Homeಮುಖಪುಟಸರ್ಕಾರಿ ವೈದ್ಯಕೀಯ ಸೀಟಿಗೂ ನಿಗಧಿಗಿಂತ ನಾಲ್ಕು ಪಟ್ಟು ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ KLE ಕಾಲೇಜು:...

ಸರ್ಕಾರಿ ವೈದ್ಯಕೀಯ ಸೀಟಿಗೂ ನಿಗಧಿಗಿಂತ ನಾಲ್ಕು ಪಟ್ಟು ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ KLE ಕಾಲೇಜು: ದೂರು ದಾಖಲು

ಸರ್ಕಾರಿ ಕೋಟಾಗ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಪಡಿಸಿರುವ ಶುಲ್ಕ 1.41 ಲಕ್ಷ. ಆದರೆ 6.30 ಲಕ್ಷ ರೂ. ಶುಲ್ಕವನ್ನು ವಸೂಲಿ ಮಾಡುತ್ತಿದೆ KLE ಕಾಲೇಜು!

- Advertisement -
- Advertisement -

ಇಂದು ವೈದ್ಯಕೀಯ ಶಿಕ್ಷಣ ಎಂಬುದು ಭಾರತದ ಬಡ-ಮಧ್ಯಮ ವರ್ಗದ ಜನರ ಪಾಲಿಗೆ ಕೈಗೆಟುಕದ ಕನಸಾಗಿದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಹಾಗಾಗಿಯೆ ಕೆಲ ಮಧ್ಯಮ ವರ್ಗದವರು ಉಕ್ರೇನ್-ರಷ್ಯಾದಂತಹ ದೇಶದಲ್ಲಿ ತಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸುತ್ತಾರೆ. ಹೀಗೆ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದ ವ್ಯಕ್ತಿಯೇ ಹಾವೇರಿ ಮೂಲದ ನವೀನ್. ನಿನ್ನೆ ರಷ್ಯಾ ದಾಳಿಗೆ ತುತ್ತಾಗಿ ಉಕ್ರೇನ್‌ನಲ್ಲಿ ಮೃತಪಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಂದೆಡೆ ಬೆಳಗಾವಿ ಮತ್ತು ಧಾರವಾಡದ ಕೆಎಲ್ಇ (KLE) ಶಿಕ್ಷಣ ಸಂಸ್ಥೆ ಸರ್ಕಾರಿ ಕೋಟಾದ ಸೀಟಿಗೂ ಕಾನೂನು ಬಾಹಿರವಾಗಿ ಮೂರು ಪಟ್ಟು ಶುಲ್ಕ ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದ್ದು ಚರ್ಚೆಗೆ ಗ್ರಾಸವಾಗಿದೆ.

ಏನಿದು ಕೆಎಲ್ಇ ಪ್ರಕರಣ:

