Homeಕರ್ನಾಟಕಬೆಂಗಳೂರಿಗೆ ನೀರೊಯ್ಯುವ ಮತ್ತೊಂದು ಮಸಲತ್ತು!: ಪ್ರಾಣವಾದರೂ ಕೊಟ್ಟೇವು ಅಘನಾಶಿನಿ ನೀರು ಕೊಡುವುದಿಲ್ಲ!!

ಬೆಂಗಳೂರಿಗೆ ನೀರೊಯ್ಯುವ ಮತ್ತೊಂದು ಮಸಲತ್ತು!: ಪ್ರಾಣವಾದರೂ ಕೊಟ್ಟೇವು ಅಘನಾಶಿನಿ ನೀರು ಕೊಡುವುದಿಲ್ಲ!!

- Advertisement -
- Advertisement -

ಅಘನಾಶಿನಿ ಕೊಳ್ಳ ಕೊತಕೊತ ಕುದಿಯಲು ಶುರುವಾಗಿ ಹೆಚ್ಚುಕಮ್ಮಿ ಒಂದು ತಿಂಗಳೇ ಕಳೆದುಹೋಗಿದೆ. ಅಕ್ಷರಶಃ ಉತ್ತರ ಕನ್ನಡದ ಜೀವ ನದಿಯಾದ ಅಘನಾಶಿನಿಯ ನೀರನ್ನು ಬೆಂಗಳೂರಿಗೆ ಒಯ್ಯುವ ಆಡಳಿತಗಾರರ ಗುಟ್ಟಿನ ಗಂಡಾಗುಂಡಿ ಕಟ್ಟಾಗುತ್ತಿದ್ದಂತೆಯೇ ಕಂಗಾಲುಬಿದ್ದ ಅಘನಾಶಿನಿ ಕಣಿವೆ ಮಂದಿ ತಿರುಗಿಬಿದ್ದಿದ್ದಾರೆ. ಅತ್ತ ಶರಾವತಿ ನೀರು ಬೆಂಗಳೂರಿಗೆ ಸಾಗಿಸಲು ಬಿಡುವುದಿಲ್ಲವೆಂದು ಶರಾವತಿ ಕಣಿವೆಯಲ್ಲಿ ಜನಾಂದೋಲನ ನಡೆಯುತ್ತಿದ್ದ ಹೊತ್ತಿನಲ್ಲೇ ಇತ್ತ ಅಘನಾಶಿನಿ ನದಿ ನೀರಿಗೂ ಕನ್ನ ಹಾಕುವ ಕರಾಮತ್ತಿನ ಸುದ್ದಿ ಅಲ್ಲೋಲಕಲ್ಲೋಲವೇ ಸೃಷ್ಟಿಸಿಬಿಟ್ಟಿತ್ತು. ಈಗ ಕುಮ್ಮಿ ಮನೆಗೆ ಹೋಗಿ ಯಡ್ಡಿಯ ಕೇಸರಿ ದರ್ಬಾರು ಬಂದರೂ ಜನರು ಪ್ರತಿಭಟನೆ ನಿಲ್ಲಿಸಲು ಸಿದ್ಧರಿಲ್ಲ. ಏಕೆಂದರೆ, ಶರಾವತಿ ಮತ್ತು ಅಘನಾಶಿನಿ ನದಿಗಳ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಳಯಾಂತಕ ಪ್ರಾಜೆಕ್ಟಿನ ಮೂಲವಿರುವುದೇ ಯಡ್ಡಿಯ ಪಂಡಿತ ಪಠಾಲಮ್ಮಿನಲ್ಲಿ!!

