ಅಘನಾಶಿನಿ ಕೊಳ್ಳ ಕೊತಕೊತ ಕುದಿಯಲು ಶುರುವಾಗಿ ಹೆಚ್ಚುಕಮ್ಮಿ ಒಂದು ತಿಂಗಳೇ ಕಳೆದುಹೋಗಿದೆ. ಅಕ್ಷರಶಃ ಉತ್ತರ ಕನ್ನಡದ ಜೀವ ನದಿಯಾದ ಅಘನಾಶಿನಿಯ ನೀರನ್ನು ಬೆಂಗಳೂರಿಗೆ ಒಯ್ಯುವ ಆಡಳಿತಗಾರರ ಗುಟ್ಟಿನ ಗಂಡಾಗುಂಡಿ ಕಟ್ಟಾಗುತ್ತಿದ್ದಂತೆಯೇ ಕಂಗಾಲುಬಿದ್ದ ಅಘನಾಶಿನಿ ಕಣಿವೆ ಮಂದಿ ತಿರುಗಿಬಿದ್ದಿದ್ದಾರೆ. ಅತ್ತ ಶರಾವತಿ ನೀರು ಬೆಂಗಳೂರಿಗೆ ಸಾಗಿಸಲು ಬಿಡುವುದಿಲ್ಲವೆಂದು ಶರಾವತಿ ಕಣಿವೆಯಲ್ಲಿ ಜನಾಂದೋಲನ ನಡೆಯುತ್ತಿದ್ದ ಹೊತ್ತಿನಲ್ಲೇ ಇತ್ತ ಅಘನಾಶಿನಿ ನದಿ ನೀರಿಗೂ ಕನ್ನ ಹಾಕುವ ಕರಾಮತ್ತಿನ ಸುದ್ದಿ ಅಲ್ಲೋಲಕಲ್ಲೋಲವೇ ಸೃಷ್ಟಿಸಿಬಿಟ್ಟಿತ್ತು. ಈಗ ಕುಮ್ಮಿ ಮನೆಗೆ ಹೋಗಿ ಯಡ್ಡಿಯ ಕೇಸರಿ ದರ್ಬಾರು ಬಂದರೂ ಜನರು ಪ್ರತಿಭಟನೆ ನಿಲ್ಲಿಸಲು ಸಿದ್ಧರಿಲ್ಲ. ಏಕೆಂದರೆ, ಶರಾವತಿ ಮತ್ತು ಅಘನಾಶಿನಿ ನದಿಗಳ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಳಯಾಂತಕ ಪ್ರಾಜೆಕ್ಟಿನ ಮೂಲವಿರುವುದೇ ಯಡ್ಡಿಯ ಪಂಡಿತ ಪಠಾಲಮ್ಮಿನಲ್ಲಿ!!
2010ರಲ್ಲಿ ಆಳ್ವಿಕೆ ನಡೆಸುತ್ತಿದ್ದ ಯಡ್ಡಿ ಸರ್ಕಾರ 2031ರ ಹೊತ್ತಿಗೆ ಬೆಂಗಳೂರು ಎದುರಿಸಬಹುದಾದ ಕುಡಿಯುವ ನೀರಿನ ಅಭಾವ ನೀಗುವ ಪರಿಹಾರಕ ಪ್ಲಾನ್ ಬಗ್ಗೆ ಪರಿಶೀಲಿಸಲು ನಿವೃತ್ತ ಮುಖ್ಯ ಇಂಜಿನಿಯರ್ ತ್ಯಾಗರಾಜ್ ಸಮಿತಿ ರಚಿಸಿತ್ತು. ಈ ಸಮಿತಿ 2012ರಲ್ಲಿ ಶರಾವತಿ ಮತ್ತು ಅಘನಾಶಿನಿ ನೀರು ರಕ್ಕಸ ಪಂಪ್‍ಗಳ ಮೂಲಕ ಬೆಂಗಳೂರಿಗೆ ಲಿಫ್ಟ್ ಮಾಡಲು ಸೂಚಿಸಿತ್ತು. 2014ರಲ್ಲಿ ಈ ಪ್ರಸ್ತಾವನೆ ಸರ್ಕಾರ ಸ್ವೀಕರಿಸಿತಾದರೂ, ಇದೆಲ್ಲ ಅಪ್ರಾಯೋಗಿಕ ಪ್ಲಾಪ್ ಪ್ರಾಜೆಕ್ಟ್ ಆಗುತ್ತದೆಂಬ ಅಭಿಪ್ರಾಯ ಜಲತಜ್ಞರ ವಲಯದಿಂದ ಬಂದಿತ್ತು. ಹಾಗಂತ ಆಗ ಉತ್ತರ ಕನ್ನಡದ ಸಚಿವ, ಸಂಸದ, ಶಾಸಕರ್ಯಾರೂ ಈ “ಜಲಕಂಟಕ”ದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಂತಮ್ಮ ಜೀವನೋಪಾಯದ ರಾಜಕೀಯ ಕಸುಬಿನಲ್ಲಿ ನಿರಾತಂಕವಾಗಿ ನಿರತರಾಗಿದ್ದರು!