ಖಾಸಗಿ ಮತ್ತು ಡೀಮ್ಡ್ ವೈದ್ಯಕೀಯ ಕಾಲೇಜುಗಳಲ್ಲೂ ಸಹ ಸರ್ಕಾರಿ ಕೋಟಾದಡಿಲ್ಲಿ ಶೇ.40 ರಷ್ಟು ಸೀಟುಗಳನ್ನು ನೀಡಬೇಕು. ಮೆರಿಟ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಸೀಟುನ್ನು ಸರ್ಕಾರವೇ ಹಂಚುತ್ತದೆ. ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಪಡಿಸಿರುವ ಶುಲ್ಕ 1.41 ಲಕ್ಷ. ಪ್ರತಿ ಖಾಸಗಿ ಶಿಕ್ಷಣ ಸಂಸ್ಥೆಗಳೂ ಇದಕ್ಕಿಂತ ಅಧಿಕವಾಗಿ ಹಣವನ್ನು ವಸೂಲಿ ಮಾಡುವಂತಿಲ್ಲ ಎಂಬ ನಿಯಮವಿದೆ.
ಆದರೆ, ಕೆಎಲ್ಇ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿಯ ಜೆಎನ್ಎಂಸಿ (JNMC- Jawaharlal Nehru Medical College) ಜೆಜಿಎಂಎಂ (Jagadguru Gangadhar Mahaswamigalu Moorsavirmath) ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಸೀಟುಗಳಿಗೂ ಸಹ ಏಕಾಏಕಿ 6.30 ಲಕ್ಷ ರೂ. ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಕೆಎಲ್ಇ ಶಿಕ್ಷಣ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಸರ್ಕಾರ ನಿಗದಿಪಡಿಸಿರುವ ಶುಲ್ಕದಿಂದ ನಮಗೆ ನಷ್ಟವಾಗುತ್ತದೆ. ಇದೇ ಕಾರಣಕ್ಕೆ ಮ್ಯಾನೇಜ್ಮೆಂಟ್-ಖಾಸಗಿ ಸೀಟಿನ ಶೇ.50 ರಷ್ಟು ಹಣವನ್ನು ಸರ್ಕಾರಿ ಸೀಟಿಗೂ ಪಡೆಯುವ ಬಗ್ಗೆ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗಿತ್ತು. ನಮ್ಮ ಬೇಡಿಕೆಗೆ ಸರ್ಕಾರವೂ ಒಪ್ಪಿಗೆ ಸೂಚಿಸಿತ್ತು. ಅದರಂತೆ ನಾವು ಶುಲ್ಕವನ್ನು ನಿಗದಿ ಪಡಿಸಿದ್ದೇವೆ. ಆದರೆ, ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ” ಎನ್ನುತ್ತಾರೆ.

ಈ ಕುರಿತು ಕಾಲೇಜು ಹೊರಡಿಸಿರುವ ಸುತ್ತೋಲೆಗಳು ಇಲ್ಲಿವೆ.

ಶುಲ್ಕ ಪಾವತಿಸಿರುವ ರಶೀದಿ
ಶುಲ್ಕ ಹೆಚ್ಚಿಸಿರುವ ಸುತ್ತೋಲೆ
ಶುಲ್ಕ ಹೆಚ್ಚಳದ ಬಗ್ಗೆ ಸ್ಪಷ್ಟೀಕರಣ

ಪ್ರಕರಣದ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರನ್ನು ಸಂಪರ್ಕಿಸಿದರೆ, “ವಿದ್ಯಾರ್ಥಿಗಳಿಂದ ದೂರು ಬಂದಿದ್ದು, ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು” ಎಂದು ಅಶ್ವಾಸನೆ ನೀಡಿದ್ದಾರೆ.

ಸರ್ಕಾರ ಅಧಿಸೂಚನೆ ಹೊರಡಿಸದೆ ಒಂದು ಖಾಸಗಿ ಶಿಕ್ಷಣ ಸಂಸ್ಥೆ ತನ್ನ ಇಷ್ಟಕ್ಕೆ ಹೀಗೆ ಶುಲ್ಕವನ್ನು ಏರಿಸುವುದು ಕಾನೂನು ಉಲ್ಲಂಘನೆ ಅಲ್ಲವೇ? ಈ ಬಗ್ಗೆ ಶಿಕ್ಷಣ ಇಲಾಖೆ ತುರ್ತಾಗಿ ಕ್ರಮವನ್ನು ಜರುಗಿಸಬೇಕಿತ್ತಲ್ಲವೇ? ಆದರೂ, ಪರೀಕ್ಷಾ ಪ್ರಾಧಿಕಾರ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿರುವುದು ಏಕೆ? ಎಂದು ಪ್ರಶ್ನೆಗಳನ್ನು ಹಾಕುತ್ತಾ ಹೋದರೆ, ಸರ್ಕಾರ ಮತ್ತು ಖಾಸಗಿಯವರ ನಡುವಿನ ಹಲವು ಒಳ ಒಪ್ಪಂದಗಳು ಒಂದೊಂದಾಗಿ ಸಿಕ್ಕು ಬಿಚ್ಚುತ್ತವೆ. ಅಸಲಿಗೆ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಖಾಸಗಿಯವರ ಸೀಟ್ ಬ್ಲಾಕಿಂಗ್ ದಂಧೆ, ಇದಕ್ಕೆ ಸರ್ಕಾರದ ಮೌನ ಸಮ್ಮತಿ ಅನಾವರಣವಾಗುತ್ತದೆ.

ಖಾಸಗಿಗೆ ಅಕ್ಷಯವಾದ ವೈದ್ಯಕೀಯ ಶಿಕ್ಷಣ:

ಸಿಇಟಿ (ಕಾಮನ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆಯನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿ ಕರ್ನಾಟಕದ್ದು. ಆರಂಭದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸೀಟು ಹಂಚಿಕೆಯ ಅನುಪಾತ 85:15 ಇತ್ತು. ಅಂದರೆ, ಖಾಸಗಿ ವಿದ್ಯಾ ಸಂಸ್ಥೆಗಳು ತಮ್ಮ ಶೇ.85 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಲ್ಲಿ ನೀಡಬೇಕಾಗಿತ್ತು. ಇದು ನಿರಂತರವಾಗಿ ಕಡಿತಗೊಂಡು ಶೇ.75 ಶೇ. 60 ಶೇ. 50 ಶೇ., 45 ಶೇ., 42 ಶೇ. ತಲುಪಿ, ಏಳು ವರ್ಷಗಳ ಹಿಂದೆ ಶೇ. 40ಕ್ಕೆ ಬಂದು ನಿಂತಿದೆ. ಇನ್ನೂ ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25 ರಷ್ಟು ಸೀಟುಗಳನ್ನು ಮಾತ್ರ ಸರ್ಕಾರ ಕೋಟಾದಡಿಯಲ್ಲಿ ಮೀಸಲಿಡಲಾಗಿದೆ. ದಕ್ಷಿಣ ಭಾರತದಲ್ಲೇ ವೈದ್ಯಕೀಯ ಶಿಕ್ಷಣದ ಸೀಟು ಹಂಚಿಕೆಯಲ್ಲಿ ಅತ್ಯಂತ ಕೆಟ್ಟ ವ್ಯವಸ್ಥೆ ಇರುವುದು ಕರ್ನಾಟಕದಲ್ಲೇ. ಏಕೆಂದರೆ ಕೇರಳದಲ್ಲಿ ಖಾಸಗಿಯವರು ಶೇ.50 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾಗೆ ನೀಡದರೆ, ತಮಿಳುನಾಡಿನಲ್ಲಿ ಈ ಪ್ರಮಾಣ ಶೇ.70 ರಷ್ಟಿದೆ. ಇನ್ನೂ ಮಹಾರಾಷ್ಟ್ರ ಸರ್ಕಾರವೂ ಸಹ ಶೇ.65 ಸೀಟುಗಳು ಸರ್ಕಾರಿ ಕೋಟಾಗೆ ಸಿಗುವಂತೆ ನಿಯಮ ರೂಪಿಸಿದೆ.

ಆದರೆ, ಈ ಮೇಲಿನ ಅನುಪಾತಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯ. ಆದರೆ ಸ್ವಾಯತ್ತ ವಿಶ್ವವಿದ್ಯಾಲಯಗಳ (Deemed University) ಕಥೆಯೇ ಬೇರೆ ಇದೆ. ಏಕೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಚಿಸಿರುವ ಈ ಯಾವ ನಿಯಮಗಳೂ ಡೀಮ್ಡ್- ಸ್ವಾಯತ್ತ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಈ ಶಿಕ್ಷಣ ಸಂಸ್ಥೆಗಳು ಆಡಿದ್ಧೇ ಆಟ, ಅವರು ಕೊಟ್ಟಿದ್ದೇ ಸೀಟು ಎಂಬಂತಾಗಿದೆ.

ಲಗಾಮಿಲ್ಲದ ಕರ್ನಾಟಕದ ಸ್ವಾಯತ್ತ ವಿಶ್ವವಿದ್ಯಾಲಯಗಳು:

ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜು (KMC), ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮೆಡಿಕಲ್ ಕಾಲೇಜು (JSS), ಬೆಳಗಾವಿಯ ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜು (JNMC) ವಿಜಯಪುರದ ಶ್ರೀ ಬಿ. ಎಂ. ಪಾಟೀಲ್ ಮೆಡಿಕಲ್ ಕಾಲೇಜು (SBMPMC), ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (Nitte University) ಮತ್ತು ಯೇನೆಪೋಯ ಮೆಡಿಕಲ್ ಕಾಲೇಜು (YMC), ತುಮಕೂರಿನ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು (SSMC), ಕೋಲಾರದ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು (SDUMC), ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು (SJMC) ಹಾಗೂ ಕಲಬುರ್ಗಿಯ ಖ್ವಾಜಾ ಬಂದೇ ನವಾಝ್ ಯುನಿವರ್ಸಿಟಿ. ಇವು ರಾಜ್ಯದ ಸ್ವಾಯತ್ತ ವಿಶ್ವವಿದ್ಯಾನಿಲಗಳ ಅಧೀನದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು.