2010ರಲ್ಲಿ ಆಳ್ವಿಕೆ ನಡೆಸುತ್ತಿದ್ದ ಯಡ್ಡಿ ಸರ್ಕಾರ 2031ರ ಹೊತ್ತಿಗೆ ಬೆಂಗಳೂರು ಎದುರಿಸಬಹುದಾದ ಕುಡಿಯುವ ನೀರಿನ ಅಭಾವ ನೀಗುವ ಪರಿಹಾರಕ ಪ್ಲಾನ್ ಬಗ್ಗೆ ಪರಿಶೀಲಿಸಲು ನಿವೃತ್ತ ಮುಖ್ಯ ಇಂಜಿನಿಯರ್ ತ್ಯಾಗರಾಜ್ ಸಮಿತಿ ರಚಿಸಿತ್ತು. ಈ ಸಮಿತಿ 2012ರಲ್ಲಿ ಶರಾವತಿ ಮತ್ತು ಅಘನಾಶಿನಿ ನೀರು ರಕ್ಕಸ ಪಂಪ್‍ಗಳ ಮೂಲಕ ಬೆಂಗಳೂರಿಗೆ ಲಿಫ್ಟ್ ಮಾಡಲು ಸೂಚಿಸಿತ್ತು. 2014ರಲ್ಲಿ ಈ ಪ್ರಸ್ತಾವನೆ ಸರ್ಕಾರ ಸ್ವೀಕರಿಸಿತಾದರೂ, ಇದೆಲ್ಲ ಅಪ್ರಾಯೋಗಿಕ ಪ್ಲಾಪ್ ಪ್ರಾಜೆಕ್ಟ್ ಆಗುತ್ತದೆಂಬ ಅಭಿಪ್ರಾಯ ಜಲತಜ್ಞರ ವಲಯದಿಂದ ಬಂದಿತ್ತು. ಹಾಗಂತ ಆಗ ಉತ್ತರ ಕನ್ನಡದ ಸಚಿವ, ಸಂಸದ, ಶಾಸಕರ್ಯಾರೂ ಈ “ಜಲಕಂಟಕ”ದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಂತಮ್ಮ ಜೀವನೋಪಾಯದ ರಾಜಕೀಯ ಕಸುಬಿನಲ್ಲಿ ನಿರಾತಂಕವಾಗಿ ನಿರತರಾಗಿದ್ದರು!

ಶಿರಸಿಯ ಶಂಕರ ಹೊಂಡದಲ್ಲಿ ಹುಟ್ಟುವ ಅಘನಾಶಿನಿ ನದಿ ಕುಮಟೆಯ ಅರಬ್ಬೀಸಮುದ್ರ ಸೇರುವವರೆಗೆ ಬರೋಬ್ಬರಿ 1800 ಚದರ ಕಿಮೀ ಜಲಾನಯನ ಪ್ರದೇಶ ಸುತ್ತು ಹೊಡೆಯುತ್ತದೆ. ಅಘನಾಶಿನಿಯು ಸುಮಾರು 100-120 ಸಮುದ್ರ ಕಿ.ಮೀ ಹರಿದು ಸಮುದ್ರ ಸೇರುವುದರಿಂದ ವ್ಯರ್ಥವಾಗುತ್ತದೆಂದು ಸರ್ಕಾರಿ ಪ್ರಭೃತಿಗಳು ಲೆಕ್ಕಹಾಕಿದ್ದಾರೆ. ಇದರಲ್ಲಿ ಬರೀ ಐವತ್ತೇ ಟಿಎಂಸಿ ನೀರನ್ನು ಬೆಂಗಳೂರಿಗೆ ತಳ್ಳುವ ಹದಿಮೂರು ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಯೋಚನೆ ಮಾಡಲಾಗಿತ್ತೆಂಬ ಮೋಗಮ್ ಭಾತ್ಮಿಯೊಂದನ್ನು ಸರ್ಕಾರಿ ಸರದಾರರು ತೇಲಿಬಿಟ್ಟಿದ್ದಾರೆ.

ಇದು ಹಸಿಹಸೀ ಸುಳ್ಳು! ಈ ಭರ್ಜರಿ ಯೋಜನೆಯ ಆಳ-ಅಗಲ ನೋಡಿದರೆ ಬಳಕೆಯಾಗೋದು ಬರೀ 50 ಟಿಎಂಸಿ ನೀರೆಂದು ನಂಬೋದು ಸಾಧ್ಯವೇ ಇಲ್ಲ. ಯೋಜನಾ ವರದಿ ಕೈಲಿಡಿದು ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ಅಘನಾಶಿನಿಯ 230 ಟಿಎಂಸಿ ನೀರೂ ಸ್ವಾಹಾ ಆಗುತ್ತದೆಂದು ಎಂಥ ಗಾಂಪನಿಗೂ ಅರ್ಥವಾಗುತ್ತದೆ. ಇಷ್ಟಾದರೂ ಪ್ರಾಜೆಕ್ಟ್ ಫಲಪ್ರದವಾಗುತ್ತದೆಂಬುದಕ್ಕೆ ಯಾವ ಖಾತ್ರಿಯೂ ಇಲ್ಲ! ಇದೊಂದು ‘ಎತ್ತಿನಹೊಳೆ”ಯಂಥದ್ದೇ ಬೋಗಸ್ ಯೋಜನೆ ಆಗಬಹುದಷ್ಟೇ.

