Homeಮುಖಪುಟಉತ್ತರ ಪ್ರದೇಶ: ಒಂದೇ ಹಳ್ಳಿಯಲ್ಲಿ ತಿಂಗಳಲ್ಲಿ 60ಕ್ಕೂ ಹೆಚ್ಚು ಸಾವು, ಕಡೆ ಪಕ್ಷ ಕೊರೊನಾ ಟೆಸ್ಟ್...

ಉತ್ತರ ಪ್ರದೇಶ: ಒಂದೇ ಹಳ್ಳಿಯಲ್ಲಿ ತಿಂಗಳಲ್ಲಿ 60ಕ್ಕೂ ಹೆಚ್ಚು ಸಾವು, ಕಡೆ ಪಕ್ಷ ಕೊರೊನಾ ಟೆಸ್ಟ್ ಕೂಡ ಮಾಡಿಸದ ಅಧಿಕಾರಿಗಳು!

ಮೀರತ್‌ನ ಅತಿದೊಡ್ಡ ಕೊರೊನಾ ಆರೈಕೆ ಕೇಂದ್ರವಾದ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜು ಕೂಡ ಮೂಲಸೌಲಭ್ಯಗಳಿಲ್ಲದೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದೆ.

- Advertisement -
- Advertisement -

ಒಂದೇ ಒಂದು ಹಳ್ಳಿಯಲ್ಲಿ ಕಳೆದ ತಿಂಗಳಲ್ಲಿ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇಲ್ಲಿಯವರೆಗೂ ಆ ಹಳ್ಳಿಯ ಯಾರಿಗೂ ಕೊರೊನಾ ಟೆಸ್ಟ್ ಆಗಲಿ, ಹಳ್ಳಿಯನ್ನು ಸ್ಯಾನಿಟೈಜ್ ಮಾಡುವ ಕೆಲಸವಾಗಲಿ ಸರ್ಕಾರದ ಕಡೆಯಿಂದ ನಡೆದಿಲ್ಲ.

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಗೋಗಿಲ್ ಗೋತ್ರಾ ಹಳ್ಳಿಯ ಕಥೆಯಿದು. ಗ್ರಾಮದ ನಿವಾಸಿಗಳು ಈ ಸಾವುಗಳಿಂದ ಆತಂಕಕ್ಕೆ ಒಳಗಾಗಿದ್ದರೂ ಯಾವುದೇ ಅಧಿಕಾರಿಗಳು ಅಲ್ಲಿಗೆ ಕಾಲಿಟ್ಟಿಲ್ಲ. ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಯಾಗಿ ಮೀರತ್ ಗುರುತಿಸಿಕೊಂಡಿದೆ.

“ಕಳೆದ ಒಂದು ತಿಂಗಳಲ್ಲಿ 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಕಂಡುಬಂದಿಲ್ಲ. ಯಾವುದೇ ಸಹಾಯ ದೊರೆತಿಲ್ಲ. ನಮ್ಮ ಹಳ್ಳಿಯಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆ ನಡೆಸಿ, ವೈದ್ಯಕೀಯ ಸೌಲಭ್ಯ ನೀಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ” ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗಂಗೆಯಲ್ಲಿ ನಿಲ್ಲದ ಮೃತದೇಹಗಳ ಹರಿವು, ಜಲಶಕ್ತಿ ಸಚಿವರಿಂದ ತನಿಖೆಗೆ ಮನವಿ

ಮೀರತ್ ಜಿಲ್ಲೆಯು ಉತ್ತರ ಪ್ರದೇಶದ ಕೊರೊನಾ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 1,368 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಸಂಖ್ಯೆಯನ್ನು 13,941 ಕ್ಕೆ ಏರಿಕೆಯಾಗಿವೆ. ಮೀರತ್‌ನ ಅತಿದೊಡ್ಡ ಸರ್ಕಾರಿ ಕೊರೊನಾ ಆರೈಕೆ ಕೇಂದ್ರವಾದ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜು ಕೂಡ ಮೂಲಸೌಲಭ್ಯಗಳಿಲ್ಲದೆ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದೆ.