ಈ ಪೈಕಿ 250 ಸೀಟುಗಳಿರುವ ಕೆಎಂಸಿ ಮಣಿಪಾಲ, 150 ಸೀಟುಗಳಿರುವ ಶ್ರೀ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, 130 ಸೀಟುಗಳಿರುವ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು, 150 ಸೀಟುಗಳಿರುವ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಹಾಗೂ 150 ಸೀಟುಗಳಿರುವ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಸೀಟುಗಳು ಶೂನ್ಯ!. ಇಲ್ಲಿ ಸರ್ಕಾರಿ ಮೆರಿಟ್ ವಿದ್ಯಾರ್ಥಿಗೆ ಪ್ರವೇಶವೇ ಇಲ್ಲ ಎಂಬುದೇ ಕಟು ವಾಸ್ತವ.

ಉಳಿದಂತೆ ಜೆಎಸ್ಎಸ್ ಮೈಸೂರು 200 ಸೀಟುಗಳ ಪೈಕಿ 12, ಜೆಎನ್ಎಂಸಿ ಬೆಳಗಾವಿ 200 ಸೀಟುಗಳ ಪೈಕಿ 12, ನಿಟ್ಟೆ ಯುನಿವರ್ಸಿಟಿ 150 ಸೀಟುಗಳ ಪೈಕಿ 12, ಯೇನೆಪೋಯ ಯುನಿವರ್ಸಿಟಿ 150 ಸೀಟುಗಳ ಪೈಕಿ 13 ಸೀಟುಗಳನ್ನು ಮಾತ್ರ ಸರಕಾರಿ ಕೋಟಾದಡಿ ನೀಡಲಾಗುತ್ತಿದೆ. ಉಳಿದ ಸೀಟುಗಳೆಲ್ಲವೂ ಖಾಸಗಿ ಸೀಟುಗಳಾಗಿವೆ. ನೂರು ಸೀಟುಗಳಿರುವ ಕಲಬುರ್ಗಿಯ ಖ್ವಾಜಾ ಬಂದೇನವಾಝ್ ಯನಿವರ್ಸಿಟಿ ಮಾತ್ರ 25 ಸೀಟುಗಳನ್ನು ಸರಕಾರಿ ಕೋಟಾದಲ್ಲಿ ನೀಡುತ್ತಿದೆ. ಅಂದರೆ ಪ್ರತಿ ವರ್ಷ ರಾಜ್ಯದಲ್ಲಿರುವ ಸ್ವಾಯತ್ತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ 1630 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಮಾತ್ರ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ.

ಸ್ವಾಯತ್ತ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ಹಿಡಿತ ಇಲ್ಲವೇ?

ಯಾವುದೇ ಸ್ವಾಯತ್ತ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಮುನ್ನ ಸರ್ಕಾರದ ಅನುಮತಿ ಕಡ್ಡಾಯ. ಆದರೆ, ಹೀಗೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಮುನ್ನ ಶಿಕ್ಷಣ ಇಲಾಖೆ ಶೇ.40 ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ನೋಟರಿ ಮಾಡಿಸಿಕೊಳ್ಳುವುದು ನಿಯಮ. ಆದರೆ, ಸ್ವಾಯತ್ತ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಮುನ್ನ ಸರ್ಕಾರ ಇಂತಹ ಯಾವುದೇ ಒಡಂಬಡಿಕೆಯನ್ನು ಮಾಡಿಕೊಂಡಿಲ್ಲ.

