಜಯ್ ಚೌಹಾಣ್ ನಾಯಕತ್ವದ ಜನವಾದಿ ಪಾರ್ಟಿ (ಸೋಷಿಯಲಿಸ್ಟ್), ಮಹಾನ್ ದಳ್ ಮುಂತಾದುವು ಕೂಡಿಕೊಂಡಿವೆ. ಅಖಿಲೇಶ್ ಯಾದವ್ ತನ್ನ ಚುನಾವಣಾ ಭಾಷಣ ಮತ್ತು ನರೇಟಿವ್‌ಗಳಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಯ ಮೇಲೆ ಚರ್ಚೆಯನ್ನು ಕೇಂದ್ರೀಕರಿಸಿರುವುದು ಢಾಳಾಗಿ ಕಾಣುತ್ತಿದೆ. ಒಟ್ಟಾರೆ ನೋಡಿದರೆ ಒಬಿಸಿ ಜಾತಿಗಳು ಎಸ್‌ಪಿ ಜೊತೆ ಧ್ರುವೀಕರಣಗೊಳ್ಳುತ್ತಿರುವುದನ್ನು ಹಲವು ಚುನಾವಣಾ ವಿಶ್ಲೇಷಕರು ಗುರುತಿಸುತ್ತಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಅಖಿಲೇಶ್ ಜೊತೆ ಕಚ್ಚಾಡಿಕೊಂಡು ಬೇರೆಯದೇ ಪಕ್ಷ ಕಟ್ಟಿಕೊಂಡು ಚುನಾವಣಾ ಕಣಕ್ಕಿಳಿದಿದ್ದ ಆತನ ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತೆ ಒಂದಾಗಿದ್ದಾರೆ. 2017ರಲ್ಲಿ ಶಿವಪಾಲ್ ಯಾದವ್‌ನ ಪಕ್ಷ ಸುಮಾರು 40 ಸೀಟುಗಳಲ್ಲಿ ಎಸ್‌ಪಿಯ ಗೆಲುವಿನ ಸಾಧ್ಯತೆಯನ್ನು ಹಾಳುಗೆಡವಿತ್ತು ಎಂಬುದನ್ನು ಪರಿಗಣಿಸಿದರೆ ಈ ಒಗ್ಗೂಡುವಿಕೆಯ ಮಹತ್ವ ಅರಿವಾಗುತ್ತದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್ ಸಖ್ಯದಲ್ಲಿದ್ದ ಇತರೆ ಜಾತಿಗಳ ಮುಖಂಡರನ್ನು ಎಸ್‌ಪಿ ಪಕ್ಷ ತನ್ನ ತೆಕ್ಕೆಗೆ ಸೆಳೆದಿದೆ. ಯಾದವ್, ಜಾಟ್ ಮತ್ತಿತರ ಒಬಿಸಿ ಜಾತಿಗಳು, ಮುಸ್ಲಿಮರು ಒಂದು ಬ್ಲಾಕ್ ಆಗಿ ರೂಪುಗೊಂಡಿರುವುದು ಈ ಚುನಾವಣೆಯ ವಿಶೇಷ. ಈ ಬಾರಿಯ ಉತ್ತರಪ್ರದೇಶದ ಚುನಾವಣೆ ಬಿಜೆಪಿ ವರ್ಸಸ್ ಎಸ್‌ಪಿಗಳ ನಡುವೆ ದ್ವಿಪಕ್ಷೀಯ ಹಣಾಹಣಿಯಾಗಲಿದೆ ಎಂಬುದು ಬಹುತೇಕ ನಿಚ್ಚಳವಾಗಿದೆ.

ಕಳೆದ ಚುನಾವಣೆಗಳಲ್ಲಿ ಸೋಕಾಲ್ಡ್ ಚಾಣಕ್ಯ ಹೆಣೆದಿದ್ದ ಸೋಷಿಯಲ್ ಇಂಜಿನಿಯರಿಂಗ್ ಸ್ಟ್ರಾಟೆಜಿ ಕೈಕೊಟ್ಟು ಈ ಬಾರಿ ಅಖಿಲೇಶ್ ಪರವಾಗಿ ಹೀಗೆ ಧ್ರುವೀಕರಣಗೊಳ್ಳುತ್ತಿರುವುದು ಬಿಜೆಪಿ ಮತ್ತು ಸಂಘ ಪರಿವಾರದ ಕೂಟಕ್ಕೆ ನಿದ್ದೆಗೆಡಿಸಿದೆ.

(ಈ ಅಂಶಗಳಲ್ಲದೆ ಬೀದಿಗಿಳಿದಿರುವ ನಿರುದ್ಯೋಗಿಗಳು, ಬಿಜೆಪಿ ರ್‍ಯಾಲಿಗಳ ಫ್ಲಾಪ್ ಶೋಗಳು, ಕೋಮು ಧ್ರುವೀಕರಣದ ಹತಾಶ ಪ್ರಯತ್ನ, ಯೋಗಿಯ ಠಾಕೂರ್‌ವಾದದ ವಿರುದ್ಧ ಆಕ್ರೋಶಗೊಂಡ ಬ್ರಾಹ್ಮಣರು, ಯೋಗಿಯ ದುರಹಂಕಾರದಿಂದ ಅಪಮಾನಿತರಾಗಿ ಪಕ್ಷ ತೊರೆಯುತ್ತಿರುವ ನಾಯಕರು, ಮೋದಿ – ಯೋಗಿಯ ನಡುವಿನ ಶೀತಲ ಸಮರ, ಕೊರೊನಾ ನಿರ್ವಹಣೆಯ ಘೋರ ವೈಫಲ್ಯ, ಬಿಎಸ್‌ಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳ ಪಾತ್ರ, ಮತಗಳ ಪ್ರಮಾಣ ಮತ್ತು ಸೀಟುಗಳ ಅನುಪಾತದ ಲೆಕ್ಕಾಚಾರ, ಮಾಧ್ಯಮ ಮತ್ತು ಚುನಾವಣಾ ಆಯೋಗದ ಪಾತ್ರ ಮುಂತಾದ ಸಂಗತಿಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಚರ್ಚೆ ಮುಂದುವರೆಯುತ್ತದೆ.)


ಇದನ್ನೂ ಓದಿ: ಯುಪಿ ಚುನಾವಣೆ: ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...