ಶಿರಸಿಯ ಶಂಕರ ಹೊಂಡ
ದಲ್ಲಿ ಹುಟ್ಟುವ ಅಘನಾಶಿನಿ ನದಿ ಕುಮಟೆಯ ಅರಬ್ಬೀಸಮುದ್ರ ಸೇರುವವರೆಗೆ ಬರೋಬ್ಬರಿ 1800 ಚದರ ಕಿಮೀ ಜಲಾನಯನ ಪ್ರದೇಶ ಸುತ್ತು ಹೊಡೆಯುತ್ತದೆ. ಅಘನಾಶಿನಿಯು ಸುಮಾರು 100-120 ಸಮುದ್ರ ಕಿ.ಮೀ ಹರಿದು ಸಮುದ್ರ ಸೇರುವುದರಿಂದ ವ್ಯರ್ಥವಾಗುತ್ತದೆಂದು ಸರ್ಕಾರಿ ಪ್ರಭೃತಿಗಳು ಲೆಕ್ಕಹಾಕಿದ್ದಾರೆ. ಇದರಲ್ಲಿ ಬರೀ ಐವತ್ತೇ ಟಿಎಂಸಿ ನೀರನ್ನು ಬೆಂಗಳೂರಿಗೆ ತಳ್ಳುವ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಯೋಚನೆ ಮಾಡಲಾಗಿತ್ತೆಂಬ ಮೋಗಮ್ ಭಾತ್ಮಿಯೊಂದನ್ನು ಸರ್ಕಾರಿ ಸರದಾರರು ತೇಲಿಬಿಟ್ಟಿದ್ದಾರೆ.
ಇದು ಹಸಿಹಸೀ ಸುಳ್ಳು! ಈ ಭರ್ಜರಿ ಯೋಜನೆಯ ಆಳ-ಅಗಲ ನೋಡಿದರೆ ಬಳಕೆಯಾಗೋದು ಬರೀ 50 ಟಿಎಂಸಿ ನೀರೆಂದು ನಂಬೋದು ಸಾಧ್ಯವೇ ಇಲ್ಲ. ಯೋಜನಾ ವರದಿ ಕೈಲಿಡಿದು ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಅಘನಾಶಿನಿಯ 230 ಟಿಎಂಸಿ ನೀರೂ ಸ್ವಾಹಾ ಆಗುತ್ತದೆಂದು ಎಂಥ ಗಾಂಪನಿಗೂ ಅರ್ಥವಾಗುತ್ತದೆ. ಇಷ್ಟಾದರೂ ಪ್ರಾಜೆಕ್ಟ್ ಫಲಪ್ರದವಾಗುತ್ತದೆಂಬುದಕ್ಕೆ ಯಾವ ಖಾತ್ರಿಯೂ ಇಲ್ಲ! ಇದೊಂದು ‘ಎತ್ತಿನಹೊಳೆ”ಯಂಥದ್ದೇ ಬೋಗಸ್ ಯೋಜನೆ ಆಗಬಹುದಷ್ಟೇ.
ಕಠೋರ ವಾಸ್ತವ
ಅಘನಾಶಿನಿ ನದಿಗೆ ಸಿದ್ದಾಪುರದ “ಹೇಮಜಿನಿ” ಎಂಬಲ್ಲಿ ಡ್ಯಾಮ್
ಕಟ್ಟಲಾಗುತ್ತದೆ. ನೀರನ್ನು ಪೈಪುಗಳ ಮೂಲಕ ಸಿದ್ದಾಪುರ, ಸಾಗರ, ಭದ್ರಾವತಿಗೆ ತರಲಾಗುತ್ತದೆ. ಭದ್ರಾವತಿಯ ಭದ್ರಾನದಿಯ ಮೇಲೆ ಮೇಲ್ಗಾಲುವೆ ನಿರ್ಮಿಸಿ ಅಲ್ಲಿಂದ ತರಿಕೆರೆ ಮೂಲಕ ಅಘನಾಶಿನಿ ನೀರನ್ನು ಚಿತ್ರದುರ್ಗದ ವಾಣಿವಿಲಾಸ ಜಲಾಶಯಕ್ಕೆ ತುಂಬಿಸಲಾಗುತ್ತದೆ. ಇದೇ ಪ್ರಕಾರ ತುಮಕೂರು ಜಿಲ್ಲೆಯ ಹಲವು ಡ್ಯಾಮ್‍ಗಳನ್ನು ಭರ್ತಿಮಾಡುತ್ತಾ ಅಂತಿಮವಾಗಿ ಬೆಂಗಳೂರಿನ ತಿಪ್ಪಗೊಂಡನಹಳ್ಳಿಯ ಜಲಾಶಯಕ್ಕೆ ಅಘನಾಶಿನಿ ನೀರನ್ನು ಸೇರಿಸುವ ಯೋಜನೆಯಿದು. ಹೇಮಜಿನಿಯಿಂದ ತಿಪ್ಪಗೊಂಡನಹಳ್ಳಿ ಸರೋವರದ ವರೆಗಿನ 500 ಮೀಟರ್ ಎತ್ತರಕ್ಕೆ ಮತ್ತು 350 ಕಿ.ಮೀ ದೂರಕ್ಕೆ ಬೃಹತ್ ಪಂಪ್‍ಗಳ ಮೂಲಕ ನೀರು ತಳ್ಳಲಾಗುತ್ತದೆ.
ಈಗ ಹೇಳಲಾಗಿರುವಂತೆ 13 ಸಾವಿರ ಕೋಟಿಗೆಲ್ಲ ಮುಗಿಯುವ ಯೋಜನೆಯಿದಲ್ಲ. ಬದಲಿಗೆ ಇದರ ಯೋಜನಾ ವೆಚ್ಚ ನೂರಾರು ಸಾವಿರ ಕೋಟಿಗೆ ಹೋಗಿ ನಿಲ್ಲುತ್ತದೆ. ವರ್ಷಪೂರ್ತಿ ಅಘನಾಶಿನಿ ಹರಿಯುತ್ತಾಳಾದರೂ ಬೇಸಿಗೆಯಲ್ಲಿ ಸೊರಗುತ್ತಾಳೆ. ಅಘನಾಶಿನಿ ನೀರಿಂದ ಬೃಹತ್ ಬೆಂಗಳೂರಿನ ನೀರಡಿಕೆ ತಣಿಸಲು ಸಾಧ್ಯವಿಲ್ಲವೆಂದೇ ಹೇಮಜಿನಿಯಲ್ಲಿ ಡ್ಯಾಮ್ ಕಟ್ಟಿ ಮಳೆ ನೀರನ್ನು ಸಂಗ್ರಹಿಸಲು ಯೋಜನಾ ವರದಿಯಲ್ಲಿ ಹೇಳಲಾಗಿದೆ. ಆದರೆ ಡ್ಯಾಮ್‍ಗೆ ಎಷ್ಟು ದೊಡ್ಡ ಜಾಗ ಬೇಕೆಂದು ವರದಿಯಲ್ಲಿ ಬರೆದಿಲ್ಲ.
ಇದನ್ನು ಓದಿ: ಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?