ಇಡೀ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ಸೋರಿಕೆಯಾಗುತ್ತಿರುವ ಮೇಲ್ಛಾಣಿ ಮತ್ತು ಶೌಚಾಲಯದ ದುರ್ವಾಸನೆಯಿಂದ ಕೊರೊನಾ ಸೋಂಕಿತರು ಮತ್ತಷ್ಟು ರೋಗಗಳಿಗೆ ಒಳಗಾಗುತ್ತಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಶಿಷ್ಠ ಶರ್ಮಾ, ಮನೆಯಿಂದ ಬೆಡ್‌ ತಂದು ಆಸ್ಪತ್ರೆಯ ತುರ್ತು ವಾರ್ಡ್‌ನ ಎರಡು ಕೋಣೆಗಳ ನಡುವಿನ ಕಾರಿಡಾರ್‌ನಲ್ಲಿ ತನ್ನ ತಂದೆಯನ್ನು ಮಲಗಿಸಿದ್ದಾರೆ. “ನಾವು ಮನೆಯಿಂದ ಸ್ವಂತ ಹಾಸಿಗೆಯನ್ನು ತಂದಿದ್ದೇವೆ. ಇಲ್ಲಿ ಮೂಲಸೌಲಭ್ಯಗಳು ತುಂಬಾ ಕೆಟ್ಟದಾಗಿವೆ, ರೋಗಿಗಳು ಆಸ್ಪತ್ರೆಯ ನೆಲದ ಮೇಲೆ ಬೆಡ್‌ಶೀಟ್‌ಗಳ ಮೇಲೆ ಮಲಗಿದ್ದಾರೆ” ಎಂದಿದ್ದಾರೆ.

ಕಳೆದ ಏಪ್ರಿಲ್ 28 ರಿಂದ ಅವರ ತಂದೆಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. “ನನ್ನ ತಂದೆಗೆ ಕೊರೊನಾ ಜೊತೆಗೆ ಎದೆಯ ಸಮಸ್ಯೆಗಳಿವೆ ಎಂದು ತೋರುತ್ತದೆ. ತುಂಬಾ ಜನ ರೋಗಿಗಳು ಇರುವುದರಿಂದ, ವೈದ್ಯರು ಸಾಕಷ್ಟು ಗಮನ ಕೊಡಲು ಸಾಧ್ಯವಾಗುತ್ತಿಲ್ಲ” ಎಂದು ಶರ್ಮಾ ಹೇಳಿದ್ದಾರೆ.

ಮೀರತ್‌ನ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಕೊರೊನಾ ಪ್ರಕರಣಗಳನ್ನು ವೇಗವಾಗಿ ತುಂಬುತ್ತಿವೆ. ಹೆಸರಿಸಲು ಇಷ್ಟಪಡದ ಕೆಎಂಸಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಯೊಬ್ಬರು, “ಈ ಸಮಯದಲ್ಲಿ ರೋಗಿಗಳಿಗೆ ಯಾವುದೇ ಹಾಸಿಗೆಗಳು ಲಭ್ಯವಿಲ್ಲ.  ರೋಗಿಗಳನ್ನು ಬೇರೆಡೆಗೆ ಕಳುಹಿಸಲು ಮನಸ್ಸು ಒಪ್ಪುತ್ತಿಲ್ಲ, ಆದರೆ ನಮಗೆ ಬೇರೆ ಆಯ್ಕೆಗಳಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಷ್ಟು ಅವ್ಯವಸ್ಥೆಗಳ ನಡುವೆಯೂ, ಪರಿಸ್ಥಿತಿ ಸುಧಾರಿಸುತ್ತಿವೆ ಎಂದು ಮೀರತ್ ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್ ಹೇಳುತ್ತಾರೆ.

“ಈ ಸಮಯದಲ್ಲಿ ಪ್ರಕರಣಗಳನ್ನು ನಿರ್ದಿಷ್ಟವಾಗಿ ಸೂಚಿಸುವುದು ಕಷ್ಟ. ಅನೇಕ ಹಳೆಯ ಪ್ರಕರಣಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇದರಿಂದ ಹೆಚ್ಚಿನ ಪ್ರಕರಣಗಳನ್ನು ತೋರಿಸಲಾಗುತ್ತಿದೆ. ಆದರೆ ಮುಂಬರುವ ವಾರದಲ್ಲಿ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆಸ್ಪತ್ರೆಯ ಹೊರೆ ಕೂಡ ಕಡಿಮೆಯಾಗುತ್ತಿದೆ ಮತ್ತು ಆಮ್ಲಜನಕ ಹಾಸಿಗೆಗಳ ಲಭ್ಯತೆ ಹೆಚ್ಚುತ್ತಿದೆ” ಎಂದು ಮೀರತ್ ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್ ಹೇಳಿದ್ದಾರೆ.


ಇದನ್ನೂ ಓದಿ: ಚಿಕಿತ್ಸೆಗಾಗಿ ಗಂಡನನ್ನ ದಾಖಲಿಸಿದ್ದ ಆಸ್ಪತ್ರೆಯಲ್ಲಿಯೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...