ಕಳೆದ ನವೆಂಬರ್ 9 ರಂದು ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ 22 ವರ್ಷದ ಅಲ್ತಾಫ್ ಅವರ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ವಯಸ್ಸಿಗೆ ಬಂದ ಮಗನ ಕೊಲೆ ಅರಗಿಸಿಕೊಳ್ಳಲಾಗದು, ಅದರಲ್ಲೂ ನ್ಯಾಯಕ್ಕಾಗಿ ಅಲೆಯುವುದು ಇನ್ನು ಕಷ್ಟ ಎಂದಿದೆ.
ಮೂರು ಕೋಣೆಗಳಿರುವ ಮನೆಯಲ್ಲಿ, 22 ವರ್ಷದ ಮೃತ ಅಲ್ತಾಫ್ ಮಲಗುತ್ತಿದ್ದ ಸ್ಥಳ ತೋರಿಸಿ ಕುಟುಂಬದವರು ಕಣ್ಣೀರು ಹಾಕಿದ್ದಾರೆ. ನೆರೆಹೊರೆಯಲ್ಲಿರುವ ಮಕ್ಕಳು ಅಲ್ತಾಫ್‌ನೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಿದ್ದರು, ಆಗಾಗ್ಗೆ ಕೊಠಡಿಯ ತುಂಬಾ ಕಿಕ್ಕಿರಿದು ಆಟಗಳನ್ನು ಆಡುತ್ತಿದ್ದರು ಎಂದಿದ್ದಾರೆ ಮೃತನ ತಾಯಿ ಚಾಂದ್ ಮಿಯಾ.
ಯುವಕ ಅಲ್ತಾಫ್‌ನ ವಿರುದ್ಧ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ತಾಫ್‌ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. 22 ವರ್ಷದ ಯುವಕ ಮಂಗಳವಾರ (ನ. 9) ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಯುವಕ ಶೌಚಾಲಯದ ಎರಡು ಅಡಿ ಎತ್ತರದ ಪೈಲಿನ ನಲ್ಲಿಗೆ ತನ್ನ ಜಾಕೆಟ್‌ನ ಹುಡ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೊತ್ವಾಲಿ ಪೊಲೀಸರು ಹೇಳಿದ್ದರು. ಆದರೆ, ಪೊಲೀಸರು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯೇ ಆತನನ್ನು ಕೊಂದಿದ್ದಾರೆ ಎಂದು ಮೃತನ ಕುಟುಂಬ ಆರೋಪಿಸಿತ್ತು.
ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತರ ಕುಟುಂಬ ಆರೋಪಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಅಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಪರಣೋತ್ತರ ಪರೀಕ್ಷಾ ವರದಿಯ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ಹೇಳಿದ್ದರು. ಮೂರು ದಿನಗಳ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಲ್ತಾಫ್ ಶವವನ್ನು ಹೊರತೆಗೆಯಬೇಕು ಮತ್ತು ಎರಡನೇ ಮರಣೋತ್ತರ ಪರೀಕ್ಷೆಗಾಗಿ ನವದೆಹಲಿಯ ಏಮ್ಸ್‌ಗೆ ಕಳುಹಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿ ಸಲ್ಲಿಸಿ ನಾಲ್ಕು ವಾರಗಳ ನಂತರ ಈ ವಿಷಯವನ್ನು ಪಟ್ಟಿ ಮಾಡಿದ ನ್ಯಾಯಾಲಯವು ಅರ್ಜಿದಾರರು ದಾಖಲೆಯಲ್ಲಿ ತಂದಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಆದೇಶವನ್ನು ನೀಡಿದೆ.