ಕಳೆದ 50 ವರ್ಷದಿಂದ ಅಘನಾಶಿನಿ ಕೊಳ್ಳದಲ್ಲಿ ಜಲವಿದ್ಯುತ್ ಯೋಜನೆ ಸ್ಥಾಪಿಸುವ ಹುನ್ನಾರ ನಡೆಯುತ್ತಲೇ ಇದೆ. ಆದರೆ ಅದಿನ್ನು “ಬುದ್ಧಿವಂತ” ಬ್ರಾಹ್ಮಣರಾದಿಯಾಗಿ ಹಿಮ್ಮೆಟ್ಟಿಸುತ್ತಿದೆ. ಈ ಜಲವಿದ್ಯುತ್ ಯೋಜನೆಯಲ್ಲಿ ಕನಸೂರಿಂದ ತ್ಯಾಗಲಿ, ಹೇರೂರು, ಹೆಗ್ಗರಣಿ, ಹಾರ್ಸಿಕಟ್ಟಾ, ಗೋಳಿಮಕ್ಕಿ, ಕವಲಕೊಪ್ಪ, ಬಿದ್ರಡಾನ್, ಬಿಳಿಗಿಯೇ ಮುಂತಾದ ಹಲವು ಹಳ್ಳಿಗಳು, ಸಾವಿರಾರು ಎಕರೆ ಅಡಿಕೆತೋಟ, ಭತ್ತದ ಗದ್ದೆ, ಅಪಾರ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಆದರೆ ಬೆಂಗಳೂರಿಗೆ ನೀರೊಯ್ಯುವ ಪ್ರಾಜೆಕ್ಟಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಮುಳುಗಡೆ ಆಗಲಿಕ್ಕಿಲ್ಲ, ಪರಿಸರ ಹಾನಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ!
ಅಘನಾಶಿನಿ ನದಿ ಗಂಗಾನದಿಗಿಂತಲೂ ಪ್ರಾಚೀನವಾದುದೆಂಬ ತರ್ಕವಿದೆ. ಭೂ ಇತಿಹಾಸದಲ್ಲಿ ಹಿಮಾಲಯಕ್ಕಿಂತ ಮೊದಲೆ ಸಹ್ಯಾದ್ರಿ ಬೆಟ್ಟಗಳು ಹುಟ್ಟಿದ ದಾಖಲೆಯಿದೆ. ಹಾಗಾಗಿ ಗಂಗೆಗಿಂತಲೂ ಅಘನಾಶಿನಿಯೇ ಹಳೆಯ ನದಿ. ಅಘನಾಶಿನಿ ಶರಾವತಿಯಂತೆಯೂ ಅಲ್ಲ. ಶರಾವತಿ ಹೆಚ್ಚುಕಮ್ಮಿ ನೇರವಾಗಿ ಹರಿಯುತ್ತದೆ. ಅಘನಾಶಿನಿ ಶಿರಸಿಯಿಂದ ಕುಮಟೆ ತಲುಪುವತನಕ ಒಂದು ದೊಡ್ಡ ಗೋಲ ನಿರ್ಮಿಸುತ್ತದೆ. ಅಘನಾಶಿನಿ ಸಿದ್ದಾಪುರ ತಾಲ್ಲೂಕಿನ ಎಲ್ಲ ಅರಣ್ಯ, ತೋಟ, ಗದ್ದೆ ಬಳಸುತ್ತ ಅನೇಕ ಹೊಳೆ-ಹಳ್ಳಗಳನ್ನು ತನ್ನಲ್ಲಿ ಸೇರಿಸಿಕೊಂಡು ಒಂಥರಾ ನಡುಗಡ್ಡೆ ಸೃಷ್ಟಿಸುತ್ತದೆ. ಹೀಗಾಗಿ ಅಘನಾಶಿನಿಗೆ ಒಂದು ಸಣ್ಣ ಒಡ್ಡು ಕಟ್ಟಿದರೂ ಸಾಕು ಸಿದ್ದಾಪುರ ತಾಲ್ಲೂಕಿನ ಎಲ್ಲಾ ಅರಣ್ಯ ಮುಳುಗುತ್ತದೆ. ತೋಟ-ಗದ್ದೆಗಳಲ್ಲಿ ಬಹುಪಾಲು ಜಲ ಸಮಾಧಿಯಾಗುತ್ತದೆ. ಅಘನಾಶಿನಿಗೆ ಒಡ್ಡು ಹಾಕಿದರೆ ಉತ್ತರ ಕನ್ನಡದ ಹೃದಯಕ್ಕೆ ಒಡ್ಡು ಕಟ್ಟಿದಂತೆಯೇ!!
ಜನಾಂದೋಲನಕ್ಕೆ ಕಾವೇರುತ್ತಿದೆ
ಉತ್ತರ ಕನ್ನಡವನ್ನು ಆಪೋಷನ ಪಡೆದು ಬೆಂಗಳೂರಿನ ನೀರಿನ ಸಮಸ್ಯೆ ಪರಿಹರಿಸುವ ಈ ಎಡವಟ್ಟು ಯೋಜನೆ ಮನುಷ್ಯ ನಿರ್ಮಿತ ಊರು, ಮನೆ, ಮಠ, ತೋಟ, ಗದ್ದೆಯನ್ನಷ್ಟೇ ಅಲ್ಲ, ವಿಶಿಷ್ಟ ಜೀವಜಾಲವನ್ನೇ ಧ್ವಂಸ ಮಾಡಲಿದೆ! ಅಘನಾಶಿನಿ ಕೊಳ್ಳದಲ್ಲಿ ನೂರಾರು ನಮೂನೆಯ ಗಿಡ, ಮರ, ಔಷಧಿ ಸಸ್ಯಗಳಿವೆ. ಕೇರಳದ ಸೈಲೆಂಟ್ ವ್ಯಾಲಿಯಲ್ಲಷ್ಟೇ ಕಂಡುಬರುವ ಸಿಂಗಳೀಕ (ಸಿಂಹ ಬಾಲದ ಮಂಗ) ಇಲ್ಲಿದೆ. ಕೋಟ್ಯಾಂತರ ವರ್ಷದ ಮಂಗನ ತಳಿಯಿದು. ಘಟ್ಟದ ಮೇಲಿನ ಮತ್ತು ಕರಾವಳಿಯ ಸಾವಿರಾರು ಮೀನುಗಾರ, ತೋಟಿಗ, ರೈತಾಪಿ, ಕೂಲಿ ಕಾರ್ಮಿಕ ಕುಟುಂಬಗಳಿಗೆಲ್ಲ ಅಘನಾಶಿನಿ ಜೀವನಾಧಾರ ನದಿ! ಮರಾಕಲ್ (ಅಘನಾಶಿನಿ ನದಿ ನೀರು) ಯೋಜನೆಯಿಂದ ಕುಮಟಾ ಮತ್ತು ಹೊನ್ನಾವರದ ಕುಡಿವ ನೀರಿನ ಬವಣೆ ಸ್ವಲ್ಪ ನೀಗಲಾಗಿದೆ. ಈಗಿನ ಪರಿಸ್ಥಿತಿಗೆ ಅಘನಾಶಿನಿ ನೀರು ಸಾಕಾಗುತ್ತಿಲ್ಲ.