ಹೀಗಾಗಿ ಡೀಮ್ಡ್ ವಿಶ್ವವಿದ್ಯಾಲಯಗಳು ಖಾಸಗಿಯೇ ಆಗಿದ್ದರೂ ಸಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವ ಸರ್ಕಾರದ ಯಾವುದೇ ನಿಯಮಗಳು ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಅನ್ವಯಿಸುವುದಿಲ್ಲ. ಇದು ಸರ್ಕಾರದ ನಿರ್ಧಾರಗಳಲ್ಲಿನ ಅತಿದೊಡ್ಡ ಲೋಪ ಎನ್ನಲಾಗುತ್ತಿದೆ. ಆದರೆ, ಈ ಲೋಪ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎನ್ನುವ ಆರೋಪಗಳೂ ಇವೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.

ಲೋಪದ ಹಿಂದಿದೆ ಲಾಭದ ಲೆಕ್ಕ:

ಮೇಲೆ ವಿವರಿಸಿರುವ ಎಲ್ಲಾ ಸ್ವಾಯತ್ತ ವಿಶ್ವವಿದ್ಯಾಲಯಗಳ (Deemed University) ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಅನುಮಾನ ಸ್ಪಷ್ಟವಾಗುತ್ತದೆ. ಏಕೆಂದರೆ ಈ ವಿಶ್ವವಿದ್ಯಾಲಯಗಳ ಬಹುಪಾಲು ಮಾಲಕರು ಮಾಜಿ-ಹಾಲಿ ಸಚಿವರು ಮತ್ತು ವಿವಿಧ ಸಮುದಾಯಗಳ ಮಠಗಳೇ ಆಗಿವೆ. ಸರ್ಕಾರವನ್ನು ಮುನ್ನಡೆಸುತ್ತಿರುವ ಶಾಸನ-ಕಾನೂನುಗಳನ್ನು ರಚಿಸುವ ಶಾಸಕ ಸಚಿವರು, ಜನ ನಾಯಕರು ಮತ್ತು ಈ ನಾಯಕರನ್ನು ಮುನ್ನಡೆಸುವ ಪ್ರತಿಷ್ಠಿತ ಮಠಗಳೇ ಒಂದು ಶಿಕ್ಷಣ ಸಂಸ್ಥೆಯನ್ನು ಮಾಲೀಕತ್ವವನ್ನು ಹೊಂದಿರುವಾಗ ಶಿಕ್ಷಣ ದಂಧೆಗೆ ಲಗಾಮು ಹಾಕುವವರು ಯಾರು? ಎಂದು ಪ್ರಶ್ನಿಸುತ್ತಾರೆ ದಿ. ಕ್ಯಾಂಪಸ್ ಕರಿಯರ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಯು.ಎಚ್. ಉಮರ್.

ವೈದ್ಯಕೀಯಕ್ಕೆ ಸರ್ಕಾರಿ ಫೀಸೆಸ್ಟು ಗೊತ್ತಾ?

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿನ ಸೀಟು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿನ ಸರ್ಕಾರಿ ಕೋಟಾ ಸೀಟಿಗೆ ಸರ್ಕಾರವೇ ಶುಲ್ಕವನ್ನು ನಿಗದಿಪಡಿಸಿದೆ. 2017ರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳ ವಾರ್ಷಿಕ ಶುಲ್ಕ ರೂ. 16,700 ಮಾತ್ರ ಇತ್ತು. 2018ರಲ್ಲಿ ಈ ಶುಲ್ಕವನ್ನು ಮೂರು ಪಟ್ಟು ಅಂದರೆ, ರೂ. 49,850ಕ್ಕೆ ಏರಿಸಲಾಗಿದೆ. 2019ರಲ್ಲಿ ಈ ಶುಲ್ಕ ರೂ. 59,350 ಆಗಿದೆ. ಇನ್ನೂ ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟಾದ ಸೀಟುಗಳ ವಾರ್ಷಿಕ ಶುಲ್ಕ 2017ರಲ್ಲಿ ರೂ. 77,000 ಇದ್ದಿದ್ದು, 2018ರಲ್ಲಿ ರೂ. 1,10,000ಕ್ಕೆ ಏರಿಸಲಾಗಿತ್ತು. 2019ರಲ್ಲಿ ಈ ಶುಲ್ಕ ರೂ. 1,24,000 ಆಗಿದ್ದರೆ, ಪ್ರಸ್ತುತ ಈ ಶುಲ್ಕವನ್ನು 1.41 ಲಕ್ಷಕ್ಕೆ ಏರಿಸಲಾಗಿದೆ.