ಇದನ್ನೂ ಓದಿ: ಕಾಸ್‌ಗಂಜ್ ಲಾಕಪ್ ಡೆತ್: 2ನೇ ಮರಣೋತ್ತರ ಪರೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಆದೇಶ
ನ್ಯಾಯಾಲಯದ ಆದೇಶವು ಕುಟುಂಕ್ಕೆ ನ್ಯಾಯ ದೊರೆಯುವ ಭರವಸೆಯನ್ನು ಹೆಚ್ಚಿಸಿದೆ ಎಂದಿರುವ ಮೃತನ ತಾಯಿ ಚಾಂದ್ ಮಿಯಾ, “ಯಾರೇ ಆದರೂ ಅವರ ಚಿಕ್ಕ ವಯಸ್ಸಿನ ಮಗನನ್ನು ಕರೆದುಕೊಳ್ಳುವುದು ಸುಲಭವಲ್ಲ. ಅಲ್ತಾಫ್ ನನ್ನ ಮೂವರು ಮಕ್ಕಳಲ್ಲಿ ಮೊದಲ ಮಗ, ಆತನನ್ನು ಕಳೆದುಕೊಂಡಾಗ ನನ್ನ ರಕ್ತದೊತ್ತಡ ಹೆಚ್ಚಾಗಿತ್ತು. ನಾನು ಆಸ್ಪತ್ರೆಗೆ ಸೇರಬೇಕಾಯಿತು. ಮಗನ ಸಾವನನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ. ಇನ್ನು, ನ್ಯಾಯಕ್ಕಾಗಿ ಹೋರಾಟ ಮಾಡುವುದು ಮತ್ತಷ್ಟು ಕಷ್ಟಕರವಾಗಿದೆ. ಆದರೆ, ನ್ಯಾಯಾಲಯವು ಬಡವರಾದ ನಮ್ಮ ಅಳಲನ್ನು ಕೇಳಿದೆ. ನಮಗೆ ಭರವಸೆ ಮೂಡಿದೆ” ಎಂದಿದ್ದಾರೆ.
’ಅಲ್ತಾಫ್ ದೈನಂದಿನ ಕೂಲಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದರು. ಅವರು ಸುಮಾರು 60 ಕೆಜಿ ತೂಕವಿದ್ದರು ಮತ್ತು ಎತ್ತರವಾಗಿದ್ದರು. ಅವರು ಆ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸೇರಿಸದ ಹಲವು ವಿಷಯಗಳಿವೆ. ಎರಡನೆ ಮರಣೋತ್ತರ ಪರೀಕ್ಷೆಯಲ್ಲಿ ಬೇರೇನಾದರೂ ಮಾಹಿತಿ ಬಹಿರಂಗವಾದರೆ, ಅವರ ಸಾವಿನ ಬಗ್ಗೆ ಸತ್ಯವನ್ನು ಮುಚ್ಚಿಡಲಾಗಿದೆ ಎಂಬುದು ಸಾಬೀತಾಗುತ್ತದೆ” ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಶವವನ್ನು ಹೊರತೆಗೆದು ಏಮ್ಸ್‌ಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಲಯದ ಪ್ರಕಾರ 10 ದಿನಗಳೊಳಗೆ ಮೃತದೇಹವನ್ನು ಏಮ್ಸ್‌ಗೆ ಹಸ್ತಾಂತರಿಸಬೇಕು.
”ನ್ಯಾಯಾಲಯದ ಆದೇಶದಂತೆ ಭೂಶೋಧನೆ ನಡೆಸಲಾಗುವುದು. ಮೃತದೇಹವನ್ನು ಅಗೆದು ಏಮ್ಸ್‌ಗೆ ಕಳುಹಿಸಲಾಗುವುದು. ಘಟನೆಯ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿದೆ. ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದರೆ, ಅದನ್ನು ತನಿಖೆಯಲ್ಲಿ ಸೇರಿಸಲಾಗುವುದು” ಎಂದು ಕಾಸ್ಗಂಜ್ ಎಸ್‌ಪಿ ಬೋತ್ರೆ ರೋಹನ್ ಪ್ರಮೋದ್ ಹೇಳಿದ್ದಾರೆ.
ಪ್ರಸ್ತುತ ನ್ಯಾಯಾಂಗ ವಿಚಾರಣೆ ನಡೆಯುತ್ತಿದ್ದು, 36 ಸಾಕ್ಷಿಗಳ ಪೈಕಿ 7 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ತಾಫ್ ಸಾವಿಗೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕಾಸ್‌ಗಂಜ್ ಲಾಕಪ್ ಡೆತ್: ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು


