ಕಾಂಗ್ರೆಸ್ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ತಿರುಚಿದ ಚಿತ್ರವನ್ನು ಟ್ವೀಟ್ ಮಾಡಿರುವ ಆರೋಪದ ಮೇಲೆ ಉತ್ತರಾಖಂಡ ಬಿಜೆಪಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಕಳೆದ ವಾರ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ತಿರುಚಿದ ಚಿತ್ರವನ್ನು ಟ್ವೀಟ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉತ್ತರಾಖಂಡ ಘಟಕಕ್ಕೆ ಚುನಾವಣಾ ಸಮಿತಿಯು ನೋಟಿಸ್ ನೀಡಿತ್ತು. ಈ ಚಿತ್ರದಲ್ಲಿ ಹರೀಶ್ ರಾವತ್ ಅವರನ್ನು ಮುಸ್ಲಿಂ ಧರ್ಮಗುರು ಎಂದು ತೋರಿಸಲಾಗಿತ್ತು.
’ಚುನಾವಣಾ ಮಾದರಿ ನೀತಿ ಸಂಹಿತೆಯ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದು ಅಥವಾ ಧರ್ಮ, ಜನಾಂಗ, ಜಾತಿ, ಭಾಷೆಯ ಆಧಾರದ ಮೇಲೆ ಗುಂಪುಗಳ ನಡುವೆ ಯಾವುದೇ ವ್ಯತ್ಯಾಸವನ್ನು ಸೃಷ್ಟಿಸುವುದು ಟ್ವೀಟ್‌ನ ಉದ್ದೇಶವಲ್ಲ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಅನ್ನು ಅಳಿಸಲಾಗಿದೆ ಎಂದು ಉತ್ತರಾಖಂಡ ಬಿಜೆಪಿ ಉತ್ತರ ಸಲ್ಲಿಸಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?
ನೋಟಿಸ್‌ಗೆ ಬಿಜೆಪಿ ಪಕ್ಷ ಸಲ್ಲಿಸಿರುವ ಉತ್ತರವು ಸಮಾಧಾನಕರವಾಗಿಲ್ಲ ಎಂದಿರುವ ಚುನಾವಣಾ ಆಯೋಗ, ಮುಂದೆ ಹೆಚ್ಚು ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದು, ಚುನಾವಣಾ ನೀತಿ ಸಂಹಿತೆಯ ಎಲ್ಲಾ ನಿಬಂಧನೆಗಳನ್ನು ಅನುಸರಿಸಲು ಸಲಹೆ ನೀಡಿದೆ.
ಫೆಬ್ರವರಿ 3 ರಂದು ರಾತ್ರಿ 9.34 ಕ್ಕೆ ಬಿಜೆಪಿ ಉತ್ತರಾಖಂಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ರಾವತ್ ಅವರ ತಿರುಚಿದ ಚಿತ್ರವನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಅವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂದು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ ಬಳಿಕ ಚುನಾವಣಾ ಸಂಸ್ಥೆ ಕ್ರಮ ಕೈಗೊಂಡಿದೆ.
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಶನಿವಾರ ಮುಖ್ಯ ಚುನಾವಣಾ ಆಯುಕ್ತರೊಂದಿಗೆ (ಸಿಇಸಿ) ಮಾತನಾಡಿ ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ‘ಉತ್ತರಾಖಂಡದಲ್ಲಿ ಬಿಜೆಪಿ ಸೋಲಲಿದೆ’: ಬಿಜೆಪಿ ಸ್ಟಾರ್ ಪ್ರಚಾರಕ, ಮಧ್ಯಪ್ರದೇಶ ಸಿಎಂ ಚೌಹಾಣ್ ಹೇಳಿಕೆ