ಕಠೋರ ವಾಸ್ತವ

ಅಘನಾಶಿನಿ ನದಿಗೆ ಸಿದ್ದಾಪುರದ “ಹೇಮಜಿನಿ” ಎಂಬಲ್ಲಿ ಡ್ಯಾಮ್

ಕಟ್ಟಲಾಗುತ್ತದೆ. ನೀರನ್ನು ಪೈಪುಗಳ ಮೂಲಕ ಸಿದ್ದಾಪುರ, ಸಾಗರ, ಭದ್ರಾವತಿಗೆ ತರಲಾಗುತ್ತದೆ. ಭದ್ರಾವತಿಯ ಭದ್ರಾನದಿಯ ಮೇಲೆ ಮೇಲ್ಗಾಲುವೆ ನಿರ್ಮಿಸಿ ಅಲ್ಲಿಂದ ತರಿಕೆರೆ ಮೂಲಕ ಅಘನಾಶಿನಿ ನೀರನ್ನು ಚಿತ್ರದುರ್ಗದ ವಾಣಿವಿಲಾಸ ಜಲಾಶಯಕ್ಕೆ ತುಂಬಿಸಲಾಗುತ್ತದೆ. ಇದೇ ಪ್ರಕಾರ ತುಮಕೂರು ಜಿಲ್ಲೆಯ ಹಲವು ಡ್ಯಾಮ್‍ಗಳನ್ನು ಭರ್ತಿಮಾಡುತ್ತಾ ಅಂತಿಮವಾಗಿ ಬೆಂಗಳೂರಿನ ತಿಪ್ಪಗೊಂಡನಹಳ್ಳಿಯ ಜಲಾಶಯಕ್ಕೆ ಅಘನಾಶಿನಿ ನೀರನ್ನು ಸೇರಿಸುವ ಯೋಜನೆಯಿದು. ಹೇಮಜಿನಿಯಿಂದ ತಿಪ್ಪಗೊಂಡನಹಳ್ಳಿ ಸರೋವರದ ವರೆಗಿನ 500 ಮೀಟರ್ ಎತ್ತರಕ್ಕೆ ಮತ್ತು 350 ಕಿ.ಮೀ ದೂರಕ್ಕೆ ಬೃಹತ್ ಪಂಪ್‍ಗಳ ಮೂಲಕ ನೀರು ತಳ್ಳಲಾಗುತ್ತದೆ.

ಈಗ ಹೇಳಲಾಗಿರುವಂತೆ 13 ಸಾವಿರ ಕೋಟಿಗೆಲ್ಲ ಮುಗಿಯುವ ಯೋಜನೆಯಿದಲ್ಲ. ಬದಲಿಗೆ ಇದರ ಯೋಜನಾ ವೆಚ್ಚ ನೂರಾರು ಸಾವಿರ ಕೋಟಿಗೆ ಹೋಗಿ ನಿಲ್ಲುತ್ತದೆ. ವರ್ಷಪೂರ್ತಿ ಅಘನಾಶಿನಿ ಹರಿಯುತ್ತಾಳಾದರೂ ಬೇಸಿಗೆಯಲ್ಲಿ ಸೊರಗುತ್ತಾಳೆ. ಅಘನಾಶಿನಿ ನೀರಿಂದ ಬೃಹತ್ ಬೆಂಗಳೂರಿನ ನೀರಡಿಕೆ ತಣಿಸಲು ಸಾಧ್ಯವಿಲ್ಲವೆಂದೇ ಹೇಮಜಿನಿಯಲ್ಲಿ ಡ್ಯಾಮ್ ಕಟ್ಟಿ ಮಳೆ ನೀರನ್ನು ಸಂಗ್ರಹಿಸಲು ಯೋಜನಾ ವರದಿಯಲ್ಲಿ ಹೇಳಲಾಗಿದೆ. ಆದರೆ ಡ್ಯಾಮ್‍ಗೆ ಎಷ್ಟು ದೊಡ್ಡ ಜಾಗ ಬೇಕೆಂದು ವರದಿಯಲ್ಲಿ ಬರೆದಿಲ್ಲ.

ಇದನ್ನು ಓದಿ: ಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

ಕಳೆದ 50 ವರ್ಷದಿಂದ ಅಘನಾಶಿನಿ ಕೊಳ್ಳದಲ್ಲಿ ಜಲವಿದ್ಯುತ್ ಯೋಜನೆ ಸ್ಥಾಪಿಸುವ ಹುನ್ನಾರ ನಡೆಯುತ್ತಲೇ ಇದೆ. ಆದರೆ ಅದಿನ್ನು “ಬುದ್ಧಿವಂತ” ಬ್ರಾಹ್ಮಣರಾದಿಯಾಗಿ ಹಿಮ್ಮೆಟ್ಟಿಸುತ್ತಿದೆ. ಈ ಜಲವಿದ್ಯುತ್ ಯೋಜನೆಯಲ್ಲಿ ಕನಸೂರಿಂದ ತ್ಯಾಗಲಿ, ಹೇರೂರು, ಹೆಗ್ಗರಣಿ, ಹಾರ್ಸಿಕಟ್ಟಾ, ಗೋಳಿಮಕ್ಕಿ, ಕವಲಕೊಪ್ಪ, ಬಿದ್ರಡಾನ್, ಬಿಳಿಗಿಯೇ ಮುಂತಾದ ಹಲವು ಹಳ್ಳಿಗಳು, ಸಾವಿರಾರು ಎಕರೆ ಅಡಿಕೆತೋಟ, ಭತ್ತದ ಗದ್ದೆ, ಅಪಾರ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಆದರೆ ಬೆಂಗಳೂರಿಗೆ ನೀರೊಯ್ಯುವ ಪ್ರಾಜೆಕ್ಟಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಮುಳುಗಡೆ ಆಗಲಿಕ್ಕಿಲ್ಲ, ಪರಿಸರ ಹಾನಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ!

ಅಘನಾಶಿನಿ ನದಿ ಗಂಗಾನದಿಗಿಂತಲೂ ಪ್ರಾಚೀನವಾದುದೆಂಬ ತರ್ಕವಿದೆ. ಭೂ ಇತಿಹಾಸದಲ್ಲಿ ಹಿಮಾಲಯಕ್ಕಿಂತ ಮೊದಲೆ ಸಹ್ಯಾದ್ರಿ ಬೆಟ್ಟಗಳು ಹುಟ್ಟಿದ ದಾಖಲೆಯಿದೆ. ಹಾಗಾಗಿ ಗಂಗೆಗಿಂತಲೂ ಅಘನಾಶಿನಿಯೇ ಹಳೆಯ ನದಿ. ಅಘನಾಶಿನಿ ಶರಾವತಿಯಂತೆಯೂ ಅಲ್ಲ. ಶರಾವತಿ ಹೆಚ್ಚುಕಮ್ಮಿ ನೇರವಾಗಿ ಹರಿಯುತ್ತದೆ. ಅಘನಾಶಿನಿ ಶಿರಸಿಯಿಂದ ಕುಮಟೆ ತಲುಪುವತನಕ ಒಂದು ದೊಡ್ಡ ಗೋಲ ನಿರ್ಮಿಸುತ್ತದೆ. ಅಘನಾಶಿನಿ ಸಿದ್ದಾಪುರ ತಾಲ್ಲೂಕಿನ ಎಲ್ಲ ಅರಣ್ಯ, ತೋಟ, ಗದ್ದೆ ಬಳಸುತ್ತ ಅನೇಕ ಹೊಳೆ-ಹಳ್ಳಗಳನ್ನು ತನ್ನಲ್ಲಿ ಸೇರಿಸಿಕೊಂಡು ಒಂಥರಾ ನಡುಗಡ್ಡೆ ಸೃಷ್ಟಿಸುತ್ತದೆ. ಹೀಗಾಗಿ ಅಘನಾಶಿನಿಗೆ ಒಂದು ಸಣ್ಣ ಒಡ್ಡು ಕಟ್ಟಿದರೂ ಸಾಕು ಸಿದ್ದಾಪುರ ತಾಲ್ಲೂಕಿನ ಎಲ್ಲಾ ಅರಣ್ಯ ಮುಳುಗುತ್ತದೆ. ತೋಟ-ಗದ್ದೆಗಳಲ್ಲಿ ಬಹುಪಾಲು ಜಲ ಸಮಾಧಿಯಾಗುತ್ತದೆ. ಅಘನಾಶಿನಿಗೆ ಒಡ್ಡು ಹಾಕಿದರೆ ಉತ್ತರ ಕನ್ನಡದ ಹೃದಯಕ್ಕೆ ಒಡ್ಡು ಕಟ್ಟಿದಂತೆಯೇ!!