ಆದರೆ, ಇದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿಯೊಂದು ಸೀಟನ್ನೂ 20 ರಿಂದ 30 ಲಕ್ಷಕ್ಕೆ ಮಾರಾಟ ಮಾಡುತ್ತಿವೆ. ಎನ್ಆರ್‌ಐ ಸೀಟುಗಳಿಗೆ 34 ಲಕ್ಷ ನಿಗದಿಪಡಿಸಲಾಗಿದೆ. (ಈ ಅಂಕಿಸಂಖ್ಯೆಗಳು ಮೇಲ್ನೋಟಕ್ಕೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸ ಇದೆ) ಇನ್ನೂ ಸೀಟ್ ಬ್ಲಾಕಿಂಗ್ ಧಂದೆಯ ಹೆಸರಿನಲ್ಲಿ ಕೋಟಿ ಕೋಟಿ ಹಣಕ್ಕೆ ಈ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದು ಬಹಿರಂಗ ಸತ್ಯ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಯವರು ಇಷ್ಟೇ ಪ್ರಮಾಣದ ಹಣವನ್ನು ಸರ್ಕಾರಿ ಕೋಟಾದ ಬಡ ವಿದ್ಯಾರ್ಥಿಗಳಿಂದಲೂ ಈಗ ವಸೂಲಿ ಮಾಡಲು ನಿಂತಿರುವುದು ಮಾತ್ರ ಅಮಾನವೀಯ ನಡೆ.

ಇದೇ ಸಂದರ್ಭದಲ್ಲಿ “ಶೇ.90 ರಷ್ಟು ಭಾರತೀಯ ವಿದ್ಯಾರ್ಥಿಗಳು ಇಲ್ಲಿನ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಫೇಲ್ ಆದ ಕಾರಣಕ್ಕೆ ವಿದೇಶಕ್ಕೆ ಹೋಗುತ್ತಾರೆ” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಖಾಸಗಿ ಕೋಟಾಗೆ ಸಿಕ್ಕಾಪಟ್ಟೆ ಶುಲ್ಕ ವಿಧಿಸುವುದು. ಸರ್ಕಾರಿ ಕೋಟಾಗೂ ಶುಲ್ಕ ಹೆಚ್ಚಳ ಮಾಡುವುದು. ಇನ್ನೊಂದೆಡೆ ಇದನ್ನು ಭರಿಸಲಾಗದೆ ವಿದೇಶಕ್ಕೆ ಹೋದವರಿಗೆ ಫೇಲ್ ಆಗಿ ಹೋಗಿದ್ದಾರೆ ಎಂದು ಅಣಿಸುವುದು ಈ ಮೂರನ್ನು ಇದೇ ಸರ್ಕಾರಗಳು ಮಾಡುತ್ತಿವೆ. ಅಸಲಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಬಡವರು ಭರಿಸಲಾಗದಷ್ಟು ದುಬಾರಿಯಾಗಿದೆ. ಇದೇ ಕಾರಣಕ್ಕೆ ಹಾವೇರಿ ಮೂಲದ ನವೀನ್ ನಂತಹ ಲಕ್ಷಾಂತರ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ವಿದೇಶಕ್ಕೆ ಹಾರುತ್ತಿರುವುದು ಹಾಗೂ ಪ್ರಾಣ ಬಿಡುತ್ತಿರುವುದು. ಈಗ ಹೇಳಿ ನವೀನ್ ಸಾವಿಗೆ ಯಾರು ಹೊಣೆ?

  • ಅಶೋಕ್ ಎಂ ಭದ್ರಾವತಿ

ಇದನ್ನೂ ಓದಿ: NEET ನಿಂದಲೇ ಕನ್ನಡಿಗನ ಸಾವು – NEET ಪರೀಕ್ಷೆ ರದ್ದುಗೊಳಿಸಿ: ಇಂದು ಟ್ವಿಟರ್ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...