ಇದನ್ನು ಓದಿ: ಶರಾವತಿ ನೀರು ಬೆಂಗಳೂರಿಗೆ ವಿರೋಧಿಸಿ ಶಿವಮೊಗ್ಗ ಬಂದ್. ಸಾವಿರಾರು ಜನರು ಭಾಗಿ
ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಪಾತ್ರದ ನೀರು ಹಿಂದೆಂದೂ ಕಾಣದಷ್ಟು ಕಡಿಮೆಯಾಗಿತ್ತು. ತಿಂಗಳುಗಟ್ಟಲೆ ನದಿ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ನದಿ ಹರಿವಿನ ಪ್ರಮಾಣ ಕಡಿಮೆಯಾದಂತೆ ಕುಡಿಯುವ ನೀರಿನ ಮೂಲಗಳು ಬತ್ತುವ ಕ್ಷೇತ್ರ ದುಪ್ಪಟ್ಟಾಗುತ್ತಿದೆ. ಹೀಗಾಗಿ ಮೀನುಗಾರಿಕೆ, ತೋಟಗಾರಿಕೆ, ಕೃಷಿ ಕಸುಬಿಗೆ ತೊಂದರೆಯಾಗುತ್ತಿದೆ. ಅಘನಾಶಿನಿ ಉಳಿಸಿಕೊಳ್ಳದಿದ್ದರೆ ಭವಿಷ್ಯ ಕರಾಳವಾಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಮುಂದಿನ ಪೀಳಿಗೆಗೆ ಈಗಲೇ ಅಘನಾಶಿನಿ ನಿರಾತಂಕವಾಗಿ ಹರಿಯುವಂತೆ ನೋಡಿಕೊಳ್ಳಬೇಕಿದೆ. ಈ ದರ್ದು ಅಘನಾಶಿನಿ ನದಿ ಪಾತ್ರದ ಜನರನ್ನು ಬೀದಿಗಿಳಿಸಿದೆ. ರಸ್ತೆ ತಡೆ, ಪ್ರತಿಭಟನೆ ಗುರಿಗಟ್ಟುತ್ತಿದೆ. ಜೀವವನ್ನಾದರೂ ಕೊಡುತ್ತೇವೆ. ಅಘನಾಶಿನಿ ನೀರಿನ ಒಂದು ಹನಿಯೂ ಬೇರೆಡೆ ಒಯ್ಯಲು ಬಿಡುವುದಿಲ್ಲ ಎಂದು ಜನರು ಕೆಂಡಾಮಂಡಲವಾಗಿ ಹೇಳುತ್ತಿದ್ದಾರೆ.
ಅಘನಾಶಿನಿ ನೀರನ್ನು ದೂರದ ಬೆಂಗಳೂರಿಗೆ ಒಯ್ಯುವ ದುಸ್ಸಾಹಸಕ್ಕೆ ಕೈಹಾಕಿರುವ ಹುಂಬ ಪಂಡಿತರಿಗೆ ಉತ್ತರ ಕನ್ನಡದ ಜನಜೀವನ, ಪರಿಸರದ ಬಗ್ಗೆ ಒಂಚೂರೂ ಅರಿವಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಮಂತ್ರಿ, ಸಂಸದ, ಶಾಸಕರಿಗೆ ಕಿಕ್‍ಬ್ಯಾಕ್ ಚಿಂತೆ. ಈ ಯೋಜನೆಯಿಂದ ಅಘನಾಶಿನಿ ನದಿ ಪ್ರದೇಶದ ಅಂತರ್ಜಲ ಬತ್ತುತ್ತದೆ. ನದಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬೀದಿ ಪಾಲಾಗುತ್ತಾರೆ. ಸ್ಥಳೀಯ ಜನಜೀವನ ನರಕ ಮಾಡಿ ಬೆಂಗಳೂರು ಉದ್ಧಾರ ಮಾಡಿದರೇನು ಬಂತು!? ಬಲಾತ್ಕಾರವಾಗಿ ನದಿಯ ದಿಕ್ಕು ಬದಲಿಸುವುದೇ ಅವೈಜ್ಞಾನಿಕವಷ್ಟೇ ಅಲ್ಲ ಅಕ್ಷಮ್ಯ- ಅನಾಹುತಕರ. ನದಿಯ ನೀರು ನೈಸರ್ಗಿಕ ಹಕ್ಕುದಾರರಿಗೆ ಮಾತ್ರ.
ಈ ಪ್ರಕೃತಿ ನಿಯಮ ಆಳುವ ಖೂಳರಿಗೆ ಅರ್ಥ ಮಾಡಿಸುವವರು ಯಾರು? ಜನರ ಆತಂಕದ ಅಳಲು ಆಳುವವರಿಗೆ ಕೇಳಬಹುದಾ? ಸಂತ್ರಸ್ತರಾಗುವವರು ಕೆರಳುವ ಮೊದಲೆ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವರಾ? ಜನರು ತಾಳ್ಮೆ ಕಳೆದುಕೊಂಡಾಗ ಅನಾಹುತವಾದರೆ ಹುಚ್ಚು ಯೋಜನೆ ಪಿತಾಮಹರೇ ಹೊಣೆಗಾರರಾಗಬೇಕಾಗುತ್ತದೆ!!