ಜನಾಂದೋಲನಕ್ಕೆ ಕಾವೇರುತ್ತಿದೆ

ಉತ್ತರ ಕನ್ನಡವನ್ನು ಆಪೋಷನ ಪಡೆದು ಬೆಂಗಳೂರಿನ ನೀರಿನ ಸಮಸ್ಯೆ ಪರಿಹರಿಸುವ ಈ ಎಡವಟ್ಟು ಯೋಜನೆ ಮನುಷ್ಯ ನಿರ್ಮಿತ ಊರು, ಮನೆ, ಮಠ, ತೋಟ, ಗದ್ದೆಯನ್ನಷ್ಟೇ ಅಲ್ಲ, ವಿಶಿಷ್ಟ ಜೀವಜಾಲವನ್ನೇ ಧ್ವಂಸ ಮಾಡಲಿದೆ! ಅಘನಾಶಿನಿ ಕೊಳ್ಳದಲ್ಲಿ ನೂರಾರು ನಮೂನೆಯ ಗಿಡ, ಮರ, ಔಷಧಿ ಸಸ್ಯಗಳಿವೆ. ಕೇರಳದ ಸೈಲೆಂಟ್ ವ್ಯಾಲಿಯಲ್ಲಷ್ಟೇ ಕಂಡುಬರುವ ಸಿಂಗಳೀಕ (ಸಿಂಹ ಬಾಲದ ಮಂಗ) ಇಲ್ಲಿದೆ. ಕೋಟ್ಯಾಂತರ ವರ್ಷದ ಮಂಗನ ತಳಿಯಿದು. ಘಟ್ಟದ ಮೇಲಿನ ಮತ್ತು ಕರಾವಳಿಯ ಸಾವಿರಾರು ಮೀನುಗಾರ, ತೋಟಿಗ, ರೈತಾಪಿ, ಕೂಲಿ ಕಾರ್ಮಿಕ ಕುಟುಂಬಗಳಿಗೆಲ್ಲ ಅಘನಾಶಿನಿ ಜೀವನಾಧಾರ ನದಿ! ಮರಾಕಲ್ (ಅಘನಾಶಿನಿ ನದಿ ನೀರು) ಯೋಜನೆಯಿಂದ ಕುಮಟಾ ಮತ್ತು ಹೊನ್ನಾವರದ ಕುಡಿವ ನೀರಿನ ಬವಣೆ ಸ್ವಲ್ಪ ನೀಗಲಾಗಿದೆ. ಈಗಿನ ಪರಿಸ್ಥಿತಿಗೆ ಅಘನಾಶಿನಿ ನೀರು ಸಾಕಾಗುತ್ತಿಲ್ಲ.

