Homeಮುಖಪುಟಹಕ್ಕು- ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಧಿಗಳ ಬಗ್ಗೆ ಸಂಕ್ಷಿಪ್ತ ವಿವರ

ಹಕ್ಕು- ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಧಿಗಳ ಬಗ್ಗೆ ಸಂಕ್ಷಿಪ್ತ ವಿವರ

- Advertisement -
- Advertisement -

ಹಿಜಾಬ್ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವಾಗ ಕರ್ನಾಟಕ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ಸಂಬಂಧಿತ ವಿಚಾರಣೆಯ ಪ್ರತೀ ಪ್ರಕ್ರಿಯೆಯೂ ಸುದ್ದಿಯಾಗುತ್ತಿವೆ. ಈ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂವಿಧಾನದಲ್ಲಿ ನೀಡಲಾದ ಹಕ್ಕುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ:

ನಮ್ಮ ಮೂಲಭೂತ ಹಕ್ಕುಗಳೇನು?

ಭಾರತೀಯರು ಘನತೆಯಿಂದ ಜೀವನ ನಡೆಸುವ ಸಲುವಾಗಿ ಸಂವಿಧಾನದ 3ನೇ ಭಾಗದಲ್ಲಿ 12 ರಿಂದ 35ನೇ ವಿಧಿಗಳಲ್ಲಿ 6 ಮೂಲಭೂತ ಹಕ್ಕುಗಳನ್ನು (Fundamental Rights) ನೀಡಲಾಗಿದೆ.

ಅವುಗಳೆಂದರೆ:-

1. ಸಮಾನತೆಯ ಹಕ್ಕು

2. ಸ್ವಾತಂತ್ರ್ಯದ ಹಕ್ಕು

3. ಶೋಷಣೆಯ ವಿರುದ್ಧದ ಹಕ್ಕು

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು

6. ಸಂವಿಧಾನಬದ್ಧ ಪರಿಹಾರದ ಹಕ್ಕು

ನಮ್ಮ ಹಕ್ಕುಗಳ ರಕ್ಷಕ ಯಾರು?

ಹಕ್ಕುಗಳು ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ, ವ್ಯಕ್ತಿಯ ಅಭಿವೃದ್ದಿಗೆ ಅಗತ್ಯ ಎಂಬುದು ಸಂವಿಧಾನದ ನಿಲುವು. ಇದೇ ಕಾರಣಕ್ಕೆ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸವೋಚ್ಛ ಹಾಗೂ ಉಚ್ಚನ್ಯಾಯಾಲಯಗಳಿಗೆ ನೀಡಲಾಗಿದೆ. ಆದರೆ, ಭಾರತದಲ್ಲಿ ಈ ಹಕ್ಕುಗಳು ಪೈಕಿ ಆಗಿಂದಾಗ್ಗೆ ಚರ್ಚೆಗೆ ಒಳಪಡುವ ಮತ್ತು ವಿವಾದದ ಕೇಂದ್ರ ಬಿಂದುವಾಗಿರುವುದು ಧಾರ್ಮಿಕ ಹಕ್ಕು. ಹೀಗಾಗಿ ಧಾರ್ಮಿಕ ಹಕ್ಕಿನ ಬಗ್ಗೆ ಸಂವಿಧಾನ ಏನು ಹೇಳುತ್ತದೆ ಎನ್ನುವುದು ಇಂದಿನ ದಿನಗಳಲ್ಲಿ ಪ್ರಸ್ತುತವೆನಿಸುತ್ತಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು (ವಿಧಿ 25-28) ಏನು ಹೇಳುತ್ತದೆ?