ಇದನ್ನು ಓದಿ: ಶರಾವತಿ ನೀರು ಬೆಂಗಳೂರಿಗೆ ವಿರೋಧಿಸಿ ಶಿವಮೊಗ್ಗ ಬಂದ್. ಸಾವಿರಾರು ಜನರು ಭಾಗಿ

ಕಳೆದ ಬೇಸಿಗೆಯಲ್ಲಿ ಅಘನಾಶಿನಿ ನದಿ ಪಾತ್ರದ ನೀರು ಹಿಂದೆಂದೂ ಕಾಣದಷ್ಟು ಕಡಿಮೆಯಾಗಿತ್ತು. ತಿಂಗಳುಗಟ್ಟಲೆ ನದಿ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ನದಿ ಹರಿವಿನ ಪ್ರಮಾಣ ಕಡಿಮೆಯಾದಂತೆ ಕುಡಿಯುವ ನೀರಿನ ಮೂಲಗಳು ಬತ್ತುವ ಕ್ಷೇತ್ರ ದುಪ್ಪಟ್ಟಾಗುತ್ತಿದೆ. ಹೀಗಾಗಿ ಮೀನುಗಾರಿಕೆ, ತೋಟಗಾರಿಕೆ, ಕೃಷಿ ಕಸುಬಿಗೆ ತೊಂದರೆಯಾಗುತ್ತಿದೆ. ಅಘನಾಶಿನಿ ಉಳಿಸಿಕೊಳ್ಳದಿದ್ದರೆ ಭವಿಷ್ಯ ಕರಾಳವಾಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಮುಂದಿನ ಪೀಳಿಗೆಗೆ ಈಗಲೇ ಅಘನಾಶಿನಿ ನಿರಾತಂಕವಾಗಿ ಹರಿಯುವಂತೆ ನೋಡಿಕೊಳ್ಳಬೇಕಿದೆ. ಈ ದರ್ದು ಅಘನಾಶಿನಿ ನದಿ ಪಾತ್ರದ ಜನರನ್ನು ಬೀದಿಗಿಳಿಸಿದೆ. ರಸ್ತೆ ತಡೆ, ಪ್ರತಿಭಟನೆ ಗುರಿಗಟ್ಟುತ್ತಿದೆ. ಜೀವವನ್ನಾದರೂ ಕೊಡುತ್ತೇವೆ. ಅಘನಾಶಿನಿ ನೀರಿನ ಒಂದು ಹನಿಯೂ ಬೇರೆಡೆ ಒಯ್ಯಲು ಬಿಡುವುದಿಲ್ಲ ಎಂದು ಜನರು ಕೆಂಡಾಮಂಡಲವಾಗಿ ಹೇಳುತ್ತಿದ್ದಾರೆ.

ಅಘನಾಶಿನಿ ನೀರನ್ನು ದೂರದ ಬೆಂಗಳೂರಿಗೆ ಒಯ್ಯುವ ದುಸ್ಸಾಹಸಕ್ಕೆ ಕೈಹಾಕಿರುವ ಹುಂಬ ಪಂಡಿತರಿಗೆ ಉತ್ತರ ಕನ್ನಡದ ಜನಜೀವನ, ಪರಿಸರದ ಬಗ್ಗೆ ಒಂಚೂರೂ ಅರಿವಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಮಂತ್ರಿ, ಸಂಸದ, ಶಾಸಕರಿಗೆ ಕಿಕ್‍ಬ್ಯಾಕ್ ಚಿಂತೆ. ಈ ಯೋಜನೆಯಿಂದ ಅಘನಾಶಿನಿ ನದಿ ಪ್ರದೇಶದ ಅಂತರ್ಜಲ ಬತ್ತುತ್ತದೆ. ನದಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬೀದಿ ಪಾಲಾಗುತ್ತಾರೆ. ಸ್ಥಳೀಯ ಜನಜೀವನ ನರಕ ಮಾಡಿ ಬೆಂಗಳೂರು ಉದ್ಧಾರ ಮಾಡಿದರೇನು ಬಂತು!? ಬಲಾತ್ಕಾರವಾಗಿ ನದಿಯ ದಿಕ್ಕು ಬದಲಿಸುವುದೇ ಅವೈಜ್ಞಾನಿಕವಷ್ಟೇ ಅಲ್ಲ ಅಕ್ಷಮ್ಯ- ಅನಾಹುತಕರ. ನದಿಯ ನೀರು ನೈಸರ್ಗಿಕ ಹಕ್ಕುದಾರರಿಗೆ ಮಾತ್ರ.
ಈ ಪ್ರಕೃತಿ ನಿಯಮ ಆಳುವ ಖೂಳರಿಗೆ ಅರ್ಥ ಮಾಡಿಸುವವರು ಯಾರು? ಜನರ ಆತಂಕದ ಅಳಲು ಆಳುವವರಿಗೆ ಕೇಳಬಹುದಾ? ಸಂತ್ರಸ್ತರಾಗುವವರು ಕೆರಳುವ ಮೊದಲೆ ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವರಾ? ಜನರು ತಾಳ್ಮೆ ಕಳೆದುಕೊಂಡಾಗ ಅನಾಹುತವಾದರೆ ಹುಚ್ಚು ಯೋಜನೆ ಪಿತಾಮಹರೇ ಹೊಣೆಗಾರರಾಗಬೇಕಾಗುತ್ತದೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...