  • 25ನೇ ವಿಧಿ ಅನ್ವಯ – ಪ್ರತಿಯೊಬ್ಬ ವ್ಯಕ್ತಿಯು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ, ಆರಾಧಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ.
  • 26ನೇ ವಿಧಿ ಅನ್ವಯ – ಪ್ರತಿಯೊಂದು ಧರ್ಮವು ಧಾರ್ಮಿಕ ದಾನದತ್ತಿ ಉದ್ದೇಶಗಳಿಗಾಗಿ ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ, ಚರ ಮತ್ತು ಸ್ಥಿರಾಸ್ತಿ ಹೊಂದುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ.

a) ಧಾರ್ಮಿಕ ಮತ್ತು ಧರ್ಮಾರ್ಥ ಉದ್ದೇಶಗಳಿಗಾಗಿ ಧಾರ್ಮಿಕ ಸಂಸ್ಥೆಯೊಂದನ್ನು ಸ್ಥಾಪಿಸುವ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ,

b) ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ವ್ಯವಹಾರವನ್ನು ತಾನೇ ನಿರ್ವಹಿಸುವ,

c) ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದುವ,

d) ಕಾನೂನಿನನ್ವಯ ಅಂತಹ ಆಸ್ತಿಯ ವಹಿವಾಟು ನಡೆಸುವ; ಹಕ್ಕನ್ನು ಹೊಂದಿರತಕ್ಕದ್ದು.

27ನೇ ವಿಧಿ ಅನ್ವಯ – ಯಾವುದೇ ಧರ್ಮದ ರಕ್ಷಣೆಗೆ ಪೋಷಣೆಗೆ ಅಥವಾ ಪ್ರಚಾರದ ಸಲುವಾಗಿ ತೆರಿಗೆ ಅಥವಾ ವಂತಿಗೆ ನೀಡುವಂತೆ ಒಬ್ಬ ವ್ಯಕ್ತಿಯನ್ನು ಬಲವಂತಪಡಿಸುವಂತಿಲ್ಲ.

28ನೇ ವಿಧಿ ಅನ್ವಯ – ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನಕ್ಕೊಳಪಟ್ಟ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ. ಆದರೆ, ಧಾರ್ಮಿಕ ದತ್ತಿ ವಿದ್ಯಾಸಂಸ್ಥೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇದಲ್ಲದೆ, ಧಾರ್ಮಿಕ ಶಿಕ್ಷಣ ಅಥವಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದಿರುವ ಹಕ್ಕು.

ಸಂಪೂರ್ಣವಾಗಿ ಸರ್ಕಾರದ ನಿಧಿಯಿಂದ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡ ತಕ್ಕದ್ದಲ್ಲ. ಅಲ್ಲದೆ ಇಂಥ ಶೈಕ್ಷಣಿಕ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಅಥವಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಯಾವುದೇ ವ್ಯಕ್ತಿಯನ್ನು ಒತ್ತಾಯಿಸತಕ್ಕದ್ದಲ್ಲ.

29ನೇ ವಿಧಿಯಲ್ಲಿ ನೀಡಲಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಏನು ಹೇಳುತ್ತದೆ?

a) ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ – ಭಾರತ ರಾಷ್ಟ್ರಕ್ಷೇತ್ರದ ಯಾವುದೇ ಭಾಗದಲ್ಲಿ ವಾಸಿಸುವ ನಾಗರಿಕರ ಯಾವುದೇ ಪಂಗಡ ತನ್ನದೇ ಆದ ಭಾಷೆ, ಲಿಪಿ ಅಥವಾ ಸಂಸ್ಕೃತಿ ಹೊಂದಿದ್ದಲ್ಲಿ ಅದು ಅವುಗಳನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು.

b) ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ನಿರಾಕರಣೆ ವಿರುದ್ಧ ಹಕ್ಕು ಮತ್ತು ರಾಜ್ಯದಿಂದ ನಿರ್ವಹಿಸಲ್ಪಟ್ಟ ಅಥವಾ ರಾಜ್ಯ ನಿಧಿಯಿಂದ ನೆರವು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಯು ಯಾವುದೇ ನಾಗರಿಕನಿಗೆ ಆತನ ಧರ್ಮ, ಮೂಲ ವಂಶ, ಜಾತಿ, ಭಾಷೆ ಇವುಗಳಲ್ಲಿ ಯಾವುದೊಂದರ ಆಧಾರದ ಮೇಲಿಂದ ಪ್ರವೇಶವನ್ನು ನಿರಾಕರಿಸಿದ್ದಲ್ಲ.

30ನೇ ವಿಧಿ – ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಹಾಗೂ ಅವುಗಳ ಆಡಳಿತ ನಿರ್ವಹಣೆಯ ಸಂಬಂಧ ಅಲ್ಪಸಂಖ್ಯಾತರ ಹಕ್ಕು

a) ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಅವುಗಳ ಆಡಳಿತವನ್ನು ನಿರ್ವಹಿಸುವ ಹಕ್ಕನ್ನು ಹೊಂದಿರತಕ್ಕದ್ದು.

b) ರಾಜ್ಯವು ಶೈಕ್ಷಣಿಕ ಸಂಸ್ಥೆಗಳಿಗೆ ನೆರವು ಅನುದಾನ ಮಂಜೂರು ಮಾಡುವಾಗ ಯಾವುದೇ ಶಿಕ್ಷಣ ಸಂಸ್ಥೆಯ ವಿರುದ್ಧ ಅದು ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರ ಆಡಳಿತ ಕ್ಕೊಳಪಟ್ಟಿದೆ ಎನ್ನುವ ಕಾರಣದಿಂದ ತಾರತಮ್ಯ ಎಸಗತಕ್ಕದ್ದಲ್ಲ.

ಹಕ್ಕು ಚ್ಯುತಿಯಾದಾಗ ಏನು ಮಾಡಬೇಕು?

ಪ್ರತಿಯೊಬ್ಬನ ಮೂಲಭೂತ ಹಕ್ಕಿಗೆ ಚ್ಯುತಿ ಉಂಟಾದಲ್ಲಿ ತನಗೆ ಸಂವಿಧಾನ ಕೊಡ ಮಾಡಿದ ಹಕ್ಕಿನ ಜಾರಿಗಾಗಿ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾಂವಿಧಾನಿಕ ಪರಿಹಾರ ಪಡೆಯುವ ಹಕ್ಕನ್ನೂ ಸಹ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿದೆ. ಸಂವಿಧಾನದ ಪರಿಹಾರೋಪಯವೂ ಸಹ ಮೂಲಭೂತ ಹಕ್ಕೇ ಆಗಿದ್ದು ಇದನ್ನು ಸರ್ಕಾರವು ಯಾರಿಗೂ ನಿರಾಕರಿಸುವಂತಿಲ್ಲ ಎಂದೂ ಸಹ ಉಲ್ಲೇಖಿಸಲಾಗಿದೆ.

ಯಾವಾಗ ಈ ಹಕ್ಕು ಅನ್ವಯಿಸುವುದಿಲ್ಲ?

ಆದರೆ, ಈ ಯಾವುದೇ ಮೂಲಭೂತ ಹಕ್ಕು ಸ್ವಯಂ ಪರಿಪೂರ್ಣವಲ್ಲ. ದೇಶದ ಸಾರ್ವಭೌಮತ್ವಕ್ಕೆ ಭಂಗ ತರುವ ಸಾಧ್ಯತೆ ಇದ್ದಲ್ಲಿ ಈ ಹಕ್ಕುಗಳನ್ನು 1983 ಸೆಕ್ಷನ್ 7 (2A) ಅಡಿಯಲ್ಲಿ ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ. ಆದರೆ, ಹಕ್ಕುಗಳನ್ನು ಹೀಗೆ ಹಿಂಪಡೆಯುವ ಸರ್ಕಾರದ ಪ್ರಕ್ರಿಯೆ ತಾತ್ಕಾಲಿಕವೇ ಹೊರತು ಶಾಶ್ವತವಲ್ಲ ಮತ್ತು ಯಾವುದೇ ಸರ್ಕಾರ ಸಂವಿಧಾನದ ವಿರುದ್ಧ ಹೆಜ್ಜೆ ಇಡುವುದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಷ್ಟು ಸುಲಭದ ಮಾತೂ ಅಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...